ಭವಿಷ್ಯತ್ತಿನ ವಿಷಯವೇನು?
ಮನುಷ್ಯ ಮತ್ತು ಮೃಗಗಳ ಮಧ್ಯೆ ಶಾಂತಿ ನಮಗೆ ಅಷ್ಟು ಹಿಡಿಸುವುದೇಕೆ? ಏಕೆಂದರೆ ಮನುಷ್ಯರು ಆದಿಯಲ್ಲಿ, ಮೃಗಗಳೊಂದಿಗೆ—ಕಾಡುಮೃಗಗಳೆಂದು ವರ್ಗೀಕರಿಸಲ್ಪಟ್ಟಿರುವವುಗಳೊಂದಿಗೂ—ಶಾಂತಿಯಿಂದಿರುವಂತೆ ಸೃಷ್ಟಿಸಲ್ಪಟ್ಟರು.
ದೇವರು ಪ್ರಥಮ ಪುರುಷ ಮತ್ತು ಸ್ತ್ರೀಯನ್ನು ನಿರ್ಮಿಸಿದಾಗ ಅವರನ್ನು ಜೀವನದಲ್ಲಿ ಆನಂದಿಸಲು ಭೂಮಿಯ ಪ್ರಮೋದವನವಾದ ಒಂದು ಭಾಗದಲ್ಲಿ ಇಟ್ಟನು. ಅವರು ಮಕ್ಕಳನ್ನು ಪಡೆದು, ಆ ಆದಿ ಪ್ರಮೋದವನದ ಮೇರೆಗಳನ್ನು, ಅದು ಕೊನೆಗೆ ಇಡೀ ಭೂಮಿಯನ್ನು ಆವರಿಸುವಂತೆ ಹಬ್ಬಿಸುವುದು ಅವರ ಕಡೆಗೆ ದೇವರಿಗಿದ್ದ ಉದ್ದೇಶವಾಗಿತ್ತು. ಆ ಇಡೀ ಕ್ಷೇತ್ರದಲ್ಲಿ ಮೃಗಗಳು ಮಾನವಸಂತತಿಗೆ ಶಾಂತಿಯ ಅಧೀನತೆಯಲ್ಲಿ ಇರಲಿಕ್ಕಿದ್ದವು.
ಆದಿಕಾಂಡದ ವೃತ್ತಾಂತ ಹೇಳುವುದು: “ಅವರು ಸಮುದ್ರದ ಮೀನುಗಳ ಮೇಲೆಯೂ ಅಂತರಿಕ್ಷದಲ್ಲಿ ಹಾರಾಡುವ ಪಕ್ಷಿಗಳ ಮೇಲೆಯೂ ಪಶುಗಳ ಮೇಲೆಯೂ ನೆಲದ ಮೇಲೆ ಹರಿದಾಡುವ ಎಲ್ಲಾ ಕ್ರಿಮಿಕೀಟಗಳ ಮೇಲೆಯೂ ದೊರೆತನ ಮಾಡಲಿ. . . . ದೇವರು ತಾನು ಉಂಟುಮಾಡಿದ್ದನ್ನೆಲ್ಲಾ ನೋಡಲಾಗಿ ಅದು ಬಹು ಒಳ್ಳೇದಾಗಿತ್ತು.”—ಆದಿಕಾಂಡ 1:26-31; 2:9.
ಕ್ರೌರ್ಯವನ್ನು ತೋರಿಸಿ ಈ ಮೃಗಗಳ ಅಧೀನತೆಯನ್ನು ಪಡೆಯಬಾರದಾಗಿತ್ತು. ಮನುಷ್ಯರು ಮತ್ತು ಮೃಗಗಳು ಶಾಂತಿಯಿಂದ ಕೂಡಿ ಜೀವಿಸುವಂತೆ ಉದ್ದೇಶಿಸಲಾಗಿತ್ತು. ಮೃಗಗಳು ಹೆಸರಿಸಲ್ಪಡಲಿಕ್ಕಾಗಿ ಮನುಷ್ಯನ ಮುಂದೆ ದಾಟಿಹೋದಾಗ ಮನುಷ್ಯನು ಶಸ್ತ್ರಪಾಣಿಯಾಗಿರಲಿಲ್ಲವೆಂಬ ನಿಜತ್ವದಿಂದ ಇದು ತೋರಿಬರುತ್ತದೆ. ಮತ್ತು ಮನುಷ್ಯನಾಗಲಿ ಪ್ರಾಣಿಯಾಗಲಿ ಯಾವ ಭಯವನ್ನೂ ವ್ಯಕ್ತಪಡಿಸಿದ ಪ್ರಸ್ತಾಪ ಅಲ್ಲಿರುವುದಿಲ್ಲ.—ಆದಿಕಾಂಡ 2:19, 20.
ಆದಿ ಉದ್ದೇಶ ನೆರವೇರಲಿದೆ
ಸಂತೋಷದ ವಿಷಯವೇನಂದರೆ, ಬೇಗನೆ, ಸಕಲ ಮಾನವ ನಿರ್ಮಿತ ಸರಕಾರಗಳು ಸ್ವರ್ಗದಿಂದಾಳುವ ದೇವರ ರಾಜ್ಯದಿಂದ ಸ್ಥಾನಭರ್ತಿ ಮಾಡಲ್ಪಡುವಾಗ ದೇವರ ಮೂಲ ಉದ್ದೇಶವು ನೆರವೇರುವುದು. (ದಾನಿಯೇಲ 2:44; ಮತ್ತಾಯ 6:9, 10) ದೇವರಾಳಿಕೆ ಸಮಸ್ತ ಭೂಮಿಯ ಮೇಲೆ ಪೂರ್ತಿ ಪುನಃಸ್ಥಾಪಿಸಲ್ಪಟ್ಟಿರುವಾಗ ಭೂಮಿ, ಮನುಷ್ಯ ಮತ್ತು ಮೃಗನಿವಾಸಿಗಳ ಕಡೆಗೆ ದೇವರ ಮೂಲ ಉದ್ದೇಶವು ನೆರವೇರಲು ಆರಂಭವಾಗುವುದು.
ದೇವರ ನೀತಿಯ ಆಳಿಕೆಯ ರೂಪಾಂತರಿತ ಪರಿಣಾಮವನ್ನು ಅನೇಕ ಬೈಬಲ್ ಪ್ರವಾದನೆಗಳು ಸೊಗಸಾಗಿ ವರ್ಣಿಸಿವೆ. ಉದಾಹರಣೆಗೆ, ಯೆಶಾಯನು ಪ್ರೇರಿತನಾಗಿ ಬರೆದುದನ್ನು ಗಮನಿಸಿರಿ: “ತೋಳವು ಕುರಿಯ ಸಂಗಡ ವಾಸಿಸುವದು, ಚಿರತೆಯು ಮೇಕೆ ಮರಿಯೊಂದಿಗೆ ಮಲಗುವದು; ಕರುವೂ ಪ್ರಾಯದ ಸಿಂಹವೂ ಪುಷ್ಟಶುವೂ ಒಟ್ಟಿಗಿರುವವು. ಇವುಗಳನ್ನು ಚಿಕ್ಕ ಮಗುವು ನಡಿಸುವದು. ಹಸುವು ಕರಡಿಯು ಸಂಗಡ ಮೇಯುವವು; ಅವುಗಳ ಮರಿಗಳು ಜೊತೆಯಾಗಿ ಮಲಗುವವು; ಸಿಂಹವು ಎತ್ತಿನಂತೆ ಹುಲ್ಲು ತಿನ್ನುವದು. ನನ್ನ ಪರಿಶುದ್ಧ ಪರ್ವತದಲ್ಲೆಲ್ಲಾ ಯಾರೂ ಕೇಡು ಮಾಡುವದಿಲ್ಲ, ಯಾರೂ ಹಾಳು ಮಾಡುವದಿಲ್ಲ; ಸಮುದ್ರದಲ್ಲಿ ನೀರು ಹೇಗೋ ಹಾಗೆಯೇ ಭೂಮಿಯಲ್ಲಿ ಯೆಹೋವನ ಜ್ಞಾನವು ತುಂಬಿಕೊಂಡಿರುವದು.”—ಯೆಶಾಯ 11:6, 7, 9.
ದೇವರ ನೂತನ ಜಗತ್ತಿನಲ್ಲಿರುವ ಅಗಾಧ ಶಾಂತಿಯನ್ನು ಇತರ ಭವಿಷ್ಯವಾಣಿಗಳೂ ತೋರಿಸುತ್ತವೆ. ಮೀಕನು ಇದರ ಕುರಿತು ಮುಂತಿಳಿಸಿದ್ದು: “ಅವರೋ ತಮ್ಮ ಕತ್ತಿಗಳನ್ನು ಕುಲುಮೆಗೆ ಹಾಕಿ ಗುಳಗಳನ್ನಾಗಿಯೂ ಬರ್ಜಿಗಳನ್ನು ಕುಡುಗೋಲುಗಳನ್ನಾಗಿಯೂ ಮಾಡುವರು; ಜನಾಂಗವು ಜನಾಂಗಕ್ಕೆ ವಿರುದ್ಧವಾಗಿ ಕತ್ತಿಯನ್ನೆತ್ತದು, ಇನ್ನು ಯುದ್ಧಾಭ್ಯಾಸವು ನಡೆಯುವದೇ ಇಲ್ಲ. ಒಬ್ಬೊಬ್ಬನು ತನ್ನತನ್ನ ದ್ರಾಕ್ಷಾಲತೆ, ಅಂಜೂರ ಗಿಡ, ಇವುಗಳ ನೆರಳಿನಲ್ಲಿ ಕೂತುಕೊಳ್ಳುವನು; ಅವರನ್ನು ಯಾರೂ ಹೆದರಿಸರು.”—ಮೀಕ 4:3, 4.
ಆಗ ಯಾವ ವನ್ಯಮೃಗಗಳೂ ಮಾನವಸಂತತಿಯ ಶಾಂತಿಯನ್ನು ಭಂಗಮಾಡವು, ಏಕೆಂದರೆ ದೇವರ ಪ್ರವಾದನಾವಾಕ್ಯವು ಹೇಳುವುದು: “ನಾನು ಅವರೊಂದಿಗೆ ಒಂದು ಶಾಂತಿಯ ಕರಾರನ್ನು ಮಾಡುವೆನು, ಮತ್ತು ನಾನು ಹಾನಿಕರವಾದ ವನ್ಯಮೃಗಗಳು ನಾಡಿನಲ್ಲಿ ಇಲ್ಲದಂತೆ ಮಾಡುವೆನು, ಮತ್ತು ಅವರು ವಾಸ್ತವವಾಗಿ ಅರಣ್ಯದಲ್ಲಿ ಭದ್ರತೆಯಿಂದಿದ್ದು ಕಾಡಿನಲ್ಲಿ ಮಲಗುವರು. . . . ಅವರು ತಮ್ಮದೇ ಆದ ನೆಲದ ಮೇಲೆ ಭದ್ರತೆಯಿಂದಿರುವರು.”—ಯೆಹೆಜ್ಕೇಲ 34:25, 27, NW.
ಹೀಗೆ, ಪುನಃಸ್ಥಾಪಿತವಾದ ಪ್ರಮೋದವನದಲ್ಲಿ ಶಾಂತಿ ಮತ್ತು ಸಾಮರಸ್ಯವು ಪೂರ್ತಿಯಾಗುವುದು. ಈ ಕಾರಣದಿಂದಲೆ, ಬೈಬಲಿನ ಕೊನೆಯ ಪುಸ್ತಕದಲ್ಲಿ ಪರಿಸ್ಥಿತಿಗಳನ್ನು ಹೀಗೆ ವರ್ಣಿಸಸಾಧ್ಯವಾಯಿತು: “[ದೇವರು] ಅವರ ಕಣ್ಣೀರನ್ನೆಲ್ಲಾ ಒರಸಿಬಿಡುವನು. ಇನ್ನು ಮರಣವಿರುವದಿಲ್ಲ, ಇನ್ನು ದುಃಖವಾಗಲಿ ಗೋಳಾಟವಾಗಲಿ ಕಷ್ಟವಾಗಲಿ ಇರುವದಿಲ್ಲ; ಮೊದಲಿದ್ದದ್ದೆಲ್ಲಾ ಇಲ್ಲದೆ ಹೋಯಿತು. . . . ಆಗ ಸಿಂಹಾಸನದ ಮೇಲೆ ಕೂತಿದ್ದವನು—ಇಗೋ, ಎಲ್ಲವನ್ನು ಹೊಸದುಮಾಡುತ್ತೇನೆ ಅಂದನು. ಮತ್ತು ಅವನು ನನಗೆ—ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ ಎಂದು ಹೇಳಿದನು.”—ಪ್ರಕಟನೆ 21:4, 5.
ಹೌದು, ನಂಬತಕ್ಕವುಗಳೂ, ಸತ್ಯವಾದವುಗಳೂ. ಅಂದರೆ, ನಾವು ದೇವರ ವಾಗ್ದಾನಗಳಲ್ಲಿ ನಂಬಸಾಧ್ಯವಿದೆಯೆಂದು ಅರ್ಥ, ಏಕೆಂದರೆ ಅಪೂರ್ಣ ಮನುಷ್ಯರಿಗೆ ಅಸದೃಶವಾಗಿ, ಆತನಿಗೆ ತನ್ನ ಉದ್ದೇಶಗಳನ್ನು ನೆರವೇರಿಸಲು ಶಕ್ತಿ, ವಿವೇಕ ಮತ್ತು ದೃಢ ಮನಸ್ಸು ಇದೆ. ದೇವರ ಪುರಾತನಕಾಲದ ನಂಬಿಗಸ್ತ ಸೇವಕರುಗಳಲ್ಲಿ ಒಬ್ಬನು ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.”—ಯೆಹೋಶುವ 23:14; ಯೆಶಾಯ 55:11ನ್ನೂ ನೋಡಿ.
ಇದೇ ಭರವಸೆ, ಅಂದರೆ ಬೇಗನೆ, ದೇವರ ನೂತನ ಜಗತ್ತಿನಲ್ಲಿ, ಭೂಮಿ, ಮಾನವರು ಮತ್ತು ಮೃಗಗಳ ಕಡೆಗೆ ದೇವರ ಆದಿ ಉದ್ದೇಶವು ನೆರವೇರುವುದೆಂಬ ಭರವಸೆ ನಮಗೂ ಇರಬಲ್ಲದು. ದೇವದತ್ತ ಶಾಂತಿ ಭೂವ್ಯಾಪಕವಾದ ನಿಜತ್ವವಾಗಿರುವುದು. ಮತ್ತು ಇಂಥ ಶಾಂತಿ ಮನುಷ್ಯರೊಳಗೆ ಮಾತ್ರವಲ್ಲ ಮೃಗಕ್ಷೇತ್ರದಲ್ಲಿಯೂ ಪ್ರತಿಬಿಂಬಿತವಾಗುವುದು. (g91 4/8)