ಅಪ್ಪಟ ಬಂಗಾರಕ್ಕಿಂತಲೂ ಹೆಚ್ಚು ಬಾಳಿಕೆ ಬರುವಂಥದ್ದು
ಬಂಗಾರಕ್ಕಿರುವ ಅಂದ ಮತ್ತು ಬಾಳಿಕೆಯ ಗುಣಕ್ಕಾಗಿಯೇ ಸಾಮಾನ್ಯವಾಗಿ ಎಲ್ಲರೂ ಅದನ್ನು ಇಷ್ಟಪಡುತ್ತಾರೆ. ಅದನ್ನು ಇಷ್ಟೊಂದು ಇಷ್ಟಪಡಲು ಕಾರಣವೇನೆಂದರೆ ಅದು ಎಂದಿಗೂ ಅದರ ಹೊಳಪು ಮತ್ತು ಕಾಂತಿಯನ್ನು ಕಳೆದುಕೊಳ್ಳುವುದಿಲ್ಲ. ಯಾಕೆಂದರೆ, ಬಂಗಾರಕ್ಕೆ ನೀರು, ಆಮ್ಲಜನಕ, ಗಂಧಕ ಮತ್ತು ಬಹುಮಟ್ಟಿಗೆ ಬೇರೆಲ್ಲದ್ದರಿಂದ ಬರುವ ಆಕ್ರಮಣವನ್ನು ತಡೆದುಕೊಳ್ಳುವ ಶಕ್ತಿಯಿದೆ. ಮುಳುಗಿಹೋಗಿರುವ ನೌಕೆಗಳಲ್ಲಿ ಮತ್ತು ಬೇರೆಲ್ಲಿಯಾದರೂ ಕಂಡುಕೊಳ್ಳಲಾಗಿರುವ ಬಂಗಾರಕ್ಕಿಂತಲೂ ಕೌಶಲ ವಸ್ತುಗಳು, ನೂರಾರು ವರ್ಷಗಳ ಬಳಿಕವೂ ತಮ್ಮ ಹೊಳಪನ್ನು ಕಾಪಾಡಿಕೊಂಡಿರುತ್ತವೆ.
ಆದರೆ ಆಸಕ್ತಿಕರವಾದ ಸಂಗತಿಯೇನೆಂದರೆ, ‘ಬೆಂಕಿಯಲ್ಲಿ ಪುಟಾಹಾಕಿ ಶೋಧಿಸಿರುವ ಭಂಗಾರಕ್ಕಿಂತಲೂ ಅಮೂಲ್ಯವಾದ’ ಹಾಗೂ ಹೆಚ್ಚು ಬಾಳಿಕೆಬರುವಂಥದ್ದೇನೊ ಇದೆಯೆಂದು ಬೈಬಲ್ ತಿಳಿಸುತ್ತದೆ. (1 ಪೇತ್ರ 1:7) ಬೆಂಕಿ ಮತ್ತು ಇತರ ಕಾರ್ಯವಿಧಾನಗಳ ಮೂಲಕ “ಪುಟಾಹಾಕಿದ” ಅಥವಾ ಪರಿಷ್ಕರಿಸಲ್ಪಟ್ಟಿರುವ ಬಂಗಾರವು, 99.9 ಪ್ರತಿಶತ ಶುದ್ಧತೆಯನ್ನು ಪಡೆಯಬಲ್ಲದು. ಆದರೆ ಪರಿಷ್ಕರಿಸಲ್ಪಟ್ಟಿರುವ ಬಂಗಾರವು ಸಹ, ರಾಜಾಮ್ಲ (ಆ್ಯಕ್ವರೀಜಿಆ) ಎಂಬ ಮೂರು ಭಾಗ ಹೈಡ್ರೊಕ್ಲೋರಿಕ್ ಆಮ್ಲ ಹಾಗೂ ಒಂದು ಭಾಗ ನೈಟ್ರಿಕ್ ಆಮ್ಲವಿರುವ ಮಿಶ್ರಣಕ್ಕೆ ಹಾಕಲ್ಪಟ್ಟಾಗ ನಾಶವಾಗುತ್ತದೆ ಅಥವಾ ಕರಗಿಬಿಡುತ್ತದೆ. ಹೀಗಿರುವುದರಿಂದ ‘ಬಂಗಾರವು ನಾಶವಾಗುತ್ತದೆ’ ಎಂದು ಬೈಬಲ್ ಹೇಳುವಾಗ ಅದು ವೈಜ್ಞಾನಿಕವಾಗಿ ಸರಿಯಾದ ಸಂಗತಿಯನ್ನು ತಿಳಿಸುತ್ತದೆ.
ಇದಕ್ಕೆ ವ್ಯತಿರಿಕ್ತವಾಗಿ, ನಿಜ ಕ್ರೈಸ್ತ ನಂಬಿಕೆಯಾದರೊ ‘ಪ್ರಾಣರಕ್ಷಣೆ’ ಮಾಡುತ್ತದೆ. (ಇಬ್ರಿಯ 10:39) ಯೇಸು ಕ್ರಿಸ್ತನಿಗೆ ಮಾಡಿದಂತೆ, ಬಲವಾದ ನಂಬಿಕೆಯುಳ್ಳ ವ್ಯಕ್ತಿಯನ್ನು ಮನುಷ್ಯರು ಕೊಂದುಹಾಕಬಹುದು. ಆದರೆ ಯಥಾರ್ಥವಾದ ನಂಬಿಕೆಯುಳ್ಳವರಿಗೆ ಈ ವಾಗ್ದಾನವನ್ನು ಕೊಡಲಾಗಿದೆ: “ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು.” (ಪ್ರಕಟನೆ 2:10) ನಂಬಿಗಸ್ತರಾಗಿ ಸಾಯುವವರು ದೇವರ ಸ್ಮರಣೆಯಲ್ಲಿರುತ್ತಾರೆ, ಮತ್ತು ಆತನು ಅವರನ್ನು ಪುನರುತ್ಥಾನಗೊಳಿಸುವನು. (ಯೋಹಾನ 5:28, 29) ಎಷ್ಟೇ ದೊಡ್ಡ ಪ್ರಮಾಣದ ಬಂಗಾರವು ಅದನ್ನು ಮಾಡಲಾರದು. ಈ ವಿಷಯದಲ್ಲಿ ನಂಬಿಕೆಯು ನಿಜವಾಗಿಯೂ ಬಂಗಾರಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದಾಗಿದೆ. ಆದರೆ ನಂಬಿಕೆಗೆ ಅಷ್ಟೊಂದು ಶ್ರೇಷ್ಠತರದ ಮೌಲ್ಯವಿರಬೇಕಾದರೆ, ಅದು ಸಹ ರುಜುಪಡಿಸಲ್ಪಡಬೇಕು ಅಥವಾ ಪರೀಕ್ಷಿಸಲ್ಪಡಬೇಕು. ವಾಸ್ತವದಲ್ಲಿ ‘ಶೋಧಿತ ನಂಬಿಕೆಯೇ’ ಬಂಗಾರಕ್ಕಿಂತಲೂ ಹೆಚ್ಚು ಅಮೂಲ್ಯವಾದದ್ದಾಗಿದೆ ಎಂದು ಅಪೊಸ್ತಲ ಪೇತ್ರನು ಹೇಳಿದನು. ಸತ್ಯ ದೇವರಾದ ಯೆಹೋವನು ಮತ್ತು ಆತನ ಮಗನಾದ ಯೇಸು ಕ್ರಿಸ್ತನಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಿ, ಕಾಪಾಡಿಕೊಂಡು ಹೋಗಲಿಕ್ಕೋಸ್ಕರ, ನೀವು ಬೈಬಲನ್ನು ಅಭ್ಯಾಸಿಸುವಂತೆ ಸಹಾಯಮಾಡಲು ಯೆಹೋವನ ಸಾಕ್ಷಿಗಳಿಗೆ ತುಂಬ ಸಂತೋಷವಾಗುವುದು. ಬೈಬಲನ್ನು ಅಭ್ಯಾಸಿಸುವುದು ಯೇಸುವಿಗನುಸಾರ ‘ನಿತ್ಯಜೀವವನ್ನು’ ಅರ್ಥೈಸುತ್ತದೆ.—ಯೋಹಾನ 17:3.