ಟೆಲಿವಿಷನ್ ನಿಮ್ಮನ್ನು ಬದಲಾಯಿಸಿದೆಯೆ?
“ಜಗತ್ತಿಗೆ ಕಿಟಿಕಿ.” ಟೆಲಿವಿಷನನ್ನು ಹಾಗೆಂದು ವರ್ಣಸಲಾಗಿದೆ. ಟ್ಯೂಬ್ ಆಫ್ ಪ್ಲೆಂಟಿ—ದಿ ಎವೊಲ್ಯೂಷನ್ ಆಫ್ ಅಮೆರಿಕನ್ ಟೆಲಿವಿಷನ್ ಎಂಬ ಪುಸ್ತಕದಲ್ಲಿ ಲೇಖಕ ಎರಿಕ್ ಬಾರ್ನೌ ಗಮನಿಸುವುದೇನಂದರೆ 1960ಗಳ ಆದಿಯಿಂದ “ಅನೇಕರಿಗೆ [ಟೆಲಿವಿಷನ್] ಜಗತ್ತಿಗೆ ಕಿಟಿಕಿಯಾಗಿದೆ. ಅದು ನೀಡಿದ ವೀಕ್ಷಣೆ ಈ ಜಗತ್ತೇ ಎಂಬಂತೆ ತೋರಿಬಂತು. ಅದರ ಸಪ್ರಮಾಣತೆ ಮತ್ತು ಪೂರ್ಣತೆಯಲ್ಲಿ ಅವರು ಭರವಸವಿಟ್ಟರು.”
ಆದರೂ, ಕೇವಲ ಒಂದು ಕಿಟಿಕಿ ನಿಮಗೆ ತೋರಿಸುವ ದೃಶ್ಯವನ್ನು ಆರಿಸಲಾರದು; ಬೇಕಾಗುವ ಬೆಳಕು ಮತ್ತು ದೃಶ್ಯ ಕೋನವನ್ನು ಅದು ನಿರ್ಧರಿಸಲಾರದು; ಅಲ್ಲದೆ, ನಿಮ್ಮ ಆಸಕ್ತಿಯನ್ನು ಹಿಡಿದುಕೊಳ್ಳುವರೆ ಒಡನೆ ದೃಶ್ಯವನ್ನು ಬದಲಾಯಿಸಲಾರದು. ಟೀವೀ ಇದನ್ನು ಮಾಡಬಲ್ಲದು. ಇಂಥ ಸಂಗತಿಗಳು, ನೀವು ಯಾವುದನ್ನು ನೋಡುತ್ತೀರೊ ಅದರ ಕುರಿತು ನಿಮ್ಮ ಅನಿಸಿಕೆ ಮತ್ತು ತೀರ್ಮಾನಗಳನ್ನು ನಾಟಕೀಯವಾಗಿ ರೂಪಿಸುತ್ತವೆ. ಆದರೂ ಇವು ಟೀವೀ ಚಿತ್ರಗಳನ್ನು ತಯಾರಿಸುವವರ ನಿಯಂತ್ರಣದಲ್ಲಿವೆ. ತೀರಾ ನಿಷ್ಪಕ್ಷಪಾತದ ವಾರ್ತಾಪ್ರಸಾರ ಮತ್ತು ಸಾಕ್ಷ್ಯಚಿತ್ರಗಳು ಸಹ, ಉದ್ದೇಶಪೂರ್ವಕವಾಗಿ ಇಲ್ಲದಿರಬಹುದಾದರೂ ಇಂಥ ಯುಕ್ತಿ ನಿರ್ವಹಣೆಗೆ ಒಳಗಾಗುತ್ತವೆ.a
ನಿಪುಣ ದುಷ್ಪ್ರೇರಕ
ಆದರೆ, ಅಧಿಕಾಂಶವಾಗಿ ಟೆಲಿವಿಷನನ್ನು ನಿಯಂತ್ರಿಸುವವರು ವೀಕ್ಷಕರ ಮೇಲೆ ಪ್ರಭಾವ ಬೀರಲು ನೇರವಾಗಿ ಪ್ರಯತ್ನಿಸುತ್ತಾರೆ. ಉದಾಹರಣೆಗೆ, ಜಾಹೀರಾತುಗಳಲ್ಲಿ, ನೀವು ಖರೀದಿಸುವಂತೆ ಅವರು ತಮಗೆ ಸಾಧ್ಯವಿರುವ ಸಕಲ ದುಷ್ಪ್ರೇರಕ ಉಪಾಯಗಳನ್ನೂ ಅವರು ಉಪಯೋಗಿಸಲು ಸ್ವತಂತ್ರರು. ಬಣ್ಣ. ಗೀತಗಳು. ಸುಂದರ ಜನರು. ಕಾಮ. ಅಲಂಕಾರಯುತ ಸ್ಥಳಗಳು. ಅದರ ಕೃತಿ ಬಂಡವಾಳ ವಿಶಾಲ, ಮತ್ತು ಅವರು ಅದನ್ನು ನಿಪುಣತೆಯಿಂದ ಉಪಯೋಗಿಸುತ್ತಾರೆ.
ಮಾಜಿ ಜಾಹೀರಾತು ಅಧಿಕಾರಿಯೊಬ್ಬರು ಆ ಕ್ಷೇತ್ರದಲ್ಲಿ ತಾನು ಕಳೆದಿದ್ದ 15 ವರ್ಷಗಳ ವಿಷಯ ಹೀಗೆ ಬರೆದರು: “[ಟೀವೀಯಂಥ] ಮಾಧ್ಯಮದ ಮೂಲಕ ಜನರ ತಲೆಗಳಿಗೆ ನೇರವಾಗಿ ಮಾತಾಡಸಾಧ್ಯವಿದೆಯೆಂದೂ, ಆ ಬಳಿಕ ಯಾರೋ ಪರಲೋಕದ ಮಂತ್ರಗಾರನಂತೆ, ಜನರಿಗೆ ಬೇರೆ ಸಂದರ್ಭಗಳಲ್ಲಿ ಮಾಡುವ ಯೋಚನೆಯೆ ಇಲ್ಲದಿರುತ್ತಿದ್ದ ವಿಷಯಗಳನ್ನು ಅವರು ಮಾಡುವಂತೆ ಚಿತ್ರಗಳನ್ನು ಒಳಗೆ ಬಿಟ್ಟು ಹೋಗಲು ನಾನು ಕಲಿತೆ.”
ಟೆಲಿವಿಷನಿಗೆ ಜನರ ಮೇಲೆ ಇಂಥ ದುರ್ದಮವಾದ ಶಕ್ತಿಯಿದೆಯೆಂಬುದು 1950ಗಳಲ್ಲಿಯೆ ವ್ಯಕ್ತವಾಗಿತ್ತು. 50,000 ಡಾಲರು ಆದಾಯವಿದ್ದ ಒಂದು ಲಿಪ್ಸಿಕ್ಟ್ ಕಂಪೆನಿ ಅಮೆರಿಕದ ಟೆಲಿವಿಷನಿನಲ್ಲಿ ಜಾಹೀರಾತು ಕೊಡತೊಡಗಿತು. ಎರಡು ವರ್ಷಗಳೊಳಗೆ ಅದರ ಮಾರಾಟ 45 ಲಕ್ಷ ಡಾಲರಿಗೇರಿತು. ಸ್ತ್ರೀಯರ ಮಧ್ಯೆ ಜನಪ್ರಿಯವಾಗಿದ್ದ ಒಂದು ಟೀವೀ ಚಿತ್ರದಲ್ಲಿ ಒಂದು ಬ್ಯಾಂಕು ತನ್ನ ಸೇವೆಯನ್ನು ಜಾಹೀರು ಮಾಡಲಾಗಿ ಅದರ ಠೇವಣಾತಿ ಒಡನೆ 1 ಕೋಟಿ 50 ಲಕ್ಷ ಡಾಲರುಗಳಷ್ಟೂ ಏರಿತು.
ಇಂದು ಸಾಮಾನ್ಯ ಅಮೆರಿಕನನೊಬ್ಬನು ಪ್ರತಿ ವರ್ಷ 32,000 ಜಾಹೀರಾತುಗಳನ್ನು ನೋಡುತ್ತಾನೆ. ಈ ಜಾಹೀರಾತುಗಳು ಭಾವೋದ್ರೇಕದ ಮೇಲೆ ದುಷ್ಪ್ರೇರಕವಾಗಿ ಕಾರ್ಯ ನಡೆಸುತ್ತವೆ. ಬಾಕ್ಡ್ಸ್ಡ್ ಇನ್—ದ ಕಲ್ಚರ್ ಆಫ್ ಟೀವೀಯಲ್ಲಿ ಮಾರ್ಕ್ ಕ್ರಿಸ್ಪಿನ್ ಮಿಲರ್ ಬರೆದಂತೆ: “ನಾವು ಪ್ರೇಕ್ಷಿಸುವ ವಿಷಯಗಳಿಂದ ನಡೆಸಲ್ಪಡುತ್ತೇವೆಂಬುದು ನಿಜ. ದೈನಂದಿನ ಜೀವನವನ್ನು ಹರಡಿರುವ ಜಾಹೀರಾತುಗಳು ನಮ್ಮನ್ನು ಸತತ ಪ್ರಭಾವಿಸುತ್ತವೆ.” ಈ ಜಾಣ್ಮೆಯ ನಿರ್ವಹಣೆಯು “ಅನೇಕ ವೇಳೆ ಗ್ರಹಿಸಲು ಕಷ್ಟವಾಗಿರುವುದರಿಂದ ಅಪಾಯಕರವಾಗಿದೆ ಮತ್ತು ಅದನ್ನು ಗ್ರಹಿಸಲು ನಾವು ಕಲಿಯುವ ತನಕ ಅದು ವಿಫಲಗೊಳ್ಳುವುದಿಲ್ಲ.”
ಆದರೆ ಟೆಲಿವಿಷನ್ ಇಂದು ಲಿಪ್ಸಿಕ್ಟ್, ರಾಜಕೀಯ ದೃಷ್ಟಿಕೋನ ಮತ್ತು ಸಂಸ್ಕೃತಿಗಿಂತಲೂ ಹೆಚ್ಚಿನದನ್ನು ಮಾರುತ್ತದೆ. ಅದು ನೈತಿಕತೆ—ಅಥವಾ ಅದರ ಕೊರತೆ—ಯನ್ನೂ ಮಾರುತ್ತದೆ.
ಟೀವೀ ಮತ್ತು ನೈತಿಕತೆ
ಅಮೆರಿಕನ್ ಟೀವೀಯಲ್ಲಿ ಲೈಂಗಿಕ ನಡತೆ ಹೆಚ್ಚೆಚ್ಚಾಗಿ ತೋರಿಬರುತ್ತದೆಂದು ತಿಳಿಯುವಾಗ ಕೇವಲ ಕೆಲವರಿಗೆ ಅಚ್ಚರಿಯಾದೀತು. ಜರ್ನಲಿಸ್ಮ್ ಕ್ವಾರ್ಟರ್ಲಿ ಯಲ್ಲಿ 1989ರಲ್ಲಿ ಪ್ರಕಟವಾದ ಒಂದು ಅಧ್ಯಯನವು, 66 ತಾಸುಗಳ ಪ್ರೈಮ್-ಟೈಮ್ ನೆಟರ್ಕ್ವ್ ಟೀವೀಯಲ್ಲಿ, ಅಭಿಪ್ರಾಯ ಸೂಚಿತವಾಗಿ ಯಾ ಬಾಯಿಮಾತಿನಿಂದ ಸೂಚಿತವಾಗಿ ಯಾ ಚಿತ್ರಿತವಾಗಿ 722 ಲೈಂಗಿಕ ನಡತೆಯ ಸಂಭವಗಳಿದ್ದವು. ಈ ಉದಾಹರಣೆಗಳಲ್ಲಿ ಕಾಮಾತ್ಮಕ ಸ್ಪರ್ಶ, ಸಂಭೋಗ, ಮುಷ್ಟಿ ಮೈಥುನ, ಸಲಿಂಗೀಕಾಮ, ಮತ್ತು ಅಗಮ್ಯಗಮನಗಳು ಸೇರಿದ್ದವು. ಪ್ರತಿ ತಾಸಿನ ಸರಾಸರಿ 10.94 ನಿದರ್ಶನಗಳು.
ಇದರಲ್ಲಿ ಅಮೆರಿಕ ಮಾತ್ರ ಅದ್ವಿತೀಯವಲ್ಲ. ಫ್ರೆಂಚ್ ಟೀವೀ ಚಿತ್ರಗಳು ಸ್ಪಷ್ಟ ಲೈಂಗಿಕ ಕಾಮಕ್ರೌರ್ಯವನ್ನು ಚಿತ್ರಿಸುತ್ತವೆ. ಇಟ್ಯಾಲಿಯನ್ ಟೀವೀಯಲ್ಲಿ ಬಟ್ಟೆ ಕಳಚುವ ಮನೋರಂಜನೆಯನ್ನು ಕೊಡಲಾಗುತ್ತದೆ. ಸ್ಪ್ಯಾನಿಷ್ ಟೀವೀಯಲ್ಲಿ ರಾತ್ರಿ ತಡವಾಗಿ ಚಿತ್ರಗಳಲ್ಲಿ ಹಿಂಸಾತ್ಮಕ ಹಾಗೂ ಕಾಮಾತ್ಮಕ ಚಿತ್ರಗಳು ಸೇರಿವೆ. ಹೀಗೆ ಪಟ್ಟಿ ಉದ್ದವಾಗುತ್ತಾ ಹೋಗುತ್ತದೆ.
ಹಿಂಸಾತ್ಮಕ ಕೃತ್ಯವು ಇನ್ನೊಂದು ವಿಧದ ಟೀವೀ ಅನೈತಿಕತೆ. ಅಮೆರಿಕದಲ್ಲಿ ಇತ್ತೀಚೆಗೆ ಟೈಮ್ ಪತ್ರಿಕೆಯ ಟೀವೀ ಟೀಕಾಕಾರನು ಕೆಲವು ನಡುಕ ಬರಿಸುವ ಕಾರ್ಯಕ್ರಮಗಳಲ್ಲಿದ್ದ “ಭಯಂಕರ ಸುಪ್ರಸನ್ನತೆ” ಗಳನ್ನು ಪ್ರಶಂಸಿದನು. ಆ ಚಿತ್ರಮಾಲೆಯಲ್ಲಿ ಶಿರಚ್ಛೇದ, ಊನಗೊಳಿಸುವಿಕೆ, ಶೂಲಕ್ಕೇರಿಸುವಿಕೆ, ಮತ್ತು ದೆವ್ವ ಸ್ವಾಧೀನತೆಗಳು ಸೇರಿದ್ದವು. ಹೌದು ಹೆಚ್ಚಿನ ಟೀವೀ ಬಲಾತ್ಕಾರಗಳು ಕಡಮೆ ಭಯಂಕರ ಮತ್ತು ಸುಲಭವಾಗಿ ಮಾಮೂಲಿ ಎಂದೆಣಿಸಲ್ಪಡುತ್ತವೆ. ಪಶ್ಚಿಮ ಆಫ್ರಿಕದ ಐವರಿ ಕೋಸ್ಟ್ನ ಒಂದು ದೂರದ ಹಳ್ಳಿಯಲ್ಲಿ ಇತ್ತೀಚೆಗೆ ಪಾಶ್ಚಿಮಾತ್ಯ ಟೆಲಿವಿಷನನ್ನು ತೋರಿಸಿದಾಗ ಗಲಿಬಿಲಿಗೊಂಡ ಒಬ್ಬ ವೃದ್ಧನು, “ಈ ಬಿಳಿ ಜನರು ಸದಾ ತಿವಿಯುವುದು, ಗುಂಡಿಕ್ಕುವುದು ಮತ್ತು ಹೊಡೆದುಕೊಳ್ಳುವುದೇಕೆ?” ಎಂದು ಕೇಳುವಂತಾಯಿತು.
ಇದಕ್ಕೆ ಉತ್ತರವು, ಟೆಲಿವಿಷನ್ ತಯಾರಕರು ಮತ್ತು ಪ್ರವರ್ತಕರು ವೀಕ್ಷಕರು ಯಾವುದನ್ನು ಅಪೇಕ್ಷಿಸುತ್ತಾರೊ ಅದನ್ನೇ ಕೊಡುತ್ತಾರೆ ಎಂಬುದೇ. ಹಿಂಸಾತ್ಮಕ ಕೃತ್ಯಗಳು ವೀಕ್ಷಕರನ್ನು ಆಕರ್ಷಿಸುತ್ತವೆ. ಕಾಮ ಕೂಡ. ಆದುದರಿಂದ ಟೀವೀ ಇವೆರಡರ ದೊಡ್ಡ ಪಾಲನ್ನು ಬಡಿಸುತ್ತದೆ. ಆದರೆ ಒಂದೇ ಸಲ ಹೆಚ್ಚನ್ನು ಬಡಿಸುವುದಿಲ್ಲ; ಬಡಿಸಿದರೆ ವೀಕ್ಷಕರಿಗೆ ಜುಗುಪ್ಸೆ ಹುಟ್ಟುವುದು. ಪ್ರೈಮ್ ಟೈಮ್, ಔರ್ ಟೈಮ್ ನಲ್ಲಿ ಡಾನ ಮೆಕ್ರೋಹನ್ ತಿಳಿಸುವಂತೆ: “ಹೆಚ್ಚಿನ ಜನಪ್ರಿಯ ಚಿತ್ರಗಳು ಅವುಗಳ ಭಾಷೆ, ಕಾಮ, ಬಲಾತ್ಕಾರ, ಯಾ ವಿಷಯ ವಸ್ತುವಿನ ಸಂಬಂಧದಲ್ಲಿ ಸಾಧ್ಯವಾಗುವಷ್ಟು ವಿಪರೀತಕ್ಕೆ ಹೋಗಿ, ಆ ಬಳಿಕ ಆ ಅಂಚನ್ನು ತೆಗೆದು ಬಿಡುತ್ತವೆ. ತರುವಾಯ ಸಾರ್ವಜನಿಕರು ಇನ್ನೊಂದು ಹೊಸ ಅಂಚಿಗೆ ತಯಾರಾಗುತ್ತಾರೆ.”
ಉದಾಹರಣೆಗೆ, ಸಲಿಂಗೀಕಾಮವೆಂಬ ವಿಷಯವು ಒಮ್ಮೆ ಟೆಲಿವಿಷನಿನ ಔಚಿತ್ಯದ “ಅಂಚಿನ” ಹೊರಗಿದೆ ಎಂದು ಭಾವಿಸಲಾಗುತ್ತಿತ್ತು. ಆದರೆ ವೀಕ್ಷಕರು ಅದಕ್ಕೆ ಪರಿಚಿತರಾದಾಗ, ಅವರು ಹೆಚ್ಚಿನದನ್ನು ಪಡೆಯಲು ಸಿದ್ಧರಾದರು. ಒಬ್ಬ ಫ್ರೆಂಚ್ ಪತ್ರಿಕೋದ್ಯೋಗಿ ಹೇಳಿದ್ದು: “ಇಂದು ಇಂದು ಯಾವ ತಯಾರಕನಿಗೂ ಸಲಿಂಗೀಕಾಮವು ಅಡದ್ಡಾರಿಯೆಂದು ಹೇಳುವ ಧೈರ್ಯವಿಲ್ಲ. . . . ಇದಕ್ಕೆ ಬದಲಾಗಿ ಸಮಾಜ ಮತ್ತು ಅದರ ಅಸಹಿಷ್ಣುತೆ ತಪ್ಪಾಗಿದೆ. ಅಮೆರಿಕನ್ ಕೇಬ್ಲ್ ಟೆಲಿವಿಷನಿನಲ್ಲಿ, 1990ರಲ್ಲಿ ಒಂದು ‘ಪುರುಷಗಾಮಿ ಸೋಪ್ ಆಪೆರ’ ವನ್ನು 11 ನಗರಗಳಲ್ಲಿ ತೋರಿಸಲಾಯಿತು. ಪುರುಷರು ಮಂಚದಲ್ಲಿ ಒಟ್ಟಿಗೆ ಮಲಗಿರುವ ದೃಶ್ಯಗಳು ಅದರಲಿದ್ಲವ್ದು. ಈ ಚಿತ್ರದ ತಯಾರಕರು ನ್ಯೂಸ್ವೀಕ್ ಪತ್ರಿಕೆಗೆ, ಇಂಥ ದೃಶ್ಯಗಳು ಪುರುಷಗಾಮಿಗಳಿಂದ “ತಾವು ಇತರರಂತೆಯೆ ಎಂದು ಜನರು ತಿಳಿಯುವಂತೆ ಸಭಿಕರ ಮನಸ್ಸಿನಿಂದ ಆ ಕ್ಷಿಪ್ರಗ್ರಾಹಿತ್ವವನ್ನು ತೆಗೆಯುವಂತೆ” ರೂಪಿಸಲಾಗಿದೆ ಎಂದು ಹೇಳಿದರು.
ಮನಶ್ಚಿತ್ರಕ್ಕೆ ಪ್ರತಿಯಾಗಿ ವಾಸ್ತವಿಕತೆ
ಜರ್ನಲಿಸ್ಮ್ ಕ್ವಾರ್ಟರ್ಲಿ ಯಲ್ಲಿ ವರದಿಯಾಗಿದ್ದ ಅಧ್ಯಯನದ ಲೇಖಕರು, ಟೀವೀ ನ್ಯಾಯವಿರುದ್ಧವಾದ ಕಾಮದ ಪರಿಣಾಮವನ್ನು ಸಾಮಾನ್ಯವಾಗಿ ಎಂದೂ ತೋರಿಸದೆ ಇರುವುದರಿಂದ “ನೀರೂರಿಸುವ ಲೈಂಗಿಕ ಶಬ್ದಚಿತ್ರದ ಎಡೆಬಿಡದೆ ಬರುವ ಸುರಿಮಳೆಯು” ತಪ್ಪು ಮಾಹಿತಿಯ ಪ್ರಚಾರಕ್ಕೆ ಸರಿಸಮಾನವಾಗುತ್ತದೆ. ಇನ್ನೊಂದು ಅಧ್ಯಯನವನ್ನು ಉಲ್ಲೇಖಿಸುತ್ತಾ ಅವರು, ಟೀವೀ ಸೋಪ್ ಆಪೆರಗಳು ಎಲ್ಲಕ್ಕೂ ಮಿಗಿಲಾಗಿ ಈ ಸಂದೇಶವನ್ನು ಕೊಡುತ್ತವೆ ಎಂದು ತೀರ್ಮಾನಿಸಿದರು: ಲೈಂಗಿಕ ಸಂಬಂಧ ಅವಿವಾಹಿತ ಜೊತೆಗಳಿಗಾಗಿದೆ, ಮತ್ತು ಅದರಿಂದ ಯಾರಿಗೂ ರೋಗ ಬರುವುದಿಲ್ಲ.
ಇದು ನಿಮಗೆ ಪರಿಚಯವಿರುವ ಜಗತ್ತೊ? ವಿವಾಹಪೂರ್ವ ಲೈಂಗಿಕ ಸಂಬಂಧದಿಂದ ಹದಿಪ್ರಾಯದವರು ಗರ್ಭವತಿಯರಾಗದಿರುವ ಯಾ ಲೈಂಗಿಕವಾಗಿ ರೋಗಗಳು ರವಾನಿಸಲ್ಪಡದಿರುವ ವಿಷಯ ನಿಮಗೆ ತಿಳಿದಿದೆಯೆ? ಸಲಿಂಗೀಕಾಮ ಮತ್ತು ಉಭಯಲಿಂಗಿ ಕಾಮದ ಕಾರಣ ಏಯ್ಡ್ಸ್ ರೋಗ ಬರುವುದಿಲ್ಲವೆ? ಹಿಂಸಾತ್ಮಕ ಕೃತ್ಯ ಮತ್ತು ಅಂಗಹೀನತೆಗಳಿಂದಾಗಿ ವೀರನಾಯಕನು ಜಯಗೊಂಡು ಖಳನಾಯಕನು ಅವಮಾನಕ್ಕೊಳಗಾದರೂ, ಇಬ್ಬರೂ ಅನೇಕ ವೇಳೆ ಪೆಟ್ಟಾಗದೆ ಉಳಿಯುತ್ತಾರೊ? ಟೀವೀ ವರ್ತನೆಗಳಿಗೆ ಆನಂದಕರವಾಗಿ ದುಷ್ಪರಿಣಾಮವಾಗದಿರುವ ಒಂದು ಲೋಕವನ್ನು ಟೀವೀ ಸೃಷ್ಟಿಸುತ್ತದೆ. ಮನಸ್ಸಾಕ್ಷಿ, ನೈತಿಕತೆ, ಮತ್ತು ಆತ್ಮ ನಿಯಂತ್ರಣದ ನಿಯಮಗಳ ಸ್ಥಾನವನ್ನು ತತ್ಕ್ಷಣದ ತೃಪ್ತಿ ವಶಪಡಿಸಿಕೊಳ್ಳುತ್ತದೆ.
ಟೆಲಿವಿಷನ್ “ಜಗತ್ತಿಗೆ ಕಿಟಿಕಿ” ಯಲ್ಲವೆಂಬುದು ಸ್ಪಷ್ಟ, ಹೇಗೂ ವಾಸ್ತವಿಕ ಜಗತ್ತಿಗೆ ಕಿಟಿಕಿಯಲ್ಲ. ವಾಸ್ತವವೇನಂದರೆ, ಟೆಲಿವಿಷನಿನ ಕುರಿತು ಇತ್ತೀಚಿನ ಒಂದು ಪುಸ್ತಕವನ್ನು ದಿ ಅನ್ರಿಯಾಲಿಟಿ ಇಂಡಸ್ಟ್ರಿ (ಅವಾಸ್ತವಿಕತೆಯ ಉದ್ಯಮ) ಯೆಂದು ಕರೆಯಲಾಯಿತು. ಟೀವೀ “ನಮ್ಮ ಜೀವನಗಳಲ್ಲಿ ಅತಿ ಬಲಾಢ್ಯ ಶಕ್ತಿಗಳಲ್ಲಿ ಒಂದಾಗಿದೆ. ಪರಿಣಾಮವೇನಂದರೆ, ಟೀವೀ ನಿಜತ್ವವನ್ನು ನಿರೂಪಿಸುವುದು ಮಾತ್ರವಲ್ಲ, ಹೆಚ್ಚು ಪ್ರಾಮುಖ್ಯವಾಗಿ ಮತ್ತು ಚಿಂತಾಭರಿತವಾಗಿ, ಅದು ಆ ವ್ಯತ್ಯಾಸವನ್ನೇ, ವಾಸ್ತವಿಕತೆ ಮತ್ತು ಅವಾಸ್ತವಿಕತೆಯ ಮಧ್ಯದಲ್ಲಿರುವ ರೇಖೆಯನ್ನೇ, ಅಳಿಸಿಬಿಡುತ್ತದೆ” ಎಂದು ಅದರ ಲೇಖಕರು ವಾದಿಸುತ್ತಾರೆ.
ಟೆಲಿವಿಷನಿನ ಪ್ರಭಾವಕ್ಕೆ ತಾವು ಅಭೇದ್ಯರು ಎಂದು ಹೇಳುವವರಿಗೆ ಈ ಮಾತುಗಳು ಭೀತಿಕಾರಕವಾಗಿ ಕೇಳಿಬರಬಹುದು. ‘ನಾನು ನೋಡುವ ಪ್ರತಿಯೊಂದು ವಿಷಯವನ್ನು ನಾನು ನಂಬುವುದಿಲ್ಲ’ ಎಂದು ಕೆಲವರು ವಾದಿಸುತ್ತಾರೆ. ಟೀವೀಯನ್ನು ನಂಬದಿರುವ ಪ್ರವೃತ್ತಿ ನಮ್ಮಲ್ಲಿರಬಹುದೆಂದು ನಾವು ಒಪ್ಪಿಕೊಳ್ಳಬಹುದು. ಆದರೆ ಸಂದೇಹವಾದದ ಈ ಸ್ವಯಂಚಾಲಕ ಮುದ್ರೆ, ಟೀವೀ ನಮ್ಮ ಭಾವುಕತೆಯ ಮೇಲೆ ಬೀರುವ ಕುತಂತ್ರಗಳಿಂದ ನಮ್ಮನ್ನು ರಕ್ಷಿಸಲಾರದು. ಒಬ್ಬ ಲೇಖಕನು ಬರೆದಂತೆ: “ಟೀವೀಯ ಅತ್ಯುತ್ತಮ ಯುಕ್ತಿಗಳಲ್ಲಿ ಒಂದು ನಮ್ಮ ಮಾನಸಿಕ ಯಾಂತ್ರಿಕತೆಯ ಮೇಲೆ ಅದು ಎಷ್ಟು ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಸದಿರುವುದೇ.”
ಪ್ರಭಾವ ಬೀರುವ ಯಂತ್ರ
ಅಮೆರಿಕನರು ಪ್ರತಿ ದಿನ ಸರಾಸರಿ ಏಳು ತಾಸು ಎರಡು ನಿಮಿಷಗಳಷ್ಟು ಕಾಲ ಟೆಲಿವಿಷನ್ ನೋಡುತ್ತಾರೆ ಎನ್ನುತ್ತದೆ 1990 ಬ್ರಿಟ್ಯಾನಿಕ ಬುಕ್ ಆಫ್ ದ ಯಿಯರ್. ಆದರೆ ಹೆಚ್ಚು ಸಂಕುಚಿತ ಮನೋಭಾವದವರ ಅಂದಾಜು ಸುಮಾರು ಎರಡು ತಾಸು ಎಂದಾದರೂ ಅದು ಒಬ್ಬನ ಜೀವಮಾನದಲ್ಲಿ ಏಳು ವರ್ಷಗಳಷ್ಟಾಗುತ್ತದೆ! ಇಷ್ಟು ದೊಡ್ಡ ಪ್ರಮಾಣದಲ್ಲಿ ಟೀವೀ ಸೇವನೆಯು ಜನರ ಮೇಲೆ ಪರಿಣಾಮ ಬೀರದಿರುವುದಾದರೂ ಹೇಗೆ?
ಟೀವೀ ಮತ್ತು ವಾಸ್ತವಿಕತೆಯ ಮಧ್ಯೆ ವ್ಯತ್ಯಾಸ ಕಂಡುಹಿಡಿಯಲು ಕಷ್ಟವಾಗುವ ಜನರ ಕುರಿತು ಓದುವಾಗ ನಮಗೆ ಆಶ್ಚರ್ಯವಾಗುವುದಿಲ್ಲ. ಮೀಡಿಯ, ಕಲ್ಚರ್ ಆ್ಯಂಡ್ ಸೊಸೈಟಿ ಎಂಬ ಬ್ರಿಟಿಷ್ ಪತ್ರಿಕೆಯಲ್ಲಿ ಪ್ರಕಟವಾದ ಒಂದು ಅಧ್ಯಯನವು ಟೀವೀಯು ಜನರನ್ನು ಅವರು “ವಾಸ್ತವಿಕ ಜಗತ್ತಿನ ಅನ್ಯ ದರ್ಶನ” ವನ್ನು ಸ್ಥಾಪಿಸುವಂತೆ ಪ್ರೇರಿಸಿ, ವಾಸ್ತವಿಕತೆಯ ಕುರಿತು ಅವರ ಅಪೇಕ್ಷೆಯು ವಾಸ್ತವಿಕತೆಯೇ ಎಂದು ಅವರು ಯೋಚಿಸುವಂತೆ ಮಾಡುತ್ತದೆ ಎಂದು ಕಂಡು ಹಿಡಿಯಿತು. ಅಮೆರಿಕದ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಸಂಗ್ರಹಿಸಿದಂಥ ಇತರ ಅಧ್ಯಯನಗಳು ಇಂಥ ಕಂಡುಹಿಡಿತಗಳನ್ನು ಬೆಂಬಲಿಸುವಂತೆ ಕಾಣುತ್ತದೆ.
ವಾಸ್ತವಿಕತೆಯ ಜನಪ್ರಿಯ ಕಲ್ಪನೆಗಳನ್ನು ಟೀವೀ ಹೀಗೆ ಪ್ರಭಾವಿಸುವಾಗ ಅದು ಜನರ ಜೀವನ ಮತ್ತು ವರ್ತನೆಗಳನ್ನು ಹೇಗೆ ಪ್ರಭಾವಿಸದೆ ಹೋದೀತು? ಪ್ರೈಮ್ ಟೈಮ್, ಔರ್ ಟೈಮ್ ನಲ್ಲಿ ಡಾನ ಮೆಕ್ರೋಹನ್ ಬರೆಯುವುದು: “ಜನಪ್ರಿಯವಾದ ಒಂದು ಚಿತ್ರ ನಿಷೇಧಗಳನ್ನು ಯಾ ಭಾಷಾ ತಡೆಗಳನ್ನು ತೆಗೆದು ಹಾಕುವಾಗ ಅವುಗಳನ್ನು ಮುರಿಯಲು ನಮಗೂ ಹೆಚ್ಚು ದೊಡ್ಡ ಸ್ವಾತಂತ್ರ್ಯವಿದೆಯೆಂದು ನಾವೆಣಿಸುತ್ತೇವೆ. ಇದೇ ರೀತಿ . . . ಸ್ವೇಚ್ಛಾಸಂಪರ್ಕವು ಸಾಮಾನ್ಯವೆಂದೆಣಿಲ್ಪಡುವಾಗ ಯಾ ಓಜಸ್ವಿಯಾದ ವ್ಯಕ್ತಿಯೊಬ್ಬನು ತಾನು ಉಪಯೋಗಿಸುವ ಕಾಂಡೊಮನ್ನು ಸೂಚಿಸುವಾಗ ನಾವು ಪ್ರಭಾವಿಸಲ್ಪಡುತ್ತೇವೆ. ಇಂಥ ಪ್ರತಿಯೊಂದು ಸಂದರ್ಭದಲ್ಲಿ ಟೀವೀ, ನಾವು ಯಾರಾಗಿದ್ದೇವೆಂದು ನಂಬಿಸಲ್ಪಡುತ್ತೇವೋ ಒಪ್ಪಿಸಲ್ಪಡುತ್ತೇವೋ ಮತ್ತು ಈ ಕಾರಣದಿಂದ ಹೆಚ್ಚು ಕಡಮೆ ಆಗಿ ಬಿಡುತ್ತೇವೋ ಅದರ ದರ್ಪಣವಾಗಿ ಸಾವಕಾಶವಾಗಿ ವರ್ತಿಸುತ್ತದೆ.”
ಟೀವೀ ಯುಗದ ಉನ್ನತಿಯು ದುರಾಚಾರ ಮತ್ತು ಹಿಂಸಾತ್ಮಕ ಕೃತ್ಯಗಳಲ್ಲಿ ಅನುರೂಪವಾದ ಉನ್ನತಿಯನ್ನು ನೋಡಿಯದೆ. ಇದು ಸಹಘಟನೆಯೆ? ಅಲ್ಲ. ಒಂದು ಅಧ್ಯಯನವು, ಮೂರು ದೇಶಗಳಿಗೆ ಟೀವೀ ಹೋದ ಮೇಲೆ ಮಾತ್ರ ಅಲ್ಲಿಯ ಪಾತಕ ಮತ್ತು ಬಲಾತ್ಕಾರಗಳು ವೃದ್ಧಿಯಾದವೆಂದು ತೋರಿಸಿತು. ಟೀವೀಯ ಪರಿಚಯ ಮೊದಲೇ ಆಗಿದ್ದ ದೇಶಗಳಲ್ಲಿ ಪಾತಕಗಳೂ ಮೊದಲೇ ಏರಿದ್ದವು.
ಆಶ್ಚರ್ಯಕರವಾದ ವಿಷಯವೇನಂದರೆ, ಟೀವೀ, ಅನೇಕರು ಯೋಚಿಸುವಂತೆ ವಿಶ್ರಾಂತಿಯ ವಿನೋದ ಕಾಲವೂ ಆಗಿರುವುದಿಲ್ಲ. 1,200 ವಿಷಯಗಳ ಮೇಲೆ 13 ವರ್ಷಕಾಲ ನಡಿಸಿದ ಅಧ್ಯಯನಗಳು, ಸಕಲ ರೀತಿಯ ವಿನೋದ ಕಾಲಹರಣದಲ್ಲಿ ಟೀವೀ ಪ್ರೇಕ್ಷಣ ಜನರಿಗೆ ವಿರಾಮ ಕೊಡಲು ಅತಿ ಕಡಮೆ ಸಂಭವವುಳ್ಳದ್ದಾಗಿತ್ತು. ಬದಲಿಗೆ, ಅದು ಪ್ರೇಕ್ಷಕರನ್ನು ಜಡತೆ, ಬಿಗಿತ ಮತ್ತು ಏಕಾಗ್ರತೆರಹಿತರನ್ನಾಗಿ ಮಾಡಿತು. ವಿಶೇಷವಾಗಿ, ಹೆಚ್ಚು ಕಾಲ ಪ್ರೇಕ್ಷಿಸುವುದು ಜನರನ್ನು ಅವರು ಅದನ್ನು ಆರಂಭಿಸಿದಾಗ ಇದ್ದುದಕ್ಕಿಂತ ಹೆಚ್ಚು ಉತ್ಸಾಹಶೂನ್ಯರಾಗಿ ಮಾಡಿತು. ಇದಕ್ಕೆ ವ್ಯತಿರಿಕ್ತವಾಗಿ, ವಾಚನವು ಜನರನ್ನು ಹೆಚ್ಚು ವಿಶ್ರಮಿಸುವವರಾಗಿ, ಹೆಚ್ಚು ಉತ್ಸಾಹಿಗಳಾಗಿ, ಮತ್ತು ಹೆಚ್ಚು ಏಕಾಗ್ರತೆಯುಳ್ಳವರಾಗಿ ಬಿಟ್ಟಿತು!
ಆದರೆ, ಒಂದು ಉತ್ತಮ ಪುಸ್ತಕವನ್ನು ಓದುವುದು ಎಷ್ಟು ರಚನಾತ್ಮಕವೇ ಆಗಿರಲಿ, ಟೀವೀ ಎಂಬ ಆ ಚತುರ ಸಮಯಕಳ್ಳನು ಪುಸ್ತಕಗಳನ್ನು ಸುಲಭವಾಗಿ ಬದಿಗೆ ದೂಡಬಲ್ಲನು. ನ್ಯೂ ಯಾರ್ಕಿಗೆ ಟೀವೀ ಪ್ರಥಮವಾಗಿ ಬಂದಾಗ, ಸಾರ್ವಜನಿಕ ಪುಸ್ತಕಾಲಯಗಳ ಪುಸ್ತಕ ಚಲಾವಣೆಯಲ್ಲಿ ಇಳಿತವು ವರದಿಯಾಯಿತು. ಅಂದರೆ, ಮಾನವಕುಲ ಓದುವುದನ್ನೇ ನಿಲ್ಲಿಸುವುದರಲ್ಲಿದೆ ಎಂಬುದು ಇದರ ಅರ್ಥವಲ್ಲ. ಆದರೂ, ಜನರು ಇಂದು ಕಡಮೆ ತಾಳ್ಮೆಯಿಂದ ಓದುತ್ತಾರೆಂದೂ ಸಡಗರದ ದೃಶ್ಯ ಚಿತ್ರಗಳ ಸುರಿಮಳೆ ಇಲ್ಲದಿರುವಲ್ಲಿ ಅವರ ಗಮನ ಬೇಗನೆ ಕಡಮೆಯಾಗುತ್ತದೆಂದೂ ಹೇಳಲಾಗುತ್ತದೆ. ಇಂಥ ಅಸ್ಪಷ್ಟ ಶಂಕೆಗಳನ್ನು ಸಂಖ್ಯಾ ಸಂಗ್ರಹಣಗಳು ಮತ್ತು ಅಧ್ಯಯನಗಳು ರುಜು ಪಡಿಸಲಿಕ್ಕಿಲ್ಲ. ಆದರೂ, ನಾವು ಚಿಕ್ಕ ಸಮಯಾವಧಿಯ ಗಮನವನ್ನೂ ಕ್ಷಣಕ್ಷಣಕ್ಕೂ ಹಿಡಿದಿಡುವಂತೆ ರೂಪಿಸಲ್ಪಟ್ಟಿರುವ ಟೀವೀ ಮನೋರಂಜನೆಯ ಎಡೆಬಿಡದ ಹರಿವಿನಿಂದ ಸದಾ ಮುದ್ದಿಸಲ್ಪಡುವಲ್ಲಿ ಏಕಾಗ್ರಚಿತ್ತ ಮತ್ತು ಶಿಸ್ತಿನ ಸಂಬಂಧದಲ್ಲಿ ನಾವೇನು ಕಳೆದುಕೊಳ್ಳುವೆವು?
ಪೆಟ್ಟಿಗೆಯ ಮಕ್ಕಳು
ಆದರೆ, ಟೆಲಿವಿಷನಿನ ಸಂಗತಿಯು ನಿಜವಾಗಿಯೂ ಜರೂರಾಗಿರುವುದು ಮಕ್ಕಳ ವಿಷಯದಲ್ಲಿ. ಹೆಚ್ಚು ಕಡಮೆ, ಟೀವೀ ವಯಸ್ಕರಿಗೆ ಏನು ಮಾಡುತ್ತದೊ ಅದನ್ನೇ ಸ್ವಲ್ಪ ಹೆಚ್ಚಾಗಿ ಮಕ್ಕಳಿಗೂ ಮಾಡುತ್ತದೆಂಬುದು ನಿಶ್ಚಯ. ಹೇಗೂ, ಮಕ್ಕಳು ತಾವು ಟೀವೀಯಲ್ಲಿ ನೋಡುವ ಭ್ರಾಂತ ಲೋಕವನ್ನು ಹೆಚ್ಚು ನಂಬುವ ಸಾಧ್ಯತೆಯಿದೆ. ಜರ್ಮನ್ ವೃತ್ತಪತ್ರಕೆಯಾದ ರೈನಿಶರ್ ಮೆರ್ಕುರ್-ಕ್ರಿಸ್ಟ್ ಅಂಡ್ ವೆಲ್ಟ್, ಮಕ್ಕಳು “ಪರದೆಯ ಮೇಲೆ ನೋಡುವುದನ್ನು ನಿಜ ಜೀವನದಿಂದ ಪ್ರತ್ಯೇಕಿಸಲು ಶಕ್ತರಲ್ಲ. ಅವರು ಅವಾಸ್ತವಿಕ ಲೋಕದಲ್ಲಿ ತಾವು ನೋಡುವುದನ್ನು ವಾಸ್ತವಿಕ ಜಗತ್ತಿಗೆ ಸ್ಥಳಾಂತರಿಸುತ್ತಾರೆ” ಎಂಬುದನ್ನು ಕಂಡುಹಿಡಿದ ಒಂದು ಅಧ್ಯಯನವನ್ನು ಉಲ್ಲೇಖಿಸಿತು.”
ದಶಕಗಳಿಂದ ಮಾಡಿರುವ ಸಂಶೋಧನೆಯ ಫಲವಾಗಿ ಬಂದಿರುವ 3,000ಕ್ಕೂ ಹೆಚ್ಚು ಅಧ್ಯಯನಗಳು, ಹಿಂಸಾತ್ಮಕ ಟೆಲಿವಿಷನಿನಿಂದಾಗಿ ಮಕ್ಕಳು ಮತ್ತು ಹದಿಪ್ರಾಯದವರು ನಕಾರಾತ್ಮಕವಾಗಿ ಪ್ರಭಾವಿತರಾಗುತ್ತಾರೆ ಎಂಬುದನ್ನು ಬೆಂಬಲಿಸುತ್ತವೆ. ಅಮೆರಿಕನ್ ಎಕಾಡಮಿ ಆಫ್ ಪೀಡಿಯಾಟ್ರಿಕ್ಸ್, ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್, ಮತ್ತು ಅಮೆರಿಕನ್ ಮೆಡಿಕಲ್ ಎಸೋಸಿಯೋಷನ್ನಂಥ ಸನ್ಮಾನಿತ ಸಂಸ್ಥೆಗಳು ಸಹ ಟೆಲಿವಿಷನಿನ ಹಿಂಸಾತ್ಮಕ ಕೃತ್ಯಗಳು ಮಕ್ಕಳಲ್ಲಿ ಜಗಳ ಹೂಡುವ ಮತ್ತು ಸಮಾಜ ವಿರೋಧಿ ಸ್ವಭಾವಗಳನ್ನು ಹುಟ್ಟಿಸುತ್ತವೆ ಎಂದು ಒಪ್ಪುತ್ತವೆ.
ಅಧ್ಯಯನಗಳು ಇತರ ಮನಕದಡಿಸುವ ಪರಿಣಾಮಗಳನ್ನು ತೋರಿಸಿವೆ. ಉದಾಹರಣೆಗೆ, ಮಕ್ಕಳಲ್ಲಿ ಬೊಜ್ಜನ್ನು ವಿಪರೀತ ಟೀವೀ ವೀಕ್ಷಣಕ್ಕೆ ಸಂಬಂಧಿಸಲಾಗಿದೆ. ಇದಕ್ಕೆ ಎರಡು ಕಾರಣಗಳಿವೆಯಂತೆ. (1) ಚಟುವಟಿಕೆಯಿಂದ ಆಡುವ ತಾಸುಗಳು ಪೆಟ್ಟಿಗೆಯ ಮುಂದೆ ಜಡ ತಾಸುಗಳಾಗುತ್ತವೆ. (2) ಟೀವೀ ಜಾಹೀರಾತುಗಳು ಮಕ್ಕಳಿಗೆ ಕಡಮೆ ಪೋಷಕ ಪದಾರ್ಥಗಳಿರುವ ಕೊಬ್ಬಿಸುವ ಕಚಡ ತಿಂಡಿಗಳನ್ನು ಮಾರುವುದರಲ್ಲಿ ಉತ್ತಮ ಕೆಲಸ ಮಾಡಿವೆ. ಇತರ ಸಂಶೋಧನೆಯು ವಿಪರೀತ ಟೀವೀ ನೋಡುವ ಮಕ್ಕಳು ಶಾಲಾಪಾಠಗಳಲ್ಲಿ ಕಡಮೆ ಅಂಕಗಳನ್ನು ಪಡೆಯುತ್ತಾರೆಂದು ಸೂಚಿಸುತ್ತದೆ. ಈ ತೀರ್ಮಾನ ಹೆಚ್ಚು ವಿವಾದಾತ್ಮಕವಾಗಿದೆಯಾದರೂ, ಅನೇಕ ಮನೋವೈಜ್ಞಾನಿಕರು ಮತ್ತು ಅಧ್ಯಾಪಕರು ಮಕ್ಕಳ ಓದುವ ಮತ್ತು ಶಾಲಾಕೆಲಸಗಳಲ್ಲಿ ವಿಶಾಲ ಅವನತಿಗೆ ಟೀವೀಯನ್ನು ದೂರುತ್ತಾರೆಂದು ಇತ್ತೀಚೆಗೆ ಟೈಮ್ ಪತ್ರಿಕೆ ವರದಿ ಮಾಡಿತು.
ಸಮಯವು ಇಲಿಯ್ಲೂ ಪ್ರಾಮುಖ್ಯ. ಸಾಮಾನ್ಯ ಅಮೆರಿಕನ್ ಹುಡುಗನು ಹೈಸ್ಕೂಲನ್ನು ತೇರ್ಗಡೆ ಹೊಂದಿ ಹೊರಬರುವ ಮೊದಲು ಶಾಲೆಯಲ್ಲಿ ಕಳೆದಿರುವ 11,000 ತಾಸುಗಳಿಗೆ ಹೋಲಿಸುವಾಗ ಟೀವೀಯ ಮುಂದೆ 17,000 ತಾಸುಗಳನ್ನು ಕಳೆದಿರುತ್ತಾನೆ. ಅನೇಕ ಮಕ್ಕಳಿಗೆ ಟೀವೀಯೆ ಅವರ ಮುಖ್ಯ ಚಟುವಟಿಕೆಯಾಗಿರದೆ ಇರುವಲ್ಲಿ ಬಿಡು ಸಮಯದ ಮುಖ್ಯ ಚಟುವಟಿಕೆಯಾಗಿದೆ. ದ ನ್ಯಾಷನಲ್ ಪಿಟಿಎ ಟಾಕ್ಸ್ ಟು ಪೇರೆಂಟ್ಸ್: ಹೌ ಟು ಗೆಟ್ ದ ಬೆಸ್ಟ್ ಎಡ್ಯುಕೇಶನ್ ಫಾರ್ ಯುವರ್ ಚೈಲ್ಡ್ ಎಂಬ ಪುಸ್ತಕವು, ಐದನೆಯ ಕ್ಲಾಸಿನವರಲ್ಲಿ (ಹತ್ತು ವರ್ಷ ವಯಸ್ಸಿನವರು) ಅರ್ಧಾಂಶ ಮಂದಿ ಮನೆಯಲ್ಲಿ ಓದುವುದರಲ್ಲಿ ನಾಲ್ಕು ನಿಮಿಷಗಳನ್ನೂ ಟೀವೀ ನೋಡುವುದರಲ್ಲಿ 130 ನಿಮಿಷಗಳನ್ನೂ ಕಳೆಯುತ್ತಾರೆ.
ಅಂತಿಮವಾಗಿ, ಟೀವೀ ಮಕ್ಕಳಿಗೂ ವಯಸ್ಕರಿಗೂ ತೀರಾ ಅಪಾಯವನ್ನು ತಂದೊಡ್ಡುವುದಿಲ್ಲ ಎಂದು ಗುರುತರವಾಗಿ ವಾದಿಸುವವರು ಕೇವಲ ಕೊಂಚ ಮಂದಿ ಮಾತ್ರ ಇರಬಹುದು. ಆದರೆ ಇದರ ಅರ್ಥವೇನು? ಮನೆಯಲ್ಲಿ ಟೀವೀ ನೋಡುವುದನ್ನು ಹೆತ್ತವರು ನಿಷೇಧಿಸಬೇಕೊ? ಜನಸಾಮಾನ್ಯರು ಅದನ್ನು ಹೊರಗೆಸೆದು ಅಥವಾ ಮೇಲಟ್ಟದಲ್ಲಿ ಹಾಕಿ ಅದರ ಪ್ರಭಾವದಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕೊ?
[ಅಧ್ಯಯನ ಪ್ರಶ್ನೆಗಳು]
a ಅವೇಕ್! ಆಗಸ್ಟ್ 22, 1990ರಲ್ಲಿ ಬಂದ “ಕ್ಯಾನ್ ಯು ರಿಯಲಿ ಬಿಲೀವ್ ದ ನ್ಯೂಸ್?” ನೋಡಿ.
[ಪುಟ 7 ರಲ್ಲಿರುವ ಸಂಕ್ಷಿಪ್ತ ವಿವರಣೆ]
“ಈ ಬಿಳಿ ಜನರು ಸದಾ ತಿವಿಯುವುದು, ಗುಂಡಿಕ್ಕುವುದು, ಮತ್ತು ಹೊಡೆದುಕೊಳ್ಳುವುದೇಕೆ?”
[ಪುಟ 9 ರಲ್ಲಿರುವ ಚಿತ್ರ]
ಟೀವೀಯನ್ನು ಬಂದ್ ಮಾಡಿರಿ, ಪುಸ್ತಕಗಳ ಕಡೆಗೆ ತೆರಳಿರಿ