ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಪ್ರಥಮವಾಗಿಡಿರಿ
1 ನಮ್ಮ ಆತ್ಮಿಕ ಕ್ಷೇಮಕ್ಕಾಗಿ ಅತ್ಯಾವಶ್ಯಕವಾಗಿರುವ ಕೆಲವು ಪ್ರಾಮುಖ್ಯ ಸಂಗತಿಗಳು ಯಾವುವು? ಇವು ನಿಶ್ಚಯವಾಗಿಯೂ, ವೈಯಕ್ತಿಕ ಅಧ್ಯಯನ, ಕೂಟದ ಹಾಜರಿ, ನಿರಂತರ ಪ್ರಾರ್ಥನೆ, ಒಳ್ಳೆಯ ಸಹವಾಸ, ಮತ್ತು ಕ್ರೈಸ್ತ ಶುಶ್ರೂಷೆಯನ್ನು ಒಳಗೂಡಿಸುವವು. ಪ್ರಾಮುಖ್ಯ ಸಂಗತಿಗಳನ್ನು ನಮ್ಮ ಜೀವಿತಗಳಲ್ಲಿ ಅಗ್ರಗಣ್ಯವಾಗಿಡದೆ, ನಾವು ಒಳ್ಳೆಯ ಆತ್ಮಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಾಧ್ಯವಿಲ್ಲ.
2 ಹಾಗಿದ್ದರೂ, ನಮಗೆಲ್ಲರಿಗೆ ಶಾರೀರಿಕ ಬಯಕೆಗಳ ವಿರುದ್ಧ ಒಂದು ಹೋರಾಟವಿದೆ ಮತ್ತು ನಮಗೆ ಶಿಸ್ತಿನ ಅಗತ್ಯವಿದೆ. (ಗಲಾ. 5:17) ಸ್ವಾರ್ಥ ಅಭಿರುಚಿಗಳನ್ನು ಬೆನ್ನಟ್ಟುವುದರಿಂದ ನಮಗೆ ಹೆಚ್ಚು ಪ್ರಯೋಜನವಿರುವುದೆಂದು ನಾವು ಎಂದೂ ಭಾವಿಸಬಾರದು. (ಯೆರೆ. 17:9) ಆದುದರಿಂದ, ನಾವು ನಮ್ಮ ಹೃದಯವನ್ನು ರಕ್ಷಿಸಿ, ತಪ್ಪು ದಾರಿಗೆ ಸೆಳೆಯಲ್ಪಡುವುದರಿಂದ ದೂರವಿರಬೇಕಾದರೆ, ಕ್ರಮವಾದ ಸ್ವಪರೀಕ್ಷೆಯು ಬಹುಮುಖ್ಯವಾಗಿದೆ.—ಜ್ಞಾನೋ. 4:23; 2 ಕೊರಿಂ. 13:5.
3 ನಿಮ್ಮ ಸ್ವಂತ ಹೃದಯವನ್ನು ಪರೀಕ್ಷಿಸಿಕೊಳ್ಳಿರಿ: ನೀವು ಇದನ್ನು, ಕೆಲವು ಪ್ರಾಮಾಣಿಕ ಪ್ರಶ್ನೆಗಳನ್ನು ಸ್ವತಃ ಕೇಳಿಕೊಳ್ಳುವ ಮೂಲಕ ಮಾಡಸಾಧ್ಯವಿದೆ: ನಾನು ದೇವರ ವಾಕ್ಯವನ್ನು ಓದಲು ಹಂಬಲಿಸುತ್ತೇನೊ? (1 ಪೇತ್ರ 2:2) ಎಲ್ಲಾ ಸಭಾ ಕೂಟಗಳಿಗೆ ಹಾಜರಾಗುವ ಮಹತ್ವವನ್ನು ನಾನು ಗಣ್ಯಮಾಡುತ್ತೇನೊ? (ಇಬ್ರಿ. 10:24, 25) ನಾನು ನಿರಂತರವಾಗಿ ಪ್ರಾರ್ಥಿಸುತ್ತೇನೊ? (ರೋಮಾ. 12:12) ಆತ್ಮಿಕ ಮನಸ್ಸುಳ್ಳ ಜನರ ಸಹವಾಸವನ್ನು ಮಾಡಲು ನಾನು ಪ್ರಯತ್ನಿಸುತ್ತೇನೊ? (ರೋಮಾ. 1:11, 12) ಸುವಾರ್ತೆಯನ್ನು ಸಾರಲು ವೈಯಕ್ತಿಕ ಹೊಣೆಗಾರಿಕೆಯ ಅನಿಸಿಕೆ ನನಗಾಗುತ್ತದೊ? (1 ಕೊರಿಂ. 9:16) ಸಕಾರಾತ್ಮಕವಾದ ಉತ್ತರಗಳು, ನೀವು ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಪ್ರಥಮವಾಗಿಡಲು ಅಪೇಕ್ಷಿಸುವವರಾಗಿದ್ದೀರೆಂಬುದನ್ನು ತೋರಿಸುವವು.
4 ನಿಮ್ಮ ದೈನಂದಿನ ಕ್ರಮವನ್ನು ಪರೀಕ್ಷಿಸಿಕೊಳ್ಳಿರಿ: ನಿಮ್ಮ ಹೃದಯದ ಬಯಕೆಗಳ ಪರೀಕ್ಷೆಯನ್ನು, ಸಮಯದ ಬಳಕೆಗಾಗಿ ಆದ್ಯತೆಗಳನ್ನು ಸ್ಥಾಪಿಸುವ ಮೂಲಕ ನೀವು ಕಾರ್ಯರೂಪಕ್ಕೆ ತರುವ ಅಗತ್ಯವಿದೆ. ಇದರಲ್ಲಿ, ಬೈಬಲ್ ಮತ್ತು ಕಾವಲಿನಬುರುಜು ಮತ್ತು ಎಚ್ಚರ! ಪತ್ರಿಕೆಗಳ ಪ್ರತಿಯೊಂದು ಸಂಚಿಕೆಯನ್ನು ಓದಲಿಕ್ಕಾಗಿ ಹಾಗೂ ಕೂಟಗಳಿಗಾಗಿ ತಯಾರಿಸಲಿಕ್ಕಾಗಿ ಕ್ರಮವಾಗಿ ಸಮಯವನ್ನು ನಿಗದಿಪಡಿಸುವುದು ಸೇರಿರುತ್ತದೆ. ಕುಟುಂಬವು ಜೊತೆಯಾಗಿ ಅಭ್ಯಾಸಿಸಲಿಕ್ಕಾಗಿ ಮತ್ತು ಪ್ರಾರ್ಥಿಸಲಿಕ್ಕಾಗಿಯೂ ಸಮಯವು ಬದಿಗಿರಿಸಲ್ಪಡಬೇಕು. ಟಿವಿಯ ಮುಂದೆ ಅಥವಾ ಮನೋರಂಜನೆಯ ಇತರ ವಿಧಗಳಲ್ಲಿ ಎಷ್ಟು ಸಮಯವು ಕಳೆಯಲ್ಪಡುತ್ತದೊ ಅದರ ಮೇಲೆ ಒಂದು ಮಿತಿಯನ್ನಿಡಿರಿ. ಎಲ್ಲಾ ಸಭಾ ಕೂಟಗಳಿಗೆ ಹಾಜರಾಗಲು ದೃಢಸಂಕಲ್ಪವುಳ್ಳವರಾಗಿರಿ, ಮತ್ತು ಇತರ ಎಲ್ಲಾ ಕೆಲಸಗಳನ್ನು ಅವುಗಳ ಸುತ್ತಲೂ ಏರ್ಪಡಿಸಿರಿ. ಇಡೀ ಕುಟುಂಬವು ಪ್ರತಿ ವಾರ ಕ್ಷೇತ್ರ ಸೇವೆಯಲ್ಲಿ ಪಾಲ್ಗೊಳ್ಳುವಂತೆ ಯೋಜಿಸಿರಿ.
5 ನಿಸ್ಸಂದೇಹವಾಗಿ, ನಮ್ಮ ಜೀವಿತದಲ್ಲಿ ಹೆಚ್ಚು ಪ್ರಾಮುಖ್ಯವಾಗಿರುವ ಸಂಗತಿಗಳನ್ನು ಪ್ರಥಮವಾಗಿಡುವುದು, ಆನಂದಕ್ಕೆ ಒಂದು ಕಾರಣವಾಗಿ ಪರಿಣಮಿಸುವುದು.