‘ಉತ್ತರಹೇಳಬೇಕಾದ ರೀತಿಯನ್ನು ತಿಳಿದುಕೊಳ್ಳಿರಿ’
ಅನುಕೂಲವಲ್ಲದ ಪರಿಸ್ಥಿತಿಯಲ್ಲಿ ಸಾರುವುದು ಎಷ್ಟು ಕಷ್ಟಕರ ಎಂಬುದು ಅಪೊಸ್ತಲ ಪೌಲನಿಗೆ ಚೆನ್ನಾಗಿ ತಿಳಿದಿತ್ತು. ಸಾ.ಶ. 56ರ ಸುಮಾರಿಗೆ ಆತನು ಯೆರೂಸಲೇಮಿನಲ್ಲಿ ಎದುರಿಸಿದ ಸನ್ನಿವೇಶವನ್ನು ಪರಿಗಣಿಸಿರಿ. (ಅ. ಕೃ. 21:27, 28, 30, 39, 40) ಅಂಥ ಸನ್ನಿವೇಶದಲ್ಲಿ ಜನರಲ್ಲಿದ್ದ ಪೂರ್ವಗ್ರಹವನ್ನು ತೊಲಗಿಸಲು ಮತ್ತು ಸುವಾರ್ತೆಯ ಕಡೆಗಿನ ವಿರೋಧವನ್ನು ಕಡಿಮೆಗೊಳಿಸಲು, ಜಾಗ್ರತೆಯಿಂದ ಮಾತಾಡಬೇಕೆಂಬದನ್ನು ಆತನು ಮನಗಂಡನು. (ಅ. ಕೃ. 22:1, 2) ಫಲಿತಾಂಶವಾಗಿ ಈ ಸಂದರ್ಭದಲ್ಲಿ ಆತನ ಕೇಳುಗರು ತಮ್ಮ ನಕಾರಾತ್ಮಕ ಮನೋಭಾವವನ್ನು ಬದಲಾಯಿಸದಿದ್ದರೂ ಕನಿಷ್ಠಪಕ್ಷ ಆತನ ಮಾತುಗಳನ್ನು ಕೇಳಿದರು. (ಅ. ಕೃ. 22:22) ತನಗಾದ ಈ ಅನುಭವದಿಂದಾಗಿ ಪೌಲನು ಕೊಲೊಸ್ಸೆ ಸಭೆಯವರಿಗೆ, ಅವರು ಹೊರಗಿನವರ ಮುಂದೆ ಜ್ಞಾನವುಳ್ಳವರಾಗಿ ನಡೆದುಕೊಳ್ಳಲು, ಇಂಪಾಗಿ ಮಾತಾಡಲು ಮತ್ತು ಆಕ್ಷೇಪಿಸುವವರಿಗೆ ‘ಉತ್ತರಹೇಳಬೇಕಾದ ರೀತಿಯನ್ನು ತಿಳಿದುಕೊಳ್ಳುವಂತೆ’ ಉತ್ತೇಜಿಸಿದನು. (ಕೊಲೊ. 4:5, 6) ನಾವು ಸಹ ಶುಶ್ರೂಷೆಯಲ್ಲಿ ತೊಡಗಿರುವಾಗ ಇದನ್ನೇ ಮಾಡಬೇಕು.
ನಾವು ಆದಷ್ಟು ಸಮಾಧಾನದಿಂದ ಸಾರುವ ಮತ್ತು ಬೋಧಿಸುವ ಕೆಲಸವನ್ನು ಮಾಡಲು ಪ್ರಯತ್ನಿಸಿದರೂ ಕೆಲವರು ನಮ್ಮ ಚಟುವಟಿಕೆಯನ್ನು ಪ್ರಶ್ನಿಸಬಹುದು. ನಾವು ಕಾನೂನನ್ನು ಉಲ್ಲಂಘಿಸಿ ‘ಮತಾಂತರ’ ಮಾಡುತ್ತಿದ್ದೇವೆಂದು ಅವರು ಆರೋಪಿಸಬಹುದು. ಇಂಥ ಸನ್ನಿವೇಶವನ್ನು ಯಶಸ್ವಿಕರವಾಗಿ ನಿಭಾಯಿಸಲು ಅದರ ಕುರಿತು ಮುಂಚಿತವಾಗಿ ಆಲೋಚಿಸುವುದು ಅಗತ್ಯ. ಪ್ರಶ್ನೆಗಳನ್ನು ಮನೆಯವನೊಬ್ಬನು ಕೇಳಲಿ ಅಥವಾ ಗುಂಪು ಕೂಡಿದ ಜನರೇ ಕೇಳಲಿ, ಉತ್ತರಕೊಡುವಾಗ ಪ್ರಶಾಂತರಾಗಿರಿ. ಯೆಹೋವನು ತನ್ನ ಪವಿತ್ರಾತ್ಮದ ಮೂಲಕ ನಿಮ್ಮೊಂದಿಗೆ ಇರುತ್ತಾನೆಂಬ ಭರವಸೆಯಿಂದಿರಿ. (ಮತ್ತಾ. 10:19, 20) ಮಾತಾಡುವಾಗ ಬಳಸುವ ಪದಗಳ ವಿಷಯದಲ್ಲೂ ಎಚ್ಚರವಹಿಸಬೇಕು. ಜನರು ತಪ್ಪರ್ಥ ಮಾಡಿಕೊಳ್ಳುವ ಅಥವಾ ನಕಾರಾತ್ಮಕವಾಗಿ ತೆಗೆದುಕೊಳ್ಳಬಹುದಾದ ಪದಗಳನ್ನು ಉಪಯೋಗಿಸದಿರಿ. ಉದಾಹರಣೆಗೆ, ದೇವರ ವಾಕ್ಯದಿಂದ ಒಂದು ಒಳ್ಳೇ ವಿಷಯವನ್ನು “ಸಾರುತ್ತಿದ್ದೇವೆ/ಪ್ರಚಾರ ಮಾಡುತ್ತಿದ್ದೇವೆ” ಎಂದು ಹೇಳುವ ಬದಲು ಆ ಕುರಿತು “ಮಾತಾಡುತ್ತಿದ್ದೇವೆ” ಎಂದು ಹೇಳಿ. ನಮ್ಮ ಸಾಹಿತ್ಯಗಳನ್ನು “ಕೊಡುತ್ತಿದ್ದೇವೆ” ಎನ್ನುವ ಬದಲು ಅವುಗಳನ್ನು ಓದುವಂತೆ “ಕೇಳಿಕೊಳ್ಳುತ್ತೇವೆ” ಎಂದು ನೀವು ಹೇಳಬಹುದು. ಹೀಗೆ ಹೇಳುವುದರಿಂದ ಕ್ರಿಸ್ತ ಯೇಸುವನ್ನು ಅನುಕರಿಸುವ ನಮ್ಮ ನೇಮಕದ ವಿಷಯದಲ್ಲಿ ನಾವು ನಾಚಿಕೊಳ್ಳುವುದಿಲ್ಲ ಬದಲಿಗೆ ಜಾಣ್ಮೆಯಿಂದ ನಡೆದುಕೊಳ್ಳುತ್ತೇವೆ.
“ನೀವು ಪ್ರಚಾರ ಮಾಡುತ್ತಿದ್ದೀರಿ/ಮತಾಂತರ ಮಾಡುತ್ತಿದ್ದೀರಿ” ಎಂದು ಯಾರಾದರೂ ಆರೋಪಿಸುವಲ್ಲಿ ಆಗೇನು? ನೀವು ಹೀಗೆ ಉತ್ತರಿಸಬಹುದು: “ಧರ್ಮ ಬದಲಾಯಿಸಿರಿ ಎಂದು ನಾವು ಯಾರಿಗೂ ಹೇಳುವುದಿಲ್ಲ. ಅಲ್ಲದೆ ಏನಾದರೂ ಕೊಟ್ಟು ಅಥವಾ ಬೇರಾವುದೇ ಸಹಾಯನೀಡಿ ನಾವು ಜನರನ್ನು ಪುಸಲಾಯಿಸುವುದಿಲ್ಲ.” ನೀವು ಸಹ ಅವರ ಹಾಗೆ ಒಬ್ಬ ಕಾರ್ಮಿಕ/ಗೃಹಿಣಿ/ವಿದ್ಯಾರ್ಥಿ ಎಂದು ತಿಳಿಸಬಲ್ಲಿರಿ. ಬಹುಶಃ ನೀವು ಇದನ್ನೂ ಹೇಳಬಹುದು: “ನಾನು ಇಲ್ಲಿಂದಲೇ ಬಂದಿದ್ದೇನೆ. ನಿಮ್ಮೊಟ್ಟಿಗೆ ಸಾಂತ್ವನದ ಹಾಗೂ ಉತ್ತೇಜನದ ಒಂದೆರಡು ಮಾತುಗಳನ್ನಾಡಲು ಬಯಸುತ್ತೇನೆ. ಕೇಳಲು ಇಷ್ಟವಿದ್ದವರೊಂದಿಗೆ ಮಾತ್ರ ಮಾತಾಡುತ್ತೇನೆ, ಬೇಡ ಎಂದು ಹೇಳಿದರೆ ಹೊರಟುಹೋಗುತ್ತೇನೆ.” ಇಲ್ಲದಿದ್ದರೆ ನೀವು ಹೀಗೂ ಹೇಳಬಹುದು: “ನಾನು ಹೇಳುತ್ತಿರುವ ವಿಷಯ ರೇಡಿಯೋ/ಟಿ.ವಿ.ಯಲ್ಲಿ ಪ್ರಸಾರವಾಗುವ ಒಂದು ಸೂಚನೆಯಂತಿದೆ. ಕೆಲವರು ಅದಕ್ಕೆ ಗಮನಕೊಡುತ್ತಾರೆ ಇನ್ನು ಕೆಲವರು ಅದನ್ನು ಕಿವಿಗೇ ಹಾಕಿಕೊಳ್ಳುವುದಿಲ್ಲ. ಅದು ಅವರವರಿಗೆ ಬಿಟ್ಟ ವಿಷಯ. ಆದರೆ ಒಂದುವೇಳೆ ಆ ಸೂಚನೆ ಜೀವ ಮರಣದ ವಿಷಯವಾಗಿದ್ದರೆ ನೀವದಕ್ಕೆ ಕಿವಿಗೊಡುತ್ತಿರಲ್ಲಿಲ್ಲವೇ? ಅದೇ ರೀತಿ ನಾನು, ಒಂದು ಶಾಂತಿಭರಿತ ಹೊಸ ಲೋಕದ ಬಗ್ಗೆ ತಿಳಿಸಲು ಬಂದಿದ್ದೇನೆ. ಅಲ್ಲಿ ಎಲ್ಲ ರೀತಿಯ ಜನರು ಒಂದಾಗಿ ಜೀವಿಸಲಿದ್ದಾರೆ. ಆದರೆ ನಿಮಗೆ ಈ ವಿಷಯ ಕೇಳಲು ಇಷ್ಟವಿಲ್ಲದಿದ್ದರೆ ನಾನು ಹೋಗುತ್ತೇನೆ.”
ಅವರು ಈ ಹೇಳಿಕೆಯನ್ನೂ ಮಾಡಬಹುದು: “ನಮ್ಮ ಮೂರ್ತಿಗಳನ್ನು ತೆಗೆದುಬಿಡಬೇಕು ಮತ್ತು ನಮ್ಮ ದೇವರಿಗೆ ಪೂಜೆಮಾಡಬಾರದು ಅಂಥ ನೀವು ಹೇಳುತ್ತೀರಿ!” ಪ್ರಥಮ ಶತಮಾನದ ಕ್ರೈಸ್ತರ ಮೇಲೂ ಇಂಥದ್ದೇ ಅಪವಾದವನ್ನು ಹೊರಿಸಲಾಗಿತ್ತು. (ಅ. ಕೃ. 19:23-41) ಆಗ ನೀವು ಅವರಿಗೆ ಹೀಗೆ ಹೇಳಬಹುದು: “ಯೆಹೋವನ ಸಾಕ್ಷಿಗಳು ಇತರರಿಗೆ ತೀರ್ಪುಮಾಡುವುದೂ ಇಲ್ಲ, ಹೇಗೆ ಆರಾಧನೆ ಮಾಡಬೇಕೆಂದೂ ಹೇಳುವುದಿಲ್ಲ. ಅದು ವ್ಯಕ್ತಿಯೊಬ್ಬನ ಹಾಗೂ ಸೃಷ್ಟಿಕರ್ತನ ನಡುವಿನ ವಿಷಯವಾಗಿರುವುದರಿಂದ ಅದು ಅವರವರ ಸ್ವಂತ ನಿರ್ಣಯ. ಜನರಿಗೆ ವ್ಯಕ್ತಿಗತವಾಗಿ ಮತ್ತು ಕುಟುಂಬವಾಗಿ ಸಹಾಯಮಾಡುವ ಕೆಲವೊಂದು ವಿಚಾರಗಳನ್ನು ನಾನು ದೇವರ ವಾಕ್ಯದಿಂದ ತೋರಿಸುತ್ತಿದ್ದೇನೆ. ಕೇಳಲೇಬೇಕೆಂಬ ಒತ್ತಾಯ ಯಾರಿಗೂ ಇಲ್ಲ. ನಿಮಗೆ ಇಷ್ಟವಿಲ್ಲ ಅಂಥ ಹೇಳಿದರೆ ನಾನು ಹೋಗಿಬಿಡುತ್ತೇನೆ.” ಹೀಗೆ, ಸೂಕ್ತ ಪದಗಳನ್ನು ಬಳಸುವ ಮೂಲಕ ನಮ್ಮ ನೇಮಕದೊಂದಿಗೆ ರಾಜಿಮಾಡಿಕೊಳ್ಳದೆಯೇ ಉದ್ರೇಕಗೊಂಡವರನ್ನು ನಾವು ಶಾಂತಗೊಳಿಸಬಲ್ಲೆವು.
ಕೆಲವರು ನಮ್ಮ ಶುಶ್ರೂಷೆಯ ಉದ್ದೇಶವನ್ನು ತಪ್ಪರ್ಥಮಾಡಿದರೂ, ಇಲ್ಲವೇ ನಮ್ಮನ್ನು ವಿರೋಧಿಸಿದರೂ ಯೆಹೋವನ ಬೆಂಬಲದ ಭರವಸೆಯಿಂದ ನಮ್ಮ ಆನಂದವನ್ನು ಕಾಪಾಡಿಕೊಳ್ಳಬಲ್ಲೆವು. (2 ಕೊರಿಂ. 2:15-17) ನಮಗೆದುರಾಗುವ ಯಾವುದೇ ವಿರೋಧವು ನಮ್ಮ ಆನಂದವನ್ನು ಕಸಿದುಕೊಳ್ಳದಂತೆ ನೋಡೋಣ. (ನೆಹೆ. 8:10) ಉತ್ತರ ಹೇಳಬೇಕಾದ ರೀತಿಯ ಬಗ್ಗೆ ನಾವು ಮುಂಚಿತವಾಗಿ ಯೋಚಿಸುವಾಗ, ಶಾಂತಿಯನ್ನು ಕಾಪಾಡಿಕೊಳ್ಳುವುದು ಮತ್ತು ಇಂಪಾಗಿ ಮಾತಾಡುವುದೇ ನಮ್ಮ ಗುರಿಯಾಗಿರಲಿ!