ನೀವು ಎಂತಹ ಹೆಸರನ್ನು ಪಡೆದುಕೊಂಡಿದ್ದೀರಿ?
ಬೈಬಲಿನಲ್ಲಿ “ಹೆಸರು” ಎಂಬ ಪದವು, ಕೆಲವೊಮ್ಮೆ ಒಬ್ಬನ ಸತ್ಕೀರ್ತಿಯನ್ನು ಸೂಚಿಸುತ್ತದೆ. ಉದಾಹರಣೆಗೆ, ವಿವೇಕಿ ಅರಸನಾದ ಸೊಲೊಮೋನನು ಬರೆದುದು: “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು.” (ಪ್ರಸಂಗಿ 7:1; ಹೋಲಿಸಿ ಜ್ಞಾನೋಕ್ತಿ 22:1.) ಸೊಲೊಮೋನನ ಮಾತುಗಳಿಗನುಸಾರ, ವ್ಯಕ್ತಿಯೊಬ್ಬನು ಒಳ್ಳೆಯ ಹೆಸರಿನೊಂದಿಗೆ ಜನಿಸುವುದಿಲ್ಲ. ಬದಲಿಗೆ, ಅವನು ತನ್ನ ಜೀವಮಾನದಲ್ಲಿ ನಿಜಾರ್ಥದ ಸತ್ಕೀರ್ತಿಯನ್ನು ಗಳಿಸುತ್ತಾನೆ. ವ್ಯಕ್ತಿಯು ಉದಾರಿಯೊ ಸ್ವಾರ್ಥಿಯೊ, ಸಹಾನುಭೂತಿಯುಳ್ಳವನೊ ಭಾವಶೂನ್ಯನೊ, ದೀನನೊ ಅಹಂಕಾರಿಯೊ, ಇಲ್ಲವೆ ನೀತಿವಂತನೊ ದುಷ್ಟನೊ ಎಂಬಂತಹ ವೈಯಕ್ತಿಕ ಗುಣಗಳನ್ನು ಅವನ ಹೆಸರು ಅವನಿಗೆ ಕೂಡಿಸುತ್ತದೆ.
ದಾವೀದನನ್ನು ಪರಿಗಣಿಸಿರಿ. ಅವನ ಆಳ್ವಿಕೆಯ ಸಮಯದಲ್ಲಿ, ಅವನು ಬಲಿಷ್ಠನೂ ಸ್ಥಿರಚಿತ್ತನೂ ಆಗಿದ್ದನು. ಅದೇ ಸಮಯದಲ್ಲಿ, ದಾವೀದನು ತನ್ನ ತಪ್ಪುಗಳನ್ನು ದೀನಭಾವದಿಂದ ಒಪ್ಪಿಕೊಂಡು, ತಾನು ಗೈದ ಗಂಭೀರವಾದ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟನು. ಸಕಾರಣದಿಂದಿಲೇ, ದಾವೀದನು ‘[ದೇವರ] ಹೃದಯಕ್ಕೆ ಒಪ್ಪುವ ಪುರುಷ’ನಾಗಿದ್ದನೆಂದು ಯೆಹೋವನ ಪ್ರವಾದಿಯು ಸೂಚಿಸಿದನು. (1 ಸಮುವೇಲ 13:14) ಯುವ ದಾವೀದನು ಈಗಾಗಲೇ ದೇವರೊಂದಿಗೆ ಒಂದು ಒಳ್ಳೆಯ ಹೆಸರನ್ನು ಪಡೆದುಕೊಂಡಿದ್ದನು.
ಇದಕ್ಕೆ ತದ್ವಿರುದ್ಧವಾಗಿ, ಯೆಹೂದಿ ರಾಜನಾದ ಯೆಹೋರಾಮನು ತನಗಾಗಿ ಒಂದು ಕೆಟ್ಟ ಹೆಸರನ್ನು ಪಡೆದುಕೊಂಡನು. ಅವನು ತನ್ನ ಪ್ರಜೆಗಳನ್ನು ಯೆಹೋವನ ಆರಾಧನೆಯಿಂದ ವಿಮುಖಗೊಳಿಸಿ, ತನ್ನ ಆರು ಮಂದಿ ಸಹೋದರರನ್ನು ಮತ್ತು ಯೆಹೂದದ ಕೆಲವು ರಾಜಪುತ್ರರನ್ನು ಕೊಂದುಹಾಕಿದನು. ಕೊನೆಗೆ, ಅವನನ್ನು ಮರಣಕ್ಕೆ ನಡೆಸಿದ ಒಂದು ವೇದನಾಮಯವಾದ ರೋಗವನ್ನು ಯೆಹೋವನು ಅವನ ಮೇಲೆ ಬರಮಾಡಿದನು. ಯೆಹೋರಾಮನು “ತೀರಿಹೋದಾಗ ಅವನನ್ನು ಯಾರೂ ಹಂಬಲಿಸಲಿಲ್ಲ” ಎಂಬುದಾಗಿ ಬೈಬಲು ಹೇಳುತ್ತದೆ. ಅಥವಾ ಟುಡೇಸ್ ಬೈಬಲ್ ವರ್ಷನ್ ಹೇಳುವಂತೆ, “ಅವನು ಸತ್ತಾಗ ಯಾರೂ ದುಃಖಿಸಲಿಲ್ಲ.”—2 ಪೂರ್ವಕಾಲವೃತ್ತಾಂತ 21:20.
ದಾವೀದನ ಮತ್ತು ಯೆಹೋರಾಮನ ಜೀವನಕ್ರಮಗಳು, ಈ ಮುಂದಿನ ಬೈಬಲ್ ಜ್ಞಾನೋಕ್ತಿಯ ನಿಜತ್ವವನ್ನು ದೃಷ್ಟಾಂತಿಸುತ್ತವೆ: “ಶಿಷ್ಟರ ಸ್ಮರಣೆಯು ಆಶೀರ್ವಾದಕ್ಕಾಸ್ಪದ; ದುಷ್ಟರ ನಾಮವು ನಿರ್ನಾಮ.” (ಜ್ಞಾನೋಕ್ತಿ 10:7) ಆದುದರಿಂದ, ‘ನಾನು ದೇವರೊಂದಿಗೆ ಮತ್ತು ನನ್ನ ಜೊತೆಮಾನವರೊಂದಿಗೆ ಯಾವ ರೀತಿಯ ಹೆಸರನ್ನು ಮಾಡಿಕೊಳ್ಳುತ್ತಿದ್ದೇನೆ?’ ಎಂಬ ಪ್ರಶ್ನೆಯನ್ನು ನಮ್ಮಲ್ಲಿ ಪ್ರತಿಯೊಬ್ಬರು ಗಂಭೀರವಾಗಿ ಪರಿಗಣಿಸತಕ್ಕದ್ದು.