ಉತ್ತರಿಸಬೇಕಾದ ಪ್ರಶ್ನೆಗಳು
ನಿಮ್ಮ ಜೀವನದ ಸಮಯಾವಧಿಯೊಂದರಲ್ಲಿ, ನೀವು ಒಂದು ವೇಳೆ ಹೀಗೆ ಪ್ರಶ್ನಿಸಿದ್ದಿರಬಹುದು: ‘ದೇವರು ಅಸ್ತಿತ್ವದಲ್ಲಿರುವದಾದರೆ, ಅವನು ಇಷ್ಟೊಂದು ನರಳಾಟವನ್ನು ಯಾಕೆ ಅನುಮತಿಸಿದ್ದಾನೆ? ಮತ್ತು ಮಾನವ ಇತಿಹಾಸದಲ್ಲೆಲ್ಲಾ ಇಷ್ಟೊಂದು ದೀರ್ಘ ಸಮಯದ ತನಕ ಅದನ್ನೇಕೆ ಅನುಮತಿಸಿದ್ದಾನೆ? ನರಳಾಟವು ಎಂದಾದರೂ ಅಂತ್ಯಗೊಳ್ಳಲಿರುವದೋ?’
ಅಂಥಹ ಪ್ರಶ್ನೆಗಳಿಗೆ ತೃಪ್ತಿದಾಯಕ ಉತ್ತರಗಳು ದೊರಕದೇ ಇದುದ್ದರಿಂದ, ಹೆಚ್ಚಿನವರು ಕಹಿ ಮನೋಭಾವದವರಾಗಿದ್ದಾರೆ. ಕೆಲವರು ದೇವರ ಮೇಲಿನ ನಂಬಿಕೆಯಿಂದ ಹಿಂತೆರಳಿದ್ದಾರೆ, ಅಥವಾ ಅವರ ದುರಂತಗಳಿಗಾಗಿ ಅವನನ್ನು ದೂರುತ್ತಾರೆ.
ಉದಾಹರಣೆಗೆ, ಎರಡನೆಯ ಮಹಾ ಯುದ್ಧದಲ್ಲಿ, ನಾಜೀಯವರಿಂದ ಲಕ್ಷಗಟ್ಟಲೆ ಜನರ ಕೊಲೆ, ಪೂರ್ಣಾಹುತಿಯಿಂದ ಪಾರಾದವರಲ್ಲೊಬ್ಬನು ಎಷ್ಟು ಕಹಿ ಮನೋಭಾವದವನಾಗಿದ್ದನೆಂದರೆ, ಅವನಂದದ್ದು: “ನೀವು ನನ್ನ ಹೃದಯವನ್ನು ನೆಕ್ಕುವುದಾದಲ್ಲಿ, ಅದು ನಿಮ್ಮನ್ನು ವಿಷಗೊಳಿಸಬಹುದು.” ಒಂದನೆಯ ಲೋಕಯುದ್ಧದಲ್ಲಿ ತನ್ನ ಮಿತ್ರರ ಮತ್ತು ಕುಟುಂಬ ಸದಸ್ಯರ ಮರಣಕ್ಕೆ ಕಾರಣವಾಗಿದ್ದ ಕುಲವರ್ಣೀಯ ಹಿಂಸಾಚಾರದಲ್ಲಿ ನರಳಿದ ಇನ್ನೊಬ್ಬ ಮನುಷ್ಯನು ಕಟುವಾಗಿ ಹೀಗೆ ಪ್ರಶ್ನಿಸಿದ್ದು: “ನಮಗೆ ಅವನ ಆವಶ್ಯಕತೆ ಇದ್ದಾಗ ದೇವರು ಎಲ್ಲಿದ್ದನು?”
ಹೀಗೆ, ಅಧಿಕಾಂಶ ಜನರು ಗಲಿಬಿಲಿಗೊಂಡಿದ್ದಾರೆ. ಇಷ್ಟೊಂದು ದೀರ್ಘ ಕಾಲದ ತನಕ ಕೆಟ್ಟ ವಿಷಯಗಳು ಸಂಭವಿಸುವಂತೆ, ಒಳ್ಳೇತನ ಮತ್ತು ಪ್ರೀತಿಯ ಒಬ್ಬ ದೇವರು ಅನುಮತಿಸುವದು ಅಸಮಂಜಸವೆಂದು ಅವರ ದೃಷ್ಟಿಕೋನದಿಂದ ತೋರುತ್ತದೆ.
ಜನರು ಏನನ್ನು ಮಾಡಿದ್ದಾರೆ
ಶತಮಾನಗಳಿಂದ—ವಾಸ್ತವದಲ್ಲಿ ಸಾವಿರಾರು ವರ್ಷಗಳಿಂದ, ಜನರು ಇತರರ ವಿರುದ್ಧ ಮಹಾ ಗಾತ್ರದ ದುಷ್ಕಾರ್ಯಗಳನ್ನು ನಡಿಸಿರುತ್ತಾರೆ ಎಂಬದು ಖಂಡಿತವಾಗಿಯೂ ಸತ್ಯವಾಗಿದೆ. ಇವೆಲ್ಲವುಗಳ ಪರಿಮಾಣ ಮತ್ತು ಘೋರತೆಯು ಊಹನೆಯನ್ನು ದಂಗುಬಡಿಸುತ್ತದೆ.
ನಾಗರೀಕತೆಯು ಅಭಿವೃದ್ಧಿಗೊಳ್ಳುತ್ತಾ ಇದೆ ಎಂದು ಹೇಳಿಕೊಳ್ಳುತ್ತಿರುವಾಗ, ಇತರರನ್ನು ನಾಶಗೊಳಿಸುವ ಇಲ್ಲವೆ ಅಂಗಹೀನಗೊಳಿಸುವ ಘನಘೋರ ಸಾಧನಗಳನ್ನು ಇನ್ನಷ್ಟು ರಚಿಸಿದರು: ಫಿರಂಗಿಗಳು, ಮೆಷಿನ್ ಗನ್ಗಳು, ಯುದ್ಧವಿಮಾನಗಳು, ಫಿರಂಗಿರಥಯಂತ್ರಗಳು [ಟ್ಯಾಂಕ್ಸ್], ಕ್ಷಿಪಣಿಗಳು, ಅಗ್ನಿಎಸೆತಗಳು, ರಾಸಾಯನಿಕ ಮತ್ತು ಪರಮಾಣು ಶಸ್ತ್ರಗಳು. ಇದರ ಪರಿಣಾಮವಾಗಿ, ಈ ಶತಮಾನವೊಂದರಲ್ಲಿಯೇ, ರಾಷ್ಟ್ರಗಳ ಯುದ್ಧಗಳು ಸುಮಾರು ಹತ್ತು ಕೋಟಿಯಷ್ಟು ಜನರನ್ನು ಕೊಂದಿವೆ! ಇತರ ರೀತಿಗಳಲ್ಲಿ ನೂರಾರು ಕೋಟಿ ಜನರು ಬಾಧಿಸಲ್ಪಟ್ಟಿದ್ದಾರೆ ಇಲ್ಲವೇ ಘಾಸಿಗೊಂಡಿರುತ್ತಾರೆ. ಮನೆ ಮತ್ತು ಸ್ವತ್ತುಗಳಂಥ ಆಸ್ತಿಪಾಸ್ತಿಗಳ ನಾಶನದ ಮೊತ್ತವು, ಎಣಿಕೆಯನ್ನು ಮೀರಿದೆ.
ಯುದ್ಧದಿಂದ ಉಂಟಾಗಿರುವ ಅಪರಿಮಿತ ದುಃಖ, ಸಂಕಟ ಮತ್ತು ಕಣ್ಣೀರುಗಳ ಕುರಿತಾಗಿ ಯೋಚಿಸಿರಿ! ಪ್ರಾಯಸ್ಥ ಗಂಡಸರು ಮತ್ತು ಹೆಂಗಸರು, ಮಕ್ಕಳು, ಹಸುಕೂಸುಗಳಂಥಹ ನಿರ್ದೋಷಿ ಜನರು ಹೆಚ್ಚಾಗಿ ನರಳಿರುತ್ತಾರೆ. ಮತ್ತೂ ಹೆಚ್ಚಾಗಿ, ದುಷ್ಕಾರ್ಯಗಳನ್ನು ನಡಿಸಿದ ಅನೇಕರನ್ನು ಲೆಕ್ಕ ಒಪ್ಪಿಸುವಂತೆ ಮಾಡಲಿಲ್ಲ.
ಲೋಕವ್ಯಾಪಕವಾಗಿ, ಈ ಗಳಿಗೆಯಲ್ಲಿಯೂ ನರಳಾಟವು ಮುಂದುವರಿಯುತ್ತಾ ಇದೆ. ಪ್ರತಿದಿನ, ಜನರನ್ನು ಹತಿಸಲಾಗುತ್ತಿದೆ ಇಲ್ಲವೆ ದುಷ್ಕೃತ್ಯಗಳ ಆಹುತಿಯನ್ನಾಗಿ ಮಾಡಲಾಗುತ್ತಿದೆ. ಬಿರುಗಾಳಿಗಳು, ನೆರೆಗಳು ಮತ್ತು ಭೂಕಂಪಗಳಂಥಹ ‘ಪ್ರಕೃತಿಯ ವಿಕೋಪ’ಗಳ ಸಹಿತ, ಅಪಘಾತದಲ್ಲಿ ಅವರು ಗಾಯಗೊಳ್ಳುತ್ತಾರೆ ಇಲ್ಲವೇ ಸಾಯುತ್ತಾರೆ. ಅವರು ಅನ್ಯಾಯ, ಪಕ್ಷಪಾತ, ಬಡತನ, ಹಸಿವೆ ಅಥವಾ ರೋಗಗಳು ಅಥವಾ ಇನ್ನಿತರ ಅಸಂಖ್ಯಾತ ವಿಧಗಳಿಂದ ನರಳುತ್ತಾರೆ.
ಶತಮಾನ, ಶತಮಾನಗಳಿಂದ ಎಡೆಬಿಡದೆ ಆಗಾಗ್ಯೆ ಭಯಂಕರವಾಗಿ ಬಾಧಿಸಲ್ಪಟ್ಟಿರುವ ಒಂದು ವಿಷಯವನ್ನು—ಮಾನವಕುಲವನ್ನು—ಒಬ್ಬ ಒಳ್ಳೆಯ ದೇವರು ಹೇಗೆ ಸೃಷ್ಟಿಸಬಲ್ಲನು?
ಮಾನವ ಶರೀರದಲ್ಲಿ ಒಂದು ಉಭಯ ಸಂಕಟ
ಈ ಉಭಯ ಸಂಕಟ ಮಾನವ ಶರೀರದಲ್ಲೂ ಪ್ರತಿಬಿಂಬಿತವಾಗಿದೆ. ಅದನ್ನು ಅಧ್ಯಯನ ಮಾಡಿದ್ದ ವಿಜ್ಞಾನಿಗಳು ಮತ್ತು ಇತರರು ಒಪ್ಪುತ್ತಾರೇನಂದರೆ ಮಾನವ ದೇಹವು ಅದ್ಭುತವಾಗಿಯೂ, ಸೊಗಸಾಗಿಯೂ ಉಂಟುಮಾಡಲ್ಪಟ್ಟಿದೆ.
ಅದರ ಕೆಲವು ಅದ್ಭುತ ವೈಶಿಷ್ಟ್ಯಗಳನ್ನು ಪರಿಗಣಿಸಿರಿ: ಯಾವುದೇ ಕೆಮರಾವು ನಕಲುಮಾಡಲಾಗದ, ಅಸಾಮಾನ್ಯವಾದ ಮಾನವ ಕಣ್ಣು; ಭಯಚಕಿತಗೊಳಿಸುವ ಮಿದುಳು, ಅದರ ಮುಂದೆ ಅತ್ಯಾಧುನಿಕ ಕಂಪ್ಯೂಟರ್ ಏನೂ ನಾಜೂಕಲ್ಲದಂತೆ ತೋರುತ್ತದೆ; ನಮ್ಮ ಪ್ರಜ್ಞಾವಂತ ಪ್ರಯತ್ನವಿಲ್ಲದೆ ಶರೀರದ ಜಟಿಲವಾದ ಭಾಗಗಳು ಸಹಕರಿಸುವ ವಿಧಾನ; ಜನನದ ಅದ್ಭುತ, ಶ್ಲಾಘನಾರ್ಹ ಮಗುವಿನ ಉತ್ಪಾದನೆ—ಅದರ ಹೆತ್ತವರ ಪಡಿರೂಪ—ಕೇವಲ ಒಂಭತ್ತು ತಿಂಗಳುಗಳಲ್ಲಿಯೇ. ಈ ನಕ್ಷೆಯ ನಾಯಕ ಕೃತಿಯಂತಿರುವ—ಮಾನವ ಶರೀರ—ಒಬ್ಬ ಅತಿ ಕೌಶಲ್ಯಗಾರ ನಕ್ಷೆಗಾರನಿಂದ—ಸೃಷ್ಟಿಕರ್ತನೂ, ಪರಾತ್ಪರ ದೇವರೂ ಆಗಿರುವಾತನಿಂದ ಸೃಷ್ಟಿಸಲ್ಪಟ್ಟಿರಬೇಕೆಂದು ಅನೇಕ ಜನರು ತೀರ್ಮಾನಿಸುತ್ತಾರೆ.
ಆದರೂ, ದುಃಖಕರವಾಗಿ ಅದೇ ವಿಸ್ಮಯಕಾರಕ ಶರೀರವು ಕೆಡುತ್ತಾ ಹೋಗುತ್ತದೆ. ಸಮಯಾನಂತರ, ಅದು ರೋಗ, ವೃದ್ಧಾಪ್ಯ ಮತ್ತು ಮರಣದಿಂದ ಇಲ್ಲವಾಗುತ್ತದೆ. ಅಂತಿಮವಾಗಿ ಅದು ನೆಲದ ಮಣ್ಣಾಗಿ ಬೀಳುತ್ತದೆ. ಎಷ್ಟೊಂದು ವಿಷಾದನೀಯ! ಒಬ್ಬ ವ್ಯಕ್ತಿಯು ದಶಕಗಳ ಅನುಭವದ ಲಾಭ ಪಡೆಯಬೇಕೆಂದಿರುವಾಗ ಮತ್ತು ಬುದ್ಧಿವಂತನಾಗಬೇಕೆಂದಿರುವಾಗ, ಶರೀರವು ಕುಸಿಯುತ್ತದೆ. ಅದರ ಆರಂಭದಲ್ಲಿ ಆ ಶರೀರಕ್ಕೆ ಇದ್ದ ಆರೋಗ್ಯ, ಸಾಮರ್ಥ್ಯ ಮತ್ತು ಸೊಬಗು ಅದರ ಅಂತ್ಯದಲ್ಲಿ ಇಂಥಹ ಸ್ಥಿತಿಗೆ ತಲುಪುವದು ಎಂಥಹ ಒಂದು ವಿಪರ್ಯಾಸ!
ಮಾನವ ಶರೀರದಂತಹ ಒಂದು ಅತಿ ಶ್ರೇಷ್ಠ ವಸ್ತುವನ್ನು ಪ್ರೀತಿಯ ನಿರ್ಮಾಣಿಕನೊಬ್ಬನು ಇಂಥಹ ದುಸ್ಥಿತಿಯ ಅಂತ್ಯಕ್ಕೆ ಬರುವಂತೆ ರಚಿಸುವದಾದರೂ ಯಾಕೆ? ಆರಂಭದಲ್ಲಿ ಇಷ್ಟೊಂದು ಚಲೋದಾಗಿ ಯಂತ್ರಕೌಶಲ್ಯತೆಯನ್ನು ಹೊಂದಿರುವ, ಮತ್ತು ಇಷ್ಟೊಂದು ಸಾಮರ್ಥ್ಯವಿರುವ ಒಂದು, ಇಷ್ಟೊಂದು ಕೆಟ್ಟ ರೀತಿಯಲ್ಲಿ ಕೊನೆಗೊಳ್ಳುವದಾದರೆ, ಅದನ್ನು ಅವನು ರಚಿಸುವದಾದರೂ ಯಾತಕ್ಕೆ?
ಕೆಲವರು ಅದನ್ನು ವಿವರಿಸುವ ವಿಧ
ವಿಪತ್ತುಗಳ ಮೂಲಕ ನಮ್ಮ ಗುಣಗಳನ್ನು ಉತ್ತಮಗೊಳಿಸುವ ದೇವರ ಸಾಧನಗಳಾಗಿ ದುಷ್ಟತನ ಮತ್ತು ನರಳಾಟ ಇರುತ್ತವೆ ಎಂದು ಕೆಲವರು ಹೇಳಿದ್ದಾರೆ. ಒಬ್ಬ ಮೆಥಡಿಸ್ಟ್ ವೈದಿಕನು ಸಮರ್ಥಿಸಿದ್ದು: “ಕೆಟ್ಟದ್ದನ್ನು ಒಳ್ಳೆಯದರಿಂದ ಪಾವತಿ ಮಾಡುವದು ದೇವರ ರಕ್ಷಣೆಯ ಯೋಜನೆಯ ಒಂದು ಭಾಗವಾಗಿದೆ.” ಅವನ ಅರ್ಥವೇನಂದರೆ ಒಳ್ಳೆಯ ಗುಣಗಳನ್ನು ಬೆಳಸಲು ಮತ್ತು ರಕ್ಷಣೆ ಪಡೆಯಲು, ದೇವರ ಯೋಜನೆಯ ಭಾಗವಾಗಿ ದುಷ್ಟ ಜನರ ಕೃತ್ಯಗಳಿಂದ ಒಳ್ಳೆಯ ಜನರು ನರಳಬೇಕು.
ಒಬ್ಬ ದುಷ್ಟ ಪಾತಕಿಯಿಂದ ಶಿಕ್ಷಿಸಲ್ಪಡುವದರ ಮೂಲಕ ತನ್ನ ಮಕ್ಕಳ ಗುಣಗಳನ್ನು ಪ್ರಗತಿಗೊಳಿಸಲು ಒಬ್ಬ ಪ್ರೀತಿಯ ಮಾನವ ತಂದೆಯು ಯೋಜಿಸುವನೋ? ಇದನ್ನು ಪರಿಗಣಿಸಿರಿ, ಏನಂದರೆ ಹಲವಾರು ಯುವ ಜನರು ಅಪಘಾತಗಳಲ್ಲಿ ಕೊಲ್ಲಲ್ಪಡುತ್ತಾರೆ ಇಲ್ಲವೇ ಯುದ್ಧಗಳಲ್ಲಿ ಹತಿಸಲ್ಪಡುತ್ತಾರೆ. ಅಂಥಹ ಯುವ ಆಹುತಿಗಳಿಗೆ ಅವರ ಗುಣಗಳನ್ನು ಪ್ರಗತಿಮಾಡಲು ಇನ್ನು ಅವಕಾಶವಿರುವದಿಲ್ಲ ಯಾಕಂದರೆ ಅವರು ಮೃತರಾಗಿರುತ್ತಾರೆ. ಆದುದರಿಂದ ಗುಣಗಳನ್ನು ಪ್ರಗತಿಗೊಳಿಸಲು ನರಳಾಟಕ್ಕೆ ಈಡುಮಾಡಲ್ಪಡುವ ಕಲ್ಪನೆಯು ಯಾವುದೇ ಅರ್ಥವನ್ನುಂಟುಮಾಡುವದಿಲ್ಲ.
ಯಾವನೇ ವಿವೇಚನೆಯ ಮತ್ತು ಪ್ರೀತಿಯ ಮಾನವ ತಂದೆಯು ತಾನು ಪ್ರೀತಿಸುವಂಥವರಿಗೆ ಬಾಧೆ ಇಲ್ಲವೇ ದುರಂತ ಬರಬೇಕೆಂದು ಆಶಿಸುವದಿಲ್ಲ. ವಾಸ್ತವದಲ್ಲಿ, ‘ಗುಣವನ್ನು ಬೆಳೆಸಲು’ ಅವನು ಪ್ರೀತಿಸುವವರನ್ನು ನರಳುವಂತೆ ಮಾಡಲು ಯೋಜನೆ ಮಾಡುವ ತಂದೆಯೊಬ್ಬನು ಅಯೋಗ್ಯನೂ, ಹೌದು ಮಾನಸಿಕವಾಗಿ ಅಸಮತೋಲನವುಳ್ಳವನೂ ಅಗಿರುತ್ತಾನೆಂದು ಪರಿಗಣಿಸಲ್ಪಡುತ್ತಾನೆ.
ಹಾಗಿರುವುದಾದರೆ, ಅತಿ ಶ್ರೇಷ್ಠ ಪ್ರೀತಿಯ ತಂದೆಯೂ, ವಿಶ್ವದ ಸರ್ವ-ವಿವೇಕಿ ನಿರ್ಮಾಣಿಕನೂ ಆಗಿರುವ ದೇವರು, ಅವನ ‘ರಕ್ಷಣೆಗಾಗಿರುವ ಯೋಜನೆ’ಯ ಭಾಗವಾಗಿ ಬೇಕುಬೇಕೆಂದೇ ನರಳುವಿಕೆಯನ್ನು ಏರ್ಪಡಿಸುವನೋ? ಅದು ಅವನಿಗೆ ಒಂದು ಕ್ರೂರವಾದ ಮತ್ತು ಭೀಭತ್ಸವಾದ ಗುಣವನ್ನು ಅಂಟಿಸುವದಾಗಿದ್ದು, ಈ ಗುಣವನ್ನು ಅತಿ ಕನಿಷ್ಠವಾದ ಮಾನವರಿಗೆ ಅದನ್ನು ಅಂಟಿಸಲು ನಮ್ಮಲ್ಲಿ ಎಲ್ಲರೂ ಅಸ್ವೀಕರಣೀಯವಾಗಿ ಕಂಡುಕೊಳ್ಳುವರು.
ಉತ್ತರಗಳನ್ನು ಕಂಡುಕೊಳ್ಳುವದು
ನರಳುವಿಕೆಗೆ ಮತ್ತು ದುಷ್ಟತನಕ್ಕೆ ದೇವರ ಅನುಮತಿಯ ಸುತ್ತಲೂ ಹೆಣೆಯಲ್ಪಟ್ಟಿರುವ ಪ್ರಶ್ನೆಗಳಿಗೆ ಉತ್ತರಗಳಿಗಾಗಿ ನಾವು ಎಲ್ಲಿ ತೆರಳಬಹುದು? ಈ ಪ್ರಶ್ನೆಗಳಲ್ಲಿ ದೇವರು ಒಳಗೂಡಿರುವದರಿಂದ, ಉತ್ತರಗಳೋಪಾದಿ ಅವನು ಏನನ್ನು ಸ್ವತಃ ಒದಗಿಸಿರುತ್ತಾನೋ ಅದನ್ನು ನಾವು ಕಂಡುಕೊಳ್ಳುವದು ಅರ್ಥಭರಿತವುಳ್ಳದ್ದಾಗಿದೆ.
ಅವನ ಉತ್ತರಗಳನ್ನು ನಾವು ಹೇಗೆ ಕಂಡುಕೊಳ್ಳುವೆವು? ಮಾನವರ ಮಾರ್ಗದರ್ಶನೆಗಾಗಿ ದೇವರು ತಾನೇ ಗ್ರಂಥಕರ್ತನಾಗಿದ್ದೇನೆಂದು ಹೇಳುವ ಉಗಮಕ್ಕೆ—ಪವಿತ್ರ ಬೈಬಲಿಗೆ, ಪವಿತ್ರ ಶಾಸ್ತ್ರಗ್ರಂಥಗಳಿಗೆ ಹೋಗುವದರಿಂದಲೇ. ಆ ಮೂಲದ ಕುರಿತು ಒಬ್ಬನು ಏನೇ ಎಣಿಸಲಿ, ಪರಿಶೀಲಿಸುವದಕ್ಕೆ ಅದು ಅರ್ಹವಾಗಿದೆ, ಯಾಕಂದರೆ ಅಪೊಸ್ತಲ ಪೌಲನು ಅಂದದ್ದು: “ದೈವಪ್ರೇರಿತವಾದ ಪ್ರತಿಯೊಂದು ಶಾಸ್ತ್ರವು . . . ತಿದ್ದುಪಾಟಿಗೂ ಉಪಯುಕ್ತವಾಗಿದೆ.” (2 ತಿಮೊಥಿ 3:16) ಅವನು ಇದನ್ನೂ ಬರೆದನು: “ಹೀಗಿರಲಾಗಿ ನೀವು ದೇವರ ವಾಕ್ಯವನ್ನು ನಮ್ಮಿಂದ ಕೇಳಿದಾಗ ಅದನ್ನು ಮನುಷ್ಯರ ವಾಕ್ಯವೆಂದೆಣಿಸದೆ ದೇವರ ವಾಕ್ಯವೆಂದೇ ತಿಳಿದು ಅಂಗೀಕರಿಸಿದಿರಿ.”a—1 ಥೆಸಲೋನಿಕ 2:13.
ನರಳಾಟವನ್ನು ಅನುಮತಿಸಿರುವದರ ಕುರಿತಾದ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಹಿಡಿಯುವದು ಕೇವಲ ಬುದ್ಧಿಶಕ್ತಿಯ ಕಸರತ್ತಿಗಿಂತ ಹೆಚ್ಚಿನದ್ದಾಗಿರುತ್ತದೆ. ಲೋಕರಂಗದ ಮೇಲೆ ಈಗ ಏನು ನಡೆಯುತ್ತದೋ ಅದನ್ನು, ಸದ್ಯದ ಭವಿಷ್ಯದಲ್ಲಿ ಏನು ನಡೆಯಲಿದೆ ಮತ್ತು ನಮ್ಮಲ್ಲಿ ಪ್ರತಿಯೊಬ್ಬನ ಮೇಲೆ ಅದು ಹೇಗೆ ಪರಿಣಾಮ ಬೀರುತ್ತದೆ ಎಂಬ ನಮ್ಮ ತಿಳುವಳಿಕೆಗೆ ಈ ಉತ್ತರಗಳು ನಿರ್ಣಾಯತ್ಮಕವಾಗಿವೆ.
ಮಾನವ ಕುಟುಂಬಕ್ಕಾಗಿ ದೇವರ ಸಂಪರ್ಕಸಾಧನವಾಗಿರುವ ಬೈಬಲು ಸ್ವತಃ ತನಗಾಗಿ ಮಾತಾಡುವಂತೆ ಬಿಡುವದಕ್ಕೆ ನಾವು ಹಂಗುಳ್ಳವರಾಗಿದ್ದೇವೆ. ಹಾಗಾದರೆ, ನರಳಾಟವು ಹೇಗೆ ಆರಂಭಗೊಂಡಿತು ಮತ್ತು ದೇವರು ಅದನ್ನು ಯಾಕೆ ಅನುಮತಿಸುತ್ತಾನೆ ಎಂಬುದರ ಕುರಿತು ಅದೇನು ನಮಗೆ ಹೇಳುತ್ತದೆ?
ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ನಾವು ಹೇಗೆ ಮಾಡಲ್ಪಟ್ಟಿರುತ್ತೇವೆ ಎಂಬುದು ಉತ್ತರವನ್ನು ಅರ್ಥೈಸುವದರ ಕೀಲಿಕೈ ಆಗಿರುತ್ತದೆ. ಮಾನವರೋಪಾದಿ ನಿರ್ಮಾಣಿಕನು ನಮ್ಮ ರಚನೆಯಲ್ಲಿ ಈ ನಿರ್ಣಾಯಕ ಗುಣವನ್ನು ಸೇರಿಸಿರುತ್ತಾನೆಂದು ಬೈಬಲು ತೋರಿಸುತ್ತದೆ: ಸ್ವಾತಂತ್ರ್ಯಕ್ಕಾಗಿ ಬಯಕೆ. ಮಾನವನಿಗಿರುವ ಇಚ್ಛಾ ಸ್ವಾತಂತ್ರ್ಯದಲ್ಲಿ ಏನು ಒಳಗೂಡಿರುತ್ತದೆ ಮತ್ತು ನರಳುವಿಕೆಯನ್ನು ದೇವರು ಅನುಮತಿಸಿರುವದರ ಮೇಲೆ ಇದು ಹೇಗೆ ಪ್ರಭಾವವನ್ನು ಬೀರುತ್ತದೆ ಎಂದು ನಾವೀಗ ಸಂಕ್ಷಿಪ್ತವಾಗಿ ಪರಿಗಣಿಸೋಣ. (g90 10/8)
[ಅಧ್ಯಯನ ಪ್ರಶ್ನೆಗಳು]
a ಬೈಬಲು ದೈವಪ್ರೇರಿತವಾದದ್ದು ಎಂಬ ರುಜುವಾತಿನ ಚರ್ಚೆಗಾಗಿ, ವಾಚ್ಟವರ್ ಬೈಬಲ್ ಆ್ಯಂಡ್ ಟ್ರೇಕ್ಟ್ ಸೊಸೈಟಿಯಿಂದ ಪ್ರಕಾಶಿಸಲ್ಪಟ್ಟ ದ ಬೈಬಲ್—ಗಾಡ್ಸ್ ವರ್ಡ್ ಆರ್ ಮ್ಯಾನ್ಸ್? ಪುಸ್ತಕವನ್ನು ನೋಡಿರಿ.