ಯುವ ಜನರು ಪ್ರಶ್ನಿಸುವುದು. . .
ಬಾಯಿಮಾತಿನ ದುರುಪಯೋಗವನ್ನು ನಾನು ಹೇಗೆ ನಿಭಾಯಿಸಬಲ್ಲೆ?
“ನನ್ನ ತಂದೆ ನನಗೆ ಹೊಡೆಯುವುದಿಲ್ಲ, ಆದರೆ ಅವರ ಮಾತು ಯಾವ ಹೊಡೆತಕ್ಕಿಂತಲೂ ಹೆಚ್ಚು ಬೇನೆ ಮತ್ತು ಹೆಚ್ಚು ಭಯವನ್ನುಂಟು ಮಾಡುತ್ತದೆ.”—ಆ್ಯನ್.
“ಬಾಯಿಮಾತಿನ ಆಕ್ರಮಣ ನಾನು ಅಯೋಗ್ಯನೆಂದೆಣಿಸುವಂತೆ ಮಾಡಿ ಅನೇಕ ದಿನ ಮತ್ತು ವಾರ ನನ್ನಲ್ಲಿ ಉಳಿಯತ್ತಿತ್ತು. ಅವು ಮಾಡಿದ ಮಾನಸಿಕ ಗಾಯ ಸಮಯಾನಂತರ ಗುಣವಾದರೂ ಕಲೆಗಳು ಉಳಿದವು.”—ಕೆನ್.
ಆ್ಯನ್ ಮತ್ತು ಕೆನ್- ಇವರು ಇತರ ಸಾವಿರಾರು ಹದಿವಯಸ್ಕರಂತೆ, ಕೆಲವು ನಿಪುಣರು ಯಾವುದನ್ನು ಆತ್ಮಗೌರವದ ಕ್ರಮಬದ್ಧ ನಾಶವೆಂದು ಕರೆಯುತ್ತಾರೋ ಆ ಬಾಯಿಮಾತಿನ ದುರುಪಯೋಗಕ್ಕೆ ಬಲಿಯಾಗಿದ್ದಾರೆ. ಎಲುಬುಗಳು ಮುರಿಯದಿದ್ದರೂ ಗಾಯಗಳು ತೋರದಿದ್ದರೂ, ಹೆತ್ತವರಿಂದ ಮಾಡಲ್ಪಡುವ ಬಾಯಿಮಾತಿನ ಆಕ್ರಮಣವು ಮಕ್ಕಳ ದುರುಪಯೋಗದ ಅತ್ಯಂತ ನಾಶಕಾರಕ ವಿಧಾನವೆಂದು ಕೆಲವರು ಪರಿಗಣಿಸುತ್ತಾರೆ.
“ಜೀವಿಸಿ ಪ್ರಯೋಜನವಿಲ್ಲವೆಂದು ನನಗನಿಸಿತು” ಅನ್ನುತ್ತಾಳೆ ತನ್ನ ತಾಯಿಂದ ನಿಂದಿಸಲ್ಪಡುತ್ತಿದ್ದ ಮಾರ್ಲೀನ್. ಮೂರ್ಖ ಅಥವಾ ಅಯೋಗ್ಯ ಎಂದು ಪದೇ ಪದೇ ಕರೆಯಲ್ಪಡುತ್ತಾ ಹೊಡೆತದ ಬೆದರಿಕೆ ತೋರಿಸಿ, ವ್ಯರ್ಥವಾದವನೆಂದೆಣಿಸುವಂತೆ (“ನೀನು ಯಾವಾಗಲೂ ಆಶಾಭಂಗ ಪಡಿಸುತ್ತೀ!”) ಮಾಡಿ, ದುರ್ಘಟನೆಗಳಾಗುವಲ್ಲಿ ಸದಾ ಅಪವಾದ (“ಎಲ್ಲಾ ನಿನ್ನದೇ ತಪ್ಪು!”) ಹೊರಿಸಲ್ಪಡುವ ಎಳೆಯರಿಗೆ ಕಡಿಮೆ ಆತ್ಮಗೌರವವಿರುವದು ಅಸಾಮಾನ್ಯವಲ್ಲ. ಮಾನಸಿಕ ಮತ್ತು ಭಾವಾವೇಶದ ನಿಧಾನ ಬೆಳವಣಿಗೆ ಮತ್ತು ನಾಶಕಾರಕ ಯಾ ಹಿಮ್ಮೆಟ್ಟುವ ಸ್ವಭಾವ—ಇವೆಲ್ಲವೂ ಮಾತಿನ ದುರುಪಯೋಗದ ದುಷ್ಪರಿಣಾಮವೆಂದು ಕೆಲವರ ಅಭಿಪ್ರಾಯ. ನೋಯಿಸುವ ಮಾತುಗಳು “ಕತ್ತಿ ತಿವಿದ ಹಾಗೆ” ಎಂದು ಹೇಳುವಾಗ ಬೈಬಲಿನ ವರ್ಣನೆ ನಿಷ್ಕೃಷ್ಟ.—ಜ್ಞಾನೋಕ್ತಿ 12:18.
ಕೆಲವು ಯುವಕರು ನಿಂದೆಯೆಂದು ಕರೆಯುವದು ಹೆತ್ತವರು ನೀಡುವ ಶಿಸ್ತನ್ನೇ ಎಂದು ನಾವು ಒಪ್ಪಬೇಕು. (ಎಫೆಸ 6:4) ಇಂಥ ಶಿಸ್ತು ರುಚಿಸದ ರೀತಿಯಲ್ಲಿ ಕೊಡಲ್ಪಟ್ಟರೂ ನಿಮಗೆ ಪ್ರಯೋಜನ ನೀಡಬಲ್ಲದು. (ಜ್ಞಾನೋಕ್ತಿ 4:13) ಇದಲ್ಲದೆ, “ಅನೇಕ ವಿಷಯಗಳಲ್ಲಿ” ಹೆತ್ತವರೂ “ತಪ್ಪುವದುಂಟು. ಒಬ್ಬನು ಮಾತಿನಲ್ಲಿ ತಪ್ಪದಿದ್ದರೆ” ಅವನು ಪರಿಪೂರ್ಣ ಮನುಷ್ಯನು. (ಯಾಕೋಬ 3:2) ಹೀಗೆ ಕೋಪವೇರುವಾಗ ಎಷ್ಟು ಉತ್ತಮ ಹೆತ್ತವರೂ ಆಗಾಗ, ಬಳಿಕ ವಿಷಾದಪಡುವ ಮಾತನ್ನಾಡುತ್ತಾರೆ. ಆದರೆ ಕರ್ಕಶ ಮತ್ತು ಕ್ರೂರ ಮಾತುಗಳು ಜೀವನ ರೀತಿಯಾಗಿ, ನಾಶಕರವಾದ ನಮೂನೆಯನ್ನು ಮುಂದರಿಸುವಲ್ಲಿ ಇಂಥ ಮಾತು ಗಂಭೀರವಾದ ಭಾವನಾತ್ಮಕ ನಿಂದೆಯಾಗಬಹುದು.a
ಇಂಥ ಸಂದರ್ಭದಲ್ಲಿ ಯುವ ಜನರೇನು ಮಾಡಬಹುದು? ಆದರೆ ಮೊದಲು ಇಂಥ ದುರುಪಯೋಗ ನಡಿಯುವದು ಏಕೆಂದು ನೋಡೋಣ.
ಅವರು ನಿಂದಿಸಲು ಕಾರಣ
“ಮಕ್ಕಳನ್ನು ನಿಂದಿಸುವ ಹೆತ್ತವರು ಕ್ರೂರರಾದ ಹುಚ್ಚರೂ ಅಲ್ಲ; ತಮ್ಮ ಮಕ್ಕಳ ಕಡೆಗೆ ಪ್ರೀತಿಯಲ್ಲಿ ಕೊರತೆಯಿರುವರೂ ಅಲ್ಲ” ಅನ್ನುತ್ತಾರೆ ಬ್ಲೇಕ್ ಮತ್ತು ರೀಟ ಜಸ್ಟಿಸ್. ಇವರು ಮಾಡಿದ ಅಧ್ಯಯನದಲ್ಲಿ, ನಿಂದಿಸುವ ಹೆತ್ತವರಲ್ಲಿ 85 ಸೇಕಡಾ ತಾವೇ ಮಕ್ಕಳಾಗಿದ್ದಾಗ ಶಾರೀರಿಕ ಹೊಡೆತವಲ್ಲದಿದ್ದರೆ ಪ್ರೀತಿ ನಷ್ಟ ಪಟ್ಟವರಾಗಿದ್ದರೆಂದು ತೋರಿಬರುತ್ತದೆ! ಹೀಗೆ ಅನೇಕ ಪಂಡಿತರ ಅಭಿಪ್ರಾಯವೇನಂದರೆ ಹೆತ್ತವರ ನಿಂದಿಸುವ ಅಭ್ಯಾಸದಲ್ಲಿ ಹೆಚ್ಚಿನದ್ದು ಮಕ್ಕಳ ದುರ್ನಡತೆಯಿಂದಾಗಿ ಬಾರದೆ ಹೆತ್ತವರೊಳಗೆ ಕುದಿಯುವ ಅಸುರಕ್ಷಿತಾಭಾವದಿಂದ ಬರುತ್ತದೆ.
ತಮ್ಮ ಸ್ವಂತ ತಂದೆತಾಯಿಗಳಿಂದ ಸಾಕಷ್ಟು ಪ್ರೀತಿ ಮತ್ತು ಪೋಷಣೆ ಪಡೆಯದೆ ಇದ್ದ ಕಾರಣ ಕೆಲವು ಹೆತ್ತವರಿಗೆ ತಮ್ಮ ಮಕ್ಕಳಿಗೆ ಪ್ರೀತಿ ತೋರಿಸುವುದು ಕಷ್ಟವಾಗುತ್ತದೆ. (1 ಯೋಹಾನ 4:19 ಹೋಲಿಸಿ.) ಮಕ್ಕಳ ಚಿಕ್ಕ ತಪ್ಪುಗಳು ತಮಗೆ ವೈಯಕ್ತಿಕವಾಗಿ ಅವಮಾನ ಮಾಡಿದಂತೆ ಎಂದೆಣಿಸಿ ಹೆತ್ತವರು ಟೀಕೆಯ ಸುರಿಮಳೆಯನ್ನೂ ಸ್ವಾಭಿಮಾನದ ನಿಂದೆಗಳನ್ನೂ ಸುರಿದು ಬಿಡುತ್ತಾರೆ.
ಈ ಸಮಯಗಳು “ಕಠಿಣಕಾಲ” ಗಳಾಗಿರುವದರಿಂದ ಜೀವನೋಪಾಯದ ಮತ್ತು ಮಕ್ಕಳನ್ನು ಬೆಳೆಸುವ ಒತ್ತಡ ಒಬ್ಬನನ್ನು ನುಜ್ಜುಗುಜ್ಜು ಮಾಡಬಲ್ಲದೆಂದೂ ನೆನಪಿರಲಿ. (2 ತಿಮೋಥಿ 3:1) ಇಂಥ ಒತ್ತಡಗಳಿಂದ ಬಗ್ಗಿರುವ ಕೆಲವು ಹೆತ್ತವರು ತಮ್ಮ ಮಗನ ಅಥವಾ ಮಗಳ ಪ್ರತಿಭಟನೆಯ ಸೂಚನೆಗೂ ವಿಪರೀತ ಪ್ರತಿವರ್ತನೆ ತೋರಿಸುತ್ತಾರೆ.
ಹೌದು, ನಿಂದಾತ್ಮಕ ಮಾತಿಗೆ ಯಾವ ನೆವನವೂ ಇಲ್ಲ. (ಕೊಲೊಸ್ಸೆ 3:8) “ಮಕ್ಕಳನ್ನು ಕೆಣಕಿ ಮನಗುಂದಿಸ” ಬಾರದೆಂಬ ಆಜ್ಞೆ ಹೆತ್ತವರಿಗಿದೆ. (ಕೊಲೊಸ್ಸೆ 3:21) ಆದರೂ ಬೈಯುವ ಹೆತ್ತವರು ತೀರಾ ಅಸಮಾಧಾನದಿಂದಿದ್ದಾರೆ ಅಥವಾ ತೀವ್ರ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ಗ್ರಹಿಸುವುದರಿಂದ ಒಬ್ಬ ಯುವಕನು ಇಂಥ ವೇದನೆಯ ಮಾತುಗಳನ್ನು ಸಮತೆಯಲ್ಲಿಡ ಸಾಧ್ಯವಿದೆ. ಈ ಅಂತರ್ಬೋಧೆ, ಇಂಥ ವಿಧದ ಮಾತಿಗೊಳಗಾದ ಯುವಕನ ‘ಕೋಪವನ್ನು ನಿಧಾನಿಸಲೂ’ ಬಹುದು.—ಜ್ಞಾನೋಕ್ತಿ 19:11.
ನಿಂದೆಯನ್ನು ನಿಭಾಯಿಸುವುದು
ನಿಮ್ಮ ಹೆತ್ತವರಿಗೆ ಭಾವನಾತ್ಮಕವಾದ ಯಾವ ತೊಂದರೆಯಾದರೂ ಇರುವದಾದರೆ ಅದಕ್ಕೆ ನೀವು ಜವಾಬ್ದಾರರಲ್ಲ. ಇಂಥ ಸಮಸ್ಯೆಗಳನ್ನು ಬಗೆಹರಿಸಲು ಅವರಿಗೆ ಸಹಾಯಮಾಡುವ ಸ್ಥಾನದಲ್ಲಿಯೂ ನೀವಿಲ್ಲ. ಕೆಲವು ಸಲ ಈ ನಿಂದಾತ್ಮಕ ಮಾತು ಎಷ್ಟು ಘೋರವೆಂದರೆ, ಮಕ್ಕಳು ಹೊರಗಿನಿಂದ, ಪ್ರಾಯಶ:, ಸ್ಥಳೀಕ ಸಭೆಯ ಕ್ರೈಸ್ತ ಹಿರಿಯರಿಂದ ಸಹಾಯವನ್ನು ಪಡೆಯುವದರಲ್ಲಿ ವಿವೇಕವಿದೆ.—ಯೆಶಾಯ 32:1, 2.
ಆದರೂ, ಅನೇಕ ಸಲ, ಪರಿಸ್ಥಿತಿಯನ್ನು ಹೆಚ್ಚು ಸಹಿಸಿಕೊಳ್ಳಲು ನೀವು ಮಾಡಬಹುದಾದ ವಿಷಯಗಳಿವೆ. ಹೆತ್ತವರನ್ನು, ಅವರ ನಡತೆ ಸಹಿಸ ಸಾಧ್ಯವಾಗದ್ದೆಂದು ತೋರಿಬರುವದಾದರೂ, ‘ಸನ್ಮಾನಿಸಲು’ ಕಠಿಣ ಪ್ರಯತ್ನ ಮಾಡುವುದು ಇದರಲ್ಲಿ ಒಂದಾಗಿದೆ. (ಎಫೆಸ 6:2) ಪ್ರತ್ಯುತ್ತರ ಕೊಡುವುದು, ಅದರಲ್ಲೂ ಕಿರುಚಿ ಉತ್ತರಕೊಡುವುದು ದೇವರನ್ನು ಅಸಮಾಧಾನ ಪಡಿಸುವುದಲ್ಲದೆ ಸಾಮಾನ್ಯವಾಗಿ ಹೋರಾಟವನ್ನು ಹೆಚ್ಚಿಸುವುದರಲ್ಲಿ ಮಾತ್ರ ಜಯಪಡೆಯುತ್ತದೆ.
ಆದರೂ “ಮೃದುವಾದ ಪ್ರತ್ಯುತ್ತರವು ಸಿಟ್ಟನ್ನಾರಿಸುವುದು.” (ಜ್ಞಾನೋಕ್ತಿ 15:1) ಹೆತ್ತವರು ನನ್ನನ್ನು ಮತಿಗೆಡಿಸುತ್ತಿದ್ದಾರೆ ಎಂಬ ಇಂಗ್ಲಿಷ್ ಪುಸ್ತಕದಲ್ಲಿ ಲೇಖಕಿ ಜಾಯ್ಸ್ ವೆಡ್ರಲ್, “ನೀನು ಹುಟ್ಟಿದ ದಿನ ಹಾಳಾಗಿ ಹೋಗಲಿ” ಎಂದು ಕೋಪದಿಂದ ಕಿರುಚುವ ತಾಯಿಯ ಸನ್ನಿವೇಶವನ್ನು ತಿಳಿಸುತ್ತಾರೆ. ಆಗ, “ನೀನು ನನ್ನ ತಾಯಿಯಾದ ದಿನವೂ ಹಾಳಾಗಿ ಹೋಗಲಿ” ಎಂಬ ಪ್ರತ್ಯುತ್ತರವು ವಿವಾದವನ್ನು ಮಂದುವರಿಸಲು ಮಾತ್ರ ಸಾಧ್ಯಮಾಡುತ್ತದೆ. ಆದುದರಿಂದ, “ನಾನು ನಿಮಗೆ ಕೆಲವು ಸಲ ತುಂಬಾ ಕಷ್ಟಕೊಡುತ್ತೇನೆ ಎಂದು ನನಗೆ ಗೊತ್ತು. ಹೆತ್ತವರಾಗಿ ಇರುವುದು ಕಷ್ಟವೆಂದು ಕಾಣುತ್ತದೆ” ಎಂಬ ಉತ್ತರವನ್ನು ವೆಡ್ರಲ್ ಸೂಚಿಸುತ್ತಾರೆ. ಕೋಪಕ್ಕೆ ಪ್ರತಿಯಾಗಿ ದಯೆಯಿಂದ ಉತ್ತರಕೊಡುವುದು ಸುಲಭವಲ್ಲ, ಆದರೂ, ಇದು ಹೋರಾಟದ ಬೆಂಕಿಯನ್ನು ಆರಿಸೀತು.—ಜ್ಞಾನೋಕ್ತಿ 26:20 ಹೋಲಿಸಿ.
ಕೆಲವು ಸಲ ಅನಗತ್ಯವಾದ ಹೋರಾಟಗಳನ್ನು ತಪ್ಪಿಸುವ ಸಾಧ್ಯತೆ ಇದೆ. ತಾನು ಚಿಕ್ಕವಳಿದ್ದಾಗ ಹೆತ್ತವರೊಂದಿಗೆ ನಡಿಯುತ್ತಿದ್ದ ಹೋರಾಟಗಳನ್ನು ನೆನಪಿಸಿಕೊಳ್ಳುತ್ತಾ ಬಾರ್ಬರಾ ಎಂದ ಯುವತಿ ಒಪ್ಪಿಕೊಳ್ಳುವುದು: “ಮಾತಾನಾಡುವದಕ್ಕೆ ಮೊದಲು ಯೋಚಿಸಿ ಮಾತಾಡಬೇಕಿತ್ತು. ಹೆಚ್ಚು ವಿವೇಚನೆ ಉಳ್ಳವಳಾಗಿರಬೇಕಿತ್ತು. ತಂದೆ ತಾಯಿ ಆಗಲೇ ಸಿಟ್ಟಿನಲ್ಲಿದ್ದಾರೆಂದು ನೋಡುವಲ್ಲಿ ಸ್ವಲ್ಪ ತಡೆದು ಮಾತಾಡಿರಿ. ಮೊದಲೇ ಮಾತಾಡುವದು ಬೆಂಕಿಗೆ ಎಣ್ಣೆ ಸುರಿದಂತೆ.”
ಇನ್ನೊಬ್ಬ ಯುವ ವ್ಯಕ್ತಿ ಹೇಳುವುದು: “ಸಾಮಾನ್ಯವಾಗಿ ಜಗಳ ಎದ್ದದ್ದು ನಾನು ಮಾಡಲಿಕ್ಕಿದ್ದ ವಿಷಯಗಳನ್ನು ಮಾಡದೆ ಇದ್ದುದರಿಂದಲೇ ಎಂದು ನಾನೀಗ ಗ್ರಹಿಸುತ್ತೇನೆ. ಆದುದರಿಂದ ಪಾತ್ರೆ ತೊಳೆದು ಕಸ ಬಿಸಾಡುವಂಥ ನನ್ನ ಕೆಲಸಗಳನ್ನು ಮಾಡಿ ಮುಗಿಸಬೇಕೆಂಬ ಪ್ರಜ್ಞೆ ನನಗೆ ಬಂತು.” ಇದರ ಫಲವೋ? ಕಡಿಮೆ ವಾಗ್ವಾದಗಳು.
ಆತ್ಮ ಗೌರವವನ್ನು ಸರಿಪಡಿಸುವುದು
ಆದರೂ, ದುರ್ಭಾಷೆ ಒಬ್ಬನ ಆತ್ಮ ಗೌರವವನ್ನು ಪುಡಿಪುಡಿ ಮಾಡಬಲ್ಲದು. ಆದಿಯಲ್ಲಿ ಹೇಳಲಾಗಿದ್ದ ಆ್ಯನ್ ಒಪ್ಪಿಕೊಳ್ಳುವುದು: “ಕೆಲವು ಸಲ ಮೂರ್ಖಳು, ಯಾವುದಕ್ಕೂ ಒಳ್ಳೆಯವಳಲ್ಲ ಮತ್ತು ಹೊರೆಯೆಂದು ನಂಬಲು ಸಹಾ ನಾನು ಆರಂಭಿಸುತ್ತೇನೆ.” ಹಾಗಾದರೆ ಇಂಥಹ ನಕಾರಾತ್ಮಕ ಅನಿಸಿಕೆಗಳನ್ನು ನೀವು ಹೇಗೆ ತೊಲಗಿಸಬಹುದು?
ಅನೇಕ ಯುವ ಜನರು ಕಷ್ಟಕರವಾದ ತಮ್ಮ ಗೃಹಪರಿಸರವನ್ನು ಪಾರಾಗಿ ಭಾವಾತ್ಮಕವಾಗಿ ಸ್ವಸ್ಥತೆಯಿಂದಿರುತ್ತಾರೆ. ಇಂಥ ಯುವಕರಿಗೆ, “ಅವರಿಗಾಗಿ ಹುಡುಕುತ್ತಿರುವ ಒಬ್ಬ ವ್ಯಕ್ತಿಯಾದರೂ ಅವರ ಜೀವನದಲ್ಲಿದ್ದಾರೆ” ಎಂದು ಅಧ್ಯಯನಗಳು ತೋರಿಸುತ್ತವೆ. ಮನಶ್ಶಾಸ್ತ್ರ. ಸಮಾಜ ಸೇವಕಿ ಜ್ಯಾನೆಟ್ ಡ್ರೋಬ್ಸ್ ಹೇಳುವುದು: “ಯುವಜನರು ಸಕಾರಾತ್ಮಕ ಜನರೊಂದಿಗೆ ಮತ್ತು ಅವರನ್ನು ಉಪಯುಕ್ತರೆಂದೆಣಿಸುವ ಜನರೊಂದಿಗೆ ಸಮಯ ಕಳೆಯುವದು ಅಗತ್ಯ.” ಪ್ರಾಯಶ: ನಿಮ್ಮ ಹೆತ್ತವರಲ್ಲಿ ಒಬ್ಬರೊಡನೆಯಾದರೂ ನಿಮಗೆ ಸುಸಂಬಂಧವಿಡಬಹುದು ಮತ್ತು ಅವರ ಹತ್ತಿರ ಸಂಬಂಧದೊಳಗೆ ಹೋಗುವಂತೆ ನೀವು ಪ್ರಯತ್ನಿಸಬಹುದು. ಕ್ರೈಸ್ತ ಸಭೆಯಲ್ಲಿ ಸಹಾ ಪರಾಮರಿಕೆ ಮಾಡುವ ಎಷ್ಟೋ ವ್ಯಕ್ತಿಗಳಿದ್ದಾರೆ ಮತ್ತು ಇವರೂ ನಿಮಗೆ ನಿಜ ಸಹಾಯ ಮತ್ತು ಬೆಂಬಲವಾಗಬಲ್ಲರು.—ಜ್ಞಾನೋಕ್ತಿ 13:20.
ಸಂಗೀತೋಪಕರಣ ಬಾರಿಸಲು ಕಲಿಯುವದು ಅಥವಾ ವಿದೇಶಿ ಭಾಷೆಯನ್ನು ಕಲಿಯುವುದೇ ಮುಂತಾದ ಉತ್ಪನ್ನಕಾರಕ ಹವ್ಯಾಸಗಳು ಸಹ ನಿಮ್ಮ ಆತ್ಮಗೌರವವನ್ನು ಎತ್ತಬಲ್ಲವು. ಮತ್ತು ದೇವರ ವಾಕ್ಯವನ್ನು ಇತರರು ಕಲಿಯುವಂತೆ ಸಹಾಯ ಮಾಡುವುದು, ಅದರಲ್ಲೂ ದೇವರು ನಿಮ್ಮ ಪ್ರಯತ್ನವನ್ನು ಆಶೀರ್ವದಿಸುವದನ್ನು ನೋಡುವುದು ವಿಶೇಷ ತೃಪ್ತಿದಾಯಕ ಚಟುವಟಿಕೆ! (1 ಕೊರಿಂಥ 3:6-9 ಹೋಲಿಸಿ.) ಆ್ಯನ್ ಹೇಳುವುದು: “ಯೆಹೋವನು ಪ್ರೀತಿಯಿಂದ ನಾನು ಭಾಗವಹಿಸುವಂತೆ ಬಿಟ್ಟಿರುವ [ಪೂರ್ಣ ಸಮಯದ] ಶುಶ್ರೂಷೆಯ ಮೂಲಕ, ನನ್ನ ತಂದೆ ಎಣಿಸುವಷ್ಟು ಮೂರ್ಖಳು ನಾನಲ್ಲ ಎಂಬದನ್ನು ನಾನು ಗ್ರಹಿಸಿದ್ದೇನೆ.”
ಸುಯೋಗವಶಾತ್, ಅತಿ ಕಠಿಣ ಪರಿಸ್ಥಿತಿಯು ಸಹಾ ಸದಾ ಉಳಿಯುವದಿಲ್ಲ. ಮತ್ತು ನಿಮ್ಮ ಹೆತ್ತವರ ನಡತೆ, ನೀವೂ ಒಂದು ದಿನ ಕೆಟ್ಟ ಹೆತ್ತವರಾಗುವಂತೆ ಮಾಡುವದಿಲ್ಲ. ನಿಮ್ಮ ಹೆತ್ತವರ ಕೆಟ್ಟ ಮಾದರಿ ನಿಮ್ಮ ಮೇಲೆ ಬೀರುವ ಪ್ರಭಾವಕ್ಕಿಂತಲೂ ಎಷ್ಟೋ ಹೆಚ್ಚಾದದ್ದನ್ನು ದೇವರ ವಾಕ್ಯವು ಬೀರಬಲ್ಲದು. ಈ ಮಧ್ಯೆ, ನೀವು ಸಹಿಸುವಂತೆ ಸಹಾಯಕ್ಕಾಗಿ ಯೆಹೋವ ದೇವರ ಕಡೆ ನೋಡಿರಿ. ದುರ್ಭಾಷೆಯ ಎದುರಿನಲ್ಲೂ ಯೋಗ್ಯ ರೀತಿಯಲ್ಲಿ ವರ್ತಿಸಲು ನೀವು ಮಾಡುವ ಪ್ರಯತ್ನ ಆತನ ಹೃದಯವನ್ನು ಉಲ್ಲಾಸಗೊಳಿಸುವುದು.—ಜ್ಞಾನೋಕ್ತಿ 27:11.
ನಿಮ್ಮ ಪಕ್ವತೆಯ ವ್ಯವಹಾರದಿಂದ ನಿಮ್ಮ ತಂದೆ ತಾಯಿ ಬದಲಾವಣೆ ಹೊಂದುವ ಸಾಧ್ಯತೆಯೂ ಇದೆ. ಆರಂಭದಲ್ಲಿ ಹೇಳಿರುವ, ಹಿಂದೆ ತಳಮಳಗೊಂಡಿದ್ದ ಮಾರ್ಲೀನ್ ಎಂಬವಳು ಹೇಳುವದು: “ನನ್ನ ಇಡೀ ಜೀವಮಾನದಲ್ಲೇ ನನ್ನ ತಾಯಿ ಚೀರಾಡುತ್ತಾ ಇದ್ದಾಗ ನಾನೂ ಹಾಗೆಯೇ ಉತ್ತರಕೊಡುತ್ತಾ ಇದ್ದೆ. ಆದರೆ ಈಗ ದೇವರ ವಾಕ್ಯ ಹೇಳುವುದನ್ನು ನಾನು ಕಾರ್ಯರೂಪಕ್ಕೆ ಹಾಕುತ್ತಿದ್ದೇನೆ. ಮತು ಇದು ಫಲ ತರುತ್ತದೆ. ಅಮ್ಮನ ಮನೋಭಾವ ಪರಿವರ್ತನೆ ಹೊಂದುತ್ತಿದೆ. ಬೈಬಲನ್ನು ಅನ್ವಯಿಸಿದ್ದರ ಮೂಲಕ ತಾಯಿಯನ್ನು ನಾನು ಹೆಚ್ಚು ತಿಳಿಯುವಂತಾಯಿತು. ನಮ್ಮ ಸಂಬಂಧ ಉತ್ತಮಗೊಂಡಿದೆ.” ನೀವು ಆರಂಭದ ಹೆಜ್ಜೆಯುಡುವಲ್ಲಿ ನಿಮ್ಮ ಸಂಬಂಧವೂ ಉತ್ತಮಗೊಳ್ಳಬಲ್ಲದು. (g89 6/8)
[ಅಧ್ಯಯನ ಪ್ರಶ್ನೆಗಳು]
a ಅಮೇರಿಕದ ಮಕ್ಕಳ ದುರುಪಯೋಗದ ತಡೆಹಿಡಿತ ಸಂಘ ಪ್ರಕಾಶಿಸಿದ ಫ್ಯಾಕ್ಟ್ ಶೀಟ್ ಹೇಳುವುದು: “ಭಾವನಾತ್ಮಕ ನಿಂದೆ ಹೆತ್ತವರ ನಕಾರಾತ್ಮಕ ನಡತೆಯ ವ್ಯಾಪಿತ ನಮೂನೆ ಯಿಂದ,— ಒಮ್ಮೊಮ್ಮೆ ನಡಿಯುವ ಸಂದರ್ಭಗಳಿಂದಲ್ಲ ಅಥವಾ ಹೆತ್ತವರ ಭಾವಾವೇಶದ ಸಾಮಾನ್ಯ ಇಳಿತ ಮತ್ತು ಉಬ್ಬರದಿಂದಲ್ಲ ಎಂದು ಸೂಚಿಸಲ್ಪಡುತ್ತದೆ.”—ಒತ್ತು ನಮ್ಮದು.
[ಪುಟ 12ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಿಂದಿಸುವ ಹೆತ್ತವರಲ್ಲಿ 85 ಸೇಕಡಾ ತಾವು ಮಕ್ಕಳಾಗಿದ್ದಾಗ ನಿಂದೆಯನ್ನು ಅನುಭವಿಸಿದರೆಂದು ಒಂದು ಅಧ್ಯಯನ ತಿಳಿಸಿತು
[ಪುಟ 13 ರಲ್ಲಿರುವಚಿತ್ರ]
ಸಂಗೀತೋಪಕರಣ ಬಾರಿಸಲು ಕಲಿಯುವದೇ ಮುಂತಾದ ಉತ್ಪನ್ನಕಾರಕ ಹವ್ಯಾಸಗಳು ನಿಮ್ಮ ಆತ್ಮಗೌರವವನ್ನು ಎತ್ತಬಲ್ಲವು