ಯಾರು ನಿಯಂತ್ರಣ ಮಾಡುತ್ತಿದ್ದಾರೆ?
“ಲೋಕವನ್ನು ಯಾರು ಆಳುತ್ತಾರೆ?” ಯಾರಾದರೊಬ್ಬರು ನಿಮಗೆ ಆ ಪ್ರಶ್ನೆ ಕೇಳುವಲ್ಲಿ, ನೀವು ಹೇಗೆ ಉತ್ತರಿಸುವಿರಿ? ಅಧಿಕಾಂಶ ಧಾರ್ಮಿಕ ಜನರು “ದೇವರು” ಇಲ್ಲವೆ “ಯೇಸು” ಎಂಬುದಾಗಿ ಹೇಳಬಹುದು. ಬಹಾಮಸ್ ದೇಶದ ವಾರ್ತಾಪತ್ರಿಕೆಯಾದ ದ ಫ್ರೀಪೋರ್ಟ್ ನ್ಯೂಸ್ನಲ್ಲಿ ಕಂಡುಬಂದ ಒಂದು ಲೇಖನವು, ಕೆಲವರೇ ನಿರೀಕ್ಷಿಸುವ ಒಂದು ಉತ್ತರವನ್ನು ಕೊಟ್ಟಿತು.
“ನನ್ನ ಬಾಗಿಲ ಮೆಟ್ಟಲಿನ ಮೇಲೆ ನಾನೊಂದು ಕಿರುಹೊತ್ತಗೆಯನ್ನು ಕಂಡೆ,” ಎಂಬುದಾಗಿ ಆ ಲೇಖನದ ಬರಹಗಾರ್ತಿಯು ಆರಂಭಿಸುತ್ತಾಳೆ. “ಸಾಧಾರಣವಾಗಿ ನನ್ನ ಬಾಗಿಲ ಮೆಟ್ಟಲಿನ ಮೇಲೆ ಬಿಡಲ್ಪಟ್ಟಂತಹ ಯಾವ ವಿಷಯವನ್ನೂ ನಾನು ಓದುವುದಿಲ್ಲ, ಆದರೆ ಈ ಸಲ ನಾನು ಅದನ್ನು ಓದಲು ನಿರ್ಧರಿಸಿದೆ. ಶೀರ್ಷಿಕೆಯು, ‘ಲೋಕವನ್ನು ನಿಜವಾಗಿಯೂ ಯಾರು ಆಳುತ್ತಾರೆ?’ ಎಂಬ ಪ್ರಶ್ನೆಯನ್ನು ಕೇಳಿತು.” ಬೈಬಲಾಧಾರಿತ ಕಿರುಹೊತ್ತಗೆಯನ್ನು ಓದುವ ಮೂಲಕ, ಈ ಲೋಕದ ಪ್ರಭು ದೇವರಾಗಲಿ ಯೇಸುವಾಗಲಿ ಅಲ್ಲ, ಬದಲಿಗೆ ಪಿಶಾಚನಾದ ಸೈತಾನನಾಗಿದ್ದಾನೆಂದು ಈ ಸ್ತ್ರೀಯು ಅರಿತುಕೊಂಡಳು.—ಯೋಹಾನ 12:31; 14:30; 16:11; 1 ಯೋಹಾನ 5:19.
“ವಿಕಾರವಾದ ಕ್ರೌರ್ಯದ ನಿರ್ದಯತೆಯ ಅತಿರೇಕವನ್ನು ಪರಿಗಣಿಸಿರಿ,” ಎಂಬುದಾಗಿ ಆ ಕಿರುಹೊತ್ತಗೆಯು ವಿವರಿಸುತ್ತದೆ. “ಮನುಷ್ಯರು ಒಬ್ಬರನ್ನೊಬ್ಬರು ಕರುಣೆಯಿಲ್ಲದೆ ಹಿಂಸಿಸಲು ಮತ್ತು ಕೊಲ್ಲಲು ಅನಿಲದ ಕೋಣೆಗಳನ್ನು, ಸೆರೆ ಶಿಬಿರಗಳನ್ನು, ಉರಿಕಾರುವ ಯಂತ್ರಗಳನ್ನು, ನೇಪಾಮ್ ಬಾಂಬುಗಳನ್ನು, ಮತ್ತು ಇನ್ನಿತರ ಘೋರವಾದ ವಿಧಾನಗಳನ್ನು ಉಪಯೋಗಿಸಿದ್ದಾರೆ. . . . ಮನುಷ್ಯರನ್ನು ಇಂತಹ ಅಸಹ್ಯ ಕಾರ್ಯಗಳಿಗೆ ಚಲಾಯಿಸುವ ಅಥವಾ ಘೋರ ಕೃತ್ಯಗಳನ್ನು ಮಾಡುವಂತೆ ತಾವು ಒತ್ತಾಯಿಸಲ್ಪಟ್ಟಿದ್ದೇವೆಂದು ಅವರಿಗೆ ಅನಿಸುವಂತಹ ಸನ್ನಿವೇಶದೊಳಗೆ ಅವರನ್ನು ಚಾತುರ್ಯದಿಂದ ಯಾವ ಶಕ್ತಿಗಳು ನಡೆಸುತ್ತವೆ? ಹಿಂಸಾಚಾರದ ಇಂತಹ ಕಾರ್ಯಗಳನ್ನು ಮಾಡಲು ಯಾವುದೋ ದುಷ್ಟ, ಅದೃಶ್ಯ ಶಕ್ತಿಯು ಜನರನ್ನು ಪ್ರಭಾವಿಸುತ್ತಿದೆಯೇ ಎಂದು ನೀವು ಎಂದಾದರೂ ಕುತೂಹಲಪಟ್ಟದ್ದುಂಟೋ?” ಬೈಬಲು ಸೈತಾನನನ್ನು “ಈ ಪ್ರಪಂಚದ ದೇವರು” ಎಂಬುದಾಗಿ ಕರೆಯುವಂತಹದ್ದು ಆಶ್ಚರ್ಯದ ಸಂಗತಿಯಾಗಿದೆಯೊ?—2 ಕೊರಿಂಥ 4:4.
ಸಂತೋಷಕರವಾಗಿ, ಸೈತಾನನು ಮತ್ತು ಅವನ ದೆವ್ವಗಳು ಇನ್ನಿರದ ಸಮಯವು ಹತ್ತಿರವದೆ. “ಲೋಕವೂ ಅದರ ಆಶೆಯೂ ಗತಿಸಿಹೋಗುತ್ತವೆ; ಆದರೆ ದೇವರ ಚಿತ್ತವನ್ನು ನೆರವೇರಿಸುವವನು ಎಂದೆಂದಿಗೂ ಇರುವನು.” (1 ಯೋಹಾನ 2:17) ಹೌದು, ಯಾರು ದೇವರ ಚಿತ್ತವನ್ನು ಮಾಡುತ್ತಾರೊ ಅವರಿಗೆ ಒಂದು ನೀತಿಯ ಹೊಸ ಲೋಕದಲ್ಲಿ ಸದಾಕಾಲ ಜೀವಿಸುವ ನಿರೀಕ್ಷೆಯಿದೆ ಎಂಬುದಾಗಿ ಬೈಬಲು ವಾಗ್ದಾನಿಸುತ್ತದೆ. (ಕೀರ್ತನೆ 37:9-11; 2 ಪೇತ್ರ 3:13; ಪ್ರಕಟನೆ 21:3, 4) ಸೈತಾನನ ಮತ್ತು ಅವನ ದೆವ್ವಗಳ ದುಷ್ಟ ಪ್ರಭಾವವು ಇನ್ನಿಲ್ಲದೆ ಹೋಗುವುದು ಎಂತಹ ಒಂದು ಉಪಶಮನವಾಗಿರುವುದು!
ಈ ಸಣ್ಣ ಕಿರುಹೊತ್ತಗೆಯ ಒಳವಿಷಯಗಳನ್ನು ಸಾರಾಂಶಿಸಿದ ಅನಂತರ, ದ ಫ್ರೀಪೋರ್ಟ್ ನ್ಯೂಸ್ ಲೇಖನದ ಬರಹಗಾರ್ತಿಯು ಸಮಾಪ್ತಿಗೊಳಿಸಿದ್ದು: “ಆ ಕಿರುಹೊತ್ತಗೆಯನ್ನು ಓದಿದ್ದಕ್ಕೆ ನಾನು ನಿಜವಾಗಿಯೂ ಸಂತೋಷಿಸುತ್ತೇನೆ . . . ಏಕೆಂದರೆ ಈ ಲೋಕದ ಅವಸ್ಥೆ ಮತ್ತು ಯಾರು ನಿಯಂತ್ರಣ ಮಾಡುತ್ತಿದ್ದಾರೆ ಎಂಬ ವಿಷಯದ ಕುರಿತು ನಾನೂ ಚಿಂತಿತಳಾಗಿದ್ದೆ.”