“ಯೆಹೋವನು ನನ್ನ ಸಹಾಯಕನು”
1 ಯೇಸು ತನ್ನ ಪ್ರಥಮ ಶಿಷ್ಯರಿಗೆ ಆದೇಶ ನೀಡಿದಾಗ, ಅವನು ಅವರಿಗೆ ಹೇಳಿದ್ದು: “ನೋಡಿರಿ, ತೋಳಗಳ ನಡುವೆ ಕುರಿಗಳನ್ನು ಹೊಗಿಸಿದಂತೆ ನಾನು ನಿಮ್ಮನ್ನು ಕಳುಹಿಸಿಕೊಡುತ್ತೇನೆ.” (ಮತ್ತಾ. 10:16) ಅವರು ಭಯಪಟ್ಟು ಸಾರುವುದರಿಂದ ಹಿಮ್ಮೆಟ್ಟುವಂತೆ ಅದು ಮಾಡಿತೊ? ಇಲ್ಲ. ಅಪೊಸ್ತಲ ಪೌಲನು ತದನಂತರ ಜೊತೆ ಕ್ರೈಸ್ತರಿಗೆ ಹೀಗೆ ಹೇಳಿದಾಗ ವ್ಯಕ್ತಪಡಿಸಿದ ಮನೋಭಾವವನ್ನು ಅವರು ಅಂಗೀಕರಿಸಿದರು: “ಕರ್ತನು [“ಯೆಹೋವನು,” NW] ನನ್ನ ಸಹಾಯಕನು, ಭಯಪಡೆನು, ಮನುಷ್ಯನು ನನಗೆ ಏನು ಮಾಡಾನು? ಎಂದು ನಾವು ಧೈರ್ಯವಾಗಿ ಹೇಳಬಲ್ಲೆವು.” (ಇಬ್ರಿ. 13:6) ಯೇಸುವಿನ ನಾಮದ ನಿಮಿತ್ತ ಅಗೌರವಿಸಲ್ಪಡಲು ತಾವು ಅರ್ಹರೆಂದು ಎಣಿಸಲ್ಪಟ್ಟದ್ದಕ್ಕಾಗಿ ಅವರು ಹರ್ಷಿಸಿದರು, ಮತ್ತು ಎಡೆಬಿಡದೆ ಕಲಿಸುತ್ತಾ ಸುವಾರ್ತೆಯನ್ನು ಸಾರುತ್ತಾ ಇರುವುದನ್ನು ಮುಂದುವರಿಸಿದರು.—ಅ. ಕೃ. 5:41, 42.
2 ಇಂದು ಲೋಕವ್ಯಾಪಕವಾಗಿರುವ ಈ ಸಾರುವ ಕೆಲಸವು ಅದರ ಅಂತಿಮ ಹಂತಗಳಲ್ಲಿದೆ. ಯೇಸು ಮುಂತಿಳಿಸಿದಂತೆಯೇ, ನಾವು ಎಲ್ಲ ರಾಷ್ಟ್ರಗಳವರ ದ್ವೇಷಕ್ಕೆ ಕಾರಣರಾಗಿದ್ದೇವೆ. (ಮತ್ತಾ. 24:9) ನಮ್ಮ ಸಾರುವ ಕೆಲಸವು ವಿರೋಧಿಸಲ್ಪಟ್ಟು, ಹಾಸ್ಯಕ್ಕೊಳಗಾಗಿದೆ, ಮತ್ತು ಭೂಮಿಯ ಕೆಲವು ಭಾಗಗಳಲ್ಲಿ ಅದನ್ನು ನಿಷೇಧಿಸಲಾಗಿದೆ. ನಮ್ಮಲ್ಲಿ ನಂಬಿಕೆಯ ಕೊರತೆಯಿರುವಲ್ಲಿ, ನಾವು ಭಯಭೀತರಾಗಸಾಧ್ಯವಿದೆ. ಆದರೆ, ಯೆಹೋವನು ನಮ್ಮ ಸಹಾಯಕನೆಂದು ತಿಳಿದಿರುವುದು ನಮ್ಮನ್ನು ಚೈತನ್ಯಗೊಳಿಸುತ್ತದೆ ಮತ್ತು ಪಟ್ಟುಹಿಡಿಯುವಂತೆ ಬಲಪಡಿಸುತ್ತದೆ.
3 ಧೈರ್ಯವು, ಬಲಿಷ್ಠರೂ ಧೀರರೂ ಶೂರರೂ ಆಗಿರುವ ಗುಣವಾಗಿದೆ. ಅದು ಭಯ, ಪುಕ್ಕಲುತನ, ಅಂಜಿಕೆಗೆ ವಿರುದ್ಧವಾದದ್ದಾಗಿದೆ. ಯೇಸುವಿನ ಶಿಷ್ಯರಿಗೆ ತಾಳಿಕೊಳ್ಳಲು ಧೈರ್ಯವು ಸದಾ ಬೇಕಾಗಿದೆ. ದೇವರೊಂದಿಗೆ ವೈರತ್ವದಲ್ಲಿರುವಂತಹ ಒಂದು ಲೋಕದ ಮನೋಭಾವಗಳು ಮತ್ತು ಕ್ರಿಯೆಗಳಿಂದ ಎದೆಗುಂದಿಸಲ್ಪಡುವುದನ್ನು ದೂರವಿರಿಸಲು ಅದು ನಮಗೆ ಆವಶ್ಯಕ. ಲೋಕವನ್ನು ಜಯಿಸಿದ ಯೇಸುವಿನ ಅತ್ಯುತ್ಕೃಷ್ಟ ಉದಾಹರಣೆಯ ಕುರಿತು ಯೋಚಿಸುವುದು ಎಷ್ಟು ಉತ್ತೇಜನದಾಯಕವಾಗಿದೆ! (ಯೋಹಾ. 16:33) ತೀವ್ರವಾದ ಪರೀಕ್ಷೆಗಳ ಎದುರಿನಲ್ಲಿ, “ಮನುಷ್ಯರಿಗಿಂತಲೂ ದೇವರಿಗೆ ಹೆಚ್ಚಾಗಿ ವಿಧೇಯರಾಗಿರಬೇಕಲ್ಲಾ” ಎಂದು ಧೈರ್ಯದಿಂದ ಪ್ರಕಟಿಸಿದ ಅಪೊಸ್ತಲರನ್ನೂ ಜ್ಞಾಪಿಸಿಕೊಳ್ಳಿರಿ.—ಅ. ಕೃ. 5:29.
4 ನಾವಾದರೋ ಹಿಮ್ಮೆಟ್ಟುವ ಜನರಲ್ಲ: ನಮ್ಮ ಕೆಲಸದ ಕಡೆಗೆ ಒಂದು ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳಲು ನಾವು ಪ್ರಯಾಸಪಡಬೇಕು. (ಇಬ್ರಿ. 10:39) ಎಲ್ಲ ಮಾನವಕುಲದ ಕಡೆಗೆ ಯೆಹೋವನಿಗಿರುವ ಪ್ರೀತಿ ಹಾಗೂ ಕರುಣೆಯ ಅಭಿವ್ಯಕ್ತಿಯೋಪಾದಿ ನಾವು ಆತನಿಂದ ಕಳುಹಿಸಲ್ಪಡುತ್ತಿದ್ದೇವೆ ಎಂಬುದನ್ನು ಯಾವಾಗಲೂ ಮನಸ್ಸಿನಲ್ಲಿಟ್ಟುಕೊಳ್ಳಿರಿ. ಪ್ರಯೋಜನದಾಯಕವಾದ ಒಂದು ಉದ್ದೇಶವನ್ನು ಪೂರೈಸದ ಯಾವುದೇ ವಿಷಯವನ್ನು ಮಾಡುವಂತೆ ಆತನೆಂದಿಗೂ ತನ್ನ ಸೇವಕರಲ್ಲಿ ಕೇಳಿಕೊಳ್ಳುವುದಿಲ್ಲ. ನಾವು ಮಾಡುವಂತೆ ನೇಮಿಸಲ್ಪಟ್ಟ ಸಕಲ ವಿಷಯವೂ, ಕಟ್ಟಕಡೆಗೆ ದೇವರನ್ನು ಪ್ರೀತಿಸುವವರ ಒಳಿತಿಗಾಗಿರುವುದು.—ರೋಮಾ. 8:28.
5 ಒಂದು ಆಶಾವಾದಿ ದೃಷ್ಟಿಕೋನವು, ನಮ್ಮ ಟೆರಿಟೊರಿಯಲ್ಲಿರುವ ಕುರಿಸದೃಶರನ್ನು ಹುಡುಕುತ್ತಾ ಇರುವುದರಲ್ಲಿ ನಮಗೆ ಸಹಾಯ ಮಾಡುವುದು. ಜನರು ಪ್ರದರ್ಶಿಸುವ ಉದಾಸೀನತೆಯನ್ನು ನಾವು ಅವರ ಆಶಾಭಂಗ ಹಾಗೂ ನಿರಾಶೆಯ ಅಭಿವ್ಯಕ್ತಿಯಾಗಿ ವೀಕ್ಷಿಸಬಹುದು. ನಮ್ಮ ಪ್ರೀತಿಯು, ನಾವು ಸಹಾನುಭೂತಿಯುಳ್ಳವರೂ ತಾಳ್ಮೆಯುಳ್ಳವರೂ ಆಗಿರುವಂತೆ ಪ್ರೇರಿಸಲಿ. ನಾವು ಸಾಹಿತ್ಯವನ್ನು ನೀಡುವಾಗಲೆಲ್ಲ ಇಲ್ಲವೆ ಒಂದಿಷ್ಟು ಆಸಕ್ತಿಯನ್ನು ಕಂಡುಕೊಳ್ಳುವಾಗಲೆಲ್ಲ, ನಮ್ಮ ಗುರಿಯು ಕೂಡಲೆ ಒಂದು ಪುನರ್ಭೇಟಿಯನ್ನು ಮಾಡಿ, ಹೆಚ್ಚಿನ ಆಸಕ್ತಿಯನ್ನು ಕೆರಳಿಸುವುದಾಗಿರಬೇಕು. ಒಂದು ಬೈಬಲ್ ಅಧ್ಯಯನವನ್ನು ಆರಂಭಿಸುವ ಇಲ್ಲವೆ ಅದನ್ನು ಪರಿಣಾಮಕಾರಿಯಾಗಿ ನಡೆಸುವ ನಮ್ಮ ಸಾಮರ್ಥ್ಯದ ಕುರಿತು ನಾವೆಂದೂ ಸಂಶಯಪಡಬಾರದು. ಬದಲಿಗೆ, ಯೆಹೋವನು ನಮಗೆ ಸಹಾಯ ಮಾಡುವನೆಂಬ ಭರವಸೆಯೊಂದಿಗೆ, ಆತನ ನೆರವು ಹಾಗೂ ನಿರ್ದೇಶನವನ್ನು ನಾವು ಸತತವಾಗಿ ಮತ್ತು ಪ್ರಾರ್ಥನಾಪೂರ್ವಕವಾಗಿ ಕೋರಬೇಕು.
6 ಯೆಹೋವನು ಈ ಕೆಲಸವನ್ನು ಸಂಪೂರ್ಣಗೊಳಿಸುವನೆಂದು ನಾವು ದೃಢವಾಗಿ ನಂಬುತ್ತೇವೆ. (ಹೋಲಿಸಿ ಫಿಲಿಪ್ಪಿ 1:6.) ನಮ್ಮ ಸಹಾಯಕನೋಪಾದಿ ಆತನಲ್ಲಿನ ನಮ್ಮ ಪೂರ್ಣ ಭರವಸೆಯು ನಮ್ಮನ್ನು ಬಲಪಡಿಸುತ್ತದೆ, ಇದರಿಂದಾಗಿ ನಾವು “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ” ಇರುತ್ತೇವೆ.—ಗಲಾ. 6:9.