ನೀವು ನಿಮಗಾಗಿ ಯಾವ ರೀತಿಯ ಹೆಸರನ್ನು ಮಾಡಿಕೊಳ್ಳುತ್ತಿದ್ದೀರಿ?
ನಿಮ್ಮ ಸ್ಥಳಿಕ ವಾರ್ತಾಪತ್ರಿಕೆಯಲ್ಲಿ ಬರುವ ನಿಧನವಾರ್ತೆಯ ಭಾಗವನ್ನು ನೀವು ಎಂದಾದರೂ ಓದಿದ್ದೀರೋ ಅಥವಾ ಮೃತಪಟ್ಟ ವ್ಯಕ್ತಿಯ ಜೀವಿತದ ಮತ್ತು ಸಾಧನೆಗಳ ಕುರಿತು ಉದ್ದವಾದ ವರದಿಯನ್ನು ನೋಡಿದ್ದೀರೋ? ಹೌದಾಗಿರುವಲ್ಲಿ, ‘ನನ್ನ ಕುರಿತು ಜನರು ಏನು ಹೇಳಾರು?’ ಎಂಬುದಾಗಿ ನೀವು ಸ್ವತಃ ಕೇಳಿಕೊಂಡಿದ್ದೀರೋ? ತಮ್ಮ ಮರಣದ ನಂತರ ತಮ್ಮನ್ನು ಹೇಗೆ ಜ್ಞಾಪಿಸಿಕೊಳ್ಳಲಾಗಬಹುದು ಎಂಬುದಾಗಿ ಎಷ್ಟು ಮಂದಿ ಆಲೋಚಿಸುತ್ತಾರೆ? ಆದುದರಿಂದ ಈ ಯಥಾರ್ಥವಾದ ಪ್ರಶ್ನೆಗಳನ್ನು ಪರಿಗಣಿಸಿರಿ: ಒಂದುವೇಳೆ ನಿನ್ನೆ ನೀವು ಮರಣಹೊಂದಿರುತ್ತಿದ್ದಲ್ಲಿ, ಇಂದು ನಿಮ್ಮ ಕುರಿತು ಜನರು ಏನನ್ನು ಹೇಳುತ್ತಿದ್ದಿರಬಹುದು? ನೀವು ಸ್ವತಃ ಯಾವ ರೀತಿಯ ಖ್ಯಾತಿಯನ್ನು ಗಳಿಸುತ್ತಿದ್ದೀರಿ? ನಿಮ್ಮ ಕುರಿತು ತಿಳಿದಿರುವ ಜನರಿಂದ ಮತ್ತು ದೇವರಿಂದ ಹೇಗೆ ಜ್ಞಾಪಿಸಿಕೊಳ್ಳಲ್ಪಡಲು ನೀವು ಬಯಸುವಿರಿ?
ಬೈಬಲಿನ ಪ್ರಸಂಗಿ ಪುಸ್ತಕದ ವಿವೇಕಿ ಬರಹಗಾರನು ಹೇಳಿದ್ದು: “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನದಿನಕ್ಕಿಂತ ಮರಣದಿನ ಮೇಲು.” (ಪ್ರಸಂಗಿ 7:1, 2) ಒಬ್ಬ ವ್ಯಕ್ತಿಯ ಜನನದಿನಕ್ಕಿಂತಲೂ ಮರಣದಿನವು ಏಕೆ ಮೇಲಾಗಿದೆ? ಯಾಕೆಂದರೆ ವ್ಯಕ್ತಿಯೊಬ್ಬನು ಜನಿಸುವಾಗ ಯಾವುದೇ ಸತ್ಕೀರ್ತಿಯ ದಾಖಲೆಯೊಂದಿಗೆ ಜನಿಸುವುದಿಲ್ಲ. ಅವನ ವೈಯಕ್ತಿಕ ದಾಖಲೆಯು ಶೂನ್ಯವಾಗಿರುತ್ತದೆ. ಅವನ ಮುಂದಿನ ಜೀವನ ರೀತಿಯು ಸಕಾರಾತ್ಮಕ ಇಲ್ಲವೆ ನಕಾರಾತ್ಮಕ ಖ್ಯಾತಿಯನ್ನು ಉಂಟುಮಾಡುತ್ತದೆ. ವರುಷಗಳು ಕಳೆದಂತೆ, ಯಾರು ಒಳ್ಳೆಯ ಹೆಸರನ್ನು ಸ್ಥಾಪಿಸಿಕೊಂಡಿದ್ದಾರೋ ಅವರಿಗೆ ನಿಜವಾಗಿಯೂ ಈ ಅರ್ಥದಲ್ಲಿ ಜನನದಿನಕ್ಕಿಂತ ಮರಣದಿನ ಮೇಲಾಗಿದೆ.
ಹಾಗಿರುವುದರಿಂದ ಆಯ್ಕೆಯು ನಮ್ಮ ಮುಂದಿದೆ. ವಾಸ್ತವದಲ್ಲಿ, ದಿನನಿತ್ಯ ನಮ್ಮ ಮುಂದಿರುವ ಅನೇಕ ಆಯ್ಕೆಗಳು, ಮರಣದಿನದಂದು ನಮ್ಮ ಖ್ಯಾತಿಯನ್ನು ಹಾಗೂ ಮುಖ್ಯವಾಗಿ ನಾವು ಹೇಗೆ ದೇವರಿಂದ ಜ್ಞಾಪಿಸಿಕೊಳ್ಳಲ್ಪಡುವೆವು ಎಂಬುದನ್ನು ನಿರ್ಧರಿಸುತ್ತವೆ. ಆದುದರಿಂದಲೇ ಮುಂಚೆ ಉಲ್ಲೇಖಿಸಿದ ಅದೇ ವಿವೇಕಿಯಾದ ಇಬ್ರಿಯನು ಬರೆದದ್ದು: “ಶಿಷ್ಟರ ಸ್ಮರಣೆಯು ಆಶೀರ್ವಾದಕ್ಕಾಸ್ಪದ; ದುಷ್ಟರ ನಾಮವು ನಿರ್ನಾಮ.” (ಜ್ಞಾನೋಕ್ತಿ 10:7) ಆಶೀರ್ವಾದವನ್ನು ಪಡೆಯುವುದಕ್ಕಾಗಿ ದೇವರಿಂದ ಸ್ಮರಿಸಲ್ಪಡುವುದು ಎಂಥ ಒಂದು ಸುಯೋಗವಾಗಿದೆ!
ನಾವು ವಿವೇಕಿಗಳಾಗಿರುವಲ್ಲಿ, ದೇವರ ಮಟ್ಟಗಳಿಗೆ ಹೊಂದಿಕೆಯಲ್ಲಿ ಜೀವಿಸುವ ಮೂಲಕ ಆತನನ್ನು ಮೆಚ್ಚಿಸುವುದೇ ನಮ್ಮ ಗುರಿಯಾಗಿರುತ್ತದೆ. ಇದು, ಕ್ರಿಸ್ತನು ತಿಳಿಸಿದ ಪ್ರಧಾನ ಮೂಲತತ್ತ್ವಗಳನ್ನು ಅನುಸರಿಸುವುದನ್ನು ಅರ್ಥೈಸುತ್ತದೆ: “ನಿನ್ನ ದೇವರಾಗಿರುವ [ಯೆಹೋವನನ್ನು] ನಿನ್ನ ಪೂರ್ಣ ಹೃದಯದಿಂದಲೂ ನಿನ್ನ ಪೂರ್ಣ ಪ್ರಾಣದಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು ಎಂಬ ಆಜ್ಞೆಯೇ ಮುಖ್ಯವಾದದ್ದು ಮತ್ತು ಮೊದಲನೆಯದು. ಇದಕ್ಕೆ ಸಮಾನವಾದ ಎರಡನೆಯ ಆಜ್ಞೆ ಒಂದು ಉಂಟು, ಅದು ಯಾವದಂದರೆ—ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂಬದೇ. ಈ ಎರಡು ಆಜ್ಞೆಗಳು ಎಲ್ಲಾ ಧರ್ಮಶಾಸ್ತ್ರಕ್ಕೂ ಪ್ರವಾದನಗ್ರಂಥಕ್ಕೂ ಆಧಾರವಾಗಿವೆ.”—ಮತ್ತಾಯ 22:37-40.
ಕೆಲವರು, ಲೋಕೋಪಕಾರಿಗಳಾಗಿ, ಜನೋಪಕಾರಿಗಳಾಗಿ, ಪೌರ ಹಕ್ಕುಗಳ ಪ್ರವರ್ತಕರಾಗಿ, ಅಥವಾ ವ್ಯಾಪಾರ, ವಿಜ್ಞಾನ, ವೈದ್ಯಕೀಯ ಕ್ಷೇತ್ರಗಳಲ್ಲಿನ ಅಥವಾ ಇತರ ಚಟುವಟಿಕೆಗಳಲ್ಲಿನ ಅವರ ಸಾಧನೆಗಳಿಗಾಗಿ ಜ್ಞಾಪಿಸಿಕೊಳ್ಳಲ್ಪಡುತ್ತಾರೆ. ಆದರೆ, ನೀವು ಹೇಗೆ ಜ್ಞಾಪಿಸಿಕೊಳ್ಳಲ್ಪಡಲು ಬಯಸುತ್ತೀರಿ?
ಇತರರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೋ ಅದೇ ರೀತಿಯಲ್ಲಿ ನಾವು ನಮ್ಮನ್ನು ವೀಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ದೇವರು ನಮಗೆ ಕೊಡಬೇಕೆಂಬ ಬಯಕೆಯನ್ನು ಸ್ಕಾಟ್ಲೆಂಡಿನ ಕವಿಯಾದ ರಾಬರ್ಟ್ ಬರ್ನ್ಸ್ (1759-96)ರವರು ವ್ಯಕ್ತಪಡಿಸಿದರು. ನೀವು ಸ್ವತಃ ಪರೀಕ್ಷಿಸಿಕೊಳ್ಳುವಾಗ, ಇತರ ಜನರೊಂದಿಗೆ ಮತ್ತು ದೇವರೊಂದಿಗೆ ಖ್ಯಾತಿಯನ್ನು ಹೊಂದಿದ್ದೀರೆಂಬುದಾಗಿ ಹೇಳಬಲ್ಲಿರೋ? ಕ್ರೀಡಾ ಅಥವಾ ವ್ಯಾಪಾರ ಜಗತ್ತಿನಲ್ಲಿ ನಾವು ಗಳಿಸಿರಬಹುದಾದ ತಾತ್ಕಾಲಿಕ ಸಾಧನೆಗಳಿಗೆ ಹೋಲಿಸುವಾಗ, ಇತರರೊಂದಿಗಿನ ನಮ್ಮ ಸಂಬಂಧವು ದೀರ್ಘಕಾಲ ಬೆಲೆಬಾಳುವಂಥದ್ದಾಗಿದೆ ಎಂಬುದಂತೂ ಖಂಡಿತ. ಆದುದರಿಂದ ಪ್ರಶ್ನೆಯು: ಇತರರೊಂದಿಗಿನ ನಮ್ಮ ವರ್ತನೆಯು, ಅಂದರೆ ನಮ್ಮ ಸಂಭಾಷಣೆ, ನಮ್ಮ ಗುಣ, ಮತ್ತು ನಮ್ಮ ದೇಹಭಾಷೆಯು ಅವರನ್ನು ಹೇಗೆ ಬಾಧಿಸುತ್ತದೆ? ನಾವು ಸ್ನೇಹಪರ ವ್ಯಕ್ತಿಗಳಾಗಿ ವೀಕ್ಷಿಸಲ್ಪಡುತ್ತೇವೋ ಅಥವಾ ಜನರಿಂದ ಪ್ರತ್ಯೇಕವಾಗಿರುವ ವ್ಯಕ್ತಿಗಳಾಗಿ ವೀಕ್ಷಿಸಲ್ಪಡುತ್ತೇವೋ? ದಯಾಪರರಾಗಿಯೋ ಅಥವಾ ಕಠೋರರಾಗಿಯೋ? ಮಣಿಯುವವರಾಗಿಯೋ ಅಥವಾ ಅತಿ ಕಟ್ಟುನಿಟ್ಟಿನವರಾಗಿಯೋ? ಆದರಣೀಯ ಮತ್ತು ಪರೋಪಕಾರಿ ವ್ಯಕ್ತಿಯಾಗಿಯೋ ಅಥವಾ ಸ್ನೇಹಪರರಲ್ಲದವರು ಮತ್ತು ಭಾವಶೂನ್ಯರಾಗಿಯೋ? ಹಾನಿಕಾರಕವಾಗಿ ಟೀಕಿಸುವವನೋಪಾದಿಯೋ ಅಥವಾ ಆತ್ಮೋನ್ನತಿ ಮಾಡುವ ಸಲಹೆಗಾರನೋಪಾದಿಯೋ? ಪೂರ್ವಕಾಲದ ಮತ್ತು ಆಧುನಿಕ ದಿನಗಳ ಕೆಲವು ಉದಾಹರಣೆಗಳನ್ನು ನಾವು ಪರಿಶೀಲಿಸಿ, ಅದರಿಂದ ನಾವೇನನ್ನು ಕಲಿಯಬಲ್ಲೆವೆಂಬುದನ್ನು ನೋಡೋಣ.
[ಪುಟ 3ರಲ್ಲಿರುವ ಚಿತ್ರ]
ಇತರರು ನಮ್ಮನ್ನು ಹೇಗೆ ವೀಕ್ಷಿಸುತ್ತಾರೋ ಅದೇ ರೀತಿಯಲ್ಲಿ ನಾವು ನಮ್ಮನ್ನು ವೀಕ್ಷಿಸಿಕೊಳ್ಳುವ ಸಾಮರ್ಥ್ಯವನ್ನು ದೇವರು ನಮಗೆ ಕೊಡಬೇಕೆಂಬ ಬಯಕೆಯನ್ನು ರಾಬರ್ಟ್ ಬರ್ನ್ಸ್ ವ್ಯಕ್ತಪಡಿಸಿದರು.
[ಕೃಪೆ]
From the book A History of England