‘ದೇವರಲ್ಲಿ ನಾನು ಆಶ್ರಯವನ್ನು ಪಡೆದುಕೊಳ್ಳುವೆನು’
“ನಿಭಾಯಿಸಲು ಕಷ್ಟಕರವಾಗಿರುವ ಈ ಕಠಿನ ಕಾಲಗಳಲ್ಲಿ” (NW), ಶೋಧನೆಗಳು ಮತ್ತು ಒತ್ತಡಗಳು ಎಂದಿಗಿಂತಲೂ ಹೆಚ್ಚಾಗಿ ವೃದ್ಧಿಯಾಗುತ್ತಿವೆ. ಉದಾಹರಣೆಗಾಗಿ, ಕೆಲಸದ ಸ್ಥಳದಲ್ಲಿ ನಮ್ಮ ಪ್ರಾಮಾಣಿಕತೆಯು ಪರೀಕ್ಷಿಸಲ್ಪಡಬಹುದು. ಶಾಲಾಸಹಪಾಠಿಗಳ ನಡುವೆ ನಮ್ಮ ನಿರ್ಮಲತೆಯು ಪರೀಕ್ಷಿಸಲ್ಪಡಬಹುದು. ಮತ್ತು ನೈತಿಕವಾಗಿ ಭ್ರಷ್ಟವಾಗಿರುವ ಒಂದು ಲೋಕದಿಂದ ನಮ್ಮ ಸಮಗ್ರತೆಯು ಅನೇಕವೇಳೆ ಪರೀಕ್ಷೆಗೊಡ್ಡಲ್ಪಡುತ್ತದೆ.—2 ತಿಮೊಥೆಯ 3:1-5.
ಬೈಬಲ್ ಲೇಖಕನಾದ ಆಸಾಫನು ಸಹ, ದುಷ್ಟತನವು ಏಳಿಗೆ ಹೊಂದುತ್ತಿದ್ದ ಒಂದು ಸಮಯದಲ್ಲಿ ಜೀವಿಸಿದನು. ಅವನ ಸಮಕಾಲೀನರಲ್ಲಿ ಕೆಲವರು ತಮ್ಮ ಭಕ್ತಿಹೀನ ನಡತೆಯ ಕುರಿತಾಗಿ ಕೊಚ್ಚಿಕೊಳ್ಳುತ್ತಿದ್ದರು ಸಹ. ಆಸಾಫನು ಬರೆದುದು: “ಅವರಿಗೆ ಗರ್ವವು ಕಂಠಮಾಲೆಯಾಗಿದೆ; ಬಲಾತ್ಕಾರವು ಉಡುಪಾಗಿದೆ. ಹಾಸ್ಯಮಾಡುವವರಾಗಿ ಕೆಡುಕಿನ ವಿಷಯ ಮಾತಾಡಿಕೊಳ್ಳುತ್ತಾರೆ; ಬಲಾತ್ಕಾರನಡಿಸಬೇಕೆಂದು ಹೆಮ್ಮೆಕೊಚ್ಚುತ್ತಾರೆ.” (ಕೀರ್ತನೆ 73:6, 8) ಈ ಮನೋಭಾವವು ನಿಮಗೆ ಚಿರಪರಿಚಿತವಾಗಿ ಧ್ವನಿಸುತ್ತದೊ?
ಸರಿಯಾದುದನ್ನು ಮಾಡಲು ಬಯಸುವವರಿಗೆ ಅಂತಹ ನಡತೆಯು ತೀರ ಸಂಕಟಗೊಳಿಸುವಂತಹ, ನಿರುತ್ತೇಜನದಾಯಕ ವಿಷಯವೂ ಆಗಿದೆ. “ನಾನು ಯಾವಾಗಲೂ ವ್ಯಾಧಿಪೀಡಿತನಾಗಿದ್ದು ಪ್ರತಿದಿನವೂ ದಂಡಿಸಲ್ಪಡುತ್ತಾ ಇದ್ದೇನಲ್ಲಾ” ಎಂದು ಆಸಾಫನು ಪ್ರಲಾಪಿಸಿದನು. “ಅದು ಒಂದು ಕಷ್ಟಕರವಾದ ಮರ್ಮವೆಂದು ತೋಚಿತು.” (ಕೀರ್ತನೆ 73:14, 16) ನಿಮಗೂ ತದ್ರೀತಿ ಅನಿಸಬಹುದು, ಆದರೆ ಹತಾಶೆಗೊಳ್ಳಬೇಡಿರಿ! ಆಸಾಫನು ತನ್ನ ದಿನದ ದುಷ್ಟತನವನ್ನು ನಿಭಾಯಿಸಲು ಶಕ್ತನಾಗಿದ್ದನು, ಮತ್ತು ನೀವೂ ತದ್ರೀತಿಯಲ್ಲಿ ನಿಭಾಯಿಸಬಹುದು. ಆದರೆ ಹೇಗೆ?
ಮಾನವನ ಅಪರಿಪೂರ್ಣ ಆಳಿಕೆಯ ಕೆಳಗೆ ನಿಜ ನ್ಯಾಯವನ್ನು ಕಂಡುಕೊಳ್ಳುವುದು ಬಹುಮಟ್ಟಿಗೆ ಅಸಾಧ್ಯವೆಂಬುದನ್ನು ಆಸಾಫನು ಗ್ರಹಿಸುವಂತಾಯಿತು. (ಕೀರ್ತನೆ 146:3, 4; ಜ್ಞಾನೋಕ್ತಿ 17:23) ಆದುದರಿಂದ ತನ್ನ ಸುತ್ತಲಿದ್ದ ದುಷ್ಟತನವನ್ನು ತೆಗೆದುಹಾಕಲು ಪ್ರಯತ್ನಿಸುತ್ತಾ, ತನ್ನ ಅಮೂಲ್ಯವಾದ ಸಮಯ, ಶಕ್ತಿ ಮತ್ತು ಸಂಪನ್ಮೂಲಗಳನ್ನು ಹಾಳುಮಾಡುವುದರ ಬದಲಿಗೆ, ಅವನು ದೇವರೊಂದಿಗಿನ ತನ್ನ ಸಂಬಂಧದ ಮೇಲೆ ಮನಸ್ಸನ್ನು ಕೇಂದ್ರೀಕರಿಸಿದನು. ಆಸಾಫನು ಘೋಷಿಸಿದ್ದು: “ನನಗಾದರೋ ದೇವರ ಸಾನ್ನಿಧ್ಯವೇ ಭಾಗ್ಯವು. ಕರ್ತನೇ, ಯೆಹೋವನೇ, ನಾನು ನಿನ್ನನ್ನು ಆಶ್ರಯಿಸಿ”ಕೊಂಡಿದ್ದೇನೆ.—ಕೀರ್ತನೆ 73:28.
ಇಂದು, ಭ್ರಷ್ಟ ವ್ಯಾಪಾರ ಆಚಾರಗಳಲ್ಲಿ ತೊಡಗುವವರು, ಅನೇಕವೇಳೆ ಪ್ರಾಪಂಚಿಕ ಲಾಭಗಳಲ್ಲಿ ಆನಂದಿಸುತ್ತಾರೆ. ದೇವರ ನೈತಿಕ ನಿಯಮಗಳಿಗಾಗಿ ಅವರಿಗಿರುವ ಉಪೇಕ್ಷೆಯ ಕುರಿತಾಗಿ ಅನೇಕರು ಕೊಚ್ಚಿಕೊಳ್ಳಲೂಬಹುದು. ಆದರೆ ಅವರು ಶಾಶ್ವತವಾಗಿ ಮೇಲುಗೈಯನ್ನು ಹೊಂದದಿರುವರು. “ನೀನು ಅವರನ್ನು ಅಪಾಯಕರ ಸ್ಥಳದಲ್ಲಿಟ್ಟು ಬೀಳಿಸಿ ನಾಶಮಾಡಿಬಿಡುತ್ತೀ” ಎಂಬುದನ್ನು ಆಸಾಫನು ಗಮನಿಸಿದನು.—ಕೀರ್ತನೆ 73:18.
ಹೌದು, ದೇವರ ತಕ್ಕ ಸಮಯದಲ್ಲಿ, ಮೋಸ, ಹಿಂಸಾಚಾರ, ಮತ್ತು ಭ್ರಷ್ಟತೆ ಹಾಗೂ ನಿಜ ಕ್ರೈಸ್ತರು ದೂರವಿಡಬೇಕಾದ ಇತರ ಭಕ್ತಿಹೀನ ಆಚಾರಗಳು ತೆಗೆದುಹಾಕಲ್ಪಡುವವು. ಬೈಬಲ್ ವಾಗ್ದಾನಿಸುವುದು: “ಕೆಡುಕರು ತೆಗೆದುಹಾಕಲ್ಪಡುವರು; ಯೆಹೋವನನ್ನು ನಿರೀಕ್ಷಿಸುವವರೇ ದೇಶವನ್ನು ಅನುಭವಿಸುವರು.” (ಕೀರ್ತನೆ 37:9) ಈ ಮಧ್ಯೆ, ಹೀಗೆ ಹೇಳಿದಂತಹ ಕೀರ್ತನೆಗಾರನ ಮಾತುಗಳನ್ನು ನಾವು ಪ್ರತಿಧ್ವನಿಸೋಣ: “ಯೆಹೋವನು ನನ್ನ ಬಂಡೆಯೂ ನನ್ನ ಆಶ್ರಯದುರ್ಗವೂ ಪಾರುಗೊಳಿಸುವವನೂ ಆಗಿದ್ದಾನೆ. ನನ್ನ ದೇವರು ನನ್ನ ಆಶ್ರಯಗಿರಿಯಾಗಿದ್ದಾನೆ, ನಾನು ಅವನಲ್ಲಿ ಆಶ್ರಯವನ್ನು ಪಡೆದುಕೊಳ್ಳುವೆನು.”—ಕೀರ್ತನೆ 18:2, NW.