ಅವರು “ಸತ್ಯ ದೇವರಿಗೆ ಭಯಪಟ್ಟರು”
ಇಸ್ರಾಯೇಲ್ಯರು ಐಗುಪ್ತದಲ್ಲಿ ದಾಸತ್ವದಲ್ಲಿದ್ದಾಗ, ಇಬ್ರಿಯ ಸೂಲಗಿತ್ತಿಯರಾದ ಶಿಪ್ರಾ ಮತ್ತು ಪೂಗಾ ಎಂಬವರಿಗೆ ಸಂಕಟಕರ ಪರಿಸ್ಥಿತಿಯು ಬಂದೊದಗಿತು. ತ್ವರಿತವಾಗಿ ವೃದ್ಧಿಯಾಗುತ್ತಿದ್ದ ಅನ್ಯಜನಾಂಗದ ಜನಸಂಖ್ಯೆಯನ್ನು ಹತೋಟಿಯಲ್ಲಿಡುವ ಪ್ರಯತ್ನದಲ್ಲಿ, ಫರೋಹನು ಈ ಸ್ತ್ರೀಯರಿಗೆ ಹೀಗೆ ಆಜ್ಞಾಪಿಸಿದನು: “ನೀವು ಇಬ್ರಿಯ ಹೆಂಗಸರಿಗೆ ಹೆರಿಗೆ ಮಾಡಿಸುವಾಗ ಅವರು ಹೆರುವದು ಗಂಡುಮಗುವಾಗಿದ್ದರೆ ಕೊಲ್ಲಬೇಕು.”—ವಿಮೋಚನಕಾಂಡ 1:15, 16, NW.
ಶಿಪ್ರಾ ಮತ್ತು ಪೂಗಾ “ಸತ್ಯ ದೇವರಿಗೆ ಭಯಪಟ್ಟರು,” ಆದುದರಿಂದ ಅವರು ಧೈರ್ಯದಿಂದ ‘ಐಗುಪ್ತ್ಯರ ಅರಸನ ಮಾತಿನಂತೆ ಮಾಡಲಿಲ್ಲ.’ ಬದಲಿಗೆ, ತಮ್ಮ ಧೈರ್ಯದ ನಿಲುವು ತಮ್ಮನ್ನು ಅಪಾಯದಲ್ಲಿ ಸಿಲುಕಿಸಸಾಧ್ಯವಿತ್ತಾದರೂ, ಅವರು ಗಂಡು ಶಿಶುಗಳನ್ನು ಜೀವಂತವಾಗಿ ಉಳಿಸಿದರು. ಯೆಹೋವನು “ಆ ಸೂಲಗಿತ್ತಿಯರಿಗೆ ಹಿತವನ್ನು ಮಾಡಿದನು” ಮತ್ತು ಅವರ ಜೀವಸಂರಕ್ಷಕ ಕೃತ್ಯಗಳಿಗಾಗಿ ಆತನು ಅವರನ್ನು ಆಶೀರ್ವದಿಸಿದನು.—ವಿಮೋಚನಕಾಂಡ 1:17-21.
ತನ್ನನ್ನು ಸೇವಿಸುವವರ ಕಡೆಗೆ ಯೆಹೋವನಿಗಿರುವ ಗಣ್ಯತೆಯನ್ನು ಈ ದಾಖಲೆಯು ಒತ್ತಿಹೇಳುತ್ತದೆ. ಶಿಪ್ರಾ ಮತ್ತು ಪೂಗಾ ಮಾಡಿದ ಕೃತ್ಯಗಳು ಧೈರ್ಯದ ವಿಷಯವಾಗಿದ್ದರೂ, ಆತನು ಅದನ್ನು ಕೇವಲ ಮಾನವೀಯ ಕೃತ್ಯವಾಗಿ ವೀಕ್ಷಿಸಸಾಧ್ಯವಿತ್ತು. ಎಷ್ಟೆಂದರೂ, ಸ್ವಸ್ಥ ಚಿತ್ತವಿರುವ ಯಾವ ಸ್ತ್ರೀಯೂ ಶಿಶುಗಳನ್ನು ಕೊಲ್ಲಲಾರಳೆಂಬುದು ನಿಜವಷ್ಟೆ! ಆದರೂ, ಕೆಲವು ಮಾನವರು ಮನುಷ್ಯರ ಭಯಕ್ಕೆ ಒಳಗಾಗಿ ಅತಿಘೋರವಾದ ಕೃತ್ಯಗಳನ್ನು ನಡಿಸಿದ್ದಾರೆಂಬ ವಾಸ್ತವಿಕತೆಯನ್ನು ಯೆಹೋವನು ಪರಿಗಣಿಸಿದನೆಂಬುದು ನಿಸ್ಸಂದೇಹ. ಈ ಸೂಲಗಿತ್ತಿಯರು ಕೇವಲ ಮಾನವ ದಯೆಯಿಂದ ಮಾತ್ರವಲ್ಲ, ದಿವ್ಯಭಯ ಮತ್ತು ಭಕ್ತಿಯಿಂದ ಪ್ರೇರಿತರಾಗಿದ್ದರೆಂಬುದು ಆತನಿಗೆ ತಿಳಿದಿತ್ತು.
ನಮ್ಮ ನಂಬಿಗಸ್ತ ಕೃತ್ಯಗಳನ್ನು ಗಮನಿಸುವ ದೇವರೊಬ್ಬನನ್ನು ನಾವು ಸೇವಿಸುತ್ತಿದ್ದೇವೆಂಬುದಕ್ಕೆ ನಾವೆಷ್ಟು ಆಭಾರಿಗಳಾಗಿರಬೇಕು! ನಿಜ, ಶಿಪ್ರಾ ಮತ್ತು ಪೂಗಾರ ಮೇಲೆ ಬಂದೆರಗಿದ ನಂಬಿಕೆಯ ಪರೀಕ್ಷೆಯನ್ನು ಪ್ರಾಯಶಃ ನಮ್ಮಲ್ಲಿ ಯಾರೊಬ್ಬರೂ ಎದುರಿಸಿಲ್ಲ. ಆದರೂ, ಶಾಲೆಯಲ್ಲಿರಲಿ, ಉದ್ಯೋಗದ ಸ್ಥಳದಲ್ಲಿರಲಿ ಅಥವಾ ಬೇರೆ ಯಾವುದೇ ಪರಿಸ್ಥಿತಿಯಲ್ಲಿರಲಿ ಸರಿಯಾದುದನ್ನು ಮಾಡುವುದಕ್ಕೆ ನಾವು ದೃಢರಾಗಿ ನಿಲ್ಲುವಾಗ, ಯೆಹೋವನು ನಮ್ಮ ನಿಷ್ಠೆಯ ಪ್ರೀತಿಯನ್ನು ಲಘುವಾಗಿ ಎಣಿಸುವುದಿಲ್ಲ. ಬದಲಿಗೆ, ಆತನು “ತನ್ನನ್ನು ಹುಡುಕುವವರಿಗೆ ಪ್ರತಿಫಲವನ್ನು ಕೊಡುತ್ತಾನೆ.” (ಇಬ್ರಿಯ 11:6) ಹೌದು, “ನೀವು ದೇವಜನರಿಗೆ ಉಪಚಾರ ಮಾಡಿದಿರಿ, ಇನ್ನೂ ಮಾಡುತ್ತಾ ಇದ್ದೀರಿ. ಈ ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.”—ಇಬ್ರಿಯ 6:10.