ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w15 3/15 ಪು. 17-ಪು. 18 ಪ್ಯಾ. 7
  • ವಾಚಕರಿಂದ ಪ್ರಶ್ನೆಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ವಾಚಕರಿಂದ ಪ್ರಶ್ನೆಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • ಅನುರೂಪ ಮಾಹಿತಿ
  • ನಾವು ನಿಮ್ಮ ಜೊತೆ ಬರುತ್ತೇವೆ
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2020
  • ರಾಜ್ಯವನ್ನು ಪಡೆಯಲು ಯೋಗ್ಯರೆಂದು ಎಣಿಸಲ್ಪಟ್ಟವರು
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2008
  • ‘ನೀನು ಒಪ್ಪುವ ಮಾರ್ಗ’
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
  • “ನಾವು ನಿಮ್ಮೊಂದಿಗೆ ಬರುವೆವು”
    ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2016
ಇನ್ನಷ್ಟು
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು—2015
w15 3/15 ಪು. 17-ಪು. 18 ಪ್ಯಾ. 7

ವಾಚಕರಿಂದ ಪ್ರಶ್ನೆಗಳು

ಲಹಿಂದೆಲ್ಲಾ ನಮ್ಮ ಸಾಹಿತ್ಯದಲ್ಲಿ ಸೂಚಕ ಮತ್ತು ಸೂಚಕರೂಪದ ಬಗ್ಗೆ ತುಂಬ ಬರುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಇದು ಕಡಿಮೆಯಾಗಿದೆ. ಏಕೆ?

ಸೆಪ್ಟೆಂಬರ್‌ 15, 1950⁠ರ ಇಂಗ್ಲಿಷ್‌ ಕಾವಲಿನಬುರುಜುವಿನಲ್ಲಿ “ಸೂಚಕ” ಮತ್ತು “ಸೂಚಕರೂಪ” ಎಂಬ ಪದಗಳ ಅರ್ಥ ಕೊಡಲಾಗಿತ್ತು. ಸೂಚಕ ಎನ್ನುವುದು ಭವಿಷ್ಯದ ಒಂದು ದೊಡ್ಡ ಘಟನೆ, ಒಂದು ವಸ್ತು ಅಥವಾ ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುವಂಥದ್ದು. ಸೂಚಕರೂಪ ಅಂದರೆ ಸೂಚಕ ಏನನ್ನು ಪ್ರತಿನಿಧಿಸಿತ್ತೊ ಆ ಘಟನೆ, ವಸ್ತು ಅಥವಾ ವ್ಯಕ್ತಿ. ಸೂಚಕವನ್ನು ಮುನ್‌ಛಾಯೆ ಮತ್ತು ಸೂಚಕರೂಪವನ್ನು ನಿಜತ್ವ ಎಂದು ಕರೆಯಲಾಗುತ್ತಿತ್ತು.

ದೆಬೋರ, ಎಲೀಹು, ಯೆಫ್ತಾಹ, ಯೋಬ, ರಾಹಾಬ, ರೆಬೆಕ್ಕ, ಮತ್ತು ಇನ್ನೂ ಬೇರೆ ನಂಬಿಗಸ್ತ ಪುರುಷರು ಮತ್ತು ಸ್ತ್ರೀಯರು ಅಭಿಷಿಕ್ತರನ್ನು ಅಥವಾ “ಮಹಾ ಸಮೂಹ”ವನ್ನು ಪ್ರತಿನಿಧಿಸುವ ಸೂಚಕಗಳಾಗಿದ್ದರೆಂದು ನಮ್ಮ ಸಾಹಿತ್ಯದಲ್ಲಿ ಮುಂಚೆಯೆಲ್ಲಾ ಹೇಳಲಾಗುತ್ತಿತ್ತು. (ಪ್ರಕ. 7:9) ಉದಾಹರಣೆಗೆ ಯೆಫ್ತಾಹ, ಯೋಬ ಮತ್ತು ರೆಬೆಕ್ಕ ಅಭಿಷಿಕ್ತರನ್ನು ಹಾಗೂ ದೆಬೋರ, ರಾಹಾಬ “ಮಹಾ ಸಮೂಹ”ವನ್ನು ಪ್ರತಿನಿಧಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿಗೆ ಇಂಥ ಹೋಲಿಕೆಗಳನ್ನು ನಾವು ಮಾಡುತ್ತಿಲ್ಲ. ಏಕೆ?

ಜನರು ಮೇಜಿನ ಸುತ್ತ ಒಟ್ಟು ಸೇರಿದ್ದಾರೆ, ಪಸ್ಕದ ಕುರಿ ಇ

ಸೂಚಕ

ಪುರಾತನ ಇಸ್ರಾಯೇಲಿನಲ್ಲಿ ಅರ್ಪಿಸಲಾಗುತ್ತಿದ್ದ ಪಸ್ಕದ ಕುರಿ ಸೂಚಕವಾಗಿತ್ತು.—ಅರ. 9:2.

ಯಾತನಾ ಕಂಬದ ಮೇಲೆ ಯೇಸು

ಸೂಚಕರೂಪ

ಕ್ರಿಸ್ತನೇ “ನಮ್ಮ ಪಸ್ಕದ ಕುರಿ” ಎಂದು ಪೌಲನು ಹೇಳಿದನು. —1 ಕೊರಿಂ. 5:7.

ಬೈಬಲ್‌ನಲ್ಲಿರುವ ಕೆಲವು ವ್ಯಕ್ತಿಗಳು ಭವಿಷ್ಯದಲ್ಲಿ ಬರುವ ಒಂದು ದೊಡ್ಡ ವಿಷಯವನ್ನು ಅಥವಾ ಒಬ್ಬ ವ್ಯಕ್ತಿಯನ್ನು ಪ್ರತಿನಿಧಿಸುವ ಸೂಚಕಗಳಾಗಿದ್ದಾರೆಂದು ಬೈಬಲೇ ಕಲಿಸುತ್ತದೆ. ಉದಾಹರಣೆಗೆ ಗಲಾತ್ಯ 4:21-31⁠ರಲ್ಲಿ ಒಂದು “ಸಾಂಕೇತಿಕ ನಾಟಕ”ದ ಬಗ್ಗೆ ಅಪೊಸ್ತಲ ಪೌಲ ಹೇಳುತ್ತಾನೆ. ಇದರಲ್ಲಿ ಇಬ್ಬರು ಸ್ತ್ರೀಯರಿದ್ದಾರೆ. ಮೊದಲನೇ ಸ್ತ್ರೀ ಹಾಗರಳು. ಇವಳು ಅಬ್ರಹಾಮನ ಸೇವಕಿ. ಇವಳು ಮೋಶೆಯ ಧರ್ಮಶಾಸ್ತ್ರದ ಆಧಾರದ ಮೇಲೆ ಯೆಹೋವನೊಟ್ಟಿಗೆ ಸಂಬಂಧ ಹೊಂದಿದ್ದ ಇಸ್ರಾಯೇಲ್‌ ಜನಾಂಗವನ್ನು ಪ್ರತಿನಿಧಿಸುತ್ತಾಳೆ. ಎರಡನೇ ಸ್ತ್ರೀ, ಸಾರ. ಇವಳು ಅಬ್ರಹಾಮನ ಪತ್ನಿ. ಇವಳನ್ನು “ಸ್ವತಂತ್ರ ಸ್ತ್ರೀ” ಎಂದು ಕರೆಯಲಾಗಿದೆ. ಇವಳು ದೇವರ ಪತ್ನಿ ಅಂದರೆ ದೇವರ ಸ್ವರ್ಗೀಯ ಸಂಘಟನೆಯನ್ನು ಪ್ರತಿನಿಧಿಸುತ್ತಾಳೆ. ರಾಜ-ಯಾಜಕನಾಗಿದ್ದ ಮೆಲ್ಕಿಜೆದೆಕ ಮತ್ತು ಯೇಸುವಿನ ಮಧ್ಯೆ ಇರುವ ಅನೇಕ ಹೋಲಿಕೆಗಳನ್ನೂ ಪೌಲನು ಮಾಡಿದ್ದಾನೆ. (ಇಬ್ರಿ. 6:20; 7:1-3) ಇದರ ಜೊತೆಗೆ ಯೆಶಾಯ ಮತ್ತವನ ಪುತ್ರರನ್ನು ಯೇಸುವಿಗೆ ಮತ್ತು ಅಭಿಷಿಕ್ತ ಕ್ರೈಸ್ತರಿಗೆ ಹೋಲಿಸಿದ್ದಾನೆ. (ಇಬ್ರಿ. 2:13, 14) ಈ ಹೋಲಿಕೆಗಳನ್ನು ಮಾಡುವಂತೆ ಪೌಲನನ್ನು ಪ್ರೇರಿಸಿದ್ದು ಯೆಹೋವನೇ. ಆದ್ದರಿಂದ ಈ ಸೂಚಕಗಳು ಮತ್ತು ಸೂಚಕರೂಪಗಳು ನಿಷ್ಕೃಷ್ಟವಾಗಿವೆ ಎಂದು ನಾವು ಹೇಳಬಹುದು.

ಒಬ್ಬ ವ್ಯಕ್ತಿಯನ್ನು ಸೂಚಕ ಎಂದು ಬೈಬಲ್‌ ಹೇಳುವುದಾದರೂ ಅವನ ಬದುಕಿನ ಪ್ರತಿಯೊಂದು ವಿವರ ಅಥವಾ ಘಟನೆ ಭವಿಷ್ಯದ ಯಾವುದೊ ದೊಡ್ಡ ವಿಷಯವನ್ನು ಪ್ರತಿನಿಧಿಸುತ್ತದೆಂದು ಇದರ ಅರ್ಥವಲ್ಲ. ಉದಾಹರಣೆಗೆ ಮೆಲ್ಕಿಜೆದೆಕ ಯೇಸುವನ್ನು ಪ್ರತಿನಿಧಿಸುತ್ತಾನೆಂದು ಪೌಲ ವಿವರಿಸಿದನು. ಆದರೆ ಅಬ್ರಹಾಮ 4 ಅರಸರನ್ನು ಸೋಲಿಸಿದ ನಂತರ ಮೆಲ್ಕಿಜೆದೆಕ ಅವನಿಗೆ ರೊಟ್ಟಿ, ದ್ರಾಕ್ಷಾರಸವನ್ನು ತಂದುಕೊಟ್ಟದ್ದರ ಬಗ್ಗೆ ಪೌಲ ಏನೂ ಹೇಳಿಲ್ಲ. ಆದ್ದರಿಂದ ಈ ಘಟನೆಗೆ ಯಾವುದೊ ಗುಟ್ಟಾದ ಅರ್ಥ ಇರಬೇಕೆಂದು ಯೋಚಿಸಲು ಶಾಸ್ತ್ರಾಧಾರ ಇಲ್ಲ.—ಆದಿ. 14:1, 18.

ಕ್ರಿಸ್ತನ ಮರಣದ ನಂತರದ ಶತಮಾನಗಳಲ್ಲಿ ಅನೇಕ ಬರಹಗಾರರು ಗಂಭೀರ ತಪ್ಪೊಂದನ್ನು ಮಾಡಿದರು. ಅದೇನೆಂದರೆ ಬೈಬಲಲ್ಲಿರುವ ಹೆಚ್ಚುಕಡಿಮೆ ಎಲ್ಲಾ ವೃತ್ತಾಂತಗಳನ್ನೂ ಸೂಚಕ ಮಾಡಿಬಿಟ್ಟರು. ಆರಿಜನ್‌, ಏಂಬ್ರೊಸ್‌ ಮತ್ತು ಜೆರೋಮ್‌ರ ಬೋಧನೆಗಳ ಬಗ್ಗೆ ದಿ ಇಂಟರ್‌ನ್ಯಾಷನಲ್‌ ಸ್ಟ್ಯಾಂಡರ್ಡ್‌ ಬೈಬಲ್‌ ಎನ್‌ಸೈಕ್ಲಪೀಡಿಯ ಹೀಗನ್ನುತ್ತದೆ: “ಅವರು ಬೈಬಲಲ್ಲಿರುವ ಪ್ರತಿಯೊಂದು ಸನ್ನಿವೇಶ ಮತ್ತು ಘಟನೆ ಎಷ್ಟು ಚಿಕ್ಕದ್ದಾಗಿದ್ದರೂ ಸರಿ ಅದರಲ್ಲಿ ಸೂಚಕ ಕಂಡುಹಿಡಿಯಲು ಪ್ರಯತ್ನಿಸಿದರು. ಅವರಿಗೆ ಸೂಚಕಗಳು ಸಿಕ್ಕಿದವು ಸಹ. ತೀರ ಸರಳ, ಸಾಮಾನ್ಯವಾದ ಘಟನೆಯಲ್ಲೂ ಕಷ್ಟಕರವಾದ ಅರ್ಥವುಳ್ಳ ಆಳ ಸತ್ಯ ಅಡಗಿದೆ ಎಂದು ಹೇಳಿದರು. . . . ಎಷ್ಟರ ಮಟ್ಟಿಗೆಂದರೆ, ಪುನರುತ್ಥಾನಗೊಂಡ ರಕ್ಷಕನು ಶಿಷ್ಯರಿಗೆ ಕಾಣಿಸಿಕೊಂಡ ರಾತ್ರಿಯಂದು ಅವರು ಹಿಡಿದ 153 ಮೀನಿನ ಸಂಖ್ಯೆಗೂ ಏನೊ ಅರ್ಥ ಇದೆ ಎಂದು ಹೇಳಿದರು!”

ಯೇಸು ಅದ್ಭುತ ಮಾಡಿ 5 ಜವೆಗೋದಿ ರೊಟ್ಟಿ ಮತ್ತು 2 ಮೀನಿನಿಂದ 5,000 ಪುರುಷರಿಗೆ ಊಟದ ಏರ್ಪಾಡು ಮಾಡಿದ ವೃತ್ತಾಂತದಲ್ಲಿ ಸಾಂಕೇತಿಕ ಅರ್ಥ ಇದೆ ಎಂದು ಹಿಪ್ಪೋದ ಅಗಸ್ಟಿನ್‌ ಎಂಬ ಇನ್ನೊಬ್ಬ ಬರಹಗಾರ ಹೇಳಿದನು. 5 ಜವೆಗೋದಿ ರೊಟ್ಟಿ ಬೈಬಲಿನ ಮೊದಲ 5 ಪುಸ್ತಕಗಳನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದನು. ಗೋದಿಗಿಂತ ಜವೆಗೋದಿ ಕೀಳ್ಮಟ್ಟದ್ದೆಂದು ಆ ಸಮಯದಲ್ಲಿ ನೆನಸಲಾಗುತ್ತಿತ್ತು. ಹಾಗಾಗಿ “ಹಳೇ ಒಡಂಬಡಿಕೆ” “ಹೊಸ ಒಡಂಬಡಿಕೆ”ಗಿಂತ ಕೀಳ್ಮಟ್ಟದ್ದು ಎಂದು ಎಣಿಸಲಾಯಿತು. 2 ಮೀನುಗಳು ಒಬ್ಬ ರಾಜ ಮತ್ತು ಒಬ್ಬ ಯಾಜಕನನ್ನು ಪ್ರತಿನಿಧಿಸುತ್ತವೆ ಎಂದೂ ವಿವರಿಸಿದನು. ಇನ್ನೊಬ್ಬ ವಿದ್ವಾಂಸನು, ಯಾಕೋಬನು ಏಸಾವನ ಚೊಚ್ಚಲುತನವನ್ನು ಕೊಂಡುಕೊಳ್ಳಲು ಕೊಟ್ಟ ಕೆಂಪು ಗುಗ್ಗರಿ ಯೇಸು ಮಾನವರಿಗಾಗಿ ಸ್ವರ್ಗೀಯ ನಿರೀಕ್ಷೆಯನ್ನು ಕೊಂಡುಕೊಳ್ಳಲು ಸುರಿಸಿದ ಆತನ ಕೆಂಪು ರಕ್ತವನ್ನು ಪ್ರತಿನಿಧಿಸುತ್ತದೆ ಎಂದೂ ಹೇಳಿದ್ದುಂಟು!

ಈ ವಿವರಣೆಗಳು ನಂಬಲು ಕಷ್ಟ ಎಂದು ನಿಮಗನಿಸಿದರೆ ಸಮಸ್ಯೆ ಏನೆಂದು ನಿಮಗೀಗ ಗೊತ್ತಾಗಿರಬಹುದು. ಯಾವ ಬೈಬಲ್‌ ವೃತ್ತಾಂತ ದೊಡ್ಡ ವಿಷಯವನ್ನು ಪ್ರತಿನಿಧಿಸುತ್ತದೆ ಯಾವುದಲ್ಲ ಎಂದು ಮನುಷ್ಯರಿಂದ ತಿಳಿಯಲು ಆಗುವುದಿಲ್ಲ. ಹಾಗಾಗಿ ಏನು ಮಾಡುವುದು ಒಳ್ಳೇದು? ಒಂದು ಘಟನೆ, ವಸ್ತು ಅಥವಾ ವ್ಯಕ್ತಿ ಭವಿಷ್ಯದಲ್ಲಿ ಬರಲಿರುವ ಯಾವುದೊ ದೊಡ್ಡ ವಿಷಯವೊಂದನ್ನು ಪ್ರತಿನಿಧಿಸುತ್ತದೆ ಎಂದು ಬೈಬಲ್‌ ಕಲಿಸುವುದಾದರೆ ಮಾತ್ರ ಆ ವಿವರಣೆಯನ್ನು ಒಪ್ಪಬೇಕು. ಶಾಸ್ತ್ರಾಧಾರವೇ ಇಲ್ಲದಿರುವಾಗ ನಾವು ಯಾವುದೇ ಬೈಬಲ್‌ ವೃತ್ತಾಂತಗಳಿಗೆ ಸಾಂಕೇತಿಕ ಅರ್ಥ ಕೊಡಬಾರದು.

ಹಾಗಾದರೆ ಬೈಬಲ್‌ನಲ್ಲಿ ನಾವು ಓದುವ ವಿವರಗಳಿಂದ, ವೃತ್ತಾಂತಗಳಿಂದ ನಮಗೇನು ಪ್ರಯೋಜನ? ಅಪೊಸ್ತಲ ಪೌಲ ಹೀಗೆ ಬರೆದನು: “ಪೂರ್ವದಲ್ಲಿ ಬರೆದಿರುವ ಎಲ್ಲ ವಿಷಯಗಳು ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟವು; ನಮ್ಮ ತಾಳ್ಮೆಯಿಂದಲೂ ಶಾಸ್ತ್ರಗ್ರಂಥದ ಮೂಲಕ ದೊರಕುವ ಸಾಂತ್ವನದಿಂದಲೂ ನಾವು ನಿರೀಕ್ಷೆಯುಳ್ಳವರಾಗುವಂತೆ ಅವು ಬರೆಯಲ್ಪಟ್ಟವು.” (ರೋಮ. 15:4) ಪ್ರಥಮ ಶತಮಾನದಲ್ಲಿದ್ದ ಅಭಿಷಿಕ್ತ ಕ್ರೈಸ್ತರು ಬೈಬಲ್‌ ವೃತ್ತಾಂತಗಳಿಂದ ಹೇಗೆ ಪ್ರಯೋಜನ ಪಡೆಯಬಹುದು ಎಂದು ಹೇಳಲು ಪೌಲನು ಮೇಲಿನ ಮಾತುಗಳನ್ನು ಅವರಿಗೆ ಬರೆದನು. ಅಂದಿನಿಂದ ಇಂದಿನವರೆಗೂ “ಬೇರೆ ಕುರಿಗಳೂ” ಸೇರಿ ಎಲ್ಲಾ ಕ್ರೈಸ್ತರು ಬೈಬಲ್‌ನಲ್ಲಿರುವ ಪಾಠಗಳಿಂದ ಪ್ರಯೋಜನ ಪಡೆದಿದ್ದಾರೆ.—ಯೋಹಾ. 10:16; 2 ತಿಮೊ. 3:1.

ಆದ್ದರಿಂದ ಅನೇಕ ಬೈಬಲ್‌ ವೃತ್ತಾಂತಗಳು ಬರೀ ಅಭಿಷಿಕ್ತರಿಗೆ, ಕೇವಲ “ಬೇರೆ ಕುರಿ”ಗಳಿಗೆ ಅಥವಾ ಹಿಂದಿನ ಕಾಲದ ನಿರ್ದಿಷ್ಟ ಸಮಯದಲ್ಲಿ ಜೀವಿಸಿದ ಕ್ರೈಸ್ತರಿಗೆ ಮಾತ್ರ ಅನ್ವಯಿಸುವುದಿಲ್ಲ. ಬದಲಿಗೆ ಅನೇಕ ಬೈಬಲ್‌ ವೃತ್ತಾಂತಗಳು ಹಿಂದಿದ್ದ ಮತ್ತು ಇಂದಿರುವ ದೇವರ ಎಲ್ಲಾ ಸೇವಕರಿಗೆ ಪ್ರಯೋಜನ ತಂದಿವೆ. ಉದಾಹರಣೆಗೆ, ಯೋಬ ಅನುಭವಿಸಿದ ಕಷ್ಟ ಒಂದನೇ ವಿಶ್ವ ಯುದ್ಧದ ಸಮಯದಲ್ಲಿದ್ದ ಅಭಿಷಿಕ್ತ ಕ್ರೈಸ್ತರಿಗೆ ಮಾತ್ರ ಅನ್ವಯಿಸುತ್ತದೆ ಎಂದಲ್ಲ. ಅಭಿಷಿಕ್ತರು ಮತ್ತು “ಬೇರೆ ಕುರಿ”ಗಳಾದ ದೇವರ ಸೇವಕರಲ್ಲಿ ಅನೇಕರು ಯೋಬನಂಥ ಕಷ್ಟ ಅನುಭವಿಸಿದ್ದಾರೆ ಮತ್ತು ಅವನ ವೃತ್ತಾಂತದಿಂದ ಅವರಿಗೆ ಸಹಾಯವಾಗಿದೆ. “ಯೆಹೋವನು ಅವನಿಗೆ ಕೊಟ್ಟಂಥ ಪ್ರತಿಫಲವನ್ನು ನೋಡಿ, ಯೆಹೋವನು ಕೋಮಲವಾದ ಮಮತೆಯುಳ್ಳವನೂ ಕರುಣಾಳುವೂ ಆಗಿದ್ದಾನೆ” ಎಂಬುದನ್ನು ತಿಳಿದುಕೊಂಡಿದ್ದಾರೆ.—ಯಾಕೋ. 5:11.

ಇಂದು ನಮ್ಮ ಸಭೆಗಳಲ್ಲಿ ದೆಬೋರಳಂತೆ ನಿಷ್ಠಾವಂತರಾಗಿರುವ ನಂಬಿಗಸ್ತ ಸ್ತ್ರೀಯರನ್ನು ನೋಡುತ್ತೇವೆ. ಎಲೀಹುವಿನಂತೆ ವಿವೇಚನೆ ಬಳಸುವ ಯುವ ಹಿರಿಯರು ಇದ್ದಾರೆ. ಯೆಫ್ತಾಹನಂತೆ ಹುರುಪು, ಧೈರ್ಯವಿರುವ ಪಯನೀಯರರು ಇದ್ದಾರೆ. ಯೋಬನಂತೆ ತಾಳ್ಮೆ ತೋರಿಸುವ ನಂಬಿಗಸ್ತ ಸ್ತ್ರೀಪುರುಷರಿದ್ದಾರೆ. “ಪೂರ್ವದಲ್ಲಿ ಬರೆದಿರುವ ಎಲ್ಲಾ ವಿಷಯಗಳು” ನಮಗಿಂದು ಸಿಗುವಂತೆ ಮಾಡಿರುವುದಕ್ಕೆ ನಾವು ಯೆಹೋವನಿಗೆ ಧನ್ಯವಾದ ಹೇಳಬೇಕು. ಏಕೆಂದರೆ ‘ಇವುಗಳಿಂದ ದೊರಕುವ ಸಾಂತ್ವನದಿಂದ ನಾವು ನಿರೀಕ್ಷೆಯುಳ್ಳವರಾಗುತ್ತೇವೆ!’

ಈ ಕಾರಣಗಳಿಂದಾಗಿ ನಾವು ಪ್ರತಿಯೊಂದು ಬೈಬಲ್‌ ವೃತ್ತಾಂತಕ್ಕೆ ಸಾಂಕೇತಿಕ ಅರ್ಥವಿದೆ ಅಥವಾ ಭವಿಷ್ಯದಲ್ಲಿ ನೆರವೇರುವ ಏನೊ ಒಂದು ವಿಷಯ ಇದೆ ಎಂದು ಹುಡುಕಲು ಪ್ರಯತ್ನಿಸುವುದಿಲ್ಲ. ಬದಲಿಗೆ ಈಗ ನಮ್ಮ ಸಾಹಿತ್ಯ ಬೈಬಲ್‌ನಲ್ಲಿರುವ ಪ್ರಾಮುಖ್ಯ ಪಾಠಗಳನ್ನು ಕಲಿಸುವುದಕ್ಕೆ ಹೆಚ್ಚು ಗಮನಕೊಡುತ್ತದೆ.

    ಕನ್ನಡ ಪ್ರಕಾಶನಗಳು (1987-2025)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ