ವಿಚಿತ್ರ ದೂರದರ್ಶಕ ಸೂರ್ಯ ರಹಸ್ಯವನ್ನು ಹೊರಗೆಡಹುತ್ತದೆ
ಮರುಭೂಮಿಯ ಸೆಕೆಯಿಂದ ತಪ್ಪಿಸಿಕೊಳ್ಳಲು ನಾವು ದಕ್ಷಿಣ ನ್ಯೂ ಮೆಕ್ಸಿಕೋ ರಾಜ್ಯದ ಲಿಂಕನ್ ನ್ಯಾಷನಲ್ ಫಾರೆಸ್ಟಿನ ತಣ್ಣನೆಯ ವಿನೋದ ವಿಹಾರಕ್ಕಾಗಿ ಒಂದು ದಿನ ರಜೆಯಲ್ಲಿ ಹೋಗಿದ್ದಾಗ ಒಂದು ಗುರುತು ಹಲಗೆಯನ್ನು ನೋಡಿದೆವು. ಅದು ನ್ಯೂ ಮೆಕ್ಸಿಕೋವಿನ ಕೌಡ್ಲ್ಕ್ರಾಫ್ಟ್ ಸಮೀಪದಲ್ಲಿರುವ ಸನ್ಸ್ಪಾಟ್ನಲ್ಲಿ ಸ್ಯಾಕ್ರಮೆಂಟೋ ಪೀಕ್ ಸಮೀಕ್ಷಾ ಮಂದಿರಕ್ಕೆ ನಮ್ಮನ್ನು ನಡಿಸಿತು. ಕುತೂಹಲ ಕೆರಳಿಸಲ್ಪಟ್ಟ ನಾವು ಸನ್ಸ್ಪಾಟಿಗೆ ಸಾಗಿದೆವು.
9,200 ಅಡಿ ಎತ್ತರದಲ್ಲಿರುವ ಅಭ್ಯಾಸ ನಮ್ಮ ಚಿಕ್ಕ ಗುಂಪಿನಲ್ಲಿ ಯಾರಿಗೂ ಇರಲಿಲ್ಲ. ಆದುದರಿಂದ ಶಿಖರದಲ್ಲಿ ವಿಲಕ್ಷಣ ರೂಪದ ಕಟ್ಟಡಗಳಲ್ಲಿದ್ದ ದೂರದರ್ಶಕಗಳಿಗೆ ಭೇಟಿನೀಡಲು ನಾವು ಮೇಲೆ ಹತ್ತಿದಾಗ ನಮ್ಮೆಲ್ಲರಿಗೂ ಉಸಿರುಕಟ್ಟಿ ಹೋಗಿತ್ತು. ಗುಮ್ಮಟಾಕಾರದ ಕಟ್ಟಡವನ್ನು ನಿರೀಕ್ಷಿಸುತ್ತಿದ್ದ ನಾವು ಹಿಲ್ಟಾಪ್ ಡೋಮ್ ಕಟ್ಟಡವನ್ನು ನೋಡಿದಾಗ ನಿರಾಶರಾಗಲಿಲ್ಲ. ಅಲ್ಲಿ ಭೇಟಿಗಾರರಿಗೆ ಪ್ರವೇಶವಿರಲಿಲ್ಲ. ಆಗ ನಾವೊಂದು ವಿಚಿತ್ರ ಕಟ್ಟಡವನ್ನು ಕಂಡೆವು.
ಅದು ಎತ್ತರದ ಅಗಲಕಿರಿದಾದ ಬುಡವಿದ್ದ ತ್ರಿಕೋನಾಕಾರದಲ್ಲಿ ನೆಲದಿಂದ ಮೇಲೆದ್ದಿದ್ದ ಕಟ್ಟಡ. ಇಲ್ಲಿ ಭೇಟಿಕಾರರಿಗೆ ಪ್ರವೇಶವಿತ್ತು. (ಮುಂದಿನ ಪುಟದಲ್ಲಿ ಫೋಟೋ ನೋಡಿ.) ನಾವೀಗ ಎತ್ತರದ ಗೋಪುರದಿಂದ ಬೇರಿಂಗ್ ಮೂಲಕ ತೂಗ ಹಾಕಿದ್ದ ಉದ್ದದ ದೂರದರ್ಶನವಿದ್ದ ಪ್ರಯೋಗಶಾಲೆಗೆ ಬಂದಿದ್ದೆವು. ವೇದಿಕೆಯನ್ನು ಹತ್ತಿ ಯಂತ್ರದ ಸಮತೆಯನ್ನು ಕೆಡಿಸಬಾರದೆಂಬ ನೋಟೀಸು ನಮ್ಮನ್ನು ಎಚ್ಚರಿಸಿತು.
ಸೂರ್ಯ “ಕದಲದೆ ನಿಂತಿರು”ವಂತೆ ಮಾಡುವುದು
ಒಂದು ಚಿಕ್ಕ ಸ್ವಾಗತ ಕೋಣೆಯಲ್ಲಿ ವರ್ಣರಂಜಿತ ರೇಖಾಚಿತ್ರಗಳು ಆಗ ನಡಿಯುತ್ತಿದ್ದ ಅಧ್ಯಯನವನ್ನು ವಿವರಿಸಿದವು. ಈ ಕಟ್ಟಡ ಜಾಲವನ್ನು ಸೂರ್ಯನ ಅಧ್ಯಯನಕ್ಕೆ ಮೀಸಲಾಗಿಟ್ಟ ವಿಷಯವನ್ನು ನೋಡುವುದು ರಸಕರವಾಗಿತ್ತು. ಇದು ಸೂರ್ಯನಿಂದ ಶಕ್ತಿಯನ್ನು ಹೇಗೆ ಪಡೆಯುವದೆಂಬದನ್ನು ಕಲಿಯುವ ಯೋಜನೆಯೋ ಎಂದು ಒಬ್ಬ ವಿಜ್ಞಾನಿಯನ್ನು ಕೇಳಲಾಗಿ, ಅವನು ಹಾಗಲ್ಲ, ಇದು ಭೂವಾತಾವರಣ ಮತ್ತು ಸೌರವ್ಯೂಹದ ಅಂತರಿಕ್ಷದ ಮೇಲೆ ಸೂರ್ಯನ ಮತ್ತು ಅದರ ಪರಿಣಾಮದ ಕುರಿತು ಮಾಹಿತಿ ಪಡೆಯುವ ಮೂಲ ಸಂಶೋಧನಾ ಯೋಜನೆಯೆಂದು ವಿವರಿಸಿದನು. ಇದಲ್ಲದೆ, ವಿಜ್ಞಾನಿಗಳು ಸೂರ್ಯನ ಮೇಲ್ಮೈಯನ್ನು ಸದಾ ಪರೀಕ್ಷಿಸುವುದರ ಮೂಲಕ ಅದರ ಒಳಮೈಯನ್ನು ಅಧ್ಯಯನಿಸುತ್ತಾರೆ.
ಪರ್ವತದ ಒಣಗಾಳಿ ಮತ್ತು ಮಾಲಿನ್ಯರಾಹಿತ್ಯವು ಆ ನಿವೇಶನ ಸಮೀಕ್ಷಾ ಮಂದಿರಕ್ಕೆ ಉತ್ತಮ ಸ್ಥಳವೆಂದು ನಮ್ಮ ಗೈಡ್ ವಿವರಿಸಿದನು. 1951ರಲ್ಲಿ ಸ್ಥಾಪಿತವಾದ ಇದು, ಯುನೊಯಿಟೆಡ್ ಸ್ಟೇಟ್ಸಿನಲ್ಲಿ ಸೂರ್ಯ ಅಧ್ಯಯನಕ್ಕಾಗಿ ಕಟ್ಟಲ್ಪಟ್ಟ ಮೊದಲನೆಯ ದೂರದರ್ಶಕಗಳಲ್ಲಿ ಒಂದು. ಹತ್ತಿರವಿದ್ದ ರೇಖಾಚಿತ್ರವೊಂದು ಈ ಮಹಾ ಗೋಪುರ ಈಗ ನೆಲದಿಂದ ಮೇಲಕ್ಕೆ 136 ಅಡಿ ಏರಿದರೂ ದೂರದರ್ಶಕದ 193 ಅಡಿ ಉದ್ದದ ಭಾಗವು ಭೂಮಿಯೊಳಗೆ ಹುಗಿಯಲ್ಪಟ್ಟಿದೆ ಎಂದು ತೋರಿಸಿತು. ಹೀಗೆ, ದೂರದರ್ಶಕದ ಉದ್ದದ ಮೊತ್ತ 329 ಅಡಿ, ಇದು ಒಂದು ಫುಟ್ಬಾಲ್ ಮೈದಾನಿಗೆ ಸಮಾನ! ಈ ದೂರದರ್ಶಕದ ಟ್ಯೂಬಿನೊಳಗೆ ಹೆಚ್ಚು ಕಡಿಮೆ ಪೂರ್ತಿ ನಿರ್ವಾತವಿದೆ. ಹೀಗಿರುವುದರಿಂದ ಸೂರ್ಯ ಪ್ರಕಾಶ ಪ್ರವೇಶಿಸುವಾಗ ಅದು ಬಿಸಿಗಾಳಿಯಿಂದಾಗಿ ವಕ್ರಗೊಳ್ಳುವುದಿಲ್ಲ. ಇದು ಅಸಾಧಾರಣವಾಗಿ ಸ್ಪಷ್ಟವಿರುವ ಪ್ರತಿಬಿಂಬಿತ ಬಿಂಬಗಳನ್ನು ಒದಗಿಸುವುದರಿಂದ ಸಂಶೋಧಕರಿಗೆ ಸೂರ್ಯನ ಮೇಲ್ಮೈಯ ಗಮನಾರ್ಹ ದೃಶ್ಯಗಳನ್ನೊದಗಿಸುತ್ತದೆ.
250 ಟನ್ನುಗಳಿಗೂ ಹೆಚ್ಚು ಭಾರದ ಈ ಪೂರ್ತಿ ದೂರದರ್ಶಕ ಮರ್ಕ್ಯುರಿ ಫ್ಲೋಟ್ ಬೇರಿಂಗ್ನಿಂದ ತೂಗುತ್ತದೆ. ಇದು ಭೂಮಿಯ ಸುತ್ತುವಿಕೆಗೆ ಸಮಕಾರಕವನ್ನೊದಗಿಸುತ್ತಾ ದೂರದರ್ಶಕವೂ ತಡೆಯಿಲ್ಲದೆ ತಿರುಗುವಂತೆ ಎಡೆಗೊಡುತ್ತದೆ. ಹೀಗೆ, ದೂರದರ್ಶಕವನ್ನು ದೀರ್ಘ ಸಮಯಾವಧಿಗಳ ತನಕ ಸೂರ್ಯನ ಮೇಲೆ, ಸೂರ್ಯ, ದೂರದರ್ಶಕದ ಸಂಬಂಧದಲ್ಲಿ “ಕದಲದೆ ನಿಂತಿರುವಂತೆ” ಮಾಡಲು, ಕೇಂದ್ರೀಕರಿಸ ಸಾಧ್ಯವಿದೆ. ಅದು ಪ್ರಕಾಶಾವರಣವೆಂದು ಕರೆಯಲ್ಪಡುವ ಸೂರ್ಯನ ಮೇಲ್ಮೈಯ ಸೂಕ್ಷ್ಮ ಭಾಗಗಳನ್ನು ಮತ್ತು ಸೂರ್ಯನ ಕೆಳವಾತಾವರಣವಾದ ವರ್ಣಮಂಡಲವನ್ನು ಪ್ರೇಕ್ಷಿಸುತ್ತಾ ಛಾಯಾಚಿತ್ರ ತೆಗೆಯುವಂತೆ ರಚಿಸಲ್ಪಟ್ಟಿದೆ.
ಗ್ರೆಯ್ನ್ ಬಿನ್ ಡೋಮ್
ನಮ್ಮ ವಾಹನಕ್ಕೆ ಹಿಂತಿರುಗುವಾಗ ದುಂಡಗಾದ ಧಾನ್ಯದ ಹಗೇವಿನಂತೆ ಕಂಡ ಅಪೂರ್ವ ಕಟ್ಟಡವನ್ನು ದಾಟಿದೆವು. ಮತ್ತು ಅಂಥ ಹಗೇವೇ ಅದಾಗಿತ್ತು! ಗ್ರೆಯ್ನ್ ಬಿನ್ ಡೋಮ್ ಎಂಬ ಹೆಸರಿರುವ ಅದನ್ನು, ಸಮೀಕ್ಷಾಮಂದಿರದ ಆದಿ ಸಮಯಗಳಲ್ಲಿ ಸಿಯರ್ಸ್ ರೋಬಕ್ ಎಂಬ ಕಂಪೆನಿಯಿಂದ ಖರೀದಿಸಲಾಗಿತ್ತು. ಇದನ್ನು ಸನ್ಸ್ಪಾಟಿನ ಪ್ರಥಮ ದೂರದರ್ಶನ ಗೃಹಕ್ಕಾಗಿ ನವೀಕರಿಸಲಾಗಿತ್ತು. ಆ ಸಮಯದಲ್ಲಿ ಅಂತರಿಕ್ಷ ಯಾನದ ಯೋಜನೆ ನಡೆಯುತ್ತಿತ್ತು. ಮತ್ತು ಭೂವಾತಾವರಣದ ಮೇಲೆ, ವಿಶೇಷವಾಗಿ ಅಸಾಧಾರಣ ಸೂರ್ಯ ಚಟುವಟಿಕೆಯಿಂದ ಆಗಬಹುದಾದ ವಾತಾವರಣದ ಕದಡುವಿಕೆಯಲ್ಲಿ ಸೂರ್ಯ ಪ್ರಭಾವದ ಬಗೆಗೆ ಮಾಹಿತಿ ಆಗ ಅಗತ್ಯವಿತ್ತು.
ಆ ಬಳಿಕ, 1957ರಲ್ಲಿ ಓರಾ (AURA), ಖಗೋಲ ವಿಜ್ಞಾನ ಸಂಶೋಧನೆಯ ವಿಶ್ವವಿದ್ಯಾಲಯಗಳ ಸಂಘ ಎಂದು ಕರೆಯಲ್ಪಡುವ ಲಾಭರಹಿತ ಸಂಘವನ್ನು ಅರಿಸೋನದ ಟಕ್ಸನಿನ ಕಿಟ್ ಪೀಕ್ ನ್ಯಾಷನಲ್ ಆಬ್ಸರ್ವೆಟರಿ, ಚಿಲಿಯ ಲಾಸರೀನದಲ್ಲಿರುವ ಸೆರೊ ಟೊಲೊಲೊ ಇಂಟರ್ ಅಮೆರಿಕನ್ ಆಬ್ಸರ್ವೆಟರಿ ಮತ್ತು ಮೇರಿಲ್ಯಾಂಡಿನ ಬಾಲ್ಟಿಮೋರಿನಲ್ಲಿರುವ ಸ್ಪೇಸ್ ಟೆಲಿಸ್ಕೋಪ್ ಸಾಯನ್ಸ್ ಇನ್ಸ್ಟಿಟ್ಯೂಟ್ನ ಸಂಬಂಧದಲ್ಲಿ ಸ್ಥಾಪಿಸಲಾಯಿತು. ವಿಜ್ಞಾನಿಗಳಲ್ಲಿ ಮತ್ತು ಮಾಹಿತಿಯಲ್ಲಿ ಭಾಗಿಗಳಾಗುವುದರಿಂದ ಎಲ್ಲರಿಗೂ ಸೂರ್ಯನ ಕುರಿತು ಹೆಚ್ಚಿನ ತಿಳುವಳಿಕೆ ಪಡೆಯಬಹುದೆಂದು ಈ ಓರಾ ಸಂಸ್ಥೆ ನೆನಸಿತು. ಈ ದೂರ ಪ್ರದೇಶದಲ್ಲಿದ್ದ ಸಮೀಕ್ಷಾ ಮಂದಿರಕ್ಕೆ ಭೂಮಿಯ ವಿವಿಧ ಭಾಗಗಳೊಂದಿಗೆ ಸಂಬಂಧವಿದೆಯೆಂದು ನಾವು ನೋಡ ತೊಡಗಿದೆವು
ಕಂಪಿಸುವ ಸೂರ್ಯ
ಡಾ. ಬರ್ನಾಡ್ ಡರ್ನಿ ಎಂಬ ಸಂಶೋಧನಾ ಡೈರೆಕ್ಟರು ವಿನಯಶೀಲತೆಯಿಂದ ಸೂರ್ಯನ ಕುರಿತಾದ ಕೆಲವು ಪ್ರಶ್ನೆಗಳನ್ನು ಉತ್ತರಿಸಿದರು. ತಾನು ಸೂರ್ಯ ಕಂಪನ ಶಾಸ್ತ್ರ ಕ್ಷೇತ್ರದಲ್ಲಿ ಕೆಲಸ ನಡಿಸುತ್ತಿದ್ದೇನೆಂದು ಅವರು ಹೇಳಿದರು. ಅದರ ಅರ್ಥ ವಿವರಣೆ ನಮಗೆ ಅಗತ್ಯವಿತ್ತು. ಸ್ಯಾಕ್ರಮೆಂಟೋ ಪೀಕ್ನಲ್ಲಿ ಅದರ ಪ್ರಥಮ ಅಧ್ಯಯನ ನಡೆಯಿತಂತೆ. ಅವರ ವಿವರಣೆ: “ಸೂರ್ಯನು ತನ್ನ ಅಕ್ಷದಲ್ಲಿ ಮಾತ್ರ ತಿರುಗುವುದಲ್ಲ. ಅದರ ಮೇಲ್ಮೈಯನ್ನು ಸದಾ ಪರೀಕ್ಷಿಸುತ್ತಾ ನಡೆಯುವ ಬದಲಾವಣೆಗಳನ್ನು ನೋಡುವ ಮೂಲಕ ಅದು ಇತರ ಅನೇಕ ರೀತಿಗಳಲ್ಲಿ ಚಲಿಸುತ್ತದೆಂದು ತಿಳಿಯಬಹುದು. ಈ ಬದಲಾವಣೆಗಳಿಂದ ನಾವು ಸೂರ್ಯನೊಳಗೆ ಏನು ನಡೆಯುತ್ತಿರಬಹುದೆಂಬ ವಿಚಾರಗಳನ್ನು ರೂಪಿಸಿ, ಬಳಿಕ ನಮ್ಮ ವಿಚಾರಗಳನ್ನು ದೃಢೀಕರಿಸಲು ಅಥವಾ ತಪ್ಪೆಂದು ತೋರಿಸಲು ಅಧ್ಯಯನಗಳನ್ನು ಯೋಜಿಸುತ್ತೇವೆ.”
ಅವರು ಮುಂದುವರಿಸಿದ್ದು: “1970ರ ಸುಮಾರಿನಲ್ಲಿ ಸೂರ್ಯನಲ್ಲಿ ಒಂದು ಕಂಪನ ಅಥವಾ ನಡುಕ ಮುಂತಿಳಿಸಲ್ಪಟ್ಟಿತು. ಇದು ಒಂದು ದೊಡ್ಡ ಗಂಟೆ ಬಾರಿಸಲ್ಪಡುವಾಗ ನಡೆಯುವ ಅಲುಗಾಟ ಅಥವಾ ಅದಿರಾಟಕ್ಕೆ ಸಮಾನ. ಅಥವಾ, ಒಂದು ಕೊಳಕ್ಕೆ ಕಲ್ಲೆಸೆದಾಗ, ಅದು ಬಿದ್ದ ಸ್ಥಳದಿಂದ ಆ ಕೊಳದ ಇಡೀ ಮೇಲ್ಮೈ ಅಲೆಗಳಿಂದಾವೃತವಾಗುವ ಚಿತ್ರದ ಕುರಿತೂ ಒಬ್ಬನು ಭಾವಿಸಬಹುದು. ವ್ಯತ್ಯಾಸವೇನಂದರೆ ಸೂರ್ಯನ ಅಲೆಗಳು ಪೂರ್ತಿ ಸೂರ್ಯನಲ್ಲಿ ಎಲ್ಲಾ ದಿಕ್ಕುಗಳಿಗೆ ಹೋಗುತ್ತವೆ.”
ಈ ಅದಿರಾಟಗಳು ವಿವಿಧ ಮಟ್ಟಗಳಲ್ಲಿ, ಕೆಲವು ಮೇಲ್ಮೈಯ ಕೆಳಗೆ, ಇನ್ನು ಕೆಲವು ಸೂರ್ಯನ ಆಳದಲ್ಲಿ ಆರಂಭವಾದಂತೆ ತೋರಿದವು. ಈ ಅಧ್ಯಯನಗಳಿಂದಾಗಿ ಸೂರ್ಯನು ಸುಮಾರು ಪ್ರತಿ ತಾಸಿಗೊಮ್ಮೆ ಉಸಿರಾಡುತ್ತಾನೋ ಎಂಬಂತೆ ತುಸು ವಿಕಾಸಗೊಂಡು ಬಳಿಕ ಸಂಕುಚಿತಗೊಳ್ಳುತ್ತದೆಂದು ತಿಳಿದುಬಂದಿದೆ. ಸೂರ್ಯನ ಈ ಚಲನೆಗಳನ್ನು ಒಬ್ಬ ಸಂಶೋಧಕನು 1975ರಲ್ಲಿ ಪ್ರಥಮ ನೋಡಿದನು. 1976ರಲ್ಲಿ ರಷ್ಯನ್ ವಿಜ್ಞಾನಿಗಳು ಸಹಾ ಸೂರ್ಯನ ಮೇಲ್ಮೈ ಉಬ್ಬಿ ಕುಗ್ಗುವದನ್ನು ವರದಿ ಮಾಡಿದರು.a ಈ ಕಂಪನ 1979-80ರಲ್ಲಿ, ಅಂಶಿಕವಾಗಿ, ಸಾಕ್ರಮೆಂಟೋ ಪೀಕ್ ಸಮೀಕ್ಷಾ ಮಂದಿರದಲ್ಲಿ ದೃಢೀಕರಿಸಲ್ಪಟ್ಟಿತು.
ಡಾ. ಡರ್ನಿ ಮುಂದುವರಿಸಿದ್ದು: “ವಾಸ್ತವವಾಗಿ, ಸೂರ್ಯನಲ್ಲಿ ಅನೇಕ ವಿಚಿತ್ರ ಚಲನೆಗಳಿವೆ. ಸೂರ್ಯನಲ್ಲಿ ಸರ್ವವೂ ಅನಿಲ ಸ್ವಭಾವದ್ದಾಗಿರುವುದರಿಂದ ಸೂರ್ಯನ ಮೇಲ್ಮೈಯ ಕೆಲವು ಭಾಗಗಳು ಇತರ ಭಾಗಗಳಿಗಿಂತ ಹೆಚ್ಚು ವೇಗವಾಗಿ ತಿರುಗುತ್ತವೆ. . . . ನಾವು ಈ ಸನ್ಸ್ಪಾಟ್ ಸಮೀಕ್ಷಾ ಮಂದಿರದಲ್ಲಿ ಮಾಡುತ್ತಿರುವಂತೆ, ಸೂರ್ಯನನ್ನು ಸದಾ ವೀಕ್ಷಿಸುತ್ತಿರುವ ಮೂಲಕ ಸೂರ್ಯನ ಒಳಭಾಗ ಹೇಗೆ ತಿರುಗುತ್ತದೆಂದು ನಿಶ್ಚಯಿಸಬಲ್ಲೆವು. . . . ಸೂರ್ಯನು ತನ್ನ ಸಮಭಾಜಕ ವೃತ್ತದಲ್ಲಿ ಹೆಚ್ಚು ವೇಗವಾಗಿ ತಿರುಗುವ ಕಾರಣ ಮೇಲ್ಮೈಯಲ್ಲಿ ಹೆಚ್ಚು ಕಲಬೆರಿಕೆ ಸಂಭವಿಸುತ್ತದೆ. ಮತ್ತು ಇದರಿಂದಾಗಿ ಅನೇಕ ವಿಚಿತ್ರ ಘಟನೆಗಳು ನಡೆಯುತ್ತವೆ. ಈ ವಿಚಿತ್ರ ಚಲನೆ ಸೂರ್ಯನೊಳಗೆ ಅತೀ ಆಳದಲ್ಲಿ ಕಾಂತಾಕರ್ಷಿತ ಕ್ಷೇತ್ರಗಳನ್ನು ಉಂಟುಮಾಡಿದಾಗ ಅವು ತೇಲಿಕೊಂಡು ಮೇಲ್ಮೈಗೆ ಬರುತ್ತವೆ. ಈ ಕಾಂತಾಕರ್ಷಿತ ಕ್ಷೇತ್ರಗಳ ಒಂದು ರೂಪವು ಸೂರ್ಯನಲ್ಲಿರುವ ಸೂರ್ಯ ಕಲೆಗಳು.”
ಸೂರ್ಯನನ್ನು ಹಗಲಿರುಳು ಪ್ರೇಕ್ಷಿಸುವುದು!
ಡಾ. ಡರ್ನಿ ವಿವರಿಸಿದ್ದು: “ಸೂರ್ಯನ ಮೇಲ್ಮೈಯಲ್ಲಿ ನಡೆಯುವ ಎಲ್ಲಾ ಚಟುವಟಿಕೆ ಮತ್ತು ಬದಲಾವಣೆಯನ್ನು ನೋಡಲಿಕ್ಕಾಗಿ ನಮಗೆ ಸದಾ ಸೂರ್ಯನನ್ನು ಗಮನಿಸುವ ಅಗತ್ಯವಿದೆ. ಭೂಮಿ ಪ್ರತಿದಿನ ತಿರುಗುವುದರಿಂದ ಭೂಮಿಯ ಮೇಲ್ಮೈಯ ಒಂದು ಸ್ಥಳದಿಂದ ಇದನ್ನು ನೋಡುವುದು ಅಸಾಧ್ಯ. ಅಂದರೆ ಭೂವ್ಯಾಪಕವಾಗಿ ಸೂರ್ಯ ಸಮೀಕ್ಷಾ ಮಂದಿರಗಳ ಅವಶ್ಯವಿದೆ ಎಂದರ್ಥ.”
ಸದ್ಯಕ್ಕೆ ಇದು ಅಸಾಧ್ಯ. ಆದರೆ ಡಾ. ಡರ್ನಿ, 1980-81ರಲ್ಲಿ, ಸ್ಯಾಕ್ರಮೆಂಟೋ ಪೀಕ್ನಿಂದ ಕೆಲವು ವಿಜ್ಞಾನಿಗಳು ದಕ್ಷಿಣ ಧ್ರುವಕ್ಕೆ ಸೂರ್ಯನನ್ನು ನೋಡಲು ಮೂರು ತಿಂಗಳುಗಳ ಅವಧಿಯ ಮೂರು ಬಾರಿ ಪ್ರಯಾಣ ಬೆಳೆಸಿದರೆಂದು ಹೇಳಿದರು. ದಕ್ಷಿಣ ಧ್ರುವದಲ್ಲಿ ಸೂರ್ಯನು ಸುಮಾರು ಮೂರು ತಿಂಗಳುಗಳ ತನಕ ಅಸ್ತಮಿಸುವುದಿಲ್ಲ. ಈ ಕಾರಣದಿಂದ ಒಂದು ದೂರದರ್ಶಕದಿಂದಲೇ ಸೂರ್ಯನನ್ನು ಹಗಲಿರುಳು ಗಮನಿಸಬಹುದು. ಈ ಮಾಹಿತಿಯನ್ನು ಪಡೆಯಲು ಭೂಮಿಯ ಇಷ್ಟೊಂದು ಸ್ಥಳಗಳು ಒಳಗೊಂಡಿವೆ ಎಂದು ತಿಳಿಯುವುದು ರಸಕರವಾಗಿತ್ತು. ಒಂದು ದಿನ ಸೂರ್ಯನ ಸಕಲ ಕಂಪನಗಳನ್ನು, ಸೂರ್ಯನೊಳಗೆ ಏನು ನಡೆಯುತ್ತದೆಂದು ತಿಳಿಯುವ ಸಲುವಾಗಿ ವರ್ಗೀಕರಿಸಲು ಸಮರ್ಥರಾಗುತ್ತಾರೆಂಬದು ವಿಜ್ಞಾನಿಗಳ ನಿರೀಕ್ಷೆ. ಇದನ್ನು ಮಾಡಲು ಸಮೀಕ್ಷಾ ಮಂದಿರಗಳ ಭೂವ್ಯಾಪಕ ವ್ಯೂಹವನ್ನು ನಡಿಸುವ ಪ್ರತೀಕ್ಷೆ ಸಂಶೋಧಕರಿಗಿದೆ.
ಸೂರ್ಯ ಜ್ವಾಲೆ ಮತ್ತು ಸೂರ್ಯ ಪ್ರಭಾವಲಯ
“ಇಲ್ಲಿ ಸ್ಯಾಕ್ರಮೆಂಟೋ ಪೀಕ್ನಲ್ಲಿ ಇನ್ನೇನು ಅಧ್ಯಯನ ನಡೆಯುತ್ತದೆ?” ಎಂಬ ನಮ್ಮ ಮುಂದಿನ ಪ್ರಶ್ನೆಗೆ ಉತ್ತರವಾಗಿ ಡಾ. ಡರ್ನಿ ಸೂರ್ಯ ಜ್ವಾಲೆಗಳ ಕುರಿತು ಹೇಳಿದರು. “ಈ ಭಯಂಕರ ಜ್ವಾಲೆಗಳು ಸೂರ್ಯನ ಮೇಲ್ಮೈಯಿಂದ ಮಿಲ್ಯಾಂತರ ಮೈಲು ಹೊರಕ್ಕೆ ಅಂತರಿಕ್ಷದಲ್ಲಿ ಹಾರುತ್ತವೆ. ಇದರಿಂದ ಹಾರಿಬರುವ ಕಣಗಳು ಭೂಮಿಯನ್ನು ತಲಪುವಾಗ ರೇಡಿಯೋ ಸಂಪರ್ಕಕ್ಕೆ ತಡೆ ತರುತ್ತವೆ. ಸೂರ್ಯನಿಂದ ಹೊರಡುವ ಸೂರ್ಯಗಾಳಿ ಎಂದು ಕರೆಯಲ್ಪಡುವ ಅವಿಚ್ಛಿನ್ನ ಕಣ ಪ್ರವಾಹವೂ ಇದೆ. ಇದು ಸೂರ್ಯನ ಮೇಲ್ಮೈಯ ಆವರ್ತನವನ್ನು ನಿಧಾನಿಸುವಾಗ ಇದು ಸರದಿಯಾಗಿ ಸೂರ್ಯನೊಳಗೆ ಆಳದಲ್ಲಿರುವ ಆವರ್ತನವನ್ನೂ ನಿಧಾನಿಸುತ್ತದೆ. ಇದರ ಪರಿಣಾಮವಾಗಿ, ಸೂರ್ಯನಿಗೆ ವಯಸ್ಸಾದಂತೆ ಅದು ನಿಧಾನ, ನಿಧಾನವಾಗಿ ತಿರುಗುತ್ತದೆ. ಮೇಲ್ಮೈ ನಿಂತಾಗ ಸೂರ್ಯನ ಒಳಭಾಗದ ಪ್ರತಿಕ್ರಿಯೆಯೇನು ಎಂಬದು ನಾವು ಅಧ್ಯಯನಿಸುವ ಒಂದು ವಿಷಯ.”
ಸಮೀಕ್ಷಾ ಮಂದಿರದಲ್ಲಿ ನಡೆಯುವ ಇನ್ನೊಂದು ಅಧ್ಯಯನದಲ್ಲಿ ದಿನಾಲೂ ಸೂರ್ಯ ಪ್ರಭಾವಲಯದ ಛಾಯಾಚಿತ್ರಗ್ರಹಣ ಒಳಗೊಂಡಿದೆ. ಪ್ರತಿದಿನ ಸೂರ್ಯನ ಸುತ್ತಲಿನ ಶಾಖದಲ್ಲಿ ಆಗುವ ಬದಲಾವಣೆಯನ್ನು ಈ ಚಿತ್ರಗಳು ತೋರಿಸುತ್ತವೆ. ಸೂರ್ಯನಿಂದ ಬರುವ ಉನ್ನತ ಶಾಖ ಎಷ್ಟು ದೂರ ಚಾಚುತ್ತದೆಂಬದರ ರೇಖಾಚಿತ್ರಗಳನ್ನು ತಯಾರಿಸಲಾಗುತ್ತದೆ. ಈ ರೇಖಾಚಿತ್ರಗಳು ದಿನಾಲೂ ಬದಲಾವಣೆಯಾಗುತ್ತವೆ ಮತ್ತು ಇದು ವ್ಯೋಮ ಯಾತ್ರಿಕರಿಗೆ ಲಾಭದಾಯಕ ಮಾಹಿತಿಯನ್ನು ಒದಗಿಸುತ್ತದೆ.
ಸೂರ್ಯನ ಅತಿ ಮುಖ್ಯ ಪಾತ್ರ
ಭೂಮಿಯಲ್ಲಿ ಜೀವ ಮುಂದುವರಿಯಬೇಕಾದರೆ ಸೂರ್ಯನಿಂದ ಬರುವ ಶಕ್ತಿ ಅಗತ್ಯ. ಅದು ನಮ್ಮ ಮೇಲೆ, ನಮ್ಮ ದೃಷ್ಟಿ, ಭೂಮಿಯ ಸಸ್ಯ ಮತ್ತು ಪ್ರಾಣಿಗಳ ಮೇಲೆ ಪರಿಣಾಮ ಬೀರುತ್ತದೆ. 1979ರಲ್ಲಿ ಪ್ರಕಟವಾದ ಒಂದು ಅಧ್ಯಯನ, ಪಶ್ಚಿಮ ಅಮೆರಿಕದಲ್ಲಿ ಬಂದ 22 ವರ್ಷಗಳ ಅನಾವೃಷ್ಟಿಯ ಚಕ್ರಕ್ಕೆ ಸುಮಾರು 22 ವರ್ಷಗಳ ಪೂರ್ತಿ ಸೂರ್ಯ ಕಲೆಯ ಚಕ್ರ ಯಾವುದೋ ವಿಧದಲ್ಲಿ ಸಂಬಂಧಿಸಿದೆಯೆಂದು ತೋರಿಸಿತು. ಸೂರ್ಯನ ಚಟುವಟಿಕೆ ಮತ್ತು ಹವಾಮಾನದ ಮೇಲೆ ಅದರ ಪರಿಣಾಮ ಸಾಧ್ಯತೆಯ ಕುರಿತಾದ ಆಸಕ್ತಿಗೆ ಒಂದು ಕಾರಣ ಇದೇ.
1950ಗಳಲ್ಲಿ, ಸ್ಯಾಕ್ರಮೆಂಟೋ ಪೀಕ್ ಆಬ್ಸರ್ವೆಟರಿಯು ಸೂರ್ಯನ ನಿರ್ದೇಶಾಂಕವನ್ನು ನಿರ್ಧರಿಸಲು ಸಹಾಯ ಮಾಡಿದ ಪ್ರಥಮ ಸಮೀಕ್ಷಾ ಮಂದಿರಗಳಲ್ಲಿ ಒಂದಾಗಿತ್ತು. ನಿರ್ದೇಶಾಂಕವೆಂದರೆ ಸೂರ್ಯನಿಂದ ಭೂಮಿಗಿರುವಷ್ಟು ದೂರದಲ್ಲಿ ಒಂದು ವಸ್ತುವನ್ನು ತಲುಪುವ ಶಕ್ತಿಯ ಯುನಿಟ್ಗಳ ಮೊತ್ತವೆಂದರ್ಥ. ಈ ಸೂರ್ಯ ನಿರ್ದೇಶಾಂಕದಲ್ಲಿ ಎಷ್ಟು ಹೆಚ್ಚು ವ್ಯತ್ಯಾಸಗಳುಂಟಾಗುವವೆಂಬದು ಹೆಚ್ಚು ಪ್ರಾಮುಖ್ಯವಾಗಿದ್ದೀತು!
ಸೂರ್ಯನ ಕಲೆಗಳು ಸೂರ್ಯನ ಲಕ್ಷಣಗಳಲ್ಲಿ ಹೆಚ್ಚು ಆಸಕ್ತಿಯದ್ದಾಗಿದ್ದು ಭೂಮಿಯಲ್ಲಿ ನಮ್ಮ ಮೇಲೆ ಪರಿಣಾಮ ಬೀರುತ್ತದೆ. ಸೂರ್ಯನ ಕಲೆಗಳನ್ನು ಮೊದಲು ಗಮನಿಸಿದವನು ಗ್ಯಾಲಿಲಿಯೊ. ಆ ಬಳಿಕ ಒಂದು ಸೂರ್ಯಕಲೆಯ ಕಾಲಚಕ್ರ 11 ವರ್ಷ ಅವಧಿಯದ್ದೆಂದೂ ಮತ್ತು ಒಂದು ಪೂರ್ಣ ಸೂರ್ಯಕಲೆಯ ಕಾಲಚಕ್ರದಲ್ಲಿ ಎರಡು 11 ವರ್ಷಗಳ ಸೂರ್ಯಕಲೆಯ ಚಟುವಟಿಕೆ ಇದೆಯೆಂದೂ ನಿರ್ಧರಿಸಲಾಯಿತು. ಡಾ. ಡರ್ನಿ ವಿವರಿಸಿದ್ದು: “ಈ ಸೂರ್ಯ ಕಲೆಗಳು ಕಾಂತಾಕರ್ಷಿತ ಕ್ಷೇತ್ರಗಳು. ಶಕ್ತಿಯನ್ನು ರವಾನಿಸುವ ಚಲನೆಗಳನ್ನು ಅವು ತಡೆಯುವದರಿಂದ ಅವು ಕಪ್ಪಾಗಿವೆ. ಸೂರ್ಯನ ಮೇಲ್ಮೈಯಲ್ಲಿ ಕಾಂತಾಕರ್ಷಿತ ಕ್ಷೇತ್ರಗಳ ನಾಶನದಿಂದಾಗಿ ಜ್ವಾಲೆಗಳುಂಟಾಗುತ್ತವೆಂದು ನೆನಸಲಾಗುತ್ತದೆ. ಅದು ಆಗ ದೊಡ್ಡ ಗಾತ್ರದಲ್ಲಿ ಶಕ್ತಿಯನ್ನು ಬಿಡುಗಡೆ ಮಾಡುವದರಿಂದ ರೇಡಿಯೋ ಅಲೆಗಳನ್ನು ಅವ್ಯವಸ್ಥೆಗೊಳಿಸಿ ಮತ್ತು ನಮ್ಮ ವಾತಾವರಣದ ಭಾಗಗಳನ್ನು ವಿದ್ಯುತ್ಪೂರಣ ಮಾಡಿ ನಮ್ಮನ್ನು ಬಾಧಿಸುತ್ತದೆ. ಈ ಶಕ್ತಿಯೇ ಉತ್ತರ ಭೂಕಾಂತ ಧ್ರುವ ಪ್ರಭೆ ಮತ್ತು ದಕ್ಷಿಣ ಭೂಕಾಂತ ಧ್ರುವ ಪ್ರಭೆಗಳೆಂದು ಅಥವಾ ಅರೋರಗಳೆಂದು ಕರೆಯಲ್ಪಡುವ ಮತ್ತು ಇತಿಹಾಸದಲ್ಲೆಲ್ಲಾ ಮಾನವ ಕುಲಕ್ಕೆ ಅದ್ಭುತವಾಗಿ ಕಂಡು ಬಂದಿರುವ ಪ್ರಭೆಗಳನ್ನು ಉಂಟುಮಾಡುತ್ತದೆ.”
ನಮ್ಮ ವಾತಾವರಣದಲ್ಲಿ ಸೂರ್ಯ ಕಲೆಯ ಚಟುವಟಿಕೆಯಿರುವಾಗ ಉಂಟಾಗಬಹುದಾದ ಭೂಕಾಂತಾಕರ್ಷಿತ ಚಂಡಮಾರುತವನ್ನು ಮುಂತಿಳಿಸಲು ಸೂರ್ಯ ಅಧ್ಯಯನಗಳು ಸಹಾಯ ನೀಡಬಹುದು. ಇವು ಲೋಕದ ವಾರ್ತಾ ಸಂಪರ್ಕದ ಮೇಲೆ ಮತ್ತು ಹೀಗೆ, ಉತ್ತಮ ರೇಡಿಯೋ ಸಂಪರ್ಕ ಬೇಕಾಗಿರುವ ವಿಮಾನ ಪ್ರಯಾಣದಂಥ ವಿಷಯಗಳ ಮೇಲೆ ಪರಿಣಾಮ ಬೀರುತ್ತವೆ. ಉಪಗೃಹಾಧರಿತ ವಾರ್ತಾ ರವಾನೆಗೆ ಹೆಚ್ಚು ಖರ್ಚು ತಗಲುವುದರಿಂದ ಹೆಚ್ಚಿನ ವಾರ್ತಾ ಸಂಪರ್ಕವನ್ನು ಇನ್ನೂ ಭೂಮಿಯಿಂದ ರೇಡಿಯೋ ಪ್ರಸಾರದ ಮೂಲಕ ಮಾಡಲಾಗುತ್ತದೆ. ಸೂರ್ಯಕಲೆಗಳು ಬಿಡುಗಡೆ ಮಾಡುವ ಶಕ್ತಿ, ಯಾವುದು ರೇಡಿಯೋ ಅಲೆಗಳನ್ನು ಭೂಮಿಗೆ ಹಿಂಪುಟಿಸುತ್ತದೋ ಆ ಭೂಮಿಯನ್ನಾವರಿಸಿರುವ ವಿದ್ಯುದ್ವಾಹಿ ಕಣಗಳ ಹೊರಾವರಣವನ್ನು ಅವ್ಯವಸ್ಥೆಗೊಳಿಸುತ್ತದೆ. ಆ ಹೊರಾವರಣ ಅಸಮರ್ಥವಾಗುವಾಗ ರೇಡಿಯೋ ಸಂದೇಶಗಳು ನಷ್ಟಹೊಂದುತ್ತವೆ.
ಸೂರ್ಯ ಪ್ರಕಾಶದ ಕುರಿತು ಇನ್ನೂ ಹೆಚ್ಚು ತಿಳಿಯುವದು ಅಗತ್ಯ. ನಮ್ಮ ಆಹಾರವನ್ನು ಉತ್ಪಾದಿಸುವ ಸಸ್ಯಗಳು ನಮ್ಮ ಆಹಾರದಲ್ಲಿರುವ ಶರ್ಕರಪಿಷ್ಟ ಮತ್ತು ಇತರ ರಸಾಯನಗಳನ್ನು ತಯಾರಿಸಲು ಸೂರ್ಯನ ಬೆಳಕಿನ ಮೇಲೆ ಹೊಂದಿಕೊಂಡಿವೆ. ಸೂರ್ಯ ಪ್ರಕಾಶದಿಂದುಂಟಾಗುವ ಪೆಟ್ರೋ ಕೆಮಿಕಲ್ ಪ್ರಕ್ರಿಯೆ ನಾವು ಬ್ಲ್ಯಾಕ್ ಆ್ಯಂಡ್ ವೈಟ್ ಮತ್ತು ಕಲರಿನ ಛಾಯಾಚಿತ್ರಗಳನ್ನು ತೆಗೆಯುವಂತೆ ಸಾಧ್ಯಮಾಡುತ್ತವೆ. ಈ ಕಾರಣದಿಂದ ನಮ್ಮ ಅತಿ ಸಮೀಪದ ನಕ್ಷತ್ರದ ವಿಷಯ ಸಾಧ್ಯವಿರುವದೆಲ್ಲವನ್ನು ಕಲಿಯುವದು ವಿವೇಕವೆಂದು ಆನೇಕರ ಅಭಿಪ್ರಾಯ.
ಸನ್ಸ್ಪಾಟಿಗೆ ನಮ್ಮ ಚುಟುಕಾದ ಭೇಟಿಯಿಂದ ಮತ್ತು ಪರಿಣಿತರೊಂದಿಗೆ ನಾವು ಮಾಡಿದ ಮಾತುಕತೆಯಿಂದ ನಮಗೆ ಕೇವಲ ಪರಿಮಿತ ಸೂರ್ಯ ಜ್ಞಾನವಿದೆಯೆಂದು ತಿಳಿದು ಬಂತು. ನಮ್ಮಲ್ಲಿ ಅನೇಕರು ಚಳಿಗಾಲದ ದಿನದ ಸೂರ್ಯನನ್ನು ಗಣ್ಯಮಾಡುತ್ತೇವೆ. ಉಷ್ಣದ ಬೇಸಗೆಯ ತಿಂಗಳುಗಳಲ್ಲಿ ಸೂರ್ಯ ಅಷ್ಟೊಂದು ಬಿಸಿಯಾಗಿರದಿದ್ದರೆ ಒಳ್ಳೇದಿತ್ತು ಎಂದು ನೆನಸುತ್ತೇವೆ, ಅಷ್ಟೇ. ಸೂರ್ಯನ ಯಾಂತ್ರಿಕ ಪಕ್ಷವನ್ನು ನೋಡಿ ನಾವು ಆನಂದಿಸಿದೆವು. ಮಾನವ ಸಂತತಿಯು ನಿಜವಾಗಿ ನಮ್ಮ ಪ್ರಯೋಜನಕಾರಿ ನಕ್ಷತ್ರವಾದ ಸೂರ್ಯನ ಆಶ್ಚರ್ಯವನ್ನು ಕೇವಲ ಗ್ರಹಿಸ ತೊಡಗಿದೆವಷ್ಟೇ ಎಂಬ ತೀರ್ಮಾನಕ್ಕೆ ನಾವೆಲ್ಲರೂ ಬರಬೇಕಾಯಿತು.—ದತ್ತ ಲೇಖನ (g90 3/8)
[ಅಧ್ಯಯನ ಪ್ರಶ್ನೆಗಳು]
a ಸೋವಿಯೆಟ್ ಯೂನಿಯನಿನ ಒದು ವಿಲಕ್ಷಣವಾದ ಸೋಲಾರ್ ರಿಸರ್ಚ್ ಏಜೆನ್ಸಿ ಪೂರ್ವ ಸೈಬೀರಿಯದ ಇರ್ಕ್ಟ್ಸ್ಕ್ನಲ್ಲಿದೆ. ಅವರಲ್ಲಿ ಲೋಕದ ಅತ್ಯಂತ ಬಲಾಢ್ಯ ರೇಡಿಯೋ ದೂರದರ್ಶಕವಿದೆ. ಅದರ 256 ವಾರ್ತಾಗ್ರಾಹಕಗಳು ಸೂರ್ಯನನ್ನು ಉದಯದಿಂದ ಅಸ್ತಮಾನದ ತನಕ ಏಕಕಾಲಿಕವಾಗಿ ಅನುಸರಿಸುತ್ತವೆ.
[Box on page ]
ಸೂರ್ಯ ಶಾಖಗಳ ಅರ್ಥವೇನು?
ಜಾನ್ ರುಬ್ಲೋಸ್ಕಿ ಅವರ ಲೈಫ್ ಎಂಡ್ ಡೆತ್ ಆಫ್ ದ ಸನ್ ಎಂಬ ಪುಸ್ತಕ 59 ಮತ್ತು 60ನೇ ಪುಟಗಳಲ್ಲಿ ಹೇಳುವುದು: “ಶಾಖ ಎಂಬದರ ಅರ್ಥಗಳನ್ನು ನಾವು ತಿಳಿಯಬೇಕು. ಇವುಗಳಲ್ಲಿ ಎರಡು ವಿಧಗಳಿವೆ. ಒಂದು ‘ಚಲನಾತ್ಮಕ (kinetic) ಶಾಖ’, ಇನ್ನೊಂದು ‘ಕಿರಣರೂಪದ (radiant) ಶಾಖ.’ ಚಲನಾತ್ಮಕ ಶಾಖವೆಂದರೆ ಒಂದು ಕಣದ ಸರಾಸರಿ ಅಣುಚಲನೆಯ ಅಳತೆ. ಈ ಚಲನೆ ಎಷ್ಟು ಹೆಚ್ಚು ವೇಗವಾಗುತ್ತದೋ ಅಷ್ಟು ಹೆಚ್ಚು ಶಾಖ. ಸೂರ್ಯ ವಾತಾವರಣದ ಶಾಖಗಳ ಕುರಿತು ನಾವು ಮಾತಾಡುವಾಗ ನಾವು ಚಲನಾತ್ಮಕ ಶಾಖಗಳ ಕುರಿತು ಮಾತಾಡುತ್ತೇವೆ. ಅಂದರೆ ಪ್ರಕಾಶಾವರಣದಿಂದ ನಾವು ಸೂರ್ಯನ ವಾತಾವರಣದಲ್ಲಿ ಮೇಲೇರಿದಷ್ಟಕ್ಕೆ ಕಣಗಳ ಸರಾಸರಿ ಚಲನಾ ವೇಗಗಳು ಹೆಚ್ಚಾಗುತ್ತವೆ. ಈ ಕಣಗಳಲ್ಲಿರುವ ಶಾಖವು ಮಿಲ್ಯಾಂತರ ಡಿಗ್ರಿಗಳಾಗಿರುವುದಾದರೂ ಅದು ನಿಮ್ಮ ಚರ್ಮವನ್ನು ಸುಡಲಾರದು.
“ಆದರೆ ಕಿರಣರೂಪದ ಶಾಖ ಒಂದು ಪದಾರ್ಥ ಹೊರಡಿಸುವ ವಿಕಿರಣದ ಮೊತ್ತ ಮತ್ತು ಗುಣಮಟ್ಟದ ಅಳತೆ. ಸೂರ್ಯನೊಳಗೆ ಆಳದಲ್ಲಿರುವ ಶಾಖದ ಕುರಿತು ನಾವು ಮಾತಾಡುವಾಗ ನಾವು ಶಬ್ದಾರ್ಥದಲ್ಲಿ ಮಾತಾಡುತ್ತೇವೆ. ಒಂದು ಜ್ವಾಲೆಯ ಶಾಖ ಸಹ ಕಿರಣರೂಪದ ಶಾಖವಾಗಿದೆ.
“ಆದರೆ ಸೂರ್ಯ ವಾತಾವರಣದ ಸಂಬಂಧದಲ್ಲಿ, ಈ ಕಿರಣರೂಪದ ಶಾಖದ ಕುರಿತು ನಾವು ಮಾತಾಡ ಸಾಧ್ಯವಿಲ್ಲ. ಪ್ರಭಾವಲಯದ ಶಾಖ ಕಿರಣರೂಪದಲ್ಲಿ 10 ಲಕ್ಷ ಡಿಗ್ರಿ (ಸೆಲ್ಸಿಯಸ್) ಆಗಿರುವುದಾದರೆ ಸೂರ್ಯನ ವಾತಾವರಣ ಎಷ್ಟು ಪ್ರಜಲ್ವಿತವಾಗಿರುವುದೆಂದರೆ ನಾವು ಪ್ರಕಾಶಾವರಣವನ್ನೇ ನೋಡ ಸಾಧ್ಯವಿರುವುದಿಲ್ಲ. ವಾಸ್ತವವೇನಂದರೆ, ವಿಷಯ ಹೀಗಿರುವಲ್ಲಿ ಸೂರ್ಯ ವಾತಾವರಣ ಎಷ್ಟು ವಿಕಿರಣಗಳನ್ನು ಹೊರಪಡಿಸಬಹುದೆಂದರೆ ಸೂರ್ಯನಿಂದ ಅತಿ ದೂರದಲ್ಲಿರುವ ಪ್ಲೂಟೋ ಗ್ರಹವು ಸಹಾ ಉಗ್ರ ಕಾವಿನಿಂದಾಗಿ ಹಬೆಯಾಗಿ ಹೋಗುವುದು. ಸೂರ್ಯ ವಾತಾವರಣದ ಶಾಖ ಕಿರಣರೂಪದ್ದಾಗಿರದೆ ಚಲನಾತ್ಮಕವಾಗಿರುವುದು ನಮ್ಮ ಹಿತಕ್ಕಾಗಿದೆ.
“ಅಂದರೆ ಸೂರ್ಯ ವಾತಾವರಣ ವಿಕಿರಣವನ್ನೇ ಹೊರಡಿಸುವದಿಲ್ಲವೆಂದು ಇದರ ಅರ್ಥವಲ್ಲ. ಇದು ಹೇರಳವಾಗಿ ವಿಕಿರಣವನ್ನು ಹೊರಡಿಸುವುದು ಮಾತ್ರವಲ್ಲ, ಒಂದು ವಿಪರೀತ ರೀತಿಯ ವಿಕಿರಣವನ್ನು ಹೊರಡಿಸುತ್ತದೆ. ಪ್ರಭಾವಲಯದ ಅತ್ಯುನ್ನತ ಭಾಗಗಳು ಕ್ಷ-ಕಿರಣಗಳನ್ನು ಹಾಗೂ ಸ್ವಲ್ಪ ದೃಶ್ಯ ಬೆಳಕನ್ನೂ ಹೊರಡಿಸುವಾಗ ಕೆಳಭಾಗಗಳು ನೀಲಲೋಹಿತಾತೀತ (ultra-violet) ಬೆಳಕನ್ನು ಹೊರಡಿಸುತ್ತವೆ. ಈ ವಿಕಿರಣ ಭೂಮಿಗೆ ಅತಿ ಪ್ರಾಮುಖ್ಯ, ಏಕೆಂದರೆ ಭೂವಾತಾವರಣದ ವಿವಿಧ ಪದರುಗಳನ್ನು ಅದು ಉಂಟುಮಾಡುತ್ತದೆ.”
[ಪುಟ 24 ರಲ್ಲಿರುವ ಚೌಕ/ಚಿತ್ರಗಳು]
ಸೂರ್ಯ—ಭೂಮಿಯ ನಕ್ಷತ್ರ
ಸೂರ್ಯನು ನಮ್ಮ ಭೂಮಿಗೆ ಜೀವಪೋಷಕ ಶಾಕ ಮತ್ತು ಬೆಳಕನ್ನು ಒದಗಿಸುವ ಒಂದು ಅಗಾಧ ಕುಲುಮೆ. ಪ್ರಧಾನವಾಗಿ ಜಲಜನಕ ಅನಿಲವಿರುವ ಈ ಭಾರಿ ಚೆಂಡು ಎಷ್ಟು ದೊಡ್ಡದಾಗಿದೆಯೆಂದರೆ ಅದು 10 ಲಕ್ಷಕ್ಕೂ ಹೆಚ್ಚು ಭೂಗ್ರಹಗಳನ್ನು ಹಿಡಿಸಬಲ್ಲದು! ಆದರೂ, ನಕ್ಷತ್ರಗಳ ಮಟ್ಟಿಗೆ ಅದು ಅತ್ಯಂತ ದೊಡ್ಡವುಗಳಲ್ಲಿ ಒಂದಲ್ಲ. ವಿಜ್ಞಾನಿಗಳು ಕಂಡು ಹಿಡಿಯುತ್ತಿರುವಂತೆ, ಈ ಶಕ್ತಿಯ ಉಗಮವು ಸೂಕ್ಷ್ಮ ಗುಣಗಳು ತುಂಬಿದ್ದಾಗಿದೆ. ಉದಾಹರಣೆಗೆ, “ದೃಶ್ಯ ಬೆಳಕಿನಲ್ಲಿ ಅಧಿಕಾಂಶ, 100 ಕಿಲೊಮೀಟರ್ [60 ಮೈಲು] ದಪ್ಪದ ಪ್ರಕಾಶಾವರಣದ ಕ್ಷೇತ್ರದೊಳಗಿಂದ ಹೊರಡುತ್ತದೆ.” ಆದರೂ ಸೂರ್ಯನ ತ್ರಿಜ್ಯ 4,32,651 ಮೈಲುಗಳೆಂದು ಎಣಿಸಲಾಗಿದೆ.—ದ ಸನ್, ಇಯನ್ ನಿಕೊಲ್ಸನ್ ಅವರಿಂದ.
ಸೂರ್ಯನ ರಚನೆ
ಗರ್ಭ—ಸೂರ್ಯನ ಮಧ್ಯಭಾಗದಲ್ಲಿ ಅತ್ಯಂತ ಹೆಚ್ಚು ಶಾಖವಿರುವ ನ್ಯೂಕ್ಲಿಯರ್ “ಸುಡು” ವಲಯ.
ವಿಕಿರಣವಾಗುವ ವಲಯ—ಗರ್ಭದಿಂದ ಶಕ್ತಿ ಈ ವಲಯದಲ್ಲಿ ವಿಕಿರಣದ ಮೂಲಕ ಗ್ಯಾಮ ರಶ್ಮಿಗಳಾಗಿ ಮತ್ತು ಕ್ಷ-ಕಿರಣಗಳಾಗಿ ರವಾನಿಸಲ್ಪಡುತ್ತವೆ.
ಸಂವಹನ ವಲಯ—ವಿಕಿರಣವಾಗುವ ವಲಯದಿಂದ ಶಕ್ತಿಯು ಶಾಖ ಪ್ರಚಲನದಿಂದ ಹೆಚ್ಚು ತಣ್ಣಗಾಗಿರುವ ವಲಯ.
ಪ್ರಕಾಶಾವರಣ—ಕಾರ್ಯಥಃ ಸೂರ್ಯನ ಬೆಳಕೆಲ್ಲ ಸೂರ್ಯನ ಈ ಮೇಲ್ಮೈ ಪ್ರದೇಶದಿಂದ ಹೊರಬರುತ್ತದೆ. ಇದು ಸ್ವಲ್ಪಮಟ್ಟಿಗೆ ಪಾರದರ್ಶಕವಾಗಿದ್ದು “ಇದನ್ನು ಕೆಲವು ನೂರು ಕಿಲೊಮೀಟರು ಆಳದ ತನಕ ಪ್ರೇಕ್ಷಿಸಬಹುದು.” (ದ ಸನ್) ಇಲ್ಲಿಯ ಶಾಖ ಸುಮಾರು 10,000 ಡಿಗ್ರಿ ಫ್ಯಾರನ್ಹೈಟ್.
ವರ್ಣಮಂಡಲ—ಪೂರ್ತಿ ಸೂರ್ಯಗ್ರಹಣದ ಸಮಯದಲ್ಲಿ ಮಾತ್ರ ಕಾಣಿಸುತ್ತದೆ. ಇದು ಕೆಲವು ಸಾವಿರ ಮೈಲು ದಪ್ಪವಿರುವ ತೆಳು ಅನಿಲ ಪದರು. ಇದು ಪ್ರಕಾಶಾವರಣಕ್ಕಿಂತ ಹೆಚ್ಚು ಬಿಸಿ. ಸುಮಾರು 18,000 ಡಿಗ್ರಿ ಫ್ಯಾರನ್ಹೈಟ್.
ಪ್ರಭಾವಲಯ—ಪೂರ್ತಿ ಸೂರ್ಯ ಗ್ರಹಣದ ಸಮಯದಲ್ಲಿ ಮಾತ್ರ ಕಾಣುತ್ತದೆ. ಇದು ಬಹುದೂರ ವ್ಯಾಪಿಸಿ ಅತಿ ಹೆಚ್ಚು ಶಾಖವುಳ್ಳದ್ದಾಗಿದ್ದು ಗರಿ ಮತ್ತು ಬಾವುಟಗಳಂತೆ ಕಂಡುಬರುತ್ತದೆ.
[ಪುಟ 25ರಲ್ಲಿರುವಚಿತ್ರ]
(For fully formatted text, see publication)
ವರ್ಣಮಂಡಲ
ಪ್ರಕಾಶಾವರಣ
ಸಂವಹನ ವಲಯ
[ಕೃಪೆ]
From a sketch by National Optical Astronomy Observatories
[ಪುಟ 25ರಲ್ಲಿರುವಚಿತ್ರ]
(For fully formatted text, see publication)
ಸೂರ್ಯನ ತೇಜೋಮಯ ಅನಿಲ ಮೋಡ ಸೂರ್ಯ ಕಲೆಗಳು ದರ್ಪಣಗಳು (ನೆಲದಿಂದ 136 ಅಡಿ ಎತ್ತರ)
ನೆಲಮಟ್ಟ
ನಿರ್ವಾತ ಟ್ಯೂಬುಗಳು ತಿರುಗುತ್ತವೆ (250 ಟನ್ನು)
193 ಅಡಿ
221 ಅಡಿ ನೆಲದೊಳಗೆ
[ಕೃಪೆ]
From a sketch by National Optical Astronomy Observatories
[ಪುಟ 26 ರಲ್ಲಿರುವಚಿತ್ರ]
ಗರ್ಭ
[ಕೃಪೆ]
Holiday Films
[ಪುಟ 26 ರಲ್ಲಿರುವಚಿತ್ರ]
ವಿಕಿರಣವಾಗುವ ವಲಯ
[ಕೃಪೆ]
National Optical Astronomy Observations