ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸಲಾಗುತ್ತದೆ
ಸುಮಾರು 2000 ವರುಷಗಳ ಹಿಂದೆ ಕರ್ತನಾದ ಯೇಸು ಕ್ರಿಸ್ತನಿಂದ ಸ್ಥಾಪಿಸಲ್ಪಟ್ಟಂಥ ಕಡೇ ರಾತ್ರಿ ಭೋಜನವು, ಕೇವಲ ಒಂದು ಐತಿಹಾಸಿಕ ಘಟನೆಗಿಂತ ಹೆಚ್ಚಿನದ್ದಾಗಿದೆ. ಅದು ಆರಂಭಿಸಲ್ಪಟ್ಟಂದಿನಿಂದ ಜನರ ಮೇಲೆ ಶಕ್ತಿಶಾಲಿಯಾದ ಪ್ರಭಾವವನ್ನು ಬೀರಿದೆ. ಆ ರಾತ್ರಿ ಏನು ಸಂಭವಿಸಿತೆಂಬುದನ್ನು ಸುವಾರ್ತಾ ವೃತ್ತಾಂತಗಳಲ್ಲಿ ಓದಿ ಪ್ರಭಾವಿತರಾದ ಅನೇಕರು, ಪ್ರಭು ಭೋಜನವನ್ನು ವಿವಿಧ ರೀತಿಯಲ್ಲಿ ಆಚರಿಸುತ್ತಾರೆ.
ಪ್ರಭು ಭೋಜನದಲ್ಲಿ ಇಷ್ಟೊಂದು ಆಸಕ್ತಿಯು ಏಕೆ ತೋರಿಸಲ್ಪಡುತ್ತದೆಂಬದನ್ನು ಅರ್ಥಮಾಡಿಕೊಳ್ಳಸಾಧ್ಯವಿದೆ. ಏಕೆಂದರೆ ಈ ಘಟನೆಯನ್ನು ಆಚರಿಸುವಂತೆ ಮತ್ತು ಅದನ್ನು ಕ್ರಮವಾಗಿ ಮಾಡುತ್ತಾ ಇರುವಂತೆ ಸ್ವತಃ ಯೇಸು ಕ್ರಿಸ್ತನೇ ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದನು. ಆತನು ನಿರ್ದಿಷ್ಟವಾಗಿ ಅವರಿಗೆ ಹೇಳಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ [“ಮಾಡುತ್ತಾ ಇರಿ,” NW].”—ಲೂಕ 22:19; 1 ಕೊರಿಂಥ 11:23-25.
ಹಾಗಿದ್ದರೂ, ಈ ಆಚರಣೆಯು ನಿಜವಾಗಿಯೂ ಒಂದು ಪ್ರತಿಫಲದಾಯಕ ಅನುಭವವಾಗಬೇಕಾದರೆ, ಅದರ ಅರ್ಥದ ಕುರಿತಾಗಿ ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ನಿಷ್ಕೃಷ್ಟವಾದ ತಿಳುವಳಿಕೆಯನ್ನು ಒಬ್ಬನು ಪಡೆದಿರಬೇಕು. ಇದರೊಂದಿಗೆ, ಈ ಘಟನೆಯನ್ನು ಯಾವಾಗ ಮತ್ತು ಹೇಗೆ ಆಚರಿಸಬೇಕೆಂಬುದರ ಕುರಿತು ಬೈಬಲ್ ಏನು ಹೇಳುತ್ತದೆಂಬುದನ್ನು ಸಹ ತಿಳಿದಿರುವುದು ಬಹಳ ಪ್ರಾಮುಖ್ಯವಾಗಿದೆ.
ಯೇಸುವಿನ ಆಜ್ಞೆಗೆ ವಿಧೇಯತೆಯಲ್ಲಿ ಅವನ ಮರಣದ ಜ್ಞಾಪಕಾಚರಣೆಯನ್ನು ಆಚರಿಸುವುದಕ್ಕಾಗಿ, ಲೋಕವ್ಯಾಪಕವಾಗಿ ಯೆಹೋವನ ಸಾಕ್ಷಿಗಳು 2003, ಏಪ್ರಿಲ್ 16ರ ಬುಧವಾರದಂದು ಸೂರ್ಯಾಸ್ತಮಾನದ ನಂತರ ಕೂಡಿಬರಲಿದ್ದಾರೆ. ಕರ್ತನಾದ ಯೇಸು ಕ್ರಿಸ್ತನ ಕಡೆಗಿನ ಅವರ ನಂಬಿಕೆಯನ್ನೂ ಪ್ರೀತಿಯನ್ನೂ ನವೀಕರಿಸಲು ಹಾಗೂ ಶಾಸ್ತ್ರಗಳನ್ನು ಪರಿಶೀಲಿಸಲು ಅವರಿಗೆ ಇದೊಂದು ಸುಸಂದರ್ಭವಾಗಿರುತ್ತದೆ. ಯೇಸು ಹೇಳಿದ್ದು: “ದೇವರು ಲೋಕದ ಮೇಲೆ ಎಷ್ಟೋ ಪ್ರೀತಿಯನ್ನಿಟ್ಟು ತನ್ನ ಒಬ್ಬನೇ ಮಗನನ್ನು ಕೊಟ್ಟನು; ಆತನನ್ನು ನಂಬುವ ಒಬ್ಬನಾದರೂ ನಾಶವಾಗದೆ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು ಆತನನ್ನು ಕೊಟ್ಟನು.” (ಯೋಹಾನ 3:16) ಆ ಸಾಯಂಕಾಲ ಅವರೊಂದಿಗೆ ಜೊತೆಗೂಡಿ, ಯೇಸು ಕ್ರಿಸ್ತನ ಮತ್ತು ಸ್ವರ್ಗೀಯ ತಂದೆಯಾದ ಯೆಹೋವನ ಕಡೆಗಿನ ನಿಮ್ಮ ನಂಬಿಕೆಯನ್ನೂ ಪ್ರೀತಿಯನ್ನೂ ಬಲಪಡಿಸುವಂತೆ ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸಲಾಗುತ್ತದೆ.