ಇಚ್ಛಾ ಸ್ವಾತಂತ್ರ್ಯದ ಅದ್ಭುತಕರ ವರದಾನ
ನಿಮ್ಮ ಜೀವಿತವನ್ನು ಹೇಗೆ ವ್ಯವಸ್ಥೆಗೊಳಿಸುತ್ತೀರಿ, ನೀವೇನು ಮಾಡುವಿರಿ ಮತ್ತು ಹೇಳುವಿರಿ ಎಂಬುದನ್ನು ಆರಿಸಲು ಸ್ವಾತಂತ್ರ್ಯವಿರುವದನ್ನು ನೀವು ಗಣ್ಯಮಾಡುತ್ತೀರೋ? ಇಲ್ಲವೇ ನೀವು ಎಷ್ಟರ ತನಕ ಜೀವಿಸುವಿರೋ ಅಷ್ಟರ ತನಕ, ಪ್ರತಿದಿನದ ಪ್ರತಿ ನಿಮಿಷವೂ ನಿಮ್ಮ ಪ್ರತಿಯೊಂದು ಶಬ್ದ ಮತ್ತು ಕೃತ್ಯವನ್ನು ಯಾರಾದರೊಬ್ಬರು ನಿರ್ದೇಶಿಸಬೇಕೆಂದು ನೀವು ಬಯಸುವಿರೋ?
ಯಾವನೇ ಜನಸಾಮಾನ್ಯ ಮನುಷ್ಯನು, ಅವನ ಹಸ್ತಗಳಿಂದ ಅವನ ಜೀವನವನ್ನು ತೆಗೆದುಕೊಂಡು, ಇನ್ನೊಬ್ಬನಿಂದ ಅದು ಸಂಪೂರ್ಣವಾಗಿ ನಿಗ್ರಹಿಸಲ್ಪಡಬೇಕೆಂದು ಬಯಸುವದಿಲ್ಲ. ಆ ರೀತಿಯಲ್ಲಿ ಜೀವಿಸುವದು ಅಂದರೆ ತುಂಬಾ ದಬ್ಬಾಳಿಕೆ ಮತ್ತು ಆಶಾಭಂಗದ್ದಾಗಿರಬಲ್ಲದು. ನಮಗೆ ಸ್ವಾತಂತ್ರ್ಯವು ಬೇಕಾಗಿದೆ.
ಆದರೆ ಸ್ವಾತಂತ್ರ್ಯಕ್ಕಾಗಿ ನಮಗೆ ಅಂಥಹ ಬಯಕೆಯು ಯಾಕಾಗಿ ಇದೆ? ಆರಿಸುವಿಕೆಯ ಸ್ವಾತಂತ್ರ್ಯವನ್ನು ನಾವು ಯಾಕೆ ಅಷ್ಟೊಂದು ಮೌಲ್ಯತೆಯದ್ದು ಎಣಿಸಿಕೊಳ್ಳುತ್ತೇವೆಂದು ಅರ್ಥೈಸಿಕೊಳ್ಳುವದು, ದುಷ್ಟತನ ಮತ್ತು ನರಳುವಿಕೆಯು ಹೇಗೆ ಆರಂಭಗೊಂಡಿರಬಹುದು ಎಂಬುದನ್ನು ತಿಳಿಯಲು ಕೀಲಿಕೈಯಾಗಿದೆ. ದುಷ್ಟತನ ಮತ್ತು ನರಳುವಿಕೆಯನ್ನು ಅಂತ್ಯಗೊಳಿಸಲು ಕಾರ್ಯಾಚರಿಸುವ ಮೊದಲು ಇಂದಿನ ತನಕ ದೇವರು ಯಾಕೆ ಕಾದಿರುತ್ತಾನೆ ಎಂದು ತಿಳಿಯಲು ಕೂಡಾ ನಮಗೆ ನೆರವಾಗುತ್ತದೆ.
ನಮ್ಮನ್ನು ರಚಿಸಿದ ವಿಧ
ಮಾನವರನ್ನು ದೇವರು ಸೃಷ್ಟಿಸಿದಾಗ, ಅವನು ಕೊಟ್ಟ ಅನೇಕ ಅದ್ಭುತಕರ ವರದಾನಗಳಲ್ಲಿ ಇಚ್ಛಾ ಸ್ವಾತಂತ್ರ್ಯವು ಇದೆ. ಬೈಬಲು ನಮಗೆ ಹೇಳುವದು, ದೇವರು ಮನುಷ್ಯನನ್ನು ತನ್ನ ‘ಸ್ವರೂಪ ಮತ್ತು ಹೋಲಿಕೆಗೆ ಸರಿಯಾಗಿ’ ನಿರ್ಮಿಸಿದನು, ಮತ್ತು ದೇವರಿಗೆ ಇರುವ ಗುಣಗಳಲ್ಲಿ ಒಂದು ಆರಿಸುವಿಕೆಯ ಸ್ವಾತಂತ್ರ್ಯ ಆಗಿರುತ್ತದೆ. (ಆದಿಕಾಂಡ 1:26; ಧರ್ಮೋಪದೇಶಕಾಂಡ 7:6) ಈ ರೀತಿಯಲ್ಲಿ, ಅವನು ಮಾನವರನ್ನು ಸೃಷ್ಟಿಸಿದಾಗ, ಅದೇ ಅದ್ಭುತಕರ ಗುಣ—ಇಚ್ಛಾ ಸ್ವಾತಂತ್ರ್ಯದ ವರದಾನವನ್ನು ಕೊಟ್ಟನು.
ದಬ್ಬಾಳಿಕೆಯ ಅಧಿಪತಿಗಳಿಂದ ಗುಲಾಮಗಿರಿಯ ಬದಲಿಗೆ ನಾವು ಸ್ವಾತಂತ್ರ್ಯವನ್ನು ಆಯ್ದುಕೊಳ್ಳುತ್ತೇವೆ. ಆದಕಾರಣವೇ ಕ್ರೂರ ಮತ್ತು ಉಸಿರುಗಟ್ಟಿಸುವ ಆಡಳಿತೆಯ ವಿರುದ್ಧ ಅಸಮಾಧಾನವು ಏಳಲ್ಪಡುತ್ತದೆ, ಇದರಿಂದ ಜನರು ಕೆಲವೊಮ್ಮೆ ದಂಗೆ ಏಳುತ್ತಾರೆ.
ಸ್ವಾತಂತ್ರ್ಯಕ್ಕಾಗಿರುವ ಬಯಕೆಯು ಒಂದು ಅಕಸ್ಮಿಕ ಘಟನೆಯಲ್ಲ. ಬೈಬಲು ಅದರ ಹಿಂದಿರುವ ಕಾರಣವನ್ನು ಕೊಡುತ್ತದೆ. ಅದು ಹೇಳುವದು: “ಯೆಹೋವನ ಆತ್ಮವು ಎಲ್ಲಿದೆಯೋ ಅಲ್ಲಿ ಸ್ವಾತಂತ್ರ್ಯ ಇದೆ.” (2 ಕೊರಿಂಥ 3:17) ನಮ್ಮ ಸ್ವಭಾವದ ಒಂದು ಭಾಗವಾಗಿ ಸ್ವಾತಂತ್ರ್ಯದ ಆಶೆಯಿರುತ್ತದೆ, ಕಾರಣ ದೇವರು ನಮ್ಮನ್ನು ಆ ರೀತಿಯಲ್ಲಿ ಸೃಷ್ಟಿಸಿದ್ದಾನೆ. ಅದು ನಮ್ಮಲ್ಲಿ ಇರಬೇಕೆಂದು ಅವನು ಬಯಸುತ್ತಾನೆ,ಕಾರಣ ಅವನು ಸ್ವತಃ ಸ್ವಾತಂತ್ರ್ಯದ ದೇವರಾಗಿರುತ್ತಾನೆ.—2 ಕೊರಿಂಥ 3:17.
ದೇವರು ಇಚ್ಛಾ ಸ್ವಾತಂತ್ರ್ಯದೊಂದಿಗೆ ಸಹಮತದಿಂದ ಕಾರ್ಯವೆಸಗುವ ವಿವೇಚಿಸುವ, ತರ್ಕಿಸುವ ಮತ್ತು ನ್ಯಾಯತೀರ್ಪಿನ ಶಕ್ತಿಗಳಂಥ ಮಾನಸಿಕ ಸಾಮರ್ಥ್ಯಗಳನ್ನು ಕೂಡಾ ನಮಗೆ ಕೊಟ್ಟಿರುತ್ತಾನೆ. ಇವುಗಳು ನಾವು ಯೋಚಿಸುವಂತೆ, ವಿಷಯಗಳನ್ನು ತೂಗಿನೋಡುವಂತೆ, ತೀರ್ಮಾನಗಳನ್ನು ಮಾಡುವಂತೆ, ಮತ್ತು ಕೆಟ್ಟದ್ದರಿಂದ ಒಳ್ಳೆಯದರ ಭೇದವನ್ನು ತಿಳಿದುಕೊಳ್ಳುವಂತೆ ಸಾಧ್ಯ ಮಾಡುತ್ತದೆ. (ಇಬ್ರಿಯ 5:14) ಅವರ ಸ್ವಂತ ಇಚ್ಛೆ ಇಲ್ಲದ, ಮನಸ್ಸುರಹಿತ ಯಂತ್ರಮಾನವರಂತೆ ನಾವು ಸೃಷ್ಟಿಸಲ್ಪಡಲಿಲ್ಲ; ಇಲ್ಲವೇ ಪ್ರಾಣಿಗಳಿಗಿರುವಂತೆ, ಮುಖ್ಯವಾಗಿ ನಾವು ಸಹಜಪ್ರವೃತ್ತಿಯಿಂದ ವರ್ತಿಸುವಂತೆಯೂ ರಚಿಸಲ್ಪಡಲಿಲ್ಲ.
ಸ್ವತಂತ್ರ ಇಚ್ಛೆಯೊಂದಿಗೆ ನಮ್ಮ ಪ್ರಥಮ ಹೆತ್ತವರಿಗೆ ಯಾರಾದರೂ ಸಮಂಜಸವಾಗಿ ಬಯಸುವ ಸರ್ವವನ್ನೂ ಕೊಡಲಾಗಿತ್ತು: ಅವರನ್ನು ಉದ್ಯಾನವನದಂತಹ ಪರದೈಸದಲ್ಲಿ ಇಡಲಾಗಿತ್ತು; ಅವರಿಗೆ ಭೌತಿಕವಾಗಿ ಸಮೃದ್ಧತೆಯು ಕೊಡಲ್ಪಟ್ಟಿತ್ತು; ವೃದ್ಧಾಪ್ಯಗೊಂಡು, ಇಲ್ಲವೇ ರೋಗ ಹಿಡಿದು ಸಾಯದೆ ಇರುವಂತಹ ಪರಿಪೂರ್ಣ ಮನಸ್ಸುಗಳು ಮತ್ತು ಶರೀರಗಳು ಅವರಿಗೆ ಇದ್ದವು; ಒಂದು ಸಂತೋಷಕರ ಭವಿಷ್ಯವಿರುವ ಮಕ್ಕಳು ಅವರಿಗಿರುವ ಸಾಧ್ಯತೆ ಇತ್ತು; ಮತ್ತು ವೃದ್ಧಿಸುತ್ತಿರುವ ಜನಸಂಖ್ಯೆಗೆ ಇಡೀ ಭೂಮಿಯನ್ನು ಒಂದು ಪ್ರಮೋದವನವನ್ನಾಗಿ ಪರಿವರ್ತಿಸುವ ಒಂದು ತೃಪ್ತಿದಾಯಕ ಕೆಲಸವು ಅವರಿಗಿತ್ತು.—ಆದಿಕಾಂಡ 1:26-30; 2:15.
ದೇವರು ಏನನ್ನು ಕಾರ್ಯರೂಪಕ್ಕೆ ತರಲು ಆರಂಭಿಸಿದನೋ ಅದರ ಕುರಿತು ಬೈಬಲು ಹೇಳುವದು: “ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.” (ಆದಿಕಾಂಡ 1:31) ಸೃಷ್ಟಿಕರ್ತನ ಕುರಿತು ಬೈಬಲು ಇದನ್ನೂ ಹೇಳುತ್ತದೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯಗಳೆಲ್ಲವೂ ಪರಿಪೂರ್ಣವಾಗಿವೆ.” (ಧರ್ಮೋಪದೇಶಕಾಂಡ 32:4, NW) ಹೌದು, ಅವನು ಮಾನವ ಕುಟುಂಬಕ್ಕೆ ಒಂದು ಪರಿಪೂರ್ಣ ಆರಂಭವನ್ನು ಕೊಟ್ಟನು. ಅದು ಇನ್ನು ಹೆಚ್ಚು ಒಳ್ಳೇದಾಗಿರಲಿಕ್ಕಿಲ್ಲ.
ಮಿತಿಗಳೊಂದಿಗೆ ಸ್ವಾತಂತ್ರ್ಯ
ಆದಾಗ್ಯೂ, ಇಚ್ಛಾ ಸ್ವಾತಂತ್ರ್ಯದ ಈ ಅದ್ಭುತಕರ ವರದಾನವು ಮಿತಿಗಳಿಲ್ಲದ್ದಾಗಿತ್ತೋ? ಒಳ್ಳೇದು, ಯಾವುದೇ ಸಂಚಾರ ನಿಯಮಗಳಿಲ್ಲದ, ಬೇಕಾದ ಓಣಿಗೆ, ಯಾವುದೇ ದಿಕ್ಕಿನಲ್ಲಿ, ಎಷ್ಟೇ ವೇಗದಲ್ಲಿ ನೀವು ವಾಹನ ನಡಿಸಲು ಸ್ವತಂತ್ರ್ಯರಿರುವುದಾದರೆ, ಅಂತಹ ಭಾರಿಪ್ರಮಾಣದ ವಾಹನ ಸಂಚಾರದ ನಡುವೆ ನಿಮ್ಮ ವಾಹನ ನಡಿಸಲು ನೀವು ಚಲಾಯಿಸಲು ಬಯಸುವಿರೋ? ಖಂಡಿತವಾಗಿಯೂ, ವಾಹನಸಂಚಾರದಲ್ಲಿ ಅಂತಹ ಮಿತಿಯಿಲ್ಲದ ಸ್ವಾತಂತ್ರ್ಯದ ಪರಿಣಾಮಗಳು ವಿನಾಶಕಾರೀಯಾಗಿರಬಲ್ಲವು.
ಮಾನವ ಸಂಬಂಧಗಳ ಕುರಿತಾಗಿಯೂ ಇದೇ ರೀತಿಯಾಗಿದೆ. ಕೆಲವರಿಗೆ ಮಿತಿಯಿಲ್ಲದ ಸ್ವಾತಂತ್ರ್ಯವೆಂದರೆ, ಇತರರಿಗೆ ಅದು ಸ್ವಾತಂತ್ರ್ಯವೆಂಬ ಅರ್ಥದಲ್ಲಿ ಇರುವದಿಲ್ಲ. ಅನಿರ್ಬಂಧಿತ ಸ್ವಾತಂತ್ರ್ಯವು ಅವ್ಯವಸ್ಥೆಗೆ ನಡಿಸಬಹುದು, ಇದರಿಂದ ಎಲ್ಲರ ಸ್ವಾತಂತ್ರ್ಯಕ್ಕೆ ಧಕ್ಕೆಯನ್ನುಂಟುಮಾಡುತ್ತದೆ. ಮಿತಿಗಳು ಅಲ್ಲಿರಲೇಬೇಕು. ಆದಕಾರಣ, ಇತರರ ಒಳಿತನ್ನು ಪರಿಗಣಿಸದೆ ಯಾವುದೇ ರೀತಿಯಲ್ಲಿ ಮಾನವರು ವರ್ತಿಸಬಹುದು ಎಂದು ಅವನು ಉದ್ದೇಶಿಸಿದ್ದನು ಎಂದು ದೇವರ ಸ್ವಾತಂತ್ರ್ಯದ ವರದಾನದ ಅರ್ಥವಲ್ಲ.
ಈ ವಿಷಯದ ಮೇಲೆ ದೇವರ ವಾಕ್ಯವು ಅನ್ನುವದು: “ಸ್ವತಂತ್ರರಂತೆ ನಡೆದುಕೊಳ್ಳಿರಿ; ಆದರೆ ಕೆಟ್ಟತನವನ್ನು ಮರೆಮಾಚುವದಕ್ಕೆ ನಿಮ್ಮ ಸ್ವಾತಂತ್ರ್ಯವನ್ನು ಉಪಯೋಗಿಸಬೇಡಿರಿ.” (1 ಪೇತ್ರ 2:16, ದ ಜೆರೂಸಲೇಮ್ ಬೈಬಲ್) ಆದುದರಿಂದ, ಸಾಮಾನ್ಯ ಒಳಿತಿಗಾಗಿ ನಮ್ಮ ಇಚ್ಛಾ ಸ್ವಾತಂತ್ರ್ಯವನ್ನು ಕ್ರಮಬದ್ಧಗೊಳಿಸಲು ದೇವರು ಬಯಸುತ್ತಾನೆ. ಸಮಗ್ರ ಸ್ವಾತಂತ್ರ್ಯ ಮಾನವರಿಗೆ ಅವನು ಉದ್ದೇಶಿಸಿರಲಿಲ್ಲ, ಬದಲು ಸಂಬಂಧಿತ ಸ್ವಾತಂತ್ರ್ಯ, ಅದು ನಿಯಮಕ್ಕೆ ಅಧೀನವಾಗಿರುವಂತಹದ್ದಾಗಿದೆ.
ಯಾರ ನಿಯಮಗಳು?
ಯಾರ ನಿಯಮಗಳಿಗೆ ನಾವು ವಿಧೇಯರಾಗುವಂತೆ ರೂಪಿಸಲ್ಪಟ್ಟಿದ್ದೇವೆ? ಯಾರ ನಿಯಮಗಳು ನಮ್ಮ ಅತ್ಯುತ್ತಮ ಒಳಿತಿಗಾಗಿ ಕೆಲಸಮಾಡುತ್ತವೆ? 1ಪೇತ್ರ 2:16ರಲ್ಲಿ ಶಾಸ್ತ್ರವಚನದ ಇನ್ನೊಂದು ಭಾಗವು ಮೇಲಿನದ್ದನ್ನು ಗಮನಿಸಿದೆ: “ನೀವು ಇನ್ಯಾರಿಗೂ ಅಲ್ಲದೆ ದೇವರಿಗೆ ಮಾತ್ರ ದಾಸರಾಗಿದ್ದೀರಲ್ಲಾ.” (NW) ಇದರ ಅರ್ಥ ದಬ್ಬಾಳಿಕೆಯ ದಾಸತ್ವದಲ್ಲಿರುವದು ಎಂದರ್ಥವಲ್ಲ, ಬದಲು ದೇವರ ನಿಯಮಗಳಿಗೆ ಅಧೀನರಾಗಿರುವಂತೆ ನಾವು ರಚಿಸಲ್ಪಟ್ಟಿದ್ದೇವೆ. ನಾವು ಅವುಗಳಿಗೆ ಅಧೀನರಾಗಿ ಉಳಿದರೆ, ನಾವು ಹೆಚ್ಚು ಸಂತೋಷಿಗಳಾಗಿರಬಲ್ಲೆವು.
ಮಾನವನಿಂದ ರೂಪಿಸಲ್ಪಟ್ಟ ಯಾವುದೇ ನಿಯಮಾವಳಿಗಿಂತ ದೇವರ ನಿಯಮಗಳು ಪ್ರತಿಯೊಬ್ಬರಿಗೆ ಅತಿ ಶ್ರೇಷ್ಠ ಮಾರ್ಗದರ್ಶಿಯಾಗಿವೆ. ಯೆಶಾಯ 48:17 ಹೇಳುವದು: “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ.” ಆದರೂ, ಅದೇ ಸಮಯದಲ್ಲಿ, ದೇವರ ನಿಯಮಗಳು ಅವುಗಳ ಮಿತಿಗಳೊಳಗೆ ವಿಸ್ತಾರವಾದ ಸ್ವಾತಂತ್ರ್ಯವನ್ನು ಅನುಮತಿಸಿವೆ. ಇದು ವೈಯಕಿಕ್ತ ಆಯ್ಕೆ ಮತ್ತು ವೈವಿಧ್ಯತೆಗಳನ್ನು ಅನುಮತಿಸಿ, ಮಾನವ ಕುಟುಂಬವನ್ನು ಹೆಚ್ಚು ಆಸಕ್ತಕರ, ಹಾಗೂ ಖಂಡಿತವಾಗಿ, ಆಕರ್ಷಣೀಯವಾಗಿ ಮಾಡುತ್ತದೆ.
ದೇವರ ಭೌತಿಕ ನಿಯಮಗಳಿಗೂ ಮಾನವರು ಅಧೀನರಾಗಿರುತ್ತಾರೆ. ಉದಾಹರಣೆಗೆ, ಗುರುತ್ವಾಕರ್ಷಣೆಯ ನಿಯಮಗಳನ್ನು ನಾವು ಅಲಕ್ಷ್ಯಿಸಿ, ಎತ್ತರದ ಸ್ಥಳದಿಂದ ನಾವು ಧುಮುಕಿದರೆ, ನಮಗೆ ಪೆಟ್ಟಾಗಬಹುದು ಇಲ್ಲವೇ ಕೊಲ್ಲಲ್ಪಡಬಹುದು. ವಿಶೇಷ ಉಸಿರಾಟದ ಉಪಕರಣಗಳಿಲ್ಲದೇ ನೀರಿನೊಳಗೆ ನಾವು ಬಹಳ ಕಾಲ ಮುಳುಗಿ ನಿಂತರೆ, ನಿಮಿಷಗಳೊಳಗೆ ನಾವು ಸಾಯುವೆವು. ಮತ್ತು ನಮ್ಮ ಶರೀರದ ಆಂತರಿಕ ನಿಯಮಗಳನ್ನು ಅಲಕ್ಷ್ಯಿಸಿ ಆಹಾರ ತೆಗೆದು ಕೊಳ್ಳುವದನ್ನು ಇಲ್ಲವೇ ನೀರು ಕುಡಿಯುವದನ್ನು ನಿಲ್ಲಿಸಿದರೆ, ನಾವು ಕೂಡಾ ಸಾಯುವೆವು.
ಆದುದರಿಂದ, ನಮ್ಮ ಪ್ರಥಮ ಹೆತ್ತವರು ಮತ್ತು ಅವರಿಂದ ಜನಿಸಿದವರೆಲ್ಲರೂ, ದೇವರ ನೈತಿಕ ಇಲ್ಲವೆ ಸಾಮಾಜಿಕ ನಿಯಮಗಳಿಗೆ ಹಾಗೂ ಅವನ ಭೌತಿಕ ನಿಯಮಗಳಿಗೆ ವಿಧೇಯರಾಗುವ ಆವಶ್ಯಕತೆಯಿಂದ ಸೃಷ್ಟಿಸಲ್ಪಟ್ಟಿದ್ದೇವೆ. ಮತ್ತು ದೇವರ ನಿಯಮಗಳಿಗೆ ವಿಧೇಯತೆಯು ಭಾರವಾದುದ್ದಲ್ಲ. ಬದಲಿಗೆ, ಅದು ಅವರ ಮತ್ತು ಬರಲಿರುವ ಸಮಗ್ರ ಮಾನವ ಕುಟುಂಬದ ಒಳಿತಿಗಾಗಿ ಕಾರ್ಯವೆಸಗಲಿರುವದು. ದೇವರ ನಿಯಮಗಳ ಮಿತಿಗಳೊಳಗೆ ಒಂದು ವೇಳೆ ನಮ್ಮ ಮೊದಲ ಹೆತ್ತವರು ತಮ್ಮನ್ನು ಇಟ್ಟುಕೊಂಡಿದ್ದರೆ, ಎಲ್ಲವೂ ಒಳ್ಳೇದಾಗಿಯೇ ಪರಿಣಮಿಸುತ್ತಿತ್ತು.
ಆ ಉತ್ತಮವಾದ ಆರಂಭವನ್ನು ಹಾಳುಗೆಡುವಂಥದೇನ್ದು ಸಂಭವಿಸಿತು? ಅದರ ಬದಲು, ದುಷ್ಟತನ ಮತ್ತು ನರಳಾಟ ವ್ಯಾಪಕವಾಗಿ ಹಬ್ಬಲು ಕಾರಣವೇನು? ಇಷ್ಟು ದೀರ್ಘ ಸಮಯದ ತನಕ ದೇವರು ಅದನ್ನು ಯಾಕೆ ಅನುಮತಿಸಿರುತ್ತಾನೆ? (g90 10/8)
[ಪುಟ 7 ರಲ್ಲಿರುವಚಿತ್ರ]
ಅದ್ಭುತಕರವಾದ ಇಚ್ಛಾ ಸ್ವಾತಂತ್ರ್ಯದ ವರದಾನವು ಮನಸ್ಸುರಹಿತ ಯಂತ್ರ-ಮಾನವರಿಂದ ಮತ್ತು ಮುಖ್ಯವಾಗಿ ಸಹಜಪ್ರವೃತ್ತಿಯಿಂದ ವರ್ತಿಸುವ ಪ್ರಾಣಿಗಳಿಂದ ನಮ್ಮನ್ನು ಪ್ರತ್ಯೇಕಿಸುತ್ತದೆ