ಹೊಸ ಮತ್ತು ಅನುಭವಸ್ಥ ಶುಶ್ರೂಷಕನಿಗಿರುವ ಆವಶ್ಯಕತೆಗಳು
1 ಕೀರ್ತನೆಗಾರನಾದ ದಾವೀದನು ಕೇಳಿದ್ದು: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧ ಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು?” ಸಂದರ್ಭೋಚಿತವಾದ ಕೆಲವೊಂದು ಶಬ್ದಗಳಿಂದ, ದಾವೀದನು ಉತ್ತರಿಸಿದ್ದು: “ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ ಸತ್ಯವಚನವನ್ನಾಡುವವನೂ ಆಗಿರಬೇಕು.” (ಕೀರ್ತ. 15:1, 2 NW) ಆ ಆವಶ್ಯಕತೆಗಳು ಬದಲಾಗಿಲ್ಲ. ಇಂದು ಕ್ರಿಸ್ತೀಯ ಸಭೆಗೆ ಆರಾಧಿಸಲು ಬರುವವರೆಲ್ಲರೂ ಅನೈತಿಕ ಆಚರಣೆಗಳನ್ನು ಮತ್ತು ಕುಡಿಕತನವನ್ನು ತೊರೆದುಬಿಡಬೇಕು. ಯೆಹೋವನ ಜನರ ನಡುವೆ, ಜಗಳವಾಡುವವರಿಗೆ, ತೀಕ್ಷೈವಾದ ಕೋಪವಿರುವವರಿಗೆ, ಮೋಸಕರವಾಗಿ ಮಾತಾಡುವವರಿಗೆ ಸ್ಥಳವಿಲ್ಲ. ಹೊಸ ಶುಶ್ರೂಷಕರೇ ಆಗಿರಲಿ ಯಾ ಅನುಭವಸ್ಥರೇ ಆಗಿರಲಿ, ದೇವರ ವಾಕ್ಯದಲ್ಲಿ ರೂಪಿಸಲಾದ ಉನ್ನತ ಮಟ್ಟಗಳನ್ನು ಕಾಪಾಡಿಕೊಳ್ಳುವುದರಲ್ಲಿ ನಾವು ನಂಬಿಗಸ್ತರಾಗಿರಬೇಕು.—ಗಲಾ. 5:19-21.
2 ಅನೇಕ ಹೊಸಬರು ಯೆಹೋವನ ಸಂಸ್ಥೆಯೊಂದಿಗೆ ಸಹವಾಸ ಮಾಡುತ್ತಿದ್ದಾರೆ. ತಮ್ಮ ಜೀವನ ಕ್ರಮವನ್ನು ದೇವರ ಆವಶ್ಯಕತೆಗಳಿಗೆ ಸರಿಹೊಂದುವಂತೆ ಮಾಡಲು ಎಳೆಯರು ಮತ್ತು ವೃದ್ಧರು ಸಮವಾಗಿ ತಮ್ಮ ಯೋಚನೆಯನ್ನು ಪರಿವರ್ತಿಸುತ್ತಿದ್ದಾರೆ. ದಕ್ಷಿಣ ಅಮೆರಿಕದಲ್ಲಿ ಒಬ್ಬ ಹುಡುಗನು ಹೆತ್ತವರ ಮಾರ್ಗದರ್ಶನವಿಲ್ಲದೆ ಬೆಳೆದನು ಮತ್ತು ವ್ಯಕ್ತಿತ್ವದ ತೀವ್ರ ಸಮಸ್ಯೆಗಳನ್ನು ಬೆಳೆಸಿಕೊಂಡನು. ಅವನು 18 ವರ್ಷದವನಾಗುವುದರೊಳಗೆ, ಅಮಲೌಷಧಗಳಿಗೆ ವಶನಾಗಿದ್ದನು ಮತ್ತು ಆ ಹವ್ಯಾಸವನ್ನು ಬೆಂಬಲಿಸಲು ಕಳ್ಳತನಕ್ಕಾಗಿ ಈಗಾಗಲೇ ಸೆರೆಮನೆಯಲ್ಲಿ ಸಮಯವನ್ನು ಕಳೆದಿದ್ದನು. ಒಂದು ಬೈಬಲ್ ಅಧ್ಯಯನದ ಮೂಲಕ, ಅವನು ತನ್ನ ಹಿಂದಿನ ಸಂಗಾತಿಗಳೊಂದಿಗೆ ಸಹವಾಸವನ್ನು ನಿಲ್ಲಿಸಿದನು, ಯೆಹೋವನ ಸಾಕ್ಷಿಗಳೊಳಗೆ ಹೊಸ ಮಿತ್ರರನ್ನು ಕಂಡುಕೊಂಡನು ಮತ್ತು ಕೊನೆಗೆ ತನ್ನ ಜೀವಿತವನ್ನು ದೇವರಿಗೆ ಸಮರ್ಪಿಸಿದನು.
3 ಅದೇ ರೀತಿಯಲ್ಲಿ, ದೇವರನ್ನು ನಮ್ಮ ಎಲ್ಲಾ ನಡತೆಗಳಲ್ಲಿ, “ಸತ್ಯಾನುಗುಣವಾದ ನೀತಿ ಮತ್ತು ನಿಷ್ಠೆಯಲ್ಲಿ,” ಮೆಚ್ಚಿಸಲು ನಾವು ದೃಢನಿಶ್ಚಯವುಳ್ಳವರಾಗಿರಬೇಕು. (ಎಫೆ. 4:24, NW) ದೇವರ ಪರ್ವತದಂಥಾ ಸಂಸ್ಥೆಯಲ್ಲಿ ನಾವು ಉಳಿಯಬೇಕಾದರೆ, “ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು,” ಬಿಡುವ ಮತ್ತು “ನಿಷ್ಕೃಷ್ಟಜ್ಞಾನದ ಮೂಲಕ ಹೊಸದಾಗಿ ಮಾಡಲ್ಪಡುವ ನೂತನಸ್ವಭಾವವನ್ನು [ನಾವು] ಧರಿಸಿಕೊಳ್ಳುವ” ಹಂಗು ನಮಗಿದೆ.—ಕೊಲೊ. 3:9, 10 NW.
4 ದೇವರ ವಾಕ್ಯ, ಶಕ್ತಿಶಾಲಿಯಾದ ಒಂದು ಪ್ರಭಾವ: ಬೈಬಲಿನ ಮುಖಾಂತರ ನಮಗೆ ಪ್ರಕಟಿತವಾದ ಯೆಹೋವನ ವ್ಯಕ್ತಿತ್ವವು, ನಮ್ಮ ಯೋಚನೆಯನ್ನು ಮತ್ತು ನಮ್ಮ ಕ್ರಿಯೆಗಳನ್ನು ಸಕಾರಾತ್ಮಕ ರೀತಿಯಲ್ಲಿ ಶಕ್ತಿಯುತವಾಗಿ ಪ್ರಭಾವಿಸಬಲ್ಲದು. (ರೋಮಾ. 12:2) ಆತನ ವಾಕ್ಯಕ್ಕೆ ಮನಸ್ಸುಗಳನ್ನು ಪರಿವರ್ತಿಸುವ ಮತ್ತು ಹೃದಯಗಳನ್ನು ವಿವೇಚಿಸುವ ಶಕ್ತಿ ಇದೆ. (ಇಬ್ರಿ. 4:12) ನಾವು ನೈತಿಕವಾಗಿ ಪ್ರಾಮಾಣಿಕ ಜೀವಿತವನ್ನು ನಡೆಸಬೇಕೆಂದು, ಬಹಿರಂಗ ಶುಶ್ರೂಷೆಯಲ್ಲಿ ಪೂರ್ಣ ಪಾಲನ್ನು ಹೊಂದಿರಬೇಕೆಂದು, ಮತ್ತು ಕ್ರಿಸ್ತೀಯ ಕೂಟಗಳನ್ಮು ಅಲಕ್ಷ್ಯಿಸಬಾರದೆಂದು ಯೆಹೋವನ ಚಿತ್ತವು ಕೇಳಿಕೊಳ್ಳುತ್ತದೆ ಎಂಬುದಾಗಿ ದೇವ ಪ್ರೇರಿತ ವಚನಗಳು ನಮಗೆ ಕಲಿಸುತ್ತವೆ.
5 ನಿಭಾಯಿಸಲು ಕಠಿನವಾಗಿರುವ ಈ ಸಮಯಗಳಲ್ಲಿ, ಹೆಚ್ಚಾಗುತ್ತಿರುವ ಒತ್ತಡಗಳು ಒಬ್ಬ ಕ್ರೈಸ್ತನು ದೇವರ ನಿಯಮಗಳನ್ನು ಮುರಿಯುವಂತೆ ಪ್ರಭಾವಿಸ ಸಾಧ್ಯವಿದೆ. ವೈಯಕ್ತಿಕ ಅಭ್ಯಾಸ, ಕುಟುಂಬ ಅಭ್ಯಾಸ, ಸಭಾ ಕೂಟಗಳು, ಯಾ ಶುಶ್ರೂಷೆಯು ಅಲಕ್ಷಿಸಲ್ಪಟ್ಟಲ್ಲಿ, ಒಮ್ಮೆ ಬಲವಾಗಿದ್ದ ಒಬ್ಬ ಕ್ರೈಸ್ತನು ಸಹ ಬಹುಶಃ ತಪ್ಪು ನಡತೆಯಲ್ಲಿ ಬೀಳುತ್ತಾ, ನಂಬಿಕೆಯಿಂದ ದೂರಹೋಗಬಹುದು. ಈ ಕಾರಣಕ್ಕಾಗಿಯೇ ಪೌಲನು ತಿಮೊಥೆಯನಿಗೆ, “ನಿನ್ನ ವಿಷಯದಲ್ಲಿಯೂ ನಿನ್ನ ಉಪದೇಶದ ವಿಷಯದಲ್ಲಿಯೂ ಒಂದೇ ಸಮನಾದ ಗಮನ ಕೊಡು” ಮತ್ತು, “ನಾನು ಹೇಳುವದಕ್ಕೆ ಒಂದೇ ಸಮನಾದ ಗಮನ ಕೊಡು” ಎಂಬುದಾಗಿ ಬರೆದನು.—1 ತಿಮೊ. 4:16; 2 ತಿಮೊ. 2:7 NW.
6 ಹೊಸದಾಗಿ ಸಹವಾಸ ಮಾಡುವವರಾಗಿರಲಿ ಯಾ ವರ್ಷಗಳ ಅನುಭವದಿಂದ ಪ್ರೌಢರಾಗಿರಲಿ, ನಮ್ಮ ಜೀವವು ರಕ್ಷಿಸಲ್ಪಡಬೇಕಾದರೆ ನಾವು ದೇವರ ಆವಶ್ಯಕತೆಗಳನ್ನು ಸ್ಪಷ್ಟವಾಗಿಗಿ ಕೇಂದ್ರಬಿಂದುವಾಗಿ ಇಡಬೇಕು, ಶುಶ್ರೂಷೆಯಲ್ಲಿ ಸಂಪೂರ್ಣವಾಗಿ ಸಮತೂಕವುಳ್ಳವರಾಗಿರಬೇಕು, ಮತ್ತು ನಮ್ಮ ನಿರೀಕ್ಷೆಯು ಬಲವಾಗಿ ಇರುವಂತೆ ಕಾಪಾಡಿಕೊಳ್ಳಬೇಕು. (1 ಪೇತ್ರ 1:13-16) ದೇವರ ನೀತಿಯುಳ್ಳ ಆವಶ್ಯಕತೆಗಳ ದಿನನಿತ್ಯದ ಪಾಲನೆಯು ಖಂಡಿತವಾಗಿಯೂ ಅಗತ್ಯವಾಗಿದೆ.
7 ಇಸವಿ 1993 ರ ಸೇವಾ ವರ್ಷದ ಕೊನೆಯ ತಿಂಗಳಾಗಿರುವ ಈ ಸಮಯದಲ್ಲಿ, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದನ್ನು ನಿಮ್ಮ ಗುರಿಯನ್ನಾಗಿ ಮಾಡಿರಿ. ನಂಬಿಕೆಯಲ್ಲಿ ಬೆಳೆಯುವಂತೆ ಮತ್ತು ಕ್ಷೇತ್ರ ಶುಶ್ರೂಷೆಯಲ್ಲಿ ಉತ್ಪಾದನೆಯನ್ನು ಹೆಚ್ಚಿಸುವಂತೆ ಇತರರಿಗೆ ಸಹಾಯ ಮಾಡುವ ದೃಢನಿಶ್ಚಯ ಉಳ್ಳವರಾಗಿರ್ರಿ. (ರೋಮಾ. 1:12) ವೈಯಕ್ತಿಕ ಅಭ್ಯಾಸ, ಕುಟುಂಬ ಅಭ್ಯಾಸ, ಮತ್ತು ಕೂಟಗಳ ಹಾಜರಿಯಲ್ಲಿ ಕ್ರಮಬದ್ಧತೆಯ ಮೂಲಕ, ನಿಮ್ಮ ಯೋಚನೆಗಳನ್ನು ಯೋಗ್ಯವಾದ ವಿಷಯಗಳ ಮೇಲೆ ಇಡಿ. (ಫಿಲಿ. 4:8) ಆತನ ಆವಶ್ಯಕತೆಗಳಿಗೆ ಅನುಗುಣವಾಗಿ ಜೀವಿಸುವ ಮೂಲಕ ದೇವರನ್ನು ಮೆಚ್ಚಿಸುವ ನಿಮ್ಮ ಪ್ರಯತ್ನಗಳು ಗಮನಿಸಲ್ಪಡದೇ ಹೋಗುವುದಿಲ್ಲ.—ಕೊಲೊ. 3:23, 24.