ಒಂದು ಮುದ್ದಿನ ಪ್ರಾಣಿಯನ್ನು ನೀವು ನಿಜವಾಗಿ ಪಾಲನೆ ಮಾಡಬಲ್ಲಿರೋ?
“ಎವೇಕ್!” ನ ಡೆನ್ಮಾರ್ಕ್ ಸುದ್ದಿಗಾರರಿಂದ
ಹೃದಯ ಆಘಾತದ ಬಳಿಕ ಒಬ್ಬ ಮನುಷ್ಯನು ಎಷ್ಟು ಕಾಲ ಬದುಕುತ್ತಾನೆ ಎಂಬದರ ಮೇಲೆ ನಡೆದ ಸಂಶೋಧನೆಯು ಮುದ್ದಿನ ಪ್ರಾಣಿಗಳಿಲ್ಲದವರಿಗಿಂತ ಇದ್ದವರು ಹೆಚ್ಚು ಕಾಲ ಬದುಕುತ್ತಾರೆಂದು ತಿಳಿಸುತ್ತದೆ. ಇಂಥ ಪ್ರಾಣಿಗಳ ಸಹವಾಸದಿಂದ ಶಾಮಕ ಪರಿಣಾಮವಿದೆಯೆಂದು ತೋರಿಬರುತ್ತದೆ. ಶಾರೀರಿಕ ಮತ್ತು ಮಾನಸಿಕ ದುರ್ಬಲತೆ ಇರುವವರಿಗೂ ನರವ್ಯಾಧಿ ಇರುವವರ ಮೇಲೆಯೂ ಪ್ರಾಣಿಗಳು ಅನುಕೂಲ ಪ್ರಭಾವ ಬೀರುವಂತೆ ತೋರುತ್ತದೆ.
ಒಂದು ಮುದ್ದಿನ ಪ್ರಾಣಿಯನ್ನು ತರಲು ನಿರ್ಣಯಿಸುವ ಮೊದಲು ನಿಮ್ಮ ಮತ್ತು ನಿಮ್ಮ ಸಹವಾಸಿಗಳ ಹಿತಕ್ಕಾಗಿಯೂ ಆ ಪ್ರಾಣಿಯ ಹಿತದೃಷ್ಟಿಯಲ್ಲಿಯೂ ಪರಿಗಣಿಸಬೇಕಾದ ಪ್ರಶ್ನೆಗಳಿವೆ. ಇವುಗಳಿಗೆ ಸಿಗುವ ವಾಸ್ತವಿಕ ಉತ್ತರಗಳು, ನೀವು ಅಪಾರನಷ್ಟದ ತಪ್ಪನ್ನು ಮಾಡದಂತೆ ಸಹಾಯ ನೀಡುವುವು.
ನಿಮ್ಮ ಜೀವಿಸುವ ವಿಧಾನ, ಪ್ರಾಣಿಗೆ ತಕ್ಕ ಪರಾಮರಿಕೆ ದೊರೆಯುವಂತೆ ಅನುಮತಿಸುತ್ತದೋ? ನೀವು ಮನೆಯಿಂದ ದೀರ್ಘಕಾಲ ಹೊರಗೆ ಇರುತ್ತೀರೋ? ಮುದ್ದಿನ ಪ್ರಾಣಿಯನ್ನು ಇಟ್ಟುಕೊಳ್ಳುವದರ ಅರ್ಥ ತಿಳಿಯುವಂಥ ಪ್ರಾಯದ ಮಕ್ಕಳು ನಿಮಗಿದ್ದಾರೋ? ನೀವು ತರುವಂಥ ಗಾತ್ರದ ಪ್ರಾಣಿಗೆ ನಿಮ್ಮಲ್ಲಿ ಸಾಕಷ್ಟು ಸ್ಥಳವಿದೆಯೇ ಅಥವಾ ಹೆಚ್ಚು ಕಾಲ ಇಕ್ಕಟ್ಟಿನಲ್ಲಿ ಅದು ಜೀವಿಸಬೇಕೋ? ಮುದ್ದಿನ ಪ್ರಾಣಿಯನ್ನು ಪಡೆಯುವ ಮುಂಚಿತವಾಗಿ ಈ ಪ್ರಶ್ನೆಗಳ ಕುರಿತು ಯೋಚಿಸಿರಿ.
ಪ್ರಾಚೀನ ಇಸ್ರಾಯೇಲಿನಲ್ಲಿ ದೇವರು ಪ್ರಾಣಿಗಳ ಪರಾಮರಿಕೆಗೆ ಅವುಗಳ ಒಡೆಯರನ್ನು ಜವಾಬ್ದಾರರನ್ನಾಗಿ ಮಾಡಿದನು.—ವಿಮೋಚನಕಾಂಡ 23:4, 5; ಧರ್ಮೋಪದೇಶಕಾಂಡ 22:10; 25:4; ಜ್ಞಾನೋಕ್ತಿ 12:10.
ಜೋನಿಗಾಗಿ ಮುದ್ದಿನ ಪ್ರಾಣಿ ತರಬೇಕೋ?
‘ಪ್ರಾಣಿಗಳೊಂದಿಗೆ ವ್ಯವಹರಿಸಲು ಮಕ್ಕಳು ಕಲಿಯುವದು ಒಳ್ಳೆಯದು’ ಎಂಬ ಹೇಳಿಕೆ ಸಾಮಾನ್ಯ. ಆದರೆ ‘ಕಲಿ’ ಎಂಬ ಪದವೇ ಇದರ ಕೀಲಿಕೈ. ಇದನ್ನು ಕಲಿಯುವಷ್ಟು ಬಲಿತವನಾಗಿ ಇರಬೇಕು ನಿಮ್ಮ ಮಗ.
ಪ್ರಾಣಿಯನ್ನು ಒತ್ತುವದು ಮತ್ತು ಹಿಂಡುವದರಿಂದ ಅದಕ್ಕೆ ನೋವಾಗಬಹುದು ಮತ್ತು ಅದರಿಂದ ಕಾಯಂ ಹಾನಿಯಾಗಬಹುದೆಂದು ಅತಿ ಚಿಕ್ಕ ಮಕ್ಕಳಿಗೆ ತಿಳಿಯುವುದಿಲ್ಲ. ಗಿನಿಯಿಲಿಯನ್ನು ಅಪೇಕ್ಷೆಪಟ್ಟ ಮೂರು ವಯಸ್ಸಿನ ಒಬ್ಬ ಹುಡುಗನ ತಾಯಿಗೆ ಪಶುವೈದ್ಯರು, ಅ ಸಹಾಯಹೀನ ಪ್ರಾಣಿಯನ್ನು ಇಟ್ಟುಕೊಳ್ಳಲು ಹುಡುಗನು ತೀರಾ ಚಿಕ್ಕವನೆಂದರು. ಮಗನಿಗೆ ಮುದ್ದಿನ ಪ್ರಾಣಿಯನ್ನು ಒದಗಿಸುವ ಮೊದಲು ತಾಯಿ ಕೆಲವು ವರ್ಷ ಕಾಯಬೇಕೆಂದು ವೈದ್ಯರ ಶಿಫಾರಸಾಗಿತ್ತು.
ತಮ್ಮ ಮಗು ಮುದ್ದಿನ ಪ್ರಾಣಿಯೊಂದಿಗೆ ಯೋಗ್ಯ ರೀತಿ ವ್ಯವಹರಿಸುವಂತೆ ತಾವೇ ಸುಲಭವಾಗಿ ನಿರ್ದೇಶನ ನೀಡಬಹುದೆಂದು ತಂದೆ ತಾಯಿಗಳು ಯೋಚಿಸಬಹುದು. ಆದರೆ ಇದಕ್ಕೆ, ಅವರು ನೆನಸುವುದಕ್ಕಿಂತ ಹೆಚ್ಚು ಸಮಯ ಮತ್ತು ತಾಳ್ಮೆ ಅಗತ್ಯ ಮತ್ತು ಅನೇಕಸಲ, ಈ ಪ್ರಯೋಗದಲ್ಲಾಗುವ ನಷ್ಟವನ್ನು ಮುದ್ದಿನ ಪ್ರಾಣಿಯೇ ತೆರಬೇಕಾಗುತ್ತದೆ!
ಹೆತ್ತವರಿಗೆ ಅನುಭವವಿರುವಂತೆ, ಮಕ್ಕಳು ತಮಗೆ ಬೇಕಾದದ್ದನ್ನು ಪಟ್ಟು ಹಿಡಿದು ಕೇಳುತ್ತಾರೆ. ಈ ಕಾರಣದಿಂದ, ಅನೇಕ ತಂದೆ ತಾಯಿಗಳು ಅನೇಕವೇಳೆ, ಬೇಸತ್ತು, “ಒಳ್ಳೆಯದು, ಆ ಪ್ರಾಣಿಯನ್ನು ಕೊಡುತ್ತೇವೆ. ಆದರೆ ಅದನ್ನು ನೀನೇ ನೋಡಿಕೊಳ್ಳಬೇಕು” ಎಂದು ಹೇಳುತ್ತಾರೆ. ಆದರೆ ಮಕ್ಕಳಿಗೆ ಮರೆಯುವ ಅಭ್ಯಾಸವಿದೆ. ಮನೆಯೊಳಗೆ ಬರುವ ಮೊದಲು ಅವರು ಅನೇಕಸಲ ಕಾಲೊರೆಸಲು ಮರೆಯುವಂತೆಯೇ. ಆದುದರಿಂದ ಒಂದು ಜೀವಂತ ಪ್ರಾಣಿಯ ಯೋಗಕ್ಷೇಮವನ್ನು ಪ್ರಾಯಸ್ಥರ ಯೋಗ್ಯ ಮೇಲ್ವಿಚಾರಣೆಯಿಲ್ಲದೆ, ಒಂದು ಚಿಕ್ಕ ಮಗುವಿನ ಕೈಯಲ್ಲಿ ಬಿಡುವದು ಅಪಾಯಕರ.
ಮಕ್ಕಳಿಗೆ ಮೊಲಗಳನ್ನು ಇಟ್ಟುಕೊಳ್ಳಲು ಅನುಮತಿಯಿದ್ದ ಒಂದು ಕುಟುಂಬದ ದೃಷ್ಟಾಂತವು ಏನಾಗ ಸಾಧ್ಯವಿದೆಂಬದನ್ನು ಚಿತ್ರಿಸುತ್ತದೆ. ಒಮ್ಮೆ ಅಜ್ಜ ಆ ರಸ್ತೆಯಲ್ಲಿ ಹಾದುಹೋಗುತ್ತಿದ್ದಾಗ ಗೂಡಿನಲ್ಲಿದ್ದ ಮೊಲಗಳಿಗೆ ಆಹಾರವಿಲ್ಲದ್ದನ್ನೂ ಅನೇಕದಿನಗಳಿಂದ ಅವುಗಳ ಗೂಡು ಶುಚಿಮಾಡದೆ ಇದ್ದದ್ದನ್ನೂ ಕಂಡನು. ಒಂದು ಮೊಲ ಆಹಾರಕ್ಕಾಗಿ ಗೂಡಿನಿಂದ ಹೊರಗೆ ಬರಲು ಪ್ರಯತ್ನಿಸುತ್ತಾ ತನ್ನ ಹಲ್ಲನ್ನೇ ಸವೆಯಿಸಿಕೊಂಡಿತ್ತು.
ಹಾಗಾದರೆ ಕಲಿಯತಕ್ಕ ಪಾಠವೇನು? ನಿಮ್ಮ ಮಗುವಿಗೆ ಮುದ್ದು ಪ್ರಾಣಿಯ ಜವಾಬ್ದಾರಿಕೆಯನ್ನು ನೀವು ಕೊಡುವುದಾದರೆ, ಬೆಕ್ಕಿನ ಮರಿ ಯಾ ನಾಯಿಮರಿ ಎಷ್ಟೇ ಸೊಗಸಾಗಿರಲಿ ಮತ್ತು ನಿಮ್ಮ ಮಗುವಿನ ಕಣ್ಣು ಎಷ್ಟೇ ಯಾಚಿಸಲಿ, ಅಂತಿಮವಾಗಿ ವಯಸ್ಕರಾದ ನೀವೇ ಆ ಮುದ್ದಿನ ಪ್ರಾಣಿಗೆ ಜವಾಬ್ದಾರರಾಗಿರಬೇಕು. ಚಿಕ್ಕ ಹುಡುಗನ ಉತ್ಸುಕತೆ ಬೇಗನೇ ಕ್ಷಯವಾಗಬಹುದು.
ಬೆಕ್ಕು, ನಾಯಿ— ಮತ್ತು ನೀವು
ಇನ್ನೊಬ್ಬ “ಸದಸ್ಯ” ನನ್ನು ಕುಟುಂಬದೊಳಗೆ ಅಂಗೀಕರಿಸುವುದರ ಪರಿಣಾಮವನ್ನು ಎಲ್ಲಾ ಪ್ರಾಯಸ್ಥರು ಯೋಚಿಸುವುದಿಲ್ಲ. ಮುದ್ದಿನ ಪ್ರಾಣಿ ತರುವ ಅನನುಕೂಲತೆ ಮತ್ತು ಜವಾಬ್ದಾರಿಗಳನ್ನು ಅವರು ಯಾವಾಗಲೂ ಮುನ್ನೋಡುವುದಿಲ್ಲ. ಇದು ವಿಶೇಷವಾಗಿ ಕ್ರೈಸ್ತ ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿದ್ದು ಕೂಟ ಮತ್ತು ಕ್ರೈಸ್ತ ಸಮ್ಮೇಲನಗಳಿಗೆ ಆಗಾಗ ಹಾಜರಾಗುವ ಯೆಹೋವನ ಸಾಕ್ಷಿಗಳ ವಿಷಯದಲ್ಲಿ ಸತ್ಯವಾಗಿದೆ. ಆಗ, ಮುದ್ದಿನ ಪ್ರಾಣಿಗಳನ್ನು ನೋಡಿಕೊಳ್ಳಲು ಒಬ್ಬನನ್ನು ಹುಡುಕುವ ಸಮಸ್ಯೆ ಬರುತ್ತದೆ. ಪ್ರಾಣಿಗಳಿಗೆ ಭಾವಾತಿರೇಕದಿಂದ ಹತ್ತಿಕೊಳ್ಳುವ ಕಾರಣ ಕ್ರೈಸ್ತ ಚಟುವಟಿಕೆಗಳಿಗೆ ತಪ್ಪುವುದು ನಿಶ್ಚಯವಾಗಿಯೂ ಸಮಂಜಸವಲ್ಲ.—ಇಬ್ರಿಯ 10:24, 25.
ಇಂದು, ಅನೇಕ ಪತಿ ಪತ್ನಿಯರು ಐಹಿಕ ಕೆಲಸದ ನಿಮಿತ್ತ ಮನೆಯಿಂದ ಹೊರಗಿರುವಾಗ, ನಗರದ ವಸತಿ ಗೃಹಗಳಲ್ಲಿ ಒಂಟಿಯಾಗಿರುವ ಬೆಕ್ಕು, ನಾಯಿಗಳದ್ದು ಒಂದು ಹೆಚ್ಚುತ್ತಿರುವ ಸಮಸ್ಯೆಯಾಗಿದೆ. ಉದಾಹರಣೆಗೆ, ಬೆಕ್ಕು ವಿಚಿತ್ರ ರೀತಿಯಲ್ಲಿ ವರ್ತಿಸುತ್ತಿದ್ದರಿಂದ ಅದನ್ನು ಸಾಯಿಸಲು ಒಬ್ಬ ಹೆಂಗಸು ಪಶುವೈದ್ಯರ ಬಳಿಗೆ ಒಯ್ದಳು. ಆದರೆ, ಬೆಕ್ಕು ಪ್ರತಿ ದಿನ ಅನೇಕ ತಾಸುಗಳ ಕಾಲ ಮನೆಯಲ್ಲಿ ಮುಚ್ಚಿಡಲ್ಪಡುತ್ತಿತ್ತೆಂದು ತಿಳಿದಾಗ ಅದರ ವಿಚಿತ್ರ ವರ್ತನೆಗೆ ಇದೇ ಕಾರಣವೆಂದು ವೈದ್ಯನು ತೀರ್ಮಾನಿಸಿದನು. ಬೆಕ್ಕುಗಳು ಶಾಂತ ಜೀವನವನ್ನು ನಡಿಸುವ ಪ್ರವೃತ್ತಿಯವುಗಳಾದರೂ ಅವುಗಳಿಗೆ ಮಾನವ “ಕುಟುಂಬದ” ಸಂಪರ್ಕ ಅಗತ್ಯ. ಇನ್ನು ಕೆಲವು ಪ್ರಾಣಿಗಳು ಯೋಗ್ಯ ವಾಯು ಸಂಚಾರವಿಲ್ಲದ ವಾಹನಗಳಲ್ಲಿ ಮುಚ್ಚಿಡಲ್ಪಡುವ ಕಾರಣ ಬಾಧೆಗೊಳಗಾಗಿವೆ.
ನಾಯಿಗಳೂ ಜವಾಬ್ದಾರಿ ತರುತ್ತವೆ. ಅವುಗಳಿಗೆ ವ್ಯಾಯಾಮ ಅಗತ್ಯ. ನಾಯಿಯನ್ನು ದಿನಕ್ಕೆ ಒಮ್ಮೆ ನಡೆದಾಡಿಸಿ ಬಳಿಕ ಅದನ್ನು (ಅದು ರಾತ್ರಿ ಕಳೆದಿರುವ) ಕತ್ತಲೆಯ ತಳಮನೆಯಲ್ಲಿ ಒಂಟಿಯಾಗಿರುವಂತೆ ಅಥವಾ ಉದ್ದಕಿರಿದಾದ ಸರಪಣಿಯಲ್ಲಿ ಕಟ್ಟಿಟ್ಟರೆ ಸಾಕೆಂದು ಎಣಿಸಬಾರದು. ಒಂದು ಇಂಗ್ಲೆಂಡಿನ ಕುಟುಂಬದಲ್ಲಿ ಒಂದು ಕುರಿಕಾಯುವ ನಾಯಿ ಇದ್ದರೂ ಕುರಿಗಳಿರಲಿಲ್ಲ! ಈ ಕಾರಣದಿಂದ ಆ ನಾಯಿ ನರರೋಗಿಯಾಗಿ ಕೊನೆಗೆ ಒಬ್ಬ ರೈತನಿಗೆ ಅದನ್ನು ಕೊಡಬೇಕಾಯಿತು.
ಹೀಗೆ ನಿಜವಾಗಿ ಮುದ್ದಿನ ಪ್ರಾಣಿ ಬೇಕಾದವನು, ಆ ಪ್ರಾಣಿ ಆರೋಗ್ಯಕರವಾಗಿರುವಂತೆ ತನಗೆ ದಿನಾಲೂ ಸಮಯ ತ್ಯಾಗ ಮಾಡಲು ಇಚ್ಛೆ ಇದೆಯೋ ಇಲ್ಲವೋ ಎಂದು ಯೋಚಿಸಬೇಕು. ಯೋಗ್ಯ ಪರಾಮರಿಕೆ ಮತ್ತು ಜೋಕೆಗೆ ಸೌಕರ್ಯಗಳು ಅವನಲ್ಲಿವೆಯೋ? ಮತ್ತು ಪ್ರಾಣಿಗಳು ತಿನ್ನುತ್ತವೆ ಮತ್ತು ದೊಡ್ಡ ಪ್ರಾಣಿಗಳು ತುಂಬಾ ತಿನ್ನುತ್ತವೆ ಎಂಬದೂ ನೆನಪಿರಲಿ! ಇದು ನಿಮ್ಮ ಹಣದ ಚೀಲವನ್ನು ಹೆಚ್ಚು ಹಗುರ ಮಾಡೀತು. ಇದು ಯೋಚಿಸತಕ್ಕ ಇನ್ನೊಂದು ವಿಷಯ. ಇದಲ್ಲದೆ ಪ್ರಾಣಿಗಳಿಗೂ ರೋಗ ಬರುತ್ತದೆ. ಮತ್ತು ಅದಕ್ಕೆ ತಗಲುವ ಖರ್ಚನ್ನು ನೋಡಿ ನಿಮಗೆ ಆಶ್ಟರ್ಯವಾಗಬಹುದು.
ಆರೋಗ್ಯ ಇನ್ನೊಂದು ಸಂಗತಿ. ಅನೇಕ ಪ್ರಾಣಿಗಳ ನಾಲಗೆ ಅವುಗಳ ಒರಸು ಬಟ್ಟೆಯೂ ಆಗಿದ್ದು ಶರೀರದ ಎಲ್ಲಾ ಭಾಗಗಳಲ್ಲಿ ಅದು ಉಪಯೋಗಿಸಲ್ಪಡುತ್ತದೆ! ಒಳಗೆ ಹೋಗುವ ಕ್ರಿಮಿಗಳನ್ನು ನಿಭಾಯಿಸುವ ಶಕ್ತಿ ಅವುಗಳಿಗೆ ಇದೆಯಾದರೂ ಮಕ್ಕಳಿಗೆ ಈ ಸಾಧ್ಯತೆ ಇಲ್ಲ. ಆದುದರಿಂದ, ನಿಮ್ಮ ಮಗುವು ಪ್ರಾಣಿಯನ್ನು ಚುಂಬಿಸುವಂತೆ ಪ್ರೋತ್ಸಾಹಿಸಬೇಡಿರಿ. ಆ ಪ್ರಾಣಿ ನಿಮ್ಮ ಮಗುವಿನ ಮುಖ ಮತ್ತು ಕೈಗಳನ್ನು ನೆಕ್ಕುವಂತೆ ಬಿಡುವದರಿಂದ ಮಗುವಿನ ಆರೋಗ್ಯ—ಪ್ರಾಯಶ: ಹೊಟ್ಟೆಹುಳದಿಂದ— ಸಮಸ್ಯೆಗೀಡಾಗಬಹುದು. ಹೀಗಾಗುವಲ್ಲಿ, ಒಡನೆ ಸಾಬೂನು ಮತ್ತು ನೀರಿನಿಂದ ತೊಳೆಯುವದರಿಂದ ರೋಗವನ್ನು ತಡೆಯಬಹುದು. ಮುದ್ದಿನ ಪ್ರಾಣಿಗಳಿಗೆ ತಮ್ಮದೇ ಆದ ಬಟ್ಟಲುಗಳಿರುವಂತೆ ನೋಡಬೇಕು. ಅವು ಮನುಷ್ಯರು ಉಪಯೋಗಿಸುವ ಪ್ಲೇಟುಗಳನ್ನು ನೆಕ್ಕುವಂತೆ ಬಿಡಬಾರದು. ಪ್ರಾಣಿಗಳು ಚಿಗಟಗಳನ್ನು ಮತ್ತು ಇತರ ಅನೇಕ “ಅನಪೇಕ್ಷಣೀಯ” ಗಳನ್ನು ಮನೆಯೊಳಗೆ ತರಬಲ್ಲವು. ಕೆಲವು ನಾಯಿಗಳ ಒಡೆಯರು ವಿವೇಕದಿಂದ ಅವುಗಳನ್ನು ಮನೆಯೊಳಗೆ ಬರಗೊಡಿಸುವುದಿಲ್ಲ.
ಪಕ್ಷಿ, ಮೀನು—ಮತ್ತು ನೀವು
‘ಹಾಗಾದರೆ ಪಕ್ಷಿಯ ವಿಷಯದಲ್ಲೇನು? ಅದು ಸುಲಭ. ಅದನ್ನು ಒಂದು ಗೂಡಿನಲ್ಲಿ ಹಾಕಿ ಆಗಾಗ ಆಹಾರ ಕೊಟ್ಟರೆ ಸಾಕು’ ಎಂದು ನೀವು ಹೇಳೀರಿ. ಸಣ್ಣ ಗಿಳಿಜಾತಿಯ ಪಕ್ಷಿಗಳು ಬಹಳ ಜನಪ್ರಿಯವಾಗಿದ್ದು, ತರಬೇತು ಹೊಂದಿದ ಮೇಲೆ ಕೆಲವು ಶಬ್ದಗಳನ್ನು ಅಥವಾ ಶಬ್ದ ಸಮೂಹಗಳನ್ನು ಮಾತಾಡುತ್ತವೆ. ಕನೇರಿ ಹಾಡು ಹಕ್ಕಿಗಳು ಸಹ ಅವುಗಳ ಸಂತೋಷದ ಹಾಡುಗಳ ಕಾರಣ ಹರ್ಷ ತರುತ್ತವೆ. ಆದರೆ ಪಕ್ಷಿಗಳ ವಿಷಯದಲ್ಲಿ ಸಹ ತುಂಬಾ ಜಾಗ್ರತೆ ವಹಿಸಬೇಕಾಗುತ್ತದೆ.
ಒಬ್ಬ ಸಲಹೆಗಾರ ಬರೆದುದು: “ಬಜೆರಿಗರ್ ಗಿಳಿ ಒಂದು ಜೀವಿಸುವ ಪ್ರಾಣಿ, ಅದರಲ್ಲೂ ಸಂತೋಷದ ಜೀವಿ. . . . ನೀವು ಒಂದು ಪಕ್ಷಿಯನ್ನು ಪಡೆದೊಡನೆ ಅದರ ಹಿತದ ಜವಾಬ್ದಾರಿ ತೆಗೆದುಕೊಳ್ಳುತ್ತೀರಿ. ಅದಕ್ಕೆ ಆಹಾರ ನೀಡುವ ವಿಷಯ, ಅದಕ್ಕೆ ಬೇಕಾಗುವ ಸ್ಥಳ ಇತ್ಯಾದಿಗಳ ವಿಷಯದಲ್ಲಿ ಸಾಕಷ್ಟು ಜ್ಞಾನವಿಲ್ಲದಿರುವುದು, ಮತ್ತು ಆ ಪಕ್ಷಿಯ ಗುಣ ಮತ್ತು ಪ್ರಕೃತಿಯ ಕುರಿತು ಜ್ಞಾನದ ಕೊರತೆಯಿರುವುದು ಗತವರ್ಷಗಳಲ್ಲಿ ಅಸಂಖ್ಯಾತ ಬಜೆರಿಗರ್ ಪಕ್ಷಿಗಳು ಶೋಚನೀಯವಾಗಿ ಬದುಕಿ, ತಪ್ಪು ಆರೈಕೆಯಿಂದಾಗಿ ತೀರಾ ಕೊಂಚಕಾಲ ಬದುಕಿ ಸಾಯುವಂತೆ ಮಾಡಿದೆ. ಆದುದರಿಂದ ಮುದ್ದಿನ ಪ್ರಾಣಿಯ ಅಂಗಡಿಗೆ ಹೋಗುವ ಮೊದಲು ಜಾಗರೂಕತೆಯಿಂದ ಚಿಂತಿಸಿರಿ.”
ಪ್ರಾಣಿಗಳ ಆರೋಗ್ಯದ ಕುರಿತು ಹೇಳಿರುವ ಮಾತುಗಳು ಪಕ್ಷಿಗಳಿಗೂ ಅನ್ವಯಿಸುತ್ತವೆ. ಅವುಗಳ ಕೊಕ್ಕುಗಳೇ ಅವುಗಳ ಒರಸುವ ಬಟ್ಟೆ. ಬಜೆರಿಗರ್ ಗಿಳಿ ಮೇಜಿನ ಮೇಲೆ ನಡೆದಾಡುತ್ತಾ ಸಕ್ಕರೆ ಮತ್ತು ಇತರ ಆಹಾರವನ್ನು ಕುಕ್ಕಿ ತಿನ್ನುವಂತೆ ಬಿಡುವುದು ವಿವೇಕವಲ್ಲ. ನಿಮ್ಮ ಬಾಯಿಂದ ಅಥವಾ ಬಟ್ಟಲಿಂದ ಪಕ್ಷಿ ತಿನ್ನುವಂತೆ ಬಿಡುವದೂ ವಿವೇಚನೆಯಲ್ಲ. ಮತ್ತು ಮನೆಯಲ್ಲಿ ತಿರುಗಾಡಲು ಅನುಮತಿಸಿರುವ ಪಕ್ಷಿ ತನ್ನ ಹಿಕ್ಕೆಯನ್ನು ಹೇಳಲು ಸಂಕೋಚಪಡಿಸುವ ಸ್ಥಳಗಳಲ್ಲಿ ಹಾಕಬಹುದು.
ಮೀನುಗಳ ವಿಷಯದಲ್ಲೇನು? ಅನೇಕ ಕುಟುಂಬಗಳು ತಮ್ಮ ವಾಸದ ಕೊಟಡಿಯಲ್ಲಿ ಉಷ್ಣವಲಯದ ಮತ್ತು ಮೋಹಕ ಮೀನುಗಳನ್ನು ಮೀನುತೊಟ್ಟಿಯಲ್ಲಿ ಇಟ್ಟುಕೊಳ್ಳಲು ಇಷ್ಟಪಡುತ್ತಾರೆ. ಇವುಗಳನ್ನು ಪ್ರೇಕ್ಷಿಸುವುದು ವಿಶ್ರಮದಾಯಕ. ಆದರೆ ಇವುಗಳು ಚಿಂತೆಗೆ ಕಡಿಮೆ ಕಾರಣವೋ? ಅಲ್ಲ. ನೀರಿನ ಬೆಚ್ಚಗೆ, ನೀರಿನಲ್ಲಿರುವ ಆಮ್ಲಜನಕ, ಬೆಳಕು, ಶುದ್ಧತೆ ಅಥವಾ ಆಹಾರದಲ್ಲಿ ನಾವು ಮಾಡುವ ಚಿಕ್ಕ ತಪ್ಪಿನಿಂದಾಗಿ ತುಂಬಾ ಸತ್ತ ಮೀನುಗಳಿರುವ ತೊಟ್ಟಿ ನಮ್ಮದಾಗಬಹುದು. ಹೌದು, ಮೀನಿಗೂ ಚುರುಕು ಬುದ್ಧಿಯ ಆರೈಕೆ ಅಗತ್ಯ.
ವ್ಯವಹಾರ ಜ್ಞಾನ ಮತ್ತು ಸಮತೆ
ಒಂದು ಮುದ್ದಿನ ಪ್ರಾಣಿಯನ್ನು ಸಾಕಲು ನೀವು ಯೋಚಿಸುವುದಾದರೆ ಅಥವಾ ಅದು ಆಗಲೇ ನಿಮ್ಮಲ್ಲಿರುವದಾದರೆ ಅದರ ಆಹಾರ ಮತ್ತು ಆರೋಗ್ಯ ಅವಶ್ಯಕತೆಗಳ ಮೂಲಜ್ಞಾನ ಅಗತ್ಯ. ಕೆಲವು ನಿಮಿಷಗಳ ಶಿಕ್ಷಣ ಸಾಲದು. ಹೆಚ್ಚಿನ ಸಾರ್ವಜನಿಕ ಪುಸ್ತಕಾಲಯಗಳಲ್ಲಿ ಸಾಧು ಮೃಗಗಳನ್ನು ಮತ್ತು ಮುದ್ದಿನ ಪ್ರಾಣಿಗಳನ್ನು ನೋಡಿಕೊಳ್ಳುವ ವಿಷಯದ ಪುಸ್ತಕಗಳಿವೆ, ಮತ್ತು ಮುದ್ದಿನ ಪ್ರಾಣಿ ಮಾರುವ ಅಂಗಡಿಗಳಲ್ಲಿ ಸಾಮಾನ್ಯವಾಗಿ ಪ್ರಾಣಿ ಪಾಲನೆಗೆ ಸಹಾಯಕರವಾದ ಸಾಹಿತ್ಯಗಳಿರುತ್ತವೆ.
ನಮಗೆ ಮುದ್ದಿನ ಪ್ರಾಣಿಗಳ ಅಗತ್ಯವಿರುವದಾದರೆ ಅವುಗಳಿಗೇನು ಬೇಕೆಂದು ತಿಳಿಯಲು ವಿಶೇಷ ಪ್ರಯತ್ನ ಮಾಡುವದು ಪ್ರಯೋಜನಕರ. ಆಗ ಒಡೆಯನಿಗೂ ಮುದ್ದಿನ ಪ್ರಾಣಿಗೂ ಸಹವಾಸ ತೃಪ್ತಿಕರವಾಗಬಲ್ಲದು. (g89 6/8)
[ಪುಟ 19 ರಲ್ಲಿರುವಚಿತ್ರ]
ಬೆಕ್ಕಿನ ಮರಿಯು ಹರ್ಷದಾಯಕ, ಆದರೆ ಅದನ್ನು ಚುಂಬಿಸುವದು ಅನಾರೋಗ್ಯಕರ