“ಮನಮೋಹಕವಾದ ಪತ್ನಿಯ ಸಂತೋಷಿತ ಪತಿ”
ಕೆಲವು ಜನರು ಅನೇಕ ವೇಳೆ, ಯೆಹೋವನ ಸಾಕ್ಷಿಗಳು ವಿವಾಹಗಳನ್ನು ಮುರಿಯುತ್ತಾರೆಂದು ಅವರ ಮೇಲೆ ಆರೋಪವನ್ನು ಹೊರಿಸುತ್ತಾರೆ. ಆದಾಗ್ಯೂ, ವಿವಾಹ ಸಂಗಾತಿಯರಲ್ಲಿ ಕೇವಲ ಒಬ್ಬನು ಯೆಹೋವನ ಸಾಕ್ಷಿಯಾಗಿರುವ ಹಲವಾರು ಯಶಸ್ವಿ ವಿವಾಹಗಳಲ್ಲಿಯೂ ಇದು ಸತ್ಯವಾಗಿರುವುದಿಲ್ಲ. ಫ್ರೆಂಚ್ ವಾರ್ತಾಪತ್ರಿಕೆಯಲ್ಲಿ ಪ್ರಕಾಶಿಸಲಾದ ಕೆಳಗಿನ ಪತ್ರವು ಸೂಚಿಸುವಂತೆ, ಕುಟುಂಬ ಜೀವನದಲ್ಲಿ ಬೈಬಲಿನ ಸಲಹೆಯನ್ನು ಪಾಲಿಸುವುದು ಸಂತೋಷಿತ ವಿವಾಹವನ್ನು ರೂಪಿಸುತ್ತದೆ.
“ಸುಮಾರು 28 ವರ್ಷಗಳಿಂದ, ನಾನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದ ಮನಮೋಹಕವಾದ ಪತ್ನಿಯ ಸಂತೋಷಿತ ಪತಿಯಾಗಿದ್ದೇನೆ. ಅವಳು ನನ್ನ ಐವರು ಮಕ್ಕಳನ್ನು, ಅವರಲ್ಲಿ ಇಬ್ಬರು ಅವಳ ಸ್ವಂತ ಮಕ್ಕಳಾಗಿರದಿದ್ದರೂ, ಅವರನ್ನು ಯಾವುದೇ ಭೇದಭಾವವಿಲ್ಲದೆ ಕಾಳಜಿಯಿಂದ ಮತ್ತು ಪ್ರೀತಿಯ ಮಹಾಪೂರವನ್ನೇ ಹರಿಸಿ ಬೆಳೆಸಿದಳು. ಸದ್ಯಕ್ಕೆ 45 ನೌಕರರುಳ್ಳ ಕಂಪೆನಿಯ ನಿರ್ದೇಶಕನಾಗಿರುವ ನಾನು, ನನ್ನ ವೃತ್ತಿಯ ಯಶಸ್ಸಿಗೆ ಅವಳು ತುಂಬ ಸಹಾಯವನ್ನು ನೀಡಿದ್ದಾಳೆಂಬ ಖಾತ್ರಿಯನ್ನು ಕೊಡಬಲ್ಲೆ. ಆದುದರಿಂದಲೇ, ನಾನು ದಿನಾಲೂ ಓದುವ ವಾರ್ತಾಪತ್ರಿಕೆಯಲ್ಲಿ, ಯೆಹೋವನ ಸಾಕ್ಷಿಗಳು ಲಾಟೇಗರಾನ್ನ ನೈರುತ್ಯ ಫ್ರಾನ್ಸ್ನ ಇಲಾಖೆಗೆ ಒಂದು ಬೆದರಿಕೆಯಾಗಿದ್ದಾರೆಂದು ಪ್ರಕಟವಾದ ಲೇಖನವೊಂದನ್ನು ನೋಡಿದಾಗ, ಈ ಅಧಿಕಾರಯುಕ್ತವಾದ ರುಜುವಾತನ್ನು ನಾನು ನಿಮಗೆ ಒದಗಿಸಲು ನಿರ್ಧರಿಸಿದೆ.”
ಲೇಖನವು ಮತ್ತೂ ಹೇಳುವುದು: “ಅವರು ಧೂಮಪಾನ ಮಾಡುವುದಿಲ್ಲ ಅಥವಾ ಕುಡಿದು ಅಮಲೇರುವುದಿಲ್ಲ. ಇದು ಬೆದರಿಕೆಯಾಗಿದೆಯೋ? ತಾವು ಅನುಸರಿಸುತ್ತಿರುವ ನಿಯಮಗಳನ್ನು ಇತರರ ಮೇಲೆ ಹೊರಿಸದಿರುವ ಸಹಿಷ್ಣುತೆಯುಳ್ಳ ಕ್ರೈಸ್ತರು ಅವರಾಗಿದ್ದಾರೆ. ಅಲ್ಲದೆ, ಅನೇಕ ಕ್ಷೇತ್ರಗಳಲ್ಲಿ ಅವರು ಆದರ್ಶಪ್ರಾಯರಾಗಿದ್ದಾರೆ . . . ಹಣಕಾಸಿನ ಹಗರಣಗಳಲ್ಲಿ ಅಥವಾ ಅಮಲೌಷಧ ವ್ಯಾಪಾರಗಳಲ್ಲಿ ಅವರು ಒಳಗೂಡುವುದಿಲ್ಲ. ಅವರು ಸಂಭೋಗರಹಿತರಾಗಿರುವ ಪ್ರತಿಜ್ಞೆಯನ್ನು ಮಾಡಿಕೊಳ್ಳುವುದಿಲ್ಲ. ಮತ್ತು ಅವರು ಜನಸಾಮಾನ್ಯರಂತೆಯೇ ಜೀವಿಸುತ್ತಾರೆ ಎಂಬುದನ್ನು ನಾನು ಖಚಿತವಾಗಿ ಹೇಳಬಲ್ಲೆ. . . .
“ಹಾಗಾದರೆ ಸ್ವತಃ ನೀನು ಏಕೆ ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿಲ್ಲ? ಎಂದು ನೀವು ನನ್ನನ್ನು ಪ್ರಶ್ನಿಸಬಹುದು. ವಿಷಯವೇನೆಂದರೆ, ಇಲ್ಲಿ ಕ್ರೈಸ್ತ ನಂಬಿಕೆ ಮತ್ತು ಕಟ್ಟುನಿಟ್ಟಾದ ನೈತಿಕ ಮಟ್ಟಗಳ ಆವಶ್ಯಕತೆಯಿರುತ್ತದೆ ಮತ್ತು ಇವು ಅನೇಕ ಜನರಲ್ಲಿ ಸುಲಭವಾಗಿ ಕಾಣಸಿಗುವುದಿಲ್ಲ.”