ಬೈಬಲಿನ ದೃಷ್ಟಿಕೋನ
ಆತ್ಮ ರಕ್ಷಣೆ—ಒಬ್ಬ ಕ್ರೈಸ್ತನು ಎಲ್ಲಿಯ ವರೆಗೆ ಹೋಗಸಾಧ್ಯವಿದೆ?
“ಏಕೆ ಭಯದಿಂದ ಜೀವಿಸಬೇಕು? ಆತ್ಮ ರಕ್ಷಣೆಯ ಪ್ರಾಯೋಗಿಕ ವಿಧಗಳನ್ನು ಮತ್ತು ಆಕ್ರಮಣಕಾರನಿಂದ ತಪ್ಪಿಸಿಕೊಳ್ಳುವ ವಿಧವನ್ನು ಕಲಿಯಿರಿ. ಸುಲಭವಾದ ಹಾಗೂ ಕಾರ್ಯಸಾಧಕವಾದ ಆತ್ಮ ರಕ್ಷಣಾ ವಿಧಾನಗಳನ್ನು ಪ್ರದರ್ಶಿಸಲಾಗಿದೆ. ಈ ಶಿಕ್ಷಣಾತ್ಮಕವಾದ ವಿಡಿಯೊ ಒಬ್ಬನು ಬಲಿಯೊ, ಬದುಕಿ ಉಳಿಯುವವನೊ ಎಂಬುದರ ಮಧ್ಯೆ ವ್ಯತ್ಯಾಸವನ್ನು ಉಂಟು ಮಾಡಬಹುದು.”—ಆತ್ಮ ರಕ್ಷಣೆಯ ವಿಡಿಯೋವಿನ ಜಾಹೀರಾತು.
ಇಂದು ಇಂಥ ವಿಡಿಯೋವಿಗಿರುವ ವಿಕ್ರಯ ಶಕ್ತಿಯನ್ನು ಯಾರೂ ವಿವರಿಸಬೇಕೆಂದಿಲ್ಲ. ಅಮೆರಿಕದ ಪೆನ್ಸಿಲೇನ್ವಿಯದ ಫಿಲಡೆಲ್ಫಿಯದಲ್ಲಿ ಯುವಕರ ತಂಡಗಳು ರಸ್ತೆಗಳಲ್ಲಿ ಹಿಂದಾಕ್ರಮಣಕ್ಕೆ ಕೊಳ್ಳೆ ಹುಡುಕುತ್ತಾ ತಿರುಗುವಾಗ “ಹೊಡೆ, ಹೊಡೆ, ಹೊಡೆ” ಎಂದು ಧಾಟಿಯ ಮಾತುಗಳನ್ನಾಡುತ್ತಾರೆ. ರೀಯೊ ಡೆ ಜೆನೀರೊದಲ್ಲಿ “ಪಾತಕದ ಭಯ ಇಡೀ ನಗರದ ಸ್ವಭಾವದ ಮೇಲೆ ಪ್ರಭಾವ ಬೀರುತ್ತದೆ” ಎಂದು ಟೈಮ್ ಪತ್ರಿಕೆ ವರದಿ ಮಾಡುತ್ತದೆ. ಹಾಂಗ್ ಕಾಂಗಿನಲ್ಲಿ ಸಶಸ್ತ್ರ ದರೋಡೆ ಮತ್ತು ಗುಂಡು ಹಾರಿಸುವಿಕೆಗಳು ಇದು ವರೆಗೆ ಹಿಂಸಾತ್ಮಕ ಪಾತಕಗಳು ಸುಮಾರು ಅಜ್ಞಾತವಾಗಿದ್ದ ಸ್ಥಳಗಳಲ್ಲಿ ನಡೆಯುತ್ತಿವೆ.
ಈ ರೀತಿಯ ವರದಿಗಳು ಲೋಕಾದ್ಯಂತ ಕೇಳಿಬರುತ್ತವೆ. ಪರಿಣಾಮವೇನು? “ಪೌರರು ಹಿಂದೆ ಗುಂಡು ಹಾರಿಸುವುದಲ್ಲಿರುವ ಅಪಾಯವನ್ನು ತುಲನೆ ಮಾಡುತ್ತಾರೆ” ಎನ್ನುತ್ತದೆ, ನ್ಯೂಸ್ವೀಕ್. “ಕಠಿಣ ಕಾಲ”ಗಳಿಂದ ಕ್ರೈಸ್ತರಿಗೂ ರಕ್ಷಣೆಯಿಲದ್ಲಿರುವಾಗ, ಹಿಂದೆ ಗುಂಡು ಹೊಡೆಯುವದು, “ಒಬ್ಬನು ಬಲಿಯೋ ಬದುಕಿ ಉಳಿಯುವವನೋ” ಎಂಬುದರ ಮಧ್ಯೆ ವ್ಯತ್ಯಾಸವನ್ನು ಉಂಟುಮಾಡೀತೆ?—2 ತಿಮೊಥಿ 3:1.
ಬಲಾತ್ಕಾರಕ್ಕೆ ಪ್ರತಿಯಾಗಿ ಬಲಾತ್ಕಾರ?
‘ಬಂದೂಕು ಇದ್ದರೆ ನಾನು ಸುರಕ್ಷಿತ. ಅವನು ನನಗೆ ಹೊಡೆಯುವ ಮೊದಲು ನಾನೇ ಅವನಿಗೆ ಹೊಡೆಯುತ್ತೇನೆ. ಕಡಮೆ ಪಕ್ಷ, ಅವನು ಭಯದಿಂದ ಓಡುವಂತೆ ಆದರೂ ಮಾಡಬಹುದು’ ಎಂದು ಕೆಲವರ ಅಭಿಪ್ರಾಯ.
ಅಮೆರಿಕದ ಜಾರ್ಜಿಯದ ಅಟ್ಲಾಂಟ ನಗರದ ಸಾರ್ವಜನಿಕ ಸುರಕ್ಷಾ ಕಮಿಷನರ್, ಜಾರ್ಜ್ ನ್ಯಾಪರ್ ಹೇಳುವುದು: “ಕೈಕೋವಿ ಉಳ್ಳವನಾಗಿರುವುದೆಂದರೆ ಇನ್ನೊಬ್ಬ ಮಾನವ ಜೀವಿಯನ್ನು ಕೊಂದ ಬಳಿಕ ಬದುಕುವುದೆಂದರ್ಥ.” ಇಂಥ, ರಕ್ತಾಪರಾಧವೂ ಇರಬಹುದಾದ ಫಲಾಂತರದಲ್ಲಿ ಒಬ್ಬ ಕ್ರೈಸ್ತನು ಜೀವಿಸಲು ಬಯಸಿಯಾನೆ?—ಅರಣ್ಯಕಾಂಡ 35:11, 12, ಹೋಲಿಸಿ.
ದೇವರ ವಾಕ್ಯವು, “ಕತ್ತಿಗಳನ್ನು . . . ಗುಳಗಳನ್ನಾಗಿ” ಮಾಡಬೇಕೆಂದೂ “ಸಮಾಧಾನವನ್ನು ಹಾರೈಸಿ ಅದಕ್ಕಾಗಿ ಪ್ರಯತ್ನ” ಪಡಬೇಕೆಂದೂ ಆಜ್ಞಾಪಿಸುತ್ತದೆ ಕೂಡ. (ಮೀಕ 4:3; 1 ಪೇತ್ರ 3:11.) ಹಾಗಾದರೆ, ಕ್ರೈಸ್ತರು ರಕ್ಷೆಗೆ ಬಂದೂಕುಗಳ ಮರೆಹೊಕ್ಕಿ ಅದೇ ಸಮಯದಲ್ಲಿ ಬೈಬಲಿನ ಆವಶ್ಯಕತೆಗಳಿಗೆ ಹೊಂದಿಕೊಂಡು ಹೇಗೆ ಜೀವಿಸಸಾಧ್ಯವಿದೆ? ಹೇಗಿದ್ದರೂ, ಆಕ್ರಮಣಕಾರನು ಬಂದೂಕು ಹೊಡೆಯುವುದರಲ್ಲಿ ಅವನ ಬಲಿಗಿಂತ ವೇಗಿಯಾಗಿರುವ ಸಂಭವವಿದೆ.
ಯೇಸು ಸಶಸ್ತ್ರ ತಡೆಯನ್ನು ನಿರಾಕರಿಸಿದನು. ಗೆತ್ಸೇಮನೆ ತೋಟಕ್ಕೆ, ತನಗೆ ದಸ್ತಗಿರಿಯಾಗಲಿದ್ದ ಸ್ಥಳಕ್ಕೆ, ಎರಡು ಕತ್ತಿಗಳನ್ನು ಒಯ್ಯುವಂತೆ ಅವನು ತನ್ನ ಅಪೊಸ್ತಲರಿಗೆ ಹೇಳಿದ್ದು ನಿಜ. ಆದರೆ ಏಕೆ? ಶಸ್ತ್ರಗಳಿದ್ದರೂ ಅವನ್ನು ಉಪಯೋಗಿಸದಿರುವುದು, ಯೇಸುವಿನ ಹಿಂಬಾಲಕರು ಐಹಿಕ ಆಯುಧಗಳನ್ನು ಬಳಸಬಾರದೆಂದು ಬಲವಾಗಿ ಪ್ರದರ್ಶಿಸಿತು. ಆಯುಧವು ಅಲ್ಲಿದ್ದುದರಿಂದ ಪೇತ್ರನು ಉದ್ರೇಕದಿಂದ ಅದನ್ನು ಉಪಯೋಗಿಸಿದನೆಂಬುದು ಗಮನಾರ್ಹ. ಯೇಸು ಪೇತ್ರನ ಈ ದುಡುಕಿನ ವರ್ತನೆಗೆ, “ಕತ್ತಿಯನ್ನು ಹಿಡಿದವರೆಲ್ಲರು ಕತ್ತಿಯಿಂದ ಸಾಯುವರು” ಎಂದು ಬಲವಾಗಿ ಗದರಿಸಿದನು.—ಮತ್ತಾಯ 26:36, 47-56; ಲೂಕ 22:36-38, 49-51.
‘ಅದೆಲ್ಲ ಬಂದೂಕುಗಳನ್ನು ಇರಿಸಿಕೊಳ್ಳುವುದಕ್ಕೆ ಅನ್ವಯಿಸುತ್ತದೆ’ ಎಂದು ಒಬ್ಬನು ಹೇಳಾನು. ‘ಆದರೆ ಆತ್ಮ ರಕ್ಷಣೆಗಾಗಿ ಜೂಡೊ, ಕರಾಟೆ, ಮತ್ತು ಕೆಂಡೊ—ಇವೇ ಮೊದಲಾದ ಯುದ್ಧ ಕಲೆಗಳನ್ನು ಕಲಿಯುವುದರ ವಿಷಯವೇನು?’ ನಿಮ್ಮನ್ನು ಹೀಗೆ ಪ್ರಶ್ನಿಸಿಕೊಳ್ಳಿ: ಈ ಕಲೆಯ ಉದ್ದೇಶ ಹೋರಾಡುವುದು ಯಾ ಇತರರಿಗೆ ನೋವನ್ನುಂಟುಮಾಡುವುದೇ ಅಲ್ಲವೆ? ಮತ್ತು ಇಂಥ ತರಬೇತು ಮಾರಕವಾಗಿ ಶಸ್ತ್ರ ತೊಟ್ಟುಕೊಳ್ಳುವುದಕ್ಕೆ ಸಮಾನವಾಗುವುದಿಲ್ಲವೆ? (1 ತಿಮೊಥಿ 3:3) ಇದರ ಅಭ್ಯಾಸದ ಸಮಯದಲ್ಲೂ ಗುರುತರವಾದ ಗಾಯ ಮತ್ತು ವಿಪತ್ತುಗಳು ಸಂಭವಿಸಿವೆ.
ರೋಮಾಪುರ 12:17-19, ಈ ವಿಷಯದಲ್ಲಿ ವಿವೇಕಪೂರ್ಣ ಸಲಹೆಯನ್ನು ನೀಡುತ್ತದೆ: “ಯಾರಿಗೂ ಅಪಕಾರ [ಕೆಡುಕು, NW]ಕ್ಕೆ ಅಪಕಾರವನ್ನು ಮಾಡಬೇಡಿರಿ. . . . ಸಾಧ್ಯವಾದರೆ ನಿಮ್ಮಿಂದಾಗುವ ಮಟ್ಟಿಗೆ ಎಲ್ಲರ ಸಂಗಡ ಸಮಾಧಾನದಿಂದಿರಿ. ಪ್ರಿಯರೇ, ನೀವೇ ಮುಯ್ಯಿಗೆ ಮುಯ್ಯಿ ತೀರಿಸದೆ ಶಿಕ್ಷಿಸುವದನ್ನು ದೇವರಿಗೆ ಬಿಡಿರಿ. ನಾನೇ ಪ್ರತಿಫಲವನ್ನು ಕೊಡುವೆನು ಎಂದು ಕರ್ತನು ಹೇಳುತ್ತಾನೆಂಬದಾಗಿ ಬರೆದದೆ.” ಪೌಲನು “ಕೆಡುಕು” (kakos) ಎಂದು ಉಪಯೋಗಿಸಿರುವ ಗ್ರೀಕ್ ಪದಕ್ಕೆ “ನಾಶಕರ, ಹಾನಿಕರ” ಎಂಬ ಅರ್ಥವೂ ಇರಸಾಧ್ಯವಿದೆ. ಆದುದರಿಂದ ಕ್ರೈಸ್ತರು ಪ್ರತೀಕಾರಕವಾಗಿ ಇನ್ನೊಬ್ಬನಿಗೆ ಹಾನಿ ಯಾ ಕೇಡನ್ನು ಮಾಡುವ ಯಾವ ಯೋಚನೆಯಿಂದಲೂ ದೂರವಾಗಿರಬೇಕು.
ಉದ್ರೇಕದಿಂದ ತನ್ನ ಸ್ವಂತ ಕೋಪವನ್ನು ಪ್ರದರ್ಶಿಸುವ ಬದಲು, ಒಬ್ಬ ಕ್ರೈಸ್ತನು, “ನಿಮ್ಮನ್ನು ತಾಕುವವನು ಕರ್ತನ ಕಣ್ಣುಗುಡ್ಡನ್ನು ತಾಕುವವನಾಗಿದ್ದಾನೆ” ಎಂದು ತನ್ನ ಜನರ ಕುರಿತು ಹೇಳಿರುವ ದೇವರಲ್ಲಿ ಪೂರ್ತಿ ಭರವಸವಿಡುತ್ತಾನೆ. ಇದಕ್ಕೆ ಹೊಂದಿಕೊಂಡು, ತಕ್ಕ ಸಮಯದಲ್ಲಿ ‘ದುಷ್ಟರನ್ನು ಸಂಹರಿಸುತ್ತೇನೆ’ ಎಂದು ದೇವರು ವಾಗ್ದಾನಿಸುತ್ತಾನೆ.—ಜೆಕರ್ಯ 2:8; ಕೀರ್ತನೆ 145:20.
ಹೋರಾಡುವ ಸಮಯ?
ಕೆಲವರು ಸಾಹಸಿಕೆಯಿಂದ ‘ಹೋರಾಟವಿಲ್ಲದೆ ನಾನು ನನ್ನ ಹಣ ಕೊಡಲಾರೆ!’ ಎಂದು ಹೇಳುತ್ತಾರೆ. ನ್ಯಾಷನಲ್ ಕ್ರೈಮ್ ಪ್ರಿವೆನ್ಶನ್ ಇನ್ಸಿಟ್ಟ್ಯೂಟಿನ ಶಿಕ್ಷಣ ಮ್ಯಾನೆಜರರಾದ ಡಿಕ್ ಮೆಲರ್ಡ್ ಎಚ್ಚರಿಸುವುದು: “ಪ್ರತಿರೋದಿಸುವುದು ಮಾನವ ಪ್ರಕೃತಿ, ಆದರೆ ಈ ಮಾನವ ಪ್ರಕೃತಿ ಅಯೋಗ್ಯ ಪರಿಸ್ಥಿತಿಯಲ್ಲಿ [ನಿಮ್ಮನ್ನು] ಸಾಯಿಸಬಹುದು.” ಅನೇಕ ಹಿಂದಾಕ್ರಮಣಕಾರರು ಅಪಾಯಕಾರಕವಾಗಿ ಶಸ್ತ್ರಸಜ್ಜಿತರೂ ಉದ್ವೇಗಿಗಳೂ ರೇಗುಸ್ವಭಾವದವರೂ ಆಗಿದ್ದಾರೆ. ನಷ್ಟವಾಗುವ ಹಣವನ್ನು ಪುನಃ ಪಡೆಯಬಹುದು, ಆದರೆ ನಷ್ಟವಾಗುವ ಜೀವವನ್ನೊ? ಇಂಥ ಅಪಾಯಕ್ಕೊಳಗಾಗುವುದು ಲಾಭದಾಯಕವೆ?
ಜಾರ್ಜ್ ನ್ಯಾಪರ್ ಈ ಸಲಹೆ ನೀಡುತ್ತಾರೆ: “ಪ್ರಾಯಶಃ ನಿಮ್ಮನ್ನು ಸರ್ವಕ್ಷಿಸುವ ಅತ್ಯುತ್ತಮ ವಿಧಾನವು ನಿಮ್ಮ ಜೀವದ ಬದಲಿಗೆ ಸೊತ್ತನ್ನು ಅಪಾಯಕ್ಕೊಳಪಡಿಸುವುದೇ. ಹೆಚ್ಚಿನ ದರೋಡೆಕೋರರು ಮತ್ತು ಕನ್ನಗಳ್ಳರು ಕದಿಯಲಿಕ್ಕೆ ಬರುತ್ತಾರೆ, ಕೊಲಲ್ಲಿಕ್ಕಲ್ಲ.” ಒಬ್ಬನನ್ನು ತಡೆದು ನಿಲ್ಲಿಸುವಾಗ ಯಾ ಅವನ ಹಣ ಕೇಳಲ್ಪಡುವಾಗ, “ಕರ್ತನ ದಾಸನು ಜಗಳ”ವಾಡದವನಾಗಿರಬೇಕೆಂಬುದು ಒಂದು ಸ್ವಸ್ಥ ಮೂಲಸೂತ್ರ.—2 ತಿಮೊಥಿ 2:24.a
ಆದರೆ ಇದು ಶಾಂತಿವಾದವಲ್ಲ, ಅಂದರೆ, ಯಾವ ಪರಿಸ್ಥಿತಿಯೇ ಬರಲಿ ಅಪ್ರತಿಭಟನೆಯ ಕಾರ್ಯನೀತಿಯಲ್ಲ. ವಿಮೋಚನಕಾಂಡ 22:2, 3 ರಲ್ಲಿ, ದಿನದ ವೇಳೆಯಲ್ಲಿ ಒಬ್ಬನ ಮನೆಗೆ ಹೊಕ್ಕಿದಾಗ ಮಾರಕವಾಗಿ ಹೊಡೆಯಲ್ಪಟ್ಟ ಒಬ್ಬ ಕಳ್ಳನ ಸನ್ನಿವೇಶವನ್ನು ವರ್ಣಿಸಲಾಗಿದೆ. ಇಂಥ ರಕ್ಷಣಾ ಕ್ರಮ ಕೊಲೆಪಾತಕಕ್ಕೆ ಸಮಾನವೆಂದು ಎಣಿಸಲಾಯಿತು. ಏಕೆಂದರೆ ಆ ಕಳ್ಳನನ್ನು ಗುರುತಿಸಿ ನ್ಯಾಯಕ್ಕೆ [ವಿಚಾರಣೆಗಾಗಿ ನ್ಯಾಯಾಲಯಕ್ಕೆ] ಒಳಪಡಿಸಬಹುದಾಗಿತ್ತು. ಆದರೆ ರಾತ್ರಿಕಾಲದಲ್ಲಿ, ಮನೆಯವನಿಗೆ ಕಳ್ಳನನ್ನು ನೋಡಿ ಅವನ ಇಂಗಿತವನ್ನು ತಿಳಿಯುವುದು ಕಷ್ಟಕರ. ಆದುದರಿಂದ, ಕಳ್ಳನನ್ನು ಕತ್ತಲೆಯಲ್ಲಿ ಕೊಲ್ಲುವ ವ್ಯಕ್ತಿ ಅಪರಾಧಿಯೆಂದು ಎಣಿಸಲ್ಪಡುತ್ತಿರಲಿಲ್ಲ.
ಹೀಗೆ, ಉದ್ರೇಕದ ಆತ್ಮ ರಕ್ಷಣೆಯ ಪ್ರಯತ್ನಗಳನ್ನು ಬೈಬಲು ಸಮರ್ಥಿಸುವುದಿಲ್ಲ. ಶಾಂತಿವಾದವನ್ನು ಸಮರ್ಥಿಸದಿದ್ದರೂ, ಬೈಬಲು ಒಬ್ಬನು ತನ್ನನ್ನು ರಕ್ಷಿಸಿಕೊಳ್ಳುವ ಸಮಯವಿದೆ ಎಂದು ಸೂಚಿಸುತ್ತದೆ. ಕ್ರೈಸ್ತರು ತಮ್ಮ, ತಮ್ಮ ಕುಟುಂಬದವರ, ಯಾ ನಿಜ ರಕ್ಷಣೆ ಬೇಕಾಗಿರುವ ಇತರರ ಮೇಲೆ ಬರುವ ದೈಹಿಕ ಆಕ್ರಮಣಗಳನ್ನು ತಡೆಯಬಹುದು.b ಆದರೆ ಅವರು ಆಕ್ರಮಣವನ್ನು ಆರಂಭಿಸುವುದಿಲ್ಲ; ತಮ್ಮ ಸೊತ್ತನ್ನು ಕಾಪಾಡಲು ಶಾರೀರಿಕವಾಗಿ ಪ್ರತೀಕಾರವನ್ನೂ ಮಾಡುವುದಿಲ್ಲ. ಇಂಥ ಆಕ್ರಮಣಗಳು ಬರಬಹುದೆಂದು ಎಣಿಸಿ ಅವರು ಶಸ್ತ್ರಸಜ್ಜಿತರಾಗುವುದಿಲ್ಲ; ಬದಲಿಗೆ, ಅವರು “ಸಮಾಧಾನದಿಂದ” ಜೀವಿಸಲು ಬಯಸುತ್ತಾರೆ.—2 ಕೊರಿಂಥ 13:11. (g91 7/8)
[ಅಧ್ಯಯನ ಪ್ರಶ್ನೆಗಳು]
a ಪೂರ್ವೋತ್ತರ ವಚನಗಳು ಪೌಲನು ಇಲ್ಲಿ ವಾಗ್ವಾದಗಳ ವಿಷಯ ಸೂಚಿಸುತ್ತಾನೆ ಎಂದು ತೋರಿಸುವುದಾದರೂ, “ಜಗಳ” (makhesthai) ಎಂದು ಭಾಷಾಂತರಿಸಿರುವ ಮೂಲ ಪದವು ಸಾಮಾನ್ಯವಾಗಿ ಸಶಸ್ತ್ರ ಮತ್ತು ಕೈ ಕೈ ಕಾಳಗಗಳೊಂದಿಗೂ ಜೊತೆಗೂಡಿದೆ.
b ಬಲಾತ್ಕಾರ ಸಂಭೋಗಕ್ಕೊಳಗಾಗುವ ಸ್ತ್ರೀ ಕಿರಿಚಬೇಕು ಮತ್ತು ಸಂಭೋಗವನ್ನು ತಡೆಯಲು ತನ್ನ ವಶದಲ್ಲಿರುವ ಸಕಲವನ್ನೂ ಉಪಯೋಗಿಸಬೇಕು.—ಧರ್ಮೋಪದೇಶಕಾಂಡ 22:23-27.
[ಪುಟ 12 ರಲ್ಲಿರುವ ಚಿತ್ರ]
Betrayal of Christ, by Albrecht Dürer, 1508