ಅವರೊಂದಿಗೆ ಜೊತೆಗೂಡಬಾರದೇಕೆ?
ಇನ್ಜಾವುಕೂಆ ಊಲಿಂಬಾ 73 ವರ್ಷ ಪ್ರಾಯದವರಾಗಿದ್ದು, ಕಳೆದ ವರ್ಷ ಅವರು ಸುಮಾರು 450 ಕಿಲೊಮೀಟರುಗಳ ಪ್ರಯಾಣವನ್ನು ಕೈಗೊಂಡರು. ಈ ಪ್ರಯಾಣದ ಉದ್ದಕ್ಕೂ ಅವರು ನಡೆದರು, ಇದಕ್ಕೆ 16 ದಿನಗಳು ಹಿಡಿದವು.
ಈ ವೃದ್ಧ ಸಜ್ಜನರು, ಯೆಹೋವನ ಸಾಕ್ಷಿಗಳ ವಾರ್ಷಿಕ ಅಧಿವೇಶನಗಳಲ್ಲಿ ಒಂದನ್ನು ಹಾಜರಾಗಲಿಕ್ಕಾಗಿ ಈ ದೀರ್ಘ ಪ್ರಯಾಣವನ್ನು ಕೈಗೊಂಡರು. ಅಧಿವೇಶನದ ಬಳಿಕ, ಹರ್ಷಭರಿತರೂ ಆತ್ಮಿಕವಾಗಿ ಬಲಪಡಿಸಲ್ಪಟ್ಟವರೂ ಆಗಿ, ಅವರು ಮತ್ತೆ 16 ದಿನಗಳು ನಡೆದು ಮನೆಗೆ ಹಿಂದಿರುಗಿದರು. ಅವರ ಪ್ರಯತ್ನವು ಸಾರ್ಥಕವಾಗಿತ್ತೊ? ನಿಶ್ಚಯವಾಗಿಯೂ ಸಾರ್ಥಕವಾಗಿತ್ತು! ಇನ್ಜಾವುಕೂಆ ಊಲಿಂಬಾ ಈ ಪ್ರಯಾಣವನ್ನು ವಾರ್ಷಿಕವಾಗಿ ಕೆಲವು ವರ್ಷಗಳಿಂದ ಮಾಡುತ್ತಾ ಬಂದಿದ್ದಾರೆ.
ಆಫ್ರಿಕದ ಈ ವ್ಯಕ್ತಿಯು, ಕಳೆದ ವರ್ಷ ಯೆಹೋವನ ಸಾಕ್ಷಿಗಳ ಅಧಿವೇಶನಗಳಿಗೆ 230ಕ್ಕಿಂತಲೂ ಹೆಚ್ಚಿನ ದೇಶಗಳಿಂದ ಬಂದು ಹಾಜರಾದ ಒಂದೂವರೆ ಕೋಟಿಗಿಂತಲೂ ಹೆಚ್ಚಿನ ಜನರಲ್ಲಿ ಒಬ್ಬರಾಗಿದ್ದರು. ಅವರಲ್ಲಿ ಹೆಚ್ಚಿನವರು, ಅಧಿವೇಶನದ ಸ್ಥಳವನ್ನು ತಲಪಲು ದಿನಗಟ್ಟಲೆ ನಡೆಯಬೇಕಾಗಿರಲಿಲ್ಲವೆಂಬುದು ನಿಜ. ಅಧಿಕಾಂಶ ಜನರು, ಕಾರು, ಬಸ್ಸು, ರೈಲುಗಾಡಿ, ಇಲ್ಲವೆ ವಿಮಾನದ ಮೂಲಕ ಬಂದು ತಲಪಿದರು. ಅವರಲ್ಲಿ ನೀವು ಒಬ್ಬರಾಗಿದ್ದಿರೊ?
ಇಸವಿ 1998ರಲ್ಲಿ ಲೋಕದಾದ್ಯಂತ ಅಧಿವೇಶನಗಳು ಪುನಃ ಜರುಗಲಿವೆ, ಹೆಚ್ಚುಕಡಿಮೆ ಬೇಸಗೆಯ ತಿಂಗಳುಗಳಲ್ಲಿ (ಇಲ್ಲವೆ ಶುಷ್ಕ ಕಾಲದಲ್ಲಿ). ಅವರ ಆರೋಗ್ಯವು ಚೆನ್ನಾಗಿರುವಲ್ಲಿ, ಇನ್ಜಾವುಕೂಆ ಊಲಿಂಬಾ ಹಾಜರಾಗಲು ಅಷ್ಟೇ ದೀರ್ಘವಾದ ನಡಿಗೆಯನ್ನು ಕೈಗೊಳ್ಳಬಹುದು. ಅವರು ಮತ್ತು ಇತರ ಕೋಟಿಗಟ್ಟಲೆ ಜನರು, ಪ್ರಾಯೋಗಿಕವಾದ, ನಂಬಿಕೆಯನ್ನು ಬಲಪಡಿಸುವ, ಹಾಗೂ ಚೇತನಗೊಳಿಸುವ ಕಾರ್ಯಕ್ರಮಕ್ಕೆ ಕಿವಿಗೊಡುವರು. ಹಾಜರಾಗುವ ಎಲ್ಲರಿಗೂ, ಅಧಿವೇಶನವು ಆ ವರ್ಷದ ಮುಖ್ಯ ಘಟನೆಯಾಗಿರುವುದು. ಹಾಜರಾಗುವಂತೆ ನಿಮಗೂ ಆದರದ ಆಮಂತ್ರಣವಿದೆ. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು, ನಿಮಗೆ ಅತಿ ಹತ್ತಿರವಿರುವ ಅಧಿವೇಶನದ ಸ್ಥಳದ ಕುರಿತು ನಿಮಗೆ ತಿಳಿಸಲು ಸಂತೋಷಿಸುವರು.