ಬಂದೂಕುಗಳು ಅವು ಇಲ್ಲದ ಜಗತ್ತು
ಮಾನವ ಇತಿಹಾಸದ ಆರಂಭದಿಂದಲೇ ಮನುಷ್ಯನು ಜೊತೆ ಮಾನವನೊಂದಿಗೆ ವ್ಯವಹರಿಸುವಾಗ ಹಿಂಸಾ ಕೃತ್ಯಗಳಿಗೆ ತೊಡಗಿದನು. ಕಾಯಿನನು ತಮ್ಮ ಹೇಬೇಲನನ್ನು ಕೊಂದಾಗ ಪ್ರಥಮ ಕುಟುಂಬದಲ್ಲಿ ಕೊಲೆ ಉದ್ಭವಿಸಿತು. ಅಂದಿನಿಂದ ಕುಟುಂಬ, ಗೋತ್ರ ಮತ್ತು ರಾಷ್ಟ್ರಗಳ ಮಧ್ಯೆ ಸಂಹಾರಗಳು ಮಂದುವರಿಯುತ್ತಾ ಬಂದಿವೆ. ಆಯುಧಗಳು ಹೆಚ್ಚು ಬಲಾಢ್ಯವಾದಂತೆ ಇದಕ್ಕೆ ಬಲಿಬಿದ್ದವರ ಸಂಖ್ಯೆಯೂ ಹೆಚ್ಚಾಯಿತು. ಕಲ್ಲು, ದೊಣ್ಣೆಗಳು ಈಟಿ ಮತ್ತು ಬಾಣಗಳಿಗೆ, ಮತ್ತು ಇವುಗಳು ಬಂದೂಕು ಮತ್ತು ಬಾಂಬುಗಳಿಗೆ ಸ್ಥಳ ಮಾಡಿಕೊಟ್ಟವು. ನೂರಾರು ಜನರ ನಾಶನ ಸಾವಿರಾರು ಆಗಿ ಪರಿಣಮಿಸಿತು ಮತ್ತು ಇಂದು ಅವು ಲಕ್ಷಾಂತರಗಳಾಗಿವೆ. ಇದು ಯುದ್ಧದ ಸಮಯದಲ್ಲಿ ಮಾತ್ರವಲ್ಲ, ಶಾಂತಿಯ ಸಮಯದಲ್ಲೂ. ಇದು ಸೈನಿಕರಿಂದ ಮಾತ್ರವಲ್ಲ, ಖಾಸಗಿ ಪೌರರಿಂದಲೂ. ವಯಸ್ಕರಿಂದ ಮಾತ್ರವಲ್ಲ, ಮಕ್ಕಳಿಂದಲೂ. ಈ ಹಿಂಸಾತ್ಮಕ ಕೃತ್ಯಗಳ ಏರಿಕೆ ಎಂದಾದರೂ ಅಂತ್ಯಗೊಂಡಿತೇ? ಇದು ಜನರ ಮೇಲೆ ಹೊಂದಿಕೊಂಡಿರುವುದಾದರೂ ಭವಿಷ್ಯತ್ತು ಅಪ್ರಸನ್ನವೇ ಸರಿ.—2 ತಿಮೊಥಿ 3:1-5, 13.
ಕ್ರಿಸ್ತ ಯೇಸು, ಇದು ಜನಾಂಗ, ಜನಾಂಗಗಳು ಭಯಂಕರ ಯುದ್ಧದಲ್ಲಿ ತೊಡಗಿ ಕೋಟ್ಯಾಂತರ ಜೀವಗಳನ್ನು ನಷ್ಟ ಮಾಡುವ ಸಮಯವೆಂದು ಮುಂತಿಳಿಸಿದನು. ಸೋಂಕು ರೋಗ ಮತ್ತು ಭೂಕಂಪಗಳು ಅನೇಕ ಸ್ಥಳಗಳಲ್ಲಿ ದೊಡ್ಡ ಸಂಖ್ಯೆಯಲ್ಲಿ ಜೀವನಷ್ಟ ಮಾಡುವವು. ಮನುಷ್ಯನು ಭೂಮಿಯನ್ನು ಎಷ್ಟು ಮಲಿನಗೊಳಿಸುವವನೆಂದರೆ ಜೀವ ಪೋಷಿಸಲು ಅದಕ್ಕಿರುವ ಸಾಮರ್ಥ್ಯವೇ ಅಪಾಯಕ್ಕೊಳಗಾಗುವುದು. ಅನೇಕ ವಿಜ್ಞಾನಿಗಳು ಈಗ ಈ ಭಯವನ್ನೇ ವ್ಯಕ್ತ ಪಡಿಸುತ್ತಾರೆ. ಆದರೆ ಮನುಷ್ಯನ ಹಣದಾಸೆ, ಅವನು ಈ ಮಲಿನಗೊಳಿಸುವ ವರ್ತನೆಯಲ್ಲಿ ಮುನ್ನುಗ್ಗುವಂತೆ ಮಾಡುತ್ತದೆ. ಮತ್ತು ಇದು ಯೆಹೋವ ದೇವರು “ಭೂನಾಶಕರನ್ನು ನಾಶ ಮಾಡುವಾಗ” ಮಾತ್ರ ಅಂತ್ಯಗೊಳ್ಳುವುದು.—ಪ್ರಕಟನೆ 11:18.
ಅನೇಕರು ಇಂಥ ಎಚ್ಚರಿಕೆಯ ಸಂಬಂಧದಲ್ಲಿ ಕುಚೋದ್ಯ ಮಾಡುವಾಗ ಅಂತ್ಯದಿನಗಳಿಗಾಗಿ ಮುಂತಿಳಿಸಲ್ಪಟ್ಟ ಸೂಚನೆಯ ಇನ್ನೊಂದು ಭಾಗವನ್ನು ನೆರವೇರಿಸುತ್ತಾರೆ: “ಕಡೇ ದಿನಗಳಲ್ಲಿ ತಮ್ಮ ದುರಾಶೆಗಳ ಪ್ರಕಾರ ನಡೆಯುವ ಕುಚೋದ್ಯಗಾರರು ಬಂದು ಕುಚೋದ್ಯ ಮಾಡುತ್ತಾ—ಆತನ ಪ್ರತ್ಯಕ್ಷತೆಯ ವಿಷಯವಾದ ವಾಗ್ದಾನವು ಏನಾಯಿತು? ನಮ್ಮ ಪಿತೃಗಳು ನಿದ್ರೆ ಹೊಂದಿದ ದಿನದಿಂದ ಮೊದಲುಗೊಂಡು ಸಮಸ್ತವೂ ಲೋಕಾದಿಯಿಂದ ಇದ್ದ ಹಾಗೆಯೇ ಇರುತ್ತದಲ್ಲಾ ಎಂದು ಹೇಳುವರು.”—2 ಪೇತ್ರ 3:3, 4.
ಆದರೆ ಮಾನವ ಸಂತತಿಯ ಮೇಲೆ ಸುಳಿದಾಡುವ ಈ ಕಪ್ಪು ಮೋಡದಲ್ಲಿ ರಜತ ರೇಖೆಯೊಂದಿದೆ. ತನ್ನ ಸಾನಿಧ್ಯದಲ್ಲಿ, “ಭೂಮಿಯ ಮೇಲೆ ಸಮುದ್ರದ ಮತ್ತು ತೆರೆಗಳ ಘೋಷದ ನಿಮಿತ್ತವಾಗಿ ಜನಗಳಿಗೆ ದಿಕ್ಕು ಕಾಣದೆ ಸಂಕಟ ಉಂಟಾಗುವದು. ಆಕಾಶದ ಶಕ್ತಿಗಳು ಕದಲುವದರಿಂದ ಮನುಷ್ಯರು ಭಯಹಿಡಿದವರಾಗಿ ಲೋಕಕ್ಕೆ ಏನು ಬರುವುದೋ ಎಂದು ಎದುರು ನೋಡುತ್ತಾ ಪ್ರಾಣ ಹೋದಂತಾಗುವರು,” ಎಂದು ಯೇಸು ಮುಂತಿಳಿಸಿದನು. ಅದು “ಮೇಲಕ್ಕೆ ನೋಡುವ, ತಲೆ ಎತ್ತುವ ಮತ್ತು ಬಿಡುಗಡೆ ಸಮೀಪವಾಗಿರುವ” ಸಮಯವೂ ಆಗಿದೆ ಎಂದು ಅವನು ಹೇಳಿದನು.—ಲೂಕ 21:25-28.
ರಾಷ್ಟ್ರಗಳು ಸಂಕಟ ಪಡುತ್ತಿವೆ. ಜನತೆ ಗೊಂದಲದಲ್ಲಿ ಬಿದ್ದಿದೆ. ಭೂಮಿಯ ಮೇಲೆ ಬರಲಿರುವ ಸಂಗತಿಯಿಂದ ವ್ಯಕ್ತಿಗಳು ಭಯಭೀತರಾಗಿದ್ದಾರೆ. ಆದರೆ ಇದು ದೇವರ ರಾಜ್ಯದ ಬರೋಣ ಮತ್ತು ಕ್ರಿಸ್ತ ಯೇಸುವಿನ ಸಹಸ್ರ ವರ್ಷದಾಳಿಕೆಗೆ ಕಾದು ನಿಂತಿರುವವರಿಗೆ ವಿಮೋಚನೆಯ ಸಮಯವೂ ಆಗಿದೆ. ಅದು ಯೆಹೋವ ದೇವರ ವಾಗ್ದಾನವಾದ ‘ನೀತಿ ವಾಸಿಸುವ ನೂತನಾಕಾಶ ಮತ್ತು ನೂತನ ಭೂಮಿ’ಯ ನೆರವೇರಿಕೆಯ ಸಮಯವಾಗಿರುವುದು.—2 ಪೇತ್ರ 3:13.
ಮತ್ತು ಬಂದೂಕುಗಳಿಲ್ಲ! ಯುದ್ಧಕ್ಕೆ ಅದರ ಅವಶ್ಯವಿರದು. “ಲೋಕದ ಎಲ್ಲಾ ಭಾಗದಲ್ಲೂ ಯುದ್ಧವನ್ನು ನಿಲ್ಲಿಸಿಬಿಟ್ಟಿದ್ದಾನೆ: ಬಿಲ್ಲುಗಳನ್ನೂ ಭಲ್ಲೆಯಗಳನ್ನೂ ಮುರಿದು ಹಾಕಿದ್ದಾನೆ. ರಥ [ಯುದ್ಧ ರಥ, ರಾಥರೆಮ್]ಗಳನ್ನು ದಹಿಸಿ ಬಿಟ್ಟಿದ್ದಾನೆ.”—ಕೀರ್ತನೆ 46:9.
ಸ್ವಂತ ರಕ್ಷಣೆಗೂ ಅವುಗಳ ಅವಶ್ಯವಿರದು. “ಒಬ್ಬೊಬ್ಬನು ತನ್ನ ತನ್ನ ದ್ರಾಕ್ಷಾಲತೆ, ಅಂಜೂರಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು. ಅವರನ್ನು ಯಾರೂ ಹೆದರಿಸರು. ಸೇನಾಧೀಶ್ವರನಾದ ಯೆಹೋವನ ಬಾಯೇ ಇದನ್ನು ನುಡಿದದೆ.”—ಮೀಕ 4:4.
ಪ್ರಾಮಾಣಿಕರು ಮಾತ್ರ ಅಲ್ಲಿರುವರು, ದುಷ್ಟರಿಲ್ಲ. “ಯಥಾರ್ಥವಂತರು ದೇಶದಲ್ಲಿ ಸ್ವತಂತ್ರರಾಗಿರುವರು. ನಿರ್ದೋಷಿಗಳು ಅದರಲ್ಲಿ ನೆಲೆಯಾಗಿರುವರು. ದುಷ್ಟರಾದರೋ ದೇಶದೊಳಗಿಂದ ಕೀಳಲ್ಪಡುವರು. ದ್ರೋಹಿಗಳು ನಿರ್ಮೂಲರಾಗುವರು.” (ಜ್ಞಾನೋಕ್ತಿ 2:21, 22) ಆಗ, “ದೀನರು ದೇಶವನ್ನು ಅನುಭವಿಸುವರು, ಅವರು ಮಹಾ ಸೌಖ್ಯದಿಂದ ಆನಂದಿಸುವರು.”—ಕೀರ್ತನೆ 37:11.
ದೇವರ ದೃಷ್ಟಿಯಲ್ಲಿ ಬಲಾತ್ಕಾರ ಭೂಮಿಯನ್ನು ಹಾಳು ಮಾಡುತ್ತದೆ. ನೋಹನ ದಿನಗಳಲ್ಲಿ, “ಭೂಲೋಕದವರು ದೇವರ ದೃಷ್ಟಿಗೆ ಕೆಟ್ಟು ಹೋಗಿದ್ದರು. ಅನ್ಯಾಯವು ಲೋಕವನ್ನು ತುಂಬಿಕೊಂಡಿತ್ತು.” (ಆದಿಕಾಂಡ 6:11-13) ಆದಕಾರಣ ಭೂವ್ಯಾಪಕ ಜಲಪ್ರಲಯದ ಮೂಲಕ ಯೆಹೋವನು ಆ ಜಗತ್ತನ್ನು ಅಂತ್ಯಗೊಳಿಸಿದನು. ಯೇಸು, ತನ್ನ ಸಾನಿಧ್ಯದ ಸಮಯದಲ್ಲಿರುವ ಬಲಾತ್ಕಾರದ ಲೋಕದ ಅಂತ್ಯವನ್ನು ಆ ಪುರಾತನ ಲೋಕದ ಅಂತ್ಯಕ್ಕೆ ಹೋಲಿಸಿದನು: “ಜಲಪ್ರಲಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆ ಮಾಡಿಕೊಳ್ಳುತ್ತಾ ಮದುವೆ ಮಾಡಿಕೊಡುತ್ತಾ ಇದ್ದು ಜಲಪ್ರಲಯದ ನೀರು ಬಂದು ಎಲ್ಲರನ್ನು ಬುಡುಕೊಂಡು ಹೋಗುವ ತನಕ ಏನೂ ತಿಳಿಯದೆ ಇದ್ದರಲ್ಲಾ. ಅದರಂತೆ ಮನುಷ್ಯ ಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲೂ ಇರುವುದು.”—ಮತ್ತಾಯ 24:38, 39.
ದೇವರ ನೂತನ ಜಗತ್ತಿನಲ್ಲಿ ವಾಸಿಸುವ ಸಕಲರೂ, “ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು” ಎಂಬ ಮಾರ್ಕ 12:31ರ ಮಾತುಗಳನ್ನು ನೆರವೇರಿಸುವರು. ಮತ್ತು ಯೆಶಾಯ 11:9 ಹೇಳುವುದು: “ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ. ಯಾರೂ ಹಾಳು ಮಾಡುವದಿಲ್ಲ. ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.” ನೀತಿಯ ನೂತನ ಲೋಕದಲ್ಲಿ ಪ್ರಕಟನೆ 21:1, 4ರಲ್ಲಿ ವರ್ಣಿಸಿರುವ ಮಹಿಮಾಭರಿತ ಪರಿಸ್ಥಿತಿಗಳೂ ನೆರವೇರುವವು: “ತರುವಾಯ ನೂತನಾಕಾಶ ಮಂಡಲವನ್ನೂ ನೂತನ ಭೂಮಂಡಲವನ್ನೂ ಕಂಡೆನು. ಮೊದಲಿದ್ದ ಆಕಾಶ ಮಂಡಲವೂ ಮೊದಲಿದ್ದ ಭೂಮಂಡಲವೂ ಇಲ್ಲದೆ ಹೋದವು. ಇನ್ನು ಸಮುದ್ರವೂ ಇಲ್ಲ. [ಆತನು] ಅವರ ಕಣ್ಣೀರನ್ನೆಲ್ಲಾ ಒರಸಿ ಬಿಡುವನು. ಇನ್ನು ಮರಣವಿರುವುದಿಲ್ಲ. ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವುದಿಲ್ಲ. ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು.” ಹಾಗಾದರೆ, ಬಂದೂಕುಗಳಿಂದ ತುಂಬಿದ ಮಾನವ ಸಮಾಜಗಳೂ ಅಲ್ಲಿಲ್ಲವೆಂಬದು ನಿಶ್ಚಯ!
ಮಾನವಾಶೀರ್ವಾದಕ್ಕಾಗಿರುವ ಈ ಪರಿಣಾಮಕಾರಿ ಬದಲಾವಣೆಗಳನ್ನು ಯಾವುದೂ, ಕ್ರಾಂತಿಕಾರರು ವಿರೋಧಿಗಳನ್ನು ಧಗಧಗಿಸುವ ಬಂದೂಕುಗಳಿಂದ ನೆಲಸಮ ಮಾಡುವುದರ ಮೂಲಕ ಬಾರದು. ಇದಕ್ಕೆ ಬದಲು, ಕ್ರಿಸ್ತ ಯೇಸುವಿನ ಅಧಿಕಾರದಲ್ಲಿರುವ ಯೆಹೋವ ದೇವರ ರಾಜ್ಯದ ಮೂಲಕ ಇದು ಬರುವುದು. ಯೆಶಾಯ 9:6, 7 ಹೇಳುವುದು: “ಒಂದು ಮಗುವು ನಮಗಾಗಿ ಹುಟ್ಟಿದೆಯಷ್ಟೆ, ವರದ ಮಗನು ನಮಗೆ ದೊರೆತನು; ಆಡಳಿತವು ಆತನ ಬಾಹುವಿನ ಮೇಲಿರುವದು. ಅದ್ಭುತ ಸ್ವರೂಪನು, ಆಲೋಚನಾ ಕರ್ತನು, ಪರಾಕ್ರಮಿಯಾದ ದೇವರು, ನಿತ್ಯನಾದ ತಂದೆ, ಸಮಾಧಾನದ ಪ್ರಭು ಎಂಬವು ಅವನ ಹೆಸರು. ಆವನ ಮುಖಾಂತರ ದಾವೀದನ ಸಿಂಹಾಸನದ ಆಡಳಿತವು ಅಭಿವೃದ್ಧಿಯಾಗುವದು. ದಾವೀದನ ರಾಜ್ಯದಲ್ಲಿ ನಿತ್ಯ ಸಮಾಧಾನವಿರುವದು. ಆ ರಾಜ್ಯವು ಇಂದಿನಿಂದ ಯಾವಾಗಲೂ ನೀತಿ ನ್ಯಾಯಗಳಿಂದ ಸ್ಥಾಪಿತವಾಗಿ ಸ್ಥಿರಗೊಳ್ಳುವದು. ಸೇನಾಧೀಶ್ವರನಾದ ಯೆಹೋವನ ಆಗ್ರಹವು ಇದನ್ನು ನೆರವೇರಿಸುವದು.” (g90 5/22)