ಯುವ ಜನರು ಪ್ರಶ್ನಿಸುವುದು. . .
ಮಿತ್ರರಾಗಿ ಉಳಿಯುವುದು ಅಷ್ಟೊಂದು ಕಷ್ಟಕರವೇಕೆ?
ಒಬ್ಬ ಹುಡುಗಿಯು ಸಬಿನಾಳೊಂದಿಗೆ ಮಾತಾಡುವುದನ್ನು ಸುಮ್ಮನೆ ಬಿಟ್ಟುಬಿಟ್ಟಳು, ಯಾಕಂದರೆ ಅವಳು ಶಾಲೆಯ ಬೇಸ್ಬಾಲ್ ಆಟದಲ್ಲಿ ಗೆಲ್ಲಂಕವನ್ನು ಹೊಡೆಯಲು ತಪ್ಪಿದಳು ಎಂಬ ಕಾರಣದಿಂದ. ಇನ್ನೊಬ್ಬ ಹುಡುಗಿಯು ಅವರ ಮಿತ್ರತ್ವವನ್ನು ಕಡಿದುಕೊಂಡಳು ಯಾಕಂದರೆ ಸಬಿನಾಳು ಪರೀಕ್ಷೆಯೊಂದರಲ್ಲಿ ಮೋಸಕ್ಕೆ ನೆರವಾಗಲು ನಿರಾಕರಿಸಿದ್ದರಿಂದಲೇ. ಮೂರನೆಯವಳು ಬೇರೆಯವರ ಎದುರಿನಲ್ಲಿ ಸತತವಾಗಿ ಸಬಿನಾಳನ್ನು ಠೀಕಿಸುತ್ತಿದ್ದಳು ಮತ್ತು ಅವಮಾನಿಸುತ್ತಿದ್ದಳು. ಈ ರೀತಿ ಸಬಿನಾಳು ಒಂದು ವೇದನಾತ್ಮಕ ಸತ್ಯವನ್ನು ಕಲಿತಳು: ಮಿತ್ರತ್ವವನ್ನು ಕಾಪಾಡಿಕೊಳ್ಳುವುದು ಅಷ್ಟೇನೂ ಸುಲಭವಲ್ಲ.
‘ಅವಳು ನನ್ನ ಗುಟ್ಟನ್ನು ಕಾಪಾಡಲಿಲ್ಲ!’ ‘ಅವನು ನನ್ನನ್ನು ಅಲಕ್ಷಿಸಿದನು!’ ‘ಅವಳು ನನ್ನ ಬೆನ್ನ ಹಿಂದೆ ಗೇಲಿಮಾಡಿದಳು.!’ ‘ನನಗೆ ಉಸಿರುಕಟ್ಟಿದಂತಹ ಅನುಭವವಾಗುತ್ತದೆ.’ ಇಂತಹ ದೂರುಗಳ ಸುರಿಮಳೆಗಳ ಕೆಳಗೆ ಅನೇಕ ಗಟ್ಟಿಯಾದ ಮಿತ್ರತ್ವವು ನುಜ್ಜುಗುಜ್ಜಾಗಿದೆ.
ನಾಜೂಕಿನ ಮಿತ್ರತ್ವಗಳು
ಕೆಲವೊಮ್ಮೆ ಮಿತ್ರತ್ವಗಳು ಅಷ್ಟೊಂದು ನಾಜೂಕಿನದ್ದಾಗಿ ರುಜುವಾಗುವುದು ಹೇಗೆ? ಬೈಬಲು ಹೇಳುವುದು: “ಎಲ್ಲರೂ ಪಾಪಮಾಡಿ ದೇವರ ಮಹಿಮೆಯನ್ನು ಹೊಂದದೆ ಹೋಗಿದ್ದಾರೆ.” (ರೋಮಾಪುರ 3:23) ಅಪರಿಪೂರ್ಣತೆಯ ಕಾರಣ, ನಾವು ತಪ್ಪುಮಾಡುವ ಪ್ರವೃತ್ತಿ ಯವರಾಗಿರುವುದು ಮಾತ್ರವಲ್ಲ, ದೇವರೊಂದಿಗೂ, ಸಹಮಾನವರೊಂದಿಗೂ ನಾವು ಸಹಮತದಲ್ಲಿರುವುದಿಲ್ಲ. ತಪ್ಪಿನ ಮತ್ತು ಅಭದ್ರತೆಯ ಅನಿಸಿಕೆ, ಬಹುಬೇಗನೇ ಕೋಪ, ಬೆದರಿಕೆಗೆ ಒಡ್ಡಲ್ಪಟ್ಟಿದ್ದೇವೆ ಎಂಬ ಶೀಘ್ರಭಾವನೆ ನಮ್ಮದಾಗಿದೆ. ಸಿಟ್ಟು, ಮುಂಗೋಪ, ತಾಳ್ಮೆತಪ್ಪುವುದು ಮತ್ತು ಮಾತ್ಸರ್ಯ—ಅಪರಿಪೂರ್ಣತೆಯ ಬೇರೆ ಗುರುತುಗಳು—ನಮ್ಮಲ್ಲಿರಲಾಗಿ, ಸ್ನೇಹದ ಬಂಧವನ್ನು ಉಳಿಸಿಕೊಳ್ಳುವ ಬದಲು ನಾವು “ಒಬ್ಬರನ್ನೊಬ್ಬರು ಚೂರು ಚೂರು ಮಾಡುವ” ಕಡೆಗೆ ಹೆಚ್ಚು ವಾಲಿರುತ್ತೇವೆ.—ಜ್ಞಾನೋಕ್ತಿ 18:24.
ಹೀಗೆ, ಹದಿವಯಸ್ಕರ ಗೆಳೆತನವು ನಾಜೂಕಾಗಿರಬಲ್ಲದು. ಒಂದು ಕಾರಣವು, ಅಂತಹ ಸಂಬಂಧಗಳು (ವಿಶೇಷವಾಗಿ ಎಳೆಯ ಹುಡುಗಿಯರಲ್ಲಿ) ಬಹಳ ಆಪ್ತತೆಯದ್ದಾಗಿರುತ್ತವೆ. ಮತ್ತು ಪ್ರತಿಯೊಂದು ಅಲೋಚನೆ ಮತ್ತು ಪ್ರತಿಯೊಂದು ಭಾವನೆಗಳನ್ನು ಹಂಚಿಕೊಳ್ಳಲು ಒಬ್ಬ ಗೆಳೆಯನಿರುವುದು ಪ್ರಯೋಜನಕರವಾದರೂ ಅದರಲ್ಲಿ ನ್ಯೂನತೆಗಳು ಕೂಡಾ ಇವೆ. ಸೋವಿಯೆಟ್ ಸಂಶೋಧಕರುಗಳಾದ ಕೊನ್ ಮತ್ತು ಲಾಸೆನ್ಕೊವ್ ಅವಲೋಕಿಸಿದ್ದನ್ನು ಗಮನಿಸಿರಿ: “ಹಂಚಿಕೊಂಡ ಗಾಢ ಆಪ್ತತೆಯ ಗುಟ್ಟುಗಳು, ತಪ್ಪು ತಿಳುವಳಿಕೆಗೆ ಮತ್ತು ಸಂಘರ್ಷಣೆಗೆ ಸಂಭಾವ್ಯ ಉಗಮಗಳಾಗಲೂ ಸಾಧ್ಯವಿದೆ.”
ನಿಮ್ಮ ಹದಿವಯಸ್ಸಿನ ವರುಷಗಳಲ್ಲಿ ಆಗುತ್ತಿರುವ ಭಾವನಾತ್ಮಕ ಬೆಳವಣಿಗೆಯು ಕೂಡಾ ಮಿತ್ರತ್ವದ ವಿರುದ್ಧ ಕೆಲಸಮಾಡಬಲ್ಲದು. ಒಬ್ಬ ಲೇಖಕನು ಹೇಳುವಂತೆ, ತಾರುಣ್ಯದ ಮೊದಲು “ನಮ್ಮ ವ್ಯಕ್ತಿತ್ವಗಳು ನಿಶ್ಚಿತ ರೂಪದಲ್ಲಿ ಭಿನ್ನವಾಗಿ ತೋರಿಬರುವುದು ಕಡಿಮೆ, ನಮ್ಮ ಆಸಕ್ತಿಗಳು ಮತ್ತು ಧ್ಯೇಯಗಳು ಸ್ಫುಟವಾಗಿ ತೀರ್ಮಾನಿತವಲ್ಲ. ನಾವು ಏನಾಗಿರುತ್ತೇವೆ ಎನ್ನುವುದರ ಬಲವಾದ ಅರಿವು ನಮಗಿನ್ನೂ ಆಗಿಲ್ಲ.” ಆದರೆ ನಮ್ಮ ಹದಿವಯಸ್ಸಿನ ಕೊನೆಭಾಗಕ್ಕೆ ಮುಟ್ಟುವಾಗ “ನಾವು ಪ್ರಾಯಕ್ಕೆ ಬಂದವರು, ನಮ್ಮದೇ ಸ್ವಂತ ಧ್ಯೇಯಗಳು ಮತ್ತು ಆದರ್ಶಗಳು ಮತ್ತು ಆಸಕ್ತಿಗಳು ಇರುವ ವ್ಯಕ್ತಿಗಳಾಗಲು ಆರಂಭಿಸುತ್ತೇವೆ. ಇದು, . . . ನಮಗಿಂತ ಭಿನ್ನವಾಗಿ ಬೆಳೆಯುತ್ತಿರುವ ಹಳೆಯ ಮಿತ್ರರೊಂದಿಗೆ ಆಪ್ತರಾಗಿ ಉಳಿಯಲು ಕಷ್ಟಮಾಡಬಹುದು. ಆದಕಾರಣ ಕೆಲವರು ಭಿನ್ನವಾಗಿ ಬೆಳೆಯುವುದು ಅನಿವಾರ್ಯವಾಗುತ್ತದೆ.”
ಕೊನೆಗೆ, ಕೆಲವು ಮಿತ್ರತ್ವಗಳು ಪರಸ್ಪರ ಪ್ರೀತಿಯ ಬದಲು ಸ್ವಾರ್ಥದ ಮೇಲೆ, ಕೊಡುವುದಕ್ಕಿಂತ ತೆಗೆದುಕೊಳ್ಳುವುದರಲ್ಲಿ ಹೆಚ್ಚು ಆಸೆಯಿರುವುದರ ಮೇಲೆ ಆಧರಿತವಾಗಿರುತ್ತವೆ. ಸ್ವಾರ್ಥಭರಿತ ನಿರೀಕ್ಷೆಗಳು ಪೂರೈಸಲ್ಪಡದಾಗ ಎಷ್ಟೊಂದು ಬೇಗನೆ ಆ ನಾಮಮಾತ್ರದ ಗೆಳೆತನ ಆವಿಯಾಗಿ ಹೋಗಬಹುದು ಎಂದು (ಮೊದಲು ತಿಳಿಸಿದಂತಹ) ಸಬಿನಾಳ ಅನುಭವವು ತೋರಿಸುತ್ತದೆ. ಹಾಗಾದರೆ, ಒಂದು ಬೆಚ್ಚನೆಯ ಗೆಳೆತನವು ತೊಡಕಿನಲ್ಲಿ ಸಿಕ್ಕಿಕೊಳ್ಳುವುದಾದರೆ ನೀವೇನು ಮಾಡಸಾಧ್ಯವಿದೆ?
ನಿಷ್ಠರಾಗಿ ಇರ್ರಿ
ಜೊಯಾನಾ ತನ್ನ ಒಬ್ಬ ಗೆಳೆತಿಗೆ ಒಂದು ಗುಟ್ಟನ್ನು ನಂಬಿಕೆಯಿಂದ ಹೇಳಿದಳು—ಯಾರಿಗೂ ಅದನ್ನು ಹೇಳಬಾರದು ಎಂದು ನಿರ್ದಿಷ್ಟವಾಗಿ ವಿನಂತಿಸಿದ ನಂತರ ಒಂದು ವೈಯಕ್ತಿಕ ಸಂಗತಿ ತಿಳಿಸಿದಳು. ಕೆಲವು ದಿನಗಳ ನಂತರ, ಇತರ ಅನೇಕರಿಗೆ ಆ ವಿಷಯವೆಲ್ಲಾ ತಿಳಿದಿರುವುದು ಅಕೆಗೆ ತಿಳಿದುಬಂತು. ತನ್ನ ಗೆಳತಿಯು ತನಗೆ ದ್ರೋಹ ಮಾಡಿದಳೆಂದು ತಿಳಿದು ಜೊಯಾನ ಅಂದದ್ದು: “ನಾನು ಅವಳನ್ನು ಕ್ಷಮಿಸಿದೆ, ಆದರೆ ಅವಳನ್ನು ಇನ್ನೆಂದೂ ನಂಬಲಾರೆ. ನಮ್ಮ ಗೆಳೆತನವು ಇನ್ನೆಂದೂ ಮೊದಲಿನಂತಿರದು.” ಮಿತ್ರತ್ವದಲ್ಲಿ ನಿಷ್ಠೆಯು ಒಂದು ಪ್ರಮುಖ ಭಾಗವಾಗಿರುತ್ತದೆ. ದಾವೀದನು ಮತ್ತು ಯೋನಾತಾನನು ಒಬ್ಬರು ಇನ್ನೊಬ್ಬರೊಂದಿಗೆ ನಿಷ್ಠತೆಯ ಆಣೆಯಿಟ್ಟರು ಎಂದು ಬೈಬಲು ಹೇಳುತ್ತದೆ! (1 ಸಮುವೇಲ 20:15-17) ಆದರೆ ಒಬ್ಬ ಮಿತ್ರನು ವಿಶ್ವಾಸ ದ್ರೋಹ ಮಾಡುವಮದಾದರೆ, ಗೆಳೆತನವು ಅಲ್ಲಿಗೆ ಅಂತ್ಯಗೊಳ್ಳಬೇಕೋ?
ಅಂತಹ ಜರೂರಿಯೇನೂ ಇಲ್ಲ. ನಿಜ, ನೆಚ್ಚಿಕೆಗೆ ಮಾಡಿದ ದ್ರೋಹವನ್ನು ಮನ್ನಿಸಿಬಿಡಲಾಗದು. ಆದರೆ, ಮೊದಲನೇದಾಗಿ, ನೀವು ನಿಮ್ಮ ಗೆಳೆಯನ ಮೇಲೆ ಒಂದು ಗುಟ್ಟಿನ ಭಾರ ಹೊರಿಸಿದ್ದು ನಿಮ್ಮ ಪಾಲಿನ ನಿರ್ಬುದ್ಧಿಯಾಗಿರಬಹುದೇ? “ಚಾಡಿಮಾತು ಎಂದಿಗೂ ಒಂದು ಗುಟ್ಟಾಗಿ ಉಳಿಯುವುದಿಲ್ಲ,” ಎಚ್ಚರಿಸುತ್ತದೆ ಒಂದು ಜ್ಞಾನೋಕ್ತಿ. “ತುಂಬಾ ಮಾತಾಡುವ ಜನರಿಂದ ದೂರವೇ ನಿಲ್ಲು.” (ಜ್ಞಾನೋಕ್ತಿ 20:19, ಟುಡೇಸ್ ಇಂಗ್ಲಿಷ್ ವರ್ಶನ್) ಗುಟ್ಟೊಂದನ್ನು ಕಾಪಾಡುವ ಪ್ರೌಢತೆಯು ಯುವಕರಲ್ಲಿ ಕೆಲವೊಮ್ಮೆ ಇರುವುದಿಲ್ಲ. ಡಾ. ಜೇನ್ ಎಂಡರ್ಸನ್, ತರುಣರ ಮನೋತಜ್ಞೆ ಇನ್ನೂ ಎಚ್ಚರಿಸುವುದು: “ಅದು [ಅವನಿಗೆ ಯಾ ಅವಳಿಗೆ] ತುಸು ಗಮನ ಅಥವಾ ವಿಶೇಷತೆಯನ್ನು ತರುವುದೆಂದು ಕಂಡರೆ ಒಬ್ಬ ಒಳ್ಳೇ ಮಿತ್ರನು ಸಹಾ ಗುಟ್ಟನ್ನು ರಟ್ಟುಮಾಡುವ ಶೋಧನೆಗೆ ಆಗಿಂದಾಗ್ಯೆ ಬಿದ್ದಾನು. ಆದರೆ ಅದು (ಅವನನ್ನು ಯಾ ಅವಳನ್ನು) ಒಬ್ಬ ಕೆಟ್ಟ ವ್ಯಕ್ತಿಯನ್ನಾಗಿ ಮಾಡುವುದಿಲ್ಲ.—ಕೇವಲ ಅಪ್ರೌಢತೆಯೇ.” ಇದಕ್ಕೆ ಪರಿಹಾರವು, ನಿಮಗೊಂದು ಗಂಭೀರವಾದ ಸಮಸ್ಯೆಯಿರುವಾಗ ಪ್ರೌಢ ವ್ಯಕ್ತಿಗಳ ಸಂಗಡ ಅದನ್ನು ವಿಶ್ವಾಸದಿಂದ ಹೇಳುವುದೇ ಆಗಿದೆ.
ಒಂದು ಆಪ್ತ ವೈಯಕ್ತಿಕ ಸಂಗತಿ ನಿಮಗೆ ತಿಳಿಸಲ್ಪಟ್ಟಿದ್ದರೆ ಆಗೇನು? ನಿಷ್ಠೆಯುಳ್ಳವರಾಗಿರ್ರಿ ಮತ್ತು “ಒಬ್ಬನ ಗುಟ್ಟನ್ನೂ ಹೊರಪಡಿಸಬೇಡ. ಅದು ಅವನಿಗೆ ತಿಳಿದುಬಂದಾಗ ಅವನು ನಿನ್ನನ್ನು ದೂಷಿಸಾನು, ಆಗ ನಿನಗೆ ಬಂದ ಅಪಕೀರ್ತಿಯು ಹಿಂದೆಗೆಯಲಾರದಷ್ಟು ಆಗಬಹುದು.”—ಜ್ಞಾನೋಕ್ತಿ 25:9, 10, ದ ನ್ಯೂ ಇಂಗ್ಲಿಷ್ ಬೈಬಲ್.
‘ನನಗೆ ಉಸಿರುಕಟ್ಟಿದಂತಾಗುತ್ತದೆ’
ಜ್ಯೋ ಬೇರೆ ಯಾರೊಡನೆಯೂ ಜತೆಗೊಂಡಾಗ—ಇಲ್ಲವೇ ಏಕಾಂತತೆಯನ್ನು ಬರೇ ಆನಂದಿಸುವಾಗಲೂ— ಜ್ಯೋನ ಮಿತ್ರನು ಬೇಸರಗೊಳ್ಳುತ್ತಾನೆ. ಇದರ ಫಲಿತಾಂಶವಾಗಿ, ಜ್ಯೋ ಒತ್ತಡಕ್ಕೊಳಪಟ್ಟ ಮತ್ತು ಹತಾಶೆಯ ಭಾವನೆ ತಾಳುತ್ತಾನೆ.
ಒಬ್ಬ ಮಿತ್ರನನ್ನು ಅವನು ಅಥವಾ ಅವಳು ನಿಮ್ಮ ಸ್ವಂತ ಆಸ್ತಿಯೋ ಎಂಬಂತೆ ಉಪಚರಿಸುವುದು ಮಿತ್ರತ್ವವನ್ನು ಉಸಿರುಕಟ್ಟಿಸುವ ಸ್ಥಿತಿಗೆ ತರಬಹುದು. ನಿಜ, ಒಬ್ಬ ಆಪ್ತ ಮಿತ್ರನು ಇತರರೊಂದಿಗೆ ಸಹವಾಸ ಮಾಡಲು ಆರಂಭಿಸುವಾಗ ನೋವು ಇಲ್ಲವೇ ಅಭದ್ರ ಭಾವನೆಯಾಗುವುದು ಸ್ವಾಭಾವಿಕ. ಆದರೆ ಅದುಮಿ ಹಿಡಿದೋ ಎಂಬಂತೆ ಒಬ್ಬನನ್ನು ಸ್ವಾಧೀನತೆಯಲ್ಲಿಡಲು ಪ್ರಯತ್ನಿಸುವುದು ಪರಿಸ್ಥಿತಿಯನ್ನು ಪ್ರಗತಿಗೊಳಿಸುವುದೋ? ಜ್ಞಾನೋಕ್ತಿ 25:17ಕ್ಕನುಸಾರ (NEB) ಇಲ್ಲ. ಅದನ್ನುವುದು: “ನೆರೆಯವನು ಬೇಸರಗೊಂಡು ಹಗೆಮಾಡದ ಹಾಗೆ ಅವನ ಮನೆಯಲ್ಲಿ ಅಪರೂಪವಾಗಿ ಹೆಜ್ಝೆಯಿಡು.”
ಯೇಸು ಕ್ರಿಸ್ತನು ವಿಶೇಷವಾಗಿ ಅವನ ಶಿಷ್ಯನಾದ ಯೋಹಾನನ ಹತ್ತಿರ ಬಹಳ ಆಪ್ತತೆಯಲ್ಲಿದ್ದನು. (ಯೋಹಾನ 13:23) ಆದರೂ, ಯೇಸುವು ಇತರರನ್ನು ಬೇರ್ಪಡಿಸಲಿಲ್ಲ ಬದಲಿಗೆ ತನ್ನೆಲ್ಲಾ ಶಿಷ್ಯರ ವಿಷಯದಲ್ಲಿ “ನೀವು ನನ್ನ ಸ್ನೇಹಿತರು” ಎಂದು ಘೋಷಿಸಿದ್ದನು. (ಯೋಹಾನ 15:14) ತದ್ರೀತಿಯಲ್ಲಿ, ಅತೀ ನಿಕಟ ಮಿತ್ರತ್ವದಲ್ಲಿಯೂ ಇತರ ಸಂಬಂಧಗಳಿಗೆ ಅವಕಾಶವಿರುತ್ತದೆ. ವಾಸ್ತವದಲ್ಲಿ, ಕ್ರೈಸ್ತರು ಅವರ ಮಿತ್ರತ್ವದಲ್ಲಿ “ವಿಶಾಲಗೊಳ್ಳುವಂತೆ” ಬೈಬಲು ಪ್ರೇರೇಪಿಸುತ್ತದೆ.—2 ಕೊರಿಂಥ 6:13.
ಒಡೆತನದ ಸ್ವಭಾವದ ಮಿತ್ರನೊಬ್ಬನಿಂದ ನಿಮಗೆ ಉಸಿರುಗಟ್ಟಿದಂತೆ ಆದರೆ ಆಗೇನು? ಆಗ “ವ್ಯಾಜ್ಯವಾಡಿದವನ ಸಂಗಡಲೇ ಅದನ್ನು ಚರ್ಚಿಸು” ಮತ್ತು ನಿಮಗೆ ಹೇಗೆನಿಸುತ್ತದೆಂದು ನಿಮ್ಮ ಮಿತ್ರನಿಗೆ ತಿಳಿಸಿರಿ. (ಜ್ಞಾನೋಕ್ತಿ 25:9) ಇತರ ಜನರಲ್ಲಿ ಮತ್ತು ವಿಷಯಗಳಲ್ಲಿ ನೀವು ತಕ್ಕೊಳ್ಳುವ ಆಸಕ್ತಿಯು ನಿಮ್ಮ ಗೆಳೆಯನಿಗೆ ಬಹಳ ನೋವನ್ನು ತರಬಹುದು. ಅವನು ಯಾ ಅವಳು, ಇದು ನಿಮ್ಮ ಮಿತ್ರತ್ವವನ್ನು ಕೊನೆಗೊಳಿಸುವ ಸಂಕೇತ ಎಂದು ಹೆದರಬಹುದು. ವಿಷಯ ಹಾಗಿರುವುದಿಲ್ಲ ಎಂದೂ, ನಿಮ್ಮ ಸಂಬಂಧದಲ್ಲಿ ಕೇವಲ ಹೆಚ್ಚು ಅವಕಾಶವಿರಲು ನೀವು ಬಯಸುತ್ತೀರೆಂದೂ ನಿಮ್ಮ ಮಿತ್ರನಿಗೆ ಶ್ರುತಪಡಿಸಿರಿ.
ಅಗೌರವ
ಸಂಶೋಧಕರುಗಳಾದ ಯುನಿಸ್ಸ್ ಮತ್ತು ಸ್ಮೊಲರ್, ಹದಿವಯಸ್ಕರ ಮಿತ್ರತ್ವದಲ್ಲಿ ಸಂಘರ್ಷಣೆಗೆ ನಡಿಸುವ ಕಾರಣಗಳಲ್ಲಿ “ಅಗೌರವದ ಕ್ರಿಯೆಗಳು” ಅತ್ಯಂತ ಸಾಮಾನ್ಯ ಎಂಬದಾಗಿ ಕಂಡುಕೊಂಡರು. ‘ಅವನು ನನ್ನ ವಿಷಯ ಅವಮರ್ಯಾದೆಯಿಂದ ಮಾತಾಡಿದ!’ ಇಲ್ಲವೇ ‘ಬೇರೆಯವರ ಮುಂದೆ ಅವಳು ನನ್ನನ್ನು ಅವಮಾನಿಸಿದಳು!’ ಎಂಬ ದೂರುಗಳು ಸಾಮಾನ್ಯ. ನಾವು ಪ್ರೀತಿಸುವವರು ನಿರ್ದಯೆಯಿಂದ ವರ್ತಿಸುವುದು ನಮಗೆ ನೋವುಂಟುಮಾಡುತ್ತದೆ ಗ್ರಾಹ್ಯ. ನಮ್ಮನ್ನು ಹೇಗೆ ಸತ್ಕರಿಸಲಾಗುತ್ತದೋ, ಅದು ಕೆಲವೊಮ್ಮೆ ಇತರರನ್ನು ನಾವು ಹೇಗೆ ಸತ್ಕರಿಸುತ್ತೇವೆ ಎಂಬುದನ್ನು ಪ್ರತಿಬಿಂಬಿಸುತ್ತದೆ. ಯೇಸು ಅಂದದ್ದು: “ಅಂತು ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” ನಿಮ್ಮ ಮಿತ್ರತ್ವದಲ್ಲಿ ಈ ಸುವರ್ಣ ನಿಯಮವನ್ನು ಸ್ವಲ್ಪ ಹೆಚ್ಚು ಅನ್ವಯಿಸುವ ಆವಶ್ಯಕತೆ ಅಲ್ಲಿದೆಯೋ?—ಮತ್ತಾಯ 7:2, 12.
ನೀವು ಗಮನಿಸಬಹುದಾದ ಇನ್ನೊಂದು ಪ್ರಶ್ನೆ ಏನಂದರೆ ನೀವು ನಿಮ್ಮನ್ನು ಅಪಹಾಸ್ಯದ ಗುರಿಹಲಗೆಯಾಗಿ ಇಟ್ಟುಕೊಂಡಿರುವುದೇ—ಮಾತಾಳಿತನ ಅಥವಾ ಹುಚ್ಚು ಮಾತುಗಳ ಮೂಲಕ. (ಜ್ಞಾನೋಕ್ತಿ 15:2) ಹಾಗಿರುವುದಾದರೆ, ಕೆಲವು ಬದಲಾವಣೆಗಳನ್ನು ನೀವು ಮಾಡಲಿಕ್ಕಿರಬಹುದು. ಯೇಸುವು ಭೂಮಿಯ ಮೇಲಿದ್ದಾಗ, ಅವನ ಶತ್ರುಗಳು ಕೂಡಾ ಅವನನ್ನು ಗೌರವಿಸುತ್ತಿದ್ದರು. ಆದರೆ ಅದು, ಜನರು ಆ ರೀತಿ ತನ್ನನ್ನು ಸತ್ಕರಿಸಬೇಕೆಂದು ಯೇಸುವು ತಗಾದೆ ಮಾಡಿದ್ದರಿಂದ ಕೊಡಲ್ಪಟ್ಟದ್ದಲ್ಲ. ಅಲ್ಲ, ಆತನು ತನ್ನನ್ನು ನಡಿಸಿಕೊಂಡ ರೀತಿಯು ಇತರರಿಂದ ಗೌರವಯುಕ್ತ ಸತ್ಕಾರವನ್ನು ಆಮಂತ್ರಿಸಿತು. ‘ನಡೆ ಮತ್ತು ನುಡಿಯಲ್ಲಿ’ ಒಂದು ಪ್ರೌಢ ಕ್ರೈಸ್ತ ಮಾದರಿಯನ್ನಿಡುವುದರ ಮೂಲಕ, ಸ್ವತಃ ನೀವು ಕೂಡಾ ಅದನ್ನೇ ಪೂರೈಸಶಕ್ತರಾಗುವಿರಿ.—1 ತಿಮೊಥಿ 4:12.
ಅಗೌರವಯುಕ್ತ ಉಪಚಾರವು ಪೂರ್ಣವಾಗಿ ಅನರ್ಹವಾಗಿರುವಾಗ, ಆಗೇನು? ಪುನಃ ಅದು ಮಾತಾಡತಕ್ಕ ಸಮಯ. ‘ಮತ್ತೊಂದು ಕೆನ್ನೆಯನ್ನು ಒಡ್ಡುವುದು’ ಅಂದರೆ ಮೌನವಾಗಿ ಅನ್ಯಾಯದ ಉಪಚಾರವನ್ನು ಸಹಿಸಿಕೊಳ್ಳುವುದೆಂಬ ಅರ್ಥಮಾಡುವ ಅಗತ್ಯವಿಲ್ಲ. (ಮತ್ತಾಯ 5:39; 2 ಕೊರಿಂಥ 11:20 ಹೋಲಿಸಿ.) ಆದುದರಿಂದ ನಿಮ್ಮ ಮಿತ್ರನೊಂದಿಗೆ “ಸತ್ಯ”ವನ್ನು ಹೇಳಿ, ಅವನ ಯಾ ಅವಳ ವರ್ತನೆಗಳು ನಿಮ್ಮನ್ನು ಹೇಗೆ ಬಾಧಿಸುತ್ತವೆಂದು ಏಕೆ ತಿಳಿಸಬಾರದು? (ಎಫೆಸ 4:25) ವಿಷಯಗಳನ್ನು ಶಾಂತತೆಯಿಂದ ನಿಭಾಯಿಸಿರಿ, ಉದ್ದೇಶವು ನಿಮ್ಮ ಮಿತ್ರತ್ವವನ್ನು ದುರುಸ್ತಿಪಡಿಸುವುದೇ ಹೊರತು—ಪ್ರತೀಕಾರ ಸಲ್ಲಿಸಲಿಕ್ಕಲ್ಲ.
“ಈ ರೀತಿಯಲ್ಲಿ ಹೇಳುವುದನ್ನು ಹೋಗಲಾಡಿಸಿರಿ: ‘ನೀನು ನನ್ನನ್ನು ಕೊಳಕು ಎಂಬಂತೆ ಉಪಚರಿಸುತ್ತೀ!’”ಎಂದು ಟೀನ್ ಪತ್ರಿಕೆಯ ಲೇಖನ ಶಿಫಾರಸು ಮಾಡಿತ್ತು. “ಬದಲಿಗೆ, ನಿಮ್ಮ ಅನಿಸಿಕೆಗಳೇನು ಎನ್ನುವುದರ ಮೇಲೆ ಗಮನ ಕೇಂದ್ರೀಕರಿಸಿರಿ: ‘ಇತರ ಹುಡುಗಿಯರ ಮುಂದೆ ನನ್ನನ್ನು ಗೇಲಿಮಾಡಿದಾಗ ಇಲ್ಲವೇ ನನ್ನನ್ನು ನಿರ್ಲಕ್ಷಿಸಿದಾಗ ನನಗೆ ನೋವಾಗುತ್ತದೆ. ನೀನು ನನ್ನನ್ನು ಲಕ್ಷಿಸುವುದಿಲ್ಲ ಎಂಬ ಭಾವನೆ ಬರುತ್ತದೆ. ನಾವು ಅದರ ಕುರಿತು ಮಾತಾಡೋಣವೇ?”
ಸಮಂತಾ ತನ್ನ ಸ್ನೇಹಿತೆಯೊಂದಿಗೆ ಅಂತಹ ಒಂದು ಗಂಭೀರ ವಿಷಯವಾಗಿ ಮಾತಾಡಲು ಒತ್ತಾಯಿಸಲ್ಪಟ್ಟಳು. ಅವಳ ಬೆನ್ನ ಹಿಂದೆ ಅವಳ ಸ್ನೇಹಿತೆ ಆಕೆಯ ವಿರುದ್ಧ ಮಾತಾಡುವುದು ಆಕೆಗೆ ತಿಳಿದುಬಂತು. ಸಮಂತಾ ಅದರ ಕುರಿತು ಅವಳೊಡನೆ ಮಾತಾಡಲು ನಿಶ್ಚಯಿಸಿದಳು. “ಮೊದಲು ನಾನು ಗಾಬರಿಗೊಂಡೆ,” ಅವಳು ನೆನಪಿಸುವುದು, “ಆದರೆ ಅದಕ್ಕೆ ಅದು ಅರ್ಹವಾಗಿತ್ತು.” ಕೆಲವೊಂದು ತಪ್ಪಭಿಪ್ರಾಯಗಳು ಅಲ್ಲಿದ್ದವು ಮತ್ತು ಅವಳ ಮಿತ್ರಳ ಹೇಳಿಕೆಗಳು ಅವಳಿಗೆ ವರದಿಮಾಡಿದಂತೆ, ಅಷ್ಟೊಂದು ಕಟುವಾಗಿರಲಿಲ್ಲ ಎಂದು ತಿಳಿಯಲು ಸಾಧ್ಯವಾಯಿತು. (ಜ್ಞಾನೋಕ್ತಿ 15:22) “ನಾವೀಗ ಹೆಚ್ಚು ಉತ್ತಮ ಸ್ನೇಹಿತೆಯರು” ಎಂದು ಹೇಳುತ್ತಾಳೆ ಸಮಂತಾ.
ಗೆಳೆಯರ ನಡುವಿನ ಎಲ್ಲಾ ಸಂಘರ್ಷನೆಗಳು ಅಷ್ಟೊಂದು ಸಂತಸಕರವಾಗಿ ಅಂತ್ಯಗೊಳ್ಳುವುದಿಲ್ಲವೆಂಬದು ಒಪ್ಪತಕ್ಕದ್ದೇ. ಮತ್ತು ನಿಮ್ಮ ಮಿತ್ರನು ಬದಲಾವಣೆಗಳನ್ನು ಮಾಡಲು ಮನಸ್ಸಿಲ್ಲದವನಾದರೆ ಯಾ ಸ್ವಾರ್ಥಿಯೂ, ಪರಿಗಣನೆಯಿಲ್ಲದವನೂ ಯಾ ಇತರರ ಭಾವನೆಗಳ ಕಡೆಗೆ ಆಸಕ್ತಿಯಿಲ್ಲದವನೂ ಆಗಿರುವುದಾದರೆ, ಬೇರೆಡೆಯಲ್ಲಿ ಮಿತ್ರತ್ವವನ್ನು ಹುಡುಕುವುದಕ್ಕೆ ಅದು ಸಮಯ. (ಜ್ಞಾನೋಕ್ತಿ 17:17) ಸಾಮಾನ್ಯವಾಗಿ, ನಿಮ್ಮ ಇಬ್ಬರ ನಡುವಣ ದೃಢ ನಿಶ್ಚಯ ಮತ್ತು ಕ್ರಿಯೆಗಳ ಮೂಲಕ, ಮಿತ್ರತ್ವವನ್ನು ಉಳಿಸಿಕೊಳ್ಳ ಸಾಧ್ಯವಿದೆ. ಮತ್ತು ಒಳ್ಳೆಯ ಮಿತ್ರರು ತರುವ ಆಳವಾದ ಆನಂದ ಮತ್ತು ತೃಪ್ತಿಯ ಕುರಿತು ನೀವು ಆಲೋಚಿಸುವಾಗ, ಅಂತಹ ಪ್ರಯತ್ನವು ಅದಕ್ಕೆ ಅರ್ಹವಲ್ಲವೇ? —ಜ್ಞಾನೋಕ್ತಿ 27:9. (g89 9/22)
[ಪುಟ 26 ರಲ್ಲಿರುವಚಿತ್ರ]
ಒಡೆತನದ ವ್ಯಕ್ತಿಯು ತನ್ನ ಮಿತ್ರನನ್ನು ತನ್ನ ಸ್ವಂತ ಆಸ್ತಿಯೋ ಎಂಬಂತೆ ಉಪಚರಿಸುತ್ತಾನೆ