ಕಠಿನ ಕಾಲಗಳು ಈಗಲೇ
ಮಾನವಕುಲವು ‘ಕಠಿನಕಾಲಗಳನ್ನು’ ಅನುಭವಿಸಲಿಕ್ಕಿದೆಯೆಂದು ಬೈಬಲ್ ಮುಂತಿಳಿಸಿದೆ. ಆ ಕಾಲವನ್ನು ಅದು ‘ಕಡೇದಿವಸಗಳು’ ಎಂದು ಕರೆಯುತ್ತದೆ. (2 ತಿಮೊಥೆಯ 3:1-5; 2 ಪೇತ್ರ 3:3-7) ‘ಯುಗದ ಸಮಾಪ್ತಿಯ’ ಕುರಿತು ಶಿಷ್ಯರು ಕೇಳಿದ ಪ್ರಶ್ನೆಯನ್ನು ಉತ್ತರಿಸುವಾಗ ಯೇಸು ಕ್ರಿಸ್ತನು ಇದೇ ಸಮಯದ ಕುರಿತು ಮಾತನಾಡಿದನು. (ಮತ್ತಾಯ 24:3) ಆ ಕಡೇ ದಿವಸಗಳಲ್ಲಿ ನಾವೀಗ ಜೀವಿಸುತ್ತಿದ್ದೇವೋ? ಬೈಬಲ್ ಮುಂತಿಳಿಸಿರುವ ವಿಷಯಗಳನ್ನು ಮುಂದೆ ಕೊಡಲಾಗಿರುವ ಇತ್ತೀಚಿನ ವರದಿಗಳೊಂದಿಗೆ ಹೋಲಿಸಿ ನೋಡಿರಿ. ಅನಂತರ ನೀವೇ ನಿರ್ಣಯವನ್ನು ಮಾಡಿರಿ.
ಬೈಬಲ್ ಮುಂತಿಳಿಸಿದ್ದು: ಭೌಗೋಳಿಕ ಕಲಹಗಳು—ಲೂಕ 21:10; ಪ್ರಕಟನೆ 6:4.
ಇತ್ತೀಚಿನ ವರದಿ: “20ನೇ ಶತಮಾನದಲ್ಲಿ ಯುದ್ಧದಿಂದಾಗಿ ಮೃತಪಟ್ಟವರ ಸಂಖ್ಯೆಯು ಯೇಸುವಿನ ಜನನದಿಂದ ಹಿಡಿದು ಹಿಂದಿನ ಎಲ್ಲಾ ಶತಮಾನಗಳಲ್ಲಾದ ಒಟ್ಟು ಯುದ್ಧಗಳಲ್ಲಿ ಮೃತಪಟ್ಟವರಿಗಿಂತ ಮೂರು ಪಟ್ಟು ಹೆಚ್ಚಾಗಿದೆ.”—ವಿಶ್ವವೀಕ್ಷಣೆ ಸಂಸ್ಥೆ.
ಬೈಬಲ್ ಮುಂತಿಳಿಸಿದ್ದು: ಆಹಾರ ಅಭಾವಗಳು ಮತ್ತು ರೋಗಗಳು—ಲೂಕ 21:11; ಪ್ರಕಟನೆ 6:5-8.
ಇತ್ತೀಚಿನ ವರದಿ: ಒಂದು ಅಂದಾಜಿಗನುಸಾರ 2004ರಲ್ಲಿ ಭೂವ್ಯಾಪಕವಾಗಿ 86 ಕೋಟಿ 30 ಲಕ್ಷ ಜನರು ನ್ಯೂನಪೋಷಿತರಾಗಿದ್ದರು. ಇದು 2003ಕ್ಕಿಂತ 70 ಲಕ್ಷ ಹೆಚ್ಚು.—ಯು.ಎನ್. ಆಹಾರ ಮತ್ತು ವ್ಯವಸಾಯ ಸಂಸ್ಥೆ (FAO).
ಸುಮಾರು 100 ಕೋಟಿ ಜನರು ಕೊಳೆಗೇರಿಗಳಲ್ಲಿ ಮತ್ತು 260 ಕೋಟಿ ಜನರು ಸಾಮಾನ್ಯ ನೈರ್ಮಲ್ಯ ವ್ಯವಸ್ಥೆಯೂ ಇಲ್ಲದ ಸ್ಥಳಗಳಲ್ಲಿ ಜೀವಿಸುತ್ತಾರೆ; ಹಾಗೂ 110 ಕೋಟಿಯಷ್ಟು ಜನರಿಗೆ ಕುಡಿಯಲು ಶುದ್ಧ ನೀರಿಲ್ಲ.—ವಿಶ್ವವೀಕ್ಷಣೆ ಸಂಸ್ಥೆ.
50 ಕೋಟಿ ಜನರು ಮಲೇರಿಯಾದಿಂದ, 4 ಕೋಟಿ ಜನರು ಎಚ್.ಐ.ವಿ-ಏಡ್ಸ್‌ನಿಂದ ಬಾಧಿತರಾಗಿದ್ದಾರೆ; ಕ್ಷಯರೋಗವು 2005ರಲ್ಲಿ 16 ಲಕ್ಷ ಜನರನ್ನು ಬಲಿತೆಗೆದುಕೊಂಡಿದೆ.—ಲೋಕಾರೋಗ್ಯ ಸಂಸ್ಥೆ (WHO)
ಬೈಬಲ್ ಮುಂತಿಳಿಸಿದ್ದು: ಭೂಮಿಯನ್ನು ಹಾಳುಗೆಡಿಸುವುದು—ಪ್ರಕಟನೆ 11:18.
ಇತ್ತೀಚಿನ ವರದಿ: “ಮಾನವನ ಚಟುವಟಿಕೆಗಳು ಭೂಮಿಯಲ್ಲಿರುವ ಜೀವಿಪ್ರಬೇಧಗಳನ್ನು ಅಳಿವಿನಂಚಿಗೆ ತಂದಿವೆ.” “ಭೂವ್ಯಾಪಕವಾಗಿ ಪ್ರಕೃತಿಯಿಂದ ಮಾನವನಿಗೆ ಸಿಗುವ ಪ್ರಯೋಜನಗಳು ಸುಮಾರು ಮೂರನೇ ಎರಡು ಪಾಲಷ್ಟು ಇಳಿಮುಖವಾಗುತ್ತಾ ಬರುತ್ತಿವೆ.”—ಮಿಲೇನಿಯಮ್ ಇಕೊಸಿಸ್ಟಮ್ ಎಸೆಸ್ಸ್‌ಮೆಂಟ್.
“ಮಾನವ ನಿರ್ಮಿತ ಹಸಿರುಮನೆ ಅನಿಲಗಳಿಂದಾಗಿ ಭೂಮಿಯ ವಾತಾವರಣವು ತೀವ್ರ ವಿಷಮ ಸ್ಥಿತಿಗಿಳಿದಿದೆ. ಮತ್ತು ಇದರಿಂದ ಭೂಮಿಯ ಮೇಲೆ ಅಪಾಯಕರ ಪರಿಣಾಮಗಳು ಬರಸಾಧ್ಯವಿದೆ”.—ನಾಸಾ, ಬಾಹ್ಯಾಕಾಶ ಅಧ್ಯಯನದ ಗೊಡ್ಡಾರ್ಡ್ ಸಂಸ್ಥೆ.
ಬೈಬಲ್ ಮುಂತಿಳಿಸಿದ್ದು: ಭೂವ್ಯಾಪಕವಾಗಿ ದೇವರ ರಾಜ್ಯದ ಸುವಾರ್ತೆಯು ಸಾರಲ್ಪಡುತ್ತದೆ—ಮತ್ತಾಯ 24:14; ಪ್ರಕಟನೆ 14:6, 7.
ಇತ್ತೀಚಿನ ವರದಿ: 2007ರಲ್ಲಿ 69,57,854 ಮಂದಿ ಯೆಹೋವನ ಸಾಕ್ಷಿಗಳು 236 ದೇಶಗಳಲ್ಲಿ ದೇವರ ರಾಜ್ಯದ ಕುರಿತ ಸುವಾರ್ತೆಯನ್ನು ಸಾರುವುದರಲ್ಲಿ 140 ಕೋಟಿಗಿಂತಲೂ ಹೆಚ್ಚು ತಾಸುಗಳನ್ನು ಕಳೆದಿದ್ದಾರೆ.—2008 ಯೆಹೋವನ ಸಾಕ್ಷಿಗಳ ವರ್ಷ ಪುಸ್ತಕ.
ಈ ಮೊದಲು ಹೇಳಿದಂತೆ, ಈ ಎಲ್ಲಾ ಕೆಟ್ಟ ವರದಿಗಳ ಮಧ್ಯೆಯೂ ನಾವು ಸಕಾರಾತ್ಮಕ ಮನೋಭಾವ ಹೊಂದಿರಸಾಧ್ಯವಿದೆ ಎಂದು ಬೈಬಲ್ ಮುಂತಿಳಿಸುತ್ತದೆ. ಯೇಸು ಸಹ ದೇವರ ರಾಜ್ಯದ ‘ಸುವಾರ್ತೆಯ’ ಕುರಿತು ತಿಳಿಸಿದನು. ದೇವರ ರಾಜ್ಯ ಎಂದರೇನು? ಅದು ಮಾನವಕುಲದ ಉತ್ತಮ ಭವಿಷ್ಯತ್ತಿನ ನಿರೀಕ್ಷೆಗೆ ಹೇಗೆ ಸಂಬಂಧಿಸಿದೆ? ಮತ್ತು ದೇವರ ರಾಜ್ಯವು ನಿಮ್ಮನ್ನು ಹೇಗೆ ಪ್ರಭಾವಿಸುವುದು? (w08 8/1)
[ಪುಟ 5ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾವು ಇಂದು ನೋಡುತ್ತಿರುವ ಲೋಕ ಪರಿಸ್ಥಿತಿಗಳನ್ನು ಬೈಬಲ್ ಮುಂತಿಳಿಸಿದೆ