ಅವುಗಳಿಗೆ ಅಷ್ಟು ಸುಂದರ ಗರಿಗಳು ಹೇಗೆ ದೊರೆತವು?
ನಸುನೇರಳೆ ಎದೆಯ ರೋಲರ್ ಹಕ್ಕಿಗಳು ಮಧ್ಯ ಮತ್ತು ತೆಂಕಣ ಆಫ್ರಿಕದಲ್ಲಿ ಸಾಮಾನ್ಯ. ಅವು ಅನೇಕ ವೇಳೆ ದಾರಿಯುದ್ದಕ್ಕೂ ಮರ ಯಾ ಟೆಲಿಫೋನ್ ಕಂಬಗಳ ಮೇಲೆ ಕೂತುಕೊಂಡಿರುತ್ತವೆ. ಮೇಲೆ ಕುಳಿತು ಸುತ್ತಲು ನೋಡುತ್ತಾ ಕ್ರಿಮಿಕೀಟ ಹಾಗೂ ಇತರ ಆಹಾರವನ್ನು ಕಂಡುಹಿಡಿಯಲು ಇದು ಅನುಕೂಲ ಸ್ಥಾನ.
ಬಾಟ್ಸ್ವಾನ ಯಾ ಝಿಂಬಾಬೆಯ್ವನ್ನು ನೀವು ದಾಟಿಹೋಗುವಲ್ಲಿ, ಈ ಪಕ್ಷಿಗಳು ಹಾರಿ ರಸ್ತೆಯನ್ನು ದಾಟುವಾಗ ಹೊಳೆಯುವ ನೀಲ ಗರಿಗಳ ರೇಖೆಯನ್ನು ನೀವು ನೋಡಬಹುದು. ರೋಲರ್ (ಉರುಳೆ) ಎಂಬ ಹೆಸರು ಸೂಚಿಸುವಂತೆ, ಅವು ಕೆಲವು ಬಾರಿ ತಮ್ಮ ವರ್ಣರಂಜಿತ ಗರಿಗಳನ್ನು ಉರುಳುವ ವಿಮಾನ ಕಸರತ್ತನ್ನು ಮಾಡಿ ಪ್ರದರ್ಶಿಸುತ್ತವೆ. ಇಲ್ಲಿರುವ ಪಕ್ಷಿಯ ಚಿತ್ರ ಮತ್ತು ಅದರ ರೆಕ್ಕೆಯ ಒಳಚಿತ್ರ ಈ ರೋಲರ್ ಪಕ್ಷಿಯ ರೋಮಾಂಚಕ ವರ್ಣಗಳನ್ನು ತೋರಿಸುತ್ತದೆ. ರೆಕ್ಕೆಯ ಗರಿಗಳು ಕಪ್ಪು ಮತ್ತು ಕಂದು ಬಣ್ಣಗಳೊಂದಿಗೆ ನೀಲ ಬಣ್ಣದ ನಾಲ್ಕು ಛಾಯಾಂತರಗಳ ಸಂಮಿಳನವಾಗಿದೆ. ಇದು ನಸು ನೇರಳೆಯ ಎದೆ, ಕಿತ್ತಳೆ ಬಣ್ಣದ ಕೆನ್ನೆ, ಬಿಳಿ ಹಣೆ, ಮತ್ತು ನಸು ಹಸುರು ಬಣ್ಣಗಳೊಂದಿಗೆ ಎಷ್ಟು ವೈದೃಶ್ಯವಾಗಿ ತೋರುತ್ತದೆ! ಇದೊಂದು ಪ್ರಾಮುಖ್ಯ ಪ್ರಶ್ನೆಯನ್ನು ಎಬ್ಬಿಸುತ್ತದೆ: ಅವುಗಳಿಗೆ ಇಷ್ಟು ಸುಂದರವಾದ ಗರಿಗಳು ಹೇಗೆ ದೊರೆತವು?
ಈ ರೋಲರ್ ಪಕ್ಷಿಯ ಕಾಲನ್ನು ನೀವು ನೋಡುವಲ್ಲಿ ಅವು ಪರೆಯಿಂದ—ಗರಿಗಳಿಂದಲ್ಲ—ತುಂಬಿರುವುದನ್ನು ನೀವು ನೋಡುವಿರಿ. ಹಾಗಾದರೆ, ವಿಕಾಸವಾದಿಗಳು ಕಲಿಸುವಂತೆ, ಅವುಗಳ ಗರಿಗಳು ಆಕಸ್ಮಿಕವಾಗಿ ಉರಗದ ಪರೆಗಳಿಂದ ಬೆಳೆದು ಬಂದವೊ?
ಅವುಗಳ ಗರಿ ಯಂತ್ರಶಿಲ್ಪಾದ್ಭುತವೆಂದು ತಿಳಿಯಿರಿ. ಗರಿಯ ನಡುಕಡ್ಡಿಯಿಂದ ಹಿಡಿದು ಅಡ್ಡ ಎಳೆಗಳು ಹೊರಗೆ ವ್ಯಾಪಿಸುತ್ತವೆ. “ಪಕ್ಕದಲ್ಲಿರುವ ಎರಡು ಅಡ್ಡ ಎಳೆಗಳು ಪ್ರತ್ಯೇಕಿಸಲ್ಪಡುವಲ್ಲಿ—ಕೀಲಕವನ್ನು ಬೇರ್ಪಡಿಸಲು ಬಲು ಶಕ್ತಿ ಬೇಕು—ಗರಿಯನ್ನು ಬೆರಳ ತುದಿಗಳ ಮಧ್ಯೆ ಎಳೆಯುವುದರಿಂದ ಅವು ಒಡನೆ ಪುನಃ ಮುಚ್ಚುತ್ತವೆ” ಎಂದು ಇಂಟೆಗ್ರೇಟೆಡ್ ಪ್ರಿನ್ಸಿಪ್ಲ್ಸ್ ಆಫ್ ರೂಆಲಜಿ ಎಂಬ ವಿಜ್ಞಾನದ ಪಠ್ಯಪುಸ್ತಕ ತಿಳಿಸುತ್ತದೆ. “ಆದರೆ ಪಕ್ಷಿಯು ಇದನ್ನು ತನ್ನ ಕೊಕ್ಕಿನಿಂದ ಮಾಡುತ್ತದೆ.”
ಒಂದು ಗರಿಯನ್ನುಂಟುಮಾಡುವ ಕಾರ್ಯಸಾಧಕವಾದ ಇಂಥ ನೂರಾರು “ಝಿಪ್ಪರ್ಗಳು” ಆಕಸ್ಮಿಕವಾಗಿ ಬರಸಾಧ್ಯವಿದೆಯೆ? ಒಂದು ಪರೆ ಗರಿಯಾಗಿ ಬೆಳೆಯಿತು ಎಂಬುದಕ್ಕೆ ವಿಜ್ಞಾನಿಗಳಿಗೆ ಯಾವ ರುಜುವಾತಾದರೂ ಇದೆಯೆ? ಮೇಲೆ ಉಲ್ಲೇಖಿಸಿರುವ ಪುಸ್ತಕ ಒಪ್ಪಿಕೊಳ್ಳುವುದು: “ವಿಚಿತ್ರವಾಗಿ, ಆಧುನಿಕ ಪಕ್ಷಿಗಳಲ್ಲಿ ಪರೆ (ವಿಶೇಷವಾಗಿ ಅವುಗಳ ಪಾದಗಳಲ್ಲಿ) ಮತ್ತು ಗರಿ ಇವೆರಡೂ ಇರುವುದಾದರೂ, ಜೀವ್ಯವಶೇಷ ಮತ್ತು ಜೀವಿಸುವ ರೂಪಗಳಲ್ಲಿ ಇವೆರಡರ ಮಧ್ಯೆ ಯಾವ ಮಧ್ಯವರ್ತಿ ಹಂತವೂ ಕಂಡುಹಿಡಿಯಲ್ಪಟ್ಟಿರುವುದಿಲ್ಲ.”
ನಿಶ್ಚಯವಾಗಿ, ಈ ಗರಿಗಳು ನಿಪುಣ ಯಂತ್ರಶಿಲ್ಪಿಯಾಗಿದ್ದು ಅದೇ ಸಮಯದಲ್ಲಿ ಸುಂದರ ವರ್ಣಗಳ ಸಂಮಿಳನದಲ್ಲಿ ಪರಿಣತನೂ ಆಗಿರುವ ಒಬ್ಬಾತನಿಗೆ ಸಾಕ್ಷಿ ನೀಡುತ್ತವೆ. ಸತ್ಯ ದೇವರಾದ “ಯೆಹೋವನ ನಾಮವನ್ನು ಕೊಂಡಾಡುವ” ಜೀವಿಗಳಲ್ಲಿ ನಸು ನೇರಳೆ ಎದೆಯ ರೋಲರ್ನಂಥ “ಪಕ್ಷಿ”ಯನ್ನೂ ಸೇರಿಸಲಾಗಿದೆ.—ಕೀರ್ತನೆ 148:7; 10-13. (g90 10/22)
[ಪುಟ 32 ರಲ್ಲಿರುವ ಚಿತ್ರ ಕೃಪೆ]
National Parks Board of South Africa