“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು”
ಮೇಲಿನ ಮಾತುಗಳು ಪ್ರಾಚೀನತೆಯಿಂದ, ಕ್ರಿಸ್ತನ ಸಮಯಕ್ಕೂ ಪೂರ್ವದಿಂದ ಬಂದಿವೆ. ಅವನ್ನು ಬೆಟ್ಟದ ಮೇಲಿಂದ ತರಲಾಯಿತು. ಅವು ದೇವರ ಬೆರಳಿನಿಂದ ಕಲ್ಲಿನ ಹಲಗೆಯ ಮೇಲೆ ಬರೆಯಲ್ಪಟ್ಟಿದ್ದವು. ಐಗುಪ್ತದ ದಾಸತ್ವದಿಂದ ಇಸ್ರಾಯೇಲ್ ಕೈದಿಗಳನ್ನು ಹೊರಗೆ ನಡೆಸಲು ಮೋಶೆಯನ್ನು ಉಪಯೋಗಿಸಲಾಗಿತ್ತು, ಅವರು ಕೆಂಪು ಸಮುದ್ರವನ್ನು ದಾಟಿ ಗಡುಸಾದ ಸೀನಾಯಿ ಬೆಟ್ಟದ ಬುಡದಲ್ಲಿ ಪಾಳೆಯ ಹಾಕಿದ್ದರು. ಮೋಶೆ, ಯೆಹೋವನೊಂದಿಗೆ 40 ದಿವಸ ಹಗಲಿರುಳು ಕಳೆದ ಬಳಿಕ ದಶಾಜ್ಞೆಗಳು ಬರೆಯಲ್ಪಟ್ಟಿದ್ದ ಎರಡು ಕಲ್ಲಿನ ಫಲಕಗಳನ್ನು ಹಿಡಿದುಕೊಂಡು ಕೆಳಗೆ ಬಂದನು.—ವಿಮೋಚನಕಾಂಡ 34:1, 27, 28.
ಈ ಹಲಗೆಗಳಲ್ಲಿ ಒಂದರಲ್ಲಿ, ಈಗ ಯಾವುದು ವಿಮೋಚನಕಾಂಡ 20ನೆಯ ಅಧ್ಯಾಯ 12ನೆಯ ವಚನದಲ್ಲಿ ಕಂಡುಬರುತ್ತದೋ ಆ ಐದನೆಯ ಆಜ್ಞೆ ಬರೆಯಲ್ಪಟ್ಟಿತ್ತು. ಅಲ್ಲಿ ನಾವು ಓದುವುದು: “ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು; ಸನ್ಮಾನಿಸಿದರೆ ನಿನ್ನ ದೇವರಾದ ಯೆಹೋವನು ನಿನಗೆ ಅನುಗ್ರಹಿಸುವ ದೇಶದಲ್ಲಿ ನೀನು ಬಹುಕಾಲ ಇರುವಿ.” ಅಪೊಸ್ತಲ ಪೌಲನಿಗನುಸಾರ, ಇದು “ವಾಗ್ದಾನಸಹಿತವಾದ ಮೊದಲನೆಯ ಆಜ್ಞೆ,” ಮತ್ತು “ನೀನು ಭೂಮಿಯ ಮೇಲೆ ಬಹುಕಾಲ ಬದುಕುವಿ” ಎಂಬುದೇ ಆ ವಾಗ್ದಾನವಾಗಿತ್ತು.—ಎಫೆಸ 6:1-3.
ದಶಾಜ್ಞೆಗಳನ್ನು ಕೊಟ್ಟ ಸಮಯದಲ್ಲಿ ಅಗ್ನಿ, ಹೊಗೆ ಮತ್ತು ಸೀನಾಯಿ ಬೆಟ್ಟದ ಗಾಬರಿಗೊಳಿಸುವ ಕಂಪನದಂಥ ಭಯೋತ್ಪಾದಕ ಪ್ರದರ್ಶನವು, ತಂದೆ ತಾಯಿಯನ್ನು ಸನ್ಮಾನಿಸಬೇಕೆನ್ನುವ ಐದನೆಯ ಆಜ್ಞೆ ಸೇರಿರುವ ದಶಾಜ್ಞೆಗಳ ಪ್ರಾಮುಖ್ಯತೆಯನ್ನು ನಾಟಕೀಯವಾಗಿ ಘೋಷಿಸಿತು. ಈ ಸನ್ಮಾನ ತೋರಿಸುವುದರಲ್ಲಿ ಏನು ಸೇರಿದೆ? ಕೇವಲ ಗೌರವ ಮತ್ತು ವಿಧೇಯತೆ ಮಾತ್ರವಲ್ಲ, ಪರಾಮರಿಕೆ ಮತ್ತು ಬೇಕಾಗುವಲ್ಲಿ ಲೌಕಿಕ ರೀತಿಯ ಬೆಂಬಲವೂ ಸೇರಿದೆ.
ಶತಮಾನಗಳು ಕಳೆದ ಬಳಿಕ, ಯೇಸು, ಶಾಸ್ತ್ರಿ, ಫರಿಸಾಯರನ್ನು ಅವರ ಬಾಯಿಮಾತಿನ ಸಂಪ್ರದಾಯಗಳ ಕುರಿತು ಎದುರಿಸಿದಾಗ ಇದು ಸ್ಪಷ್ಟ ಮಾಡಲ್ಪಟ್ಟಿತು. ಅವಶ್ಯವಿರುವ ಹೆತ್ತವರಿಗೆ ಲೌಕಿಕ ಬೆಂಬಲವನ್ನು ಕೊಡದಿರುವಲ್ಲಿ ತಂದೆ ಯಾ ತಾಯಿಯನ್ನು ಸನ್ಮಾನಿಸಲು ಅವರು ತಪ್ಪುತ್ತಾರೆಂದು ಯೇಸು ತೋರಿಸಿದನು. ಮತ್ತಾಯ 15:3-5ರಲ್ಲಿ ದಾಖಲೆ ಮಾಡಿರುವಂತೆ ಅವನು ಹೇಳಿದ್ದು: “ತಂದೆ ತಾಯಿಗಳನ್ನು ಸನ್ಮಾನಿಸಬೇಕೆಂತಲೂ ತಂದೆಯನ್ನಾಗಲಿ ತಾಯಿಯನ್ನಾಗಲಿ ದೂಷಿಸುವವನಿಗೆ ಮರಣ ದಂಡನೆ ಆಗಬೇಕೆಂತಲೂ ದೇವರು ಹೇಳಿದ್ದಾನೆ. ನೀವೂ ಯಾವನಾದರೂ ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ನೋಡಿ—ನಾನು ನಿನ್ನ ಸಂರಕ್ಷಣೆಗಾಗಿ ಕೊಡತಕ್ಕದ್ದನ್ನು ದೇವರಿಗಾಗಿ ಇಟ್ಟಿದೇನ್ದೆ ಎಂದು ಹೇಳುವದಾದರೆ ಅವನಿಗೆ ತನ್ನ ತಂದೆ ತಾಯಿಗಳನ್ನು ಸನ್ಮಾನಿಸಬೇಕಾದದ್ದಿಲ್ಲ ಅನ್ನುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತ ದೇವರ ವಾಕ್ಯವನ್ನು ನಿರರ್ಥಕ ಮಾಡಿದ್ದೀರಿ.”
ಯೇಸು ತಾನೇ, ತನ್ನ ಹೆತ್ತವರಿಗೆ ವಿಧೇಯತೆ ತೋರಿಸಿ ಅವರಿಗೆ ಅಧೀನನಾಗಿದ್ದನು. (ಲೂಕ 2:51) ವರ್ಷಗಳು ಕಳೆದ ಬಳಿಕ, ಯಾತನೆಯ ಕಂಬದಲ್ಲಿ ಸಾಯುತ್ತಿದ್ದಾಗ ಅವನು, ತನ್ನ ತಾಯಿಯ ಪರಾಮರಿಕೆ ಮತ್ತು ಬೆಂಬಲಕ್ಕಾಗಿ ಪ್ರೀತಿಯ ಒದಗಿಸುವಿಕೆಯನ್ನು ಮಾಡಿ ಸನ್ಮಾನವನ್ನು ತೋರಿಸಿದನು.—ಯೋಹಾನ 19:25-27.
ಮಕ್ಕಳು ಮತ್ತು ಮೊಮ್ಮಕ್ಕಳು ಸಹ ಕೊರತೆಯಿರುವ ಹೆತ್ತವರನ್ನು ಪರಾಮರಿಸುವುದು ದೇವರ ಆವಶ್ಯಕತೆಯೆಂಬುದು ಅಪೊಸ್ತಲ ಪೌಲನಿಗೆ ಚೆನ್ನಾಗಿ ಗೊತ್ತಿತ್ತು. ಮತ್ತು, ರಸಕರವಾಗಿ, ಅವನು ಇಂಥ ಲೌಕಿಕ ಸಹಾಯವನ್ನು ಸನ್ಮಾನ ತೋರಿಸುವ ವಿಷಯಕ್ಕೆ ಸಂಬಂಧಿಸಿದನು: “ದಿಕ್ಕಿಲ್ಲದ ವಿಧವೆಯರನ್ನು ಸಂರಕ್ಷಿಸು [ಸನ್ಮಾನಿಸು, NW]. ಆದರೆ ಒಬ್ಬ ವಿಧವೆಗೆ ಮಕ್ಕಳಾಗಲಿ ಮೊಮ್ಮಕ್ಕಳಾಗಲಿ ಇದ್ದರೆ ಅವರೇ ಮೊದಲು ತಮ್ಮ ಮನೆಯವರಿಗೆ ಭಕ್ತಿ ತೋರಿಸುವದಕ್ಕೂ ತಂದೆ ತಾಯಿಗಳಿಗೆ ಪ್ರತ್ಯುಪಕಾರ ಮಾಡುವದಕ್ಕೂ ಕಲಿತುಕೊಳ್ಳಲಿ; ಇದು ದೇವರ ದೃಷ್ಟಿಯಲ್ಲಿ ಮೆಚ್ಚಿಕೆಯಾದದ್ದು.” (1 ತಿಮೊಥಿ 5:3, 4) ನೀವು ಸಹಾಯಶೂನ್ಯವಾದ ಶಿಶು ಮತ್ತು ಮಗುವಾಗಿದ್ದಾಗ ನಿಮ್ಮ ಹೆತ್ತವರು ನಿಮ್ಮನ್ನು ಪರಾಮರಿಸಿದರು; ಮತ್ತು ಅವರ ವೃದ್ಧಾಪ್ಯದಲ್ಲಿ ಅವರ ಕೊರತೆಯ ಸಮಯದಲ್ಲಿ ಅವರಿಗೆ ಸಹಾಯ ನೀಡುವುದು ನಿಮ್ಮ ಸರದಿ.