ನಮ್ಮ ಓದುಗರ ಪ್ರಶ್ನೆ
ಧಾರ್ಮಿಕ ಮೈತ್ರಿಯ ಬಗ್ಗೆ ಯೆಹೋವನ ಸಾಕ್ಷಿಗಳ ನೋಟವೇನು?
▪ “ಲೋಕದಲ್ಲಿ ಸುಮಾರು 10,000 ಧರ್ಮಗಳಿವೆ” ಎಂದು ವರ್ಲ್ಡ್ ಕ್ರಿಶ್ಚಿಯನ್ ಎನ್ಸೈಕ್ಲಪೀಡಿಯ ಹೇಳುತ್ತದೆ. ಈ ಧರ್ಮಗಳ ನಡುವಿನ ಘರ್ಷಣೆಯಿಂದಾಗಿ ಅಪಾರವಾದ ಹಾನಿ ಸಂಭವಿಸಿದೆ. ಆದಕಾರಣ ಧಾರ್ಮಿಕ ಮೈತ್ರಿಯ ವಿಚಾರವು ಅನೇಕರಿಗೆ ಆಶಾಕಿರಣವಾಗಿದೆ. ಇದು, ಧಾರ್ಮಿಕವಾಗಿ ವಿಭಜಿತವಾದ ಈ ಲೋಕದಲ್ಲಿ ಶಾಂತಿ ಹಾಗೂ ಐಕ್ಯತೆಯನ್ನು ತರಬಲ್ಲದೆಂಬುದು ಅವರ ನಂಬಿಕೆ.
ಐಕ್ಯತೆಯನ್ನು ಬೈಬಲ್ ಪ್ರೋತ್ಸಾಹಿಸುತ್ತದೆ. ಅಪೊಸ್ತಲ ಪೌಲನು ಕ್ರೈಸ್ತ ಸಭೆಯನ್ನು ಮಾನವ ದೇಹಕ್ಕೆ ಹೋಲಿಸುತ್ತಾ, ಅದರ ಸದಸ್ಯರು ‘ಪರಸ್ಪರ ಸಹಕರಿಸಲಿಕ್ಕಾಗಿ ಹೊಂದಿಕೆಯಿಂದ ಜೋಡಿಸಲ್ಪಟ್ಟಿರಬೇಕು’ ಎಂದು ಹೇಳಿದನು. (ಎಫೆಸ 4:16) ಅದೇ ರೀತಿಯಲ್ಲಿ ಅಪೊಸ್ತಲ ಪೇತ್ರನು ಸಹ ತನ್ನ ಜೊತೆ ವಿಶ್ವಾಸಿಗಳಿಗೆ ‘ನೀವೆಲ್ಲರೂ ಏಕಮನಸ್ಸುಳ್ಳವರಾಗಿರ್ರಿ’ ಎಂದು ಕೇಳಿಕೊಂಡನು.—1 ಪೇತ್ರ 3:8.
ಆರಂಭದ ಕ್ರೈಸ್ತರು ಬಹುಭಾಷೀಯ ಹಾಗೂ ಬಹುಧರ್ಮೀಯ ಲೋಕದಲ್ಲಿ ಜೀವಿಸುತ್ತಿದ್ದರು. ಆದರೂ ಬೇರೆಬೇರೆ ಧರ್ಮಗಳೊಂದಿಗೆ ಮೈತ್ರಿಮಾಡಿಕೊಳ್ಳುವ ವಿಷಯದಲ್ಲಿ ಪೌಲನು, “ನಂಬಿಗಸ್ತನಿಗೂ ಅವಿಶ್ವಾಸಿಗೂ ಪಾಲುಗಾರಿಕೆ ಏನು?” ಎಂದು ಕೇಳಿದನು. ನಂತರ ಆತನು ‘ಅವರ ಮಧ್ಯದಿಂದ ಹೊರಗೆ ಬನ್ನಿ’ ಎಂದು ಕ್ರೈಸ್ತರನ್ನು ಎಚ್ಚರಿಸಿದನು. (2 ಕೊರಿಂಥ 6:15, 17) ಇಲ್ಲಿ ಪೌಲನು ಧಾರ್ಮಿಕ ಮೈತ್ರಿಯ ವಿರುದ್ಧ ಮಾತಾಡುತ್ತಿದ್ದನು ಎಂಬುದು ಸ್ಪಷ್ಟ. ಆತನು ಹಾಗೇಕೆ ಮಾತಾಡಿದನು?
ಒಬ್ಬ ನಿಜ ಕ್ರೈಸ್ತನು ನಿಜ ಕ್ರೈಸ್ತನಲ್ಲದವನೊಂದಿಗೆ ಆಧ್ಯಾತ್ಮಿಕ ವಿಷಯಗಳಲ್ಲಿ ಒಡನಾಟಮಾಡಿದರೆ ಅವರಿಬ್ಬರ ಜೋಡಿ ಸರಿಹೊಂದುವುದಿಲ್ಲ ಎಂದು ಅಪೊಸ್ತಲನು ವಿವರಿಸಿದನು. (2 ಕೊರಿಂಥ 6:14) ಏಕೆಂದರೆ ಇದರಿಂದ ಆ ಕ್ರೈಸ್ತನ ನಂಬಿಕೆಗೆ ಹಾನಿಯಾಗುತ್ತದೆ. ಪೌಲನಿಗಿದ್ದ ಆ ಕಾಳಜಿಯನ್ನು ಒಬ್ಬ ತಂದೆ ತೋರಿಸುವ ಕಾಳಜಿಗೆ ಹೋಲಿಸಬಹುದು. ನೆರೆಹೊರೆಯಲ್ಲಿರುವ ಕೆಲವು ಹುಡುಗರು ಪುಂಡ ಪೋಕರಿಗಳಾಗಿದ್ದಾರೆ ಎಂದು ಗೊತ್ತಿರುವುದರಿಂದ ಕಾಳಜಿಭರಿತ ತಂದೆ ತನ್ನ ಮಗ ಯಾರೊಂದಿಗೆ ಆಟ ಆಡಬಹುದೆಂಬ ವಿಷಯದಲ್ಲಿ ವಿವೇಕದಿಂದ ಕೆಲವು ನಿರ್ಬಂಧಗಳನ್ನು ಹಾಕುತ್ತಾನೆ. ಆತನು ಹಾಕುವ ನಿರ್ಬಂಧಗಳು ಮಗನಿಗೆ ಇಷ್ಟವಾಗದಿರಬಹುದು. ಆದರೂ ಈ ರೀತಿಯಲ್ಲಿ ಪ್ರತ್ಯೇಕವಾಗಿರುವ ಮೂಲಕ ಆತನ ಮಗ ಕೆಟ್ಟ ಪ್ರಭಾವಕ್ಕೆ ತುತ್ತಾಗುವುದಿಲ್ಲ. ಅದೇ ರೀತಿಯಲ್ಲಿ ಕ್ರೈಸ್ತರು ಬೇರೆ ಧರ್ಮಗಳಿಂದ ಪ್ರತ್ಯೇಕರಾಗಿದ್ದರೆ ಅವುಗಳ ಹಾನಿಕಾರಕ ಆಚಾರಗಳಿಂದ ಸಂರಕ್ಷಿಸಲ್ಪಡುವರೆಂದು ಪೌಲನಿಗೆ ಗೊತ್ತಿತ್ತು.
ಕ್ರೈಸ್ತರು ಬೇರೆ ಧರ್ಮಗಳಿಂದ ತಮ್ಮನ್ನು ಪ್ರತ್ಯೇಕಿಸಿಕೊಳ್ಳಬೇಕು ಎಂದು ಹೇಳುವ ಮೂಲಕ ಪೌಲನು ಯೇಸುವನ್ನು ಅನುಕರಿಸುತ್ತಿದ್ದನು. ಜನರ ಮಧ್ಯೆ ಶಾಂತಿಯನ್ನು ಪ್ರವರ್ಧಿಸುವ ವಿಷಯದಲ್ಲಿ ಯೇಸು ಅತ್ಯುತ್ತಮ ಮಾದರಿಯನ್ನು ಇಟ್ಟಿದ್ದರೂ ಆತನು ಧಾರ್ಮಿಕ ಮೈತ್ರಿ ಮಾಡಲಿಲ್ಲ. ಭೂಮಿ ಮೇಲೆ ಯೇಸುವಿನ ಶುಶ್ರೂಷೆಯ ಸಮಯದಲ್ಲಿ ಫರಿಸಾಯರು ಹಾಗೂ ಸದ್ದುಕಾಯರಂಥ ಅನೇಕ ಧಾರ್ಮಿಕ ಗುಂಪುಗಳು ಕ್ರಿಯಾಶೀಲವಾಗಿದ್ದವು. ವಾಸ್ತವದಲ್ಲಿ ಈ ಗುಂಪುಗಳೆಲ್ಲವೂ ಒಟ್ಟುಗೂಡಿ ಯೇಸುವಿಗೆ ಸವಾಲೆಸೆದವು; ಅವರು ಯೇಸುವನ್ನು ಸಾಯಿಸಲು ಪಿತೂರಿನಡೆಸುವಷ್ಟರ ಮಟ್ಟಿಗೆ ಮುಂದುವರಿದರು. ಆದರೆ ಯೇಸು ತನ್ನ ಶಿಷ್ಯರಿಗೆ “ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ಜಾಗರೂಕರಾಗಿರುವಂತೆ” ಎಚ್ಚರಿಕೆ ಕೊಟ್ಟನು.—ಮತ್ತಾಯ 16:12.
ಇಂದಿನ ಕುರಿತೇನು? ಧಾರ್ಮಿಕ ಮೈತ್ರಿಯ ವಿಷಯದಲ್ಲಿ ಬೈಬಲ್ ಕೊಡುವ ಎಚ್ಚರಿಕೆಯು ಈಗಲೂ ಅನ್ವಯಿಸುತ್ತದೊ? ಹೌದು. ಏಕೆಂದರೆ, ನೀರು ಮತ್ತು ಎಣ್ಣೆ ಹೇಗೆ ಬೆರೆಯುವುದಿಲ್ಲವೋ ಹಾಗೆಯೇ ವಿಭಿನ್ನ ಧಾರ್ಮಿಕ ನಂಬಿಕೆಗಳು ಧಾರ್ಮಿಕ ಮೈತ್ರಿಯ ಮೂಲಕ ಬೆರೆಯಲಾರವು. ಉದಾಹರಣೆಗೆ, ವಿವಿಧ ಧರ್ಮಗಳ ಜನರು ಶಾಂತಿಗಾಗಿ ಪ್ರಾರ್ಥಿಸುವಾಗ ಅವರೆಲ್ಲರೂ ಯಾವ ದೇವರಿಗೆ ಬೇಡುತ್ತಾರೆ? ಕ್ರೈಸ್ತಪ್ರಪಂಚದ ತ್ರಯೈಕ್ಯ ದೇವರಿಗಾ? ಹಿಂದೂಗಳ ಬ್ರಹ್ಮನಿಗಾ? ಬುದ್ಧನಿಗಾ? ಅಥವಾ ಇನ್ಯಾರಿಗೆ?
“ಅಂತ್ಯಕಾಲದಲ್ಲಿ” ಎಲ್ಲ ಜನಾಂಗಗಳ ಜನರು ಹೀಗನ್ನುವರೆಂದು ಪ್ರವಾದಿಯಾದ ಮೀಕನು ಮುಂತಿಳಿಸಿದನು: “ಬನ್ನಿರಿ, ಯೆಹೋವನ ಪರ್ವತಕ್ಕೆ, ಯಾಕೋಬ್ಯರ ದೇವರ ಮಂದಿರಕ್ಕೆ ಹೋಗೋಣ! ಆತನು ತನ್ನ ಮಾರ್ಗಗಳ ವಿಷಯವಾಗಿ ನಮಗೆ ಬೋಧನೆಮಾಡುವನು, ನಾವು ಆತನ ದಾರಿಗಳಲ್ಲಿ ನಡೆಯುವೆವು.” (ಮೀಕ 4:1-4) ಹೀಗೆ ಮಾಡುವಾಗ ಎಲ್ಲೆಲ್ಲೂ ಶಾಂತಿ ಹಾಗೂ ಐಕ್ಯತೆ ರಾರಾಜಿಸುವುದು. ಇದಕ್ಕೆ ಕಾರಣ ಎಲ್ಲ ಧರ್ಮಗಳ ಮೈತ್ರಿಯಲ್ಲ ಬದಲಾಗಿ ಎಲ್ಲರೂ ಒಂದೇ ಸತ್ಯ ಧರ್ಮವನ್ನು ಅಂಗೀಕರಿಸುವುದೇ. (w10-E 06/01)
[ಪುಟ 13ರಲ್ಲಿರುವ ಚಿತ್ರ]
ಧಾರ್ಮಿಕ ಮೈತ್ರಿಗಾಗಿ 2008ರಲ್ಲಿ ನಡೆದ ಸರ್ವಧರ್ಮ ಸಮ್ಮೇಳನದಲ್ಲಿ ವಿಶ್ವದ ಪ್ರಮುಖ ಧರ್ಮಗಳ ಸದಸ್ಯರು
[ಕೃಪೆ]
REUTERS/Andreas Manolis