ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಮಾನವ ಆಳಿಕೆ ಅದರ ಪರಮಾವಧಿಗೇರುತ್ತದೆ
ರಾಷ್ಟ್ರಾತೀತ ರಾಜಕೀಯ ಪದ್ಧತಿಗಳು: ರಾಷ್ಟ್ರೀಯ ಮೇರೆಗಳು, ಅಧಿಕಾರ, ಯಾ ಹಿತಗಳನ್ನು ಮೀರಿದ, ಸಾಮಾನ್ಯ ಗುರಿಗಳನ್ನು ಬೆನ್ನಟ್ಟುವ ಉದ್ದೇಶದಿಂದ ತಾತ್ಕಾಲಿಕವಾಗಲಿ, ಕಾಯಂ ಆಗಲಿ, ಮಾಡಲ್ಪಟ್ಟಿರುವ ಸಾಮ್ರಾಜ್ಯಗಳ, ಒಕ್ಕೂಟಗಳ, ಕೂಡಲುಗಳ ಅಥವಾ ರಾಷ್ಟ್ರ ಸರಕಾರಗಳ ಮಧ್ಯೆ ರಚಿಸಲ್ಪಟ್ಟಿರುವ ರಾಷ್ಟ್ರ ಸಮುದಾಯಗಳು.
ಅಕ್ಟೋಬರ್ 5, ಸಾ.ಶ.ಪೂ. 539ರಂದು ಬಾಬೆಲು ಉತ್ಸವ ಮನೋಸ್ಥಿತಿಯಲ್ಲಿರುವುದು ಕಂಡುಬಂತು. ಸರಕಾರದ ಒಂದು ಸಾವಿರ ಉನ್ನತ ಅಧಿಕಾರಿಗಳು ರಾಜ ಬೇಲ್ಶಚ್ಚರನ ಸಂಧ್ಯಾ ಆಮಂತ್ರಣವನ್ನು ಸ್ವೀಕರಿಸಿದ್ದರು. ಮುತ್ತಿ ಬಂದಿದ್ದ ಮೇದ್ಯಯ ಪಾರಸಿಯ ಪಡೆಗಳ ಬೆದರಿಕೆಯಿದ್ದರೂ, ಬೇಲ್ಶಚ್ಚರನೂ ಅವನ ಜೊತೆ ರಾಜಕಾರಣಿಗಳೂ ಇದರಿಂದ ಶಾಂತಿಭಂಗ ಹೊಂದಿರಲಿಲ್ಲ. ಹೇಗಿದ್ದರೂ ತಮ್ಮ ನಗರದ ಗೋಡೆಗಳು ಅಭೇದ್ಯವಾಗಿದ್ದುವು. ಒಡನೆ ಭಯಪಡಲು ಕಾರಣವೇ ಇದ್ದಿರಲಿಲ್ಲ.
ಆ ಬಳಿಕ, ಎಚ್ಚರಿಕೆಯ ಸೂಚನೆಯೇ ಇಲ್ಲದೆ, ಆ ಸಂತೋಷ ಸಮಾರಂಭದ ನಡುವೆ ದೇಹವಿಲ್ಲದ ಮಾನವ ಕೈಯೊಂದು ಅರಮನೆಯ ಗೋಡೆಯ ಮೇಲೆ ಈ ಅಶುಭಸೂಚಕ ಮಾತುಗಳನ್ನು ಬರೆಯಿತು: ಮೆನೇ, ಮೆನೇ, ತೆಕೇಲ್ ಮತ್ತು ಉಫರ್ಸಿನ್. ರಾಜನ ಮೊಣಗಾಲುಗಳು ನಡುಗಲಾರಂಭಿಸಿದುವು, ಮತ್ತು ಅವನು ಬಿಳಿಚಿಕೊಂಡನು.—ದಾನಿಯೇಲ 5:5, 6, 25.
ಇಸ್ರಾಯೇಲ್ಯನೂ, ಬೇಲ್ಶಚ್ಚರ ಮತ್ತು ಅವನ ರಾಜಕೀಯ ಸಹಚರರೂ ಯಾರನ್ನು ತಿರಸ್ಕರಿಸುತ್ತಿದ್ದರೋ ಆ ದೇವರ ಆರಾಧಕನೂ ಆಗಿದ್ದ ದಾನಿಯೇಲನನ್ನು ವಿವರಣೆಗಾಗಿ ಕರೆಯಲಾಯಿತು. “ಇದರ ಅರ್ಥವು ಹೀಗಿದೆ,” ಎಂದು ದಾನಿಯೇಲನು ಆರಂಭಿಸಿದನು. “ಮೆನೇ ಅಂದರೆ ದೇವರು ನಿನ್ನ ಆಳಿಕೆಯ ಕಾಲವನ್ನು ಲೆಕ್ಕಿಸಿ ಕೊನೆಗಾಣಿಸಿದ್ದಾನೆ; ತೆಕೇಲ್ ಅಂದರೆ ನೀನು ತಕ್ಕಡಿಯಲ್ಲಿ ತೂಗಲ್ಪಟ್ಟು ಕಡಿಮೆಯಾಗಿ ಕಂಡು ಬಂದಿದ್ದೀ; ಪೆರೇಸ್ ಅಂದರೆ ನಿನ್ನ ರಾಜ್ಯವು ಭಿನ್ನವಾಗಿ ಮೇದ್ಯಯರಿಗೂ ಪಾರಸಿಯರಿಗೂ ಕೊಡಲ್ಪಟ್ಟಿದೆ.” ಈ ಪ್ರವಾದನೆ ನಿಶ್ಚಯವಾಗಿ ಶುಭವನ್ನು ಮುನ್ಸೂಚಿಸಲಿಲ್ಲ. ಇದರ ನೆರವೇರಿಕೆಯಾಗಿ “ಅದೇ ರಾತ್ರಿಯಲ್ಲಿ ಕಸೀಯ್ದ ರಾಜನಾದ ಬೇಲ್ಶಚ್ಚರನು ಕೊಲ್ಲಲ್ಪಟ್ಟನು.”—ದಾನಿಯೇಲ 5:26-28, 30.
ಒಂದೇ ರಾತ್ರಿಯಲ್ಲಿ, ಮಾನವ ಆಳಿಕೆಯ ಒಂದು ರೂಪ ಇನ್ನೊಂದರಿಂದ ಭರ್ತಿಯಾಯಿತು! ಪ್ರಾಚ್ಯ ಯೂರೋಪಿನ ಇತ್ತೀಚಿನ ರಾಜಕೀಯ ಉತ್ಪವ್ಲನಗಳ ವೀಕ್ಷಣದಲ್ಲಿ, ಬೇಲ್ಶಚ್ಚರನಿಗೆ ಸಂಭವಿಸಿದುದರಲ್ಲಿ ನಮ್ಮ ದಿನಗಳಿಗೆ ಏನಾದರೂ ಅರ್ಥವಿದೆಯೆ ಎಂದು ನಾವು ಕುತೂಹಲ ತೋರಿಸಬಹುದು. ಇದು ಮಾನವಾಳಿಕೆಗೆ, ಅದರ ಪೂರ್ಣತೆಯಲ್ಲಿ, ಏನಾದರೂ ಮುನ್ನೆಚ್ಚರಿಕೆಯನ್ನು ಕೊಡುತ್ತದೆಯೆ? ಇದರ ಕುರಿತು ಗುರುತರವಾಗಿ ಯೋಚಿಸಲು ನಮಗೆ ಸಕಲ ಸಕಾರಣಗಳೂ ಇವೆ, ಏಕೆಂದರೆ ಕೊಲಂಬಿಯ ವಿಶ್ವವಿದ್ಯಾಲಯದ ಪ್ರೊಫೆಸರ್ ಷಾಕ್ ಬಾರ್ಸನ್ ಹೇಳುವುದು: “ಪೂರ್ತಿ ನಾಗರಿಕತೆಗಳು ನಿಶ್ಚಯವಾಗಿ ನಾಶವಾಗುತ್ತವೆ. ಗ್ರೀಸ್ ಮತ್ತು ರೋಮಿನ ಭೀಕರ ಅಂತ್ಯಗಳು ದಂತಕಥೆಯಲ್ಲ.”
ಮಾನವರು ಸಂಭಾವ್ಯವಾದ ಪ್ರತಿಯೊಂದು ಸರಕಾರವನ್ನೂ ಕಲ್ಪಿಸಿದ್ದಾರೆ. ಸಾವಿರಾರು ವರ್ಷಗಳ ಪರೀಕ್ಷಾ ಊಹೆಯಾದ ಬಳಿಕ, ಬಂದಿರುವ ಫಲಿತಾಂಶವೇನು? ಮಾನವಾಳಿಕೆ ತೃಪ್ತಿಕರವೆಂದು ತೋರಿ ಬಂದಿದೆಯೆ? ಮಾನವ ಕುಲದ ಹೆಚ್ಚುತ್ತಿರುವ ಸಮಸ್ಯೆಗಳಿಗೆ ಅದು ಪರಿಹಾರವನ್ನು ಒದಗಿಸಬಲ್ಲದೆ?
ವಚನಗಳು, ವಚನಗಳು!
ಭಾರತದ ಬಾಂಬೆಯ ಒಂದು ಅಗ್ರ ಸಂಶೋಧನ ಕೇಂದ್ರದ ಡೈರೆಕ್ಟರರಾದ ಬಕುಲ್ ರಜನಿ ಪಟೇಲ್ ಇದಕ್ಕೆ ಒಂದು ಅಂಶಿಕ ಉತ್ತರವನ್ನು ಕೊಡುತ್ತಾರೆ. ರಾಜಕಾರಣಿಗಳ ಮೇಲೆ “ಶುದ್ಧ ಕಪಟಾಚರಣೆ”ಯ ಆರೋಪವನ್ನು ಹೊರಿಸುತ್ತಾ ಅವರನ್ನುವುದು: “ಭಾರತ ಮತ್ತು ಇತರ ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿ ಮುಖಂಡರು ವೇದಿಕೆಗಳ ಮೇಲೆ ನಿಲ್ಲುತ್ತಾ ‘ವಿಕಾಸ’ ಮತ್ತು ‘ಪ್ರಗತಿ’ಯ ವಿಷಯದಲ್ಲಿ ಹುರಿದುಂಬಿಸುವ ಆಲಂಕಾರಿಕ ಭಾಷಣವನ್ನು ಮಾಡುವುದು ರೂಢಿ. ಯಾವ ವಿಕಾಸ ಮತ್ತು ಪ್ರಗತಿ? ನಾವು ಯಾರನ್ನು ವಂಚಿಸುತ್ತಿದ್ದೇವೆ? ತೃತೀಯ ಜಗತ್ತಿನ ಗಾಬರಿಗೊಳಿಸುವ ಸಂಖ್ಯಾಸಂಗ್ರಹಣವನ್ನು ನೋಡುವುದೇ ಸಾಕು: ಪ್ರತಿ ದಿವಸ 40,000 ಮಕ್ಕಳು ತಡೆಯಸಾಧ್ಯವಿರುವ ಕಾಯಿಲೆಗಳಿಂದ ಸಾಯುತ್ತಾರೆ.” ಕಡಮೆ ಪಕ್ಷ 8 ಕೋಟಿ ಮಕ್ಕಳು ನ್ಯೂನ ಪೋಷಿತರು ಅಥವಾ ಅವರು ಪ್ರತಿ ರಾತ್ರಿ ಹಸಿದು ಮಲಗುತ್ತಾರೆ.
‘ಆದರೆ ತುಸು ನಿಲ್ಲಿ,’ ಎಂದು ನೀವು ಆಕ್ಷೇಪಿಸಬಹುದು. ‘ರಾಜಕಾರಣಿಗಳು ಮಾಡುವ ಪ್ರಯತ್ನಕ್ಕಾದರೂ ಅವರಿಗೆ ಪ್ರಶಸ್ತಿ ಸಲ್ಲಿಸಿರಿ. ಲೋಕವನ್ನು ಎದುರಿಸುವ ಗುರುತರವಾದ ಸಮಸ್ಯೆಗಳು ಪರಿಹಾರವಾಗ ಬೇಕಾದರೆ ಯಾವುದಾದರೂ ಒಂದು ವಿಧದ ಸರಕಾರ ಅಗತ್ಯ.’ ಅದು ನಿಜ, ಆದರೆ ಪ್ರಶ್ನೆ ಏನಂದರೆ: ಅದು ಮಾನವ ನಿರ್ಮಿತ ಸರಕಾರವಾಗಿರಬೇಕೊ ಅಥವಾ ದೇವರಿಂದ ಮಾಡಿದ್ದಾಗಿರಬೇಕೊ?
ಇದನ್ನು ಮುಗ್ಧ ಪ್ರಶ್ನೆಯೆಂದು ತಿಳಿದು, ಅನೇಕರು ಯೋಚಿಸುವಂತೆ, ದೇವರು ಇದರಲ್ಲಿ ಸೇರಿಕೊಳ್ಳಲು ಆರಿಸಿಕೊಳ್ಳುವುದಿಲ್ಲವೆಂದು ಯೋಚಿಸಿ ಮನಸ್ಸಿಂದ ತೊಲಗಿಸಬೇಡಿರಿ. IIನೆಯ ಪೋಪ್ ಜಾನ್ ಸಹ, ದೇವರು ಇದನ್ನು ಮನುಷ್ಯರಿಗೆ, ತಮ್ಮಿಂದ ಸಾಧ್ಯವಾಗುವಷ್ಟು ಉತ್ತಮವಾಗಿ ಆಳುವಂತೆ ಬಿಟ್ಟು ಬಿಟ್ಟಿದ್ದಾನೆಂದು ಎಣಿಸುತ್ತಾರೆ. ಹತ್ತು ವರ್ಷಗಳ ಹಿಂದೆ ಕೆನ್ಯಕ್ಕೆ ಭೇಟಿ ಕೊಟ್ಟಾಗ ಅವರು ಹೇಳಿದ್ದು: “ಕ್ರೈಸ್ತನಿಗೆ ಒಂದು ಪ್ರಾಮುಖ್ಯ ಪಂಥಾಹ್ವಾನ ರಾಜಕೀಯ ಜೀವನದ್ದು.” ಅವರು ಮುಂದುವರಿಸಿದ್ದು: “ರಾಜ್ಯದಲ್ಲಿ ನಾಗರಿಕರಿಗೆ ರಾಜಕೀಯ ಜೀವನದಲ್ಲಿ ಪಾಲಿಗರಾಗುವ ಹಕ್ಕೂ ಕರ್ತವ್ಯವೂ ಇದೆ. . . . ವೈಯಕ್ತಿಕ ಕ್ರೈಸ್ತನು ಜೀವನದ ಈ ಕ್ಷೇತ್ರದಲ್ಲಿ ಸೇರಿಕೊಳ್ಳಬಾರದೆಂದು ನೆನಸುವುದು ತಪ್ಪು.”
ಈ ಊಹೆಯಂತೆ, ಮತ್ತು ಅನೇಕ ವೇಳೆ ಧರ್ಮದ ಬೆಂಬಲದಿಂದ, ಮುಂದುವರಿಯುವ ಮಾನವರು, ದೀರ್ಘಕಾಲದಿಂದ ಪರಿಪೂರ್ಣ ಸರಕಾರವೊಂದನ್ನು ಹುಡುಕಿದ್ದಾರೆ. ಪ್ರತಿಯೊಂದು ಹೊಸ ವಿಧದ ಸರಕಾರ ಮಹಾ ವಚನಗಳಿಂದ ಜೊತೆಗೂಡಿತ್ತು. ಆದರೆ ಅತ್ಯುತ್ತಮವಾಗಿ ಕೇಳಿಸುವ ವಚನಗಳೂ ಅವುಗಳನ್ನು ನೆರವೇರಿಸದೆ ಇರುವಲ್ಲಿ ಅಪಸರ್ವವಾಗುತ್ತವೆ. (17ನೆಯ ಪುಟದಲ್ಲಿ “ವಾಸ್ತವಿಕತೆಗಳಿಗೆ ಪ್ರತಿಯಾಗಿ ವಚನಗಳು” ನೋಡಿ.) ಮಾನವರು ಒಂದು ಆದರ್ಶ ಸರಕಾರವನ್ನು ಸಾಧಿಸಿಲ್ಲವೆಂಬುದು ಸ್ಪಷ್ಟ.
ಒಟ್ಟಾಗಿ ಕಟ್ಟುವುದು
ನ್ಯೂಕ್ಲಿಯರ್ ವಿಜ್ಞಾನಿ ಹ್ಯಾರಲ್ಡ್ ಯೂರಿ ಅವರಲ್ಲಿ ಇದಕ್ಕೆ ಉತ್ತರವಿತ್ತೊ? “ಅಂತಿಮವಾಗಿ ಇಡಿಯ ಭೂಮುಖದ ಮೇಲೆ ನಿಯಮವನ್ನು ಸ್ಥಾಪಿಸಲು ಸಮರ್ಥವಾಗಿರುವ ಜಾಗತಿಕ ಸರಕಾರದ ಹೊರತು ಇನ್ನಾವ ರಚನಾತ್ಮಕ ಪರಿಹಾರವೂ ಲೋಕದ ಸಮಸ್ಯೆಗಳಿಗಿಲ್ಲ,” ಎಂದು ಅವರು ವಾದಿಸಿದರು. ಆದರೆ ಇದು ಯಶಸ್ವಿಯಾಗುವುದೆಂದು ಎಲ್ಲರಿಗೂ ನಿಶ್ಚಯವಿಲ್ಲ. ಗತ ಕಾಲದಲ್ಲಿ ಅಂತಾರಾಷ್ಟ್ರೀಯ ಸಂಘಗಳ ಸದಸ್ಯರ ನಡುವೆ ಕಾರ್ಯಸಾಧಕ ಸಹಕಾರವು ಕಾರ್ಯತಃ ಅಲಭ್ಯವಾಗಿತ್ತು. ಒಂದು ಗಮನಾರ್ಹ ಉದಾಹರಣೆಯನ್ನು ಗಮನಿಸಿರಿ.
ಒಂದನೆಯ ಲೋಕ ಯುದ್ಧಾನಂತರ, ಜನವರಿ 16, 1920ರಲ್ಲಿ, 42 ದೇಶಗಳ ಸದಸ್ಯರಿದ್ದ ಜನಾಂಗ ಸಂಘವೆಂಬ ಒಂದು ರಾಷ್ಟ್ರಾತೀತ ಸಂಸ್ಥೆಯು ಸ್ಥಾಪಿಸಲ್ಪಟ್ಟಿತು. ಜಾಗತಿಕ ಸರಕಾರದಂತಿರುವ ರಚನೆ ಇದಕ್ಕಿರುವ ಬದಲಿಗೆ ಜಾಗತಿಕ ಪಾರ್ಲಿಮೆಂಟಾಗುವುದು ಇದರ ಉದ್ದೇಶವಾಗಿತ್ತು. ಲೋಕೈಕ್ಯವನ್ನು ಬೆಳೆಸಿ, ಮುಖ್ಯವಾಗಿ ಸರ್ವ ಸ್ವತಂತ್ರ ರಾಜ್ಯಗಳ ಮಧ್ಯೆ ವಿವಾದಗಳನ್ನು ಬಗೆಹರಿಸಿ, ಹೀಗೆ ಯುದ್ಧವನ್ನು ತಡೆಯಲಿಕ್ಕಾಗಿ ಇದನ್ನು ರಚಿಸಲಾಯಿತು. 1934ರೊಳಗೆ ಇದರ ಸದಸ್ಯತನ 58 ರಾಷ್ಟ್ರಗಳಿಗೇರಿತ್ತು.
ಆದರೆ ಇದರ ಸ್ಥಾಪನೆ ಅಸ್ಥಿರ ನೆಲದಲ್ಲಾಗಿತ್ತು. “ಒಂದನೆಯ ಲೋಕ ಯುದ್ಧ ಅಂತ್ಯವಾದದ್ದು ನಿರೀಕ್ಷಣೆಯ ಉನ್ನತ ಧ್ವನಿಯಲಿಯ್ಲಾದರೂ ತಪ್ಪು ತಿಳಿವಳಿಕೆಯ ಪ್ರಜ್ಞೆ ಬರಲು ಹೆಚ್ಚು ಕಾಲ ಹಿಡಿಯಲಿಲ್ಲ,” ಎಂದು ಕೊಲಂಬಿಯ ಹಿಸ್ಟರಿ ಆಫ್ ದ ವರ್ಲ್ಡ್ ವಿವರಿಸುತ್ತದೆ. “ಜನಾಂಗ ಸಂಘದ ಮೇಲೆ ಕೇಂದ್ರೀಕೃತವಾಗಿದ್ದ ಹಾರೈಕೆ ಭ್ರಾಂತಿಕಾರಕವಾಗಿ ಪರಿಣಮಿಸಿತು.”
ಸಪ್ಟಂಬರ 1, 1939ರಲ್ಲಿ IIನೆಯ ಜಾಗತಿಕ ಯುದ್ಧ ಆರಂಭಗೊಂಡಾಗ ಅದು ಈ ಸಂಘವನ್ನು ಕ್ರಿಯಾಹೀನತೆಯ ಕುಳಿಗೆ ನೂಕಿತು. ವಿಧಿ ವಿಹಿತವಾಗಿ ಅದು ಏಪ್ರಿಲ್ 18, 1946ರ ತನಕ ರದ್ದಾಗಿರದಿದ್ದರೂ, ಅದು ಬಹುತರವಾಗಿ, 20 ವಯಸ್ಸೂ ಆಗಿರದ “ಹದಿಹರೆಯದವನಾಗಿ” ಸತ್ತಿತು. ಅದನ್ನು ಅಧಿಕೃತವಾಗಿ ಹುಗಿಯುವ ಮೊದಲೇ ಅದರ ಸ್ಥಾನದಲ್ಲಿ ಇನ್ನೊಂದು ರಾಷ್ಟ್ರಾತೀತ ಸಂಘವು ಭರ್ತಿಯಾಗಿತ್ತು. ಇದು ಅಕ್ಟೋಬರ 24, 1945ರಲ್ಲಿ ರಚಿಸಲ್ಪಟ್ಟ, 51 ಸದಸ್ಯ ರಾಷ್ಟ್ರಗಳ ಸಂಯುಕ್ತ ರಾಷ್ಟ್ರ ಸಂಘ. ಈ ಹೊಸತಾದ ಒಟ್ಟಾಗಿ ಕಟ್ಟುವ ಪ್ರಯತ್ನ ಏನಾಗಲಿತ್ತು?
ಎರಡನೆಯ ಪ್ರಯತ್ನ
ಜನಾಂಗ ಸಂಘ ವಿಫಲಗೊಂಡದ್ದು ರಚನೆಯಲ್ಲಿ ಕುಂದು ಇದ್ದುದರಿಂದ ಎಂದು ಕೆಲವರು ಹೇಳುತ್ತಾರೆ. ಇನ್ನೊಂದು ವೀಕ್ಷಣವು, ಮುಖ್ಯ ಅಪವಾದವನ್ನು ಸಂಘದ ಮೇಲಲ್ಲ, ಅದಕ್ಕೆ ಸರಿಯಾದ ಬೆಂಬಲ ಕೊಡಲು ಪ್ರವೃತ್ತಿಯಿಲ್ಲದ ಒಂದೊಂದು ಸರಕಾರಗಳ ಮೇಲೆ ಹಾಕುತ್ತದೆ. ಇವೆರಡು ವೀಕ್ಷಣಗಳಲ್ಲಿಯೂ ತುಸು ಸತ್ಯವಿದೆಯೆಂಬುದು ನಿಸ್ಸಂಶಯ. ಹೇಗಿದ್ದರೂ, ಸಂಯುಕ್ತ ರಾಷ್ಟ್ರ ಸಂಘದ ಪ್ರವರ್ತಕರು ಜನಾಂಗ ಸಂಘದ ಅಸಾಮರ್ಥ್ಯದಿಂದ ಕಲಿಯಲು ಮತ್ತು ಆ ಸಂಘ ಪ್ರದರ್ಶಿಸಿದ್ದ ಕೆಲವು ಬಲಹೀನತೆಗಳನ್ನು ಬಗೆಹರಿಸಲು ಪ್ರಯತ್ನಿಸಿದರು.
ಲೇಖಕ ಆರ್. ಬಾಲ್ಡ್ವಿನ್ ಸಂಯುಕ್ತ ರಾಷ್ಟ್ರ ಸಂಘವನ್ನು “ಅದು ಶಾಂತಿಯ ಲೋಕ ಕ್ರಮ, ಸಹಕಾರ, ನಿಯಮ, ಮತ್ತು ಮಾನವ ಹಕ್ಕುಗಳನ್ನು ಸ್ಥಾಪಿಸಲು ಹಳೆಯ ಸಂಘಕ್ಕಿಂತ ಹೆಚ್ಚು ಶ್ರೇಷ್ಠವಾದುದು” ಎಂದು ಕರೆದರು. ಲೋಕಾರೋಗ್ಯ ಸಂಸ್ಥೆ (WHO), ಮಕ್ಕಳ ನಿಧಿ (UNICEF), ಮತ್ತು ಆಹಾರ ಮತ್ತು ವ್ಯವಸಾಯ ಸಂಸ್ಥೆ (FAO) ಯಂಥ ಅದರ ಕೆಲವು ವಿಶೇಷ ಕಾರ್ಯ ನಿಯೋಗಗಳು ತುಸು ಸಾಫಲ್ಯದಿಂದ ಪ್ರಶಂಸಾರ್ಹ ಗುರಿಗಳನ್ನು ಬೆನ್ನಟ್ಟಿವೆ ಎಂಬುದು ಖರೆ. ಈ ವಿಶ್ವ ಸಂಸ್ಥೆ ಈಗ 45 ವರ್ಷ ಕಾಲ, ಜನಾಂಗ ಸಂಘಕ್ಕಿಂತ ಇಮ್ಮಡಿ ಕಾಲ ಕಾರ್ಯನಡೆಯಿಸುವ ನಿಜತ್ವವು ಸಹ ಬಾಲ್ಡ್ವಿನ್ ಅವರು ಹೇಳಿದ್ದು ಸತ್ಯವೆಂದು ಸೂಚಿಸುವಂತೆ ಕಾಣುತ್ತದೆ.
ವಿಶ್ವ ಸಂಸ್ಥೆಯ ಒಂದು ದೊಡ್ಡ ಕಾರ್ಯ ಸಾಧಿಸುವಿಕೆಯು ವಸಾಹತುಗಳ ವಿಮೋಚನೆಯನ್ನು ತ್ವರಿತಗೊಳಿಸಿದ್ದೆ. ಪತ್ರಿಕೋದ್ಯೋಗಿ ರಿಚರ್ಡ್ ಐವರ್ ಎಂಬವರಿಗನುಸಾರ, ಇದನ್ನು ಅದು ಕಡಮೆ ಪಕ್ಷ “ಬೇರೆ ವಿಧಗಳಿಗಿಂತ ತುಸು ಹೆಚ್ಚು ಕ್ರಮಬದ್ಧವಾಗಿಯಾದರೂ” ಮಾಡಿತು. ಈ ಸಂಸ್ಥೆ “ಶೀತಲ ಯುದ್ಧವನ್ನು ಭಾಷಣ ಚಾತುರ್ಯದ ರಣರಂಗಕ್ಕೆ ಸೀಮಿತವಾಗಿರಿಸಲು ಸಹಾಯ ಮಾಡಿತು,” ಎಂದೂ ಅವರು ವಾದಿಸುತ್ತಾರೆ. ಅದು ಉತ್ಪಾದಿಸಲು ಸಹಾಯ ಮಾಡಿದ “ಭೂವ್ಯಾಪಕವಾದ ಆಚಾರಾರ್ಥಕ ಸಹಕಾರ”ಕ್ಕೂ ಅವರು ಅದನ್ನು ಪ್ರಶಂಸಿಸುತ್ತಾರೆ.
ವಿಶ್ವ ಸಂಸ್ಥೆಗಿಂತಲೂ ಹೆಚ್ಚು ನ್ಯೂಕ್ಲಿಯರ್ ಯುದ್ಧದ ಬೆದರಿಕೆಯೇ ಶೀತಲ ಯುದ್ಧ ಬೆಚ್ಚಗಾಗುವುದನ್ನು ತಡೆಯುವಂತೆ ಮಾಡಿದೆ ಎಂಬುದು ಕೆಲವರ ವಾದ. ತನ್ನ ಹೆಸರಿನಲ್ಲಿ ಒಳಗೊಂಡಿದ್ದ ರಾಷ್ಟ್ರಗಳನ್ನು ಐಕ್ಯಗೊಳಿಸುವ ಸಂಬಂಧದ ವಚನವನ್ನು ಇಟ್ಟುಕೊಳ್ಳುವ ಬದಲಿಗೆ ಈ ಸಂಸ್ಥೆ ಅನೇಕ ವೇಳೆ ಕೇವಲ ಮಧ್ಯಸ್ಥನಾಗಿರುವುದಕ್ಕಿಂತ, ಅನೈಕ್ಯವಾಗಿರುವ ರಾಷ್ಟ್ರಗಳು ಪರಸ್ಪರ ವಿನಾಶ ಮಾಡಿಕೊಳ್ಳುವುದನ್ನು ತಡೆಯಲು ಪ್ರಯತ್ನಿಸುವುದಕ್ಕಿಂತ ಹೆಚ್ಚೇನನ್ನೂ ಮಾಡಿರುವುದಿಲ್ಲವೆಂಬುದು ವಾಸ್ತವಿಕತೆಯಾಗಿದೆ. ಮತ್ತು ಈ ತೀರ್ಮಾನಕಾರನ ಪಾತ್ರದಲ್ಲಿಯೂ, ಅದು ಯಾವಾಗಲೂ ಯಶಸ್ವಿ ಹೊಂದಿದ್ದಿಲ್ಲ. ಲೇಖಕ ಬಾಲ್ಡ್ವಿನ್ ವಿವರಿಸುವಂತೆ, ಹಳೆಯ ಜನಾಂಗ ಸಂಘದಂತೆ, “ವಿಶ್ವ ಸಂಸ್ಥೆಯೂ ಆಪಾದಿತ ಸದಸ್ಯ ರಾಷ್ಟ್ರ ವಿನಯಶೀಲವಾಗಿ ಯಾವುದನ್ನು ಅನುಮತಿಸುತ್ತದೋ ಅದಕ್ಕಿಂತ ಹೆಚ್ಚಿನದನ್ನು ಮಾಡಲು ಶಕಿಹ್ತೀನವಾಗಿದೆ.”
ವಿಶ್ವ ಸಂಸ್ಥೆಯ ಸದಸ್ಯರ ಈ ಪೂರ್ಣ ಹೃದಯಕ್ಕಿಂತ ಕಡಮೆಯ ಬೆಂಬಲವು ಕೆಲವು ಸಲ ಸಂಸ್ಥೆಯು ಕೆಲಸ ಮಾಡುವಂತೆ ಹಣವನ್ನು ಒದಗಿಸುವುದರಲ್ಲಿ ತಮಗಿರುವ ಅನಿಚ್ಫೆಯಲ್ಲಿ ಪ್ರತಿಬಿಂಬಿತವಾಗುತ್ತದೆ. ಉದಾಹರಣೆಗೆ, ಒಂದು ಠರಾವು ಇಸ್ರಾಯೇಲನ್ನು ಟೀಕೆ ಮಾಡಿ ಪ್ಯಾಲೆಸ್ಟೈನ್ ಜನರ ಪರವಾಗಿ ಇತ್ತೆಂದು ಎಣಿಸಿದರ್ದಿಂದ ಅಮೆರಿಕ ಆಹಾರ ಮತ್ತು ವ್ಯವಸಾಯ ಸಂಸ್ಥೆಗೆ ತಾನು ಕೊಡಲಿದ್ದ ಹಣವನ್ನು ಹಿಡಿದಿಟ್ಟಿತು. ಆ ಬಳಿಕ, ವಿಶ್ವ ಸಂಸ್ಥೆಯ ಈ ದೊಡ್ಡ ಹಣದ ಬೆಂಬಲಕಾರನು ತನ್ನ ವೋಟನ್ನು ಉಳಿಸಿಕೊಳ್ಳಲು ಸಾಕಾಗುವಷ್ಟನ್ನು ಮಾತ್ರ ಕೊಡಲು ಒಪ್ಪಿ ಸಾಲದಲ್ಲಿ ಮೂರರಲ್ಲಿ ಎರಡಂಶಕ್ಕೂ ಹೆಚ್ಚಿನದನ್ನು ಕೊಡದೆ ಉಳಿಸಿತು.
ಯೂನಿಸೆಫ್ ಸಂಸ್ಥೆಯ ಮಾಜಿ ಡೆಪ್ಯೂಟಿ ಡೈರೆಕ್ಟರ್ ವರೀಂದ್ರ ಟಾರ್ಸಿ ವಿಟ್ಟಾಚಿ 1988ರಲ್ಲಿ ತಾನು ಯಾರು ವಿಶ್ವ ಸಂಸ್ಥೆಯನ್ನು ಅಂಗೀಕರಿಸುವುದಿಲ್ಲವೊ ಅಂಥ “ಸಾಮಾನ್ಯ ‘ಲಿಂಚ್’ ನ್ಯಾಯದ ಪಂಗಡವನ್ನು ಸೇರಲು” ನಿರಾಕರಿಸುತ್ತೇನೆಂದು ಹೇಳಿದರು. ತನ್ನನ್ನು “ಕರ್ತವ್ಯನಿಷ್ಠ ಟೀಕಾಕಾರ”ನೆಂದು ಕರೆದರೂ ಅವರು, “ವಿಶ್ವ ಸಂಸ್ಥೆಯು ‘ನಂದಿ ಹೋದ ಬೆಳಕು,’ ಅದು ತನ್ನ ಸ್ವಂತ ಉನ್ನತ ಆದರ್ಶಗಳಿಗೆ ಅನುಸಾರವಾಗಿ ನಡೆದಿರುವುದಿಲ್ಲ, ಅದು ತನ್ನ ಶಾಂತಿ ಕಾಪಾಡುವ ಕೆಲಸವನ್ನು ಮಾಡಲು ಅಸಮರ್ಥವಾಗಿದೆ ಮತ್ತು ಅದರ ವಿಕಾಸ ಏಜನ್ಸಿಗಳು, ಕೆಲವು ಉದಾತ್ತ ಏಜನ್ಸಿಗಳನ್ನು ಬಿಟ್ಟು, ತಮ್ಮ ಅಸ್ತಿತ್ವವನ್ನು ನ್ಯಾಯೀಕರಿಸಿರುವುದಿಲ್ಲ” ಎಂದು ಹೇಳುವ ಜನರಿಂದ ವ್ಯಾಪಕವಾದ ಆಕ್ರಮಣಕ್ಕೊಳಗಾಗಿದೆ ಎಂದು ಒಪ್ಪಿಕೊಳ್ಳುತ್ತಾರೆ.
ವಿಶ್ವ ಸಂಸ್ಥೆಯ ಮುಖ್ಯ ಬಲಹೀನತೆಯನ್ನು ಲೇಖಕ ಐವರ್ ಹೀಗೆ ಬರೆಯುತ್ತಾ ತೋರಿಸುತ್ತಾರೆ: “ವಿಶ್ವ ಸಂಸ್ಥೆ ಏನೇ ಮಾಡಬಲ್ಲದಾದರೂ, ಪಾಪವನ್ನು ರದ್ದು ಮಾಡದು. ಆದರೆ ಅದು ಅಂತಾರಾಷ್ಟ್ರೀಯವಾಗಿ ಪಾಪ ಮಾಡುವುದನ್ನು ಹೆಚ್ಚು ಕಷ್ಟಕರವಾಗಿಯೂ ಪಾಪಿಯನ್ನು ಹೆಚ್ಚು ಹೊಣೆಗಾರನಾಗಿಯೂ ಮಾಡಬಲ್ಲದು. ಆದರೆ ದೇಶಗಳನ್ನು ನಡೆಯಿಸುವವರ ಮತ್ತು ದೇಶಗಳನ್ನು ನಿರ್ಮಿಸುವ ಜನರ ಹೃದ ಮನಗಳನ್ನು ಅದು ಬದಲಾಯಿಸುವುದರಲ್ಲಿ ಇನ್ನೂ ಸಾಫಲ್ಯ ಹೊಂದಿರುವುದಿಲ್ಲ.”—ಒತ್ತು ನಮ್ಮದು.
ಹೀಗೆ, ವಿಶ್ವ ಸಂಸ್ಥೆಯ ದೋಷ ಮಾನವಾಳಿಕೆಯ ಸಕಲ ರೀತಿಗಳಲ್ಲಿರುವ ದೋಷವೇ. ಇವುಗಳಲ್ಲಿ ಒಂದೂ, ಯಶಸ್ಸಿಗೆ ಪೂರ್ವಾಪೇಕ್ಷಿತವಾಗಿರುವ ಸಮರ್ಪಕವಾಗಿರುವುದಕ್ಕೆ ನಿಸ್ವಾರ್ಥ ಪ್ರೀತಿ, ತಪ್ಪನ್ನು ಹಗೆ ಮಾಡುವುದು, ಮತ್ತು ಅಧಿಕಾರಕ್ಕೆ ತೋರಿಸಬೇಕಾದ ಗೌರವವನ್ನು ಮನಸ್ಸಿನಲ್ಲಿ ತುಂಬಲು ಶಕವ್ತಾಗಿರುವುದಿಲ್ಲ. ಜನರು ನೀತಿಯ ಮೂಲಸೂತ್ರಗಳಿಂದ ನಡೆಯಿಸಲ್ಪಡಲು ಅಪೇಕ್ಷಿಸುತ್ತಿದ್ದರೆ ಎಷ್ಟು ಭೂಗೋಲಿಕ ಸಮಸ್ಯೆಗಳು ಕಡಮೆಯಾಗುತ್ತಿದ್ದುವೆಂದು ಯೋಚಿಸಿರಿ! ದೃಷ್ಟಾಂತಕ್ಕೆ, ಮಾಲಿನ್ಯದ ವಿಷಯದಲ್ಲಿ ಆಸ್ಟ್ರೇಲಿಯದ ಒಂದು ವೃತ್ತ ವರದಿ, ಸಮಸ್ಯೆ ಇರುವುದು, “ಅಜ್ಞಾನದ ಕಾರಣದಿಂದಲ್ಲ, ಮನೋಭಾವದ ಕಾರಣವೇ” ಎಂದು ಹೇಳುತ್ತದೆ. ಲೋಭವನ್ನು ಒಂದು ತಳಹದಿಯ ಕಾರಣವೆಂದು ಕರೆಯುತ್ತಾ ಲೇಖನವು, “ಸರಕಾರದ ಕಾರ್ಯನೀತಿ ಸಮಸ್ಯೆಯನ್ನು ಉದ್ರೇಕಿಸಿದೆ” ಎಂದು ಹೇಳುತ್ತದೆ.
ಅಪೂರ್ಣ ಮಾನವರು ಪರಿಪೂರ್ಣ ಸರಕಾರಗಳನ್ನು ನಿರ್ಮಿಸ ಶಕ್ತರಲ್ಲ. ಲೇಖಕ ಥಾಮಸ್ ಕಾರ್ಲೈಲ್ 1843ರಲ್ಲಿ ಗಮನಿಸಿದಂತೆ: “ಕಟ್ಟಕಡೆಯಲ್ಲಿ ಪ್ರತಿಯೊಂದು ಸರಕಾರವೂ ಅದರಲ್ಲಿರುವ ಜನರ, ಅವರ ವಿವೇಕ ಮತ್ತು ಅವಿವೇಕಗಳೊಂದಿಗಿನ ನಿಷ್ಕೃಷ್ಟ ದ್ಯೋತಕವಾಗಿದೆ.” ಇಂಥ ವಾದ ಸರಣಿಗೆ ಎದುರಾಗಿ ಯಾರು ವಾದಿಸಬಲ್ಲರು?
“ಪುಡಿ ಪುಡಿಯಾಗಿರಿ!”
ಈಗ, ಇಪ್ಪತ್ತನೆಯ ಶತಮಾನದಲ್ಲಿ ಮಾನವಾಳಿಕೆಯು ಪರಮಾವಧಿಗೆ ಮುಟ್ಟಿದೆ. ಮಾನವ ಸರಕಾರಗಳು ದೈವಿಕಾಳಿಕೆಯ ವಿರುದ್ಧ ಎಂದೂ ಅಸ್ತಿತ್ವದಲ್ಲಿ ಇದ್ದಿರದಷ್ಟು ಅತಿ ಧೃಷ್ಟ ಹಾಗೂ ಪ್ರತಿಭಟನೆಯ ಒಳಸಂಚನ್ನು ಮಾಡಲು ಯೋಜಿಸಿವೆ. (ಯೆಶಾಯ 8:11-13 ಹೋಲಿಸಿ.) ಅವರು ಒಮ್ಮೆಯಲ್ಲ, ಎರಡಾವರ್ತಿ, ಮೊದಲು ಜನಾಂಗ ಸಂಘವನ್ನು ನಿರ್ಮಿಸಿ, ಆ ಬಳಿಕ ಸಂಯುಕ್ತ ರಾಷ್ಟ್ರ ಸಂಘವನ್ನು ರಚಿಸಿ ಹೀಗೆ ಮಾಡಿವೆ. ಇದರ ಫಲಿತಾಂಶವನ್ನು ಪ್ರಕಟನೆ 13:14, 15 “[ಕಾಡು] ಮೃಗದ ವಿಗ್ರಹ”ವೆಂದು ಕರೆಯುತ್ತದೆ. ಇದು ಯೋಗ್ಯ ಏಕೆಂದರೆ ಇದು ಭೂಮಿಯ ಮೇಲಿರುವ ಸಕಲ ಮಾನವ ರಾಜಕೀಯ ವಿಷಯಗಳ ವ್ಯವಸ್ಥೆಯ ಪ್ರತಿಮೆಯಾಗಿದೆ. ಕಾಡು ಮೃಗದಂತೆಯೆ, ಈ ರಾಜಕೀಯ ವ್ಯವಸ್ಥೆಯ ಘಟಕಾಂಶಗಳು ಭೂನಿವಾಸಿಗಳನ್ನು ಸುಲಿಗೆ ಮಾಡಿ ಅಗಣಿತ ದುರವಸ್ಥೆಯನ್ನು ಉಂಟುಮಾಡಿವೆ.
ಜನಾಂಗ ಸಂಘ 1939ರಲ್ಲಿ ಅಪಜಯದಲ್ಲಿ ಅಂತ್ಯಗೊಂಡಿತು. ಇದೇ ಗತಿ, ಬೈಬಲ್ ಪ್ರವಾದನೆಯ ನೆರವೇರಿಕೆಯಾಗಿ ವಿಶ್ವ ಸಂಸ್ಥೆಗೂ ಕಾದಿದೆ: “ನಡು ಕಟ್ಟಿಕೊಳ್ಳಿರಿ, ಮತ್ತು ಪುಡಿ ಪುಡಿಯಾಗಿರಿ! ನಡು ಕಟ್ಟಿಕೊಳ್ಳಿರಿ, ಮತ್ತು ಪುಡಿ ಪುಡಿಯಾಗಿರಿ! ಒಂದು ಕೂಟೋಪಾಯವನ್ನು ಮಾಡಿರಿ, ಮತ್ತು ಅದು ಮುರಿಯಲ್ಪಡುವುದು!”—ಯೆಶಾಯ 8:9, 10, NW.
ಈ “ಮೃಗದ ವಿಗ್ರಹ” ಮತ್ತು ಅದು ಪ್ರತಿಬಿಂಬಿಸುವ ಮಾನವಾಳಿಕೆಯ ಪದ್ಧತಿಯ ಪುಡಿ ಪುಡಿಯಾಗುವಿಕೆ ಯಾವಾಗ ಸಂಭವಿಸುವುದು? ಯೆಹೋವನ ಪರಮಾಧಿಕಾರವನ್ನು ಆಹ್ವಾನಕ್ಕೊಳಪಡಿಸುವ ಮಾನವಾಳಿಕೆಯನ್ನು ಯೆಹೋವನು ಯಾವಾಗ ಅಂತ್ಯಗೊಳಿಸುವನು? ಬೈಬಲು ಯಾವ ನಿಶ್ಚಿತ ತೇದಿಯನ್ನು ಕೊಡುವುದಿಲ್ಲವಾದರೂ ಬೈಬಲಿನ ಪ್ರವಾದನೆ ಹಾಗೂ ಲೋಕ ಸಂಭವಗಳು, ‘ಬಲು ಬೇಗನೆ’ ಎಂದು ಹೇಳುತ್ತವೆ.—ಲೂಕ 21:25-32.
ಯಾರಿಗೆ ನೋಡಲು ಮನಸ್ಸಿದೆಯೊ ಅವರೆಲ್ಲರು ನೋಡುವಂತೆ ಗೋಡೆಯ ಮೇಲೆ ವಿನಾಶ ಕಾಲವು ಬರೆಯಲ್ಪಟ್ಟಿದೆ. ಬೇಲ್ಶಚ್ಚರನ ರಾಜ್ಯವು ಹೇಗೆ ತಕ್ಕಡಿಗಳಲ್ಲಿ ತೂಗಲ್ಪಟ್ಟು ಕೊರತೆಯುಳ್ಳದ್ದೆಂದು ಕಂಡುಬಂದದ್ದು ನಿಶ್ಚಯವೋ, ಅಷ್ಟೇ ನಿಶ್ಚಯವಾಗಿ ಪೂರ್ತಿ ಮಾನವಾಳಿಕೆಯನ್ನು ನ್ಯಾಯ ವಿಚಾರಣೆ ಮಾಡಲಾಗಿ ಕೊರತೆಯದ್ದೆಂದು ಕಂಡುಹಿಡಿಯಲಾಗಿದೆ. ಅದು ರಾಜಕೀಯ ಭ್ರಷ್ಟಾಚಾರವನ್ನು ಸಹಿಸಿಕೊಂಡು, ಯುದ್ಧಗಳನ್ನು ಉದ್ರೇಕಿಸಿ, ಸಕಲ ವಿಧವಾದ ಕಪಟಾಚರಣೆಯನ್ನು ಮತ್ತು ಸ್ವಾರ್ಥವನ್ನು ಬೆಳೆಯಿಸಿ, ತನ್ನ ಬೆಂಬಲಿಗರಿಗೆ ಸಾಕಷ್ಟು ವಸತಿ, ಆಹಾರ, ವಿದ್ಯೆ, ಮತ್ತು ವೈದ್ಯಕೀಯ ಪರಾಮರಿಕೆಯನ್ನು ಕೊಡುವುದನ್ನು ಅಸಡ್ಡೆ ಮಾಡಿದೆ.
ಮಾನವಾಳಿಕೆ ದಾಟಿ ಹೋಗುವಾಗ, ಒಂದು ರಾತ್ರಿಯಲ್ಲಿಯೋ ಎಂಬಂತೆ ದಾಟಿಹೋಗುವುದು. ಇಂದು ಇಲ್ಲಿದೆ, ನಾಳೆ ಇಲ್ಲದೆ ಹೋಗುವುದು—ಕಟ್ಟ ಕಡೆಗೆ ಪರಿಪೂರ್ಣ ಸರಕಾರವಾದ ದೇವರ ರಾಜ್ಯವು ಅದರ ಸ್ಥಾನದಲ್ಲಿ ನಿಂತಿರುವುದು! (g90 12/8)
[ಪುಟ 17ರಲ್ಲಿರುವಚೌಕ]
ವಚನಗಳಿಗೆ ಪ್ರತಿಯಾಗಿ ವಾಸ್ತವಿಕತೆಗಳು
ಅರಾಜಕತೆಯು ಅಮಿತವಾದ, ಸಂಪೂರ್ಣ ಸ್ವಾತಂತ್ರ್ಯವನ್ನು ವಾಗ್ದಾನಿಸುತ್ತದೆ; ನಿಜತ್ವವೇನಂದರೆ, ಸರಕಾರವಿಲ್ಲದಿದ್ದರೆ ವ್ಯಕ್ತಿಗಳು ಪರಸ್ಪರ ಪ್ರಯೋಜನಕ್ಕಾಗಿ ಸಹಕರಿಸಬಲ್ಲ ನಿಯಮಗಳ ಯಾ ಮೂಲಸೂತ್ರಗಳ ಚೌಕಟ್ಟೇ ಇರುವುದಿಲ್ಲ; ಅಮಿತ ಸ್ವಾತಂತ್ರ್ಯವು ಅವ್ಯವಸ್ಥೆಯನ್ನು ಫಲಿಸುತ್ತದೆ.
ರಾಜ ಪ್ರಭುತ್ವಗಳು ಒಬ್ಬನೇ ಪ್ರಭುವಿನ ಆಳಿಕೆಯ ಕೆಳಗೆ ಸ್ಥಿರತೆ ಮತ್ತು ಐಕ್ಯವನ್ನು ವಾಗ್ದಾನಿಸುತ್ತವೆ; ವಾಸ್ತವವೇನಂದರೆ, ಮಿತಜ್ಞಾನವಿರುವ ಮಾನವ ಪ್ರಭುಗಳು, ಮಾನವ ಅಪೂರ್ಣತೆ ಮತ್ತು ಬಲಹೀನತೆಗಳಿಂದ ಅಡಚಣೆಗೊಳಗಾಗಿ, ಪ್ರಾಯಶಃ ದುರುದ್ದೇಶಗಳಿಂದಲೂ ಪ್ರೇರಿಸಲ್ಪಟ್ಟವರಾಗಿ ಮರ್ತ್ಯರಾಗಿದ್ದಾರೆ; ಈ ಕಾರಣದಿಂದ ಇರಬಹುದಾದ ಸ್ಥಿರತೆ ಮತ್ತು ಏಕತೆಗಳು ಅಲ್ಪಕಾಲಿಕವಾಗುತ್ತವೆ.
ಶ್ರೀಮಂತ ಪ್ರಭುತ್ವಗಳು ಪ್ರಭುಗಳಲ್ಲಿ ಸರ್ವೋತ್ತಮರನ್ನು ಒದಗಿಸುವ ವಚನವನ್ನು ಕೊಡುತ್ತವೆ; ವಾಸ್ತವವೇನಂದರೆ ಅವರು ಆಳುವುದು ಐಶ್ವರ್ಯ, ಒಂದು ನಿರ್ದಿಷ್ಟ ವಂಶಕ್ರಮ, ಯಾ ಬಲದ ಕಾರಣವೇ ಹೊರತು ವಿವೇಕ, ಒಳನೋಟ, ಯಾ ಇತರರ ಮೇಲಿನ ಪ್ರೀತಿ ಮತ್ತು ಚಿಂತೆಯ ಕಾರಣದಿಂದ ಆಗಿರಲಿಕ್ಕಿಲ್ಲ; ರಾಜ ಪ್ರಭುತ್ವದ ಅಸಮರ್ಥ ಪ್ರಭುವಿನ ಸ್ಥಾನವನ್ನು ಗಣ್ಯತೆಯ ಶ್ರೀಮಂತ ಪ್ರಭುತ್ವದ ಹಲವು ಪ್ರಭುಗಳು ಭರ್ತಿ ಮಾಡುತ್ತಾರೆ.
ಪ್ರಜಾಪ್ರಭುತ್ವಗಳು ಜನರೆಲ್ಲರು ಸರ್ವರ ಪ್ರಯೋಜನಾರ್ಥವಾಗಿ ನಿರ್ಣಯಿಸಬಹುದೆಂದು ವಚನ ಕೊಡುತ್ತವೆ. ವಾಸ್ತವಿಕತೆಯೇನಂದರೆ ಸಾಮಾನ್ಯ ಹಿತಕ್ಕಾಗಿ ಸುಸಂಗತವಾಗಿ ಸಮರ್ಪಕವಾದ ನಿರ್ಣಯಗಳನ್ನು ಮಾಡಲು ಅವಶ್ಯವಾದ ಜ್ಞಾನ ಮತ್ತು ನಿರ್ಮಲವಾದ ಪ್ರೇರಕ ಶಕ್ತಿ—ಇವೆರಡೂ ನಾಗರಿಕರಿಗಿರುವುದಿಲ್ಲ; ಪ್ರಜಾಪ್ರಭುತ್ವವನ್ನು ಪ್ಲೇಟೊ, “ವೈವಿಧ್ಯ ಮತ್ತು ಅವ್ಯವಸ್ಥೆಗಳು ತುಂಬಿದ, ಸಮಾನರಿಗೂ ಅಸಮಾನರಿಗೂ ಒಂದು ತೆರದ ಸಮಾನತೆಯನ್ನು ಹಂಚುವ ಮನಮೋಹಕ ರೀತಿಯ ಸರಕಾರ”ವೆಂದು ವರ್ಣಿಸಿದ್ದಾನೆ.
ಸ್ವಯಂ ಪ್ರಭುತ್ವಗಳು ತಾವು ಕಾರ್ಯ ನಡೆಸುತ್ತೇವೆಂದೂ ಅನುಚಿತ ವಿಳಂಬವಿಲ್ಲದೆ ಅದನ್ನು ಮಾಡಿ ಮುಗಿಸುತ್ತೇವೆಂದೂ ವಾಗ್ದಾನಿಸುತ್ತವೆ; ವಾಸ್ತವವೇನಂದರೆ, ಪತ್ರಿಕೋದ್ಯೋಗಿ ಆಟೊ ಫ್ರೀಡ್ರಿಕ್ ಬರೆಯುವಂತೆ, “ಸದುದ್ದೇಶವುಳ್ಳ ಪುರುಷರು ಸಹ, ಒಮ್ಮೆ ಅಧಿಕಾರದ ರಾಜಕೀಯ ಕಾಡಿನೊಳಗೆ ಪ್ರವೇಶಿಸಿದಾಗ, ತಾವು ಸಾಮಾನ್ಯ ಪರಿಸ್ಥಿತಿಗಳಲ್ಲಿ ಅನೈತಿಕವೆಂದು ಕರೆಯುವ ವರ್ತನೆಗಳಿಗೆ ತೊಡಗುವ ಆವಶ್ಯಕತೆಯನ್ನು ಎದುರಿಸುತ್ತಾರೆ.” ಹೀಗೆ “ಉತ್ತಮ” ಸ್ವಯಂ ಪ್ರಭುಗಳು ವೈಯಕ್ತಿಕ ಹೆಬ್ಬಯಕೆ ಯಾ ಅನುಕೂಲ್ಯದ ಬಲಿಪೀಠದ ಮೇಲೆ ತಮ್ಮ ಪೌರರ ಆವಶ್ಯಕತೆಗಳನ್ನು ಬಲಿ ಕೊಡುವ ಅಧಿಕಾರಪ್ರೇರಿತ ಪ್ರಭುಗಳಾಗಿ ಪರಿವರ್ತನೆ ಹೊಂದುತ್ತಾರೆ.
ಫ್ಯಾಸಿಸ್ಟ್ ಸರಕಾರಗಳು ಸಾಮಾನ್ಯ ಹಿತಕ್ಕಾಗಿ ಆರ್ಥಿಕತೆಯನ್ನು ನಿಯಂತ್ರಿಸುವ ವಚನವನ್ನು ಕೊಡುತ್ತವೆ; ನಿಜತ್ವವೇನಂದರೆ, ಅವು ಅದನ್ನು ಅಸಫಲವಾಗಿ ಮತ್ತು ವ್ಯಕ್ತಿಗತ ಸ್ವಾತಂತ್ರ್ಯದ ಬೆಲೆ ತೆತ್ತು ಮಾಡುತ್ತವೆ; ಯುದ್ಧ ಮತ್ತು ರಾಷ್ಟ್ರೀಯತೆಯನ್ನು ಕೊಂಡಾಡಿ, ಅವು ಮುಸೊಲೀನಿಯ ಕೆಳಗಿದ್ದ ಇಟಲಿ ಮತ್ತು ಹಿಟ್ಲರನ ಕೆಳಗಿದ್ದ ಜರ್ಮನಿಯಂಥ ರಾಜಕೀಯ ರಾಕ್ಷಸ ರಾಷ್ಟ್ರಗಳನ್ನು ನಿರ್ಮಿಸುತ್ತವೆ.
ಕಾಮ್ಯೂನಿಸ್ಟ್ ಸರಕಾರಗಳು ಆದರ್ಶವಾದ, ವರ್ಗರಹಿತ, ನಾಗರಿಕರು ನಿಯಮದ ಮುಂದೆ ಪೂರ್ಣ ಸಮಾನತೆಯನ್ನು ಅನುಭವಿಸುವ ಸಮಾಜವನ್ನು ಸೃಷ್ಟಿಸುತ್ತೇವೆಂದು ವಾಗ್ದಾನಿಸುತ್ತವೆ; ವಾಸ್ತವವೇನಂದರೆ ವರ್ಗಗಳು ಮತ್ತು ಅಸಮಾನತೆಗಳು ಇನ್ನೂ ಅಸ್ತಿತ್ವದಲ್ಲಿವೆ ಮತ್ತು ಭ್ರಷ್ಟ ರಾಜಕಾರಣಿಗಳು ಜನಸಾಮಾನ್ಯರನ್ನು ಸುಲಿಯುತ್ತಾರೆ; ಇದರ ಫಲಿತಾಂಶವು ಕಾಮ್ಯೂನಿಸ್ಟ್ ತತ್ವಗಳ ವ್ಯಾಪಕ ನಿರಾಕರಣೆಯೆ. ಅದರ ಪ್ರಬಲ ಸ್ಥಾನಗಳು ರಾಷ್ಟ್ರವಾದಿ ಮತ್ತು ಪ್ರತ್ಯೇಕವಾದಿ ಚಳವಳಿಗಳಿಂದ ಮುರಿಯಲ್ಪಡುತ್ತಿವೆ.
[ಪುಟ 17ರಲ್ಲಿರುವಚೌಕ]
ಸಂಯುಕ್ತ ರಾಷ್ಟ್ರ ಸಂಘದ ವಿಷಯದಲ್ಲಿ
▪ ವಿಶ್ವ ಸಂಸ್ಥೆಯಲ್ಲಿ ಈಗ 160 ಸದಸ್ಯರಿದ್ದಾರೆ. ಇನ್ನೂ ಸೇರದಿರುವ ಗಾತ್ರದ ದೇಶಗಳೆಂದರೆ ಎರಡು ಕೊರಿಯಗಳು ಮತ್ತು ಸ್ವಿಟ್ಸರ್ಲೆಂಡ್; ಮಾರ್ಚ್ 1986ರಲ್ಲಿ ನಡೆದ ಸ್ವಿಸ್ ಜನಾಭಿಪ್ರಾಯ ಮೂರಕ್ಕೆ ಒಂದರ ಪ್ರಮಾಣದಲ್ಲಿ ಸದಸ್ಯತನವನ್ನು ತಳ್ಳಿಹಾಕಿತು.
▪ ಮುಖ್ಯ ಸಂಘವನ್ನಲ್ಲದೆ, ಅದು 55 ಇನ್ನಿತರ ಸಂಘಗಳನ್ನು, ವಿಶೇಷ ಏಜನ್ಸಿಗಳನ್ನು, ಮಾನವ ಹಕ್ಕಿನ ಕಮಿಷನ್ಗಳನ್ನು, ಮತ್ತು ಶಾಂತಿ ಕಾಪಾಡುವ ಕೆಲಸಗಳನ್ನು ನಿರ್ವಹಿಸುತ್ತದೆ.
▪ ಜನರಲ್ ಎಸೆಂಬಿಯ್ಲಲ್ಲಿ ಪ್ರತಿ ರಾಷ್ಟ್ರಕ್ಕೆ ಒಂದು ಮತವಿದೆ. ಆದರೆ ಹೆಚ್ಚು ಜನಸಂಖ್ಯೆಯ ರಾಷ್ಟ್ರವಾದ ಚೈನದಲ್ಲಿ ಅತಿ ಕಡಮೆ ಜನಸಂಖ್ಯೆಯ ಸದಸ್ಯರಾಷ್ಟ್ರ ಸೆಂಟ್ ಕಿಟ್ಸ್ ಆ್ಯಂಡ್ ನೆವಿಸ್ನ ಪ್ರತಿಯೊಬ್ಬ ನಿವಾಸಿಗೆ ಸುಮಾರು 22,000ರಂತೆ ನಿವಾಸಿಗಳಿದ್ದಾರೆ.
▪ ವಿಶ್ವ ಸಂಸ್ಥೆಯ 1986ರ ಅಂತಾರಾಷ್ಟ್ರೀಯ ಶಾಂತಿ ವರ್ಷದ ಆಚರಣೆಯ ಸಮಯದಲ್ಲಿ, ಲೋಕದಲ್ಲಿ 37 ಸಶಸ್ತ್ರ ಹೋರಾಟಗಳು ನಡೆದುವು. IIನೆಯ ಲೋಕಯುದ್ಧ ಮುಗಿದ ಬಳಿಕ ಯಾವ ಸಮಯದಲ್ಲಿಯೂ ನಡೆದ ಯುದ್ಧಗಳ ಸಂಖ್ಯೆಗಿಂತ ಇದು ಹೆಚ್ಚಾಗಿತ್ತು.
▪ ವಿಶ್ವ ಸಂಸ್ಥೆಯ ಎಲ್ಲ ಸದಸ್ಯ ರಾಷ್ಟ್ರಗಳನ್ನು ಹಿಡಿದರೆ, ಅವುಗಳಲ್ಲಿ 37 ಸೇಕಡ ದೇಶಗಳಲ್ಲಿ ಯೆಹೋವನ ಸಾಕ್ಷಿಗಳ ಐಕ್ಯ ಅಂತಾರಾಷ್ಟ್ರೀಯ “ರಾಷ್ಟ್ರ”ಕ್ಕಿಂತ ಕಡಮೆ ನಾಗರಿಕರಿದ್ದಾರೆ. ರಾಷ್ಟ್ರಗಳಲ್ಲಿ 59 ಸೇಕಡ, 1990ರ ಕ್ರಿಸ್ತನ ಮರಣದ ಸ್ಮಾರಕಾಚರಣೆಗೆ ನೆರೆದು ಬಂದ ಜನರಿಗಿಂತ ಕಡಮೆ ನಾಗರಿಕರಿದ್ದಾರೆ.
[ಪುಟ 18 ರಲ್ಲಿರುವಚಿತ್ರ]
ಜನಾಂಗ ಸಂಘ
ಸಂಯುಕ್ತ ರಾಷ್ಟ್ರ ಸಂಘ
ಪರಿಪೂರ್ಣ ಸರಕಾರವನ್ನು ಒದಗಿಸುವುದು ಅಪರಿಪೂರ್ಣ ಮಾನವರ ಶಕ್ತಿಗೆ ಮೀರಿದ್ದು