ವಾಚ್‌ಟವರ್ ಆನ್‌ಲೈನ್ ಲೈಬ್ರರಿ
ವಾಚ್‌ಟವರ್
ಆನ್‌ಲೈನ್ ಲೈಬ್ರರಿ
ಕನ್ನಡ
  • ಬೈಬಲ್
  • ಪ್ರಕಾಶನಗಳು
  • ಕೂಟಗಳು
  • w18 ಫೆಬ್ರವರಿ ಪು. 31-32
  • ಐರ್ಲೆಂಡಿನಲ್ಲಿ ಸುವಾರ್ತೆ ಹಬ್ಬಲು ಸಹಾಯ ಮಾಡಿದ ಸಾರ್ವಜನಿಕ ಭಾಷಣಗಳು

ಈ ಆಯ್ಕೆಗೆ ಯಾವುದೇ ವಿಡಿಯೋ ಲಭ್ಯವಿಲ್ಲ.

ಕ್ಷಮಿಸಿ, ವಿಡಿಯೋ ಲೋಡ್ ಮಾಡುವಾಗ ತೊಂದರೆ ಆಗಿದೆ.

  • ಐರ್ಲೆಂಡಿನಲ್ಲಿ ಸುವಾರ್ತೆ ಹಬ್ಬಲು ಸಹಾಯ ಮಾಡಿದ ಸಾರ್ವಜನಿಕ ಭಾಷಣಗಳು
  • ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
ಕಾವಲಿನಬುರುಜು ಯೆಹೋವನ ರಾಜ್ಯವನ್ನು ಪ್ರಕಟಿಸುವುದು (ಅಧ್ಯಯನ)—2018
w18 ಫೆಬ್ರವರಿ ಪು. 31-32
ಲೂಸಿಟೇನಿಯ ಹಡಗಿನಲ್ಲಿ ಸಹೋದರ ರಸಲ್‌

ನಮ್ಮ ಸಂಗ್ರಹಾಲಯ

ಐರ್ಲೆಂಡಿನಲ್ಲಿ ಸುವಾರ್ತೆ ಹಬ್ಬಲು ಸಹಾಯ ಮಾಡಿದ ಸಾರ್ವಜನಿಕ ಭಾಷಣಗಳು

ಅದು ಮೇ, 1910. ಬೆಲ್‌ಫಾಸ್ಟ್‌ ಲಾಕ್‌ ಎಂಬಲ್ಲಿ ಒಂದು ಮೋಟಾರು ಬೋಟು ಹೊಗೆ ಎಬ್ಬಿಸುತ್ತಾ ಬರುತ್ತಿತ್ತು. ಆ ದೋಣಿಯಲ್ಲಿದ್ದ ಪ್ರಯಾಣಿಕರ ಒಂದು ಚಿಕ್ಕ ಗುಂಪು, ಆ ಸ್ಥಳದಲ್ಲಿದ್ದ ಹಸಿರು ಬೆಟ್ಟಗಳನ್ನು ಮುಂಜಾನೆಯ ಸೂರ್ಯನ ಕಿರಣಗಳು ಸ್ಪರ್ಶಿಸುತ್ತಿರುವ ದೃಶ್ಯವನ್ನು ಕಣ್ತುಂಬಿಕೊಂಡಿತು. ಆ ಗುಂಪಿನಲ್ಲಿ ಚಾರ್ಲ್ಸ್‌ ಟೇಸ್‌ ರಸಲ್‌ ಕೂಡ ಇದ್ದರು. ಐರ್ಲೆಂಡಿಗೆ ಇದು ಅವರ ಐದನೆಯ ಪ್ರಯಾಣವಾಗಿತ್ತು. ಹೀಗೆ ಬಂದರಿನ ಕಡೆಗೆ ಬರುತ್ತಿರುವಾಗ ಎರಡು ಬೃಹತ್‌ ಹಡಗುಗಳು ತಯಾರಾಗುತ್ತಿರುವುದು ಇವರಿಗೆ ಕಾಣಿಸಿತು. ಅವುಗಳಲ್ಲಿ ಒಂದು ಮುಂದೆ ದುರಂತಕ್ಕೀಡಾದ ಟೈಟಾನಿಕ್‌, ಇನ್ನೊಂದು ಅದರ ಜೊತೆ ಹಡಗಾದ ಒಲಿಂಪಿಕ್‌.a ಬಂದರಿನಲ್ಲಿ ಅನೇಕ ಬೈಬಲ್‌ ವಿದ್ಯಾರ್ಥಿಗಳು ಸಹೋದರ ರಸಲ್‌ರನ್ನು ಸ್ವಾಗತಿಸಲು ಕಾಯುತ್ತಿದ್ದರು.

ಸುಮಾರು 20 ವರ್ಷಗಳ ಹಿಂದೆ ಸುವಾರ್ತೆ ಲೋಕವ್ಯಾಪಕವಾಗಿ ಎಲ್ಲ ಕಡೆ ತಲುಪಲು ಅತ್ಯುತ್ತಮ ವಿಧವನ್ನು ಕಂಡುಕೊಳ್ಳುವ ಉದ್ದೇಶದಿಂದ ಸಹೋದರ ರಸಲ್‌ ಬೇರೆ ಬೇರೆ ದೇಶಗಳಿಗೆ ಭೇಟಿ ಮಾಡಲು ಯೋಜನೆ ಮಾಡಿದರು. ಜುಲೈ 1891​ರಂದು ಅವರು ಮೊದಲು ಭೇಟಿ ಮಾಡಿದ್ದೇ ಐರ್ಲೆಂಡಿಗೆ. ಸಿಟಿ ಆಫ್‌ ಶಿಕಾಗೊ ಹಡಗಿನಲ್ಲಿದ್ದ ಅವರಿಗೆ ಕ್ವೀನ್ಸ್‌ಟೌನ್‌ ಕರಾವಳಿ ತೀರದಲ್ಲಿ ಸೂರ್ಯಾಸ್ತಮಾನವನ್ನು ನೋಡಿದಾಗ ತನ್ನ ಹೆತ್ತವರು ತಮ್ಮ ತಾಯ್ನಾಡಿನ ಬಗ್ಗೆ ಹೇಳುತ್ತಿದ್ದ ವಿಷಯಗಳು ನೆನಪಾಗಿರಬಹುದು. ಅಚ್ಚುಕಟ್ಟಾಗಿದ್ದ ಪಟ್ಟಣಗಳನ್ನು, ಕಣ್ಸೆಳೆಯುವಂತಿದ್ದ ಗ್ರಾಮಾಂತರ ಪ್ರದೇಶಗಳನ್ನು ದಾಟಿಹೋಗುತ್ತಿದ್ದಾಗ ಆ ಹಡಗಿನಲ್ಲಿದ್ದ ಸಹೋದರ ರಸಲ್‌ಗೆ ಮತ್ತು ಅವರ ಜೊತೆ ಪ್ರಯಾಣಿಸುತ್ತಿದ್ದವರಿಗೆ ತಮಗೆ ಕಾಣಿಸುತ್ತಿದ್ದ ಪ್ರದೇಶಗಳು “ಕೊಯ್ಲಿಗಾಗಿ ಸಿದ್ಧವಾಗಿ ಕಾಯುತ್ತಿವೆ” ಎಂದು ಅನಿಸಿತು.

ಸಹೋದರ ರಸಲ್‌ ಒಟ್ಟು ಏಳು ಸಾರಿ ಐರ್ಲೆಂಡಿಗೆ ಭೇಟಿ ಮಾಡಿದರು. ಮೊದಲ ಭೇಟಿ ಆಸಕ್ತಿ ಹೆಚ್ಚಿಸಿದ್ದರಿಂದ ನಂತರದ ಭೇಟಿಗಳಲ್ಲಿ ಅವರು ಕೊಟ್ಟ ಭಾಷಣಗಳಿಗೆ ನೂರಾರು, ಕೆಲವೊಮ್ಮೆ ಸಾವಿರಾರು ಜನರು ಒಟ್ಟುಗೂಡಿ ಬಂದರು. ಮೇ 1903​ರಲ್ಲಿ ಅವರು ಐರ್ಲೆಂಡಿಗೆ ಎರಡನೆಯ ಸಾರಿ ಭೇಟಿ ಮಾಡಲಿದ್ದಾಗ, ಬೆಲ್‌ಫಾಸ್ಟ್‌ ಮತ್ತು ಡಬ್ಲಿನ್‌ನಲ್ಲಿ ಅವರು ಕೊಡಲಿದ್ದ ಸಾರ್ವಜನಿಕ ಭಾಷಣಗಳ ಬಗ್ಗೆ ಅಲ್ಲಿನ ಸ್ಥಳೀಯ ವಾರ್ತಾಪತ್ರಿಕೆಗಳಲ್ಲಿ ಪ್ರಕಟಿಸಲಾಯಿತು. ಸಹೋದರ ರಸಲ್‌ “ಪ್ರಮಾಣೀಕೃತ ವಾಗ್ದಾನ” ಎಂಬ ಭಾಷಣದಲ್ಲಿ ಅಬ್ರಹಾಮನ ನಂಬಿಕೆ ಮತ್ತು ದೇವರು ಮಾನವಕುಲಕ್ಕೆ ಮುಂದೆ ಕೊಡಲಿರುವ ಆಶೀರ್ವಾದಗಳ ಬಗ್ಗೆ ಮಾತಾಡಿದರು. ಇದನ್ನು ಸಭಿಕರೆಲ್ಲರೂ ಮೈಯೆಲ್ಲ ಕಿವಿಯಾಗಿಸಿ ಕೇಳಿಸಿಕೊಂಡಿದ್ದನ್ನು ಸಹೋದರ ರಸಲ್‌ ನಂತರ ಹೇಳಿದರು.

ಐರ್ಲೆಂಡಿನಲ್ಲಿ ತುಂಬ ಜನ ಆಸಕ್ತಿ ತೋರಿಸಿದ್ದರಿಂದ ರಸಲ್‌ ಮೂರನೆಯ ಸಾರಿ ಯೂರೋಪಿಗೆ ಭೇಟಿ ಮಾಡುವಾಗ ಐರ್ಲೆಂಡಿಗೂ ಭೇಟಿ ಮಾಡಲು ನಿರ್ಧರಿಸಿದರು. 1908​ರ ಏಪ್ರಿಲ್‌ನ ಒಂದು ಬೆಳಿಗ್ಗೆ ಬೆಲ್‌ಫಾಸ್ಟ್‌ಗೆ ಬಂದಿಳಿದಾಗ ಇವರನ್ನು ಸ್ವಾಗತಿಸಲು ಐದು ಸಹೋದರರು ಬಂದಿದ್ದರು. ಆ ಭೇಟಿಯಲ್ಲಿ ಸಹೋದರ ರಸಲ್‌ ಕೊಡಲಿದ್ದ “ಸೈತಾನನ ಸಾಮ್ರಾಜ್ಯದ ಪತನ” ಎಂಬ ಸಾರ್ವಜನಿಕ ಭಾಷಣದ ಬಗ್ಗೆ ಮೊದಲೇ ಪ್ರಕಟಿಸಲಾಗಿತ್ತು. ಆ ಸಂಜೆ ಬೈಬಲ್‌ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಇದ್ದ 300 ಮಂದಿ ಭಾಷಣಕ್ಕೆ ಕೂಡಿಬಂದರು. ಅವರಲ್ಲಿ ಒಬ್ಬನು ಕೇಳಿದ ಪ್ರಶ್ನೆಗಳಿಗೆ ವಚನಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿ ತಕ್ಷಣವೇ ಉತ್ತರ ಕೊಡಲಾಯಿತು. ಡಬ್ಲಿನ್‌ನಲ್ಲಂತೂ ವೈ.ಎಮ್‌.ಸಿ.ಎ. ಕಾರ್ಯದರ್ಶಿಯಾಗಿದ್ದ ಒಕಾನರ್‌ ತುಂಬ ವಿರೋಧ ತೋರಿಸಿದರು. ಅವರು ಕೂಡಿಬಂದಿದ್ದ 1,000ಕ್ಕಿಂತ ಹೆಚ್ಚು ಜನರನ್ನು ಬೈಬಲ್‌ ವಿದ್ಯಾರ್ಥಿಗಳ ವಿರುದ್ಧ ತಿರುಗಿ ಬೀಳುವಂತೆ ಮಾಡಲು ಪ್ರಯತ್ನಿಸಿದರು. ಆಗ ಏನಾಯಿತು ಗೊತ್ತಾ?

ಆಗ ಏನಾಗಿರಬಹುದೆಂದು ಚಿತ್ರಿಸಿಕೊಳ್ಳಲು ಪ್ರಯತ್ನಿಸೋಣ. ದಿ ಐರಿಷ್‌ ಟೈಮ್ಸ್‌ ವಾರ್ತಾಪತ್ರಿಕೆಯಲ್ಲಿ ಪ್ರಕಟವಾಗಿದ್ದ ಸಾರ್ವಜನಿಕ ಭಾಷಣದ ಜಾಹೀರಾತನ್ನು ನೋಡಿ ಬೈಬಲ್‌ ಸತ್ಯಗಳನ್ನು ತಿಳಿದುಕೊಳ್ಳಲು ಆಸಕ್ತಿ ಇರುವ ಒಬ್ಬ ವ್ಯಕ್ತಿಯು ಅದಕ್ಕೆ ಹಾಜರಾಗಲು ತೀರ್ಮಾನಿಸುತ್ತಾನೆ. ಜನಜಂಗುಳಿಯಿಂದ ಕೂಡಿದ್ದ ಸಭಾಂಗಣಕ್ಕೆ ಹೋಗುತ್ತಾನೆ. ಅಂತೂಇಂತೂ ಅವನಿಗೆ ಒಂದು ಸೀಟು ಸಿಗುತ್ತದೆ. ಉದ್ದವಾದ ಕಪ್ಪುಕೋಟನ್ನು ಧರಿಸಿರುವ, ಬಿಳಿಕೂದಲು ಮತ್ತು ಗಡ್ಡ ಬಿಟ್ಟಿರುವ ಭಾಷಣಗಾರನು ಹೇಳುವಂಥ ವಿಷಯಗಳನ್ನು ಕಿವಿಗೊಟ್ಟು ಕೇಳುತ್ತಾನೆ. ಭಾಷಣಗಾರನು ವೇದಿಕೆಯ ಒಂದು ಕಡೆಯಿಂದ ಇನ್ನೊಂದು ಕಡೆಗೆ ನಡೆದಾಡುತ್ತಾ, ಸನ್ನೆಗಳನ್ನು ಮಾಡುತ್ತಾ, ಒಂದಾದ ನಂತರ ಒಂದು ವಚನಗಳನ್ನು ತೋರಿಸುತ್ತಾ ಭಾಷಣ ನೀಡುತ್ತಾರೆ. ಬೈಬಲ್‌ ಸತ್ಯಗಳನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಇದು ಆ ವ್ಯಕ್ತಿಗೆ ಸಹಾಯ ಮಾಡುತ್ತಿದೆ. ಅಲ್ಲಿ ಯಾವುದೇ ಧ್ವನಿವರ್ಧಕಗಳು ಇಲ್ಲದಿದ್ದರೂ ಆ ಭಾಷಣಗಾರನ ಧ್ವನಿ ಸಭಾಂಗಣದ ಎಲ್ಲ ಕಡೆಯೂ ಮುಟ್ಟುತ್ತಿದೆ. ಒಂದೂವರೆ ಗಂಟೆ ಇದ್ದ ಆ ಭಾಷಣವು ಸಭಿಕರ ಗಮನವನ್ನು ಆಚೀಚೆ ಹೋಗದಂತೆ ಹಿಡಿದಿಟ್ಟಿದೆ. ನಂತರ, ಪ್ರಶ್ನೋತ್ತರ ಚರ್ಚೆಯಲ್ಲಿ ಆ ಭಾಷಣಗಾರನಿಗೆ ಒಕಾನರ್‌ ಮತ್ತು ಅವರ ಸ್ನೇಹಿತರು ಅನೇಕ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆಲ್ಲ ಭಾಷಣಗಾರ ಬೈಬಲಿನಿಂದ ಉತ್ತರ ಕೊಡುತ್ತಾರೆ. ಭಾಷಣಗಾರನ ಉತ್ತರಗಳನ್ನು ತಾವೂ ಒಪ್ಪುತ್ತೇವೆಂದು ಚಪ್ಪಾಳೆ ಹೊಡೆಯುವ ಮೂಲಕ ಸಭಿಕರು ತೋರಿಸುತ್ತಾರೆ. ಕೂಟ ಮುಗಿದ ಮೇಲೆ ಆ ಆಸಕ್ತ ವ್ಯಕ್ತಿ ಸಹೋದರರ ಹತ್ತಿರ ಬಂದು ಇನ್ನೂ ಹೆಚ್ಚನ್ನು ಕಲಿಯಬೇಕೆಂದು ತಿಳಿಸುತ್ತಾನೆ. ಅನೇಕರು ಈ ರೀತಿ ಸತ್ಯ ಕಲಿತರು ಎಂದು ಅಲ್ಲಿ ಹಾಜರಿದ್ದ ಸಹೋದರ ಸಹೋದರಿಯರು ತಿಳಿಸಿದ್ದಾರೆ.

1909​ರ ಮೇ ತಿಂಗಳಲ್ಲಿ ಸಹೋದರ ರಸಲ್‌ ನ್ಯೂಯಾರ್ಕಿನಿಂದ ಐರ್ಲೆಂಡಿಗೆ ಮಾರಟೇನೀಯ ಹಡಗಿನಲ್ಲಿ ನಾಲ್ಕನೆಯ ಭೇಟಿ ಮಾಡಲು ಹೋದರು. ಆಗ ತಮ್ಮ ಜೊತೆ ಟೈಪಿಸ್ಟ್‌ ಆಗಿದ್ದ ಸಹೋದರ ಹಂಟ್‌ಸಿಂಗರನ್ನು ಕರೆದುಕೊಂಡು ಹೋದರು. ಪ್ರಯಾಣ ಮಾಡುವ ಸಮಯದಲ್ಲಿ ಕಾವಲಿನ ಬುರುಜು ಲೇಖನಗಳಲ್ಲಿ ಬರಬೇಕಾದ ಮಾಹಿತಿಯನ್ನು ಹೇಳುವಾಗ ಆ ಸಹೋದರ ಅದನ್ನು ಬರೆದುಕೊಳ್ಳಲು ಸಾಧ್ಯವಾಯಿತು. ಬೆಲ್‌ಫಾಸ್ಟ್‌ನಲ್ಲಿ ಸಹೋದರ ರಸಲ್‌ ಕೊಟ್ಟ ಭಾಷಣಕ್ಕೆ 450 ಸ್ಥಳೀಯರು ಹಾಜರಾದರು. ಅದರಲ್ಲಿ ಸುಮಾರು 100 ಜನ ಜಾಗ ಇಲ್ಲದೇ ನಿಂತುಕೊಳ್ಳಬೇಕಾಗಿ ಬಂತು.

ಲೂಸಿಟೇನಿಯ ಹಡಗಿನಲ್ಲಿ ಸಹೋದರ ರಸಲ್‌

ಲೂಸಿಟೇನಿಯ ಹಡಗಿನಲ್ಲಿ ಸಹೋದರ ಸಿ. ಟಿ. ರಸಲ್‌

ಆರಂಭದಲ್ಲಿ ತಿಳಿಸಲಾದ ಐದನೆಯ ಭೇಟಿಯಲ್ಲೂ ವಿರೋಧಿಗಳು ಕೇಳಿದ ಪ್ರಶ್ನೆಗಳಿಗೆ ಸಹೋದರ ರಸಲ್‌ ಬೈಬಲಿನಿಂದ ಉತ್ತರ ಕೊಟ್ಟರು. ಡಬ್ಲಿನ್‌ನಲ್ಲಿ ಸಾರ್ವಜನಿಕ ಭಾಷಣ ಕೊಟ್ಟ ಮೇಲೆ, ಒಕಾನರ್‌ ಜೊತೆ ಬಂದಿದ್ದ ಹೆಸರುವಾಸಿ ವಿದ್ವಾಂಸರೊಬ್ಬರು ಕೇಳಿದ ಪ್ರಶ್ನೆಗಳಿಗೂ ಬೈಬಲಿನಿಂದ ಉತ್ತರ ಕೊಡಲಾಯಿತು. ಸಭಿಕರು ಈ ಚರ್ಚೆಯನ್ನು ತುಂಬ ಆನಂದಿಸಿದರು. ಮಾರನೆಯ ದಿನ, ಅಮೆರಿಕದಿಂದ ಬಂದಿದ್ದ ಸಹೋದರರು ಒಂದು ದೋಣಿಯಲ್ಲಿ ಲಿವರ್‌ಪೂಲ್‌ಗೆ ಹೋಗಿ ಲೂಸಿಟೇನಿಯ ಎಂಬ ಪ್ರಸಿದ್ಧ ಹಡಗನ್ನು ಹತ್ತಿ ನ್ಯೂಯಾರ್ಕಿಗೆ ಹೋದರು.b

ದಿ ಐರಿಷ್‌ಟೈಮ್ಸ್‌ ವಾರ್ತಾಪತ್ರಿಕೆಯಲ್ಲಿ ಸಹೋದರ ರಸಲ್‌ ಕೊಡಲಿದ್ದ ಸಾರ್ವಜನಿಕ ಭಾಷಣದ ಪ್ರಕಟಣೆ

ಮೇ 20, 1910​ರ ದಿ ಐರಿಷ್‌ ಟೈಮ್ಸ್‌ನಲ್ಲಿ ಸಾರ್ವಜನಿಕ ಭಾಷಣದ ಪ್ರಕಟಣೆ

1911​ರಲ್ಲಿ ಮಾಡಿದ ಆರನೆಯ ಮತ್ತು ಏಳನೆಯ ಭೇಟಿಗಳಲ್ಲಿ ಸಹೋದರ ರಸಲ್‌ ಕೊಡಲಿದ್ದ ಸಾರ್ವಜನಿಕ ಭಾಷಣಗಳ ಬಗ್ಗೆಯೂ ಮೊದಲೇ ಪ್ರಕಟಿಸಲಾಗಿತ್ತು. ಆರನೆಯ ಭೇಟಿಯಲ್ಲಿ ಕೊಟ್ಟ “ಸಾವಿನ ನಂತರ” ಎಂಬ ಭಾಷಣಕ್ಕೆ ಬೆಲ್‌ಫಾಸ್ಟ್‌ನಲ್ಲಿ 2000 ಮಂದಿ ಹಾಜರಾದರು. ಅವರನ್ನು 20 ಬೈಬಲ್‌ ವಿದ್ಯಾರ್ಥಿಗಳು ಸ್ವಾಗತಿಸಿದರು. ಒಕಾನರ್‌ ಇನ್ನೊಬ್ಬ ವಿದ್ವಾಂಸರ ಜೊತೆ ಡಬ್ಲಿನ್‌ನಲ್ಲಿ ಮತ್ತೆ ಕಾಣಿಸಿಕೊಂಡರು. ಅಲ್ಲೂ ಸಹ ಅವರು ಕೇಳಿದ ಪ್ರಶ್ನೆಗಳಿಗೆ ಬೈಬಲಿನಿಂದಲೇ ಉತ್ತರ ಕೊಡಲಾಯಿತು. ಸಭಿಕರು ಆ ಉತ್ತರಗಳನ್ನು ಮೆಚ್ಚಿ ಚಪ್ಪಾಳೆ ಹೊಡೆದರು. ಏಳನೆಯ ಭೇಟಿಯಲ್ಲಿ ಸಹೋದರ ರಸಲ್‌ ಬೇರೆ ಪಟ್ಟಣಗಳಿಗೆ ಹೋದರು. ಅಲ್ಲಿ ಸಹ ಜನರು ಹೆಚ್ಚಿನ ಸಂಖ್ಯೆಯಲ್ಲಿ ಹಾಜರಾದರು. ಡಬ್ಲಿನ್‌ನಲ್ಲಿ ನಡೆಯುತ್ತಿದ್ದ ಕೂಟವನ್ನು ನಿಲ್ಲಿಸಲು ಒಕಾನರ್‌ 100 ರೌಡಿಗಳನ್ನು ಕರೆದುಕೊಂಡು ಬಂದಿದ್ದರು. ಆದರೆ ಸಭಿಕರು ಭಾಷಣಗಾರರನ್ನೇ ಬೆಂಬಲಿಸಿದರು.

ಆ ಸಮಯದಲ್ಲಿ ಸಹೋದರ ರಸಲ್‌ ಸಾರ್ವಜನಿಕ ಭಾಷಣಗಳನ್ನು ಕೊಡಲು ಮುಂದಾಳತ್ವ ವಹಿಸಿದರೂ ಒಂದು ವಿಷಯವನ್ನು ಅರ್ಥಮಾಡಿಕೊಂಡರು. ಅದೇನೆಂದರೆ “ಯಾವೊಬ್ಬ ಮನುಷ್ಯನನ್ನು ನಂಬಿಕೊಂಡು ಈ ಕೆಲಸ ನಡೆಯುತ್ತಿಲ್ಲ.” ಏಕೆಂದರೆ “ಇದು ಮನುಷ್ಯನ ಕೆಲಸವಲ್ಲ, ದೇವರ ಕೆಲಸ.” ವಾರ್ತಾಪತ್ರಿಕೆಗಳಲ್ಲಿ ಪ್ರಕಟಿಸಿ ನಂತರ ಕೊಡಲಾದ ಸಾರ್ವಜನಿಕ ಭಾಷಣಗಳ ಮೂಲಕ ಬೈಬಲ್‌ ಸತ್ಯಗಳನ್ನು ಕಲಿಸಲು ಒಳ್ಳೇ ಅವಕಾಶ ಸಿಕ್ಕಿತು. ಇದನ್ನು ಈಗ ಸಾರ್ವಜನಿಕ ಕೂಟ ಎಂದು ಕರೆಯಲಾಗುತ್ತದೆ. ಆಗ ಕೊಡಲಾದ ಭಾಷಣಗಳ ಮೂಲಕ ಸುವಾರ್ತೆಯನ್ನು ಹಬ್ಬಿಸಲು ಸಾಧ್ಯವಾಯಿತು ಮತ್ತು ಐರ್ಲೆಂಡಿನ ಅನೇಕ ಕಡೆಗಳಲ್ಲಿ ಸಭೆಗಳನ್ನು ಸ್ಥಾಪಿಸಲಾಯಿತು.—ಬ್ರಿಟನ್‌ನಲ್ಲಿರುವ ನಮ್ಮ ಸಂಗ್ರಹಾಲಯದಿಂದ.

a ಇದಾಗಿ ಎರಡು ವರ್ಷಗಳಲ್ಲಿ ಟೈಟಾನಿಕ್‌ ಮುಳುಗಿಹೋಯಿತು.

b ಮೇ 1915​ರಲ್ಲಿ ಲೂಸಿಟೇನಿಯ ಹಡಗು ಐರ್ಲೆಂಡಿನ ದಕ್ಷಿಣ ಕರಾವಳಿಯ ಆಚೆ ಮುಳುಗಿಹೋಯಿತು.

    ಕನ್ನಡ ಪ್ರಕಾಶನಗಳು (1987-2026)
    ಲಾಗ್ ಔಟ್
    ಲಾಗಿನ್
    • ಕನ್ನಡ
    • ಶೇರ್ ಮಾಡಿ
    • ಆದ್ಯತೆಗಳು
    • Copyright © 2025 Watch Tower Bible and Tract Society of Pennsylvania
    • ಷರತ್ತುಗಳು
    • ಪ್ರವೈಸಿ ಪಾಲಿಸಿ
    • ಪ್ರೈವಸಿ ಸೆಟ್ಟಿಂಗ್ಸ್
    • JW.ORG
    • ಲಾಗಿನ್
    ಶೇರ್ ಮಾಡಿ