ಪ್ರೀತಿ—ಫಲಪ್ರದವಾದ ಶುಶ್ರೂಷೆಗೆ ಕೀಲಿ ಕೈ
1 “ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು.” (ಮತ್ತಾ. 11:28) ಇಂತಹ ಸವಿನುಡಿಗಳು ಜನರ ಮೇಲೆ ಯೇಸುವಿಗಿದ್ದ ಗಾಢ ಪ್ರೀತಿಯನ್ನು ವ್ಯಕ್ತಪಡಿಸಿದವು. ಕ್ರೈಸ್ತ ಶುಶ್ರೂಷಕರಾದ ನಾವು ಯೇಸುವನ್ನು ಅನುಕರಿಸುತ್ತಾ, ಈ ಪ್ರೀತಿರಹಿತ ಲೋಕದಲ್ಲಿ ನೊಂದುಬಳಲಿರುವ ಜನರಿಗೆ ಪ್ರೀತಿಯನ್ನು ತೋರಿಸಲು ಬಯಸುತ್ತೇವೆ. ಆದರೆ ನಾವು ಸುವಾರ್ತೆಯನ್ನು ಸಾರುವಾಗ ಹೇಗೆ ಪ್ರೀತಿಯನ್ನು ತೋರಿಸಬಲ್ಲೆವು?
2 ನುಡಿಯಲ್ಲಿ: ಜನರ ಮೇಲೆ ಯೇಸುವಿಗಿದ್ದ ಪ್ರೀತಿಯು ಸುವಾರ್ತೆಯನ್ನು ಹಂಚಿಕೊಳ್ಳಲು ಪ್ರತಿಯೊಂದು ಸಂದರ್ಭವನ್ನು ಸದುಪಯೋಗಿಸಿಕೊಳ್ಳುವಂತೆ ಅವನನ್ನು ಪ್ರೇರಿಸಿತು. (ಯೋಹಾ. 4:7-14) ಅನೌಪಚಾರಿಕವಾಗಿ ಸಾಕ್ಷಿನೀಡಲು ನಮಗಿರುವ ಹಿಂಜರಿಕೆಯನ್ನು ಹೊಡೆದೋಡಿಸುವಂತೆ ಪ್ರೀತಿಯು ನಮಗೆ ಸಹಾಯಮಾಡುತ್ತದೆ. ಆರು ವಯಸ್ಸಿನ ಹುಡುಗಿಯೊಬ್ಬಳು ವೈದ್ಯರಿಗಾಗಿ ಕಾಯುವ ಕೋಣೆಯಲ್ಲಿ ತನ್ನ ಪಕ್ಕದಲ್ಲಿ ಕೂತಿದ್ದ ಸ್ತ್ರೀಗೆ ಉತ್ತಮವಾದ ಸಾಕ್ಷಿಯನ್ನು ನೀಡಿದಳು. ಇದನ್ನು ಮಾಡುವಂತೆ ಆಕೆಯನ್ನು ಪ್ರೇರಿಸಿದ್ದು ಯಾವುದು? “ಅವಳನ್ನು ನೋಡಿದಾಗ ಯೆಹೋವನ ಕುರಿತು ತಿಳಿಯುವ ಅಗತ್ಯ ಅವಳಿಗಿದೆಯೆಂದು ನನಗನಿಸಿತು” ಎಂದು ಆ ಹುಡುಗಿಯು ಹೇಳಿದಳು.
3 ಯಥಾರ್ಥ ನಸುನಗೆ ಮತ್ತು ಸ್ನೇಹಪರ ಸ್ವರದಲ್ಲಿ ಮಾತಾಡುವ ಮೂಲಕ ಜನರ ಮೇಲೆ ನಮಗಿರುವ ಆಸಕ್ತಿಯನ್ನು ನಾವು ತೋರಿಸಸಾಧ್ಯವಿದೆ. ಜನರು ಮಾತಾಡುವಾಗ ಜಾಗರೂಕತೆಯಿಂದ ಕೇಳಿಸಿಕೊಳ್ಳುವ, ಅವರಿಗಿರುವ ಚಿಂತೆಗಳನ್ನು ಗ್ರಹಿಸುವ ಮತ್ತು ಅವರಲ್ಲಿ ನೈಜವಾದ ವೈಯಕ್ತಿಕ ಆಸಕ್ತಿಯನ್ನು ತೋರಿಸುವ ಮೂಲಕ ನಾವು ಪ್ರೀತಿಯನ್ನು ಪ್ರದರ್ಶಿಸಬಲ್ಲೆವು. (ಜ್ಞಾನೋ. 15:23) ಮಾತ್ರವಲ್ಲ, ಯೇಸುವನ್ನು ಅನುಕರಿಸುತ್ತಾ ರಾಜ್ಯ ಸಂದೇಶದ ಸಕಾರಾತ್ಮಕ ವಿಷಯವನ್ನು ಮತ್ತು ಜನರೆಡೆಗೆ ಯೆಹೋವನಿಗಿರುವ ಪ್ರೀತಿಪರ ಕನಿಕರವನ್ನು ಒತ್ತಿಹೇಳುವುದೂ ಅಗತ್ಯ.—ಮತ್ತಾ. 24:14; ಲೂಕ 4:18.
4 ನಡೆಯಲ್ಲಿ: ಯೇಸು ಇತರರ ಅಗತ್ಯಗಳನ್ನು ಅರಿತು ಕೂಡಲೇ ಪ್ರತಿಕ್ರಿಯಿಸುತ್ತಾ ಅವರಿಗೆ ಪ್ರಾಯೋಗಿಕವಾಗಿಯೂ ಭೌತಿಕವಾಗಿಯೂ ಸಹಾಯಮಾಡಿದನು. (ಮತ್ತಾ. 15:32) ಶುಶ್ರೂಷೆಯಲ್ಲಿ ಪಾಲ್ಗೊಳ್ಳುತ್ತಿರುವಾಗ ಪ್ರೀತಿಪೂರ್ವಕ ದಯೆಯ ಕೃತ್ಯಗಳನ್ನು ಮಾಡಲು ಸಹ ನಮಗೆ ಅವಕಾಶಗಳು ದೊರಕಬಹುದು. ಒಬ್ಬಾಕೆಯು ತನಗೆ ಬಂದ ಒಂದು ಪ್ರಾಮುಖ್ಯವಾದ ದೂರವಾಣಿ ಕರೆಯನ್ನು ಅರ್ಥಮಾಡಿಕೊಳ್ಳಲು ಕಷ್ಟಪಡುತ್ತಿದ್ದುದನ್ನು ಸಹೋದರಿಯೊಬ್ಬಳು ಗಮನಿಸಿದಳು. ಕರೆ ಮಾಡಿದಾತನ ಮಾತುಗಳನ್ನು ಭಾಷಾಂತರ ಮಾಡುವ ಮೂಲಕ ಸಹಾಯಮಾಡಲು ನಮ್ಮ ಸಹೋದರಿಯು ಮುಂದಾದಳು. ಈ ಪ್ರೀತಿಪೂರ್ವಕ ಕ್ರಿಯೆಯು ಒಂದು ಶಾಸ್ತ್ರಾಧಾರಿತ ಚರ್ಚೆಗೆ ನಡೆಸಿತು. ಹೀಗೆ ಬೈಬಲ್ ಅಧ್ಯಯನಕ್ಕೆ ಒಪ್ಪಿಕೊಳ್ಳುವಂತೆ ಆ ಸ್ತ್ರೀಗೆ ಸಹಾಯಮಾಡಿತು. ಇನ್ನೊಂದು ಸಂದರ್ಭದಲ್ಲಿ, ಪುನಃರ್ಭೇಟಿ ಮಾಡಲೆಂದು ಹೋಗಿದ್ದ ಒಬ್ಬ ಸಹೋದರನು ಆ ಮನೆಯವನು ಬಾಗಿಲಲ್ಲಿ ಸಿಕ್ಕಿಕೊಂಡಿದ್ದ ಭಾರವಾದ ಸೋಫವನ್ನು ಮನೆಯೊಳಗೆ ತೆಗೆದುಕೊಂಡು ಹೋಗಲು ಕಷ್ಟಪಡುತ್ತಾ ಬೇಸತ್ತು ಹೋಗಿರುವುದನ್ನು ಗಮನಿಸಿದನು. ಆಗ ಸಹೋದರನು ಅದನ್ನು ಒಳಗೆ ತೆಗೆದುಕೊಂಡು ಹೋಗಲು ಸಹಾಯಮಾಡಿದನು. ಸ್ವಲ್ಪ ಸಮಯದ ನಂತರ ಅದೇ ಸೋಫದ ಮೇಲೆ ಕುಳಿತು ಆ ಕೃತಜ್ಞ ಮನುಷ್ಯನೊಂದಿಗೆ ಬೈಬಲ್ ಅಧ್ಯಯನವನ್ನು ಆರಂಭಿಸಿದನು.
5 ನಾವು ಶುಶ್ರೂಷೆಯಲ್ಲಿ ಭಾಗವಹಿಸುತ್ತಿರುವಾಗ ಯೆಹೋವನ ಮೇಲೆ ಮತ್ತು ನೆರೆಯವರ ಮೇಲೆ ನಮಗಿರುವ ಪ್ರೀತಿಯನ್ನು ಪ್ರದರ್ಶಿಸುತ್ತೇವೆ. (ಮತ್ತಾ. 22:36-40) ಹೀಗೆ, ನಡೆ-ನುಡಿಗಳಲ್ಲಿ ನಾವು ತೋರಿಸುವಂತಹ ಪ್ರೀತಿಯು ಪ್ರಾಮಾಣಿಕ ಹೃದಯದ ಜನರಿಗೆ ನಮ್ಮಲ್ಲಿ ಸತ್ಯವಿದೆ ಎಂಬುದನ್ನು ಮನಗಾಣಲು ಸಹಾಯಮಾಡುತ್ತದೆ.