“ಅಲ್ಲಿನ ಶಾಂತ ವಾತಾವರಣವನ್ನು ನಾನು ನೋಡಸಾಧ್ಯವಿತ್ತು”
ಸಾಕ್ಷಿಗಳ “ಚಲನವಲನ”ದ ಮೇಲೆ ನಿಗಾ ಇಡಲಿಕ್ಕಾಗಿ ಜರ್ಮನ್ ಭಾಷೆಯನ್ನು ಮಾತಾಡುವ ಒಬ್ಬ ವ್ಯಕ್ತಿಯು, ಯೆಹೋವನ ಸಾಕ್ಷಿಗಳಿಂದ ಏರ್ಪಡಿಸಲ್ಪಟ್ಟ ಒಂದು ಅಧಿವೇಶನಕ್ಕೆ ಹೋದನು. ಏಕೆ? “ಈ ಪಂಥವನ್ನು ಬಯಲುಪಡಿಸಲು ಮತ್ತು ದಾರಿತಪ್ಪಿಹೋಗದಂತೆ ತನ್ನ ಮಿತ್ರರನ್ನು ಕಾಪಾಡುವುದೇ” ಅವನ ಗುರಿಯಾಗಿತ್ತು. ಆ ಅಧಿವೇಶನಕ್ಕೆ ಹಾಜರಾದ ಅನಂತರ, ಈ ಕೆಳಗಿನ ಪತ್ರವನ್ನು ಅವನು ತನ್ನ ಮಿತ್ರರಿಗೆ ಬರೆದನು:
“ಅಧಿವೇಶನದ ಸ್ಥಳಕ್ಕೆ ಹೋದಾಗ, ನಾನು ಸರಿಯಾದ ಜಾಗಕ್ಕೆ ಬಂದಿದ್ದೇನೋ ಎಂದು ನೆನಸಿದೆ. ಯಾರೊಬ್ಬರೂ ಕಣ್ಣಿಗೆ ಬೀಳಲಿಲ್ಲ ಮತ್ತು ನೆಲದ ಮೇಲೆ ಕಸಕಡ್ಡಿಯಾಗಲಿ, ಬೀಯರ್ ಬಾಟಲಿಗಳಾಗಲಿ ಬಿದ್ದಿರಲಿಲ್ಲ. ಸ್ವಲ್ಪ ಹತ್ತಿರ ಹೋದಂತೆ, ಸ್ಟೇಡಿಯಮ್ನ ದ್ವಾರದಲ್ಲಿ ಇಬ್ಬರು ಮಹನೀಯರನ್ನು ನಾನು ನೋಡಿದೆ. ಅವರು ನನಗೆ ಅಭಿವಂದಿಸಿ, ನನ್ನನ್ನು ಒಳಗೆ ಹೋಗಲು ಬಿಟ್ಟರು.
“ಅಲ್ಲಿ ನೆರೆದಿದ್ದ ಸಾವಿರಾರು ಜನರು ಗದ್ದಲ ಮಾಡುತ್ತಿರಬಹುದೆಂದು ನೆನಸಿದೆ, ಆದರೆ ಅಲ್ಲಿ ನಿಶ್ಶಬ್ದವು ಮನೆಮಾಡಿತ್ತು. ‘ಬೆರಳೆಣಿಕೆಯಷ್ಟು ಜನರು ಮಾತ್ರ ಅಲ್ಲೊಬ್ಬರು ಇಲ್ಲೊಬ್ಬರು ಕುಳಿತಿರಬಹುದು’ ಎಂದು ನೆನೆಸಿದೆ.
“ನಾನು ಒಳಗೆ ಪ್ರವೇಶಿಸಿದಂತೆ, ವೇದಿಕೆಯ ಮೇಲೆ ಅಭಿನಯಿಸಲ್ಪಡುತ್ತಿದ್ದ ಡ್ರಾಮಾವೊಂದರಿಂದ ನಾನು ಪರವಶನಾದೆ. ನನಗೆ ಅನಂತರವೇ, ತುಂಬ ಗಮನವಿಟ್ಟು ಕೇಳುತ್ತಿದ್ದ ಸಾವಿರಾರು ಜನರಿಂದ ಸ್ಟೇಡಿಯಮ್ ತುಂಬಿತುಳುಕುತ್ತಿತ್ತು ಎಂದು ಗೊತ್ತಾಯಿತು. ಅಲ್ಲಿನ ಶಾಂತ ವಾತಾವರಣವನ್ನು ನಾನು ನೋಡಸಾಧ್ಯವಿತ್ತು. ಅಧಿವೇಶನದ ಉಳಿದ ಭಾಗದಿಂದ ನಾನು ಕೇಳಿಸಿಕೊಂಡ, ನೋಡಿದ ಮತ್ತು ಅನುಭವಿಸಿದ ವಿಷಯಗಳು ನನ್ನ ಮೇಲೆ ಗಾಢವಾದ ಪ್ರಭಾವವನ್ನು ಬೀರಿದವು.
“ಸಾಕ್ಷಿಗಳೊಡನೆ ಕಲೆತು ಮಾತಾಡಿದಾಗ, ಸಂತೋಷದಿಂದ ಕಂಗೊಳಿಸುತ್ತಿದ್ದ ಅವರ ಮುಖಗಳನ್ನು ಮತ್ತು ಪ್ರೀತಿಯ ಅಭಿವ್ಯಕ್ತಿಗಳನ್ನು ನಾನು ನೋಡಿದೆ. ತತ್ಕ್ಷಣವೇ, ‘ಇವರು ನಿಜವಾಗಿಯೂ ದೇವಜನರಾಗಿದ್ದಾರೆ!’ ಎಂಬ ವಿಚಾರವನ್ನು ವ್ಯಕ್ತಪಡಿಸದಿರಲಾಗಲಿಲ್ಲ.”
‘ದಾರಿತಪ್ಪಿಹೋಗದಂತೆ ತನ್ನ ಮಿತ್ರರನ್ನು ಕಾಪಾಡುವುದರ’ ಬದಲು, ಆ ಯುವ ವ್ಯಕ್ತಿಯು ತಾನು ಬೈಬಲ್ ಅಭ್ಯಾಸವನ್ನು ಸ್ವೀಕರಿಸಲು ಇಷ್ಟಪಡುತ್ತೇನೆಂದು ಹೇಳಿದನು. ಅದರ ಪರಿಣಾಮವೇನಾಯಿತು? ಇಂದು, ಆ ವ್ಯಕ್ತಿ ಒಬ್ಬ ಕ್ರೈಸ್ತ ಹಿರಿಯನಾಗಿದ್ದಾನೆ. ಸ್ವಿಟ್ಸರ್ಲೆಂಡಿನ ಸೂಗ್ನಲ್ಲಿರುವ ಸಭೆಗಳಲ್ಲೊಂದರಲ್ಲಿ ಅವನು ಮತ್ತು ಅವನ ಕುಟುಂಬವು ಕ್ರಿಯಾಶೀಲವಾಗಿದೆ.