ನೀವು ಸದಾ ಹೊತ್ತು ಮೀರಿ ಬರುತ್ತೀರಾ?
ತಮ್ಮ ಮನೆಯಲ್ಲಿ ಶನಿವಾರ ಮಧ್ಯಾಹ್ನ ನಡಿಯುವ ಗೋಷ್ಟಿಗೆ ಇಬ್ಬರು ಹುಡುಗರು ಆಮಂತ್ರಣ ಪತ್ರ ಬರೆದರು. ಅವರ ಇಬ್ಬರು ಸ್ನೇಹಿತರು ಸಾಮಾನ್ಯವಾಗಿ ತಡವಾಗಿ ಬರುತ್ತಿದ್ದರಿಂದ ಒಬ್ಬನು ಹೀಗೆಂದನು: “ನಾವು ಅವರ ಪತ್ರಗಳಲ್ಲಿ 1 ಗಂಟೆಯೆಂದು ಏಕೆ ಬರೆಯಬಾರದು? ಆಗ ಅವರು ಸರಿ ಸಮಯಕ್ಕೆ ಬಂದಾರು.” ಹಾಗೆಯೇ ನಡಿಯಿತು!
ಆದರೆ ಕಾಲನಿಷ್ಟೆಯ ಸಕಲ ಸಮಯಗಳನ್ನು ಹಾಗೆ ಬಗೆಹರಿಸಲಾಗುವುದಿಲ್ಲ. ವಾಸ್ತವವೇನಂದರೆ, ಸಕಾಲದಲ್ಲಿ ಬರದಿರುವದು ಹೊತ್ತು ಮೀರಿ ಬರುವವರಿಗೂ ಅವರಿಗಾಗಿ ಕಾಯಲು ಬಲಾತ್ಕರಿಸಲ್ಪಟ್ಟವರಿಗೂ ದೊಡ್ಡ ಕಷ್ಟಗಳನ್ನು ತರಬಲ್ಲದು. ಕಾಲನಿಷ್ಟೆಯ ಕುರಿತು ಎಲ್ಲಾ ಸಂಸ್ಕೃತಿಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ಇಡುವದಿಲ್ಲವೆಂಬದು ನಿಜ. ಆದರೆ, ನೀವೆಲ್ಲಿಯೇ ಜೀವಿಸಿದರೂ, ವಿಮಾನಹಿಡಿಯಲು, ಕೂಟಗಳಿಗೆ ಹಾಜರಾಗಲು, ವ್ಯಾಪಾರ ಕಾಲನಿಶ್ಚಯ ಮತ್ತು ಸಾಮಾಜಿಕ ಸಂಭವಗಳಿಗೆ ಹಾಜರಾಗಲು ಸಮಯನಿಷ್ಟೆಯು ಅಗತ್ಯ ಬೀಳುವದು ಸಂಭವನೀಯ.
ನೀವು ಆಗಾಗ್ಯೆ ಹೊತ್ತುಮೀರುವ ಅಭ್ಯಾಸದವರಾದರೆ, ಸಕಾಲಕ್ಕೆ ಹೋಗುವಂತೆ ಯಾವುದು ನಿಮಗೆ ಸಹಾಯ ಮಾಡೀತು? ಮತ್ತು ಇತರರು ನಿಮ್ಮನ್ನು ಅನೇಕವೇಳೆ ಕಾಯುವಂತೆ ಮಾಡುವುದಾದರೆ ಈ ಚಾಲ್ತಿಯಲ್ಲಿರುವ ಬಲಹೀನತೆಯನ್ನು ನಿಭಾಯಿಸುವರೆ ಯಾವುದು ಸಹಾಯಮಾಡಬಲ್ಲದು?
ಹೊತ್ತು ಮೀರಿ ಬರುವುದು ನಿಮ್ಮ ರೂಢಿಯೋ? ಮೊದಲು ಇದಕ್ಕೆ ಕಾರಣ ಕಂಡು ಹಿಡಿಯಿರಿ. ನಿಮಗೆ ಸುಲಭವಾಗಿ ಚಿತ್ತಭ್ರಮಣೆಯಾಗುತ್ತದೋ? ನಿಮ್ಮನ್ನು ಅಥವಾ ಕುಟುಂಬವನ್ನು ಸಂಘಟಿಸಿಕೊಳ್ಳಲು ನಿಮಗೆ ಹೆಚ್ಚು ಕಷ್ಟವಾಗುತ್ತದೋ? ಪ್ರಜ್ಞಾಪೂರ್ವಕವಾದ ಪ್ರಯತ್ನದ ಮೂಲಕ ಇಂಥ ಹೊತ್ತುಮೀರುವ ಪ್ರಭಾವವನ್ನು ಜಯಿಸ ಸಾಧ್ಯವಿದೆ. ದೃಷ್ಟಾಂತಕ್ಕೆ, ನಿಮ್ಮ ಕ್ರಮದ ಚಟುವಟಿಕೆಯ ಸಮಯವನ್ನು ನೀವು ಲೆಕ್ಕಹಾಕಿ, ಅದಕ್ಕನುಸಾರವಾಗಿ ಯೋಜಿಸಿ, ಪ್ರತಿಯೊಂದಕ್ಕೂ ಸಾಕಷ್ಟು ಸಮಯವನ್ನು ಬಿಡಿರಿ. ಸುಮಾರು ಪ್ರತಿ ಗಂಟೆಗೂ ನಿಮ್ಮ ಸಮಯವನ್ನು ಪರೀಕ್ಷಿಸಿರಿ. ಪ್ರಾಮುಖ್ಯ ಕಾರ್ಯನಿಶ್ಚಯಗಳಿಗೆ ಗೊತ್ತಾದ ಸಮಯದಲ್ಲೇ ಹೋಗುವ ಬದಲು ಅದಕ್ಕಿಂತ ಮೊದಲೇ ಅಲ್ಲಿಗೆ ಹೋಗಿರಿ. ಆದರೂ, ನಿಮ್ಮ ಸಮಯ ಮೀರುವ ಸಮಸ್ಯೆಗೆ ಕಾರಣ ಅದಕ್ಕಿಂತಲೂ ಆಳವಾಗಿರಬಹುದೋ?
ಮನೋವಿಜ್ಞಾನದ ಕಾರಣಗಳು
ಕೆಲವು ಸಲ ಹೊತ್ತುಮೀರುವ ಹಿಂದುಗಡೆ ಗುಪ್ತ ಪ್ರಚೋದನೆ ಇರುತ್ತದೆ. ಅಸಮಾಧಾನಕರವಾದ ಕೆಲಸಗಳನ್ನು ತಪ್ಪಿಸುವುದು, ಸ್ವಂತ ಪ್ರಾಮುಖ್ಯತೆಯನ್ನು ತೋರಿಸುವುದು, ಗಮನ ಸೆಳೆಯುವದು ಅಥವಾ ಇತರರಿಗಾಗಿ ಕಾಯುವ ಅವಶ್ಯಕತೆಯನ್ನು ತಪ್ಪಿಸುವುದು—ಇವೇ.
ಡಾ. ಡ್ರೂ ಸ್ಕಾಟ್, ಹೊತ್ತು ಮೀರುವದಕ್ಕೆ ಇದಕ್ಕಿಂತಲೂ ತೆಳ್ಳನೆಯ ಇನ್ನೊಂದು ಕಾರಣವನ್ನು ಹೇಳುತ್ತಾರೆ: “ಒಬ್ಬ ಸೇಲ್ಸ್ಮ್ಯಾನ್ ಒಬ್ಬ ಪ್ರಾಮುಖ್ಯ ಗಿರಾಕಿಯೊಂದಿಗೆ ಕಾರ್ಯನಿಶ್ಚಯಕ್ಕಾಗಿ ತನ್ನ ಆಫೀಸನ್ನು ಬಿಟ್ಟು ಹೋಗುವ ಮೊದಲು, ‘ನಾನು ಇನ್ನೊಂದು ಫೋನ್ ಕಾಲ್ ಮಾಡುತ್ತೇನೆ’ ಎಂದು ನಿಶ್ಚಯಿಸುತ್ತಾನೆ. ಒಬ್ಬ ವಕೀಲಳು ವಿಮಾನ ಹಿಡಿಯಲು ಹೋಗುವ ಮೊದಲು ‘ಇನ್ನೊಂದು ಪತ್ರ ಬರೆಸಿ’ ಹೋಗಲು ತಡಮಾಡುತ್ತಾಳೆ. ಹೀಗೆ ಕಾಲವಿಳಂಬ ಮಾಡುವುದರಿಂದ ಅವರಿಗೆ ನಕಾರಾತ್ಮಕ ಉತ್ತೇಜನ ದೊರೆಯುತ್ತದೆ. ಇದು ಸ್ವಯಂಚಾಲಕವಾಗಿ, ಆ ಉದ್ರೇಕಿಸುವ ಕೊನೇ ಗಳಿಗೆಯ ಅವಸರದ ಆವಶ್ಯಕತೆಯನ್ನು ಉಂಟುಮಾಡುತ್ತದೆ.
ಹೌದು, ಈ ಕೊನೇ ಗಳಿಗೆಯ ಉದ್ರೇಕ ಅಹಿತಕರವಾದರೂ ಬೇಕಾದ ಉತ್ತೇಜನವನ್ನು ಕೊಡಬಲ್ಲದು. ಈ “ವ್ಯಸನ” ನಿಮಗಿದೆಯೆಂದು ಸಂಶಯಿಸುವಲ್ಲಿ, ಇದನ್ನು ನೀವು ಹೇಗೆ ಜಯಿಸಬಲ್ಲಿರಿ? ಡ್ರೂ ಸ್ಕಾಟ್ ಹೀಗನ್ನುತ್ತಾರೆ: “ಉತ್ತೇಜನವು ನಮಗೆಲ್ಲರಿಗೂ ಇರುವ ಒಂದು ಮೂಲ ಅಗತ್ಯತೆ. ಅದನ್ನು ಹುಡುಕುವುದು ಪಕ್ವತೆಯ ಕೊರತೆಯನ್ನು ಸೂಚಿಸುವುದಿಲ್ಲ. ಸ್ವಸ್ಥಮಾನವರು ಈ ಆವಶ್ಯಕತೆಯನ್ನು ಒಪ್ಪಿಕೊಳ್ಳುತ್ತಾರೆ. ಅದನ್ನು ಉತ್ಪನ್ನಕಾರಕ ರೀತಿಯಲ್ಲಿ ಪ್ರಯೋಗಿಸಲು ಅವರು ಕಲಿಯುತ್ತಾರೆ.”
ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ನಿಮ್ಮ ವಾರದ ಕಾರ್ಯಕ್ರಮವನ್ನು ಪರೀಕ್ಷಿಸಿರಿ. ನಿಮ್ಮ ಸ್ವಂತ ಉದ್ರೇಕ ಅಥವಾ ಉತ್ತೇಜನದ ಅವಶ್ಯಕತೆಯನ್ನು ತುಂಬಿಸಲಿಕ್ಕಾಗಿ ಕೆಲವು ಸಕಾರಾತ್ಮಕ ಚಟುವಟಿಕೆಗಳನ್ನು ಅದರಲ್ಲಿ ಸೇರಿಸಿದ್ದೀರೋ? ಅಥವಾ ನಿಮ್ಮ ಕಾರ್ಯಕ್ರಮ ಕೇವಲ ನಿರುತ್ತೇಜಕವೂ ಏಕರೀತಿಯದ್ದೂ ಆಗಿರುವ ಒಂದು ಪಟ್ಟಿಯೋ? ತನ್ನ ಚಟುವಟಿಕೆಯ ಸಂಪೂರ್ಣ ನಿಯಂತ್ರಣ ಯಾರಿಗೂ ಇಲ್ಲವೆಂಬದು ಸರಿಯಾದರೂ, ಸಾಧ್ಯವಿರುವಲ್ಲಿ ನೀವು ಉತ್ತೇಜನವನ್ನು ಒದಗಿಸುವುದಾದರೆ, ಜೀವನದ ನಿಯತಕ್ರಮದ ವಿಷಯಗಳನ್ನು, ಹೊತ್ತುಮೀರಿ ಬಂದು ಉತ್ತೇಜನ ಪಡೆಯುವ ಅವಶ್ಯಕತೆ ಇಲ್ಲದೆ, ಸುಲಭವಾಗಿ ಸಹಿಸಿಕೊಂಡೀರಿ.
“ಒತ್ತಡವಿದ್ದಾಗಲೇ ನನ್ನ ಕೆಲಸ ಅತ್ಯುತ್ತಮ!”
ಕೊನೆಯ ಗಳಿಗೆಯ ತನಕ ಕಾದರೆ ತಮ್ಮ ಕೆಲಸ ಹೆಚ್ಚು ಉತ್ತಮವಾಗುತ್ತದೆಂದು ಕೆಲವರ ವಾದ. ನಿಮ್ಮ ಸಂಬಂಧದಲ್ಲಿ ಅದು ಸರಿಯಾದರೆ ಒಳ್ಳೆಯದೇ. ಆದರೆ ಪ್ರಾಮಾಣಿಕತೆಯಿಂದ ಉತ್ತರ ಕೊಡಿರಿ. ಕೊನೆಯ ನಿಮಿಷದ ತನಕ ಕಾಯುವುದರಿಂದ ನೀವು ನಿಜವಾಗಿಯೂ ಅತ್ಯುತ್ತಮ ಕೆಲಸ ಮಾಡುತ್ತೀರೋ?
ವರ್ಕಿಂಗ್ ಸ್ಮಾರ್ಟ್ ಎಂಬ ತನ್ನ ಪುಸ್ತಕದಲ್ಲಿ ಮೈಕಲ್ ಲಿಬೂಫ್ ಗಮನಿಸುವುದು: “ನಾವು ಹಾಗೆ ನಂಬಲು ಇಷ್ಟಪಡುವುದಾದರೂ, ಒತ್ತಡದ ಎದುರಲ್ಲಿ ಅತ್ಯುತ್ತಮ ಕೆಲಸಮಾಡುವವರು ಯಾರಾದರೂ ಇರುವದಾದರೆ ಅವರು ಕೊಂಚ ಮಂದಿಯೇ. . . . ಒಂದನೆಯದಾಗಿ, ನೀವು ಹೆಚ್ಚು ವೇಗದಲ್ಲಿ ಕೆಲಸಮಾಡಲು, ತಪ್ಪುಮಾಡುವ ಸಂದರ್ಭಗಳನ್ನೂ ಹೆಚ್ಚಿಸುತ್ತೀರಿ. . . . ಎರಡನೇದಾಗಿ, ತೀರಾ ಜರೂರಿಯ ಯಾವ ಕೆಲಸವಾದರೂ ಬಂದು ನೀವು ಒಂದು ಕೆಲಸಕ್ಕೆ ನಿಯಮಿಸಿದ್ದ ಆ ಅಮೂಲ್ಯ ನಿಮಿಷಗಳನ್ನು ಕಸಿದುಕೊಳ್ಳಬಹುದು. . . . ಮೂರನೇದಾಗಿ, ಎಲ್ಲವೂ ಸುಗಮವಾಗಿ ಸಾಗಿ, ಸ್ವಲ್ಪ ಸಮಯದಲ್ಲಿ ನೀವು ಹೆಚ್ಚು ಕೆಲಸವನ್ನು ಮಾಡಿ ಮುಗಿಸಿದಿರೆಂದು ನಾವು ನೆನಸೋಣ. ಹಾಗಾದರೆ ಕಾರ್ಯಸಾಧಕರಾಗಿ ಇರುವುದು ಹೇಗೆಂದು ನಿಮಗೆ ಗೊತ್ತಿದ್ದರೂ ಒತ್ತಡ ಬರುವ ತನಕ ನೀವು ಹಾಗೆ ಮಾಡುವದಿಲ್ಲವೆಂದು ಅರ್ಥ. ನಿಮಗೆ ಸಾಧ್ಯವಿರುವದನ್ನು ಹೆಚ್ಚಿಸಲು ತಪ್ಪಿಸಿಕೊಂಡು ನೀವು ನಿಮ್ಮನ್ನು ಮೋಸಗೊಳಿಸುತ್ತೀರಿ.”
ಕಾಯುವುದನ್ನು ನೀವು ದ್ವೇಷಿಸುತ್ತೀರೋ?
ನೀವು ಪ್ರಾಯಶ: ಹೊತ್ತು ಮೀರಿ ಬರದಿದ್ದರೂ ತಡವಾಗಿ ಬರುವವರಿಗಾಗಿ ಕಾಯುವ ಬಲವಂತಕ್ಕೆ ಒಳಗಾಗುತ್ತೀರಿ ಎಂದು ನೆನಸೋಣ. ಹಾಗಾದರೆ, ನೀವು ತಡಮಾಡುವ ರೂಢಿಯಿರುವ ನಿಮ್ಮ ಕುಟುಂಬ ಸದಸ್ಯರಿಗೆ, ಮಿತ್ರರಿಗೆ ಅಥವಾ ಸಹವಾಸಿಗಳಿಗೆ ಹೇಗೆ ಸಹಾಯ ಮಾಡಬಲ್ಲಿರಿ ಅಥವಾ ಕಡಿಮೆಪಕ್ಷ ಈ ಸಮಸ್ಯೆಯನ್ನು ಹೇಗೆ ನಿಭಾಯಿಸಬಲ್ಲಿರಿ?
ಹೀಗೆ ರೂಢಿಯಾಗಿ ಹೊತ್ತು ಮೀರಿ ಬರುವವರಿಗೆ ಅವರ ಕಾರ್ಯನಿಶ್ಚಯವನ್ನು ಮೊದಲೇ ನೆನಪು ಹುಟ್ಟಿಸಬಹುದು ಅಥವಾ ಈ ಸಮಸ್ಯೆಯ ಕುರಿತು ಅವರೊಂದಿಗೆ ಪ್ರಾಮಾಣಿಕತೆಯಿಂದ ಮಾತಾಡಬಹುದು. ಈ ಸಮಸ್ಯೆ ಇರುವ ಕೆಲವರು, ಅವರ ಹಿನ್ನೆಲೆ ಅಥವಾ ವೈಯಕ್ತಿಕ ಬಲಹೀನತೆಗಳ ಕಾರಣ ನೀಡುವ ಸಹಾಯಕ್ಕೆ ಪ್ರತಿಕ್ರಿಯೆ ತೋರಿಸದೆ ಹೊತ್ತು ಮೀರಿ ಬರುತ್ತಾ ಇತರರಿಗೆ ಅನಾನುಕೂಲತೆಗಳನ್ನು ಉಂಟುಮಾಡಬಹುದು. ಇಂಥ ವ್ಯಕ್ತಿಗಳೊಂದಿಗೆ ಜೀವಿಸುವುದು ಯಾ ಕೆಲಸ ಮಾಡುವದು ನಿಮ್ಮ ಸನ್ನಿವೇಶವಾಗಿರುವಲ್ಲಿ ಇಂಥ ವಿಳಂಬಗಳನ್ನು ಜೀವನ ನಿಜತ್ವವಾಗಿ ತೆಗೆದುಕೊಂಡು ಅದನ್ನು ಕಾರ್ಯಸಾಧಕವಾಗಿ ನಿಭಾಯಿಸಲು ಕ್ರಮ ಕೈಕೊಳ್ಳಿರಿ.
ಉದಾಹರಣೆಗೆ, ಕಾಯುವ ಸಮಯವನ್ನು ಮುಂಭಾವಿಸಿ ಅದಕ್ಕಾಗಿ ತಯಾರಿಸಬಹುದು. ಕಾಯಲು ಸಂತೋಷವಾಗುವ ಸ್ಥಳಗಳಾದ ದೊಡ್ಡ ಅಂಗಡಿ ಅಥವಾ ಹೋಟೇಲುಗಳಲ್ಲಿ ಕಾಯುವ ವ್ಯವಸ್ಥೆಮಾಡಬಹುದು. ಅಥವಾ ನೀವು ಕಾಯುವಾಗ ಅದನ್ನು ಉತ್ಪಾದಕ ರೀತಿಯಲ್ಲಿ ಉಪಯೋಗಿಸಲು ಏನಾದರೂ ಕೆಲಸ ಅಥವಾ ಓದುವ ಸಾಹಿತ್ಯಗಳನ್ನು ತನ್ನಿರಿ. ನಿಮ್ಮ ಕಾರ್ಯನಿಶ್ಚಯಗಳನ್ನು ಇಂಥವರೊಂದಿಗೆ ಸಮಯಕ್ಕೆ ಮುಂಚಿತವಾಗಿ ಮಾಡಿರಿ. ಆಗ ಅವರ ಹೊತ್ತು ಮೀರುವಿಕೆ ನಿಮ್ಮ ಸಮಯದ ಕೆಲಸಗಳನ್ನು ನೀವು ತಪ್ಪುವಂತೆ ಮಾಡುವುದಿಲ್ಲ. ಕೆಲವು ಸಲ ಇಂಥ ರೂಢಿಯಾಗಿ ಹೊತ್ತುಮೀರುವವರನ್ನು ನಿಮ್ಮ ಕಾರ್ಯಕ್ರಮಗಳಲ್ಲಿ ಸೇರಿಸದಂತೆ ನೀವು ತೀರ್ಮಾನಿಸಬಹುದು.
ನಿಮ್ಮ ಸ್ವದರ್ತನೆಗೆ ಪ್ರತಿಫಲ ಕೊಡಿರಿ
ಸಮಯಕ್ಕೆ ಸರಿಯಾಗಿ ಬರುವುದು ನಿಮಗೆ ಕಷ್ಟವಾಗುವುದಾದರೆ ಈ ಬಲಹೀನತೆಯನ್ನು ಮನ್ನಿಸಬೇಡಿ. ಅಥವಾ ಇತರರು ನಿಮಗಾಗಿ ಕಾಯಬೇಕೆಂದು ನಿರೀಕ್ಷಿಸಿ ಔದಾಸೀನ್ಯತೆಯಿಂದ ಅದನ್ನು ಸಹಿಸಿಕೊಳ್ಳಬೇಡಿ. ಇದು ಇತರರ ಜೀವನ ಮತ್ತು ಅನಿಸಿಕೆಗಳಿಗೆ ನೀವು ಪರಿಗಣನೆ ತೋರಿಸುವುದಿಲ್ಲ ಎಂಬಂತಾಗುತ್ತದೆ. ತನ್ನ ವಿವಾಹಕ್ಕೆ ಮೂರು ತಾಸು ತಡವಾಗಿ ಹೋದ ವಧುವಿನ ದೃಷ್ಟಾಂತ ತಕ್ಕೊಳ್ಳಿರಿ. ಇದರ ಕಾರಣ ವಿವಾಹ ಸಂಸ್ಕಾರವನ್ನು ಖಾಸಗಿ ಮನೆಗೆ ಸ್ಥಳಾಂತರಿಸಬೇಕಾಗಿ ಬಂದು ನೆರೆದು ಬಂದಿದ್ದ 200ಕ್ಕೂ ಹೆಚ್ಚು ಮಂದಿಗೆ ತೊಂದರೆಯಾಯಿತು. ಇತರರ ಕುರಿತು ವಿಚಾರಪರರಾಗಿರುವುದು ನಾವು ಸಮಯಕ್ಕೆ ಸರಿಯಾಗಿ ಬರುವಂತೆ ನಮ್ಮನ್ನು ಪ್ರಚೋದಿಸಬೇಕು!
ಇದಕ್ಕೆ ನೀವು ಮಾಡುವ ಪ್ರಯತ್ನದ ಕಾರಣ, ಸಮಯಕ್ಕೆ ಸರಿಯಾಗಿ ಬರುವುದು ಮಾತ್ರವಲ್ಲ ಅನೇಕ ಕಾರ್ಯನಿಶ್ಚಯ ಮತ್ತು ಚಟುವಟಿಕೆಗಳಿಗೆ ಸಮಯಕ್ಕೆ ಮೊದಲೇ ಬರುವಂತೆ ಮಾಡೀತು. ಇದು ನಡೆದಾಗ ಪ್ರತಿಫಲ ಕೊಟ್ಟುಕೊಳ್ಳಿರಿ! ಡಾ. ಸ್ಕಾಟ್ ಹೇಳುವುದು: “ಸಿಕ್ಕುವ ಸಮಯ ಸಿಕ್ಕುವ ಹಣದಂತೆ. ಅದನ್ನು ನಿಮ್ಮ ದಿನನಿತ್ಯದ ಖರ್ಚಿಗೊಳಗಾಗಿಸದೆ, ನೀವು ಸಂತೋಷ ಪಡುವ ವಿಷಯಕ್ಕೆ ಖರ್ಚುಮಾಡಿರಿ. ಪ್ರತಿದಿನ ಬೆಳಿಗ್ಗೆ ಒಂದು ಹತ್ತು ನಿಮಿಷಗಳು ಸಿಕ್ಕುವುದಾದರೆ ಅಥವಾ ಸಾಯಂಕಾಲ ಅರ್ಧ ತಾಸು ದೊರೆಯುವದಾದರೆ ಅಥವಾ ದಿನದಲ್ಲಿ ಅಲ್ಲಿಂದಲೋ ಇಲ್ಲಿಂದಲೋ ಕೆಲವು ನಿಮಿಷ ನಿಮಗೆ ಸಿಕ್ಕುವದಾದರೆ ನೀವು ಏನೆಲ್ಲಾ ಮಾಡಬಹುದೆಂದು ಯೋಚಿಸಿರಿ. ಕೆಲವು ವಿಚಾರಗಳನ್ನು ಸಿದ್ಧಮಾಡಿಟ್ಟುಕೊಳ್ಳಿರಿ. ಆಗ ನೀವು ಎಂದಾದರೂ ಸಮಯಕ್ಕೆ ಮುಂಚಿತವಾಗಿ ಬರುವದಾದರೆ ನಿಮಗೆ ಉತ್ತಮ ಪ್ರತಿಫಲವನ್ನು ಕೊಟ್ಟುಕೊಳ್ಳಬಲ್ಲಿರಿ.” (g89 6/8)
[ಪುಟ 23 ರಲ್ಲಿರುವ ಚೌಕ/ಚಿತ್ರಗಳು]
ಕೊನೆಯ ನಿಮಿಷದ ತನಕ ಕಾಯುವುದನ್ನು ಜಯಿಸುವ ವಿಧಗಳು
1. ದೊಡ್ಡ ಮಹತ್ತರ ಕೆಲಸಗಳನ್ನು ಮಾಡ ಸಾಧ್ಯವಿರುವ ಚಿಕ್ಕ ಕೆಲಸಗಳಾಗಿ ವಿಭಾಗಿಸಿರಿ.
2. ಕೆಲಸಮಾಡಲು ಶಾರೀರಿಕವಾಗಿ ಹೆಜ್ಜೆಯಿಡಿರಿ. ಉದಾಹರಣೆಗೆ, ಪುಸ್ತಕವಾಚನವನ್ನು ನೀವು ಮುಂದೆ ಹಾಕುವದಾದರೆ ಆ ಪುಸ್ತಕವನ್ನು ಅದರ ಸ್ಥಳದಿಂದ ತೆಗೆದು ನಿಮ್ಮ ಮೆಚ್ಚಿನ ಓದುವ ಕುರ್ಚಿಯ ಬಳಿ ಇಡಿರಿ.
3. ಮಾತುಕೊಡಿರಿ. ನಿಮ್ಮ ಸ್ನೇಹಿತ ಅಥವಾ ಸೂಪರ್ವೈಸರಿಗೆ ನಾನು ಒಂದು ಕೆಲಸವನ್ನು ಇಂತಿಷ್ಟೇ ಸಮಯದಲ್ಲಿ ತೀರಿಸುತ್ತೇನೆಂದು ಹೇಳಿರಿ.
4. ಆ ದೊಡ್ಡ ಕೆಲಸದ ಪ್ರತಿಭಾಗ ಮುಗಿದಾಗ ನಿಮಗೆ ಪ್ರತಿಫಲ ಕೊಟ್ಟುಕೊಳ್ಳಿ.
5. ಕಾಲವಿಳಂಬ ಮಾಡುತ್ತಿರೆಂದು ನೋಡುವಾಗ, ‘ನಾನು ಸಮಯ ಸುಮ್ಮನೆ ಖರ್ಚು ಮಾಡುತ್ತಿದ್ದೇನೆ’ ಎಂದು ಹೇಳಿಕೊಳ್ಳಿ. ಇಂಥ ಜ್ಞಾಪಕ ನೀವು ನಿಮ್ಮನ್ನು ಕೊನೆಗೆ ನಿಯಂತ್ರಿಸಿಕೊಳ್ಳುವಂತೆ ಮಾಡಿ ಕಾಲವಿಳಂಬವನ್ನು ನಿಲ್ಲಿಸುವದು.
6. ಕಾಲವಿಳಂಬಿಸುವಾಗ ಆಗುವ ಖರ್ಚನ್ನು ಪರಿಗಣಿಸಿರಿ: ಕೆಲಸ ಹೆಚ್ಚಾಗುವದೋ? ಕೊನೆಯ ಗಳಿಗೆಯಲ್ಲಿ ನೀವು ಅಸ್ವಸ್ಥ ಬಿದ್ದರೆ? ಕೆಲಸಕ್ಕೆ ನೀವು ಎಣಿಸಿದ್ದಕ್ಕಿಂತ ಹೆಚ್ಚು ಸಮಯ ಹಿಡಿದರೆ? ಅನೇಕ ತಡೆಗಳು ಬಂದಾವೋ? ನಿಮ್ಮ ಕೊನೇ ಗಳಿಗೆಯ ಕೆಲಸದ ಗುಣಮಟ್ಟಕ್ಕೆ ಕುಂದು ಬಂದೀತೇ?—ಆ್ಯಲನ್ ಲೇಕಿನ್ ಇವರ “ಹೌ ಟು ಗೆಟ್ ಕಂಟ್ರೋಲ್ ಆಫ್ ಯುವರ್ ಟೈಮ್ ಎಂಡ್ ಯುವರ್ ಲೈಫ್?” ಪುಸ್ತಕದಿಂದ.
[ಚಿತ್ರಗಳು]
ಕಾರ್ಯನಿಶ್ಚಯಕ್ಕೆ ಹೋಗುವ ಮೊದಲು ‘ಇನ್ನೊಂದು ಕೆಲಸ ಮಾಡಬೇಕು’ ಎಂದು ನಿಮಗನಿಸುತ್ತದೋ?
ಒತ್ತಡದಲ್ಲಿ ನೀವು ನಿಜವಾಗಿಯೂ ಅತ್ಯುತ್ತಮ ಕೆಲಸ ಮಾಡುತ್ತೀರೋ?
ಕಾಯುವ ಸಮಯವನ್ನು ವಿಶ್ರಮಿಸಲು ಅಥವಾ ಅಪೇಕ್ಷಿಸುವುದನ್ನು ಮಾಡಲು ಉಪಯೋಗಿಸಿರಿ