ನಮ್ರಭಾವ
ನಮ್ರತೆ: ದರ್ಪ-ಧಿಮಾಕು ಮುಕ್ತ ವ್ಯಕ್ತಿತ್ವವೇ ನಮ್ರತೆ. ಯಾರನ್ನೇ ಆಗಲಿ ತನಗಿಂತ ಶ್ರೇಷ್ಠ ಅಂತ ಆದರಿಸುವ ಗುಣ. ತನ್ನಲ್ಲಿರುವ ಕುಂದುಕೊರತೆಗಳನ್ನು ಒಪ್ಪಿಕೊಳ್ಳುವವ, ತನ್ನ ಇತಿಮಿತಿಯ ಅರಿವುಳ್ಳವನೇ ವಿನಯಶೀಲ.
ಮೋಶೆ ನಮ್ರತೆ ತೋರಿಸಿದ ಪರಿ? ಒಬ್ಬ ವ್ಯಕ್ತಿಗೆ ಅಧಿಕಾರ ಸಿಕ್ಕಿದಾಗಲೇ ಆ ವ್ಯಕ್ತಿ ದುರಹಂಕಾರಿನಾ ದೀನ ವ್ಯಕ್ತಿನಾ ಅಂತ ಗೊತ್ತಾಗೋದು. ಅಧಿಕಾರವನ್ನು ಬಳಸುವ ರೀತಿಯಿಂದ ಕೂಡ ಒಬ್ಬ ವ್ಯಕ್ತಿಯಲ್ಲಿ ನಮ್ರಭಾವ ಇದ್ಯಾ ಅಹಂ ಇದ್ಯಾ ಅಂತ ತಿಳಿದುಕೊಳ್ಳಬಹುದು ಎನ್ನುತ್ತಾರೆ 19ನೇ ಶತಮಾನದ ಲೇಖಕ ರಾಬರ್ಟ್ ಜಿ ಇಂಗರ್ಸೋಲ್. ಈ ವಿಷಯದಲ್ಲಿ ಮೋಶೆಯನ್ನು ನಾವು ಮೆಚ್ಚಲೇಬೇಕು. ಯಾಕೆ ಅನ್ನುತ್ತೀರಾ? ಅಧಿಕಾರ ಸಿಕ್ಕಿದಾಗ ಮೋಶೆ ಅಹಂಕಾರಿಯಾಗಲಿಲ್ಲ.
ಪ್ರಾಚೀನ ಇಸ್ರೇಲಿಗಳ ನಾಯಕತ್ವ ವಹಿಸುವ ದೊಡ್ಡ ಜವಾಬ್ದಾರಿ ಮೋಶೆ ಹೆಗಲೇರಿತು. ಜೊತೆಗೆ ಅಪರಿಮಿತ ಅಧಿಕಾರ. ಆದರೂ ಯೆಹೋವ ದೇವರಿಂದ ಆ ಅಧಿಕಾರ ಸಿಕ್ಕಿದಾಗ ಮೋಶೆ ಗತ್ತುಗೈರತ್ತು ತೋರಿಸಲಿಲ್ಲ. ಅದಕ್ಕೆ ಒಂದು ಉದಾಹರಣೆ ನೋಡಿ. ಪಿತ್ರಾರ್ಜಿತವಾಗಿ ಬರುವ ಹಕ್ಕುಗಳ ಬಗ್ಗೆ ಇಸ್ರೇಲಿಗಳಿಗೆ ಒಂದು ಪ್ರಶ್ನೆ ಎದ್ದಿತು. ಕ್ಲಿಷ್ಟಕರವಾದ ಆ ಪ್ರಶ್ನೆಯನ್ನು ಮೋಶೆ ಬಗೆಹರಿಸಬೇಕಿತ್ತು. (ಅರಣ್ಯಕಾಂಡ 27:1-11) ಮೋಶೆ ತೆಗೆದುಕೊಳ್ಳಲಿದ್ದ ತೀರ್ಮಾನ ಮಹತ್ವದ ತೀರ್ಮಾನ ಆಗಲಿತ್ತು. ಯಾಕಂದ್ರೆ ಅದು ತಲತಲಾಂತರದ ವರೆಗೂ ಶಾಸನವಾಗಿ ನಿಲ್ಲಲ್ಲಿತ್ತು.
ಮೋಶೆ ಏನು ಮಾಡಿದರು? ತಾನು ಈ ಜನಾಂಗಕ್ಕೆ ನಾಯಕ, ಹಾಗಾಗಿ ತನಗೆ ಮಾತ್ರ ತೀರ್ಮಾನ ತೆಗೆದುಕೊಳ್ಳೋ ಅಧಿಕಾರ ಇರೋದು ಅಂತ ಹೇಳಿ ತಾನೇ ನಿರ್ಣಯ ಮಾಡಿದರಾ? ವರ್ಷವರ್ಷಗಳ ಅನುಭವ, ಯೆಹೋವ ದೇವರ ಬಗ್ಗೆ ತನಗಿದ್ದ ಜ್ಞಾನ, ಹುಟ್ಟಿನಿಂದಲೇ ಬಂದಿದ್ದ ಪ್ರತಿಭೆ ಇವೆಲ್ಲವುಗಳ ಮೇಲೆ ಭರವಸೆ ಇಟ್ಟರಾ?
ಹಮ್ಮುಬಿಮ್ಮಿನ ಮನುಷ್ಯ ಈ ರೀತಿ ಮಾಡಬಹುದೇನೋ. ಆದರೆ ಮೋಶೆ ಹಾಗೆ ಮಾಡಲಿಲ್ಲ. ಅವರು “ಯೆಹೋವನ ಬಳಿಯಲ್ಲಿ ವಿಚಾರಿ”ಸಿದರು ಅಂತ ಬೈಬಲ್ ಹೇಳುತ್ತೆ. (ಅರಣ್ಯಕಾಂಡ 27:5) ಇಷ್ಟಕ್ಕೂ ಇಸ್ರೇಲ್ ಜನರನ್ನು 40 ವರ್ಷ ಮುನ್ನಡಿಸಿದ ಅನುಭವವಿತ್ತು ಮೋಶೆಗೆ. ಆದರೂ ಅವರು ಭರವಸೆ ಇಟ್ಟಿದ್ದು ತನ್ನ ಮೇಲಲ್ಲ, ದೇವರ ಮೇಲೆ. ಅಬ್ಬಾ! ಎಂಥ ವಿನಯಶೀಲತೆ!
ಮೋಶೆ ತಮ್ಮ ಅಧಿಕಾರದ ಮೇಲೆ ವ್ಯಾಮೋಹ ಬೆಳೆಸಿಕೊಂಡಿರಲಿಲ್ಲ. ಉದಾ: ದೇವರು ಇನ್ನೂ ಕೆಲವರನ್ನು ಪ್ರವಾದಿಗಳನ್ನಾಗಿ ಮಾಡಿದಾಗ ಮೋಶೆ ಹೊಟ್ಟೆಕಿಚ್ಚು ಪಡಲಿಲ್ಲ. ಸಂತೋಷಪಟ್ಟರು. (ಅರಣ್ಯಕಾಂಡ 11:24-29) ಒಮ್ಮೆ ಮೋಶೆಯ ಮಾವ ಕೆಲಸವನ್ನು ಬೇರೆಯವರಿಗೂ ಹಂಚಿಕೊಡುವಂತೆ ಸಲಹೆಕೊಟ್ಟಾಗ ಮೋಶೆ ವಿನಮ್ರರಾಗಿ ಒಪ್ಪಿಕೊಂಡರು. (ವಿಮೋಚನಕಾಂಡ 18:13-24) ಮತ್ತೊಂದು ಸಂದರ್ಭದಲ್ಲಿ ಇಸ್ರೇಲಿಗಳನ್ನು ಮುನ್ನಡೆಸಲು ಒಬ್ಬ ನಾಯಕನನ್ನು ನೇಮಿಸುವಂತೆ ದೇವರ ಬಳಿ ಮೋಶೆಯೇ ಕೇಳಿಕೊಂಡರು. ಆಗ ಅವರು ಬಾಳ ಮುಸ್ಸಂಜೆಯಲ್ಲಿದ್ದರು. ಆದರೆ ದೈಹಿಕ ಬಲ ಮಾತ್ರ ಇನ್ನು ಕುಂದಿರಲಿಲ್ಲ. ಆದರೂ ಆ ಕೋರಿಕೆಯನ್ನಿಟ್ಟರು. ಆಗ ದೇವರು ಯೆಹೋಶುವ ಎಂಬವರನ್ನು ನೇಮಿಸಿದರು. ಆ ಯುವಕನಿಗೆ ವೃದ್ಧ ಮೋಶೆ ಮನಸಾರೆ ಬೆಂಬಲ ನೀಡಿದರು. ಅಲ್ಲದೆ ಬೆಂಬಲ ನೀಡುವಂತೆ ಜನರ ಬಳಿ ಸಹ ಕೇಳಿಕೊಂಡರು. (ಅರಣ್ಯಕಾಂಡ 27:15-19; ಧರ್ಮೋಪದೇಶಕಾಂಡ 31:3-6; 34:7) ಇಸ್ರೇಲಿಗಳಿಗೆ ಆಧ್ಯಾತ್ಮಿಕ ಸಹಾಯ ನೀಡುತ್ತಾ ಮುನ್ನಡೆಸುವ ಕೆಲಸವನ್ನು ಮೋಶೆ ಒಂದು ಮಹಾ ಸುಯೋಗವಾಗಿ ಪರಿಗಣಿಸಿದ್ದರು ಎನ್ನುವುದರಲ್ಲಿ ಎರಡು ಮಾತಿಲ್ಲ. ತಮ್ಮ ಸ್ವಾರ್ಥ ನೋಡದೆ ಯಾವಾಗಲೂ ಜನರಿಗಾಗಿ ದುಡಿದರು.
ನಾವು ಕಲಿಯುವ ಪಾಠ? ಅಧಿಕಾರ, ಪ್ರತಿಭೆ ಇದ್ದರೂ ನಮ್ಮ ಮನಸ್ಸಿನೊಳಗೆ ಅಹಂ ಸುಳಿಯದಂತೆ ನೋಡಿಕೊಳ್ಳಬೇಕು. ನಮ್ಮಲ್ಲಿ ಎಷ್ಟೇ ಸಾಮರ್ಥ್ಯವಿದ್ದರೂ ನಮ್ರ ವ್ಯಕ್ತಿಗಳಾಗಿದ್ದರೆ ಮಾತ್ರ ಯೆಹೋವ ದೇವರ ಅನುಗ್ರಹಕ್ಕೆ ಪಾತ್ರರಾಗುತ್ತೇವೆ. (1 ಸಮುವೇಲ 15:17) ನಮ್ಮಲ್ಲಿ ವಿನಯ, ವಿನಮ್ರತೆ ಇರೋದಾದರೆ ಬೈಬಲ್ ಹೇಳುವಂತೆ “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸ” ಇಡುವೆವು.—ಜ್ಞಾನೋಕ್ತಿ 3:5, 6.
ಮೋಶೆಯಿಂದ ನಾವು ಕಲಿಯೋ ಇನ್ನೊಂದು ಪಾಠ: ಸ್ಥಾನಮಾನ, ಅಧಿಕಾರಕ್ಕೆ ನಾವು ಅನಾವಶ್ಯಕವಾಗಿ ಪ್ರಾಮುಖ್ಯತೆ ಕೊಡಬಾರದು.
ಮೋಶೆ ತರ ನಾವೂ ನಮ್ರಭಾವ ಬೆಳೆಸಿಕೊಂಡರೆ ಪ್ರಯೋಜನ? ಈ ಸೊಗಸಾದ ಗುಣವನ್ನು ತೋರಿಸೋದಾದರೆ ಜನರು ನಮ್ಮ ಜೊತೆ ಹಾಯಾಗಿರುತ್ತಾರೆ, ನಮ್ಮ ಸಹವಾಸ ಇಷ್ಟಪಡುತ್ತಾರೆ. ಎಲ್ಲಕ್ಕಿಂತ ಹೆಚ್ಚಾಗಿ ನಮ್ರತೆಯ ಸಾಕಾರರೂಪವಾಗಿರೋ ಯೆಹೋವ ದೇವರಿಗೆ ನಾವು ಇಷ್ಟವಾಗುತ್ತೇವೆ. “ದೇವರು ಅಹಂಕಾರಿಗಳನ್ನು ಎದುರಿಸುತ್ತಾನೆ, ಆದರೆ ದೀನರಿಗೆ ಅಪಾತ್ರ ದಯೆಯನ್ನು ಅನುಗ್ರಹಿಸುತ್ತಾನೆ.” (1 ಪೇತ್ರ 5:5) ಮೋಶೆಯಂತೆ ನಾವು ನಮ್ರರಾಗಿರಲು ಇದಕ್ಕಿಂತ ಹೆಚ್ಚಿನ ಕಾರಣ ಬೇಕೇ? (w13-E 02/01)