3 ಯೇಸುವಿನ ಕುರಿತ ಸತ್ಯ ಕಲಿಯಿರಿ
“ದೇವರು ಲೋಕವನ್ನು ಎಷ್ಟೊಂದು ಪ್ರೀತಿಸಿದನೆಂದರೆ ಆತನು ತನ್ನ ಏಕೈಕಜಾತ ಪುತ್ರನನ್ನು ಕೊಟ್ಟನು; ಅವನಲ್ಲಿ ನಂಬಿಕೆಯಿಡುವ ಯಾವನೂ ನಾಶವಾಗದೆ ನಿತ್ಯಜೀವವನ್ನು ಪಡೆದುಕೊಳ್ಳಬೇಕೆಂದು ಅವನನ್ನು ಕೊಟ್ಟನು.”—ಯೋಹಾನ 3:16.
ಕೆಲವರ ಆಕ್ಷೇಪಗಳು: ಯೇಸು ಎಂಬವನು ಇದ್ದಿರಲೇ ಇಲ್ಲ ಎಂದು ಕೆಲವರು ನಿಮ್ಮನ್ನು ನಂಬಿಸಿರಬಹುದು. ಇನ್ನು ಕೆಲವರು ಅವನು ಅಸ್ತಿತ್ವದಲ್ಲಿದ್ದನೆಂದು ಒಪ್ಪುವುದಾದರೂ ಅವನು ಬಹಳ ಹಿಂದೆಯೇ ಜೀವಿಸಿ ಗತಿಸಿಹೋದ ಒಬ್ಬ ಸಾಧಾರಣ ಮನುಷ್ಯನೆಂದು ಕಂಠೋಕ್ತವಾಗಿ ಹೇಳುತ್ತಾರೆ.
ನಿವಾರಣೆ: ಯೇಸುವಿನ ಶಿಷ್ಯನಾದ ನತಾನಯೇಲನನ್ನು ಅನುಕರಿಸಿರಿ.a ಅವನ ಮಿತ್ರನಾದ ಫಿಲಿಪ್ಪನು ತಾನು ಮೆಸ್ಸೀಯನನ್ನು ಕಂಡುಕೊಂಡೆನೆಂದೂ “ಅವನು ನಜರೇತಿನ ಯೋಸೇಫನ ಮಗನಾದ ಯೇಸುವೇ” ಎಂದೂ ನತಾನಯೇಲನಿಗೆ ತಿಳಿಸಿದನು. ಆದರೆ ನತಾನಯೇಲನು ಫಿಲಿಪ್ಪನ ಮಾತನ್ನು ಆ ಕೂಡಲೇ ನಂಬಿಬಿಡಲಿಲ್ಲ. “ನಜರೇತಿನಿಂದ ಏನಾದರೂ ಒಳ್ಳೆಯದು ಬರಸಾಧ್ಯವಿದೆಯೊ?” ಎಂದು ಅವನು ಕೇಳಿದನು. ಆದರೂ, ಫಿಲಿಪ್ಪನು “ಬಂದು ನೋಡು” ಎಂದು ಕರೆದಾಗ ಅವನು ಸ್ವತಃ ಹೋಗಿ ಖಾತ್ರಿ ಮಾಡಿಕೊಂಡನು. (ಯೋಹಾನ 1:43-51) ಅದೇ ರೀತಿ, ಯೇಸು ನಿಜವಾಗಿಯೂ ಅಸ್ತಿತ್ವದಲ್ಲಿದ್ದನು ಎಂಬುದಕ್ಕಿರುವ ಪುರಾವೆಯನ್ನು ನೀವಾಗಿಯೇ ಪರೀಕ್ಷಿಸುವುದರಿಂದ ನೀವು ಸಹ ಪ್ರಯೋಜನ ಹೊಂದಬಲ್ಲಿರಿ. ಇದನ್ನು ಮಾಡುವುದು ಹೇಗೆ?
ಯೇಸು ಭೂಮಿಯಲ್ಲಿ ಜೀವಿಸಿದ್ದನು ಎಂಬುದಕ್ಕಿರುವ ಐತಿಹಾಸಿಕ ಪುರಾವೆಯನ್ನು ಪರಿಶೀಲಿಸಿರಿ. ಕ್ರೈಸ್ತರಲ್ಲದ ಜೋಸೀಫಸ್ ಮತ್ತು ಟ್ಯಾಸಿಟಸ್‌ರು ಪ್ರಥಮ ಶತಮಾನದಲ್ಲಿ ಜೀವಿಸಿದ್ದ ಇಬ್ಬರು ಗಣ್ಯ ಇತಿಹಾಸಕಾರರು. ಅವರು ಯೇಸು ಕ್ರಿಸ್ತನನ್ನು ಒಬ್ಬ ಚಾರಿತ್ರಿಕ ವ್ಯಕ್ತಿಯಾಗಿ ತಿಳಿಸುತ್ತಾರೆ. ಕ್ರಿ.ಶ. 64ರಲ್ಲಿ ರೋಮ್‌ನಲ್ಲಾದ ಅಗ್ನಿ ದುರಂತಕ್ಕೆ ಕ್ರೈಸ್ತರು ಕಾರಣರೆಂದು ರೋಮ್‌ನ ಚಕ್ರವರ್ತಿ ನೀರೊ ಹೇಗೆ ಆಪಾದಿಸಿದ್ದನು ಎಂದು ವರ್ಣಿಸುತ್ತಾ ಇತಿಹಾಸಕಾರ ಟ್ಯಾಸಿಟಸ್ ಬರೆದದ್ದು: “ಕ್ರೈಸ್ತರೆಂದು ಕರೆಯಲ್ಪಡುವ ಜನರ ಮೇಲೆ ನೀರೊ ಆಪಾದನೆ ಹೊರಿಸಿ ಅವರನ್ನು ಚಿತ್ರಹಿಂಸೆಗೆ ಒಳಪಡಿಸಿದ್ದನು. ಅವರು ತಮ್ಮ ಕ್ರೈಸ್ತ ಪದ್ಧತಿಗಳಿಂದಾಗಿ ದ್ವೇಷಿಸಲ್ಪಟ್ಟಿದ್ದರು. ಕ್ರೈಸ್ತರು ಎಂಬ ಹೆಸರು ಯಾರಿಂದ ಬಂತೋ ಆ ಕ್ರಿಸ್ಟಸ್ [ಕ್ರಿಸ್ತನು] ತಿಬೇರಿಯಸ್‌ನ ಆಳಿಕೆಯ ಕಾಲದಲ್ಲಿ ನಮ್ಮ ಆಡಳಿತಗಾರರಲ್ಲಿ ಒಬ್ಬನಾದ ಪೊಂತ್ಯ ಪಿಲಾತನಿಂದ ಉಗ್ರ ದಂಡನೆಯನ್ನು ಅನುಭವಿಸಿದನು.”
ಯೇಸು ಮತ್ತು ಆದಿ ಕ್ರೈಸ್ತರ ಕುರಿತು ಒಂದನೇ ಹಾಗೂ ಎರಡನೇ ಶತಕದ ಇತಿಹಾಸಕಾರರು ತಿಳಿಸಿದ ವಿಷಯಗಳ ಕುರಿತು ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕ 2002ರ ಸಂಚಿಕೆ ತಿಳಿಸುವುದು: “ಈ ಖಾಸಗಿ ವೃತ್ತಾಂತಗಳು ರುಜುಪಡಿಸುವುದೇನಂದರೆ ಆದಿಶತಕದಲ್ಲಿ ಯೇಸುವಿನ ಚಾರಿತ್ರಿಕ ಅಸ್ತಿತ್ವವನ್ನು ಕ್ರೈಸ್ತಧರ್ಮದ ವಿರೋಧಿಗಳು ಸಹ ಎಂದೂ ಸಂಶಯಿಸಿರಲಿಲ್ಲ. ಯೇಸುವಿನ ಅಸ್ತಿತ್ವವು ಮೊತ್ತಮೊದಲಾಗಿ ವಾಗ್ವಾದಕ್ಕೊಳಗಾದದ್ದು 18ನೇ ಶತಕದ ಅಂತ್ಯದಲ್ಲಿ ಮತ್ತು 19ನೇ ಶತಕದ ಅವಧಿಯಲ್ಲಿ ಹಾಗೂ 20ನೇ ಶತಕದ ಆರಂಭದಲ್ಲಿ. ಆದರೂ ಅದಕ್ಕೆ ಯಾವ ಆಧಾರವೂ ಇರಲಿಲ್ಲ.” 2002ರಲ್ಲಿ, ದಿ ವಾಲ್ ಸ್ಟ್ರೀಟ್ ಜರ್ನಲ್‌ನ ಸಂಪಾದಕೀಯವು ಹೇಳಿದ್ದು: “ಕೆಲವೇ ನಾಸ್ತಿಕರನ್ನು ಹೊರತುಪಡಿಸಿ ಹೆಚ್ಚಿನ ವಿದ್ವಾಂಸರು ನಜರೇತಿನ ಯೇಸುವನ್ನು ಒಬ್ಬ ಚಾರಿತ್ರಿಕ ವ್ಯಕ್ತಿಯಾಗಿ ಈ ಮೊದಲೇ ಸ್ವೀಕರಿಸಿದ್ದರು.”
ಯೇಸು ಪುನರುತ್ಥಾನಗೊಳಿಸಲ್ಪಟ್ಟಿದ್ದನು ಎಂಬುದಕ್ಕಿರುವ ಪುರಾವೆಯನ್ನು ಪರಿಗಣಿಸಿ. ಯೇಸು ವಿರೋಧಿಗಳಿಂದ ಬಂದಿಸಲ್ಪಟ್ಟಾಗ ಅವನ ಆಪ್ತ ಸಂಗಡಿಗರೂ ಅವನನ್ನು ಬಿಟ್ಟು ಓಡಿಹೋದರು. ಮಿತ್ರನಾಗಿದ್ದ ಪೇತ್ರನು ಹೆದರಿಕೊಂಡು ಯೇಸುವನ್ನು ಅರಿಯೆನೆಂದು ಅಲ್ಲಗಳೆದನು. (ಮತ್ತಾಯ 26:55, 56, 69-75) ಯೇಸುವನ್ನು ಬಂದಿಸಿದ ನಂತರ ಅವನ ಹಿಂಬಾಲಕರು ಚದರಿಹೋದರು. (ಮತ್ತಾಯ 26:31) ಅನಂತರ ಕೂಡಲೇ ಅವನ ಶಿಷ್ಯರು ಬಲಹೊಂದಿ ತುಂಬ ಕಾರ್ಯಪ್ರವೃತ್ತರಾದರು. ಯೇಸುವನ್ನು ಕೊಲ್ಲಲು ಸಂಚುಹೂಡಿದ್ದ ವೈರಿಗಳನ್ನೇ ಪೇತ್ರ ಮತ್ತು ಯೋಹಾನರು ಧೈರ್ಯದಿಂದ ಎದುರಿಸಿದರು. ಯೇಸುವಿನ ಶಿಷ್ಯರು ಎಷ್ಟು ಪ್ರಚೋದಿಸಲ್ಪಟ್ಟರೆಂದರೆ ಅವರು ಅವನ ಬೋಧನೆಗಳನ್ನು ರೋಮನ್ ಸಾಮ್ರಾಜ್ಯದಲ್ಲೆಲ್ಲೂ ಸಾರಿಹೇಳಿದರು. ಅವರು ಮರಣವನ್ನಾದರೂ ಎದುರಿಸಿದರು ಆದರೆ ನಂಬಿಕೆಗಳ ವಿಷಯದಲ್ಲಿ ರಾಜಿಮಾಡಿಕೊಳ್ಳಲಿಲ್ಲ.
ಶಿಷ್ಯರ ಮನೋಭಾವದಲ್ಲಾದ ಈ ತೀವ್ರ ಬದಲಾವಣೆಗೆ ಒಂದು ಕಾರಣವು ಏನಾಗಿತ್ತು? ಯೇಸು ಸತ್ತವರೊಳಗಿಂದ ಜೀವಂತವಾಗಿ ಎಬ್ಬಿಸಲ್ಪಟ್ಟದ್ದೇ. ಆತನು “ಕೇಫನಿಗೂ [ಪೇತ್ರನಿಗೂ] ಬಳಿಕ ಹನ್ನೆರಡು ಮಂದಿಗೂ ಕಾಣಿಸಿಕೊಂಡನು” ಎಂದು ಪೌಲನು ವಿವರಿಸುತ್ತಾ ಹೇಳಿದ್ದು: “ತರುವಾಯ [ಯೇಸು] ಒಂದು ಸಮಯದಲ್ಲಿ ಐನೂರಕ್ಕಿಂತಲೂ ಹೆಚ್ಚು ಮಂದಿ ಸಹೋದರರಿಗೆ ಕಾಣಿಸಿಕೊಂಡನು.” ಪೌಲನು ಆ ಮಾತುಗಳನ್ನು ಬರೆದ ಸಮಯದಲ್ಲಿ ಯೇಸುವನ್ನು ಕಣ್ಣಾರೆ ಕಂಡ ಸಾಕ್ಷಿಗಳಲ್ಲಿ ಹೆಚ್ಚಿನವರು ಇನ್ನೂ ಜೀವಿಸಿದ್ದರು. (1 ಕೊರಿಂಥ 15:3-7) ಕಣ್ಣಾರೆ ಕಂಡ ಒಬ್ಬಿಬ್ಬರು ವ್ಯಕ್ತಿಗಳ ಸಾಕ್ಷಿಯನ್ನಾದರೂ ಒಂದುವೇಳೆ ಸಂದೇಹವಾದಿಗಳು ಸುಲಭವಾಗಿ ತಿರಸ್ಕರಿಸಿಬಿಡಬಹುದಿತ್ತು. (ಲೂಕ 24:1-11) ಆದರೆ ಐನೂರಕ್ಕೂ ಹೆಚ್ಚು ಮಂದಿಯ ಪ್ರತ್ಯಕ್ಷಸಾಕ್ಷಿಯು ಯೇಸು ಜೀವಂತನಾಗಿ ಎದ್ದನೆಂಬುದಕ್ಕೆ ದೃಢವಾದ ಪುರಾವೆಯನ್ನು ಕೊಟ್ಟಿತು.
ಪ್ರಯೋಜನಗಳು: ಯೇಸುವಿನಲ್ಲಿ ನಂಬಿಕೆಯಿಡುವ ಮತ್ತು ಆತನಿಗೆ ವಿಧೇಯರಾಗುವ ಜನರ ಪಾಪಗಳು ಕ್ಷಮಿಸಲ್ಪಡಬಲ್ಲವು, ಮತ್ತು ಅವರಿಗೆ ಶುದ್ಧ ಮನಸ್ಸಾಕ್ಷಿ ಲಭಿಸುವುದು. (ಮಾರ್ಕ 2:5-12; 1 ತಿಮೊಥೆಯ 1:19; 1 ಪೇತ್ರ 3:16-22) ಒಂದುವೇಳೆ ಅವರು ಮರಣಹೊಂದಿದರೂ ಅವರನ್ನು “ಕಡೇ ದಿನದಲ್ಲಿ” ಪುನರುತ್ಥಾನಗೊಳಿಸುವೆನೆಂದು ಯೇಸು ಮಾತುಕೊಟ್ಟಿದ್ದಾನೆ.—ಯೋಹಾನ 6:40. (w09 5/1)
ಹೆಚ್ಚಿನ ಮಾಹಿತಿಗಾಗಿ, ಬೈಬಲ್ ನಿಜವಾಗಿ ಏನನ್ನು ಬೋಧಿಸುತ್ತದೆ? b ಪುಸ್ತಕದಲ್ಲಿ “ಯೇಸು ಕ್ರಿಸ್ತನು ಯಾರು?” ಎಂಬ 4ನೇ ಅಧ್ಯಾಯ ಮತ್ತು “ವಿಮೋಚನಾ ಮೌಲ್ಯ—ದೇವರ ಅತಿಶ್ರೇಷ್ಠ ಉಡುಗೊರೆ” ಎಂಬ 5ನೇ ಅಧ್ಯಾಯ ನೋಡಿ.
[ಪಾದಟಿಪ್ಪಣಿಗಳು]
a ಸುವಾರ್ತಾ ಲೇಖಕರಾದ ಮತ್ತಾಯ, ಮಾರ್ಕ ಮತ್ತು ಲೂಕರು ನತಾನಯೇಲನನ್ನು ಬಾರ್ತೊಲೊಮಾಯ ಎಂಬ ಹೆಸರಿನಿಂದ ಸೂಚಿಸಿದ್ದಾರೆಂದು ವ್ಯಕ್ತ.
b ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ
[ಪುಟ 7ರಲ್ಲಿರುವ ಚಿತ್ರ]
ಯೇಸುವಿನ ಅಸ್ತಿತ್ವದ ಪುರಾವೆಯನ್ನು ನತಾನಯೇಲನಂತೆ ನೀವೂ ಪರಿಶೀಲಿಸಿ ನೋಡಿ