ಕನೆಟಿಕಟ್ನ ಸರ್ವೋಚ್ಚ ನ್ಯಾಯಾಲಯವು ರೋಗಿಯ ಹಕ್ಕುಗಳನ್ನು ಸಮರ್ಥಿಸುತ್ತದೆ
ಎಪ್ರಿಲ್ 16, 1996ರಂದು, ಅಮೆರಿಕದ ಕನೆಟಿಕಟ್ನ ಸರ್ವೋಚ್ಚ ನ್ಯಾಯಾಲಯವು, ರಕ್ತಪೂರಣಗಳನ್ನು ನಿರಾಕರಿಸುವ ಯೆಹೋವನ ಸಾಕ್ಷಿಗಳ ಹಕ್ಕನ್ನು ಸಮರ್ಥಿಸಿತು. ಆ ಮೊದಲು ಮಾಡಿದ್ದ ಟ್ರಾಯಲ್ ಕೋರ್ಟಿನ ನಿರ್ಣಯವನ್ನು ಈ ತೀರ್ಪು ರದ್ದುಗೊಳಿಸಿತು.
ಆಗಸ್ಟ್ 1994ರಲ್ಲಿ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬರಾದ ನೆಲೀ ವೀಗ, ತನ್ನ ಪ್ರಥಮ ಮಗುವನ್ನು ಹೆತ್ತ ಮೇಲೆ ತೀವ್ರವಾಗಿ ರಕ್ತಸ್ರವಿಸತೊಡಗಿದರು. ಅವರ ರಕ್ತಸ್ರಾವವನ್ನು ನಿಲ್ಲಿಸುವ ಪ್ರಯತ್ನಗಳು ವಿಫಲಗೊಂಡವು. ಶ್ರೀಮತಿ ವೀಗ ಅವರ ಸ್ಥಿತಿ ಕೆಟ್ಟಾಗ, ಆಸ್ಪತ್ರೆಯು ರಕ್ತಪೂರಣದ ಅಧಿಕಾರವನ್ನು ಕೊಡುವ ಒಂದು ಕೋರ್ಟ್ ಆರ್ಡರನ್ನು ಪಡೆಯಪ್ರಯತ್ನಿಸಿತು. ಶ್ರೀಮತಿ ವೀಗ ರಕ್ತವಾಗಲಿ ರಕ್ತೋತ್ಪನ್ನಗಳಾಗಲಿ ತಾನು ಆಸ್ಪತ್ರೆಯಲ್ಲಿರುವ ಸಮಯದಲ್ಲಿ ತನಗೆ ಕೊಡಬಾರದೆಂದು ನಿರ್ದೇಶಿಸುವ ಒಂದು ಮೆಡಿಕಲ್ ರಿಲೀಸ್ಗೆ ಆಗಲೇ ಸಹಿಹಾಕಿದ್ದರು. ಆ ಮೂಲಕ ತನ್ನ ನಿರ್ಣಯದ ಪರಿಣಾಮವಾಗಿ ಬರುವ ಯಾವುದೇ ಜವಾಬ್ದಾರಿಯಿಂದ ಅವರು ಆಸ್ಪತ್ರೆಯನ್ನು ಮುಕ್ತಗೊಳಿಸಿದ್ದರು. ಆದರೂ, ಮಗುವಿಗೆ ಅದರ ತಾಯಿ ಅಗತ್ಯವಾಗಿರುವುದರಿಂದ ರಕ್ತಪೂರಣವನ್ನು ನಿರ್ಬಂಧಿಸುವುದು ಹೊಸದಾಗಿ ಹುಟ್ಟಿದ ಮಗುವಿನ ಹಿತಾಸಕ್ತಿಯಿಂದ ವರ್ತಿಸಿದಂತಾಗುತ್ತದೆಂದು ಆಸ್ಪತ್ರೆ ವಾದಿಸಿತು. ರಕ್ತನಷ್ಟವೊಂದಲ್ಲದಿದ್ದರೆ, ಶ್ರೀಮತಿ ವೀಗ, ಯುವತಿಯೂ ಆರೋಗ್ಯವಂತೆಯೂ ಆದ ಸ್ತ್ರೀಯಾಗಿದ್ದುದರಿಂದ ಟ್ರಾಯಲ್ ಕೋರ್ಟ್ ಸಹ ಅದರಲ್ಲಿ ಕಾಳಜಿ ವಹಿಸಿತು. ಹೀಗೆ, ಶ್ರೀಮತಿ ವೀಗ ಅವರ ಗಂಡನ ಮತ್ತು ಅವರ ವಕೀಲನ ಆಕ್ಷೇಪಣೆಗಳ ಎದುರಿನಲ್ಲಿಯೂ, ಕೋರ್ಟು ಆರ್ಡರನ್ನು ಕೊಡಲಾಗಿ ರಕ್ತಪೂರಣವನ್ನು ಮಾಡಲಾಯಿತು.
ತಕ್ಕ ಕಾಲದಲ್ಲಿ, ಕನೆಟಿಕಟ್ನ ಸರ್ವೋಚ್ಚ ನ್ಯಾಯಾಲಯಕ್ಕೆ ಆ ಮೊಕದ್ದಮೆಯನ್ನು ತರಲಾಯಿತು. ಅಲ್ಲಿ, ಆಸ್ಪತ್ರೆಯ ವರ್ತನೆಯು ಶ್ರೀಮತಿ ವೀಗ ಅವರ ಹಕ್ಕುಗಳನ್ನು ಉಲ್ಲಂಘಿಸಿತೆಂದು ಸರ್ವಾನುಮತದಿಂದ ತೀರ್ಮಾನವಾಯಿತು. ಆ ತೀರ್ಮಾನ ಹೇಳಿದ್ದು: “ಟ್ರಾಯಲ್ ಕೋರ್ಟಿನ ವಿಚಾರಣೆಯು, ಮಧ್ಯ ರಾತ್ರಿಯ ವೇಳೆ, ವಿಪರೀತ ತುರ್ತು ಪರಿಸ್ಥಿತಿಗಳಡಿಯಲ್ಲಿ ನಡೆಯಿತು. ಆ ಪರಿಸ್ಥಿತಿಗಳು ಯಾವ ಪಕ್ಷಕ್ಕೂ ತನ್ನ ವಾದಗಳನ್ನು ಪೂರ್ಣವಾಗಿ ವಿಕಸಿಸುವ ಸಾಮರ್ಥ್ಯಕ್ಕೆ ಅನುಕೂಲವಾಗಿರಲಿಲ್ಲ.”
ಕನೆಟಿಕಟ್ ಸರ್ವೋಚ್ಚ ನ್ಯಾಯಾಲಯದ ಈ ತೀರ್ಮಾನ ಯೆಹೋವನ ಸಾಕ್ಷಿಗಳಲ್ಲದವರಿಗೂ ಗಮನಾರ್ಹವಾಗಿದೆ. ಶ್ರೀಮತಿ ವೀಗ ಅವರ ವಕೀಲರಾದ ಡಾನಲ್ಡ್ ಟಿ. ರಿಡ್ಲೀ ಹೇಳುವುದು: “ತಮ್ಮ ಡಾಕ್ಟರುಗಳ ನಿರ್ಣಯಗಳೊಂದಿಗೆ ಸಮ್ಮತಿಸದಿರಬಹುದಾದ ರೋಗಿಗಳೆಲ್ಲರಿಗೂ ಇದು ಪ್ರಾಮುಖ್ಯ. ಈ ತೀರ್ಮಾನ, ಆಸ್ಪತ್ರೆಗಳು ರೋಗಿಗಳ ಧಾರ್ಮಿಕ ಮೌಲ್ಯಗಳೇ ಆಗಲಿ, ಐಹಿಕ ಮೌಲ್ಯಗಳೇ ಆಗಲಿ—ಅವುಗಳನ್ನು ತುಳಿದು ನೆಲಸಮ ಮಾಡುವುದರಿಂದ ತಡೆಯುವುದು.”