ನಮ್ಮ ಸಂಗ್ರಹಾಲಯ
ಲಕ್ಷಾಂತರ ಜನರ ಗಮನ ಸೆಳೆದ ಸೌಂಡ್ ಕಾರ್
“ ‘ವಾಚ್ ಟವರ್ ಸೌಂಡ್ ಕಾರ್.’ ಬ್ರೆಜಿಲ್‌ನಲ್ಲಿ ಕರ್ತನ ಸೇವೆಗಾಗಿ ಇರುವುದು ಇದೊಂದೇ ಕಾರ್. ಈ ಸೌಂಡ್ ಕಾರ್ ಲಕ್ಷಾಂತರ ಜನರ ಗಮನ ಸೆಳೆದಿದೆ.”—ನತಾನ್ಯೆಲ್ ಎ. ಯೂಲ್, 1938.
ಬ್ರೆಜಿಲ್‌ನಲ್ಲಿ 1930ರ ಸಮಯದಲ್ಲಿ ರಾಜ್ಯದ ಕುರಿತು ಸಾರುವ ಕೆಲಸದಲ್ಲಿ ಪ್ರಗತಿ ತುಂಬ ಕಡಿಮೆಯೇ ಇತ್ತು. 1935ರಲ್ಲಿ ನತಾನ್ಯೆಲ್ ಮತ್ತು ಮಾಡ್ ಯೂಲ್ ಎಂಬ ಪಯನೀಯರರು ಸಾರುವ ಕೆಲಸದ ಮೇಲ್ವಿಚಾರಣೆ ವಹಿಸುತ್ತಿದ್ದ ಜೋಸೆಫ್ ಎಫ್. ರದರ್‌ಫರ್ಡ್‌ರಿಗೆ ಪತ್ರ ಬರೆದರು. ಆ ಪತ್ರದಲ್ಲಿ “ನಾವು ಯಾವುದೇ ಸ್ಥಳಕ್ಕೆ ಬೇಕಾದರೂ ಹೋಗುತ್ತೇವೆ” ಎಂದು ಬರೆದಿದ್ದರು.
ಆಗ, ನತಾನ್ಯೆಲ್‌ರಿಗೆ 62 ವರ್ಷ ವಯಸ್ಸು. ಅವರು ನಿವೃತ್ತ ಸಿವಿಲ್ ಇಂಜಿನಿಯರ್ ಆಗಿದ್ದರು. ಅವರು ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿರುವ ಸ್ಯಾನ್ ಫ್ರಾನ್ಸಿಸ್ಕೊ ಎಂಬಲ್ಲಿ ಯೆಹೋವನ ಸಾಕ್ಷಿಗಳ ಸಭೆಯ ಸರ್ವಿಸ್ ಡೈರೆಕ್ಟರ್ ಆಗಿದ್ದರು. ಅಲ್ಲಿ ಅವರು ಸಾರುವ ಕೆಲಸವನ್ನು ಸಂಘಟಿಸಿದ್ದರು. ಮಾತ್ರವಲ್ಲದೆ, ಸುವಾರ್ತೆ ಸಾರಲು ಸೌಂಡ್ ಸಾಧನಗಳನ್ನು ಸಹ ಬಳಸಿದ್ದರು. ಅವರಿಗಿದ್ದ ಈ ಅನುಭವ ಮತ್ತು ಸಿದ್ಧ ಮನಸ್ಸು ಹೊಸ ನೇಮಕವನ್ನು ಪೂರೈಸಲು ಸಹಾಯ ಮಾಡಿತು. ವಿವಿಧ ಭಾಷೆಗಳಿರುವ ದೊಡ್ಡ ಕ್ಷೇತ್ರವಾದ ಬ್ರೆಜಿಲಿನ ಬ್ರಾಂಚ್ ಸರ್ವೆಂಟ್ ಆಗಿ ಸೇವೆ ಮಾಡುವುದೇ ಆ ಹೊಸ ನೇಮಕವಾಗಿತ್ತು.
1936ರಲ್ಲಿ ನತಾನ್ಯೆಲ್ ಮತ್ತು ಮಾಡ್ ಯೂಲ್ ಬ್ರೆಜಿಲ್‌ಗೆ ಬಂದರು. ಅವರ ಜೊತೆಯಲ್ಲಿ ಪಯನೀಯರ್ ಹಾಗೂ ಅನುವಾದಕರಾಗಿದ್ದ ಆ್ಯಂಟಾನ್ಯೂ ಪಿ. ಆ್ಯನ್‌ಡ್ರಾಡೀ ಸಹ ಬಂದರು. 35 ಫೋನೋಗ್ರಾಫ್‌ಗಳನ್ನು ಮತ್ತು ಒಂದು ಸೌಂಡ್ ಕಾರನ್ನೂ ತಂದರು. ಪ್ರಪಂಚದಲ್ಲೇ 5ನೇ ಅತಿ ದೊಡ್ಡ ದೇಶವಾಗಿರುವ ಬ್ರೆಜಿಲ್‌ನಲ್ಲಿ ಆಗ ಇದ್ದದ್ದು 60 ಮಂದಿ ರಾಜ್ಯ ಪ್ರಚಾರಕರು ಮಾತ್ರ! ಆದರೂ ಈ ಸೌಂಡ್ ಸಾಧನಗಳ ಸಹಾಯದಿಂದ ಕೆಲವೇ ವರ್ಷಗಳಲ್ಲಿ ಲಕ್ಷಾಂತರ ಜನರಿಗೆ ಸುವಾರ್ತೆ ತಿಳಿಸಲು ಸಾಧ್ಯವಾಯಿತು.
ಯೂಲ್ ಸಹೋದರರು ಬ್ರೆಜಿಲ್‌ಗೆ ಬಂದ ಒಂದೇ ತಿಂಗಳಲ್ಲಿ ಅಲ್ಲಿನ ಬ್ರಾಂಚ್ ಆಫೀಸ್ ಸಾವ್ ಪೌಲೂ ಎಂಬಲ್ಲಿ ಮೊದಲ ಸೇವಾ ಅಧಿವೇಶನವನ್ನು ಏರ್ಪಡಿಸಿತು. ಅಲ್ಲಿ ನಡೆಯಲಿದ್ದ ಸಾರ್ವಜನಿಕ ಭಾಷಣದ ಕುರಿತು ಸೌಂಡ್ ಕಾರಿನ ಮೂಲಕ (ಕಾರನ್ನು ಸಹೋದರ ಮಾಡ್ ಓಡಿಸುತ್ತಿದ್ದರು) ಪ್ರಚಾರ ಮಾಡಲಾಯಿತು. ಹೀಗೆ ತಿಳಿಸಿದ್ದರ ಪರಿಣಾಮ 110 ಜನ ಈ ಭಾಷಣಕ್ಕೆ ಹಾಜರಾದರು. ಈ ಅಧಿವೇಶನ ಪ್ರಚಾರಕರಲ್ಲಿ ಹುರುಪು ಮತ್ತು ಭರವಸೆಯನ್ನು ತುಂಬಿಸಿತು. ಅವರು ಕ್ಷೇತ್ರ ಸೇವೆಯನ್ನು ಹೆಚ್ಚಿಸಿದರು. ಸಾಹಿತ್ಯಗಳನ್ನು, ಟೆಸ್ಟಿಮನಿ ಕಾರ್ಡ್‌ಗಳನ್ನು ಮತ್ತು ಫೋನೋಗ್ರಾಫ್ ರೆಕಾರ್ಡಿಂಗ್‌ಗಳನ್ನು ಉಪಯೋಗಿಸಲು ಕಲಿತರು. ಈ ರೆಕಾರ್ಡಿಂಗ್‌ಗಳು ಇಂಗ್ಲಿಷ್, ಜರ್ಮನ್, ಹಂಗೇರಿಯನ್, ಪೋಲಿಷ್, ಸ್ಪ್ಯಾನಿಷ್ ಭಾಷೆಯಲ್ಲಿ ಲಭ್ಯವಿದ್ದವು. ಸ್ವಲ್ಪ ಸಮಯದ ನಂತರ ಪೋರ್ಚುಗೀಸ್ ಭಾಷೆಯಲ್ಲೂ ಲಭ್ಯವಾದವು.
ಈ ಸೌಂಡ್ ಕಾರ್ ಲಕ್ಷಾಂತರ ಜನರ ಗಮನ ಸೆಳೆಯಿತು
1937ರಲ್ಲಿ ಸಾವ್ ಪೌಲೂ, ರಿಯೊ ಡಿ ಜನೈರೊ ಮತ್ತು ಕುರಿಟಿಬ್ಸ್ ಎಂಬ ಸ್ಥಳಗಳಲ್ಲಿ ನಡೆದ ಒಟ್ಟು ಮೂರು ಸೇವಾ ಅಧಿವೇಶನಗಳುa ಸಾರುವ ಕೆಲಸ ಮಾಡುವಂತೆ ಉತ್ತೇಜಿಸಿದವು. ಅಧಿವೇಶನಕ್ಕೆ ಹಾಜರಾದವರು ಸೌಂಡ್ ಕಾರನ್ನು ಬಳಸಿ ಮನೆ-ಮನೆಗೆ ಸುವಾರ್ತೆ ಸಾರಿದರು. ಆಗ ಚಿಕ್ಕ ವಯಸ್ಸಿನಲ್ಲಿದ್ದ ಜೂಝ್ ಮಾಗ್ಲೋವ್‌ಸ್ಕೀ ಎಂಬ ಸಹೋದರನು ಸಮಯಾನಂತರ ಹೀಗೆ ಬರೆದನು: “ನಾವು ಬೈಬಲ್ ಸಾಹಿತ್ಯಗಳನ್ನು ಒಂದು ಸ್ಟ್ಯಾಂಡ್ ಮೇಲೆ ಇಡುತ್ತಿದ್ದೆವು. ಸೌಂಡ್ ಕಾರಿನಲ್ಲಿ ರೆಕಾರ್ಡಿಂಗನ್ನು ಹಾಕುತ್ತಿದ್ದೆವು. ಆಗ ಏನಾಗುತ್ತಿದೆ ಎಂದು ನೋಡಲು ತಮ್ಮ ಮನೆಗಳಿಂದ ಹೊರಬರುತ್ತಿದ್ದ ಜನರೊಂದಿಗೆ ಮಾತಾಡುತ್ತಿದ್ದೆವು.”
ನದಿಗಳಲ್ಲಿ ದೀಕ್ಷಾಸ್ನಾನ ಕೊಡಲಾಯಿತು. ಅಲ್ಲಿಗೆ ಸ್ನಾನ ಮಾಡಲು ಬಂದ ಜನರು ಹತ್ತಿರದಲ್ಲೇ ಬಿಸಿಲು ಕಾಯಿಸಿಕೊಳ್ಳುತ್ತಿದ್ದರು. ಇದರಿಂದ ಅಲ್ಲಿ ಸಹ ಸೌಂಡ್ ಕಾರಿನ ಮೂಲಕ ಸುವಾರ್ತೆಯನ್ನು ಸಾರುವ ಸದವಕಾಶ ಸಿಕ್ಕಿತು. ಸಹೋದರ ರದರ್‌ಫರ್ಡ್‌ರು ನೀಡಿದ ದೀಕ್ಷಾಸ್ನಾನದ ಭಾಷಣ ಧ್ವನಿವರ್ಧಕಗಳಲ್ಲಿ ಮೊಳಗುತ್ತಿತ್ತು. ಆಗ ಜನರು ಕುತೂಹಲದಿಂದ ಕಾರನ್ನು ಸುತ್ತುವರಿದು ಈ ಭಾಷಣವನ್ನು ಪೋರ್ಚುಗೀಸ್ ಭಾಷೆಯಲ್ಲಿ ಅನುವಾದ ಮಾಡುತ್ತಿದ್ದದ್ದನ್ನು ಕೇಳಿಸಿಕೊಂಡರು. ಅಭ್ಯರ್ಥಿಗಳಿಗೆ ದೀಕ್ಷಾಸ್ನಾನ ನೀಡುವಾಗ ಪೋಲಿಷ್ ಭಾಷೆಯಲ್ಲಿ ರಾಜ್ಯ ಗೀತೆಗಳ ರೆಕಾರ್ಡಿಂಗನ್ನು ಹಾಕಲಾಗಿತ್ತು. ಅದರ ಜೊತೆಯಲ್ಲಿ ಸಹೋದರ ಸಹೋದರಿಯರು ಬೇರೆ ಬೇರೆ ಭಾಷೆಗಳಲ್ಲಿ ಈ ಗೀತೆಗಳನ್ನು ಹಾಡಿದರು. “ಈ ಘಟನೆ ಪಂಚಾಶತ್ತಮ ದಿನದಂದು ಪ್ರತಿಯೊಬ್ಬನು ತನ್ನ ಸ್ವಂತ ಭಾಷೆಯಲ್ಲಿ ಕೇಳಿಸಿಕೊಂಡದ್ದನ್ನು ನೆನಪಿಸಿತು” ಎಂದು 1938ರ ಯಿಯರ್ ಬುಕ್ ತಿಳಿಸುತ್ತದೆ.
ಅಧಿವೇಶನದ ನಂತರ ಮಳೆ, ಬಿಸಿಲೆನ್ನದೆ ಪ್ರತಿ ಭಾನುವಾರಗಳಂದು ಸೌಂಡ್ ಕಾರಿನ ಮೂಲಕ ಜನರಿದ್ದಲ್ಲಿಗೆ ಹೋಗಿ ಬೈಬಲ್ ಭಾಷಣಗಳ ರೆಕಾರ್ಡಿಂಗನ್ನು ಹಾಕಲಾಗುತ್ತಿತ್ತು. ಸಾವ್ ಪೌಲೂ ನಗರ ಮತ್ತು ಅದರ ಹತ್ತಿರದ ನಗರಗಳಲ್ಲಿದ್ದ ಪಾರ್ಕ್‌ಗಳಲ್ಲಿ, ಮನೆಗಳಿರುವ ಸ್ಥಳಗಳಲ್ಲಿ ಮತ್ತು ಕಾರ್ಖಾನೆಗಳ ಹತ್ತಿರ ಇದನ್ನು ಹಾಕಲಾಗುತ್ತಿತ್ತು. ಸಾವ್ ಪೌಲೂ ನಗರದಿಂದ 60 ಮೈಲಿ (97 ಕಿ.ಮೀ.) ದೂರದಲ್ಲಿ ವಾಯುವ್ಯ ದಿಕ್ಕಿನಲ್ಲಿದ್ದ 3,000 ಕುಷ್ಠರೋಗಿಗಳಿರುವ ಕಾಲೋನಿಗೆ ಸೌಂಡ್ ಕಾರಿನಲ್ಲಿ ಹೋಗಿ ಪ್ರತಿ ತಿಂಗಳು ಕಾರ್ಯಕ್ರಮವನ್ನು ಹಾಕಲಾಗುತ್ತಿತ್ತು. ಸಮಯಾನಂತರ ಇಲ್ಲಿ ಒಂದು ದೊಡ್ಡ ಸಭೆ ಆರಂಭವಾಯಿತು. ಇಲ್ಲಿನ ರಾಜ್ಯ ಪ್ರಚಾರಕರು ಕುಷ್ಠರೋಗಿಗಳ ಇನ್ನೊಂದು ಕಾಲೋನಿಗೆ ಹೋಗಿ ಸಾರಲು ಅನುಮತಿ ಪಡೆದರು. ವಿಪರೀತ ನೋವನ್ನು ಅನುಭವಿಸುತ್ತಿದ್ದರೂ ಅವರು ಬೈಬಲಿನ ಸಾಂತ್ವನದ ಸಂದೇಶವನ್ನು ಸಾರಿದರು.
1938ರ ಕೊನೆಯ ಭಾಗದಷ್ಟಕ್ಕೆ ರೆಕಾರ್ಡಿಂಗ್‌ಗಳು ಪೋರ್ಚುಗೀಸ್ ಭಾಷೆಯಲ್ಲಿ ಲಭ್ಯವಾದವು. ಸಮಾಧಿಗಳ ಹಬ್ಬದ ದಿನ ಸೌಂಡ್ ಕಾರಿನಲ್ಲಿ ಒಂದು ಸ್ಮಶಾನದಿಂದ ಇನ್ನೊಂದಕ್ಕೆ ಹೋಗಿ “ವೇರ್ ಆರ್ ದ ಡೆಡ್?,” “ಜೆಹೋವ” ಮತ್ತು “ರಿಚಸ್” ಎಂಬ ರೆಕಾರ್ಡಿಂಗ್‌ಗಳನ್ನು ಹಾಕಿದರು. ಇದರಿಂದ 40,000ಕ್ಕೂ ಹೆಚ್ಚಿನ ದುಃಖಿತರಿಗೆ ಈ ರೆಕಾರ್ಡಿಂಗ್‌ಗಳನ್ನು ಕೇಳಿಸಿಕೊಳ್ಳಲು ಸಾಧ್ಯವಾಯಿತು.
ಬೈಬಲ್ ಸತ್ಯವನ್ನು ಸಾರ್ವಜನಿಕವಾಗಿ ಪ್ರಕಟಿಸುವುದನ್ನು ನೋಡಿ ಪಾದ್ರಿಗಳು ಕೋಪಗೊಂಡರು. ಸೌಂಡ್ ಕಾರ್ ರೆಕಾರ್ಡಿಂಗನ್ನು ನಿಲ್ಲಿಸುವಂತೆ ಸ್ಥಳೀಯ ಅಧಿಕಾರಿಗಳ ಮೇಲೆ ಅವರು ಅನೇಕ ಸಲ ಒತ್ತಡ ಹಾಕಿದರು. ಇಂತಹ ಒಂದು ಸಂದರ್ಭದಲ್ಲಿ ಏನಾಯಿತೆಂದು ಸಹೋದರಿ ಯೂಲ್ ತಿಳಿಸುತ್ತಾರೆ. ‘ಒಮ್ಮೆ ಸ್ಥಳೀಯ ಪಾದ್ರಿಯೊಬ್ಬನು ಸೌಂಡ್ ಕಾರಿಗೆ ಮುತ್ತಿಗೆ ಹಾಕುವಂತೆ ಜನರ ಗುಂಪನ್ನು ಪ್ರಚೋದಿಸಿದನು. ಆದರೆ ಅಲ್ಲಿಗೆ ಆ ನಗರದ ಅಧ್ಯಕ್ಷ ಮತ್ತು ಪೊಲೀಸ್ ಅಧಿಕಾರಿಗಳು ಬಂದು ಪೂರ್ತಿ ಕಾರ್ಯಕ್ರಮವನ್ನು ಕೇಳಿಸಿಕೊಂಡರು. ಅಷ್ಟೇ ಅಲ್ಲದೆ, ನಗರಾಧ್ಯಕ್ಷನು ಬೈಬಲ್ ಸಾಹಿತ್ಯಗಳನ್ನು ಸಹ ಪಡೆದುಕೊಂಡನು. ಆ ದಿನ ಯಾವುದೇ ದಂಗೆ ಅಥವಾ ದೊಂಬಿ ನಡೆಯಲಿಲ್ಲ.’ ಇಷ್ಟೆಲ್ಲಾ ವಿರೋಧವಿದ್ದರೂ, 1939ನೇ ವರ್ಷ “ಮಹಾನ್ ದೇವರ ಸೇವೆ ಮಾಡಲು ಮತ್ತು ಆತನ ಹೆಸರನ್ನು ಪ್ರಕಟಿಸಲು ಅತ್ಯುತ್ತಮ ಸಮಯ” ಎಂದು 1940ರ ಯಿಯರ್ ಬುಕ್ ಬ್ರೆಜಿಲ್ ದೇಶದ ವರದಿಯಲ್ಲಿ ತಿಳಿಸಿತು.
“ದ ವಾಚ್ ಟವರ್ ಸೌಂಡ್ ಕಾರ್” ಬಂದದ್ದರಿಂದ ಬ್ರೆಜಿಲ್‌ನಲ್ಲಿ ಸಾರುವ ಕೆಲಸದಲ್ಲಿ ನಿಜವಾಗಿಯೂ ಮಹತ್ತರ ಬದಲಾವಣೆ ಆಯಿತು. ರಾಜ್ಯ ಸಂದೇಶವನ್ನು ಲಕ್ಷಾಂತರ ಜನರಿಗೆ ತಿಳಿಸುವುದರಲ್ಲಿ ಇದು ಪ್ರಾಮುಖ್ಯ ಪಾತ್ರ ವಹಿಸಿತು. 1941ರಲ್ಲಿ ಆ ಕಾರನ್ನು ಮಾರಲಾಯಿತು. ಆದರೂ ಬ್ರೆಜಿಲ್‌ನಲ್ಲಿ ಲಕ್ಷಾಂತರ ಯೆಹೋವನ ಸಾಕ್ಷಿಗಳು ಪ್ರಾಮಾಣಿಕ ಜನರಿಗೆ ಸುವಾರ್ತೆ ಸಾರುವುದನ್ನು ಮುಂದುವರಿಸಿದ್ದಾರೆ.—ಬ್ರೆಜಿಲ್‌ನಲ್ಲಿರುವ ನಮ್ಮ ಸಂಗ್ರಹಾಲಯದಿಂದ.
a ಈ ಅಧಿವೇಶನಗಳಲ್ಲಿ ಸಹೋದರ ಸಹೋದರಿಯರು ಸುವಾರ್ತೆ ಸಾರಲು ಹೋಗುತ್ತಿದ್ದರು.