ನಮ್ಮ ಸಂಗ್ರಹಾಲಯ
ಸರಿಸಮಯಕ್ಕೆ ಬಂದ “ಮರೆಯಲಾಗದ” ಡ್ರಾಮ!
“ಅದನ್ನು ಎಂದಿಗೂ ಮರೆಯೋದಕ್ಕೆ ಆಗಲ್ಲ!” ಎಂದರು “ಕ್ರಿಯೇಷನ್ ಡ್ರಾಮ” ನೋಡಿದವರೆಲ್ಲ. ಸರಿಯಾದ ಸಮಯಕ್ಕೆ ಪ್ರದರ್ಶಿಸಲಾದ ಈ ಡ್ರಾಮ ನೋಡಿದವರೆಲ್ಲರ ಮನಸ್ಸಿನಲ್ಲಿ ಮಾಸಿ ಹೋಗದೆ ಉಳಿಯಿತು. ಯೂರೋಪಿನಲ್ಲಿ ಹಿಟ್ಲರ್ನ ಆಡಳಿತದ ಕೆಳಗೆ ದೇವಭಕ್ತ ಜನರು ತೀವ್ರ ಹಿಂಸೆ ಅನುಭವಿಸುವುದಕ್ಕಿಂತ ಸ್ವಲ್ಪವೇ ಮುಂಚೆ ಪ್ರದರ್ಶಿಸಲಾದ ಈ ಡ್ರಾಮ ಯೆಹೋವನ ಬಗ್ಗೆ ಉತ್ತಮ ಸಾಕ್ಷಿಯನ್ನು ಕೊಟ್ಟಿತು. ಈ “ಕ್ರಿಯೇಷನ್ ಡ್ರಾಮ” ಅಂದರೇನು? ಅದನ್ನು ಮೊದಲು ನೋಡೋಣ.
1914ರಲ್ಲಿ ಅಮೆರಿಕದ ನ್ಯೂಯಾರ್ಕ್ನ ಬ್ರೂಕ್ಲಿನ್ನಲ್ಲಿರುವ ಯೆಹೋವನ ಸಾಕ್ಷಿಗಳ ಮುಖ್ಯಕಾರ್ಯಾಲಯ “ಫೋಟೋ-ಡ್ರಾಮ ಆಫ್ ಕ್ರಿಯೇಷನ್” ಅನ್ನು ಬಿಡುಗಡೆ ಮಾಡಿತು. ಇದು ವರ್ಣರಂಜಿತ ಚಿತ್ರಗಳಿಂದ ಮತ್ತು ಧ್ವನಿಯಿಂದ ಕೂಡಿದ ಎಂಟು ತಾಸಿನ ಪ್ರದರ್ಶನವಾಗಿತ್ತು. ಇದರಲ್ಲಿ ಸ್ಲೈಡುಗಳನ್ನು ಮತ್ತು ಚಲಿಸುವ ಚಿತ್ರಗಳನ್ನು ಬಳಸಲಾಯಿತು. ಈ “ಫೋಟೋ-ಡ್ರಾಮ”ವನ್ನು ಲೋಕವ್ಯಾಪಕವಾಗಿ ಲಕ್ಷಾಂತರ ಜನ ನೋಡಿದರು. ಇದರದ್ದೇ ಸಂಕ್ಷಿಪ್ತ ಪ್ರದರ್ಶನವಾದ “ಯುರೇಕ ಡ್ರಾಮ”ವನ್ನು 1914ರಲ್ಲಿ ಹೊರತರಲಾಯಿತು. ಆದರೆ 1920ರಷ್ಟಕ್ಕೆ ಈ ಚಲನಚಿತ್ರದ ರೀಲ್ಗಳು, ಸ್ಲೈಡುಗಳು ಮತ್ತು ಡ್ರಾಮವನ್ನು ತೋರಿಸಲು ಉಪಯೋಗಿಸುತ್ತಿದ್ದ ಸಲಕರಣೆಗಳು ಬಳಸಿ ಬಳಸಿ ಹಾಳಾದವು. ಆದರೂ ಆ ಡ್ರಾಮ ಪ್ರದರ್ಶನಕ್ಕೆ ತುಂಬ ಬೇಡಿಕೆ ಇತ್ತು. ಉದಾಹರಣೆಗೆ, ಜರ್ಮನಿಯ ಲೂಡ್ವಿಕ್ಸ್ಬುರ್ಕ್ನ ನಿವಾಸಿಗಳು “ ‘ಫೋಟೋ ಡ್ರಾಮ’ ಮತ್ತೆ ಯಾವಾಗ ತೋರಿಸ್ತೀರಿ?” ಎಂದು ಕೇಳಿದರು. ಹಾಗಾದರೆ ಏನು ಮಾಡಲಾಯಿತು?
ಈ ಡ್ರಾಮ ಪ್ರದರ್ಶನವನ್ನು ಮುಂದುವರಿಸುವ ಸಲುವಾಗಿ 1920ರ ನಂತರದ ವರ್ಷಗಳಲ್ಲಿ ಜರ್ಮನಿಯ ಮಾಗ್ಡಬರ್ಗ್ನ ಬೆತೆಲ್ ಕುಟುಂಬದ ಕೆಲವು ಪ್ರತಿನಿಧಿಗಳು ಒಂದು ಕೆಲಸ ಮಾಡಿದರು. ಫ್ರಾನ್ಸ್ನ ಪ್ಯಾರಿಸ್ನ ಒಂದು ವಾರ್ತಾ ಮಾಧ್ಯಮದಿಂದ ಕೆಲವು ಚಲನಚಿತ್ರ ರೀಲ್ಗಳನ್ನು ಮತ್ತು ಪ್ಯಾರಿಸ್ನ ಲೈಪ್ಸಿಗ್ ಹಾಗೂ ಡ್ರೆಸ್ಡನ್ನಲ್ಲಿರುವ ಗ್ರಾಫಿಕ್ಸ್ ಕಂಪನಿಗಳಿಂದ ಸ್ಲೈಡುಗಳನ್ನು ತಂದರು. ಅನಂತರ ಅವುಗಳನ್ನು ಇನ್ನೂ ಬಳಕೆಗೆ ಯೋಗ್ಯವಾಗಿದ್ದ “ಫೋಟೋ ಡ್ರಾಮ”ದ ಕೆಲವು ಹಳೆಯ ಸ್ಲೈಡುಗಳ ಜೊತೆ ಸೇರಿಸಲಾಯಿತು.
ಸಂಗೀತ ಕಲೆಯನ್ನು ಕರಗತ ಮಾಡಿಕೊಂಡಿದ್ದ ಸಹೋದರ ಎರಿಕ್ ಫ್ರಾಸ್ಟ್ ಚಲಿಸುವ ಚಿತ್ರಗಳಿಗೆ ಮತ್ತು ಸ್ಲೈಡುಗಳಿಗೆ ಸಂಗೀತವನ್ನು ಸಂಯೋಜಿಸಿದರು. ಹೆಚ್ಚಿನ ನಿರೂಪಣೆಯನ್ನು ಕ್ರಿಯೇಷನ್ ಎಂಬ ಪುಸ್ತಕದಿಂದ ತೆಗೆದುಕೊಳ್ಳಲಾಯಿತು. ಹೀಗಾಗಿ “ಫೋಟೋ ಡ್ರಾಮ”ದ ಈ ಹೊಸ ರೂಪವನ್ನು “ಕ್ರಿಯೇಷನ್-ಡ್ರಾಮ” ಎಂದು ನಾಮಕರಣ ಮಾಡಲಾಯಿತು.
ಈ ಹೊಸ ಡ್ರಾಮ ಕೂಡ ‘ಫೋಟೋ ಡ್ರಾಮದಂತೆಯೇ’ ಎಂಟು ತಾಸಿನದ್ದಾಗಿತ್ತು. ಇದನ್ನು ಭಾಗಭಾಗವಾಗಿ ಸಾಯಂಕಾಲಗಳಲ್ಲಿ ಪ್ರದರ್ಶಿಸಲಾಯಿತು. ಸೃಷ್ಟಿಯ ದಿನಗಳ ಕುರಿತಾದ ಗಮನ ಸೆರೆಹಿಡಿಯುವ ಮಾಹಿತಿ ಇದರಲ್ಲಿ ಲಭ್ಯವಿತ್ತು. ಬೈಬಲಿನಲ್ಲಿರುವ ಮತ್ತು ಲೋಕದ ಇತಿಹಾಸವನ್ನು, ಸುಳ್ಳುಧರ್ಮಗಳು ಜನರನ್ನು ಹೇಗೆ ಮೋಸಮಾಡಿವೆ ಎಂಬುದನ್ನು ಇದು ತೋರಿಸಿತು. ಈ ಡ್ರಾಮವನ್ನು ಆಸ್ಟ್ರಿಯ, ಜರ್ಮನಿ, ಲಕ್ಸೆಂಬರ್ಗ್, ಸ್ವಿಟ್ಜರ್ಲೆಂಡ್ ಹಾಗೂ ಜರ್ಮನ್ ಭಾಷೆ ಮಾತಾಡುವ ಜನರಿರುವ ಬೇರೆ ಕಡೆಗಳಲ್ಲೂ ಪ್ರದರ್ಶಿಸಲಾಯಿತು.
ಸಹೋದರ ಎರಿಕ್ ಫ್ರಾಸ್ಟ್ ಹೇಳಿದ್ದು: “ಈ ಡ್ರಾಮ ಪ್ರದರ್ಶನದ ಸಮಯದಲ್ಲಿ ನನ್ನ ಜೊತೆ ಕೆಲಸ ಮಾಡುತ್ತಿದ್ದ ಸಹೋದರರಿಗೆ, ಅದರಲ್ಲೂ ನನ್ನೊಟ್ಟಿಗೆ ವಾದ್ಯವೃಂದದಲ್ಲಿದ್ದವರಿಗೆ ವಿರಾಮ ಸಮಯದಲ್ಲಿ ಸಭಿಕರು ಕುಳಿತಿದ್ದ ಪ್ರತಿ ಸಾಲಿಗೆ ಹೋಗಿ ನಮ್ಮ ಅಮೂಲ್ಯ ಪುಸ್ತಕಗಳನ್ನು, ಪುಸ್ತಿಕೆಗಳನ್ನು ಕೊಡುವಂತೆ ಉತ್ತೇಜಿಸಿದೆ. ಮನೆಮನೆ ಸೇವೆಯಲ್ಲಿ ಕೊಡುವುದಕ್ಕಿಂತ ಹೆಚ್ಚಿನ ಪುಸ್ತಕಗಳನ್ನು ಇಲ್ಲಿ ಕೊಟ್ಟೆವು.” ಪೋಲೆಂಡ್ನಲ್ಲಿ ಸಹೋದರ ಯೋಹಾನಸ್ ರ್ಯಾವುಟ ಈ ಡ್ರಾಮದ ಪ್ರದರ್ಶನವನ್ನು ಏರ್ಪಡಿಸಿದರು. ಅನೇಕ ಪ್ರೇಕ್ಷಕರು ವಿಳಾಸ ಕೊಟ್ಟುಹೋಗಿದ್ದನ್ನು ಅವರು ನೆನಪಿಸಿಕೊಳ್ಳುತ್ತಾರೆ. ಅವರೆಲ್ಲರನ್ನು ಪುನಃ ಭೇಟಿಮಾಡಲಾಯಿತು. ಆಸಕ್ತಿಕರ ಬೈಬಲ್ ಚರ್ಚೆಗಳು ನಡೆದವು.
1930ರ ನಂತರ “ಕ್ರಿಯೇಷನ್ ಡ್ರಾಮ”ವನ್ನು ಪ್ರದರ್ಶಿಸುವಾಗ ಯಾವಾಗಲೂ ಸಭಾಂಗಣಗಳು ಜನರಿಂದ ಕಿಕ್ಕಿರಿದಿದ್ದವು. ಆ ಇಡೀ ನಗರದಲ್ಲಿ ಯೆಹೋವನ ಸಾಕ್ಷಿಗಳು ಮನೆಮಾತಾದರು. ಜರ್ಮನಿಯ ಬ್ರಾಂಚ್ ಆಫೀಸ್ ಜರ್ಮನಿಯಾದ್ಯಂತ ಏರ್ಪಡಿಸಿದ ಈ ಪ್ರದರ್ಶನವನ್ನು 1933ರಷ್ಟಕ್ಕೆ ಸುಮಾರು 10ಲಕ್ಷ ಜನರು ವೀಕ್ಷಿಸಿದ್ದರು. ಅವರಲ್ಲಿ ಒಬ್ಬರಾದ ಕ್ಯಾಟ ಕ್ರ್ಯಾವುಸ್ ಎಂಬಾಕೆ ಹೇಳಿದ್ದು: “ಆ ಡ್ರಾಮ ನೋಡಲಿಕ್ಕಾಗಿಯೇ ನಾವು ಪ್ರತಿ ದಿನ 20ಕಿ.ಮೀ ನಡೆಯುತ್ತಿದ್ದೆವು. ಸತತ ಐದು ದಿನ ಹೀಗೆ ಮಾಡಿದೆವು. ಕಾಡು, ಬೆಟ್ಟ-ಗುಡ್ಡ, ಹಳ್ಳ ಯಾವುದನ್ನು ಲೆಕ್ಕಿಸಲಿಲ್ಲ.” ಇನ್ನೊಬ್ಬರು ಎಲ್ಸ ಬಿಲ್ಹಾಟ್ಜ್. ಅವರು ಹೇಳಿದ್ದು: “ ‘ಕ್ರಿಯೇಷನ್ ಡ್ರಾಮ’ ಸತ್ಯಕ್ಕಾಗಿ ನನ್ನಲ್ಲಿ ಪ್ರೀತಿ ಹುಟ್ಟಿಸಿತು.”
ಡ್ರಾಮ ನೋಡಿ ಬಂದ ತನ್ನ ತಾಯಿಯ ಪ್ರತಿಕ್ರಿಯೆಯನ್ನು ವಿವರಿಸುತ್ತಾ ಆಲ್ಫ್ರೇಟ್ ಆಲ್ಮೆಂಡಿಂಗ ಹೇಳಿದ್ದು: “ನನ್ನ ಅಮ್ಮ ರೋಮಾಂಚನಗೊಂಡಳು. ಎಷ್ಟೆಂದರೆ ಬೈಬಲನ್ನು ಖರೀದಿಸಿ ತಂದು ಅದರಲ್ಲಿ ‘ಪರ್ಗೆಟರಿ’ ಎಂಬ ಪದವನ್ನು ಹುಡುಕಲು ಶುರುಮಾಡಿದರು.” ಆಕೆಗೆ ಆ ಪದ ಬೈಬಲಿನಲ್ಲಿ ಸಿಗಲಿಲ್ಲ. ಅನಂತರ ಆಕೆ ಚರ್ಚ್ ಹೋಗುವುದನ್ನು ನಿಲ್ಲಿಸಿ, ಸತ್ಯ ಕಲಿತು ದೀಕ್ಷಾಸ್ನಾನ ಪಡಕೊಂಡಳು. “ ‘ಕ್ರಿಯೇಷನ್ ಡ್ರಾಮ’ ನೋಡಿ ಲೆಕ್ಕವಿಲ್ಲದಷ್ಟು ಜನ ಸತ್ಯಕ್ಕೆ ಬಂದರು” ಎನ್ನುತ್ತಾರೆ ಎರಿಕ್ ಫ್ರಾಸ್ಟ್.—3 ಯೋಹಾ. 1-3.
“ಕ್ರಿಯೇಷನ್ ಡ್ರಾಮ”ದ ಪ್ರೇಕ್ಷಕರ ಸಂಖ್ಯೆ ಉತ್ತುಂಗಕ್ಕೇರಿದ ಸ್ವಲ್ಪದರದಲ್ಲೇ ನಾಸಿ ಆಳ್ವಿಕೆಯ ಕೆಳಗೆ ಯೂರೋಪ್ ತತ್ತರಿಸಿತು. ಜರ್ಮನಿಯಲ್ಲಿ ಯೆಹೋವನ ಸಾಕ್ಷಿಗಳ ಚಟುವಟಿಕೆಗಳನ್ನು 1933ರ ಆರಂಭದಲ್ಲಿ ನಿಷೇಧಿಸಲಾಯಿತು. ಆ ಸಮಯದಿಂದ ಎರಡನೇ ಮಹಾಯುದ್ಧದ ಕೊನೆಯ ವರೆಗೆ ಅಂದರೆ 1945ರ ವರೆಗೆ ಯೂರೋಪ್ನಲ್ಲಿ ಯೆಹೋವನ ಸಾಕ್ಷಿಗಳು ತೀವ್ರ ಹಿಂಸೆಯನ್ನು ತಾಳಿಕೊಂಡರು. ಎರಿಕ್ ಫ್ರಾಸ್ಟ್ ಎಂಟು ವರ್ಷ ಸೆರೆಯಲ್ಲಿ ಕಳೆದರು. ಅಲ್ಲಿಂದ ಜೀವಂತ ಪಾರಾಗಿ ಜರ್ಮನಿಯ ವೀಸ್ಬಾಡನ್ನಲ್ಲಿರುವ ಬೆತೆಲ್ನಲ್ಲಿ ಸೇವೆ ಮಾಡಿದರು. ಎರಡನೇ ಮಹಾಯುದ್ಧದ ಸಮಯದಲ್ಲಿ ಯೆಹೋವನ ಜನರು ನಂಬಿಕೆಯ ಪರೀಕ್ಷೆಯನ್ನು ಎದುರಿಸುವ ಸ್ವಲ್ಪವೇ ಮುಂಚೆ “ಕ್ರಿಯೇಷನ್ ಡ್ರಾಮ” ಪ್ರದರ್ಶನಗೊಂಡದ್ದು ಎಷ್ಟು ಒಳ್ಳೇದಾಗಿತ್ತಲ್ಲವೆ! ಈ ಮರೆಯಲಾಗದ ಡ್ರಾಮವು ಪರೀಕ್ಷೆಗಳನ್ನು ತಾಳಿಕೊಳ್ಳಲು ಆ ದೇವಜನರಿಗೆ ಖಂಡಿತ ಧೈರ್ಯ ಕೊಟ್ಟಿತು.—ಜರ್ಮನಿಯ ಸಂಗ್ರಹಾಲಯದಿಂದ.