ಅವರು ‘ಕಡೇ ವರೆಗೂ ತಾಳಿಕೊಂಡರು’
ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯದ ಹೊಸ ಸದಸ್ಯರಿಗೆ ಇಸವಿ 1993ರಲ್ಲಿ ತಯಾರಿಸಲ್ಪಟ್ಟಿರುವ ಒಂದು ವಿಡಿಯೋವನ್ನು ತೋರಿಸಲಾಗುತ್ತದೆ. ಆ ವಿಡಿಯೋದಲ್ಲಿ, ಲೈಮನ್ ಅಲೆಕ್ಸಾಂಡರ್ ಸ್ವಿಂಗಲ್ ಅವರು ಯೆಹೋವನ ಸೇವೆಮಾಡುವುದರ ಕುರಿತಾದ ತಮ್ಮ ಅನಿಸಿಕೆಗಳನ್ನು ಈ ಮಾತುಗಳಲ್ಲಿ ವ್ಯಕ್ತಪಡಿಸಿದರು: “ಕೊನೆ ಉಸಿರೆಳೆಯುವ ವರೆಗೂ ನಿಮ್ಮ ಕೆಲಸದಲ್ಲಿ ಕ್ರಿಯಾಶೀಲರಾಗಿರಿ!”
ತೊಂಬತ್ತು ವರ್ಷ ಪ್ರಾಯದವರಾಗಿದ್ದ ಸಹೋದರ ಸ್ವಿಂಗಲ್, ಇತರರಿಗೆ ಏನು ಮಾಡುವಂತೆ ಪ್ರೋತ್ಸಾಹಿಸುತ್ತಿದ್ದರೋ ಅದನ್ನು ಸ್ವತಃ ಅವರೇ ಮಾಡಿದರು. ಅವರು ‘ಕಡೇ ವರೆಗೂ ತಾಳಿಕೊಂಡರು.’ (ಮತ್ತಾಯ 24:13) ಇವರು ಶಾರೀರಿಕವಾಗಿ ಅಸ್ವಸ್ಥರಾಗಿದ್ದರೂ, ಮಾರ್ಚ್ 7ರ ಬುಧವಾರದಂದು, ಯೆಹೋವನ ಸಾಕ್ಷಿಗಳ ಆಡಳಿತ ಮಂಡಲಿಯ ಒಂದು ಕೂಟಕ್ಕೆ ಹಾಜರಾದರು. ಏಕೆಂದರೆ ಇವರು ಈ ಮಂಡಲಿಯ ಒಬ್ಬ ಸದಸ್ಯರಾಗಿದ್ದರು. ಮುಂದಿನ ಮಂಗಳವಾರ ಇವರ ಸ್ಥಿತಿಯು ಇನ್ನಷ್ಟು ಹದಗೆಟ್ಟಿತು, ಮತ್ತು ಮಾರ್ಚ್ 14ರಂದು ಬೆಳಗ್ಗೆ 4:26ಕ್ಕೆ ಇವರು ಮೃತಪಟ್ಟಿದ್ದಾರೆಂದು ಡಾಕ್ಟರರು ತಿಳಿಸಿದರು.
ಲೈಮನ್ ಸ್ವಿಂಗಲ್ರು 1930ರ ಏಪ್ರಿಲ್ 5ರಂದು, ನ್ಯೂ ಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಜಾಗತಿಕ ಮುಖ್ಯಕಾರ್ಯಾಲಯದಲ್ಲಿ ತಮ್ಮ ಸೇವೆಯನ್ನು ಆರಂಭಿಸಿದರು. ಮತ್ತು ಇಲ್ಲಿ ಅವರು ಸುಮಾರು 71 ವರ್ಷಗಳ ವರೆಗೆ ಸೇವೆಸಲ್ಲಿಸಿದರು. ಸಹೋದರ ಸ್ವಿಂಗಲ್ರು ಪ್ರಥಮವಾಗಿ ಬೈಂಡರಿಯಲ್ಲಿ ಕೆಲಸಮಾಡುವ ನೇಮಕವನ್ನು ಪಡೆದರು, ತದನಂತರ ಪ್ರೆಸ್ರೂಮ್ನಲ್ಲಿ ಕೆಲಸಮಾಡಿದರು, ಮತ್ತು ಅವರು ಮುದ್ರಣದ ಶಾಯಿಯನ್ನು ತಯಾರಿಸುವುದರಲ್ಲಿಯೂ ಸಹಾಯಮಾಡಿದರು. ವಾಸ್ತವದಲ್ಲಿ, ಶಾಯಿ ಉತ್ಪಾದಿಸುವ ಡಿಪಾರ್ಟ್ಮೆಂಟ್ನಲ್ಲಿ ಸಹೋದರ ಸ್ವಿಂಗಲ್ರು ಸುಮಾರು 25 ವರ್ಷಗಳನ್ನು ಕಳೆದರು. ಇದಲ್ಲದೆ, ಸುಮಾರು 20 ವರ್ಷಗಳ ವರೆಗೆ ಅವರು ಮುಖ್ಯಕಾರ್ಯಾಲಯದ ರೈಟಿಂಗ್ ಡಿಪಾರ್ಟ್ಮೆಂಟ್ನ ಒಬ್ಬ ಸದಸ್ಯರಾಗಿಯೂ ಕೆಲಸಮಾಡಿದರು. ಅವರ ಜೀವಿತದ ಕೊನೆಯ 17 ವರ್ಷಗಳ ವರೆಗೆ ಅವರು ಟ್ರೆಷರರ್ ಆಫೀಸ್ನಲ್ಲಿ ಕೆಲಸಮಾಡಿದರು.
ಸಹೋದರ ಸ್ವಿಂಗಲ್ ಅವರು ದೇವರ ರಾಜ್ಯವನ್ನು ಧೈರ್ಯದಿಂದ ಸಾರುವಂತಹ ವ್ಯಕ್ತಿಯಾಗಿದ್ದರು. ಬ್ರೂಕ್ಲಿನ್ನಲ್ಲಿ ಸೇವೆಮಾಡಲು ಪ್ರಾರಂಭಿಸಿದ ಆರಂಭದ ವರ್ಷಗಳಲ್ಲಿ, ಇವರು ಹಾಗೂ ಇವರೊಂದಿಗೆ ವಾಸಿಸುತ್ತಿದ್ದ ಆರ್ಥರ್ ವರ್ಸ್ಲೀ ಎಂಬುವವರು, ಸಾಕ್ಷಿಗಳ ಚಿಕ್ಕ ದೋಣಿಗಳಲ್ಲೊಂದರಲ್ಲಿ ಹಡ್ಸನ್ ನದಿಯಲ್ಲಿ ಪ್ರಯಾಣಿಸುತ್ತಿದ್ದರು. ವಾರಾಂತ್ಯಗಳಲ್ಲಿ ಅವರು ಧ್ವನಿವರ್ಧಕ ಸಾಧನವನ್ನು ಉಪಯೋಗಿಸುತ್ತಾ, ನದೀ ತೀರಗಳಲ್ಲಿರುವ ಸಮುದಾಯಗಳಿಗೆ ರಾಜ್ಯದ ಸಂದೇಶವನ್ನು ಪ್ರಚಾರಮಾಡುತ್ತಿದ್ದರು.
ಸಹೋದರ ಸ್ವಿಂಗಲ್ರು 1910ರ ನವೆಂಬರ್ 6ರಂದು ನೆಬ್ರಾಸ್ಕದ ಲಿಂಕನ್ನಲ್ಲಿ ಜನಿಸಿದರು. ಆದರೆ ಸ್ವಲ್ಪದರಲ್ಲೇ ಅವರ ಕುಟುಂಬವು ಯೂಟದ ಸಾಲ್ಟ್ ಲೇಕ್ ಸಿಟಿಗೆ ಸ್ಥಳಾಂತರಿಸಿತು. ಅಲ್ಲಿ 1913ರಲ್ಲಿ, ಇವರ ಹೆತ್ತವರು ಬೈಬಲ್ ವಿದ್ಯಾರ್ಥಿಗಳಾದರು. ಆಗ ಯೆಹೋವನ ಸಾಕ್ಷಿಗಳನ್ನು ಹೀಗೆಂದು ಕರೆಯಲಾಗುತ್ತಿತ್ತು. ತದನಂತರದ ವರ್ಷಗಳಲ್ಲಿ, ಸಾಕ್ಷಿಗಳ ಬ್ರೂಕ್ಲಿನ್ ಮುಖ್ಯಕಾರ್ಯಾಲಯದಿಂದ ಭಾಷಣಕೊಡಲಿಕ್ಕಾಗಿ ಬರುತ್ತಿದ್ದಂತಹ ಅನೇಕ ಭಾಷಣಕರ್ತರಿಗೆ ಸ್ವಿಂಗಲ್ ಕುಟುಂಬವು ಆತಿಥ್ಯ ನೀಡುತ್ತಿತ್ತು. ಮತ್ತು ಈ ಪುರುಷರು ಲೈಮನ್ನ ಮೇಲೆ ಸಕಾರಾತ್ಮಕ ಪ್ರಭಾವವನ್ನು ಬೀರಿದರು. 1923ರಲ್ಲಿ, 12 ವರ್ಷ ಪ್ರಾಯದವರಾಗಿದ್ದಾಗ, ಇವರು ದೇವರಿಗೆ ತಮ್ಮ ಸಮರ್ಪಣೆಯ ಸಂಕೇತವಾಗಿ ದೀಕ್ಷಾಸ್ನಾನ ಪಡೆದುಕೊಂಡರು.
ಅವಿವಾಹಿತ ವ್ಯಕ್ತಿಯೋಪಾದಿ ಬ್ರೂಕ್ಲಿನ್ನಲ್ಲಿ 26ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಸೇವೆಮಾಡಿದ ಬಳಿಕ, 1956ರ ಜೂನ್ 8ರಂದು ಕ್ರಿಸ್ಟಲ್ ಸರ್ಚರ್ರನ್ನು ಸಹೋದರ ಸ್ವಿಂಗಲ್ರು ಮದುವೆಯಾದಾಗ, ಅವರ ಜೀವಿತವು ಇನ್ನಷ್ಟು ಸಂಪದ್ಭರಿತವಾಯಿತು. ಇವರಿಬ್ಬರೂ ಪರಸ್ಪರ ತುಂಬ ಪ್ರೀತಿಸುತ್ತಿದ್ದರು ಮತ್ತು ಯಾವಾಗಲೂ ಒಟ್ಟಿಗಿರುತ್ತಿದ್ದರು ಹಾಗೂ 1998ರಲ್ಲಿ ಕ್ರಿಸ್ಟಲ್ ಮರಣಪಡುವ ತನಕ ಒಟ್ಟಿಗೆ ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಕ್ರಿಸ್ಟಲ್ರು ಮರಣಪಡುವ ಮೂರು ವರ್ಷಗಳಿಗೆ ಮೊದಲು ಅವರಿಗೆ ಲಕ್ವಹೊಡೆದು, ಗಂಭೀರವಾದ ರೀತಿಯಲ್ಲಿ ಅಂಗವಿಕಲರಾದರು. ಅವರನ್ನು ನೋಡಿಕೊಳ್ಳುವುದರಲ್ಲಿ ಸಹೋದರ ಸ್ವಿಂಗಲ್ ದಿನಾಲೂ ಸಮಯ ಕಳೆಯುತ್ತಿದ್ದು, ತಮ್ಮ ಹೆಂಡತಿಯ ಕಡೆಗಿನ ನಿಷ್ಠೆಯಲ್ಲಿ ಒಂದು ಮಾದರಿಯಾಗಿದ್ದರು. ಮತ್ತು ಕ್ರಿಸ್ಟಲ್ ಅವರು ಗಾಲಿಕುರ್ಚಿಯಲ್ಲಿದ್ದುಕೊಂಡೇ ದಾರಿಯಲ್ಲಿ ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳನ್ನು ನೀಡುತ್ತಿರುವಾಗ, ಸಹೋದರ ಸ್ವಿಂಗಲ್ರು ಕಾಲುದಾರಿಗಳಲ್ಲಿ ಗಾಲಿಕುರ್ಚಿಯನ್ನು ಪ್ರೀತಿಯಿಂದ ತಳ್ಳಿಕೊಂಡು ಹೋಗುತ್ತಿದ್ದದ್ದನ್ನು ನೋಡಿದವರಿಗಂತೂ ಅವರ ಆ ಮಾದರಿಯಿಂದ ಬಹಳಷ್ಟು ಸ್ಫೂರ್ತಿ ಸಿಗುತ್ತಿತ್ತು.
ಸಹೋದರ ಸ್ವಿಂಗಲ್ ಬಿಚ್ಚುಮನಸ್ಸಿನವರಾಗಿದ್ದರು ಮತ್ತು ಆದರಣೀಯರಾಗಿದ್ದರು. ಆದುದರಿಂದ, ಯಾರಿಗೆ ಇವರ ಪರಿಚಯವಾಗುತ್ತಿತ್ತೋ ಅವರೆಲ್ಲರೂ ಇವರನ್ನು ತುಂಬ ಇಷ್ಟಪಡುತ್ತಿದ್ದರು. ಇವರ ತಂದೆತಾಯಿಯಂತೆ ಇವರಿಗೂ ಸ್ವರ್ಗೀಯ ರಾಜ್ಯದಲ್ಲಿ ಯೇಸು ಕ್ರಿಸ್ತನೊಂದಿಗೆ ಜೀವಿಸುವ ಬೈಬಲಾಧಾರಿತ ನಿರೀಕ್ಷೆಯಿತ್ತು. ಅವರ ಈ ನಿರೀಕ್ಷೆಯು ಈಗ ಪೂರೈಸಲ್ಪಟ್ಟಿದೆ ಎಂಬ ದೃಢಭರವಸೆ ನಮಗಿದೆ.—1 ಥೆಸಲೊನೀಕ 4:15-18; ಪ್ರಕಟನೆ 14:13.
[ಪುಟ 31ರಲ್ಲಿರುವ ಚಿತ್ರ]
ಸಹೋದರ ಸ್ವಿಂಗಲ್ರು ಶಾಯಿ ಉತ್ಪಾದಿಸುವ ಡಿಪಾರ್ಟ್ಮೆಂಟ್ನಲ್ಲಿ 25 ವರ್ಷಗಳ ವರೆಗೆ ಕೆಲಸಮಾಡಿದರು
[ಪುಟ 31ರಲ್ಲಿರುವ ಚಿತ್ರ]
ಸಹೋದರ ಸ್ವಿಂಗಲ್ ಮತ್ತು ಕ್ರಿಸ್ಟಲ್ ಪರಸ್ಪರ ತುಂಬ ಪ್ರೀತಿಸುತ್ತಿದ್ದರು ಮತ್ತು ಯಾವಾಗಲೂ ಒಟ್ಟಿಗಿರುತ್ತಿದ್ದರು