ಕಲಾಸಿಅಮ್ ಪುರಾತನ ಕಾಲದ ರೋಮಿನ “ಮನೋರಂಜನೆ”ಯ ಕೇಂದ್ರ
ಎಚ್ಚರ!ದ ಇಟೆಲಿಯ ಸುದ್ದಿಗಾರರಿಂದ
“ರೋಮಿನ ಪುರಾತನ ಕಾಲದ ಅತಿ ಪ್ರಸಿದ್ಧ ಸ್ಮಾರಕಗಳಲ್ಲಿ ಕಲಾಸಿಅಮ್ ಒಂದು; ಇದು ರೋಮಿನ ಹಿಂದಿನ ಶಕ್ತಿ ಮತ್ತು ಮಹಿಮೆಯ ದ್ಯೋತಕ, ಮತ್ತು ಅತಿಯಾದ ಘೋರಕೃತ್ಯಗಳ ಸಾಕ್ಷಿ” ಎನ್ನುತ್ತಾನೆ ಲೂಕ, ತನ್ನ ಮಿತ್ರರಾದ ಮಾರ್ಕೊ ಮತ್ತು ಪಾವ್ಲೊ ಎಂಬವರಿಗೆ ಪ್ರವಾಸ ಮಾರ್ಗದರ್ಶಿಯಾಗಿ ಕೆಲಸ ಮಾಡುತ್ತಾ.
ಪ್ರಾಯಶಃ ನಿಮಗೂ ಕಲಾಸಿಅಮ್ ವಿಷಯ ಹೆಚ್ಚು—ಅಂದರೆ ಅದು ಯಾವಾಗ ಕಟ್ಟಲ್ಪಟ್ಟಿತು, ಮತ್ತು ಅಲ್ಲಿ ಯಾವ ಪ್ರದರ್ಶನಗಳು ನಡೆದವು—ತಿಳಿಯಬಯಸುತ್ತೀರಿ. ಆದಿ ಕ್ರೈಸ್ತರಲ್ಲಿ ಯಾರಾದರೂ ಅಲ್ಲಿಗೆ ಹೋಗುತ್ತಿದ್ದರೊ? ಅವರು ಅಲ್ಲಿ, ಕೆಲವರು ನಂಬುವಂತೆ, ಕಾಡು ಮೃಗಗಳಿಂದ ಹರಿಯಲ್ಪಟ್ಟು ಸತ್ತರೊ? ಒಳ್ಳೆಯದು, ಲೂಕ ತನ್ನ ಸ್ನೇಹಿತರಿಗೆ ಹೇಳುವುದನ್ನು ಕೇಳಿರಿ.
ಲೂಕ: “ಕಲಾಸಿಅಮನ್ನು ಪ್ರಥಮವಾಗಿ ಫ್ಲೇವಿಯನ್ ಮಲ್ಲರಂಗವೆಂದು ಕರೆಯಲಾಗುತ್ತಿತ್ತು. ಇದು ಫ್ಲೇವಿಯ ಕುಟುಂಬದ ಚಕ್ರವರ್ತಿಗಳಾದ ವೆಸ್ಪೇಸಿಯನ್, ಟೈಟಸ್, ಮತ್ತು ಡೊಮಿಟಿಯನ್, ಇವರ ಒಟ್ಟಾದ ಕೆಲಸವಾಗಿದ್ದ ಕಾರಣವೆ. ವೆಸ್ಪೇಸಿಯನ್ ಇದರ ರಚನೆಯನ್ನು ಸಾ.ಶ. 72ರಿಂದ 75ರಲ್ಲಿ ಆರಂಭಿಸಿದನು. ಅವನ ಪುತ್ರ ಟೈಟಸನು ಕೆಲಸವನ್ನು ಮುಂದುವರಿಸಿ, ಸಾ.ಶ. 80ರಲ್ಲಿ ಪ್ರಾರಂಭೋತ್ಸವವನ್ನು ನಡಿಸಿದನು, ಮತ್ತು ಅವನ ತಮ್ಮ ಡೊಮಿಟಿಯನ್ ಅದನ್ನು ಆ ಬಳಿಕ ಕಟ್ಟಿ ಮುಗಿಸಿದನು.”
ಪಾವ್ಲೊ: “ಆದರೆ ಇದನ್ನು ಕಲಾಸಿಅಮ್ ಎಂದು ಏಕೆ ಕರೆಯಲಾಗುತ್ತದೆ?”
ಲೂಕ: “ಅದೊಂದು ರಸಕರವಾದ ಪ್ರಶ್ನೆಯಾದರೂ ಅದಕ್ಕೆ ನಿಶ್ಚಯವಾದ ಉತ್ತರವಿಲ್ಲ. ಸಾ.ಶ. ಎಂಟನೆಯ ಶತಮಾನದ ತನಕ ಈ ಮಲ್ಲರಂಗವನ್ನು ಕಲಾಸಿಅಮ್ ಎಂದು ಕರೆಯಲಾಗುತ್ತಿರಲಿಲ್ಲವೆಂದು ಕಂಡುಬರುತ್ತದೆ. ಅದರ ಮಹಾ ಗಾತ್ರದ ಕಾರಣ ಅದಕ್ಕೆ ಆ ಹೆಸರು ಬಂದಿದೆಯೆಂದು ಕೆಲವರ ಅಭಿಪ್ರಾಯ. ಇನ್ನು ಕೆಲವರು, ಹತ್ತಿರದಲ್ಲಿರುವ ನೀರೋ ಬೃಹದೇಹ್ದಿ, ಅಂದರೆ ನೀರೋವನ್ನು ಸೂರ್ಯದೇವನಾಗಿ ಪ್ರತಿನಿಧೀಕರಿಸಿದ 35 ಮೀಟರ್ ಎತ್ತರದ ಭಾರಿ ಪ್ರತಿಮೆಯಿಂದಾಗಿ ಎಂದು ಹೇಳುತ್ತಾರೆ.”
“ಸ್ವಲ್ಪ ವಿವರಣೆಯನ್ನು ಕೊಡದೆ ರೋಮನ್ ಮಲ್ಲರಂಗಗಳಲ್ಲಿ ಇದು ಅತಿ ದೊಡ್ಡದೆಂದು ಮಾತ್ರ ಹೇಳಿದರೆ ಅದಕ್ಕೆ ಹೆಚ್ಚು ಅರ್ಥ ಬರುವುದಿಲ್ಲ. ಉದಾಹರಣೆಗೆ, ಇದನ್ನು ಅಂಡವೃತ್ತದ ಆಕಾರದಲ್ಲಿ, ಅದರ ದೊಡ್ಡ ಅಕ್ಷ 188 ಮೀಟರ್, ಮತ್ತು ಚಿಕ್ಕ ಅಕ್ಷ 156 ಮೀಟರ್ ಉಳ್ಳದ್ದಾಗಿ ಕಟ್ಟಲ್ಪಟ್ಟಿತು. ಅದರ ಪರಿಧಿ 527 ಮೀಟರ್ ಮತ್ತು ಎತ್ತರ 57 ಮೀಟರ್. ಈ ಕೆಲಸಕ್ಕೆ, ಸಮೀಪದ ಟಿವೊಲಿ ನಗರದಲ್ಲಿ ಕಡಿದು ತೆಗೆದ ಒಂದು ವಿಧದ ಅಮೃತ ಶಿಲೆಯಾದ ಟ್ರ್ಯಾವರ್ಟೈನ್ ಸುಣ್ಣಗಲ್ಲು ಹತ್ತಾರು ಸಾವಿರ ಟನ್ನುಗಳಷ್ಟು ಬೇಕಾಯಿತು. ಮತ್ತು ಈ ಅಮೃತ ಶಿಲೆಯ ಕಲ್ಲುಗಳನ್ನು ಜೋಡಿಸಲು 300 ಟನ್ನು ಕಬ್ಬಿಣವೂ ಬೇಕಾಯಿತು. ಕಟ್ಟುವವರು ನಾವಿಂದು ಪೂರ್ವರಚಿತ ವಸ್ತುಗಳೆಂದು ಕರೆಯುವ ಹೆಚ್ಚು ವಸ್ತುಗಳನ್ನೂ ಉಪಯೋಗಿಸಿದರು. ಕಲ್ಲಿನ ತುಂಡು ಮತ್ತು ಕಂಬಗಳನ್ನು ಇತರ ಕಡೆಗಳಲ್ಲಿ ತಯಾರಿಸಿ ಕಟ್ಟಡ ತಯಾರಿಯ ಸ್ಥಳಕ್ಕೆ ರವಾನಿಸಲಾಯಿತು. ಕಲಾಸಿಅಮನ್ನು ಅಷ್ಟು ವೇಗವಾಗಿ ಹೇಗೆ ಕಟ್ಟಿ ಮುಗಿಸಲಾಯಿತೆಂಬುದನ್ನು ಇದು ವಿವರಿಸುತ್ತದೆ. ಯೋಚಿಸಿರಿ, ಈ ಮಹಾ ಕಟ್ಟಡವನ್ನು ಕಟ್ಟಲು ಐದರಿಂದ ಎಂಟು ವರ್ಷಗಳು ಮಾತ್ರ ಹಿಡಿದವು.”
ಮಾರ್ಕೊ: “ನಾನು ಇದನ್ನು ಯೋಚಿಸುತ್ತಿದ್ದೆ, ಲೂಕ, ಈ ಕಲಾಸಿಯಮಿನಲ್ಲಿ ಎಷ್ಟು ಮಂದಿ ಗುಲಾಮರು ಕೆಲಸ ಮಾಡಿದಿರ್ದಬೇಕು!”
ಲೂಕ: “ಯುದ್ಧ ಕೈದಿಗಳನ್ನು ಕಠಿಣ ಕೆಲಸಕ್ಕಾಗಿ ಉಪಯೋಗಿಸಿದಿರ್ದಬಹುದು, ಅಷ್ಟೆ. ಆದರೆ ಕಟ್ಟಿ ಮುಗಿಸಿದ ವೇಗ ಮತ್ತು ಉಪಯೋಗಿಸಿರುವ ವಿವಿಧ ಸಾಮಗ್ರಿಗಳು, ಇದರಲ್ಲಿ ಕಸಬುದಾರರಾದ ಕೆಲಸಗಾರರು ಮತ್ತು ಶಿಲ್ಪಿಗಳು ಉಪಯೋಗಿಸಲ್ಪಟ್ಟರೆಂದು ಸೂಚಿಸುತ್ತವೆ”.
ಪಾವ್ಲೊ: “ಕಲಾಸಿಅಮಿನಲ್ಲಿ ಎಷ್ಟು ಮಹಡಿಗಳಿವೆ?”
ಲೂಕ: “ಹೊರಗಿನಿಂದ, ಪರಸ್ಪರಾನುರೂಪದ ಕಮಾನುಗಳಿರುವ ಮೂರು ಮಹಡಿಗಳನ್ನು ನೀವು ನೋಡಬಹುದು. ಆದಿಯಲ್ಲಿ ಪ್ರತಿಯೊಂದು ಕಮಾನಿನಲ್ಲಿ ಒಂದೊಂದು ಮೂರ್ತಿಯಿತ್ತು, ಮತ್ತು ಪ್ರತಿ ಮಹಡಿಯಲ್ಲಿ 80 ಕಮಾನುಗಳಿದ್ದವು. ಮೂರನೆಯ ಮಹಡಿಯ ಮೇಲಿಂದ, ಗೋಡೆಯಲ್ಲಿ ದೊಡ್ಡ ಸಮತಲಾಕೃತಿಯ ಕಿಟಿಕಿಗಳಿರುವ ನಾಲ್ಕನೆಯ ಮಹಡಿಯನ್ನು ನೋಡಬಹುದು.
ಮಾರ್ಕೊ: “ಇದರಲ್ಲಿ ಎಷ್ಟು ಜನ ಪ್ರೇಕ್ಷಕರಿಗೆ ಸ್ಥಳವಿತ್ತು?”
ಲೂಕ: “ಪ್ರಮಾಣ ಗ್ರಂಥಗಳಲ್ಲಿ ಹೆಚ್ಚಿನವು ಸುಮಾರು 45,000 ಜನರಿಗೆ ಕುಳಿತುಕೊಳ್ಳಲು ಮತ್ತು 5,000 ಜನರಿಗೆ ನಿಲ್ಲಲು ಸ್ಥಳವಿತ್ತೆಂದು ತೋರಿಸುತ್ತವೆ. ಇತರ ಕೆಲವು ಮೂಲಗಳು 70,000 ಪ್ರೇಕ್ಷಕರಿಗೆ ಸ್ಥಳವಿತ್ತೆಂದು ವಾದಿಸುತ್ತವೆ. ಹೇಗೂ, ಗಣನೀಯ ಗಾತ್ರದ ಸ್ಥಳವಿತ್ತು. ಪ್ರೇಕ್ಷಕರನ್ನು ಆ ಮಲ್ಲರಂಗದ ಆಸನಗಳ ಕ್ಷೇತ್ರವನ್ನು ಆವರಿಸಿದ ಒಂದು ಬಹು ದೊಡ್ಡ ಛಾವಣಿ, ಯಾ ವೆಲೇರಿಯಂ ರಕ್ಷಿಸುತ್ತಿತ್ತು.
“ಈ ಮಲ್ಲರಂಗವು 13 ಮೀಟರ್ ದಪ್ಪದ ಕಾಂಕ್ರೀಟ್ ವೇದಿಕೆಯ ಮೇಲೆ ಕಟ್ಟಲ್ಪಟ್ಟಿದೆ. ಇದು ಅದರ ಶತಮಾನಗಳ ಸ್ಥಿರತೆಗೆ ಸಹಾಯ ಮಾಡಿಯದೆ. ನೀವು ಈಗ ನೋಡುತ್ತಿರುವಂಥ ಕಟ್ಟಡ ಅದರ ಚರಿತ್ರೆಯಲ್ಲಿ ವಿವಿಧ ಬೆಂಕಿ ಮತ್ತು ಭೂಕಂಪಗಳನ್ನು ತಡೆದು ನಿಂತಿದೆ. ಆದರೆ, ಈ ಕಲಾಸಿಅಮಿನ ಅತಿ ದೊಡ್ಡ ಶತ್ರುಗಳು ರೆನೆಸಾನ್ಸ್ ಪುನರುಜ್ಜೀವನ ಕಾಲ ಮತ್ತು ಬರೋಕ್ ವಿಕೃತ ಕಾಲಗಳ ಕಟ್ಟುವವರೇ. ಅವರು ಇದನ್ನು ಸಮೀಪದಲ್ಲಿರುವ ಮತ್ತು ಕಡಮೆ ಖರ್ಚಿನ ಸುಣ್ಣಗಲ್ಲು ಮತ್ತು ಅಮೃತ ಶಿಲೆಯ ಮೂಲವಾಗಿ ಉಪಯೋಗಿಸಿದರು. ರೋಮಿನ ಕೆಲವು ಪ್ರಮುಖ ಕಟ್ಟಡಗಳು ಕಟ್ಟಲ್ಪಟ್ಟದ್ದು ಅಥವಾ ಜೀರ್ಣೋದ್ಧಾರ ಮಾಡಲ್ಪಟ್ಟದ್ದು ಇಲ್ಲಿಂದ ತೆಗೆದ ವಸ್ತುಗಳಿಂದಲೇ. ಆದರೆ, ಬನ್ನಿ, ಈಗ ಒಳಗೆ ಹೋಗೋಣ.”
ಪಾವ್ಲೊ: “ಎಷ್ಟು ಮನದಟ್ಟುವ ಭಗ್ನಾವಶೇಷಗಳು! ಲೂಕ, ಹೇಳು, ಅಲ್ಲಿ ಕೆಳಗೆ ಮಧ್ಯ ಭಾಗದಲ್ಲಿ ಏನಿತ್ತು?”
ಲೂಕ: “ಅದು ಪ್ರದರ್ಶನಗಳಲ್ಲಿ ಉಪಯೋಗಿಸಲ್ಪಡುತ್ತಿದ್ದ ಉಪಕರಣಗಳನ್ನು ಇಡುತ್ತಿದ್ದ ಭೂಮ್ಯಂತರ್ಗತ ಕ್ಷೇತ್ರ. ರಂಗಸ್ಥಳದ ದೃಶ್ಯಗಳನ್ನು, ಕಾಡು ಮೃಗಗಳ ಪಂಜರ, ಆಯುಧಗಳು, ಕಾಡು ಮೃಗಗಳನ್ನು ಮತ್ತು ಖಡ್ಗಮಲ್ಲರನ್ನು ಮಲ್ಲರಂಗದ ಮಟ್ಟಕ್ಕೆ ಎತ್ತುವ ಪ್ರತಿಭಾರವಿದ್ದ ಯಂತ್ರಗಳನ್ನು ಅಲ್ಲಿ ಇಡಲಾಗುತ್ತಿತ್ತು. ಭೂಮ್ಯಂತರ್ಗತ ಕ್ಷೇತ್ರವನ್ನು ಆವರಿಸಿದ ಮಲ್ಲರಂಗದ ನೆಲವನ್ನು ಮರದಿಂದ ಮಾಡಲಾಗಿತ್ತು. ಅದರ ಪತ್ತೆಯೇ ಸಿಗದಿರುವ ಕಾರಣವನ್ನು ಇದು ವಿವರಿಸುತ್ತದೆ. ಮಲ್ಲರಂಗದ ಪರಿಧಿಯ ಸುತ್ತಲು ಎತ್ತರದ ಜಾಲ ಅಥವಾ ಲೋಹದ ರಕ್ಷಕ ಅಡಕ್ಡಂಬಿಗಳಿದ್ದವು. ಈ ಕಂಬಾಧಾರಿತ ಜಾಲದಲ್ಲಿ, ಕಾಡು ಮೃಗಗಳು ಹತ್ತದಂತೆ ಹೆಮ್ಮೊಳೆ ಮತ್ತು ದಂತದ ಮಣಿಗಳಿದ್ದವು. ಇನ್ನೂ ಹೆಚ್ಚಿನ ಮುಂಜಾಗ್ರತೆಯಾಗಿ, ಅನೇಕ ಬಿಲ್ಲಾಳುಗಳು ಮಲ್ಲರಂಗದ ಸುತ್ತಲೂ ನಿಲ್ಲುತ್ತಿದ್ದರೆಂದು ಕಾಣುತ್ತದೆ.”
ಪಾವ್ಲೊ: “ಪ್ರೇಕ್ಷಕರು ಹಣತೆತ್ತು ಒಳಗೆ ಬರಬೇಕಾಗಿತ್ತೊ?”
ಲೂಕ: “ಇಲ್ಲ, ಕಲಾಸಿಅಮಿಗೆ ಪ್ರವೇಶಧನವಿರಲಿಲ್ಲ. ಇದು ಅಂದಿನ ಚಕ್ರವರ್ತಿಗಳ ಕಾರ್ಯನೀತಿಯ ಭಾಗವಾಗಿತ್ತು. ಅವರು ಜನರನ್ನು ನಿಯಂತ್ರಣದಲ್ಲಿಡಲು ಪುಕ್ಕಟೆಯಾದ ಮನೋರಂಜನೆಯನ್ನು ಒದಗಿಸುತ್ತಿದ್ದರು. ವಾಸ್ತವ್ಯದಲ್ಲಿ, ಈ ಪ್ರದರ್ಶನಗಳು ಜನರ ಮನಸ್ಸಾಕ್ಷಿಯನ್ನು ಭ್ರಷ್ಟಗೊಳಿಸುವ ಮಾದಕ ಪದಾರ್ಥಗಳಂತಿದ್ದವು. ರೋಮನ್ ಕವಿ ಜೂವೆನಲ್, ಅಧಿಕಾಂಶವಾಗಿ ಉಣ್ಣಲು ಮತ್ತು ಸಂತೋಷಿಸಲು ಜೀವಿಸುತ್ತಿದ್ದ ರೋಮನ್ ಜನರ ವರ್ತನೆಯ ಕುರಿತು ಮರುಗುತ್ತಾ ‘ರೊಟ್ಟಿ ಮತ್ತು ಸರ್ಕಸುಗಳು’ (panem et circenses) ಎಂಬ ಪದಸರಣಿಯನ್ನು ಉಪಯೋಗಿಸಿದನು.
“ಮಲ್ಲರಂಗದ ಆಸನಗಳಲ್ಲಿ ವರ್ಗೀಕರಣವು ತೋರಿಸುವಂತೆ ರೋಮನ್ ಸಮಾಜದಲ್ಲಿ ವರ್ಗಗಳಿದ್ದವು. ಎದುರಿನ ಆಸನಗಳು ಶಾಸಕರಿಗೆ ಕಾದಿರಿಸಲಾಗಿತ್ತು. ಇವುಗಳ ಹಿಂದೆ ಸ್ವದಂಶೀಯರ ಆಸನಗಳೂ, ಇನ್ನೂ ಮೇಲೆ ಸ್ತ್ರೀಯರ ಮತ್ತು ಗುಲಾಮರ ಆಸನಗಳೂ ಇದ್ದವು.
ಮಾರ್ಕೊ: “ಖಡ್ಗಮಲ್ಲರು ಇಲ್ಲಿಯೆ ಕಾದಾಡಿದರೊ?”
ಲೂಕ: “ಹೌದು, ಇಲ್ಲಿ ಮುಖ್ಯವಾಗಿ ಎರಡು ರೀತಿಯ ಪ್ರದರ್ಶನಗಳಿದ್ದವು. ಮುನೇರ, ಯಾ ಇಬ್ಬರು ಖಡ್ಗಮಲ್ಲರ ಮಧ್ಯೆ ಕಾದಾಟ, ಮತ್ತು ವೆನೇಶನಿಸ್, ಯಾ ಕಾಡು ಮೃಗಗಳ ಬೇಟೆ. ಇಲ್ಲಿ ಪಾತಕಿಗಳನ್ನೂ ಮರಣಕ್ಕೆ ಒಪ್ಪಿಸಲಾಗುತ್ತಿತ್ತು. ಅವರನ್ನು ಆಯುಧರಹಿತರಾಗಿ ಖಡ್ಗಮಲ್ಲರ ಮುಂದೆ ಹಾಕಲಾಗುತ್ತಿತ್ತು ಇಲ್ಲವೆ ಕಾಡು ಮೃಗಗಳಿಗೆ ಎಸೆಯಲಾಗುತ್ತಿತ್ತು. ಅವರ ಮರಣವು ಸಾರ್ವಜನಿಕರ ‘ಸುಖಾನುಭವ’ಕ್ಕೆ ಭಯಂಕರ ಪ್ರದರ್ಶನವಾಗಿತ್ತು.”
ಪಾವ್ಲೊ: “ನನ್ನ ಜ್ಞಾಪಕಕ್ಕೆ ಬರುವಂತೆ, ಈ ಖಡ್ಗಮಲ್ಲರು ಗುಲಾಮರು, ಅಲ್ಲವೆ?”
ಲೂಕ: “ಹೌದು, ಯುದ್ಧ ಕೈದಿಗಳ ಮಧ್ಯದಿಂದ ಆರಿಸಿಕೊಂಡ ಗುಲಾಮರು. ಇವರು ತಮ್ಮ ಪ್ರಾಣ ಉಳಿಸಲು ಯಾವ ಕೆಲಸವನ್ನೂ ಅಂಗೀಕರಿಸಿದರು. ಇವರಲ್ಲಿ ಕೆಲವರು ಪಾತಕಿಗಳು. ಮರಣ ಶಿಕ್ಷೆಯನ್ನು ತಪ್ಪಿಸಿಕೊಳ್ಳಲು ಖಡ್ಗಮಲ್ಲರ ಕಾದಾಟಗಳಲ್ಲಿ ತಮಗೆ ಹೆಚ್ಚು ಅವಕಾಶವಿದೆಯೆಂದು ನೋಡುತ್ತಿದ್ದವರು. ಇನ್ನಿತರರು ತಮ್ಮನ್ನು ಖಡ್ಗಮಲ್ಲರಾಗಿ ಸ್ವಯಂ ಒಪ್ಪಿಸಿದರು. ಇವರು ತಮ್ಮ ವೃತ್ತಿಯನ್ನು ಆರಂಭಿಸುವ ಮೊದಲು ತರಬೇತಿಗಾಗಿ ಶಾಲೆಗಳಿದ್ದವು. ಅವರು ಕಾದಾಟದ ವಿವಿಧ ಉಪಕರಣಗಳನ್ನು, ಅಂದರೆ ಖಡ್ಗ, ಅಥವಾ ಈಟಿ ಮತ್ತು ಡಾಲು, ಯಾ ಜಾಲ ಮತ್ತು ತ್ರಿಶೂಲಗಳನ್ನು ಉಪಯೋಗಿಸಲು ಅವರಿಗೆ ಅನುಮತಿಯಿತ್ತು. ಈ ಸಂದರ್ಭಗಳನ್ನು ಲೂಡಿ ಗ್ಲಾಡಿಯೋಟರೀ, ಅಂದರೆ ಖಡ್ಗಮಲ್ಲರ ಆಟಗಳು ಎಂದು ಕರೆಯಲಾಗುತ್ತಿದ್ದರೂ, ಅನೇಕ ವೇಳೆ, ಸ್ಪರ್ಧಿಗಳಲ್ಲಿ ಒಬ್ಬನು ಸಾಯುವ ದುರಂತ ಪ್ರದರ್ಶನಗಳು ಇಲ್ಲಿ ನಡೆಯುತ್ತಿದ್ದವು.”
ಮಾರ್ಕೊ: “ವಾಸ್ತವವೇನಂದರೆ, ಈ ಖಡ್ಗಮಲ್ಲರು ಮಲ್ಲರಂಗವನ್ನು ಪ್ರವೇಶಿಸಿದಾಗ, ಅವರು ಚಕ್ರವರ್ತಿಯನ್ನು, ‘ಆವೆ, ಸೀಸರ್, ಮಾರಿಟುರಿ ಟಿ ಸ್ಯಾಲ್ಯುಟಾಂಟ್,’ ಅಂದರೆ, ‘ಕೈಸರನಿಗೆ ಜಯ, ಸಾಯಲು ಹೋಗುವವರು ತಾವುಗಳನ್ನು ವಂದಿಸುತ್ತಾರೆ.’ ಎಂದು ಹೇಳುತ್ತಿದ್ದರು ಎಂಬುದನ್ನು ನಾನು ನೆನಪಿಸಬಲ್ಲಿ.”
ಪಾವ್ಲೊ: “ಹಾಗಾದರೆ ಚಲನ ಚಿತ್ರಗಳು ತೋರಿಸುವಂತೆ, ಸೋತ ಖಡ್ಗಮಲ್ಲನಿಗೆ ಮರಣ ಶಿಕ್ಷೆ ವಿಧಿಸಲು ಚಕ್ರವರ್ತಿಯು ಕೈಚಾಚಿ ತನ್ನ ಹೆಬ್ಬೆಟ್ಟನ್ನು ಕೆಳಮುಖ ಮಾಡುವ ವಿಷಯ—ಅದು ನಿಜವಾಗಿ ನಡೆಯಿತೊ?”
ಲೂಕ: “ಹೌದು. ಹಿಂದಿನ ಕಾಲಗಳಲ್ಲಿ, ಗೆದ್ದವನು ಸೋತವನ ಗತಿಯನ್ನು ನಿರ್ಧರಿಸುತ್ತಿದ್ದನು. ಆ ಬಳಿಕ, ಈ ಹಕ್ಕು ಚಕ್ರವರ್ತಿಗೆ ಕೊಡಲ್ಪಟ್ಟಿತು. ಅವನು ಜನಸಮುದಾಯದ ತೀರ್ಪನ್ನು ಕೇಳಿ ನಿರ್ಣಯಿಸುತ್ತಿದ್ದನು. ಸೋತವನು ಸಾಹಸದಿಂದ ಕಾದಾಡಿದನೆಂದು ಜನರು ಯೋಚಿಸಿದಲ್ಲಿ, ಅವರು ತಮ್ಮ ಹೆಬ್ಬೆಟ್ಟುಗಳನ್ನು ಮೇಲೆತ್ತಿ, ‘ಬಿಟ್ಟು ಬಿಡಿ!’ ಎಂದು, ಅವನ ಜೀವವನ್ನು ಉಳಿಸಬೇಕೆಂದು ಕೇಳುತ್ತಾ ಕೂಗಿದರು. ಮತ್ತು ಚಕ್ರವರ್ತಿ ಸಹ ಹೆಬ್ಬೆಟ್ಟನ್ನು ಮೇಲೆತ್ತಿ ಹಿಡಿಯುವಲ್ಲಿ, ಸೋತವನಿಗೆ ಬದುಕಿ ಉಳಿಯುವ ಅನುಮತಿ ಸಿಗುತ್ತಿತ್ತು. ಆದರೆ ಇದಕ್ಕೆ ಬದಲಾಗಿ ಪ್ರೇಕ್ಷಕರು, ಅವನು ಹೇಡಿಯಂತೆ ವರ್ತಿಸಿದನೆಂದು ತಿಳಿಯುವಲ್ಲಿ, ಅವರು ತಮ್ಮ ಹೆಬ್ಬೆಟ್ಟನ್ನು ಕೆಳಮುಖ ಮಾಡಿ, ‘ಇವನನ್ನು ಕೊಲ್ಲಿ!’ ಎಂದು ಕೂಗಿದರು. ಚಕ್ರವರ್ತಿಯೂ ಅದೇ ಸನ್ನೆಯನ್ನು ತಾನೂ ಮಾಡುವಲ್ಲಿ, ಸೋತ ಖಡ್ಗಮಲ್ಲನಿಗೆ ಮರಣ ಶಿಕ್ಷೆಯಾದಂತಾಗುತ್ತಿತ್ತು. ಅವನಿಗೆ ಬಾಕಿ ಉಳಿದ ಅವಕಾಶವು ತನ್ನ ಗಂಟಲನ್ನು ಆ ವಿಜಯಿಯ ಮಾರಕ ಹೊಡೆತಕ್ಕೆ ಒಡ್ಡುವುದೇ. ಇದೆಲ್ಲ ನಡೆಯುತ್ತಿದ್ದದ್ದು ಜನರ ಅಭಿನಂದನೆ ಮತ್ತು ಜಯಘೋಷದ ಮಧ್ಯದಲ್ಲೇ. ಆ ಬಳಿಕ, ವಿಜಯಿಗೆ ಅಮೂಲ್ಯ ಕೊಡುಗೆಗಳೂ ಚಿನ್ನದ ನಾಣ್ಯಗಳೂ ಕೊಡಲ್ಪಡುತ್ತಿದ್ದವು.
ಮಾರ್ಕೊ: “ಇದೆಷ್ಟು ಕ್ರೂರ ಪ್ರದರ್ಶನ!”
ಲೂಕ: “ಹೌದು! ಮಾನವ ರಕ್ತ ಪದಶಃ ಹರಿಯಿತು; ಕೊಲ್ಲಲ್ಪಟ್ಟ ಕಾಡು ಮೃಗಗಳ ರಕ್ತ ಬೇರೆ. ಪ್ರಾಣಿಗಳ ಪ್ರದರ್ಶನದಲ್ಲಿ ಅನೇಕ ವೇಳೆ, ತರಬೇತುಗಾರನ ಆಜೆಗ್ಞೆ ವಿಧೇಯತೆ ತೋರಿಸುವ ಪಳಗಿಸಿದ ಕಾಡು ಮೃಗಗಳ ಸರಳ ಪ್ರದರ್ಶನ ಸೇರಿತ್ತು. ಆಧುನಿಕ ದಿನಗಳ ಸರ್ಕಸ್ ಕಳದಲ್ಲಿ ನಾವು ನೋಡುವಂತೆಯೇ ಇದಿತ್ತು. ಆದರೆ, ಅನೇಕ ವೇಳೆ, ಕಾಡು ಮೃಗಗಳು ಪರಸ್ಪರ ಕಾದಾಡಿದವು ಯಾ ಅವುಗಳನ್ನು ಬೆನ್ನಟ್ಟಿ ಕೊಲಲ್ಲಾಯಿತು. ಅದು ನಿಜ ಸಂಹಾರವಾಗಿತ್ತು. ಯೋಚಿಸಿರಿ, ಕಲಾಸಿಅಮಿನ ಪ್ರಾರಂಭೋತ್ಸವದಲ್ಲಿ, ಒಂದೇ ದಿನದಲ್ಲಿ 5,000 ಕಾಡು ಮೃಗಗಳು ಕೊಲ್ಲಲ್ಪಟ್ಟವು!”
ಪಾವ್ಲೊ: “ಇಂಥ ವಿಷಯಗಳಲ್ಲಿ ಜನರು ಹೇಗೆ ಸಂತೋಷಿಸುತ್ತಿದ್ದರೊ.”
ಲೂಕ: “ಒಳ್ಳೆಯದು, ಇಂದಿನ ಬಾಕ್ಸಿಂಗ್ ಆಟಗಳ ಕುರಿತು ಯೋಚಿಸಿರಿ. ಸೋತವನು ಪ್ರಜ್ಞೆ ತಪ್ಪಿ ಕೆಡವಲ್ಪಡುವಾಗ, ಅವನ ಮುಖದಲ್ಲಿ ರಕ್ತ ಸುರಿಯುತ್ತಿರುವಾಗ, ಪ್ರೇಕ್ಷಕರು ಕೂಗಿ ಸಮ್ಮತಿ ಸೂಚಿಸುತ್ತಾರೆ. ಅಥವಾ, ನೆತ್ತರು, ಸಾವು, ಮತ್ತು ಹೆಪ್ಪುಗಟ್ಟಿದ ರಕ್ತವನ್ನು ತೋರಿಸಿ ಸಾರ್ವಜನಿಕರನ್ನು ರೋಮಾಂಚಗೊಳಿಸುವ ಪ್ರಯತ್ನಮಾಡುವ ಚಲನ ಚಿತ್ರಗಳಿಂದ ಆಕರ್ಷಿತರಾಗುವವರ ವಿಷಯವೇನು? ಇಂದಿನ ಜನರು ಸಹ ಪ್ರಾಯಶಃ ಅವರಷ್ಟೇ ವೇದನಾಶೂನ್ಯತೆಯುಳ್ಳವರು.
“ಹೀಗೆ, ಮಲ್ಲರಂಗಗಳು ಹಿಂಸಾಕೃತ್ಯ ಮತ್ತು ಭ್ರಷ್ಟತೆಯ ಸ್ಥಳಗಳಾಗಿದ್ದವು. ಈ ಕಾರಣದಿಂದ ಆದಿಕ್ರೈಸ್ತರು ಅವುಗಳಿಗೆ ಹೋಗದೆ ಇರಲು ಜಾಗ್ರತೆ ವಹಿಸುತ್ತಿದ್ದರು. ವಾಸ್ತವವೇನಂದರೆ, ಮೂರನೆಯ ಶತಮಾನದ ಲೇಖಕ ಟೆರ್ಟಲಿಯನ್, ತನ್ನ ಡಿ ಸ್ಪೆಕ್ಟ್ಯಾಕ್ಯುಲಿಸ್ ಎಂಬ ಪುಸ್ತಕದಲ್ಲಿ, ಮಲ್ಲರಂಗದಲ್ಲಿ ನಡೆಯುತ್ತಿದ್ದುದನ್ನು ‘ಕಚಡ’ ಎಂದು ಕರೆದು, ಮಲ್ಲರಂಗವು ಕ್ರೈಸ್ತರಿಗೆ ‘ಪೂರ್ತಿ ಹೊರಗಿನದ್ದು’ ಎಂದು ಒತ್ತಿ ಹೇಳಿದನು.
ಮಾರ್ಕೊ: “ಕಲಾಸಿಅಮ್ನಲ್ಲಿ ಕೆಲವು ಕ್ರೈಸ್ತರು ಹುತಾತ್ಮರಾಗಿ ಸತ್ತಿರುವ ಸಾಧ್ಯತೆ ಇದೆಯೆ?”
ಲೂಕ: “ಕ್ರೈಸ್ತರು ರೋಮನ್ ಮಲ್ಲರಂಗಗಳಲ್ಲಿ, ಕಾಡು ಮೃಗಗಳಿಂದ ಹರಿಯಲ್ಪಟ್ಟು ಸತ್ತಿದ್ದಾರೆಂಬುದಕ್ಕೆ ಸಂಶಯವಿಲ್ಲ. ಇತಿಹಾಸ ಮೂಲಗಳು ಇದನ್ನು ರುಜು ಪಡಿಸುತ್ತವೆ. 1 ಕೊರಿಂಥ 15:32ರಲ್ಲಿ, ಎಫೆಸದ ಮಲ್ಲರಂಗದಲ್ಲಿ ತನ್ನನ್ನು ಅಪಾಯಕಾರಿ ಕಾಡು ಮೃಗಗಳಿಗೆ ಒಡ್ಡಲಾಯಿತೆಂದು ಅಪೊಸ್ತಲ ಪೌಲನು ಹೇಳುತ್ತಿರಬಹುದು.
“ಕ್ರೈಸ್ತರು ರೋಮಿನಲ್ಲಿ ಎಲ್ಲಿಯೋ ಹುತಾತ್ಮರ ಮರಣವನ್ನು ಪಡೆದರೆಂಬುದು ನಿಶ್ಚಯವಾದರೂ, ಅವರು ಕಲಾಸಿಅಮ್ನಲ್ಲಿಯೇ ಹುತಾತ್ಮರಾದರೋ ಇಲ್ಲವೊ ಎಂದು ಹೇಳುವುದು ಅಸಾಧ್ಯ. ಎನ್ಸಿಕ್ಲೊಪೀಡಿಯ ಯೂನಿವರ್ಸೆಲ್, ಸಂಪುಟ 4, ಹೇಳುವುದು: ‘ಕಲಾಸಿಅಮ್ ಕ್ರೈಸ್ತ ಹುತಾತ್ಮ ಮರಣದ ಸ್ಥಳವಾಗಿತ್ತೆಂದು ಐತಿಹಾಸಿಕವಾಗಿ ರುಜುವಾಗಿರುವುದಿಲ್ಲ.’ ಆದರೂ, ಅನೇಕ ಕ್ಯಾಥಲಿಕ್ ಲೇಖಕರು ಹೌದೆಂದು ವಾದಿಸುತ್ತಾರೆ. ಅವರು ತಮ್ಮ ಅಭಿಪ್ರಾಯಗಳನ್ನು ಅನುಕ್ರಮ ಕಾಲಗಳಲ್ಲಿ ಹುಟ್ಟಿದ ಮತ್ತು ಕ್ಯಾಥಲಿಕ್ ಪುರೋಹಿತ ಸಭೆ ಅಂಗೀಕರಿಸಿದ ದಂತಕಥೆಗಳಲ್ಲಿ ಆಧಾರಗೊಂಡಿವೆ ಎಂದು ವ್ಯಕ್ತವಾಗುತ್ತದೆ.
“ಆದರೂ, ಕ್ರಿಸ್ತನ ಪುರಾತನ ಕಾಲದ ಹಿಂಬಾಲಕರು, ಹಿಂಸಾತ್ಮಕ ಜಗತ್ತಿನಲ್ಲಿ ತಟಸ್ಥರಾಗಿರುವ ವಿಷಯದಲ್ಲಿ ಮರಣದ ಪರ್ಯಂತವೂ ನಂಬಿಗಸ್ತರಾಗಿದ್ದರೆಂಬುದು ಇಂದಿನ ಕ್ರೈಸ್ತರಿಗೆ ಭಕ್ತಿವೃದ್ಧಿಯ ಸಂಗತಿಯಾಗಿದೆ. ಮುಖ್ಯ ಸಂಗತಿಯು, ಈ ಹುತಾತ್ಮ ಮರಣ ಎಲ್ಲಿ ಸಂಭವಿಸಿತೆಂಬುದಲ್ಲ, ಅವರು ತಮ್ಮ ಸಮಗ್ರತೆಯನ್ನು ಪೂರ್ತಿಯಾಗಿ ಕಾಪಾಡಿಕೊಂಡರು ಎಂಬುದೆ.
“ರೋಮನ್ ವಾಸ್ತುಶಿಲ್ಪದ ಈ ಮಹಾ ಕಟ್ಟಡಕ್ಕೆ ನೀವು ಕೊಟ್ಟಿರುವ ಭೇಟಿಯಲ್ಲಿ ನೀವು ಆನಂದಿಸಿರುವಿರೊ?”
“ನಿಶ್ಚಯ,” ಎನ್ನುತ್ತಾರೆ, ಪಾವ್ಲೊ ಮತ್ತು ಮಾರ್ಕೊ, “ಮತ್ತು ನಿಮ್ಮ ಉತ್ತಮ ವಿವರಣೆಗಳಿಗಾಗಿ ನಿಮಗೆ ಉಪಕಾರ.”
ಇತಿಹಾಸದ ಮೂಲಕ ನಮಗೆ ಮಾತಾಡುವ ಕಲ್ಲುಗಳು ಅನೇಕ ರಸಕರವಾದ ಸಂಗತಿಗಳನ್ನು ನಮಗೆ ತೋರಿಸುತ್ತವೆ. ಕಲಾಸಿಅಮ್ ಕಟ್ಟಡವು, ವಾಸ್ತುಶಿಲ್ಪ ಮತ್ತು ರಚನೆಯ ಕ್ಷೇತ್ರಗಳಲ್ಲಿ ಪುರಾತನ ಕಾಲದ ರೋಮನರಿಗಿದ್ದ ಸಾಮರ್ಥ್ಯವನ್ನು ಎತ್ತಿ ತೋರಿಸುತ್ತದೆ. ಅವರು ಸೇತುವೆ, ರಸ್ತೆ, ಮೇಲು ಕಾಲುವೆ, ನಾಟಕ ಶಾಲೆ, ಮಲ್ಲರಂಗ, ದೇವಾಲಯ, ಮತ್ತು ಅರಮನೆಗಳನ್ನು ಕಟ್ಟುವವರಾಗಿದ್ದರು. ಆದರೆ, ಕಲಾಸಿಅಮ್ ಭಯಂಕರ ಪ್ರದರ್ಶನಗಳ ಸ್ಥಳವಾಗಿತ್ತು. ಅದರಲ್ಲಿ ಕ್ರೈಸ್ತರು ಪ್ರೇಕ್ಷಕರಾಗಿಯಾಗಲಿ, ಇಷ್ಟದಿಂದ ಪಾಲಿಗರಾಗಿಯಾಗಲಿ ಭಾಗವಹಿಸಲು ಅಂದೂ ನಿರಾಕರಿಸಿದರು, ಇಂದೂ ನಿರಾಕರಿಸುತ್ತಾರೆ. (g91 4/8)
[ಪುಟ 28 ರಲ್ಲಿರುವಚಿತ್ರ]
ಕಲಾಸಿಅಮ್ನ ಒಳಗೆ ಇಂದು
[ಪುಟ 29 ರಲ್ಲಿರುವಚಿತ್ರ]
ಕಳೆಗುಂದಿರುವ ಮಹಿಮೆಯ ಕಲಾಸಿಅಮ್