ಧರ್ಮದ ಭವಿಷ್ಯ ಅದರ ಗತಕಾಲದ ನೋಟದಲ್ಲಿ
ಭಾಗ 11: 2 ಸಾ.ಶ.ಪೂ.-100 ಸಾ.ಶ. ವಿಶ್ವಾಸ, ನಿರೀಕ್ಷೆ ಮತ್ತು ಪ್ರೀತಿಯ ದಾರಿ
“ಶ್ರೇಷ್ಠ ಸತ್ಯತೆಗಳು ಅತಿ ಸರಳವಾದವುಗಳು: ಮತ್ತು ತದ್ರೀತಿ ಶ್ರೇಷ್ಠ ಪುರುಷರೂ ಕೂಡಾ.”—19ನೆಯ ಶತಮಾನದ ಬ್ರಿಟಿಶ್ ಗ್ರಂಥಕರ್ತರಾದ ಜೂಲಿಯಸ್ ಮತ್ತು ಅಗಸ್ಟಸ್ ಹಾರೇ
ಮಕೆದೋನ್ಯದ ಅರಸನಾದ ಮಹಾ ಅಲೆಕ್ಷಾಂಡರನು ಸತ್ತು ಸುಮಾರು 320 ವರ್ಷಗಳ ನಂತರ, ಒಬ್ಬ ಮಹಾ ಲೋಕವಿಜೇತನು ಹುಟ್ಟಿದನು. ಆತನು ಅಲೆಕ್ಷಾಂಡರನಿಗೆ, ಲೂಕ 1:32,33ರಲ್ಲಿ ಮುನ್ನುಡಿದ ಪ್ರಕಾರ ಎರಡು ವಿಧದಲ್ಲಿ ಭಿನ್ನವಾಗಿದ್ದಾನೆ: ‘ಆತನು ಪರಾತ್ಪರನ ಕುಮಾರನೆನಿಸಿಕೊಳ್ಳುವನು, ಮತ್ತು ಅವನ ರಾಜ್ಯಕ್ಕೆ ಅಂತ್ಯವೇ ಇಲ್ಲ.’ ಆ ಅಧಿಕಾರಿಯು ಯೇಸುಕ್ರಿಸ್ತನಾಗಿದ್ದಾನೆ, ಮತ್ತು ಅವನು ಇತಿಹಾಸದ ಪುಸ್ತಕಗಳ ಧೂಳಿನ ಪುಟಗಳಲ್ಲಿರುವುದಕ್ಕಿಂತಲೂ ಹೆಚ್ಚು ಉತ್ತಮ ರೀತಿಯಲ್ಲಿ ಜೀವಿಸಲು ನಿಯಮಿತನಾಗಿದ್ದನು.
ಯೇಸುವು ಸರಳ ವ್ಯಕ್ತಿಯಾಗಿದ್ದು ಸರಳ ಜೀವನ ನಡಿಸಿದ್ದನು. ಅವನು ತನ್ನನ್ನು ಶ್ರೀಮಂತ ಹಾಗೂ ಬಲಾಢ್ಯ ಮನುಷ್ಯರಿಂದ ಸುತ್ತುವರಿಯಲ್ಪಟ್ಟಿರಲಿಲ್ಲ; ಇಲ್ಲವೇ ಐಹಿಕ ಸಂಪತ್ತುಗಳ ಗುಪ್ತ ನಿಧಿಯು ಅವನ ಹತ್ತಿರ ಇರಲಿಲ್ಲ. ಯೇಸುವು ಸಾ.ಶ.ಪೂ.2ರ ಒಕ್ಟೋಬರದ ಸುಮಾರಿಗೆ ಬೇತ್ಲೇಹೇಮಿನ ಒಂದು ಚಿಕ್ಕ ಹಳ್ಳಿಯಲ್ಲಿ ಸಾಮಾನ್ಯವಾದ ಪರಿಸರದಲ್ಲಿ ಒಂದು ನಿರಾಡಂಬರದ ಯೆಹೂದಿ ಕುಟುಂಬದಲ್ಲಿ ಹುಟ್ಟಿದನು. ಅವನ ಆರಂಭದ ಜೀವಿತವು ಯಾವುದೇ ವಿಶೇಷ ಘಟನೆಗಳಿಲ್ಲದ್ದಾಗಿತ್ತು. ಅವನು ಬಡಗಿಯ ಕೆಲಸದಲ್ಲಿ ತರಬೇತಿ ಹೊಂದಿದ್ದನು, “ಆತನು ಜನರ ಎಣಿಕೆಯಲ್ಲಿ ಯೋಸೇಫನ ಮಗನು.”—ಲೂಕ 3:23; ಮಾರ್ಕ 6:3.
ಯೇಸುವು ದೇವರ ಮಗನು ಎಂಬ ವಿಚಾರವನ್ನು ಗೇಲಿಮಾಡುವವರು ಸಹಿತ, ಅವನ ಜನನವು ಒಂದು ಹೊಸ ಶಕೆಯನ್ನು ಆರಂಭಿಸಿತು ಇಲ್ಲವೇ ವರ್ಲ್ಡ್ ಕ್ರಿಶ್ಚಿಯನ್ ಎನ್ಸೈಕ್ಲೋಪಿಡಿಯಾ ಮಾಡಿದ “ಇತಿಹಾಸದಲ್ಲಿ ಕ್ರೈಸ್ತತ್ವವು ಒಂದು ವಿಸ್ತಾರವಾದ ಹಾಗೂ ವಿಶ್ವವ್ಯಾಪೀ ಧರ್ಮವಾಗಿದೆ” ಎಂಬ ಹೇಳಿಕೆಯನ್ನು ಯಾರೂ ಯಶಸ್ವೀಯಾಗಿ ಅಲ್ಲಗಳೆಯಲಾರರು.
ಹೊಸತಲ್ಲ ಆದರೆ ಭಿನ್ನ
ಕ್ರೈಸ್ತತ್ವವು ಪೂರ್ಣವಾಗಿ ಹೊಸ ಧರ್ಮವಲ್ಲ. ಅದರ ಬೇರುಗಳು ಆಳವಾಗಿ ಇಸ್ರಾಯೇಲ್ಯರ ಧರ್ಮದಲ್ಲಿ ಹೊಕ್ಕಿರುತ್ತವೆ, ಆ ಧರ್ಮ ಯೆಹೋವ ದೇವರ ಲಿಖಿತ ನಿಯಮದ ಮೇಲೆ ಪೋಷಿಸಲ್ಪಟ್ಟಿತ್ತು. ಇಸ್ರಾಯೇಲ್ ಒಂದು ಜನಾಂಗವಾಗಿ ರೂಪುಗೊಳ್ಳುವ ಮೊದಲು, ಯೆಹೋವನ ಆರಾಧನೆಯು ಅವರ ಮೂಲ ಪಿತೃಜರಾದ ನೋಹ. ಅಬ್ರಹಾಮ ಮತ್ತು ಮೋಶೆಯವರಿಂದ ಮಾಡಲ್ಪಡುತ್ತಿತ್ತು ಮತ್ತು ವಾಸ್ತವದಲ್ಲಿ ಏದೇನ್ನಲ್ಲಿ ಆರಂಭದ ಸಮಯದಲ್ಲಿ ಆಚರಿಸಲ್ಪಡುತ್ತಿದ್ದ ನಿರ್ಮಾಣಿಕನ ನಿಜ ಆರಾಧನೆಯಾಗಿದ್ದು, ಅಸ್ತಿತ್ವದಲ್ಲಿರುವ ಅತೀ ಪುರಾತನ ಧರ್ಮದ ಮುಂದುವರಿಕೆಯಾಗಿತ್ತು. ಆದರೆ ಇಸ್ರಾಯೇಲಿನ ರಾಷ್ಟ್ರದ ಮತ್ತು ಧಾರ್ಮಿಕ ಧುರೀಣರು ಬೆಬಿಲೋನಿನ ಪ್ರಭಾವದೊಂದಿಗೆ ಸುಳ್ಳು ಧರ್ಮವು ತಮ್ಮ ಆರಾಧನೆಯಲ್ಲಿ ತೂರಿ ಬರುವಂತೆ ಅನುಮತಿಯನ್ನಿತ್ತರು ಮತ್ತು ಈ ರೀತಿ ಅದನ್ನು ಮಲಿನಗೊಳಿಸಿದರು. ವರ್ಲ್ಡ್ ಬೈಬಲ್ ಗಮನಿಸಿದ್ದು: “ ಯೇಸುವಿನ ಜನನದ ಸಮಯದಲ್ಲಿ ಯೆಹೂದಿ ಸಭೆಯು ಮೋಸದಿಂದ ಮೈಲಿಗೆಯಾಗಿತ್ತು ಮತ್ತು ಶ್ರೇಷ್ಟ ಹಿಬ್ರೂ ಪ್ರವಾದಿಗಳಿಂದ ಉಚ್ಛರಿಸಲ್ಪಟ್ಟ ಮೂಲಭೂತ ಆತ್ಮಿಕ ಸತ್ಯತೆಗಳನ್ನು ವಿಧಿಸಂಸ್ಕಾರಗಳಿಂದ ಗೊಂದಲಕ್ಕೀಡುಮಾಡಿ, ಮುಸುಕನ್ನು ಎಳೆಯಲಾಗಿತ್ತು.”.
ಯೆಹೂದಿ ವಿಶ್ವಾಸಕ್ಕೆ ಅಂಟಿಸಿದ ಮಾನವ ಜಟಿಲತೆಯನ್ನು ಹೋಲಿಸುವಾಗ, ಯೇಸುವಿನ ಉಪದೇಶಗಳು ಸರಳತೆಯಿಂದ ಗುರುತಿಸಲ್ಪಟ್ಟಿದ್ದವು. ಮೊದಲನೆಯ ಶತಕದ ಕ್ರೈಸ್ತತ್ವದ ಅತಿ ಹುರುಪಿನ ಮಿಶನೆರಿಗಳಲ್ಲಿ ಒಬ್ಬನಾದ ಪೌಲನು, ಕ್ರೈಸ್ತತ್ವದ ಪ್ರಮುಖ ಗುಣಗಳನ್ನು ಕುರಿತು ಮಾತಾಡುವಾಗ, ಇದನ್ನು ತೋರಿಸಿದನು: “ನಂಬಿಕೆ, ನಿರೀಕ್ಷೆ, ಪ್ರೀತಿ ಈ ಮೂರೇ ನಿಲ್ಲುತ್ತವೆ; ಇವುಗಳಲ್ಲಿ ದೊಡ್ಡದು ಪ್ರೀತಿಯೇ.” (1 ಕೊರಿಂಥ್ಯದವರಿಗೆ 13:13) ಬೇರೆ ಧರ್ಮಗಳು ಕೂಡಾ “ನಂಬಿಕೆ, ನಿರೀಕ್ಷೆ ಮತ್ತು ಪ್ರೀತಿಯ” ಕುರಿತು ಮಾತಾಡುತ್ತವೆ, ಆದರೂ ಕ್ರೈಸ್ತತ್ವವು ಭಿನ್ನವಾಗಿದೆ. ಹೇಗೆ?
ನಂಬಿಕೆ ಯಾರಲ್ಲಿ ಮತ್ತು ಯಾವುದರಲ್ಲಿ?
ನಿರ್ಮಾಣಿಕನೆಂದು ಅವನು ವಿವರಿಸಿದ “ದೇವರಲ್ಲಿ ನಂಬಿಕೆ ಇಡುವುದರ” ಅವಶ್ಯಕತೆಯನ್ನು ಯೇಸುವು ಒತ್ತಿ ಹೇಳಿದ್ದಾನೆ. (ಯೋಹಾನ 13:1; ಮತ್ತಾಯ 19:4; ಮಾರ್ಕ 13:19) ಆದುದರಿಂದ ಕ್ರೈಸ್ತತ್ವವು ಜೈನ ಮತ್ತು ಭೌದ್ಧ ಧರ್ಮಗಳಿಂದ ಭಿನ್ನವಾಗಿದೆ ಹೇಗಂದರೆ ಅವುಗಳು ಒಬ್ಬ ನಿರ್ಮಾಣಿಕನು ಇದ್ದಾನೆಂಬುದನ್ನು ಅಲ್ಲಗಳೆದು, ಈ ವಿಶ್ವವು ನಿರಂತರದಿಂದ ಅಸ್ತಿತ್ವದಲ್ಲಿತ್ತು ಎಂದು ವಾದಿಸುತ್ತಾರೆ. ಯೇಸುವು “ಒಬ್ಬನೇ ನಿಜ ದೇವರ” ಕುರಿತು ಮಾತಾಡಿರುವುದರಿಂದ, ಪುರಾತನ ಬೆಬಿಲೋನ್, ಐಗುಪ್ತ, ಗ್ರೀಸ್ ಮತ್ತು ರೋಮ್ ಧರ್ಮಗಳು ಕಲಿಸಿದಂತೆ ಯಾ ಈಗಲೂ ಹಿಂದೂ ಧರ್ಮವು ಕಲಿಸುವಂತೆ ಸತ್ಯ ದೇವರುಗಳ ಮತ್ತು ದೇವತೆಗಳ ಸಮೂಹಗಳನ್ನು ಅವನು ಸ್ಪಷ್ಟವಾಗಿ ನಂಬಲಿಲ್ಲ.—ಯೋಹಾನ 17:3.
ಯೇಸುವು ವಿವರಿಸಿದ ದೈವಿಕ ಉದ್ದೇಶವು, ಅವನು ‘ಕಳಕೊಂಡದ್ದನ್ನು ಪುನಃ ಪಡೆಯಲು’ ‘ಅನೇಕರನ್ನು ವಿಮೋಚಿಸಲು ತನ್ನ ಆತ್ಮವನ್ನು ಈಡಾಗಿ’ ಅವನು ತೆತ್ತನು, “ಆ ಮೂಲಕ ಆತನನ್ನು ನಂಬುವ ಒಬ್ಬನಾದರೂ ನಾಶವಾಗದೇ ಎಲ್ಲರೂ ನಿತ್ಯಜೀವವನ್ನು ಪಡೆಯಬೇಕೆಂದು” ಇದನ್ನು ಮಾಡಿದನು. (ಮಾರ್ಕ 10:45; ಲೂಕ 19:10; ಯೋಹಾನ 3:16; ಹೋಲಿಸಿರಿ ರೋಮಾಪುರ 5:17-19) ಪಾಪಗಳಿಂದ ಪರಿಹಾರ ದೊರಕಬೇಕಾದರೆ ಯಜ್ಞಾರ್ಪಿತ ಮರಣದ ಮೇಲೆ ನಂಬಿಕೆಯನ್ನಿಡುವುದು, ಮೂಲ ಇಲ್ಲವೇ ಭಾದ್ಯತೆಯಾಗಿ ಬಂದ ಪಾಪವು ಇದೆ ಎಂದು ಅಂಗೀಕರಿಸಲು ನಿರಾಕರಿಸುವ ಶಿಂಟೋ ಧರ್ಮಕ್ಕಿಂತ ಭಿನ್ನವಾಗಿದೆ.
ಕೇವಲ ಒಂದೇ ಸತ್ಯ ವಿಶ್ವಾಸವಿದೆ ಎಂದು ಯೇಸು ಕಲಿಸಿದನು. ಅವನು ಸೂಚಿಸಿದ್ದು: “ಇಕ್ಕಟ್ಟಾದ ಬಾಗಿಲಿನಿಂದ ಒಳಕ್ಕೆ ಹೋಗಿರಿ, ನಾಶಕ್ಕೆ ಹೋಗುವ ಬಾಗಲು ದೊಡ್ಡದು, ದಾರಿ ಅಗಲವು; ಅದರಲ್ಲಿ ಹೋಗುವವರು ಬಹು ಜನ. ನಿತ್ಯಜೀವಕ್ಕೆ ಹೋಗುವ ಬಾಗಲು ಇಕ್ಕಟ್ಟು, ದಾರಿ ಬಿಕ್ಕಟ್ಟು; ಅದನ್ನು ಕಂಡುಹಿಡಿಯುವವರು ಸ್ವಲ್ಪ ಜನ.” (ಮತ್ತಾಯ 7:13, 14) ಇಂಪಿರಿಯಲ್ ರೋಮ್ ಪುಸ್ತಕವು ಹೇಳುವುದು: “ತಮ್ಮಲ್ಲಿ ಮಾತ್ರ ಸತ್ಯವಿದೆ ಮತ್ತು ಇತರ ಎಲ್ಲಾ ಧರ್ಮಗಳು . . . ಸುಳ್ಳಾಗಿವೆ ಎಂದು (ಆರಂಭದ) ಕ್ರೈಸ್ತರು ಪಟ್ಟು ಹಿಡಿದಿದ್ದರು.” ಇದು ನಿಸ್ಸಂಶಯವಾಗಿ ಎಲ್ಲಾ ಒಳ್ಳೆಯದನ್ನು ಕಾಣುವ ಹಿಂದೂ-ಭೌದ್ಧರ ಮನೋಭಾವಕ್ಕಿಂತ ಭಿನ್ನವಾಗಿದೆ.
ಯಾವ ತರಹದ ನಿರೀಕ್ಷೆ?
ಕ್ರೈಸ್ತರ ನಿರೀಕ್ಷೆಯು ನಿರ್ಮಾಣಿಕನ ಉದ್ದೇಶದಲ್ಲಿ ಕೇಂದ್ರಿಕೃತವಾಗಿದೆ ಯಾಕಂದರೆ ಅವನ ಸರಕಾರವು ಜಗತ್ತಿನ ಸಮಸ್ಯೆಗಳನ್ನು ಪರಿಹರಿಸಲಿಕ್ಕಿರುವುದು: ಆದ್ದರಿಂದ ಸಾ.ಶ. 29ರಲ್ಲಿ ಯೇಸುವಿನ ಸೇವೆಯ ಆರಂಭದಿಂದಲೇ, “ಸುವಾರ್ತೆಯನ್ನು ನಂಬಿರಿ” ಮತ್ತು “ದೇವರ ರಾಜ್ಯವು ಸಮೀಪಿಸಿತು” ಎಂದು ಜನರಿಗೆ ಅವನು ಉತ್ತೇಜಿಸಿದನು. (ಮಾರ್ಕ 1:15) ಪೌರ್ವಾತ್ಯ ಧರ್ಮಗಳಾದ ಚೊಂಡೊಗ್ಯುದಂತೆ, ಕ್ರೈಸ್ತ ನಿರೀಕ್ಷೆಯನ್ನು ಸಾಧಿಸುವ ದಾರಿಯೆಂದು ರಾಷ್ಟ್ರೀಯತೆಯ ಮೇಲೆ ಯೇಸುವಿನ ಶಿಕ್ಷಣವು ಒತ್ತರ ಹಾಕಲಿಲ್ಲ. ಬದಲಿಗೆ ಅವನು ರಾಜಕೀಯವನ್ನು ಪ್ರವೇಶಿಸುವಂತೆ ಬಂದ ಎಲ್ಲಾ ತರಹದ ಸಲಹೆಗಳನ್ನು ಯೇಸುವು ತಿರಸ್ಕರಿಸಿದನು. (ಮತ್ತಾಯ 4:8-10; ಯೋಹಾನ 6:15) ನಿಸ್ಸಂಶಯವಾಗಿ, ಕೆಲವು ಯೆಹೂದಿ ಮುಖಂಡರು ಮಾಡುವಂತೆ “ಮೆಸ್ಸೀಯನನ್ನು ತರಲು ಮಾನವ ಕುಲವು ಕ್ರಿಯಾತ್ಮಕವಾಗಿ ದೇವರಿಗೆ ಸಹಾಯ ಮಾಡಬೇಕು” ಎಂಬ ತೀರ್ಮಾನ ಅವನು ಮಾಡಲಿಲ್ಲ.
ನೀತಿಯ ಪರಿಸ್ಥಿತಿಗಳ ಕೆಳಗೆ ಭೂಮಿಯಲ್ಲಿ ನಿತ್ಯಜೀವವನ್ನು ಆನಂದಿಸುವ ಪ್ರತೀಕ್ಷೆಯು, ಕ್ರೈಸ್ತರ ನಿರೀಕ್ಷೆಯಲ್ಲಿ ಒಳಗೂಡಿರುತ್ತದೆ. (ಮತ್ತಾಯ 5:5 ಹೋಲಿಸಿ; ಪ್ರಕಟಣೆ 21:1-4) ಇದು ಸರಳವೂ ಮತ್ತು ತಿಳುಕೊಳ್ಳಲು ಸುಲಭವೂ ಆಗಿಲ್ಲವೋ? ಯಾವುದನ್ನು ದ ಫೈತ್ಸ್ ಆಫ್ ಮ್ಯಾನ್ಕೈಂಡ್ ಪುಸ್ತಕವು ತಿಳಿಸುವಂತೆ “ಕೊನೆಗಾಣುವಿಕೆ” ಆದರೂ “ಸರ್ವನಾಶವಲ್ಲ” ಎಂದು ಸೂಚಿಸುವ ಬೌದ್ಧರ ನಿರ್ವಾಣ ಮನೋಭಾವದಿಂದ ಯಾರ ಮನಸ್ಸು ಮಂಕಾಗಿದೆಯೋ ಅಂಥವರಿಗೆ ಇದು ಕಷ್ಟಕರವಾಗಿರುತ್ತದೆ. ಈ ಪುಸ್ತಕವು ವಾದಿಸುವುದೇನಂದರೆ, ವಾಸ್ತವದಲ್ಲಿ ನಿರ್ವಾಣವನ್ನು “ವಿವರಿಸುವುದು ಅಸಾಧ್ಯವಾದದ್ದು.”
ಪ್ರೀತಿ—ಯಾರಿಗೆ ಮತ್ತು ಯಾವ ವಿಧದ್ದು?
ಯೇಸುವು ಹೇಳಿದ ಒಂದು ಶ್ರೇಷ್ಠ ಆಜ್ಞೆಯು: “ನಿನ್ನ ದೇವರಾದ ಯೆಹೋವನನ್ನು ಪೂರ್ಣ ಹೃದಯದಿಂದಲೂ, ಪೂರ್ಣ ಪ್ರಾಣದಿಂದಲೂ, ಪೂರ್ಣ ಬುದ್ಧಿಯಿಂದಲೂ, ಪೂರ್ಣ ಶಕ್ತಿಯಿಂದಲೂ ಪ್ರೀತಿಸ ಬೇಕು.” (ಮಾರ್ಕ 12:30) ದೈವಿಕ ಆಸಕ್ತಿಗಳನ್ನು ಕಡೆಗಾಣಿಸಿ, ಮಾನವ ರಕ್ಷಣೆಯನ್ನು ಪ್ರಥಮ ಸ್ಥಾದಲ್ಲಿಡುವ ಧರ್ಮಗಳಿಂದ ಇದೆಷ್ಟು ಭಿನ್ನವಾಗಿರುತ್ತದೆ. ನೆರೆಯವನ ಸಕಾರಾತ್ಮಕ ಪ್ರೀತಿಯು ಯೇಸುವು ಹೇಳಿದ ಪ್ರಾಮುಖ್ಯತೆಗಳಲ್ಲಿ ಎರಡನೆಯದ್ದು. ಅವನು ಸಲಹೆ ಕೊಟ್ಟದ್ದು: “ಅಂತು ಜನರು ನಿಮಗೆ ಏನೇನು ಮಾಡ ಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ಅವರಿಗೆ ಮಾಡಿರಿ.” (ಮತ್ತಾಯ 7:12; 22:37-39) ಆದರೆ ಇದು ಕನ್ಫೂಶಿಯಸನ ನಕಾರಾತ್ಮಕ ಉಪದೇಶದಿಂದ ಎಷ್ಟೊಂದು ಭಿನ್ನವಾಗಿದೆ ಎಂದು ಗಮನಿಸಿರಿ: “ನೀವು ಏನನ್ನು ಅಪೇಕ್ಷಿಸಿಸುವದಿಲ್ಲವೋ ಅದನ್ನೇ ಇತರರಿಗೆ ಮಾಡ ಬೇಡಿರಿ.” ಯಾವ ಪ್ರೀತಿಯನ್ನು ನೀವು ಶ್ರೇಷ್ಠವೆಂದು ಪರಿಗಣಿಸುತ್ತೀರಿ, ನಿಮಗೆ ಹಾನಿಯನ್ನು ಮಾಡುವುದರಿಂದ ಜನರನ್ನು ತಡೆಯುವ ವಿಧದ್ದೋ ಅಥವಾ ನಿಮಗೆ ಒಳ್ಳೆಯದ್ದನ್ನು ಮಾಡುವಂತೆ ಅವರಿಗೆ ಪ್ರೇರೇಪಿಸುವ ವಿಧದ್ದೋ?
“ನಿಜವಾದ ಶ್ರೇಷ್ಠ ಪುರುಷನ ಪ್ರಥಮ ಪರೀಕ್ಷೆಯು ಅವನ ದೀನತೆಯಾಗಿದೆ,” ಎಂದು 19ನೆಯ ಶತಮಾನದ ಇಂಗ್ಲೀಷ್ ಲೇಖಕ ಜೋನ್ ರಸ್ಕಿನ್ ಅವಲೋಕಿಸಿದ್ದಾರೆ. ತನ್ನ ತಂದೆಯ ಹೆಸರು ಮತ್ತು ಸತ್ಕೀರ್ತಿಯ ಹಿತಾಸಕ್ತಿಗಳಲ್ಲಿ ಮತ್ತು ಎರಡನೆಯದಾಗಿ, ಮನುಷ್ಯನ ಪರವಾಗಿ ತನ್ನ ಜೀವವನ್ನು ದೀನತೆಯಿಂದ ಅರ್ಪಿಸಿದ ಯೇಸುವು ದೇವರಿಗೂ, ಮನುಷ್ಯರಿಗೂ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದನು. ಸ್ವಹಿತಾಸಕ್ತಿಯ ಮಹಾ ಅಲೆಕ್ಷಾಂಡರನ ತನ್ನನ್ನು ದೇವತ್ವಕ್ಕೇರಿಸುವ ಹಾರೈಕೆಯಿಂದ ಇದು ಎಷ್ಟೊಂದು ಭಿನ್ನವಾಗಿದೆ, ಅವನ ಕುರಿತು ಕೊಲಿಯರ್ಸ್ ಎನ್ಸೈಕ್ಲೋಪಿಡಿಯಾದಲ್ಲಿ ಹೇಳುವುದು: “ಅವನು ಪುನಃ ಪುನಃ ಪೇಚಾಟಕ್ಕೀಡುಮಾಡಿದ ಅವನ ಜೀವಮಾನವಿಡೀ, ತನ್ನ ಮರಣದ ನಂತರ ತನ್ನ ಪ್ರಜೆಗಳಿಗೆ ಏನು ಸಂಭವಿಸುತ್ತದೆ ಎಂಬ ಪ್ರಶ್ನೆಗೆ ಅವನೆಂದೂ ಯೋಚಿಸಿದ್ದನು ಎಂದು ಹೇಳಲು ಯಾವ ಆಧಾರವೂ ಇಲ್ಲ.”
ದೇವರ ಮತ್ತು ಮನುಷ್ಯರ ಮೇಲೆ ಅವನಿಗಿದ್ದ ಪ್ರೀತಿಯನ್ನು ಉದಾಹರಿಸುತ್ತಾ, ಯೇಸುವು, ಭಾರತದಲ್ಲಿನ ತನ್ನ ಹಿಂದೂ ಸಮಕಾಲೀನರಂತೆ ಭೇದಮಾಡುವ ಜಾತಿಪದ್ಧತಿಯನ್ನು ಅವನೆಂದೂ ಸಮ್ಮತಿಸಲಿಲ್ಲ. ಹಾಗೂ ಜನಪ್ರಿಯರಲ್ಲದ ಅಧಿಕಾರಿಗಳ ವಿರುದ್ಧ ಆಯುಧಗಳನ್ನು ಉಪಯೋಗಿಸಲು ಅನುಮತಿಯನ್ನು ಕೊಟ್ಟ ಯೆಹೂದಿ ಪಂಗಡಗಳಿಂತಿರದೇ, ಯೇಸುವು ತನ್ನು ಹಿಂಬಾಲಕರಿಗೆ ಎಚ್ಚರಿಸಿದ್ದು: “ಕತ್ತಿಯನ್ನು ಹಿಡಿದವರೆಲ್ಲರೂ ಕತ್ತಿಯಿಂದ ಸಾಯುವರು.”—ಮತ್ತಾಯ 26:52.
ವಿಶ್ವಾಸವು ಕಾರ್ಯಗಳಿಂದ ರುಜುವಾಯಿತು
ಆರಂಭದ ಕ್ರೈಸ್ತತ್ವದ್ವ ವಿಶ್ವಾಸ, ನಿರೀಕ್ಷೆಗಳೊಂದಿಗಿನ ಕಾರ್ಯವು ಅವರ ನಡತೆಯಿಂದ ವ್ಯಕ್ತವಾಯಿತು. ಪಾಪಪೂರ್ಣ ಮಾನವ ಕುಲಕ್ಕೆ ಸಾಮಾನ್ಯವಾಗಿರುವ “ಪೂರ್ವ ಸ್ವಭಾವವನ್ನು ತೆಗೆದು ಹಾಕಲು” ಮತ್ತು “ದೇವರ ಹೋಲಿಕೆಯ ಮೇರೆಗೆ ಸತ್ಯಾನುಗುಣವಾದ, ನೀತಿಯುಳ್ಳದ್ದಾಗಿಯೂ ದೇವಭಯವುಳ್ಳದ್ದಾಗಿಯೂ ನಿರ್ಮಿಸಲ್ಪಟ್ಟಿರುವ ನೂತನ ಸ್ವಭಾವವನ್ನು ಧರಿಸಿ ಕೊಳ್ಳುವಂತೆ” ಕ್ರೈಸ್ತರಿಗೆ ಹೇಳಲ್ಪಟ್ಟಿತು. (ಎಫೆಸ್ಯದವರಿಗೆ 4:22-24) ಅವರು ಇದನ್ನು ಮಾಡಿದರು. ಆಸಕ್ತಕರವಾಗಿಯೇ ಇಂಗ್ಲೀಷ್ ರಾಜಕೀಯ ವಿಜ್ಞಾನಿ ದಿವಂಗತ ಹೆರಾಲ್ಡ್ ಜೆ. ಲಾಸ್ಕೀ ಹೇಳಿದ್ದು: “ನಿಜವಾಗಿ ಒಂದು ಧರ್ಮದ ಪರೀಕ್ಷೆಯು ಯಾರು ಅದನ್ನು ಸ್ವೀಕರಿಸುತ್ತಾರೋ, ಅವರ ವಿಶ್ವಾಸವನ್ನು ಪ್ರಕಟಿಸುವ ಸಾಮರ್ಥ್ಯದ ಮೇಲೆ ಹೊಂದಿ ಕೊಂಡಿಲ್ಲ; ದೈನಂದಿನ ಜೀವನದ ಸಾಮಾನ್ಯ ಆವರ್ತನಗಳಲ್ಲಿ ಅವರ ನಡತೆಯನ್ನು ಬದಲಾಯಿಸುವುದರಲ್ಲಿ ಅದಕ್ಕಿರುವ ಸಾಮರ್ಥ್ಯವೇ ಅದರ ಪರೀಕ್ಷೆಯಾಗಿರುತ್ತದೆ.” (ಒತ್ತು ನಮ್ಮದು). 1 ಕೊರಿಂಥ್ಯದವರಿಗೆ 6:11ನ್ನು ಹೋಲಿಸಿರಿ.
ಅಚಲವಾದ ವಿಶ್ವಾಸ ಮತ್ತು ಯೋಗ್ಯ ಬುನಾದಿಯಿರುವ ನಿರೀಕ್ಷೆ ಮತ್ತು ನಿಜ ಪ್ರೀತಿಯ ಪ್ರೇರೇಪಣೆಯಿಂದ ತುಂಬಿದ್ದ ಆರಂಭದ ಕ್ರೈಸ್ತರು “ಆದ್ದರಿಂದ ನೀವು ಹೊರಟುಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿ, ದೀಕ್ಷಾಸ್ನಾನ ಮಾಡಿಸಿ . . . ನಾನು ನಿಮಗೆ ಆಜ್ಞಾಪಿಸಿದ್ದನ್ನೆಲ್ಲಾ ಕಾಪಾಡಿಕೊಳ್ಳುವುದಕ್ಕೆ ಅವರಿಗೆ ಉಪದೇಶ ಮಾಡಿರಿ” ಎಂಬ ಯೇಸುವಿನ ಸ್ವರ್ಗಾರೋಹಣದ ಮೊದಲು ಅವರಿಗೆ ಕೊಟ್ಟ ಕೊನೆಯ ಆಜ್ಞೆಗೆ ವಿಧೇಯರಾಗಲು ತೊಡಗಿದರು.—ಮತ್ತಾಯ 28:19,20.
ಸಾ.ಶ.33ರ ಪಂಚಾಶತಮದಲ್ಲಿ ಯೆರೂಸಲೇಮಿನ ಮೇಲಿನ ಕೋಣೆಯಲ್ಲಿ 120 ಕ್ರೈಸ್ತ ಶಿಷ್ಯರು ಒಟ್ಟಾಗಿ ಸೇರಿ ಬಂದಾಗ ದೇವರ ಪವಿತ್ರ ಆತ್ಮವು ಅವರ ಮೇಲೆ ಸುರಿಸಲ್ಪಟ್ಟಿತು. ಕ್ರೈಸ್ತ ಸಭೆಯು ಸ್ಥಾಪಿಸಲ್ಪಟ್ಟಿತು.a ಇದರ ಸದಸ್ಯರು ಆ ದಿವಸದಲ್ಲಿ ಅದ್ಭುತಕರವಾಗಿ ವಿದೇಶಿ ಭಾಷೆಗಳಲ್ಲಿ ಮಾತಾಡುವ ಸಾಮರ್ಥ್ಯವನ್ನು ಪಡೆದರು. ಹೀಗೆ ಯೆರೂಸಲೇಮಿನಲ್ಲಿ ಹಬ್ಬಕ್ಕೆ ಹಾಜರಾದ ಯೆಹೂದಿಗಳೊಂದಿಗೆ ಮತ್ತು ಇತರ ದೇಶಗಳ ಮತಾಂತರಿಗಳಾದ ಅನ್ಯದೇಶದವರೊಂದಿಗೆ ಸಂಭಾಷಿಸಲು ಅವರಿಗೆ ಶಕ್ಯವಾಯಿತು. (ಅಪೊಸ್ತಲರ ಕೃತ್ಯ 2:5, 6, 41) ಎಂತಹ ಫಲಿತಾಂಶ! ಒಂದೇ ದಿನದಲ್ಲಿ, ಕ್ರೈಸ್ತರ ಸಂಖ್ಯೆಯು ಸುಮಾರು 1,20ರಿಂದ 3,000ಕ್ಕೂ ಮಿಕ್ಕಿ ಏರಿತು.
ಯೇಸುವು ತನ್ನ ಪ್ರಚಾರವನ್ನು ಹೆಚ್ಚಾಗಿ ಯೆಹೂದ್ಯರಿಗೆ ಸಿಮೀತಗೊಳಿಸಿದ್ದನು. ಆದರೆ ಪಂಚಾಶತಮದ ಸ್ವಲ್ಪವೇ ಸಮಯಗಳ ನಂತರ, ಕ್ರೈಸ್ತ ಅಪೊಸ್ತಲನಾದ ಪೇತ್ರನು ಬೈಬಲಿನ ಪ್ರಥಮ 5 ಪುಸ್ತಕಗಳನ್ನು ಪರಿಪಾಲಿಸುತ್ತಿದ್ದ ಸಮಾರ್ಯದವರಿಗೆ ಮತ್ತು ನಂತರ ಸಾ.ಶ.36ರಲ್ಲಿ, ಎಲ್ಲಾ ಯೆಹೂದ್ಯೇತರರಿಗೆ “ಮಾರ್ಗ” ತೆರೆದನು. ಪೌಲನು “ಜನಾಂಗಗಳಿಗೆ ಅಪೊಸ್ತಲನಾದನು” ಮತ್ತು ಮೂರು ಮಿಶನೆರಿ ಪ್ರಯಾಣಗಳಲ್ಲಿ ತೊಡಗಿದ್ದನು. (ರೋಮಾಪುರದವರಿಗೆ 11:13) ಹೀಗೆ ಸಭೆಗಳು ರಚಿಸಲ್ಪಟ್ಟವು ಮತ್ತು ಅವುಗಳು ತುಂಬಿತುಳುಕಿದವು. “ವಿಶ್ವಾಸವನ್ನು ವಿಸ್ತರಿಸುವ ಅವರ ಆಸಕ್ತಿಯು ಬಂಧಮುಕ್ತವಾಗಿತ್ತು” ಎಂದು ಫ್ರಮ್ ಕ್ರೈಸ್ಟ್ ಟು ಕೊಸ್ವಾಂಟೈಸ್ ಪುಸ್ತಕವು ಹೇಳುತ್ತದೆ. ಇದು ಸೇರಿಸಿದ್ದು: “ಕ್ರೈಸ್ತರ ಸಾಕ್ಷಿಯು ವಿಸ್ತಾರವಾಗಿತ್ತು ಮತ್ತು ಪರಿಣಾಮಕಾರಿಯಾಗಿತ್ತು.” ಬೆಂಕಿಯನ್ನು ಉರಿಸುವ ಗಾಳಿಯಂತೆ ಕ್ರೈಸ್ತರ ಹಿಂಸೆಯು ಸಂದೇಶವನ್ನು ವಿಸ್ತರಿಸಲು ಸಹಾಯವಾಗಿ ಮುನ್ಸಿಡಿಯಾಗಿ ವರ್ತಿಸಿತು. ಕ್ರೈಸ್ತತ್ವದ ತಾರುಣ್ಯದ ಕ್ರೈಸ್ತ ಕಾರ್ಯಗಳು ನಿಲ್ಲಿಸಲಸಾಧ್ಯವಾಗಿದ್ದವು ಎಂಬ ಉತ್ತೇಜಕ ಇತಿಹಾಸವನ್ನು ಬೈಬಲಿನ ಪುಸ್ತಕವಾದ ಅಪೊಸ್ತಲರ ಕೃತ್ಯಗಳು ತಿಳಿಸುತ್ತವೆ.
‘ನಾನು ತಿಳಿದಿರುವ ಕ್ರೈಸ್ತತ್ವವು ಅದಲ್ಲ!’
ಕ್ರೈಸ್ತತ್ವದ ಆರಂಭದ ದಿನಗಳ ವಿವರಣೆಯನ್ನು ಕೇಳಿದ ನಂತರ ಇದು ನಿಮ್ಮ ಪ್ರತಿಕ್ರಿಯೆಯಾಗಿರುತ್ತದೋ? ದೃಢವಾದ ವಿಶ್ವಾಸವನ್ನು ಹೊಂದುವ ಬದಲು ಹಲವು ನಾಮ ಮಾತ್ರದ ಕ್ರೈಸ್ತರು ಇಂದು ಸಂಶಯದಿಂದ ತುಂಬಿ, ಯಾವುದನ್ನು ನಂಬುವುದು ಎನ್ನುವ ಖಾತ್ರಿಯಿಲ್ಲದವರನ್ನು ನೀವು ನೋಡಿದ್ದೀರೋ? ನಿರೀಕ್ಷೆಯ ಬದಲು, ಅವರಲ್ಲಿ ಹಲವರು ಭಯಗ್ರಸ್ತರಾಗಿದ್ದು, ಭವಿಷ್ಯದ ಕುರಿತಾಗಿ ಅಭದ್ರತೆಯಿಂದ ಇರುವುದನ್ನು ನೀವು ಕಂಡುಕೊಂಡಿದ್ದೀರೋ? ಮತ್ತು 18ನೆಯ ಶತಮಾನದ ಇಂಗ್ಲೀಷ್ ವಿಡಂಬನಕಾರ ಜೊನಾತನ್ ಸ್ವೀಪ್ಟ್ ಉಚ್ಛರಿಸಿದಂತೆ “ದ್ವೇಷಿಸಲು ಮಾತ್ರ ನಮ್ಮಲ್ಲಿ ಒಂದು ಧರ್ಮವಿರುತ್ತದೆ, ಆದರೆ ಒಬ್ಬರನ್ನೊಬ್ಬರು ಪ್ರೀತಿಸುವಂತೆ ಮಾಡುವಷ್ಟು ಅಲ್ಲ” ಎಂಬದನ್ನು ನೀವು ಕಂಡಿದ್ದೀರೋ?
ಪೌಲನು ಈ ನಕಾರಾತ್ಮಕ ಬೆಳವಣಿಗೆಯನ್ನು ಮುನ್ಸೂಚಿಸಿದ್ದನು. “ಕ್ರೂರವಾದ ತೋಳಗಳು”—ಹೆಸರಿಗೆ ಮಾತ್ರ ಮುಂದಾಳುಗಳಾದ ಕ್ರೈಸ್ತರು—“ಎದ್ದು, ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.”(ಅಪೊಸ್ತಲರ ಕೃತ್ಯಗಳು 20:29, 30) ಇದು ಎಷ್ಟು ವಿಸ್ತಾರವಾಗಿ ಇರಬಹುದು? ನಮ್ಮ ಮುಂದಿನ ಸಂಚಿಕೆಯು ಇದನ್ನು ವಿವರಿಸಲಿರುವುದು. (g89 6/8)
[ಅಧ್ಯಯನ ಪ್ರಶ್ನೆಗಳು]
a ಹೊರಗಿನವರಿಗೆ ಕ್ರೈಸ್ತತ್ವವು “ಆ ಮಾರ್ಗ” ಎಂದು ಸೂಚಿಸಲ್ಪಟ್ಟಿದೆ. “ಅಂತಿಯೋಕ್ಯದಲ್ಲಿಯೇ ಶಿಷ್ಯರಿಗೆ ಕ್ರೈಸ್ತರೆಂಬ ಹೆಸರು ಮೊದಲು (ಪ್ರಾಯಶಃ 10 ಮತ್ತು 20 ವರ್ಷಗಳ ನಂತರದ ನಡುವಿನಲ್ಲಿ) ಬಂತು.”—ಅ.ಕೃತ್ಯಗಳು 9:2; 11:26.
[ಪುಟ 23 ರಲ್ಲಿರುವಚಿತ್ರ]
ಕ್ರೈಸ್ತನೊಬ್ಬನಿಗೆ ಜೀವಂತ ದೇವರಲ್ಲಿ ವಿಶ್ವಾಸ ಇರುತ್ತದೆ
[ಪುಟ 24 ರಲ್ಲಿರುವಚಿತ್ರ]
ಪುನಃಸ್ಥಾಪಿತ ಭೂಪರದೈಸವೊಂದನ್ನು ಕ್ರೈಸ್ತ ನಿರೀಕ್ಷೆಯು ಮುನ್-ನೋಡುತ್ತದೆ
[ಪುಟ 24 ರಲ್ಲಿರುವಚಿತ್ರ]
ದೇವರನ್ನು ಸೇವಿಸಲು ಇತರರಿಗೆ ಸಹಾಯ ಮಾಡುವುದರಲ್ಲಿ ಕ್ರೈಸ್ತ ಪ್ರೀತಿಯು ನಿಷ್ಪಕ್ಷಪಾತಿಯಾಗಿದೆ