ಭೂಮಿಯ ಮೇಲಿರುವ ಅತಿ ಸಂತೋಷಭರಿತ ಜನರು
1 “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಸಂತೋಷಭರಿತರು!” (ಕೀರ್ತ. 144:15, NW) ಈ ಮಾತುಗಳು, ಯೆಹೋವನ ಸಾಕ್ಷಿಗಳೇ ಭೂಮಿಯ ಮೇಲಿರುವ ಅತಿ ಸಂತೋಷಭರಿತ ಜನರು ಎಂಬುದನ್ನು ವರ್ಣಿಸುತ್ತವೆ. ಏಕಮಾತ್ರ ಸತ್ಯ ಮತ್ತು ಜೀವಂತ ದೇವರಾಗಿರುವ ಯೆಹೋವನನ್ನು ಸೇವಿಸುವುದರಿಂದ ಸಿಗುವ ಸಂತೋಷಕ್ಕಿಂತ ಹೆಚ್ಚಿನ ಸಂತೋಷವು ಬೇರೆ ಯಾವುದರಿಂದಲೂ ಸಿಗುವುದಿಲ್ಲ. ಆತನು ‘ಸಂತೋಷಭರಿತ ದೇವರು’ ಆಗಿರುವುದರಿಂದ, ಆತನನ್ನು ಆರಾಧಿಸುವವರು ಆತನ ಹರ್ಷವನ್ನು ಪ್ರತಿಬಿಂಬಿಸುತ್ತಾರೆ. (1 ತಿಮೊ. 1:11, NW) ನಾವು ಇಷ್ಟು ಸಂತೋಷಭರಿತರಾಗಿರಲು ಸಾಧ್ಯಗೊಳಿಸುವಂಥ ನಮ್ಮ ಆರಾಧನೆಯ ಕೆಲವು ಅಂಶಗಳು ಯಾವುವು?
2 ಸಂತೋಷಭರಿತರಾಗಿರಲು ಕಾರಣಗಳು: “[ನಮ್ಮ] ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳ”ವರಾಗಿರುವುದರಿಂದ ಸಂತೋಷವು ಫಲಿಸುತ್ತದೆ ಎಂಬ ಆಶ್ವಾಸನೆಯನ್ನು ಯೇಸು ನಮಗೆ ಕೊಟ್ಟನು. (ಮತ್ತಾ. 5:3, NW) ಕ್ರಮವಾಗಿ ಬೈಬಲಿನ ಅಧ್ಯಯನ ಮಾಡುವುದು ಮತ್ತು ನಮ್ಮ ಎಲ್ಲ ಕ್ರೈಸ್ತ ಕೂಟಗಳಿಗೆ ಹಾಜರಾಗುವುದು ಆ ಅಗತ್ಯವನ್ನು ಪೂರೈಸುತ್ತದೆ. ದೇವರ ವಾಕ್ಯದ ಕುರಿತಾದ ಸತ್ಯವನ್ನು ಕಲಿತುಕೊಳ್ಳುವುದು ನಮ್ಮನ್ನು ಧಾರ್ಮಿಕ ಅಸತ್ಯತೆ ಮತ್ತು ತಪ್ಪಿನಿಂದ ಬಿಡಿಸಿದೆ. (ಯೋಹಾ. 8:32) ಮಾತ್ರವಲ್ಲದೆ, ಅತಿ ಉತ್ತಮವಾದ ಜೀವನ ರೀತಿಯನ್ನು ಶಾಸ್ತ್ರವಚನಗಳು ನಮಗೆ ಬೋಧಿಸಿವೆ. (ಯೆಶಾ. 48:17) ಈ ಕಾರಣದಿಂದಾಗಿ, ನಮ್ಮ ಸಹೋದರರ ಸಂತೋಷಭರಿತ ಸಹವಾಸದಲ್ಲಿ ನಾವು ಸ್ವಸ್ಥಕರ ಕ್ರೈಸ್ತ ಸಾಹಚರ್ಯವನ್ನು ಅನುಭವಿಸುತ್ತೇವೆ.—1 ಥೆಸ. 2:19, 20; 1 ಪೇತ್ರ 2:17.
3 ದೇವರ ಉನ್ನತ ನೈತಿಕ ಮಟ್ಟಗಳಿಗೆ ವಿಧೇಯತೆ ತೋರಿಸುವ ಮೂಲಕ ನಾವು ಮಹಾ ಸಂತೃಪ್ತಿಯನ್ನು ಪಡೆದುಕೊಳ್ಳುತ್ತೇವೆ, ಏಕೆಂದರೆ ಇದು ನಮ್ಮನ್ನು ಸಂರಕ್ಷಿಸುತ್ತದೆ ಮತ್ತು ಯೆಹೋವನನ್ನು ಸಂತೋಷಪಡಿಸುತ್ತದೆ ಎಂಬುದು ನಮಗೆ ಗೊತ್ತಿದೆ. (ಜ್ಞಾನೋ. 27:11) ಒಬ್ಬ ಪತ್ರಿಕಾ ವರದಿಗಾರನು ಗಮನಿಸಿದ್ದು: “ಅವರ ಎಲ್ಲಾ ಕಟ್ಟುನಿಟ್ಟಾದ ಮಟ್ಟಗಳ ಹೊರತೂ, ಯೆಹೋವನ ಸಾಕ್ಷಿಗಳು ಅಸಂತೋಷಿತರಾಗಿರುವಂತೆ ತೋರುವುದಿಲ್ಲ. ಅದಕ್ಕೆ ಬದಲಾಗಿ, ಅವರಲ್ಲಿರುವ ಎಳೆಯರು ಮತ್ತು ವೃದ್ಧರು ಅಸಾಧಾರಣವಾದ ಆನಂದ ಮತ್ತು ಒಳ್ಳೆಯ ಸಮತೋಲನವುಳ್ಳವರಾಗಿ ತೋರುತ್ತಾರೆ.” ನಮ್ಮ ಈ ಸಂತೋಷಕರ ಜೀವನದಲ್ಲಿ ಪಾಲಿಗರಾಗಲು ನಾವು ಇತರರಿಗೆ ಹೇಗೆ ಸಹಾಯಮಾಡಬಲ್ಲೆವು?
4 ಸಂತೋಷವನ್ನು ಕಂಡುಕೊಳ್ಳಲು ಇತರರಿಗೆ ಸಹಾಯಮಾಡಿರಿ: ಲೋಕವೆಲ್ಲ ಅಸಂತೋಷಭರಿತವಾಗಿದೆ ಮತ್ತು ಜನರಿಗೆ ಸಾಮಾನ್ಯವಾಗಿ ಭವಿಷ್ಯದ ಕುರಿತು ಮೊಬ್ಬಾದ ಹೊರನೋಟವಿದೆ. ಆದರೆ, ಒಂದು ದಿನ ಎಲ್ಲ ನಿರಾಶೆಯು ಗತ ಸಂಗತಿಯಾಗಿಬಿಡುವುದು ಎಂಬುದನ್ನು ತಿಳಿದ ನಮಗೆ ಒಂದು ಉಜ್ವಲವಾದ ಭವಿಷ್ಯತ್ತು ಇದೆ. (ಪ್ರಕ. 21:3, 4) ಆದುದರಿಂದ, ಯೆಹೋವನ ಕುರಿತಾದ ನಮ್ಮ ನಿರೀಕ್ಷೆ ಮತ್ತು ನಮ್ಮ ನಂಬಿಕೆಗಳನ್ನು ಹಂಚಿಕೊಳ್ಳಲು ಸಹೃದಯಿಗಳಾದ ಜನರಿಗಾಗಿ ಹುಡುಕುತ್ತಾ, ನಾವು ಶುಶ್ರೂಷೆಯಲ್ಲಿ ಹುರುಪಿನಿಂದ ಭಾಗವಹಿಸುತ್ತೇವೆ.—ಯೆಹೆ. 9:4.
5 ಒಬ್ಬ ಪಯನೀಯರ್ ಸಹೋದರಿಯು ಹೇಳಿದ್ದು: “ಯೆಹೋವನ ಮತ್ತು ಆತನ ಸತ್ಯದ ಕುರಿತು ಜನರು ತಿಳಿಯುವಂತೆ ಸಹಾಯಮಾಡುವದಕ್ಕಿಂತ ಹೆಚ್ಚು ತೃಪ್ತಿದಾಯಕವಾದದ್ದು ಬೇರೇನೂ ಇಲ್ಲ.” ಇನ್ನೂ ಹೆಚ್ಚಿನವರು ಮನೆ ಬೈಬಲ್ ಅಧ್ಯಯನಗಳನ್ನು ಸ್ವೀಕರಿಸುವಂತೆ ಪ್ರೋತ್ಸಾಹಿಸಲು, ನಾವು ನಮ್ಮಿಂದಾದುದೆಲ್ಲವನ್ನೂ ಮಾಡೋಣ. ಯೆಹೋವನನ್ನು ಸೇವಿಸುವುದು ಮತ್ತು ಇತರರು ಆತನನ್ನು ಸೇವಿಸುವಂತಾಗಲು ಅವರಿಗೆ ಸಹಾಯಮಾಡುವುದರಲ್ಲಿ ನಮ್ಮನ್ನೇ ನೀಡಿಕೊಳ್ಳುವುದು ಅತಿ ಹೆಚ್ಚಿನ ಸಂತೋಷವನ್ನು ತರುತ್ತದೆ.—ಅ. ಕೃ. 20:35.