ಹರಟೆಗಿರುವ ಶಕ್ತಿ
ಆ ಯುವತಿಯ ಆತ್ಮಹತ್ಯ ನೆಮ್ಮದಿಯ ಆ ಇಂಗ್ಲಿಷ್ ಪಟ್ಟಣವನ್ನು ತಲ್ಲಣಗೊಳಿಸಿತ್ತು. ಮತ್ತು ದುರ್ಮರಣ ವಿಚಾರಕನ ನ್ಯಾಯಮಂಡಲಿಯ ತೀರ್ಮಾನ ಅದಕ್ಕಿಂತಲೂ ಹೆಚ್ಚು ಚಕಿತಗೊಳಿಸಿತ್ತು: ‘ಆವಳನ್ನು ಅಪ್ರಯೋಜಕ ಹರಟೆ ಕೊಂದಿತ್ತು!’ ಈ ಯುವತಿಯ ಹೆಸರು, ಆಕೆಯ ಕೀರ್ತಿ, ಮತ್ತು ಕೊನೆಯದಾಗಿ ಅವಳ ಜೀವವನ್ನು ಆ ಪಟ್ಟಣದ ಹಗೆಸಾಧನೆಯ ಅಪ್ರಯೋಜಕ ಮಾತು ಧ್ವಂಸ ಮಾಡಿತ್ತು ಎಂಬುದು ವ್ಯಕ್ತ.
ಇಂಥ ದುರಂತಕರ ಪರಿಣಾಮವು ವಿರಳವಾದರೂ ಹರಟೆಗೆ ಭಯಂಕರ ಶಕ್ತಿಯಿದೆಯೆಂಬುದು ಸಂದೇಹರಹಿತ. ಒಂದು ಕಡೆಯಲ್ಲಿ, ಹರಟೆಯನ್ನು ಉಪಯೋಗಕರವಾದ ಮಾಹಿತಿ ವಿನಿಮಯದ ಸಾಮಾನ್ಯ ಮಾಧ್ಯಮವೆಂದು ಕರೆಯಬಹುದಾದರೂ, ಇನ್ನೊಂದು ಪಕ್ಕದಲ್ಲಿ ಅದನ್ನು ಸರಕಾರಗಳ ಸಂಕ್ಷೋಭೆಗೆ, ಕುಟುಂಬಗಳ ಶೈಥಿಲ್ಯಕ್ಕೆ ಮತ್ತು ಜೀವನೋಪಾಯಗಳ ಧ್ವಂಸಕ್ಕೆ ಕಾರಣಭೂತವೆಂದು ಹೇಳಬಹುದು.
ನಿದ್ರೆಯಿಲ್ಲದ ರಾತ್ರಿ, ಹೃದೇದ್ವನೆ, ಮತ್ತು ಅಜೀರ್ಣಗಳಿಗೆ ಹರಟೆಯನ್ನು ದೂರಲಾಗಿದೆ. ಮತ್ತು ಒಂದಲ್ಲ ಒಂದು ಬಾರಿ ಅದು ನಿಮಗೆ ವ್ಯಕ್ತಿಪರ ಸಂಕಟವನ್ನು ಉಂಟು ಮಾಡಿದೆಯೆಂಬುದು ನಿಸ್ಸಂದೇಹ. ವಾಸ್ತವವೇನಂದರೆ, ಲೇಖಕ ವಿಲ್ಯಂ ಎಮ್. ಜೋನ್ಸ್ ಎಚ್ಚರಿಸುವುದು, ವಾಣಿಜ್ಯ ಜಗತ್ತಿನಲ್ಲಿ, “ನಿಮ್ಮ ಜೀವನೋಪಾಯ ಕಾಲದಲ್ಲಿ ಯಾವನಾದರೂ ನಿಮ್ಮ ಸ್ಕಂಧಫಲಕಗಳ ಮಧ್ಯೆ ನಿಮಗೆ ಚಾಕುವಿನಿಂದ ಇರಿಯಲು ಪ್ರಯತ್ನಿಸುವನೆಂಬ ಸಾಧ್ಯತೆಯನ್ನು ನೀವು ಒಪ್ಪಿಕೊಳ್ಳಲೇ ಬೇಕು.”
ನಕಾರಾತ್ಮಕ ಹರಟೆಗೆ ಲೋಕವ್ಯಾಪಕವಾಗಿ ಅಸಮ್ಮತಿಯನ್ನು ಸೂಚಿಸಲಾಗುತ್ತದೆ. ಅಮೆರಿಕದ ಸೆಮಿನೋಲ್ ಇಂಡಿಯನರ ಮಧ್ಯೆ, “ಯಾರ ವಿಷಯವಾದರೂ ಕೆಟ್ಟದ್ದನ್ನಾಡುವುದನ್ನು” ಸುಳ್ಳಾಡುವುದು ಮತ್ತು ಕದಿಯುವುದರ ತರಗತಿಯಲ್ಲಿ ಇಡಲಾಗುತ್ತದೆ. ಪಶ್ಚಿಮ ಆಫ್ರಿಕದ ಒಂದು ಸಮಾಜದಲ್ಲಿ, ಚಾಡಿಕೋರರಿಗೆ ಅವರ ತುಟಿ ಕತ್ತರಿಸಲ್ಪಡುವ ಅಪಾಯವಿರುವುದು ಮಾತ್ರವಲ್ಲ, ಅದಕ್ಕೂ ವಿಪರೀತವಾಗಿ, ಅವರಿಗೆ ಮರಣದಂಡನೆಯಾಗುವ ಅಪಾಯವೂ ಇದೆ. ಹೌದು, ಇತಿಹಾಸದಲ್ಲೆಲ್ಲ, ಹರಟೆಯನ್ನು ನಿಯಂತ್ರಿಸಲು ಕ್ರಮಗಳನ್ನು ಕೈಕೊಳ್ಳಲಾಗಿದೆ.
ಹದಿನೈದರಿಂದ 18ನೆಯ ಶತಕಗಳಲ್ಲಿ, ಇಂಗ್ಲೆಂಡ್, ಜರ್ಮನಿ, ಮತ್ತು ಆ ಬಳಿಕ ಅಮೆರಿಕದ ಇಂಥ ಅಪಾಯಕಾರಿ ಹರಟೆಮಲ್ಲರು ತಮ್ಮ ಅಭ್ಯಾಸವನ್ನು ಬಿಡುವಂತೆ ನಾಚಿಕೆಗೊಳಿಸಲು ಮುಳುಕು ನಾಕಾಲಿ ಎಂದು ಕರೆಯಲ್ಪಡುವ ಸಾಧನವನ್ನು ಜನಪ್ರಿಯವಾಗಿ ಪ್ರಯೋಗಿಸಲಾಗುತ್ತಿತ್ತು. ಹೀಗೆ ದೋಷಿಯೆಂದು ತೀರ್ಮಾನಿಸಲ್ಪಟ್ಟವನನ್ನು ಒಂದು ನಾಕಾಲಿ ಕುರ್ಚಿಗೆ ಬಿಗಿದು ಅನೇಕಾವರ್ತಿ ನೀರಿನಲ್ಲಿ ಮುಳುಗಿಸಲಾಗುತ್ತಿತ್ತು.
ಈ ಮುಳುಕು ನಾಕಾಲಿಗೆ, ತಲೆ ಮತ್ತು ಕೈಗಳನ್ನು ಒಳಗೆ ತುರುಕಿಸಿ ಅವಮಾನ ಮಾಡುವ ಚೌಕಟ್ಟಿನ ಗತಿಯೇ ಬಂದು ಅದು ದಾಟಿ ಹೋಗಿರುವುದಾದರೂ, ಈ ಆಧುನಿಕ ದಿನಗಳಲ್ಲಿಯೂ ಹರಟೆಯ ವಿರುದ್ಧ ಯುದ್ಧವನ್ನು ಹೂಡಲಾಗುತ್ತಿದೆ. ಉದಾಹರಣೆಗೆ, 1960ಗಳಲ್ಲಿ, ಅಮೆರಿಕದಲ್ಲಿ, ಸರಕಾರದ ಚಟುವಟಿಕೆಗಳಿಗೆ ಅಪಾಯಕರವಾಗುವ ಸಾಧ್ಯತೆಯಿದ್ದ ಗಾಳಿಸುದ್ದಿಗಳನ್ನು ನಿಭಾಯಿಸಲು ಗಾಳಿಸುದ್ದಿ-ನಿಯಂತ್ರಣ ಕೇಂದ್ರಗಳನ್ನು ಸ್ಥಾಪಿಸಲಾಯಿತು. ಉತ್ತರ ಆಯರ್ಲೆಂಡ್ ಮತ್ತು ಇಂಗ್ಲೆಂಡಿನಲ್ಲಿಯೂ ಇಂಥ ಏರ್ಪಾಡುಗಳು ಜಾರಿಯಲ್ಲಿದ್ದವು. ಆರ್ಥಿಕ ಸಂಸ್ಥೆಗಳಿಗೆ ಆರ್ಥಿಕ ಹಾನಿಯನ್ನುಂಟುಮಾಡುವಂತೆ ರಚಿಸಲ್ಪಟ್ಟಿರುವ ಹರಟೆಗಳನ್ನು ನಿಯಂತ್ರಿಸಲಿಕ್ಕೂ ನಿಯಮಗಳನ್ನು ಜಾರಿಗೆ ತರಲಾಗಿದೆ.
ಇಂಥ ಪ್ರಯತ್ನಗಳ ಎದುರಿನಲ್ಲೂ ಹರಟೆ ಬದುಕಿ ಉಳಿಯುತ್ತದೆ. ಅದು ಜೀವಿಸುವುದು ಮಾತ್ರವಲ್ಲ, ಹುಲುಸಾಗಿ ಬೆಳೆಯತ್ತಲೂ ಇದೆ. ಅದರ ಸುಡುವ ಶಕ್ತಿಯನ್ನು ಆರಿಸುವುದರಲ್ಲಿ ನಿಯಮವಾಗಲಿ ಯಾವುದೇ ಮಾನವ ಕ್ರಮವಿಧಾನವಾಗಲಿ ಯಶಸ್ವಿ ಹೊಂದಿರುವುದಿಲ್ಲ. ಹರಟೆ ಎಲ್ಲೆಲ್ಲಿಯೂ ಇದೆ. ನೆರೆಹೊರೆಯ ಹರಟೆ, ಆಫೀಸು ಹರಟೆ, ಅಂಗಡಿ ಹರಟೆ, ಸಂತೋಷ ಗೋಷ್ಠಿ ಹರಟೆ, ಕುಟುಂಬ ಹರಟೆ, ಹೀಗೆ ವಿವಿಧ ಹರಟೆಗಳಿವೆ. ಅದು ಎಲ್ಲ ಸಂಸ್ಕೃತಿ, ಕುಲ, ಮತ್ತು ನಾಗರಿಕತೆಗಳಿಗೆ ಅತೀತವಾಗಿದೆ, ಮತ್ತು ಸಮಾಜದ ಸಕಲ ಅಂತಸ್ತುಗಳಲ್ಲಿಯೂ ಹೇರಳವಾಗಿದೆ. ಒಬ್ಬ ಪರಿಣತರು ಹೇಳಿದ್ದು: “ಹರಟೆ ಎಷ್ಟು ಸಾಮಾನ್ಯವೆಂದರೆ ಅದು ಸುಮಾರಾಗಿ ಉಸಿರಾಡುವುದಕ್ಕೆ ಸಮಾನ.” ಅವರು ಇನ್ನೂ ಹೇಳಿದ್ದು: ‘ಅದು ಮಾನವ ಪ್ರಕೃತಿಯ ಆಳವಾದ ಭಾಗವಾಗಿದೆ.’
ಹೌದು, ಹರಟೆ ಅನೇಕ ವೇಳೆ, ಮಾನವ ಪ್ರಕೃತಿಯ ಅಸಂಸ್ಕ್ರತ ಪಕ್ಕವನ್ನು, ಸತ್ಕೀರ್ತಿಯನ್ನು ಕೆಡಿಸುವುದರಲ್ಲಿ, ಸತ್ಯವನ್ನು ಕೊಂಕಿಸುವುದರಲ್ಲಿ, ಮತ್ತು ಜೀವಗಳನ್ನು ನಾಶಮಾಡುವುದರಲ್ಲಿ ಸಂತೋಷಿಸುವ ಪಕ್ಕವನ್ನು ಬಯಲುಪಡಿಸುತ್ತದೆ. ಆದರೂ, ಹರಟೆ ಅಂತರ್ಗತವಾಗಿ ಕೆಟ್ಟದಲ್ಲ. ಅನಿಯತ ಮಾತಿಗೆ ಸಕಾರಾತ್ಮಕ ಪಕ್ಕವೂ ಇದೆ. ಮತ್ತು ಹಾನಿಕರ ಹಾಗೂ ಹಾನಿರಹಿತ ಹರಟೆಗೆ ಮಿತಿ ಕಲ್ಪಿಸುವುದನ್ನು ತಿಳಿಯುವುದೇ ಇತರರನ್ನು—ಮತ್ತು ನಿಮ್ಮನ್ನು—ಇದರ ಬಲಿಯಾಗುವುದರಿಂದ ತಪ್ಪಿಸುವ ಕೀಲಿಕೈಯಾಗಿದೆ. (g91 6/8)
[ಪುಟ 4 ರಲ್ಲಿರುವ ಚಿತ್ರ]
ಹರಟೆಮಲ್ಲರೊಂದಿಗೆ ವ್ಯವಹರಿಸಲು ಸ್ಥಳೀಕ ಸರಕಾರಗಳು ಪ್ರಯತ್ನಿಸಿದ ಒಂದು ವಿಧ ಮುಳುಕು ನಾಕಾಲಿಯ ಬಳಕೆಯಾಗಿತ್ತು
[ಕೃಪೆ]
Historical Pictures Service