ಇತರರಿಗಾಗಿ ಪರಿಗಣನೆಯನ್ನು ತೋರಿಸಿರಿ—ಭಾಗ 2
1 ನ್ಯಾಯಸಮ್ಮತವಾಗಿ ಎಷ್ಟು ಸಾಧ್ಯವೊ ಅಷ್ಟರ ಮಟ್ಟಿಗೆ, ನಮ್ಮ ಸಮುದಾಯದಲ್ಲಿ ಜೀವಿಸುವ ಜನರೊಂದಿಗೆ ಒಂದು ಒಳ್ಳೆಯ ಸಂಬಂಧವನ್ನು ಕಾಪಾಡಿಕೊಳ್ಳಲು ನಾವು ಬಯಸುತ್ತೇವೆ. ಇದು ಅವರ ಹಕ್ಕುಗಳಿಗೆ ಮತ್ತು ಅನಿಸಿಕೆಗಳಿಗೆ ಪರಿಗಣನೆ ಮತ್ತು ಗೌರವವನ್ನು ನಾವು ತೋರಿಸುವುದನ್ನು ಅವಶ್ಯಪಡಿಸುತ್ತದೆ.
2 ಯೆಹೋವನ ಸಾಕ್ಷಿಗಳು ಸ್ವದರ್ತನೆಗೆ ಹೆಸರುವಾಸಿಯಾಗಿದ್ದಾರೆ. ನೆರೆಹೊರೆಯಲ್ಲಿ, ಶಾಲೆಯಲ್ಲಿ, ಮತ್ತು ಕೆಲಸದ ಸ್ಥಳದಲ್ಲಿ, ಅಷ್ಟೇ ಅಲ್ಲದೆ ನಮ್ಮ ಸಮ್ಮೇಳನಗಳಲ್ಲಿ ಸಭ್ಯಾಚಾರದ ನಮ್ಮ ಮಟ್ಟಗಳು, ಅನೇಕ ಶ್ಲಾಘನೀಯ ಹೇಳಿಕೆಗಳ ವಿಷಯವಾಗಿದೆ.—ಜೂನ್ 15, 1989, ವಾಚ್ಟವರ್, ಪುಟ 20ನ್ನು ನೋಡಿರಿ.
3 ಉತ್ತಮ ನಡತೆಯು, ಪ್ರಾಮಾಣಿಕತೆ, ಶ್ರಮಶೀಲತೆ, ಮತ್ತು ಒಳ್ಳೆಯ ನೀತಿಗಳಂತಹ ಅನೇಕ ವಿಷಯಗಳನ್ನು ನಿಶ್ಚಯವಾಗಿಯೂ ಒಳಗೊಳ್ಳುತ್ತದೆ. ನಮ್ಮ ರಾಜ್ಯ ಸಭಾಗೃಹದ ಸುತ್ತಲಿನ ಪ್ರದೇಶದಲ್ಲಿ ಜೀವಿಸುವ ನಿವಾಸಿಗಳ ವಿಷಯದಲ್ಲಿ ಗೌರವವುಳ್ಳವರಾಗಿರುವುದನ್ನೂ ಅದು ಒಳಗೊಳ್ಳುತ್ತದೆ. ನಮ್ಮ ನೆರೆಯವರ ಕುರಿತು ನಾವು ವಿಚಾರಪರರಾಗಿರಲು ತಪ್ಪುವುದಾದರೆ, ಇತರ ವಿಷಯಗಳಲ್ಲಿನ ನಮ್ಮ ದೈವಭಕ್ತಿಯ ನಡತೆಯು ಕಡೆಗಣಿಸಲ್ಪಡಬಹುದು. “ಸುವಾರ್ತೆಗೆ ಯೋಗ್ಯರಾಗಿ ನಡೆದುಕೊಳ್ಳಿರಿ,” ಎಂದು ಪೌಲನು ನಮ್ಮನ್ನು ಪ್ರೇರೇಪಿಸಿದನು.—ಫಿಲಿ. 1:27.
4 ಕೂಟಗಳನ್ನು ಹಾಜರಾಗುವವರಿಂದ ತೋರಿಸಲ್ಪಡುವ ಪರಿಗಣನೆಯ ಕೊರತೆಯೆಂದು ಅವರಿಗೆ ಅನಿಸುವ ಕಾರಣದಿಂದ, ಕೆಲವೊಂದು ರಾಜ್ಯ ಸಭಾಗೃಹಗಳ ಹತ್ತಿರ ಜೀವಿಸುತ್ತಿರುವ ನಿವಾಸಿಗಳಿಂದ ಆಗಿಂದಾಗ್ಗೆ ದೂರುಗಳು ಕೊಡಲಾಗಿವೆ. ರಾಜ್ಯ ಸಭಾಗೃಹದ ಮುಂದೆ ಕಾಲುಹಾದಿಯ ಮೇಲೆ ಗುಂಪುಕೂಡಿ, ಹತ್ತಿರದ ಮನೆಗಳಲ್ಲಿ ಕೇಳಿಸಸಾಧ್ಯವಿರುವಂತಹ ಉತ್ಸಾಹಭರಿತ ಸಂಭಾಷಣೆಗಳಲ್ಲಿ ತೊಡಗುವುದನ್ನು ಸಹೋದರ ಸಹೋದರಿಯರು ತೊರೆಯಬೇಕು. ರಾಜ್ಯ ಸಭಾಗೃಹದ ಒಳಗೂ ಹೊರಗೂ ಓಡುವಂತೆ ಮಕ್ಕಳನ್ನು ಬಿಡಬಾರದು. ವಿವೇಕಹೀನವಾಗಿ ಕಾರಿನ ಬಾಗಿಲುಗಳನ್ನು ದೊಪ್ಪನೆ ಮುಚ್ಚುವುದು ಅಥವಾ ಸ್ಕೂಟರ್ ಹಾರ್ನ್ಗಳನ್ನು ಧ್ವನಿಸುವುದು ನೆರೆಹೊರೆಯನ್ನು ಕ್ಷೋಭೆಗೊಳಿಸಬಲ್ಲದು. ಈ ರೀತಿಯ ನಡತೆಯು ಸಭೆಯ ಮೇಲೆ ಅಪ್ರಸನ್ನಕರವಾಗಿ ಪ್ರತಿಬಿಂಬಿಸುತ್ತದೆ. ಎಲ್ಲ ಸಂಚಾರ ನಿಯಮಗಳನ್ನು ನಾವು ಪಾಲಿಸುವಂತಹದ್ದೂ ಪ್ರಾಮುಖ್ಯವಾಗಿದೆ.—ರೋಮಾ. 13:1, 2, 5.
5 ವಾಹನಗಳನ್ನು ನಿಲ್ಲಿಸುವ ವಿಷಯದಲ್ಲಿಯೂ ತದ್ರೀತಿಯ ಸಮಸ್ಯೆಗಳು ವರದಿಸಲ್ಪಟ್ಟಿವೆ. ಕಾರುಗಳನ್ನು, ಸ್ಕೂಟರುಗಳನ್ನು, ಅಥವಾ ಸೈಕಲುಗಳನ್ನು ಸಹ ಖಾಸಗಿ ಸ್ಥಳದಲ್ಲಿ ಅಥವಾ ಸಂಚಾರವನ್ನು ಅವು ಅಡ್ಡೈಸುವ ಯಾ ಮನೆಗಳಿಗೆ ಅಥವಾ ಅಂಗಡಿಗಳಿಗೆ ಪ್ರವೇಶವನ್ನು ತಡೆಯುವ ಸ್ಥಳಗಳಲ್ಲಿ ನಿಲ್ಲಿಸಬಾರದು. ಹತ್ತಿರದ ವ್ಯಾಪಾರ ಸಂಸ್ಥೆಗಳಿಂದ ತಮ್ಮ ಗ್ರಾಹಕರಿಗಾಗಿ ಸ್ಥಾಪಿಸಲಾದ ವಾಹನ ನಿಲ್ದಾಣಗಳನ್ನು ಅನುಮತಿ ದೊರಕದೆ ಉಪಯೋಗಿಸಬಾರದು. ಮೂರು ಅಥವಾ ನಾಲ್ಕು ಸಭೆಗಳು ಒಂದೇ ರಾಜ್ಯ ಸಭಾಗೃಹವನ್ನು ಬಳಸುವಲ್ಲಿ, ಕೂಟಗಳು ಸಾಮಾನ್ಯವಾಗಿ ವಾರದ ಪ್ರತಿದಿನ ನಡೆಸಲಾಗುತ್ತವೆ, ಮತ್ತು ಇದು ಹಿರಿಯರ ಮಂಡಳಿಗಳ ನಡುವೆ ನಿಕಟವಾದ ಸಹಕಾರವನ್ನು ಕೇಳಿಕೊಳ್ಳುತ್ತದೆ.—ಅಕ್ಟೋಬರ 1, 1988ರ ವಾಚ್ಟವರ್, ಪುಟ 17 ಪ್ಯಾರಗ್ರಾಫ್ 13ನ್ನು ನೋಡಿರಿ.
6 “ಎಲ್ಲವನ್ನೂ ದೇವರ ಘನತೆಗಾಗಿ ಮಾಡಿರಿ,” ಎಂದು ಬೈಬಲ್ ನಮ್ಮನ್ನು ಪ್ರೇರೇಪಿಸುತ್ತದೆ ಮತ್ತು ಅದು ಹೊರಗಿನವರಿಗೆ ಪರಿಗಣನೆಯನ್ನು ತೋರಿಸುವುದನ್ನು ಒಳಗೊಳ್ಳುತ್ತದೆ. (1 ಕೊರಿಂ. 10:31-33) ನಾವು ‘ಇತರರ ವೈಯಕ್ತಿಕ ಅಭಿರುಚಿಗಳಿಗೆ ಲಕ್ಷ್ಯನೀಡು’ ವುದಾದರೆ, ವಿವೇಕಹೀನವಾಗಿ ನಾವು ಅವರ ಸ್ವತ್ತಿನೊಳಗೆ ಬಲವಂತದಿಂದ ನುಗ್ಗುವುದಿಲ್ಲ. (ಫಿಲಿ. 2:4) ಸ್ಥಳಿಕ ವ್ಯಾಪಾರಿಗಳ ವ್ಯಾಪಾರ ಚಟುವಟಿಕೆಯಲ್ಲಿ ತಲೆಹಾಕುವುದನ್ನೂ ನಾವು ತೊರೆಯುವೆವು.
7 ಸಭೆಯ ಒಳಗೂ ಹೊರಗೂ ಇರುವ ಇತರರಿಗೆ ಪರಿಗಣನೆಯನ್ನು ತೋರಿಸುವುದು, ನಮ್ಮ ಹೃದಯಗಳಲ್ಲಿ ನಮಗೆ ಏನು ಅನಿಸುತ್ತದೊ ಅದರ ಬಾಹ್ಯ ಅಭಿವ್ಯಕ್ತಿಯಾಗಿದೆ. ನಾವು ಮಾಡುವ ಮತ್ತು ಹೇಳುವ ವಿಷಯವು ನಾವು ‘ನಮ್ಮ ನೆರೆಯವರನ್ನು ನಮ್ಮಂತೆ ಪ್ರೀತಿಸುತ್ತೇವೆ’ ಎಂಬುದನ್ನು ಪ್ರದರ್ಶಿಸತಕ್ಕದ್ದು.—ಮತ್ತಾ. 7:12; 22:39.