ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು
ಪರಿಪೂರ್ಣ ಸರಕಾರ ಕಟ್ಟ ಕಡೆಗೆ!
ದೇವಪ್ರಭುತ್ವ: ಗ್ರೀಕ್ ಪದಗಳಾದ “ತಿಯಾಸ್” (ದೇವ) ಮತ್ತು “ಕ್ರೇಟಾಸ್” (ಒಂದು ಆಳಿಕೆ) ಎಂಬವುಗಳಿಂದ ಬಂದಿದೆ; ಹೀಗೆ, ದೇವರ ಮೇಲ್ವಿಚಾರ ಅಥವಾ ಆಡಳಿತದ ಮೂಲಕ, ಕೆಲವು ಸಲ ನಿಯಮಿತ ಪ್ರತಿನಿಧಿಗಳ ಮೂಲಕ ಒಂದು ಸರಕಾರ.
ನಿಮಗೆ ಒಂದು ಮುತ್ತಿನ ಹಾರವನ್ನು ಅಥವಾ ವಜ್ರದುಂಗುರವನ್ನು ಕೊಳ್ಳುವ ಯೋಗ್ಯತೆ ಇರುವಲ್ಲಿ, ಅವುಗಳ ನ್ಯೂನ ನಕಲನ್ನು ಖರೀದಿಸಲು ನೀವು ನಿರ್ಣಯಿಸುವಿರೊ? ನೀವು ಪಡೆಯುವ ವಸ್ತು, ದೊರೆಯುವುವುಗಳಲ್ಲಿ ಅತ್ಯುತ್ತಮವೆಂದು ನಂಬುವಂತೆ ಮಾಡಿ ನೀವು ವಂಚಿಸಲ್ಪಡದಿರುವಲ್ಲಿ ಪ್ರಾಯಶಃ ಇಲ್ಲ.
ಸರಕಾರಗಳ ವಿಷಯದಲ್ಲಾದರೊ, ಕೋಟ್ಯಾಂತರ ಜನರು ತಾವು ಪಡೆಯುವುದು ದೊರೆಯುವುಗಳಲ್ಲಿ ಅತ್ಯುತ್ತಮವೆಂದು ನಂಬುವಂತೆ ಮಾಡಿ ಮೋಸಗೊಳಿಸಲ್ಪಟ್ಟಿದ್ದಾರೆ. ಆದರೆ ವಾಸ್ತವವಾಗಿ ಅವರಿಗೆ ದೊರೆತಿರುವುದು ನ್ಯೂನ ನಕಲುಗಳೆ. ಅವರು ನಿರಾಶರಾಗಿ, ಅಸಂತೃಪ್ತರಾಗಿ, ಹತಾಶರಾಗಿರುವುದು ಆಶ್ಚರ್ಯವಲ್ಲ.
ಉತ್ತಮ ಸರಕಾರಕ್ಕಾಗಿ ತಲಾಷು
ಒಮ್ಮೆ ಲಂಡನ್ನಿನ ಸೆಂಟ್ ಪಾಲ್ಸ್ ಕತೀಡ್ರಲಿನಲ್ಲಿ ಆ್ಯಂಗ್ಲಿಕನ್ ಚರ್ಚ್‌ನ ಡೀನ್ ಆಗಿದ್ದ ವಿಲ್ಯಮ್ ರಾಲ್ಫ್ ಇಂಜ್, 1922ರಲ್ಲಿ ಬರೆದುದು: “ಉತ್ತಮ ಸರಕಾರವು ಮಾನವಾಶೀರ್ವಾದಗಳಲ್ಲಿ ಸರ್ವೋತ್ತಮವಾಗಿದೆ, ಮತ್ತು ಯಾವ ರಾಷ್ಟ್ರವೂ ಅದನ್ನು ಎಂದಿಗೂ ಅನುಭವಿಸಿರುವುದಿಲ್ಲ.” ಏಕೆ?
ಇದಕ್ಕೆ ಅಂಶಿಕ ವಿವರಣೆಯನ್ನು ಅಮೆರಿಕದ 35ನೆಯ ರಾಷ್ಟ್ರಪತಿ ಜಾನ್ ಎಫ್. ಕೆನೆಡಿಯ ಮಾತುಗಳಲ್ಲಿ ಕಂಡುಹಿಡಿಯ ಸಾಧ್ಯವಿದೆ. “ಯಾವ ಸರಕಾರವೂ ಅದನ್ನು ಒಳಗೊಂಡಿರುವ ಜನರಿಗಿಂತ ಉತ್ತಮವಲ್ಲ,” ಎಂದರವರು. ಅತಿ ಪ್ರತಿಭಾವಂತ ರಾಜಕಾರಣಿಯೂ ಅಪೂರ್ಣನಾಗಿರುವುದರಿಂದ, ಮಾನವರು ಸ್ಥಾಪಿಸುವ ಪ್ರತಿಯೊಂದು ಸರಕಾರಕ್ಕೆ ವೈಫಲ್ಯವೇ ಗತಿ.
ಹದಿನೇಳನೆಯ ಶತಮಾನದ ಇಂಗ್ಲಿಷ್ ನಾಟಕಕಾರ ಫಿಲಿಪ್ ಮ್ಯಾಸಿಂಜರ್ ಬರೆದುದು ಸತ್ಯ: “ಇತರರ ಮೇಲೆ ಆಡಳಿತ ನಡೆಸುವವನು, ಮೊದಲಾಗಿ ತನ್ನ ಯಜಮಾನನಾಗಿರಬೇಕು.” ಆದರೆ ಯಾವ ಅಪೂರ್ಣ ವ್ಯಕ್ತಿ ತನ್ನ ಸ್ವಂತ ಯಜಮಾನನಾಗಿದ್ದಾನೆ? ಘಟನೆ ಮತ್ತು ಸನ್ನಿವೇಶಗಳನ್ನು ನಿಯಂತ್ರಿಸಿಕೊಂಡು ಕೋಟ್ಯಾಂತರ ಜೊತೆ ಮಾನವರ ಸಂತೋಷ ಮತ್ತು ಸುಕ್ಷೇಮವಂತೂ ಇರಲಿ, ತನ್ನ ಸ್ವಂತ ಸಂತೋಷ ಮತ್ತು ಸುಕ್ಷೇಮವನ್ನೂ ನಿಶ್ಚಿತ ಮಾಡಿಕೊಳ್ಳುವಷ್ಟು ಜ್ಞಾನವಾಗಲಿ, ವಿವೇಕವಾಗಲಿ ನಿಜವಾಗಿಯೂ ಯಾವ ರಾಜಕಾರಣಿಗೂ ಇಲ್ಲ. ಮತ್ತು ಒಂದು ವೇಳೆ ಅವನು ಸದಾ ಸರಿಯಾದ ನಿರ್ಣಯವನ್ನು ಮಾಡುವವನಾದರೂ, ಅದನ್ನು ಈಡೇರಿಸುವ ಶಕ್ತಿ ಅವನಿಗಿರುವುದಿಲ್ಲ.
ಅಮೆರಿಕದ ಗದ್ಯ ಲೇಖಕ, ಬ್ರೂಕ್ಸ್ ಆ್ಯಟ್ಕಿನ್‌ಸನ್, ಈ ಸಮಸ್ಯೆಯನ್ನು ಒಪ್ಪಿಕೊಳ್ಳುತ್ತಾ 1951ರಷ್ಟು ಹಿಂದೆ ತೀರ್ಮಾನಿಸಿದ್ದು: “ನಮ್ಮನ್ನು ಆಳಲು ಲೋಕಾತೀತ ಪುರುಷರು ಅಗತ್ಯ, ಏಕೆಂದರೆ ಕೆಲಸವು ಎಷ್ಟೋ ಅಪಾರ ಮತ್ತು ವಿವೇಕಯುಕ್ತ ತೀರ್ಮಾನವು ಎಷ್ಟೋ ಆವಶ್ಯಕ. ಆದರೆ, ಹಾಯ್, ಲೋಕಾತೀತ ಪುರುಷರೇ ಇಲ್ಲ.” ಇಂದು, ನಾಲ್ಕು ದಶಕಗಳಾನಂತರ, ಅವರು ಇನ್ನೂ ಇಲ್ಲದಿರುತ್ತಾರೆ.
ವಾಸ್ತವವಾಗಿ, ಮಾನವನು ತನ್ನನ್ನು ಆಳಿಕೊಳ್ಳಬೇಕೆಂದು ದೇವರು ಉದ್ದೇಶಿಸಿಯೇ ಇರಲಿಲ್ಲ. ಪರಿಪೂರ್ಣ ಸರಕಾರವನ್ನು ಅನುಭವಿಸಲು, ಲೋಕಾತೀತ ಪುರುಷರ ಸರಕಾರಕ್ಕಿಂತ ಹೆಚ್ಚಿನದ್ದು ಮನುಷ್ಯರಿಗೆ ಆವಶ್ಯಕ. ಅವರಿಗೆ ದೇವಪ್ರಭುತ್ವ, ದೇವರಿಂದ ಬರುವ ಸರಕಾರ ಅಗತ್ಯ.
ಯಾವ ವಿಧದ ದೇವಪ್ರಭುತ್ವ?
ದೇವಪ್ರಭುತ್ವವು, ಪ್ರಥಮ ಮಾನವ ಜೊತೆಯನ್ನು ದೇವರು ಎಲ್ಲಿ ಇಟ್ಟಿದ್ದನೋ ಆ ಏದೆನಿನಲ್ಲಿದ್ದ ಸರಕಾರದ ವಿಧದ್ದು. ಹಕ್ಕಿನ ಪರಮಾಧಿಕಾರಿಯಂತೆ, ದೇವರು ಆದಿಯಲ್ಲಿ ವಿಷಯಗಳ ಆಡಳಿತ ನಡೆಸಿ ತನ್ನ ಅಧಿಕಾರವನ್ನು ನಡೆಸುತ್ತಿದ್ದನು.
ಯೆಹೂದಿ ಇತಿಹಾಸಕಾರ ಫ್ಲೇವಿಯಸ್ ಜೋಸೀಫಸ್, 19 ಶತಮಾನಗಳ ಹಿಂದೆ, “ದೇವಪ್ರಭುತ್ವವೆಂದು” ತರ್ಜುಮೆಯಾಗಿರುವ ಗ್ರೀಕ್ ಪದವನ್ನು ಹೊಸದಾಗಿ ರಚಿಸಿದಾಗ, ಪುರಾತನ ಕಾಲದ ಇಸ್ರಾಯೇಲ್ ಜನಾಂಗವನ್ನು ಸೂಚಿಸಲು ಇದನ್ನು ಉಪಯೋಗಿಸಿದನು. ಇದು ಸರಿಯಾದ ಗುರುತಿಸುವಿಕೆಯಾಗಿತ್ತು, ಏಕೆಂದರೆ ಆ ಕಾಲದ ಇಸ್ರಾಯೇಲು ದೇವರು ಆರಿಸಿಕೊಂಡಿದ್ದ ಒಂದು ರಾಷ್ಟ್ರವಾಗಿತ್ತು. ಆತನ ಆಳಿಕೆಯು ಭೂ ಪ್ರತಿನಿಧಿಗಳ ಮೂಲಕ ನಡೆಸಲ್ಪಟ್ಟರೂ ಅದು ವಾಸ್ತವವಾಗಿ ಆತನಿಂದಲೇ ಆಳಲ್ಪಟ್ಟಿತ್ತು.—ಧರ್ಮೋಪದೇಶಕಾಂಡ 7:6; 1 ಪೂರ್ವಕಾಲವೃತ್ತಾಂತ 29:23.
ಈ “ದೇವಪ್ರಭುತ್ವ” ಎಂಬ ಪದವು ಇತರ ಭಾಷೆಗಳಿಗೆ ಪರಿಚಯಿಸಲ್ಪಟ್ಟಾಗ, ಮೊದಮೊದಲು ಅದು ಜೋಸೀಫಸನು ಉದ್ದೇಶಿಸಿದ್ದ ಅರ್ಥಕ್ಕೆ ಸೀಮಿತವಾಗಿತ್ತು. ಆದರೆ ತರುವಾಯ ಹೆಚ್ಚರ್ಥ ಬರತೊಡಗಿತು. ದಿ ಎನ್‌ಸೈಕ್ಲೋಪೀಡಿಯ ಆಫ್ ರಿಲಿಜನ್‌ಗನುಸಾರ, ಇದನ್ನು “ವಿಶಾಲವಾಗಿ ಫರೋಹನ ಈಜಿಪ್ಟ್, ಪುರಾತನದ ಇಸ್ರಾಯೇಲ್, ಮಧ್ಯ ಯುಗದ ಕ್ರೈಸ್ತ ಪ್ರಪಂಚ, ಕ್ಯಾಲ್ವಿನ್ ತತ್ವ, ಇಸ್ಲಾಮ್, ಮತ್ತು ಟಿಬೆಟಿನ ಬೌದ್ಧಧರ್ಮದಷ್ಟು ವಿವಿಧ ಸಂದರ್ಭಗಳಲ್ಲಿ ಇದನ್ನು ಅನ್ವಯಿಸಲಾಗಿದೆ.”
ಇತಿಹಾಸಗಾರ ಡಬ್ಲ್ಯು. ಎಲ್. ವಾರನ್ ಹೇಳುವುದು: “ಇಂಗ್ಲಿಷ್ ರಾಜಪ್ರಭುತ್ವದಲ್ಲಿ ದೇವಪ್ರಭುತ್ವ ರಾಜತ್ವದ ಲಕ್ಷಣವಿತ್ತು—ದೇವರ ಹಂಚಿಕೆಯಲ್ಲಿ ರಾಜನು ಲೋಕ ಕ್ರಮಕ್ಕಾಗಿ ಮುಖ್ಯ ಉಪಕರಣವಾಗಿದ್ದನು, ರಾಜನು ದೇವರ ಪ್ರತಿನಿಧಿ ಮತ್ತು ನ್ಯಾಯದಾತನಾಗಿದ್ದನು.” ಆಧುನಿಕ ಕಾಲಗಳಲ್ಲಿ, ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯದ ಡ್ಯೂಈ ವಾಲೆಸ್ ಜೂನಿಯರ್ ಹೇಳುವುದು, ಈ ಪದವನ್ನು “‘ಪುರೋಹಿತಾಧೀನ’ ಸಮಾಜಗಳಿಗೆ ತೋರಿಸುವ ‘ಜ್ಞಾನೋದಯದ’ ತುಚ್ಫೀಕಾರದ ಪದವಾಗಿಯೂ ಉಪಯೋಗಿಸಲಾಗಿದೆ.”
ಈಗ ಈ ಪದದಲ್ಲಿ ಸೇರಿಸಿರುವ ವಿಶಾಲಾರ್ಥವು ಅನೇಕ ವಿಧಗಳ ದೇವಪ್ರಭುತ್ವದ ಇರುವಿಕೆಯನ್ನು ಅನುಮತಿಸುತ್ತದೆ. ನಮಗೆ ಯಾವ ವಿಧದ್ದು ಬೇಕು?
ಖೋಟಾ ದೇವಪ್ರಭುತ್ವಗಳು
ದಾಖಲೆಯಾಗಿರುವ ಇತಿಹಾಸದಲ್ಲಿ ಪ್ರಥಮ ಮಾನವ ಸರಕಾರವು ಸುಮಾರು 4,000 ವರ್ಷಗಳ ಹಿಂದೆ ನಿಮ್ರೋದನಿಂದ ಸ್ಥಾಪಿಸಲ್ಪಟ್ಟಿತು. ನೋಹನ ಈ ಮರಿಮಗನು ತನ್ನನ್ನು ರಾಜನಾಗಿ ಮಾಡಿಕೊಂಡು, ಬೈಬಲು ಅವನನ್ನು ವರ್ಣಿಸುವಂತೆ, “ಯೆಹೋವನಿಗೆ ವಿರೋಧವಾಗಿ ಒಬ್ಬ ಬಲಿಷ್ಠ ಬೇಟೆಗಾರ”ನಾದನು. (ಆದಿಕಾಂಡ 10:8, 9, NW) ಯೆಹೋವನಿಗೆ ವಿರುದ್ಧವಾಗಿ ತನ್ನನ್ನು ಪ್ರಭುವಾಗಿ ಸ್ಥಾಪಿಸಿಕೊಂಡ ಕಾರಣ, ನಿಮ್ರೋದನು ತನ್ನನ್ನು ಒಬ್ಬ ರಾಜಕೀಯ ದೇವನಾಗಿ ಮಾಡಿಕೊಂಡನು. ಹೀಗೆ, ಅವನಿಗೆ ದೇವರ ಮುಖ್ಯ ವಿರೋಧಿಯಾದ ಸುಳ್ಳು ದೇವನಾದ ಪಿಶಾಚನಾದ ಸೈತಾನನ ಬೆಂಬಲವಿತ್ತು. (2 ಕೊರಿಂಥ 4:4) ಹೀಗೆ ನಿಮ್ರೋದನ ಆಳಿಕೆ ನಿಜ ದೇವಪ್ರಭುತ್ವದ ಖೋಟಾ ಅನುಕರಣವಾಗಿತ್ತು.
ನಿಮ್ರೋದನ ಸಾಮ್ರಾಜ್ಯದ ನಿವಾಸಿಗಳು ಆ ಬಳಿಕ ಭೂಮಿಯಲ್ಲೆಲ್ಲ ಚದರಿಸಲ್ಪಟ್ಟಾಗ, ತಮ್ಮ ಸರಕಾರಗಳು ದೇವಪ್ರಭುತ್ವವೆಂದು, ಅಂದರೆ ಅವುಗಳಿಗೆ ಅಧಿಕಾರವು ತಾವು ಆರಾಧಿಸುತ್ತಿದ್ದ ದೇವ ಅಥವಾ ದೇವರುಗಳಿಂದ ಬರುತ್ತದೆಂದು ಊಹಿಸುತ್ತಾ ಹೋದರು. (ಆದಿಕಾಂಡ 11:1-9) ದಿ ಎನ್‌ಸೈಕ್ಲೋಪೀಡಿಯ ಆಫ್ ರಿಲಿಜನ್ ಹೇಳುವುದು, “ದೇವಪ್ರಭುತ್ವವು” ಹೀಗೆ “ಯಾವುದರಲ್ಲಿ ಧರ್ಮ ಮತ್ತು ಸರಕಾರದ ಮಧ್ಯೆ ಪ್ರತ್ಯೇಕತೆ ಇರಲಿಲ್ಲವೋ ಆ ಪುರಾತನದ ಪೌರಸ್ತ್ಯ ನಾಗರಿಕತೆಯ ಮೊದಲ ಭಾಗವನ್ನು ವರ್ಣಿಸುವ” ಪದವಾಗಿ ಉಪಯೋಗಿಸಲ್ಪಟ್ಟಿತು.
ಫರೋಹರು ಆಳುತ್ತಿದ್ದ ಈಜಿಪ್ಟಿನಂಥ ಕೆಲವು ಸಂಸ್ಕೃತಿಗಳಲ್ಲಿ, ರಾಜನು ಒಬ್ಬ ಮಹಾ ದೇವತೆಯ ಪತಿ ಯಾ ಒಬ್ಬ ದೇವರ ಮಗನೆಂದು ನಂಬಲಾಗುತ್ತಿತ್ತು. ಇತರ ಸಂಸ್ಕೃತಿಗಳು ರಾಜನ ದೈವಿಕ ಗುಣಗಳು ಯಾ ವಂಶದ ಕುರಿತು ಕೊಂಚವೇ ತಿಳಿಸಿದರೂ, ಅವನು ದೈವಿಕವಾಗಿ ಆರಿಸಲ್ಪಟ್ಟಿದ್ದಾನೆಂಬ ವಿಚಾರವನ್ನು ಒತ್ತಿಹೇಳಿದವು. ಅಲೆಗ್ಸಾಂಡರನ ಸಮಯದ ಗ್ರೀಸಿನಲ್ಲಿ ಮತ್ತು ಆ ಬಳಿಕ, ರಾಜನನ್ನು ದಿವ್ಯನೆಂದು ಪರಿಗಣಿಸಲಾಗುತ್ತಿತ್ತು, ಎಂದು ವಿವರಿಸುತ್ತದೆ, ಎ ಹಿಸ್ಟರಿ ಆಫ್ ಪೊಲಿಟಿಕಲ್ ತೀಯೊರಿ ಎಂಬ ಪುಸ್ತಕ. “ಏಕೆಂದರೆ ದೇವರು ಲೋಕಕ್ಕೆ ಹೇಗೋ ಹಾಗೆಯೇ ಅವನು ತನ್ನ ರಾಜ್ಯಕ್ಕೆ ಸಾಮರಸ್ಯವನ್ನು ತಂದನು.” ಈ ಚರಿತ್ರ ಪುಸ್ತಕ ಮುಂದುವರಿಸಿ ಹೇಳುವುದು: “ಒಬ್ಬ ಸಾಮಾನ್ಯ ಮನುಷ್ಯನಲ್ಲಿಲ್ಲದ ಮತ್ತು ಸ್ವರ್ಗದ ಆಶೀರ್ವಾದವಿಲ್ಲದೆ ಈ ಮಹಾ ಪದವಿಯನ್ನು ಬಯಸುವ ಅಯೋಗ್ಯ ದುರಾಕ್ರಮಣಗಾರನಿಗೆ ವಿಪತ್ತನ್ನು ತರುವಂಥ ದೈವತ್ವ ಅವನಲ್ಲಿತ್ತು.”
ರಾಜನು ದಿವ್ಯನು ಎಂಬ ಈ ಊಹೆಯನ್ನು ಕ್ರೈಸ್ತ ಶಕವೆಂದು ಕರೆಯಲ್ಪಡುವ ಸಮಯಕ್ಕೂ ಒಯ್ಯಲಾಯಿತು. ಟ್ಯುಟಾನಿಕ್ ಗೋತ್ರಗಳು ಕ್ಯಾತೊಲಿಕ್ ಧರ್ಮಕ್ಕೆ ಮತಾಂತರ ಹೊಂದಿದಾಗ ರಾಜನ ಪ್ರಶಸ್ತಿ ಹೆಚ್ಚಿತು. ಚರ್ಚು ಅವನಿಗೆ ಮಾಡಿದ ಪಟ್ಟಾಭಿಷೇಕವು ದೇವರೇ ಅವನನ್ನು ಆಳಲು ನೇಮಿಸಿದ್ದಾನೆಂದು ಸೂಚಿಸಿತು. ಈ ಹಿನ್ನೆಲೆಯಿಂದ, ರಾಜರುಗಳ ದೈವಿಕ ಹಕ್ಕು ಎಂಬ ತತ್ವ ಕ್ರಮೇಣ ವಿಕಾಸಗೊಂಡಿತು.
“ಕ್ರೈಸ್ತ” ಶಕಕ್ಕೆ ಮೊದಲೇ ರೋಮಿನ ಕೈಸರರು ತಾವು ದೇವರುಗಳೆಂದು ಹೇಳಿ ತಮ್ಮ ಸರಕಾರಗಳಿಗೆ ದೇವಪ್ರಭುತ್ವ ವೈಚಿತ್ರ್ಯವನ್ನು ಕೊಟ್ಟಿದ್ದರು. ರೋಮನ್ ವೀಕ್ಷಣದಲ್ಲಿ, ಮಾನವಾಳಿಕೆ ದೇವಾಳಿಕೆಗೆ ಸಮಾನವಾಗಿತ್ತು. ಹೀಗೆ ಇದು ಅವರ ಸರಕಾರವನ್ನು ನಿಮ್ರೋದನ ಸರಕಾರದಂತೆ ಒಂದು ಖೋಟಾ ದೇವಪ್ರಭುತ್ವವಾಗಿ ಮಾಡಿತು. ಆದುದರಿಂದ, ಸಾ.ಶ. ಒಂದನೆಯ ಶತಮಾನದ ಯೆಹೂದಿ ಪುರೋಹಿತರು ಭಾವೀ ರಾಜನಾದ ಯೇಸುವನ್ನು “ಕೈಸರನೇ ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಹೇಳಿ ನಿರಾಕರಿಸಿದಾಗ, ಅವರು, ಯೇಸು ಘೋಷಿಸಿದ ನಿಜ ದೇವಪ್ರಭುತ್ವದ ಬದಲಿಗೆ ಖೋಟಾ ದೇವಪ್ರಭುತ್ವದಲ್ಲಿ ಇಷ್ಟಪಟ್ಟರು.—ಯೋಹಾನ 19:15.
ಯೆಹೋವನ ದೇವಪ್ರಭುತ್ವಾಳಿಕೆಯು ಆಳಿಕೆಯ ಇತರ ವಿಧಗಳಿಗಿಂತ ಎಷ್ಟೋ ಶ್ರೇಷ್ಠವಾಗಿರುವುದರಿಂದ, ಸೈತಾನನು ಅದರ ಕೆಲವು ಲಕ್ಷಣಗಳನ್ನು ತನ್ನ ಮಾನವ ನಿರ್ಮಿತ ಖೋಟಾಗಳಲ್ಲಿ—ಸಾಫಲ್ಯ ಪಡೆಯದೆ—ಸೇರಿಸಲು ಪ್ರಯತ್ನಿಸಿರುವುದು ಆಶ್ಚರ್ಯವಲ್ಲ. ಈ ಎಲ್ಲ ಸ್ವಯಂ ಆರೋಪಿತ ದೇವಪ್ರಭುತ್ವಗಳು ಆದರ್ಶವನ್ನು ತಲುಪುವುದರಲ್ಲಿ ತೀರಾ ತಪ್ಪಿವೆ. ವಾಸ್ತವದಲ್ಲಿ, ಇವುಗಳಲ್ಲಿ ಯಾವುದೂ ದೇವರಿಂದ ಅಥವಾ ಆತನ ಪ್ರತಿನಿಧಿಗಳಿಂದ ಆಳಲ್ಪಟ್ಟ ಆಳಿಕೆಯಾಗಿರುವುದಿಲ್ಲ. ಅವು ನಿಜ ದೇವಪ್ರಭುತ್ವದ ನ್ಯೂನ ಅನುಕರಣಗಳು, ಖೋಟಾ ದೇವನ ನಿಯಂತ್ರಣದಲ್ಲಿರುವ ಅಪೂರ್ಣ ಮಾನವಾಳಿಕೆಯ ಅಭಿವ್ಯಕ್ತಿಗಳಾಗಿವೆ.
ಯೋಗ್ಯವಾಗಿಯೆ, ಬೈಬಲು ಈ ದೇವನನ್ನು “ಇಹಲೋಕಾಧಿಪತಿ” ಮತ್ತು “ಈ ಪ್ರಪಂಚದ ದೇವರು” ಎಂದು ಕರೆಯುತ್ತದೆ. (ಯೋಹಾನ 12:31; 14:30; 2 ಕೊರಿಂಥ 4:4) ಈ ಕಾರಣದಿಂದಲೇ ಅವನು ಯೇಸುವಿಗೆ, ಯೇಸು ಯಾವ ಶೋಧನೆಯನ್ನು ದೃಢತೆಯಿಂದ ನಿರಾಕರಿಸಿದನೋ ಆ “ಪ್ರಪಂಚದ ಎಲ್ಲಾ ರಾಜ್ಯಗಳನ್ನೂ ಅವುಗಳ ವೈಭವವನ್ನೂ” ನೀಡಶಕ್ತನಾದನು. (ಮತ್ತಾಯ 4:8-10) ಶುದ್ಧ ದೇವಪ್ರಭುತ್ವವು ಒಬ್ಬನೇ ಸತ್ಯ ದೇವರಾದ ಯೆಹೋವನ ಆಳಿಕೆಯೆಂದು ತಿಳಿದಿದ್ದ ಯೇಸು, ನಿಜ ದೇವಪ್ರಭುತ್ವದಲ್ಲಿ ಕಂಡುಬರುವ ದೈವಿಕ ಗುಣಗಳನ್ನು ಪರಿಪೂರ್ಣ ಸಮತೆಯಲ್ಲಿ ವ್ಯಕ್ತಪಡಿಸಲು ಯಾವ ಸರಕಾರಗಳಿಗೆ ಸಾಧ್ಯವಿಲ್ಲವೋ ಅಂಥ ಮಾನವ ನಿರ್ಮಿತ ಬದಲಿಗಳನ್ನು ಅಂಗೀಕರಿಸುವಂತೆ ವಂಚನೆಗೊಳಗಾಗಲಿಲ್ಲ.
ಪರಿಪೂರ್ಣ ಸರಕಾರ ಸನ್ನಿಹಿತ
ಕೆಲವು ವರ್ಷಗಳ ಹಿಂದೆ, ಎಸೆಕ್ಸ್ ವಿಶ್ವವಿದ್ಯಾಲಯದ ಹ್ಯೂ ಬ್ರಾಗನ್ ಹೀಗೆ ತೀರ್ಮಾನಿಸಿದರು: “ರಾಜಕೀಯ ಪ್ರಾಣಿಯಾದ ಮಾನವನು ತನ್ನನ್ನೂ ತನ್ನ ನಾಗರಿಕತೆಯನ್ನೂ ರಕ್ಷಿಸಿಕೊಳ್ಳಬೇಕಾದರೆ, ತನ್ನ ದಿನಗಳ ಸದಾ ಹೊಸದಾಗಿರುವ ಆವಶ್ಯಕತೆಗಳನ್ನು ನಿಭಾಯಿಸಲು ಸರಕಾರದ ಹೊಸ ನಮೂನೆಗಳನ್ನು ಅರಸುವುದರಿಂದ ನಿಲ್ಲಸಾಧ್ಯವಿಲ್ಲ.” ನಿಮ್ರೋದನ ದಿನಗಳಿಂದಲೂ, ಮನುಷ್ಯರು ಅದನ್ನೇ ಮಾಡುತ್ತಿದ್ದಾರೆ. ಸಮಯಗಳ ಆವಶ್ಯಕತೆಗಳನ್ನು ಮುಟ್ಟಲು ಅವರು ಸರಕಾರದ ಹೊಸ ನಮೂನೆಗಳನ್ನು ಪುನರಾವೃತ್ತಿಸುತ್ತಾ ಕಲ್ಪಿಸುತ್ತಿದ್ದಾರೆ. ಆದರೆ ಮಾನವಾಳಿಕೆ ಎಂದಿಗೂ ಸಫಲಗೊಳ್ಳುವುದಿಲ್ಲವೆಂದು ರುಜುಪಡಿಸಲು ಎಷ್ಟು ಸಮಯ ಬೇಕು?
ಸಂತೋಷಕರವಾಗಿ, 1914ರಲ್ಲಿ, ಮಾನವ ಸರಕಾರದ ಸಂಬಂಧದಲ್ಲಿ ಬುದ್ಧಿರಹಿತ ಪ್ರಯೋಗವನ್ನು, ಸ್ವರ್ಗದಲ್ಲಿ ಯೆಹೋವನ ಮೆಸ್ಸೀಯನ ರಾಜ್ಯದ ಸ್ಥಾಪನೆಯ ಮೂಲಕ ಆಹ್ವಾನಕ್ಕೆ ಕರೆಯುವ ಸಮಯ ಬಂತು!a 1914ರಿಂದ, ಮಾನವ ಸರಕಾರಗಳು ಇನ್ನೂ ಉಸಿರಾಡುತ್ತಿರುವುದಾದರೂ ಎರವು ತೆಗೆದುಕೊಂಡಿರುವ ಸಮಯದಲ್ಲಿ ಜೀವಿಸುತ್ತಿವೆ. (ದಾನಿಯೇಲ 7:12) “ಕಡೇ ದಿವಸಗಳು” ಎಂದು ಬೈಬಲು ಗುರುತಿಸುವ ಸಮಯದಲ್ಲಿ ನಾವು ಜೀವಿಸುತ್ತಿದ್ದೇವೆ. (2 ತಿಮೊಥೆಯ 3:1-5) ಮಾನವಾಳಿಕೆಗೆ ನಾಶವು ಆಸನ್ನವಾಗಿದೆ ಎಂದು ತೋರಿಸುವ ಕೇಡಿನ ಸೂಚನೆಯಿರುವ ಗೋಡೆ ಬರಹವು ಯಾರೂ ಪ್ರಾಮಾಣಿಕವಾಗಿ ಅಲಕ್ಷ್ಯ ಮಾಡದಷ್ಟು ಸ್ಪಷ್ಟವಾಗಿಗಿದೆ. ಅದನ್ನು ಅಸಡ್ಡೆ ಮಾಡಬಹುದು, ಆದರೆ ಅಳಿಸಸಾಧ್ಯವಿಲ್ಲ.
ಯೆಹೋವನ ಮೆಸ್ಸೀಯನ ರಾಜ್ಯದ ಮೂಲಕ ಬರುವ ದೇವಪ್ರಭುತ್ವದ ಆಳಿಕೆಯು ಬೈಬಲಿನ ದಾನಿಯೇಲ 2ನೆಯ ಅಧ್ಯಾಯದಲ್ಲಿ “ಕೈಯಿಲ್ಲದೆ ಒಡೆಯಲ್ಪಟ್ಟ” ಒಂದು ಬಂಡೆ “ಪ್ರತಿಮೆ [ಮಾನವಾಳಿಕೆಯ ಪ್ರತೀಕ] ಯ ಕಬ್ಬಿಣಮಣ್ಣಿನ ಹೆಜ್ಜೆಗಳಿಗೆ ಬಡಿದು ಅದನ್ನು ಚೂರುಚೂರು” ಮಾಡುವುದರಿಂದ ಪ್ರತಿನಿಧೀಕರಿಸಲ್ಪಟ್ಟಿದೆ. ದೇವರ ಸ್ಥಾಪಿತ ರಾಜ್ಯವು ಪ್ರತಿಯೊಂದು ರೂಪದ ಕೆಟ್ಟ ಮಾನವಾಳಿಕೆಯನ್ನು ಕ್ಷಿಪ್ರವಾಗಿ ಹೊಡೆದು ನಜ್ಜುಗುಜ್ಜು ಮಾಡಲಿರುವುದು ಎಂದಿದರ ಅರ್ಥ. ಎಷ್ಟು ಪೂರ್ಣವಾಗಿ? ಬೈಬಲು ಉತ್ತರಿಸುವುದು: “ಆಗ ಕಬ್ಬಿಣಮಣ್ಣು ತಾಮ್ರ ಬೆಳ್ಳಿ ಬಂಗಾರಗಳೆಲ್ಲವೂ ಪುಡಿಪುಡಿಯಾಗಿ ಸುಗ್ಗಿಯ ಕಣಗಳ ಹೊಟ್ಟಿನಂತಾದವು; ಗಾಳಿಯು ತೂರಿಕೊಂಡು ಹೋಗಲು ಅವುಗಳಿಗೆ ನೆಲೆಯೇ ಇಲ್ಲವಾಯಿತು.”—ದಾನಿಯೇಲ 2:34,35.
ಕೆಟ್ಟ ಮಾನವ ಸರಕಾರಗಳು ಅವುಗಳ ಸುಳಿವೇ ಎಂದಿಗೂ ಇಲ್ಲದ ರೀತಿಯಲ್ಲಿ ಅಷ್ಟು ಪೂರ್ಣವಾಗಿ ಕೊಚ್ಚಿಕೊಂಡು ಹೋಗುವುದಾದರೆ, ಅದರ ಪಕ್ಷವಾದಿಗಳು ಕಠಿಣ ಸಮಯವನ್ನು ಎದುರು ನೋಡುತ್ತಿದ್ದಾರೆಂಬುದು ವ್ಯಕ್ತ. ಈ ನಿಜತ್ವವನ್ನು ಗುರುತಿಸುವ ಲಕ್ಷಗಟ್ಟಲೆ ಜನರು, ಭ್ರಷ್ಟ ಮಾನವಾಳಿಕೆಯಿಂದ ತಮ್ಮ ಭರವಸವನ್ನು ಹೆಚ್ಚು ಉತ್ತಮವಾದ ಯಾವುದಕ್ಕೋ ಬದಲಾಯಿಸುವ ವಿವೇಕವನ್ನು ಕಾಣುತ್ತಿದ್ದಾರೆ. ಸಹಸ್ರಾರು ವರ್ಷಗಳ ಮಾನವ ಕೆಟ್ಟಾಡಳಿತ ಮತ್ತು ಕೆಟ್ಟ ನಿರ್ವಹಣದಿಂದ ಬಂದಿರುವ ಸಮಸ್ಯೆಗಳನ್ನು ವಿಶ್ವದ ಸೃಷ್ಟಿಕರ್ತನಾದ ಯೆಹೋವ ದೇವರ ಆಳಿಕೆಯು ಮಾತ್ರ ಬಗೆಹರಿಸಬಲ್ಲದು. ನಮ್ಮ ಸಮಯಗಳ ಆವಶ್ಯಕತೆಗಳನ್ನು ನಿಜ ದ್ರೇವಪ್ರಭುತ್ವವು ಮಾತ್ರ ಒದಗಿಸಬಲ್ಲದು.
ಈ ಸರಕಾರದ ವಿಚಾರದಲ್ಲಿ ವ್ಯಕ್ತಿಪರ ನಿರ್ಣಯವನ್ನು ಮಾಡುವ ಪ್ರಾಮುಖ್ಯತೆಯನ್ನು “ಮಾನವ ಆಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡುವುದು” ಎಂಬ ಹತ್ತು ಲೇಖನಗಳ ಮಾಲೆಯು ನಿಮಗೆ ಮನದಟ್ಟು ಮಾಡಿದೆ ಎಂದು ಎಚ್ಚರ! ನಿರೀಕ್ಷಿಸುತ್ತದೆ. ಎಲ್ಲಕ್ಕೂ ಮಿಗಿಲಾಗಿ, ನೀವು ವಿವೇಕದ ನಿರ್ಣಯವನ್ನು ಮಾಡುವಂತೆ ಇದು ಸಹಾಯ ಮಾಡಿದೆ ಎಂದು ಹಾರೈಸಲಾಗುತ್ತದೆ. ಮಾನವಾಳಿಕೆಯನ್ನು ತಕ್ಕಡಿಗಳಲ್ಲಿ ತೂಗಿ ನೋಡಲಾಗಿ ನ್ಯೂನತೆಯುಳ್ಳದ್ದಾಗಿ ಕಂಡುಬಂದಿದೆ. ನೀವು ಯಾವುದನ್ನು ಆರಿಸಿಕೊಳ್ಳುವಿರಿ? ಅಗವ್ಗಾದ ಖೋಟಾವನ್ನೊ, ನಿಜವಾದುದನ್ನೊ? ಮಾನವಾಳಿಕೆಯನ್ನೊ, ಸತ್ಯ ದೇವರಾದ ಯೆಹೋವನಿಂದ ಬರುವ ಆಳಿಕೆಯನ್ನೊ?—ದಾನಿಯೇಲ 2:44; ಮತ್ತಾಯ 6:10. (g90 12/22)
[ಅಧ್ಯಯನ ಪ್ರಶ್ನೆಗಳು]
a ದೇವರ ರಾಜ್ಯವು 1914ರಲ್ಲಿ ಸ್ಥಾಪನೆಯಾಯಿತು, ಮತ್ತು ಅಂದಿನಿಂದ ಈ ಜಗತ್ತು ಅದರ ಕೊನೆಯ ದಿನಗಳಲ್ಲಿದೆ ಎಂಬುದರ ರುಜುವಾತಿಗೆ, ವಾಚ್‌ಟವರ್ ಬೈಬಲ್ ಆ್ಯಂಡ್ ಟ್ರ್ಯಾಕ್ಟ್ ಸೊಸೈಟಿ ಆಫ್ ಇಂಡಿಯ 1990ರಲ್ಲಿ ಪ್ರಕಾಶಿಸಿರುವ ನೀವು ಭೂಮಿಯ ಮೇಲೆ ಪ್ರಮೋದವನದಲ್ಲಿ ಸದಾ ಜೀವಿಸಬಲ್ಲಿರಿ ಎಂಬ ಪುಸ್ತಕದ 16 ಮತ್ತು 18ನೆಯ ಅಧ್ಯಾಯಗಳನ್ನು ನೋಡಿ.
[ಪುಟ 20 ರಲ್ಲಿರುವ ಚೌಕ]
ಯೆಹೋವನಿಂದ ಬರುವ ದೇವಪ್ರಭುತ್ವಾಳಿಕೆ ಸಾಧಿಸುವ ವಿಷಯಗಳು
◆ ನಿಶ್ಶಕ್ತರಾದ ವೃದ್ಧರಿಗೆ ಯೌವನದ ದೇಹಶಕ್ತಿಯನ್ನು ಮರಳಿ ಕೊಡುವುದು.—ಯೋಬ 33:25.
◆ ಯುದ್ಧಗಳನ್ನು ಗತ ವಿಷಯವನ್ನಾಗಿ ಮಾಡುವುದು.—ಕೀರ್ತನೆ 46:9; ಯೆಶಾಯ 9:7.
◆ ಪ್ರತಿಯೊಂದು ಕುಟುಂಬಕ್ಕೆ ಶ್ರೇಷ್ಠ ರೀತಿಯ ವಸತಿಯನ್ನು ಒದಗಿಸುವುದು.—ಯೆಶಾಯ 65:21.
◆ ರೋಗಿಗಳನ್ನೂ ದುರ್ಬಲರನ್ನೂ ವಾಸಿ ಮಾಡುವುದು.—ಯೆಶಾಯ 33:24; 35:5, 6.
◆ ಮೃತರನ್ನು ಪುನರುತ್ಥಾನಗೊಳಿಸುವುದು.—ಯೆಶಾಯ 25:8; ಅಪೊಸ್ತಲರ ಕೃತ್ಯಗಳು 24:15; ಪ್ರಕಟನೆ 20:13.
◆ ಭೂಮಿಯಿಂದ ಭ್ರಷ್ಟಾಚಾರ, ಲೈಂಗಿಕ ದುರಾಚಾರ ಮತ್ತು ಪಾತಕವನ್ನು ಹೋಗಲಾಡಿಸುವುದು.—ಜ್ಞಾನೋಕ್ತಿ 2:21, 22.
◆ ಎಲ್ಲರಿಗೆ ಹೇರಳವಾದ ಆಹಾರವನ್ನು ಒದಗಿಸುವುದು.—ಕೀರ್ತನೆ 72:16; ಯೆಶಾಯ 25:6.
◆ ಮಾನವರ ಮತ್ತು ಮೃಗಗಳ ಮಧ್ಯೆ ಶಾಂತಿಪೂರ್ಣ ಸಂಬಂಧವನ್ನು ಮರಳಿ ಸ್ಥಾಪಿಸುವುದು.—ಯೆಶಾಯ 11:6-9; ಯೆಹೆಜ್ಕೇಲ 34:25.
◆ ಪ್ರತಿಯೊಬ್ಬನಿಗೆ ಅರ್ಥಪೂರ್ಣ ಹಾಗೂ ಪ್ರತಿಫಲದಾಯಕ ಕೆಲಸವನ್ನು ನೇಮಿಸುವುದು.—ಯೆಶಾಯ 65:22, 23.
◆ ಭೂಮಿಯನ್ನು ಭೌಗೋಲಿಕ ಪ್ರಮೋದವನವಾಗಿ ರೂಪಾಂತರಿಸುವುದು.—ಯೆಶಾಯ 35:1, 6, 7; ಲೂಕ 23:43.
ಇವು ಮಾನವರು ಕೊಡುವ ಪೊಳ್ಳು ರಾಜಕೀಯ ವಚನಗಳಲ್ಲ; ದೇವರೇ ಕೊಟ್ಟಿರುವ ವಚನಗಳವು, ಮತ್ತು “ಸುಳ್ಳಾಡುವುದು ದೇವರಿಗೆ ಅಸಾಧ್ಯ.”—ಇಬ್ರಿಯ 6:18, NW.
[ಪುಟ 21 ರಲ್ಲಿರುವ ಚಿತ್ರ]
ಪರಿಪೂರ್ಣ ಸರಕಾರದ ನಿತ್ಯಾಶೀರ್ವಾದಗಳು ನಿಮ್ಮದಾಗಿರಬಲ್ಲವು!