ಬೈಬಲಿನ ದೃಷ್ಟಿಕೋನ
ವಿಜ್ಞಾನವು ಬೈಬಲನ್ನು ಹಳತಾಗಿ ಮಾಡಿದೆಯೆ?
ವಿಶ್ವದ ಪ್ರೌಢ ತಿಳುವಳಿಕೆಯಿರುವ ವಿಜ್ಞಾನವು ಬೈಬಲನ್ನು ಪುರಾಣ ಮತ್ತು ಕಟ್ಟುಕಥೆಗಳ ಕಂತೆಯಾಗಿ ಮಾಡಿದೆಯೆ? ಇಂದು ಅನೇಕರು ಹಾಗೆ ಯೋಚಿಸುತ್ತಾರೆ. ನೀವೊ?
ಪ್ರಾಯಶಃ, ಇತರ ಅನೇಕರಂತೆ, ಚಿಕ್ಕಂದಿನಿಂದ ನಿಮಗೂ ಹಾಗೆಯೆ ನಂಬಲು ಕಲಿಸಲ್ಪಟ್ಟಿದ್ದಿರಬಹುದು ಮತ್ತು ನೀವು ಆ ವಿಚಾರವನ್ನು ಇದುವರೆಗೆ ಸಂದೇಹಿಸಿರಲಿಕ್ಕಿಲ್ಲ. ಅದನ್ನು ಪ್ರಶ್ನೆಗೊಳಪಡಿಸಿರಿ ಎಂದು ನಾವೀಗ ನಿಮ್ಮನ್ನು ಆಮಂತ್ರಿಸುತ್ತೇವೆ. ಒಂದು ದೃಷ್ಟಾಂತವನ್ನು, ಬೈಬಲು ಪ್ರಾಕೃತಿಕ ವಿಶ್ವದ ಕುರಿತು ಮಾಡಿರುವ ಒಂದು ಹೇಳಿಕೆಯನ್ನು ಪರ್ಯಾಲೋಚಿಸಿರಿ. ಈ ಹೇಳಿಕೆ, ಅಂದು ಪರಿಣತರು ಹೇಳುತ್ತಿದ್ದುದಕ್ಕೆ ತೀರಾ ವ್ಯತ್ಯಸ್ತವಾಗಿದ್ದುದು ಮಾತ್ರವಲ್ಲ ಸಹಸ್ರಾರು ವರ್ಷಗಳ ಮೇಲೆ ವಿಜ್ಞಾನಿಗಳು ಹೇಳಿದುದನ್ನೂ ವಿರೋಧಿಸಿತು.
ಗುರುತ್ವಾಕರ್ಷಣದ ಸಂಗತಿ
ಭೂಮಿ ಯಾವುದರ ಮೇಲೆ ನಿಂತದೆ? ಚಂದ್ರ, ಸೂರ್ಯ ಮತ್ತು ನಕ್ಷತ್ರಗಳನ್ನು ಯಾವುದು ಎತ್ತಿ ಹಿಡಿಯುತ್ತದೆ? ಈ ಪ್ರಶ್ನೆಗಳು ಸಹಸ್ರಾರು ವರ್ಷಗಳಿಂದ ಮಾನವರ ಕುತೂಹಲವನ್ನು ಕೆರಳಿಸಿವೆ. ಆದರೆ ಭೂಮಿಯ ಸಂಬಂಧದಲ್ಲಿ ಬೈಬಲಿನಲ್ಲಿ ಸರಳ ಉತ್ತರವಿದೆ. ಯೋಬ 26:7ರಲ್ಲಿ, ದೇವರು “ಭೂಲೋಕವನ್ನು ಯಾವ ಆಧಾರವೂ ಇಲ್ಲದೆ (ಶೂನ್ಯ, NW) ತೂಗಹಾಕಿದ್ದಾನೆ” ಎಂದು ಹೇಳುತ್ತದೆ. ಮೂಲ ಹಿಬ್ರು ಭಾಷೆಯಲ್ಲಿ “ಶೂನ್ಯ” (ಬೆಲಿಮಾ) ಎಂದು ಇಲ್ಲಿ ಉಪಯೋಗಿಸಲಾಗಿರುವ ಪದಕ್ಕೆ “ಯಾವುದೂ ಇಲ್ಲ” ಎಂಬ ಅಕ್ಷರಾರ್ಥವಿದೆ. ಮತ್ತು ಬೈಬಲಿನಲ್ಲಿ ಇದು ಇಲ್ಲಿ ಒಮ್ಮೆ ಮಾತ್ರ ಬರುತ್ತದೆ. ಬರಿದಾದ ಅಂತರಿಕ್ಷದಲ್ಲಿರುವ ಭೂಮಿಯ ಈ ಚಿತ್ರವು, ವಿಶೇಷವಾಗಿ ಅದು ಬರೆಯಲ್ಲಟ್ಟ ಸಮಯದ ದೃಷ್ಟಿಯಲ್ಲಿ, “ಗಮನಾರ್ಹವಾದ ದರ್ಶನ” ವೆಂದು ಪಂಡಿತರು ಒಪ್ಪುತ್ತಾರೆ.a
ಆ ದಿನಗಳಲ್ಲಿ ಅಧಿಕಾಂಶ ಜನರು ವಿಶ್ವವನ್ನು ಈ ದೃಷ್ಟಿಯಲ್ಲಿ ನೋಡಿರಲೇ ಇಲ್ಲ. ಒಂದು ದೈತ್ಯಾಕಾರದ ಆಮೆಯ ಬೆನ್ನಿನ ಮೇಲೆ ನಿಂತಿರುವ ಆನೆಗಳು ಭೂಮಿಯನ್ನು ಹೊತ್ತಿವೆ ಎಂಬುದು ಪುರಾತನ ಕಾಲದ ಒಂದು ಅಭಿಪ್ರಾಯವಾಗಿತ್ತು.
ಪ್ರಸಿದ್ಧ ಗ್ರೀಕ್ ತತ್ವಜ್ಞಾನಿ ಮತ್ತು ಸಾ.ಶ.ಪೂ. ನಾಲ್ಕನೆಯ ಶತಮಾನದ ವಿಜ್ಞಾನಿಯಾಗಿದ್ದ ಅರಿಸಾಟ್ಟಲ್, ಭೂಮಿ ಬರಿದಾದ ಆಕಾಶದಿಂದ ತೂಗುವುದು ಅಸಾಧ್ಯವೆಂದು ಕಲಿಸಿದನು. ಇದಕ್ಕೆ ಬದಲು, ಪ್ರತಿಯೊಂದು ಆಕಾಶಸ್ಥ ಕಾಯವು ಘನಸ್ಥಿತಿಯ ಪಾರದರ್ಶಕ ಗೋಳಕೋಶಕ್ಕೆ ನಾಟಿಸಲ್ಪಟ್ಟಿದೆ ಎಂದು ಅವನು ಕಲಿಸಿದನು. ಒಂದು ಗೋಳಕೋಶದೊಳಗೆ ಇನ್ನೊಂದು ಗೋಳಕೋಶವಿದೆ. ತೀರಾ ಒಳಗಿರುವುದು ಭೂಮಿ; ಅತ್ಯಂತ ಹೊರಗಿನ ಗೋಳಕೋಶದಲ್ಲಿ ನಕ್ಷತ್ರಗಳಿವೆ. ಒಂದು ಗೋಳಕೋಶ ಇನ್ನೊಂದರೊಳಗೆ ತಿರುಗಲಾಗಿ ಅವುಗಳೊಳಗಿರುವ ಸೂರ್ಯ, ಚಂದ್ರ ಮತ್ತು ಗ್ರಹಗಳು ಆಕಾಶದಲ್ಲಿ ಚಲಿಸತೊಡಗಿದವು.
ಭೂಮಿ ‘ಶೂನ್ಯದಲ್ಲಿ ತೂಗುತ್ತದೆ’ ಎಂಬ ಬೈಬಲಿನ ಹೇಳಿಕೆಯನ್ನು ಅರಿಸಾಟ್ಟಲನಿಗಿಂತ 1,100ಕ್ಕೂ ಹೆಚ್ಚು ವರುಷಗಳಿಗೆ ಮೊದಲು ಮಾಡಲಾಗಿತ್ತು. ಆದರೂ ಅರಿಸಾಟ್ಟಲನನ್ನು ಅವನ ದಿನಗಳ ಸುಪ್ರಸಿದ್ಧ ಜ್ಞಾನಿ ಎಂದೆಣಿಸಲಾಗುತ್ತಿತ್ತು. ಅವನ ಮರಣಾನಂತರ ಸುಮಾರು 2,000 ವರ್ಷಗಳ ಮೇಲೆಯೂ ಅವನ ಬೋಧನೆ ವಾಸ್ತವವೆಂದು ಕಲಿಸಲ್ಪಡುತ್ತಿತ್ತು! ದ ನ್ಯೂ ಎನ್ಸೈಕ್ಲೊಪೀಡಿಯ ಬ್ರಿಟ್ಯಾನಿಕ ಹೇಳುವಂತೆ, ಸಾ.ಶ. 16 ಮತ್ತು 17ನೇ ಶತಕಗಳಲ್ಲಿ ಅರಿಸಾಟ್ಟಲನ ಬೋಧನೆಗಳು ಚರ್ಚಿನ ದೃಷ್ಟಿಯಲ್ಲಿ “ಮತತತ್ವದ ಸ್ಥಾನಕ್ಕೇರಿದವು.”
ಹದಿನಾರನೆಯ ಶತಮಾನದ ತತ್ವಜ್ಞಾನಿ ಜೋರ್ಡಾನೊ ಬ್ರೂನೊ, ನಕ್ಷತ್ರಗಳು “ಒಂದೇ ಗುಮ್ಮಟದಲ್ಲಿ ನಾಟಿಸಲ್ಪಟ್ಟಿರುವಂತಿವೆ” ಎಂಬ ಈ ಕಲ್ಪನೆಯನ್ನು ಸ್ಪರ್ಧಿಸಲು ಧೈರ್ಯಮಾಡಿದನು. “[ನಕ್ಷತ್ರಗಳು] ಅಕಾಶದ ಮೇಲ್ಮೈಗೆ ಒಳ್ಳೆಯ ಅಂಟಿನಿಂದ ಅಂಟಿಸಲ್ಲಡದಿದ್ದರೆ ಯಾ ಅತಿ ದಪ್ಪದ ಮೊಳೆಗಳಿಂದ ಜಡಿಯಲ್ಲಡದ್ದಿದರೆ ಅವು ಆಲಿಕಲ್ಲಿನಂತೆ ನಮ್ಮ ಮೇಲೆ ಬೀಳುವುವು ಎನ್ನುವುದು ಹಾಸ್ಯಾಸ್ಪದ ವಿಚಾರ” ವೆಂದು ಅವನು ಬರೆದನು. ಆದರೆ ಅಂದು ಅರಿಸಾಟ್ಟಲನ ಅಭಿಪ್ರಾಯಕ್ಕೆ ಅಸಮ್ಮತಿ ತೋರಿಸುವುದು ಅಪಾಯಕಾರಿ ಆಟವಾಗಿತ್ತು. ವಿಶ್ವವನ್ನು ಕುರಿತ ಅವನ ಅಸಾಂಪ್ರದಾಯಿಕ ವಿಚಾರವನ್ನು ಹಬ್ಬಿಸಿದುದಕ್ಕಾಗಿ ಚರ್ಚು ಅವನನ್ನು ಬೆಂಕಿಯಲ್ಲಿ ಸುಡಿಸಿತು.
ವಿಶ್ವ ಸಾರಿನಲ್ಲಿ
ದೂರದರ್ಶಕ ಯಂತ್ರ ಕಂಡುಹಿಡಿಯಲ್ಲಟ್ಟ ಬಳಿಕ, ಖಗೋಲಜ್ಞರು ಹೆಚ್ಚುವ ಸಂಖ್ಯೆಯಲ್ಲಿ ಅರಿಸಾಟ್ಟಲನ ಈ ವಿಚಾರವನ್ನು ಪ್ರಶ್ನಿಸತೊಡಗಿದರು. ಸೂರ್ಯ, ಚಂದ್ರ, ನಕ್ಷತ್ರಗಳು ಭೂಮಿಯ ಸುತ್ತ ತಿರುಗುವ ಗೋಳಕೋಶಕ್ಕೆ ನಾಟಿಸಲ್ಪಡದಿದ್ದರೆ ಅವುಗಳನ್ನು ಎತ್ತಿ ಹಿಡಿದು ತಿರುಗಿಸುವುದಾದರೂ ಯಾವುದು? ಹದಿನೇಳನೆಯ ಶತಮಾನದ ಗಣಿತಜ್ಞ ರೆನೆ ಡೇಕಾರ್ಟ್ ಉತ್ತರ ತನ್ನಲ್ಲಿದೆಯೆಂದು ನೆನಸಿದನು. ನಮ್ಮ ಮತ್ತು ಇತರ ಆಕಾಶಸ್ಥ ಕಾಯಗಳ ಮಧ್ಯೆ ಇರುವ ಅಂತರಿಕ್ಷ ಬರಿದಾಗಿರಲು ಸಾಧ್ಯವಿಲ್ಲವೆಂದು ಅವನು ಅರಿಸಾಟ್ಟಲನ ಅಭಿಪ್ರಾಯವನ್ನು ಒಪ್ಪಿದನು. ವಿಶ್ವವು ಒಂದು ಪಾರದರ್ಶಕ ದ್ರವ—ಒಂದು ರೀತಿಯ ಕಾಸ್ಮಿಕ್ ಸಾರಿನಿಂದ ತುಂಬಿದೆ ಎಂದು ಅವನು ತರ್ಕಿಸಿದನು.
ಈ ಊಹೆ, ಎರಡು ಸಮಸ್ಯೆಗಳನ್ನು ಬಗೆಹರಿಸುವಂತೆ ಕಂಡಿತು. ಪ್ರಥಮವಾಗಿ, ಆಕಾಶಸ್ಥ ಕಾಯಗಳನ್ನು ‘ಎತ್ತಿ ಹಿಡಿಯಲು’ ಒಂದು ವಸ್ತುವನ್ನು ಇದು ಒದಗಿಸಿತು; ಅವು ಸಾರಿನಲ್ಲಿ ತೂಗಹಾಕಲ್ಪಟ್ಟಿದ್ದವು! ಎರಡನೆಯದಾಗಿ, ಗ್ರಹಗಳ ಚಲನೆಯನ್ನು ವಿವರಿಸುವಂತೆ ಇದು ಸಹಾಯ ನೀಡಿತು. ಗ್ರಹಗಳು ದ್ರವದಲ್ಲಿರುವ ಸುಳಿ ಯಾ ಆವರ್ತದ ಹಿಡಿತದಲ್ಲಿ ಸಿಕ್ಕಿಕೊಂಡಿರುವುದರಿಂದ ಅವು ತಮ್ಮ ಕಕ್ಷೆಯಲ್ಲಿ ತಿರುಗುತ್ತವೆ. ಈ “ಸುಳಿ ವಾದ” ವೆಂದು ಕರೆಯಲ್ಪಟ್ಟ ವಾದವು ನಮಗೆ ಇಂದು ಕಾಲ್ಪನಿಕವಾಗಿ ಕಂಡುಬಂದೀತು. ಆದರೆ, ಕೆಲವು ದೇಶಗಳಲ್ಲಿ ಒಂದು ಶತಮಾನಕ್ಕೂ ಹೆಚ್ಚು ಕಾಲ ಇದು ವಿಶ್ವದ ಅಧ್ಯಯನದಲ್ಲಿ ಪ್ರಧಾನ ವಾದವಾಗಿತ್ತು.
ಅನೇಕ ವಿಜ್ಞಾನಿಗಳು, 1687ರಲ್ಲಿ ಪ್ರಕಟವಾದ ಐಸಕ್ ನ್ಯೂಟನರ ವಿಶ್ವ ಗುರುತ್ವಾಕರ್ಷಣ ನಿಯಮಕ್ಕಿಂತ ಹೆಚ್ಚು ಇದನ್ನು ಇಷ್ಟಪಟ್ಟರು. ಗ್ರಹಗಳನ್ನು ಎತ್ತಿ ಹಿಡಿಯಲು ಯಾಂತ್ರಿಕವಾದ, ಸ್ಪರ್ಶ್ಯ ವಸ್ತು ಯಾ ವಿಷಯಗಳು ಅಗತ್ಯವಿಲ್ಲವೆಂಬುದು ನ್ಯೂಟನರ ಸಮರ್ಥನೆಯಾಗಿತ್ತು. ಅವುಗಳನ್ನು ಕಕ್ಷೆಯಲ್ಲಿ ಬಿಗಿಹಿಡಿದು ಅವುಗಳ ಚಲನೆಯನ್ನು ನಿಯಂತ್ರಿಸುವುದು ಗುರುತ್ವಾಕರ್ಷಣ ಶಕ್ತಿ. ಕಾರ್ಯತಃ, ಅವು ಬರಿದಾದ ಆಕಾಶದಲ್ಲಿ ಶೂನ್ಯದ ಮೇಲೆ ತೂಗಹಾಕಲ್ಪಟ್ಟಿವೆ. ನ್ಯೂಟನರ ಅನೇಕ ಸಂಗಾತಿಗಳು ಈ ಗುರುತ್ವಾಕರ್ಷಣದ ವಾದವನ್ನು ಧಿಕ್ಕರಿಸಿದರು. ಮತ್ತು ಅಂತರಿಕ್ಷ ಶೂನ್ಯವೆಂದೂ ಅಧಿಕಾಂಶ ವಸ್ತುರಹಿತವಾಗಿದೆಯೆಂದೂ ನಂಬಲು ನ್ಯೂಟನರಿಗೆನೇ ಕಷ್ಟವಾಯಿತು.
ಆದರೂ ಕ್ರಮೇಣ ನ್ಯೂಟನರ ವಾದಕ್ಕೆ ಜಯ ದೊರಕಿತು. ಗೃಹಗಳನ್ನು ಎತ್ತಿ ಹಿಡಿದಿರುವುದು ಯಾವುದು ಎಂಬ ಈ ಪ್ರಶ್ನೆ, ಬೈಬಲು ಲಲಿತವಾದ ಸರಳತೆಯಲ್ಲಿ ಭೂಮಿಯು ‘ಶೂನ್ಯದ ಮೇಲೆ ತೂಗಹಾಕಲ್ಪಟ್ಟಿದೆ’ ಎಂದು ಹೇಳಿ ಸುಮಾರು 32 ಶತಕಗಳು ದಾಟಿದ ಮೇಲೆ ಪಾಂಡಿತ್ಯ ಪಡೆದಿದ್ದ ತೇಜಸ್ವಿಗಳಾದ ವಿಜ್ಞಾನಿಗಳ ಮಧ್ಯೆ ಬಿಸುಪಿನ ವಿವಾದಕ್ಕೆ ನಡಿಸಿತ್ತೆಂಬುದನ್ನು ಮರೆತು ಬಿಡುವುದು ನಮಗೆ ಸುಲಭ. ಆದರೆ ವಿಷಯವನ್ನು ಆ ಪದಗಳಲ್ಲಿ ಹೇಳಲು ಯೋಬನಿಗೆ ಹೇಗೆ ತಿಳಿದಿರಸಾಧ್ಯವಿತ್ತು? ಸರಿಯಾದ ತೀರ್ಮಾನಕ್ಕೆ ಬರಲು “ಪರಿಣತರಿಗೆ” 3,000ಕ್ಕೂ ಹೆಚ್ಚು ವರ್ಷ ತಗಲಿರುವಾಗ ಭೂಮಿಯನ್ನು ಯಾವುದೂ ಎತ್ತಿ ಹಿಡಿದಿರುವುದಿಲ್ಲವೆಂದು ಯೋಬನು ಏಕೆ ಹೇಳಸಾಧ್ಯವಾಯಿತು?
ಬೈಬಲು ಅದರ ಸಮಯಕ್ಕಿಂತ ಅಷ್ಟು ಮುಂದೆ ಏಕೆ?
ಬೈಬಲು ಇದಕ್ಕೆ ನ್ಯಾಯಸಮ್ಮತವಾದ ಉತ್ತರವನ್ನು ಕೊಡುತ್ತದೆ. 2 ತಿಮೊಥಿ 3:16 (NW)ರಲ್ಲಿ, “ಶಾಸ್ತ್ರವೆಲ್ಲ ದೇವಪ್ರೇರಿತ”ವೆಂದು ನಾವು ಓದುತ್ತೇವೆ. ಹೀಗೆ, ಬೈಬಲು ಮಾನವ ವಿವೇಕದ ಉತ್ಪನ್ನವಲ್ಲ; ಅದು ನಮಗೆ ದೇವರ ಯೋಚನೆಗಳ ನಿಷ್ಕೃಷ್ಟ ರವಾನೆಯಾಗಿದೆ.
ಬೈಬಲಿನ ಈ ವಾದ ಸತ್ಯವೊ ಎಂದು ನೀವೇ ಕಂಡುಹಿಡಿಯಬೇಕಾಗಿರುವುದು ಮಹಾ ಪ್ರಾಮುಖ್ಯ ಸಂಗತಿ. (1 ಥೆಸಲೊನೀಕ 2:13) ಈ ವಿಧದಲ್ಲಿ, ನಮ್ಮನ್ನು ರಚಿಸಿ ಸೃಷ್ಟಿಸಿದ ವ್ಯಕ್ತಿಯ ಯೋಚನೆಗಳಿಗೆ ನಿಮಗೆ ಪ್ರವೇಶ ದೊರೆಯಬಲ್ಲದು. ಭವಿಷ್ಯತ್ತಿನಲ್ಲಿ ಏನಿದೆ, ಮತ್ತು ಈ ಉಪದ್ರವಕ್ಕೊಳಗಾಗಿರುವ ಜಗತ್ತಿನಲ್ಲಿ ನಾವು ಸಂತೋಷದ, ಉತ್ಪನ್ನಕಾರಕ ಜೀವನವನ್ನು ಹೇಗೆ ನಡೆಸಬಲ್ಲೆವು ಎಂಬುದನ್ನು ತಿಳಿಸಲು ಇನ್ನಾವ ಹೆಚ್ಚು ಉತ್ತಮ ಮೂಲವಿರಬಲ್ಲದು? (g90 8/8)
[ಅಧ್ಯಯನ ಪ್ರಶ್ನೆಗಳು]
a ಥಿಯೊಲಾಜಿಕಲ್ ವರ್ಡ್ಬುಕ್ ಆಫ್ ದಿ ಓಲ್ಡ್ ಟೆಸ್ಟಮೆಂಟ್ ಹೇಳುವುದು:“ಯೋಬ 26:7, ಆಗ ತಿಳಿಯಲ್ಪಟ್ಟಿದ್ದ ಜಗತ್ತು ಅಂತರಿಕ್ಷದಲ್ಲಿ ತೇಲುತ್ತದೆಂದು ಗಮನಾರ್ಹವಾಗಿ ಚಿತ್ರಿಸಿ, ಹೀಗೆ, ಭಾವೀ ವೈಜ್ಞಾನಿಕ ಕಂಡುಹಿಡಿತವನ್ನು ಮುಂಭಾವಿಸಿತು.”
[ಪುಟ 14 ರಲ್ಲಿರುವ ಚಿತ್ರ ಕೃಪೆ]
By permission of the British Library