ಅಂಗವಿಕಲರು—ಆದರೂ ಫಲಪ್ರದರು
1 ಅಂಗವಿಕಲತೆಯ ಸಮಸ್ಯೆಯಿರುವ ಅನೇಕ ಯೆಹೋವನ ಸಾಕ್ಷಿಗಳಲ್ಲಿ ನೀವೂ ಒಬ್ಬರಾಗಿರುವುದಾದರೆ, ಈಗಲೂ ನೀವು ಒಂದು ಫಲಪ್ರದ ಶುಶ್ರೂಷೆಯನ್ನು ಹೊಂದಿರಬಲ್ಲಿರಿ. ವಾಸ್ತವದಲ್ಲಿ, ನಿಮ್ಮ ಪರಿಸ್ಥಿತಿಗಳು ನೀವು ಸಾಕ್ಷಿಕೊಡುವಂತೆ ಮತ್ತು ಇತರರನ್ನು ಪ್ರೋತ್ಸಾಹಿಸುವಂತೆ ವಿಶೇಷ ಅವಕಾಶಗಳನ್ನು ಒದಗಿಸಬಹುದು.
2 ಒಂದು ಸಾಕ್ಷಿಯನ್ನು ಕೊಡುವುದು: ಅಂಗವಿಕಲತೆಯೊಂದಿಗೆ ಹೋರಾಡಬೇಕಾಗಿರುವ ಅನೇಕರು, ಶುಶ್ರೂಷೆಯಲ್ಲಿ ಪೂರ್ಣ ರೀತಿಯಲ್ಲಿ ಭಾಗವಹಿಸುತ್ತಾರೆ. ಉದಾಹರಣೆಗೆ, ಒಂದು ಶಸ್ತ್ರಚಿಕಿತ್ಸೆಯಿಂದಾಗಿ ಚಲನೆ ಮತ್ತು ಮಾತು ತೀವ್ರವಾಗಿ ಬಾಧಿಸಲ್ಪಟ್ಟ ಒಬ್ಬ ಸಹೋದರಿಯು, ತನ್ನ ಗಂಡನು ಜನನಿಬಿಡವಾದ ಒಂದು ಫುಟ್ಪಾತ್ ಬಳಿ ಕಾರನ್ನು ನಿಲ್ಲಿಸುವುದಾದರೆ ತಾನು ಪತ್ರಿಕಾ ಸೇವೆಯಲ್ಲಿ ಒಳಗೂಡಬಲ್ಲೆ ಎಂಬುದನ್ನು ಕಂಡುಕೊಂಡಳು. ಒಂದು ಸಂದರ್ಭದಲ್ಲಿ, ಅವಳು 80 ಪತ್ರಿಕೆಗಳನ್ನು ಕೇವಲ ಎರಡು ತಾಸುಗಳಲ್ಲಿ ನೀಡಿದಳು! ನಿಮ್ಮ ವಿಶೇಷ ಪರಿಸ್ಥಿತಿಗಳು ತಲಪಲು ಕಷ್ಟಕರವಾದ ಜನರನ್ನು ತಲಪುವಂತೆ ಮಾಡಬಹುದು. ಇದು ನಿಜವಾದರೆ, ಇವನ್ನು ನಿಮ್ಮ ವಿಶೇಷ ಟೆರಿಟೊರಿಯಾಗಿ ಪರಿಗಣಿಸಿರಿ.
3 ನಿಮ್ಮ ಸಾರುವಿಕೆಯು ತುಂಬ ಪರಿಣಾಮಕಾರಿಯಾಗಿರಬಲ್ಲದು! ಇತರರು ನಿಮ್ಮ ದೃಢಸಂಕಲ್ಪ ಮತ್ತು ಬೈಬಲ್ ಸತ್ಯವು ನಿಮ್ಮ ಜೀವಿತದ ಮೇಲೆ ಬೀರಿರುವ ಒಳ್ಳೆಯ ಪರಿಣಾಮವನ್ನು ಅವಲೋಕಿಸುವಾಗ, ಅವರು ರಾಜ್ಯದ ಸಂದೇಶದೆಡೆಗೆ ಆಕರ್ಷಿತರಾಗಬಹುದು. ಮಾತ್ರವಲ್ಲದೆ, ಬಾಧೆಯನ್ನು ಅನುಭವಿಸುತ್ತಿರುವ ಜನರನ್ನು ನೀವು ಸಂದರ್ಶಿಸುವಾಗ, ಜೀವನದಲ್ಲಿನ ನಿಮ್ಮ ಅನುಭವವು ನೀವು ಅವರಿಗೆ ದೇವರ ವಾಕ್ಯದಿಂದ ಸಾಂತ್ವನವನ್ನು ಒದಗಿಸುವಂತೆ ನಿಮ್ಮನ್ನು ಸಜ್ಜುಗೊಳಿಸಬಹುದು.—2 ಕೊರಿಂ. 1:4.
4 ಇತರರನ್ನು ಬಲಪಡಿಸಿರಿ: 37 ವರ್ಷಗಳ ವರೆಗೆ ಒಂದು ಕಬ್ಬಿಣದ ಶ್ವಾಸಕೋಶಕ್ಕೆ ನಿರ್ಬಂಧಿಸಲ್ಪಟ್ಟಿದ್ದರೂ, ಬೈಬಲ್ ಸತ್ಯದ ನಿಷ್ಕೃಷ್ಟ ಜ್ಞಾನವನ್ನು ಪಡೆದುಕೊಳ್ಳುವಂತೆ 17 ಮಂದಿಗೆ ಸಹಾಯಮಾಡಿದ ಲಾರೆಲ್ ನಿಸ್ಬೆಟ್ ಅವರ ಜೀವನ ಕಥೆಯಿಂದ ನೀವು ಪ್ರೋತ್ಸಾಹವನ್ನು ಪಡೆಯಲಿಲ್ಲವೋ? ತದ್ರೀತಿಯಲ್ಲಿ, ನಿಮ್ಮ ಉದಾಹರಣೆಯು ಜೊತೆ ವಿಶ್ವಾಸಿಗಳು ಯೆಹೋವನ ಸೇವೆಯಲ್ಲಿ ಮುಂದೊತ್ತುವಂತೆ ಅವರನ್ನು ಪ್ರಚೋದಿಸಬಹುದು.—g-KA93 1/22 ಪು. 18-21.
5 ನಿಮ್ಮ ಪರಿಸ್ಥಿತಿಗಳು ನೀವು ಎಷ್ಟು ಬಯಸುತ್ತೀರೋ ಅಷ್ಟರ ಮಟ್ಟಿಗೆ ಶುಶ್ರೂಷೆಯಲ್ಲಿ ತೊಡಗುವುದರಿಂದ ನಿಮ್ಮನ್ನು ತಡೆಯಬಹುದಾದರೂ, ನೀವು ಇತರರನ್ನು ಬಲಪಡಿಸಬಲ್ಲಿರಿ. ಒಬ್ಬ ಸಹೋದರನು ಹೇಳಿದ್ದು: “ತೀವ್ರವಾಗಿ ಅಂಗವಿಕಲನಾಗಿರುವ ಒಬ್ಬ ವ್ಯಕ್ತಿಯು ಕೂಡ ಇತರರಿಗೆ ದೊಡ್ಡ ಬೆಂಬಲವಾಗಿ ಪರಿಣಮಿಸಬಲ್ಲನು ಎಂಬುದನ್ನು ನಾನು ಕಲಿತುಕೊಂಡಿದ್ದೇನೆ. ನಾನು ಮತ್ತು ನನ್ನ ಹೆಂಡತಿ ಸಭೆಯಲ್ಲಿರುವ ಅನೇಕರಿಗೆ ಒಂದು ಲಂಗರವಾಗಿ ಪರಿಣಮಿಸಿದ್ದೇವೆ. ನಮ್ಮ ಪರಿಸ್ಥಿತಿಗಳ ಕಾರಣದಿಂದಾಗಿ ನಾವು ಯಾವಾಗಲೂ ಹತ್ತಿರದಲ್ಲಿದ್ದೇವೆ, ಲಭ್ಯವಿದ್ದೇವೆ.” ಆದರೂ, ನಿಮ್ಮ ಅಂಗವಿಕಲತೆಯಿಂದಾಗಿ, ನಿಮ್ಮ ಹುರುಪಿಗೆ ತಕ್ಕ ಹಾಗೆ ನೀವು ಯಾವಾಗಲೂ ಕ್ರಿಯೆಗೈಯಲು ಆಗುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲಾಗುತ್ತದೆ. ಹಾಗಿದ್ದರೂ, ಸ್ವಲ್ಪ ಸಹಾಯದೊಂದಿಗೆ ನೀವು ಶುಶ್ರೂಷೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬಹುದು. ಆದುದರಿಂದ, ನಿಮಗೆ ಸ್ವಲ್ಪ ನೆರವಿನ ಅಗತ್ಯವಿರುವುದಾದರೆ, ಇದನ್ನು ಹಿರಿಯರ ಅಥವಾ ಸಭೆಯಲ್ಲಿ ನಿಮಗೆ ನೆರವಾಗಬಲ್ಲ ಇತರರ ಗಮನಕ್ಕೆ ತರಲು ಹಿಂಜರಿಯಬೇಡಿ.
6 ಯೆಹೋವನನ್ನು ಸೇವಿಸಲಿಕ್ಕಾಗಿ ನೀವು ಮಾಡುವ ಎಲ್ಲವನ್ನೂ ಆತನು ಗಮನಿಸುತ್ತಾನೆ, ಮತ್ತು ನಿಮ್ಮ ಪೂರ್ಣಪ್ರಾಣದ ಸೇವೆಯಲ್ಲಿ ಆತನು ಸಂತೋಷವನ್ನು ಕಂಡುಕೊಳ್ಳುತ್ತಾನೆ. (ಕೀರ್ತ. 139:1-4) ನೀವು ಆತನ ಮೇಲೆ ಆತುಕೊಳ್ಳುವಾಗ, ಫಲಪ್ರದವಾದ ಮತ್ತು ಅರ್ಥಭರಿತವಾದ ಶುಶ್ರೂಷೆಯನ್ನು ಹೊಂದಿರುವಂತೆ ಆತನು ನಿಮ್ಮನ್ನು ಶಕ್ತಗೊಳಿಸಬಲ್ಲನು.—2 ಕೊರಿಂ. 12:7-10.