ಸದಾ ಉಪಸ್ಥಿತರಿರುವುದು ಎಷ್ಟೊಂದು ಒಳ್ಳೇದು!
1 ಪೂರ್ವ ಯೂರೋಪಿನಲ್ಲಿನ ನಮ್ಮ ಪ್ರಿಯ ಸಹೋದರರಲ್ಲಿ ಅನೇಕರು, ಅನೇಕ ದಶಕಗಳ ವರೆಗೆ ಬಹಿರಂಗವಾಗಿ ಕೂಡಿಬರುವುದರಿಂದ ನಿಷೇಧಿಸಲ್ಪಟ್ಟರು. ನಿಷೇಧಗಳು ತೆಗೆದುಹಾಕಲ್ಪಟ್ಟು, ಅವರು ಸ್ವತಂತ್ರರಾಗಿ ಒಟ್ಟಿಗೆ ಕೂಡಿಬರಲು ಸಾಧ್ಯವಾದಾಗ, ಅವರಿಗಾದ ಆನಂದವನ್ನು ಊಹಿಸಿಕೊಳ್ಳಿರಿ!
2 ಅಂತಹ ಒಂದು ಸಭೆಗೆ ಮಾಡಿದ ಸಂದರ್ಶನದ ವಿಷಯದಲ್ಲಿ, ಒಬ್ಬ ಸರ್ಕಿಟ್ ಮೇಲ್ವಿಚಾರಕನು ಬರೆದುದು: “ನನ್ನ ಭೇಟಿಯ ಆರಂಭದಲ್ಲೇ, ಮಂಗಳವಾರ ಸಾಯಂಕಾಲ, ಕೋಣೆಯನ್ನು ಬೆಚ್ಚಗಿಡುವ ಸಾಧನವು ಕೆಟ್ಟುಹೋಯಿತು. ಹೊರಗೆ, ತಾಪಮಾನವು ಹಿಮಗಟ್ಟಿಸುವಷ್ಟು ಚಳಿಯಾಗಿತ್ತು ಮತ್ತು ಕೋಣೆಯೊಳಗೆ, ಅದು ಸುಮಾರು ಐದು ಡಿಗ್ರಿ ಸೆಂಟಿಗ್ರೇಡ್ ಮಾತ್ರ ಆಗಿತ್ತು. ಸಹೋದರರು ತಮ್ಮ ಕೋಟ್ಗಳನ್ನು, ಕಂಠವಸ್ತ್ರಗಳನ್ನು, ಕೈಚೀಲಗಳನ್ನು, ಟೋಪಿಗಳನ್ನು ಮತ್ತು ಬೂಟುಗಳನ್ನು ಧರಿಸಿಕೊಂಡು ಕುಳಿತುಕೊಂಡಿದ್ದರು. ಬೈಬಲಿನ ಪುಟಗಳನ್ನು ತಿರುವಲು ಸಾಧ್ಯವಿಲ್ಲದಿದ್ದುದರಿಂದ, ಯಾರೂ ಬೈಬಲಿನ ವಚನಗಳನ್ನು ತೆರೆದು ನೋಡಸಾಧ್ಯವಿರಲಿಲ್ಲ. ಸೂಟು ಧರಿಸಿಕೊಂಡು ವೇದಿಕೆಯ ಮೇಲೆ ನಿಂತುಕೊಂಡಿದ್ದ ನಾನು ಹಿಮಗಟ್ಟಿಹೋಗಿದ್ದೆ, ಮತ್ತು ಪ್ರತಿ ಸಲ ನಾನು ಮಾತಾಡಿದಾಗ, ನಾನು ನನ್ನ ಉಸಿರನ್ನು ನೋಡಸಾಧ್ಯವಿತ್ತು. ಆದರೆ ನನ್ನ ಮನಸ್ಸನ್ನು ಪ್ರಭಾವಿಸಿದ ಸಂಗತಿಯೇನೆಂದರೆ, ಅಸಮಾಧಾನದ ಒಂದು ಮಾತನ್ನೂ ನಾನು ಕೇಳಿಸಿಕೊಳ್ಳಲಿಲ್ಲ. ಕೂಟಕ್ಕೆ ಉಪಸ್ಥಿತರಿದ್ದದ್ದು ಎಷ್ಟೊಂದು ಆಹ್ಲಾದಕರ ಮತ್ತು ಒಳ್ಳೇದಾಗಿತ್ತೆಂದು ಎಲ್ಲ ಸಹೋದರರು ಹೇಳಿದರು!” ಆ ಕೂಟವನ್ನು ತಪ್ಪಿಸಿಕೊಳ್ಳುವ ಕುರಿತಾಗಿ ಆ ಸಹೋದರರು ಯೋಚಿಸಲೂ ಇಲ್ಲ!
3 ನಿಮಗೂ ಹಾಗನಿಸುತ್ತದೊ? ನಮ್ಮ ಸಾಪ್ತಾಹಿಕ ಕೂಟಗಳಲ್ಲಿ ಸ್ವತಂತ್ರವಾಗಿ ಜೊತೆಗೂಡುವ ಅವಕಾಶವನ್ನು ನಾವು ಅಮೂಲ್ಯವೆಂದೆಣಿಸುತ್ತೇವೊ? ಅಥವಾ ಪರಿಸ್ಥಿತಿಗಳು ಅನುಕೂಲಕರವಾಗಿರುವಾಗ, ನಾವು ಕೂಟಗಳನ್ನು ಗಣ್ಯಮಾಡದೆ ಇರುತ್ತೇವೊ? ಕ್ರಮವಾಗಿ ಕೂಟಗಳಿಗೆ ಹಾಜರಾಗುವುದು ಸುಲಭವಾಗಿರಲಿಕ್ಕಿಲ್ಲ, ಮತ್ತು ಕೆಲವೊಮ್ಮೆ ಹಾಜರಾಗದೆ ಇರಲಿಕ್ಕಾಗಿ ಯುಕ್ತವಾದ ಕಾರಣ ನಮಗಿರಬಹುದು. ನಮ್ಮ ನಡುವೆ, ವೃದ್ಧಾಪ್ಯ, ತೀವ್ರವಾದ ಆರೋಗ್ಯ ಸಮಸ್ಯೆಗಳು, ಶಾರೀರಿಕ ಅಂಗವೈಕಲ್ಯಗಳು, ಶ್ರಮದಾಯಕ ಕೆಲಸದ ತಖ್ತೆಗಳು ಮತ್ತು ಇತರ ಗಂಭೀರ ಜವಾಬ್ದಾರಿಗಳು ಇರುವುದಾದರೂ, ಕೂಟದ ಮಹತ್ವವನ್ನು ಮನಗಂಡು, ಬಹುಮಟ್ಟಿಗೆ ಯಾವಾಗಲೂ ಅದಕ್ಕೆ ಉಪಸ್ಥಿತರಿರುವವರು ಇದ್ದಾರೆಂಬುದನ್ನು ಎಂದಿಗೂ ಮರೆಯಬೇಡಿರಿ. ನಾವು ಅನುಕರಿಸಲಿಕ್ಕಾಗಿ ಇವರು ಎಂತಹ ಉತ್ತಮ ಮಾದರಿಗಳು!—ಲೂಕ 2:37ನ್ನು ಹೋಲಿಸಿರಿ.
4 ಚಿಕ್ಕದಾದ ಪುಸ್ತಕ ಅಭ್ಯಾಸದ ಗುಂಪಿನಿಂದ ಹಿಡಿದು ದೊಡ್ಡ ಅಧಿವೇಶನದ ವರೆಗೂ, ನಮ್ಮ ಎಲ್ಲ ಕ್ರೈಸ್ತ ಕೂಟಗಳಿಗೆ ಹಾಜರಾಗುವ ಮೂಲಕ, ಸತ್ಯಾರಾಧನೆಯನ್ನು ಬೆಂಬಲಿಸುವುದನ್ನು ನಾವು ನಮ್ಮ ರೂಢಿಯನ್ನಾಗಿ ಮಾಡಿಕೊಳ್ಳೋಣ. ಈ ಕೂಟಗಳಿಗೆ ಹಾಜರಾಗುವುದನ್ನು ನಾವು ಏಕೆ ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ಳಬೇಕು? ಏಕೆಂದರೆ ನಾವು ಜೊತೆಯಾಗಿ ಕೂಡಿಬರಬೇಕೆಂಬುದು ಒಂದು ದೈವಿಕ ಆಜ್ಞೆಯಾಗಿದೆ. ಆದರೆ ಇನ್ನೂ ಇತರ ಪ್ರಾಮುಖ್ಯ ಕಾರಣಗಳು ಇವೆ. ನಮಗೆಲ್ಲರಿಗೂ ದೈವಿಕ ಉಪದೇಶದ ಪ್ರಯೋಜನಗಳು ಮತ್ತು—ಕೂಟಗಳಲ್ಲಿ ದೊರೆಯುವ—ಪವಿತ್ರಾತ್ಮದ ಸಹಾಯದ ಅಗತ್ಯವಿದೆ. (ಮತ್ತಾ. 18:20) ನಮ್ಮ ಸಹೋದರರೊಂದಿಗೆ ಸಹವಾಸಿಸುವಾಗ ನಾವು ಉತ್ತೇಜನದ ವಿನಿಮಯದಿಂದ ಕಟ್ಟಲ್ಪಡುತ್ತೇವೆ.—ಇಬ್ರಿ. 10:24, 25.
5 ರೂಪಾಂತರದ ಸಮಯದಲ್ಲಿ, “ಗುರುವೇ ನಾವು ಇಲ್ಲೇ ಇರುವದು ಒಳ್ಳೇದು” ಎಂದು ಪೇತ್ರನು ಹೇಳಿದನು. (ಲೂಕ 9:33) ನಮ್ಮ ಎಲ್ಲ ಕ್ರೈಸ್ತ ಕೂಟಗಳ ವಿಷಯದಲ್ಲಿಯೂ ನಮಗೆ ಹಾಗೆಯೇ ಅನಿಸಬೇಕು. ಸದಾ ಉಪಸ್ಥಿತರಿರುವುದು ಖಂಡಿತವಾಗಿಯೂ ಎಷ್ಟೊಂದು ಒಳ್ಳೇದಾಗಿದೆ!