ಮರುನಿಯೋಜಿಸಲು ಸತ್ಯಕ್ಕಿರುವ ಶಕ್ತಿ
“ಬೇಗನೆ ಬಿಡುಗಡೆ ಹೊಂದಿದ್ದ ಒಬ್ಬ ಕನ್ನಗಳ್ಳನು ಏಳು ತಿಂಗಳುಗಳಲ್ಲಿ 500 ಕಳ್ಳತನಗಳನ್ನು ಮಾಡಿದನು. ಕಡಮೆ ಪಕ್ಷ ಹತ್ತು ವರ್ಷ ಸಜೆಯವನಾಗಿದ್ದರೂ ನಾಲ್ಕು ವರ್ಷ ಮೊದಲು ಬಿಡುಗಡೆ ಹೊಂದಿದ್ದ ಒಬ್ಬ ಬಲಾತ್ಕಾರ ಸಂಭೋಗಿ ಒಬ್ಬ ಸ್ತ್ರೀಯನ್ನು ಲೈಂಗಿಕವಾಗಿ ಆಕ್ರಮಿಸಿ ಕೊಂದನು. ನಂಬಿಕೆಯ ವಾಗ್ದಾನದ ಮೇಲೆ ಬಿಡುಗಡೆ ಹೊಂದಿದ್ದ ಒಬ್ಬ ಕೊಲೆಗಾರನು ಎರಡು ಮನೆಗಳಿಗೆ ನುಗ್ಗಿ ಮೂವರನ್ನು ಕೊಲೆ ಮಾಡಿದನು.”—ರೀಡರ್ಸ್ ಡೈಜೆಸ್ಟ್, ನವಂಬರ್ 1990.
“ಗುರುತರವಾದ ಅಪರಾಧಗಳ ಸೆರೆಮನೆಗಳಿಂದ ಬಿಡುಗಡೆ ಹೊಂದಿದ್ದ ಕೈದಿಗಳಲ್ಲಿ ಸುಮಾರು 63 ಪ್ರತಿಶತ, ಮೂರು ವರ್ಷಗಳೊಳಗೆ ಗುರುತರವಾದ ಅಪರಾಧವನ್ನು ಪುನಃ ಮಾಡಿ ದಸ್ತಗಿರಿ ಮಾಡಲ್ಪಟ್ಟರು ಎಂದು ಇಂದು ಹೊರಡಿಸಿದ ಅಧ್ಯಯನವೊಂದರಲ್ಲಿ ಜಸಿಸ್ಟ್ ಇಲಾಖೆ ತಿಳಿಸಿತು.”—ದ ನ್ಯೂ ಯಾರ್ಕ್ ಟೈಮ್ಸ್, ಏಪ್ರಿಲ್ 3, 1989.
“ಸೆರೆಮನೆಯು ಅಪರಾಧಿಯನ್ನು ಮರುನಿಯೋಜಿಸುವ ಆದರ್ಶ ಸ್ಥಳವೆಂಬುದು ಸತ್ಯವಲ್ಲ. ಸೆರೆಮನೆಗಳು ಸಂಯೋಜಿಸಲ್ಪಟ್ಟ ‘ಮಳಿಗೆಗಳು’ ಮತ್ತು ‘ಪಾತಕಗಳ ಶಾಲೆಗಳು.”—ಟೊರಾಂಟೊ ಸಂಡೇ ಸ್ಟಾರ್, ಮಾರ್ಚ್ 20, 1988.
ರೈಕರ್ಸ್ ಐಲೆಂಡ್ ಎಂಬ ನ್ಯೂ ಯಾರ್ಕ್ ಸಿಟಿ ಜೆಯ್ಲಿನ ವಾರ್ಡನ್ ಹೇಳುವುದು: “ಹತ್ತೊಂಭತ್ತು ವರ್ಷ ವಯಸ್ಸಿನ ಹುಡುಗನು ಇಲ್ಲಿಗೆ ಬರುತ್ತಾನೆ. ಅವನು ಒಂದು ಕಳ್ಳತನವಾಗುವಾಗ ಕಳ್ಳರಿಗೆ ಎಚ್ಚರಿಕೆ ಕೊಡಲಿಕ್ಕಾಗಿ ನಿಲ್ಲಿಸಲ್ಪಟ್ಟವನು. ಇಲ್ಲಿಂದ ಅವನು ಹೊರಗೆ ಹೋಗುವಾಗ ಅವನು ಇನ್ನೂ ಎಚ್ಚರಿಕೆ ಕೊಡುವವನಾಗಿರುವುದಿಲ್ಲ. ಮುಂದಿನ ಸಲ, ಅವನು ಗುಂಡುಹಾರಿಸುವವನಾಗುತ್ತಾನೆ.”—ನ್ಯೂ ಯಾರ್ಕ್ ಮ್ಯಾಗಸಿನ್, ಏಪ್ರಿಲ್ 23, 1990.
“ಸೆರೆಮನೆಯ ಗೇಟುಗಳು ತಿರುಗುವ ಬಾಗಲಿನಂತಿವೆ: ಸುಮಾರು ಎಲ್ಲ ಕೈದಿಗಳಲ್ಲಿ ಮೂರನೆಯ ಎರಡಂಶ ಬಿಡುಗಡೆ ಹೊಂದಿ ಮೂರು ವರ್ಷಗಳೊಳಗೆ ಪುನಃ ದಸ್ತಗಿರಿಯಾಗುತ್ತಾರೆ.”—ಟೈಮ್ ಮ್ಯಾಗಸಿನ್, ಮೇ 29, 1989.
ಇವುಗಳಲ್ಲಿ ಯಾವುದೂ ನಮಗೆ ಹೊಸದಲ್ಲ. ಇದು ಹಳೆಯ ಕಥೆ: ಸೆರೆಮನೆಗಳು ಮರುನಿಯೋಜಿಸುವುದಿಲ್ಲ. ಸತ್ಯ ಮರುನಿಯೋಜಿಸುತ್ತದೆ. ಇದಕ್ಕೆ ಒಂದು ಉದಾಹರಣೆ: ರಾನ್ ಪ್ರಾಯರ್.
ರಾನ್ ಪ್ರತಿದಿನ ತನ್ನ ಕುಟುಂಬದೊಂದಿಗೆ ಬೈಬಲಿನ ಒಂದು ವಚನವನ್ನು ಓದಿ ತನ್ನ ದಿನವನ್ನು ಆರಂಭಿಸುತ್ತಾನೆ. ಅವನ ವಿವಾಹಜೀವಿತದಲ್ಲಿ ಶಾಂತಿ ಮತ್ತು ಪ್ರೀತಿಯಿದೆ. ಮನೆ ಸುವ್ಯವಸ್ಥಿತವಾಗಿದ್ದು ಶುಚಿಯಾಗಿದೆ. ಅವರ ಇಬ್ಬರು ಹುಡುಗರು ಉತ್ತಮ ವಿದ್ಯಾರ್ಥಿಗಳಾಗಿದ್ದರು—ಅಮಲೌಷಧಗಳಿಲ್ಲ, ಮದ್ಯವಿಲ್ಲ, ಸಮಸ್ಯೆಯಿಲ್ಲ. ಇಷ್ಟರೊಳಗೆ ಅವರು ತಾವೇ ಹೋಗಿ ಕ್ರೈಸ್ತ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ರಾನ್ ಮತ್ತು ಅವನ ಹೆಂಡತಿ ಆರ್ಲಿನ್ ಅವರ ಸಮಾಜದಲ್ಲಿ ಕ್ರೈಸ್ತರಾಗಿ ಸ್ವಯಂಸೇವೆ ಮಾಡುತ್ತಾರೆ. ಇತರರ ಸೇವೆ ಮಾಡುವ ಉಪಯುಕ್ತ ಜೀವನ.
ಆದರೆ, 1970ರಲ್ಲಿ ರಾನ್ ಪ್ರಾಯರ್ ಕೊಲೆಯ ಕಾರಣ ವಿಚಾರಣೆಯ ದಿನ ಕಾಯುತ್ತಾ ಜೆಯ್ಲಿನಲ್ಲಿದ್ದ. ಅವನು ದೋಷಿಯಾಗಿ ಕಂಡುಬಂದು, ಶಿಕ್ಷೆಗೊಳಗಾಗಿ, ದೊಡ್ಡ ಅಪರಾಧಗಳ ಜೆಯ್ಲಿನಲ್ಲಿ ಸೆರೆಯಲ್ಲಿದ್ದ. ಅನೇಕ ಸಲ ಸೆರೆಮನೆಗೆ ಹೋಗುತ್ತಿದ್ದ ಇವನ ದೀರ್ಘಕಾಲದ ಪಾತಕಗಳ ಜೀವನಕ್ರಮದ ಪರಮಾವಧಿ ಇದಾಗಿತ್ತು. ಆದರೆ ರಾನ್ ತಾನೆ ತನ್ನ ಕಥೆ ಹೇಳಲಿ.
“ನನ್ನ ಜ್ಞಾಪಕದಲ್ಲಿರುವ ಪ್ರಥಮ ‘ಸೆರೆಮನೆ’ ಬಟ್ಟೆ ಒಣಗಿಸುವ ಹಗ್ಗಕ್ಕೆ ತೊಗಲವಾರಿನಿಂದ ನನ್ನನ್ನು ಕಟ್ಟಿ ಹಾಕಿದ್ದೇ. ನಾನು ಮೂರು ಯಾ ನಾಲ್ಕು ವಯಸ್ಸಿನವನಾಗಿದ್ದಾಗ ನನ್ನೊಳಗೆ ಅಲೆದಾಡುವ ಗೀಳಿನ ಕಾರ್ಯಕ್ರಮ ಇಟ್ಟಿದ್ದಂತೆ ತೋರಿಬಂತು. ನಾನು ಅಲೆದಾಡುತ್ತಾ, ದಾರಿ ತಪ್ಪುತ್ತಾ, ಪೊಲೀಸರಿಂದ ಹಿಡಿಯಲ್ಪಡುತ್ತಾ, ಮನೆಗೆ ಹಿಂದಿರುಗಿಸಲ್ಪಡುತ್ತಿದ್ದೆ. ಕೊನೆಗೆ, ನಾನು ಇದನ್ನು ನಿಲ್ಲಿಸದಿದ್ದರೆ, ಫೋನ್ ಮಾಡಿ ಅನಾಥ ಶಾಲೆಯವರನ್ನು ಕರೆಯುತ್ತೇನೆಂದೂ ಅವರು ನನ್ನನ್ನು ಬಂದಿಯಾಗಿಡುವರೆಂದೂ ತಾಯಿ ಹೇಳಿದರು. ನಾನು ಅಂಗಣದಲ್ಲಿ ಕುಳಿತು, ಅವರ ಬರವನ್ನು ಕಾಯುತ್ತಾ ಅಳತೊಡಗಿದೆ. ಅವರು ಬರಲಿಲ್ಲ. ನನ್ನ ತಾಯಿಯಾದರೋ ನನ್ನನ್ನು ಬಟ್ಟೆ ಒಣಗಿಸುವ ಹಗ್ಗಕ್ಕೆ ಕಟ್ಟಿ ಹಾಕಿದರು.
“ನಾನು ದೊಡ್ಡವನಾದ ಹಾಗೆ, ಯಾವಾಗಲೂ ತಂಟೆಯಲ್ಲಿ ಸಿಕ್ಕಿಬೀಳುತ್ತಿದ್ದೆ, ಮತ್ತು ಬಲಾತ್ಕಾರ ಪ್ರತಿ ಸಮಸ್ಯೆಗೂ ನನ್ನ ಉತ್ತರವಾಯಿತು. ನಾನು ಗಲಿಬಿಲಿಗೊಂಡು, ಹತಾಶನಾಗಿ, ಅನರ್ಹ ಭಾವದವನಾದೆ. ತಪ್ಪು ಯಾವುದು, ಸರಿ ಯಾವುದು ಎಂಬ ಪ್ರಜ್ಞೆ ನನ್ನಲ್ಲಿರಲಿಲ್ಲ. ನನ್ನ ಅನಿಸಿಕೆ—ಮನಸ್ಸಾಕ್ಷಿ ಅಲ್ಲ—ನನ್ನ ಮಾರ್ಗದರ್ಶಿಯಾಗುವಂತೆ ನಾನು ಬಿಟ್ಟೆ. ಶಾಲೆಯಲ್ಲಿ, ನಾನು ಒಂದು ದರ್ಜೆಯಿಂದ ಇನ್ನೊಂದಕ್ಕೆ ಹೋದೆ, ಏಕೆಂದರೆ ನನ್ನನ್ನು ಅವರ ಕ್ಲಾಸಿನಿಂದ ತೊಲಗಿಸುವುದು ಉಪಾಧ್ಯಾಯರಿಗೆ ಸಂತೋಷವಾಗುತ್ತಿತ್ತು. ನಾನು ಏಳನೆಯ ಕ್ಲಾಸಿನಲ್ಲಿ ಶಾಲೆ ಬಿಟ್ಟು, ಮನೆಯಿಂದ ಓಡಿಹೋದೆ. ನನಗೆ ಕೆಟ್ಟ ಸಹವಾಸ ದೊರೆಯಲಾಗಿ, ಶಾಸ್ತ್ರೀಯ ಎಚ್ಚರಿಕೆಯಂತೆ, ಇದು ಇನ್ನೂ ಹೆಚ್ಚಿನ ಉಪದ್ರವಕ್ಕೆ ನನ್ನನ್ನು ನಡಿಸಿತು.—1 ಕೊರಿಂಥ 15:33.
“ಬೇಗನೆ, ಬಟ್ಟೆ ಒಣಗಿಸುವ ದಾರದ ಸರಂಜಾಮಿನ ಬದಲಿಗೆ ಸುಧಾರಣೆಯ ಶಾಲೆಗಳಿಗೆ ನನ್ನನ್ನು ಹಾಕಲಾಯಿತು. ಅವು ನನ್ನನ್ನು ಸುಧಾರಿಸಲಿಲ್ಲ. ನಾನು ಅಲ್ಲಿಂದ ಪಲಾಯನ ಮಾಡಿ, ಪುನಃ ಹಿಡಿಯಲ್ಪಡುತ್ತಿದ್ದೆ. ವರ್ಜೀನಿಯ ಒಂದು ಶಾಲೆಯಿಂದ ಪಲಾಯನ ಮಾಡಿ, ಒಂದು ಲಾರಿಯನ್ನು ಕದಿಯಲಾಗಿ ನನ್ನನ್ನು ದಸ್ತಗಿರಿ ಮಾಡಲಾಯಿತು. ಜೆಂಕಿನ್ಸ್ ಎಂಬ ಹೆಸರಿನ ನ್ಯಾಯಾಧೀಶರ ಮುಂದೆ ಲಾರಿ ಕದ್ದ ಆರೋಪದ ಮೇರೆಗೆ ನನ್ನನ್ನು ಹಾಜರುಪಡಿಸಲಾಗಿ, ನಾನು ಕದ್ದಿದ್ದ ಲಾರಿ ಈ ನ್ಯಾಯಾಧೀಶರದ್ದೆ ಎಂದು ನನಗೆ ತಿಳಿದುಬಂತು! ನಾನು ಕೇವಲ 16 ವರ್ಷ ವಯಸ್ಸಿನವನಾಗಿದ್ದರೂ, ನನ್ನನ್ನು ತಿದ್ದುವುದಕ್ಕಾಗದಷ್ಟು ಕೆಟ್ಟವನೆಂದೂ ತೀರ್ಮಾನಿಸಲಾಗಿ, ವಯಸ್ಕನಂತೆ ನ್ಯಾಯ ವಿಚಾರಣೆಗೊಳಗಾದೆ. ಎರಡು ವರ್ಷಗಳ ಸೆರೆಮನೆಯ ಶಿಕ್ಷೆ ನನಗೆ ಸಿಕ್ಕಿತು.
“ಸೆರೆಮನೆಯಿಂದ ಹೊರಗೆ ಬಂದನಂತರ, ನನ್ನ 20ಗಳಲ್ಲಿ ನಾನೊಂದು ಮೋಟರ್ಸೈಕಲ್ ಪಡಕೊಂಡೆ. ಅದು ನನಗೆ ಕೊಟ್ಟ ಶಕಿಯ್ತಿಂದ ನಾನು ಮುಗ್ಧನಾದೆ. ಆದರೆ ಅದರಲ್ಲಿ ತೃಪ್ತಿಹೊಂದದೆ, ಪೇಗನ್ಸ್ ಎಂಬ ಮೋಟರ್ಸೈಕಲ್ ತಂಡವನ್ನು ಸೇರಿದೆ. ಇವರು ಯಾವಾಗಲೂ ತಂಟೆಯನ್ನು ಹುಡುಕುತ್ತಿದ್ದರು, ಸದಾ ಬೀದಿ ಕಾದಾಟಕ್ಕಾಗಿ ಅಪೇಕ್ಷೆಪಡುತ್ತಿದ್ದರು. ನಾನು ಅದಕ್ಕೆ ಪರಿಪೂರ್ಣವಾಗಿ ಅಳವಡಿಸಿಕೊಂಡೆ.
“ಆ ಬಳಿಕ ನಾನು ಲಾರಿ ಡ್ರೈವರನಾಗಿ ಫ್ಲಾರಿಡದಿಂದ ಉತ್ಪನ್ನಗಳನ್ನು ಸಾಗಿಸಿದೆ. ನಾನು ಆಗ ಪೇಗನ್ ತಂಡದಲ್ಲಿ ಕ್ರಿಯಾಶೀಲನಾಗಿ ಇದ್ದಿರದಿದ್ದರೂ, ಈ ಸಮಯದಲ್ಲಿ, 1969ರಲ್ಲಿ, ನಾನು ವರ್ಜೀನಿಯಲ್ಲಿ ಪ್ರಯಾಣಿಸುತ್ತಿದ್ದಾಗ ನನ್ನ ಕೆಲವು ಹಳೆಯ ಪೇಗನ್ ತಂಡದ ಮಿತ್ರರನ್ನು ಭೇಟಿಯಾದೆ. ದ್ರಾಕ್ಷಾಮದ್ಯ ಕುಡಿಯುವ, ಮಾದಕ ಪದಾರ್ಥದಿಂದ ಅಮಲಾಗುವ ನಮ್ಮ ಗೋಷ್ಠಿ ಆರಂಭವಾಯಿತು. ಒಂದು ಜಗಳ ಆರಂಭವಾಯಿತು. ಅದು ಮದ್ಯ ಮತ್ತು ಮಾದಕ ಪದಾರ್ಥಗಳಿಂದ ಉದ್ರೇಕಿಸಲ್ಪಟ್ಟು ಹೆಚ್ಚಾಗಲಾಗಿ ನಾನು ಒಬ್ಬನನ್ನು ಗುಂಡಿಕ್ಕಿ ಕೊಂದೆ. ದುಸ್ಸಹವಾಸದಿಂದ ಇನ್ನೂ ಹೆಚ್ಚು ಫಲ! ಸಮಯಾನಂತರ ಇಬ್ಬರು ಪತ್ತೇದಾರರು ನನ್ನನ್ನು ಪ್ರಶ್ನಿಸಲಾಗಿ, ನಾನು ಕೊಲೆ ಮಾಡಿದವನೆಂದು ಒಪ್ಪಿಕೊಂಡೆ. ಇದು ನಡೆದುದು 1970ರಲ್ಲಿ.
“ನಾನು ನ್ಯಾಯ ವಿಚಾರಣೆಗಾಗಿ ಜೆಯ್ಲಿನಲ್ಲಿ ಕಾಯುತ್ತಿದ್ದೆ. ಇನ್ನೂ ಪ್ರತಿಭಟನೆ ತೋರಿಸುವ ತಂಟೆಕೋರನಾಗಿದ್ದೆ. ಉದಾಹರಣೆಗೆ, ಒಂದು ದಿನ ಬೆಳಿಗ್ಗೆ, ಜವಾಬ್ದಾರಿಕೆಯಿದ್ದ ಒಬ್ಬ ಟ್ರಸ್ಟಿ ಕೈದಿ ಕಾಫಿ ತಕ್ಕೊಂಡು ಬಂದ. ಸ್ವಲ್ಪ ಸಮಯಾನಂತರ ಕುಡಿಯಲಿಕ್ಕಾಗಿ ಅವರು ಸಾಮಾನ್ಯವಾಗಿ ಒಂದು ಲೋಟೆ ಕಾಫಿ ಹೆಚ್ಚು ಕೊಡುತ್ತಿದ್ದರು. ಆ ದಿನ ಬೆಳಿಗ್ಗೆ, ನಾನು ನನ್ನ ಇನ್ನೊಂದು ಲೋಟೆಯನ್ನು ಇನ್ನೊಂದು ಕಾಫಿಗಾಗಿ ಪಾತ್ರೆಯ ಕೆಳಗೆ ಹಿಡಿಯಲಾಗಿ ಅವನು, ‘ಹೆಚ್ಚು ಕಾಫಿ ಇಲ್ಲ’ ಎಂದ. ಹಾಗಾದರೆ ಅವನು ಅದನ್ನು ಇನ್ನೊಬ್ಬನಿಗೆ ಕೊಡಲು ನಿರ್ಣಯಿಸಿದ್ದಾನೆಂದು ನಾನು ತೀರ್ಮಾನಿಸಿದೆ. ಆಗ ನಾನು ಅವನಿಗೆ, ‘ಏನಯ್ಯಾ, ಈ ಬೆಳಿಗ್ಗೆ ಕಾಫಿ ಕಡಮೆಯೆ?’ ಎಂದು ಕೇಳಿದೆ. ಅವನು ಹೌದನ್ನಲಾಗಿ, ‘ಹಾಗಾದರೆ, ನನ್ನದನ್ನೂ ತಕ್ಕೊ’ ಎಂದು ಹೇಳಿ ಅದನ್ನು ಅವನ ಮುಖಕ್ಕೆ ಎರಚಿದೆ. ನನಗೆ ಒಂಟಿಸೆರೆ ಸಿಕ್ಕಿತು.
“ಹೀಗೆ, ನಾನು ಆ ಕಿಟಿಕಿಯಿಲ್ಲದ ಎಂಟು ಅಡಿ ಉದ್ದ ಹತ್ತು ಅಡಿ ಅಗಲದ ಬಿಲದಲ್ಲಿ ತಿರುಗಾಡಿದೆ. ನನ್ನ ಜೀವನದಲ್ಲಿ ಪ್ರಥಮ ಬಾರಿ ಯೋಚಿಸತೊಡಗಿದೆ. ಪ್ರಶ್ನೆಗಳು ಗುಂಪಾಗಿ ಬರತೊಡಗಿದವು. ‘ನನ್ನ ಜೀವನ ಸದಾ ಇಷ್ಟು ಅಸ್ತವ್ಯಸ್ತವೇಕೆ? ನಾನು ಯಾವಾಗಲೂ ಜೆಯ್ಲಿಗೆ ಬಂದು ಹೋಗುತ್ತಿರುವುದೇಕೆ? ನಾನು ಏಕೆ ಈ ಬಿಲದಲ್ಲಿದ್ದೇನೆ? ನಾನೇಕೆ ಜೀವಿಸುತ್ತಿದ್ದೇನೆ? ಏಕೆ? ಏಕೆ? ಏಕೆ? ಈ ಏಕೆಂಬ ಪ್ರಶ್ನೆಗಳು ಮರುಕಳಿಸಿ ಬರುತ್ತಿದ್ದರೂ ಅವುಗಳಿಗೆ ಉತ್ತರವಿರಲಿಲ್ಲ. ಆಗ ನಾನು ನನಗೆ ಹೇಳಿಕೊಂಡೆ: ‘ನಾನೀಗ ಬರಸಾಧ್ಯವಿರುವಷ್ಟು ದೂರ ಬಂದಿದ್ದೇನೆ. ಇನ್ನು ಮುಂದೆ ಹೋಗಲು ಸ್ಥಳವಿಲ್ಲ. ಒಂದೇ ಕಾರಣದಿಂದ ಇದ್ದೀತು. ಒಂದು ವೇಳೆ—ಒಂದುವೇಳೆ ಒಬ್ಬ ದೇವರು, ನನ್ನನ್ನು ನೋಡುವ, ನಾನು ಜೀವಿಸುತ್ತಿದ್ದೇನೆಂದು, ನನ್ನನ್ನು ಅರ್ಥೈಸಿಕೊಂಡಿರುವ ಒಬ್ಬ ದೇವರು ಇರುವುದಾದರೆ—ಆದರೆ ಅವನಿಲ್ಲವೆಂಬುದು ನಿಶ್ಚಯ! ದೇವರೇ, ನೀನು ಇರುವುದಾದರೆ, ನಿನಗೆ ನನ್ನ ಅರಿವಿರುವುದಾದರೆ, ಮತ್ತು ನನಗೇನಾದರೂ ಮಾಡಲಿಕ್ಕಿರುವುದಾದರೆ, ಕೇವಲ ಹೇಳಿ ಬಿಡು, ಏನೂ ಹೇಳಿ ಬಿಡು!’
“ಅಲ್ಲಿ ನನ್ನ ಜೊತೆಗೆ ಒಂದು ಬೈಬಲಿತ್ತು. ‘ಇದೊಂದು ಆರಂಭ’ ಎಂದು ನಾನು ನೆನಸಿ ಅದನ್ನು ಓದತೊಡಗಿದೆ. ಏನು ಓದಿದೆನೋ ನೆನಪಿಲ್ಲ. ಕೇವಲ ಓದಿದ್ದೇ ನೆನಪು, ಏನೂ ಅರ್ಥವಾಗಲಿಲ್ಲ. ಒಂದು ವಾರದೊಳಗೆ ನಾನು ಮತ್ತೆ ಸಾಮಾನ್ಯ ಜೆಯ್ಲಿಗೆ ಬಂದೆ. ಒಂದು ಕೋಣೆ ತೆರೆದಿತ್ತು, ಅದರಲ್ಲಿದ್ದ ಎರಡು ಮಂಚಗಳೂ ಖಾಲಿ ಇದ್ದವು. ನನ್ನನ್ನು ಅಲ್ಲಿ ಹಾಕಿದರು, ಮತ್ತು ಎರಡು ದಿನ ಬಿಟ್ಟು ಇನ್ನೊಬ್ಬ ಕೈದಿಯನ್ನು ಅಲ್ಲಿಟ್ಟರು. ಅವನು ಬಂದಾಗ ನಾನು ಬೈಬಲನ್ನು ಓದಲು ಕಷ್ಟಪಡುತ್ತಿದ್ದೆ. ಅವನು ನಾನು ಓದುವುದನ್ನು ನೋಡಿ, “ಬೈಬಲನ್ನು ಅರ್ಥ ಮಾಡಿಕೊಳ್ಳಲು ನಿನಗೆ ಮನಸ್ಸಿದೆಯೆ?’ ಎಂದು ಕೇಳಲಾಗಿ, ‘ಹೌದು!’ ಎಂದೆ. ‘ನಿನ್ನ ಸಹಾಯಕ್ಕೆ ಪುಸ್ತಕವೊಂದನ್ನು ತರಿಸುತ್ತೇನೆ,’ ಎಂದನವನು. ಅವನು ಯೆಹೋವನ ಸಾಕ್ಷಿಗಳಲ್ಲಿ ಒಬ್ಬನನ್ನು ಸಂಪರ್ಕಿಸಿ—ಅವರು ಅವನೊಂದಿಗೆ ಒಮ್ಮೆ ಅಧ್ಯಯನ ನಡೆಸಿದ್ದರು—ನನಗೆ ನಿತ್ಯಜೀವಕ್ಕೆ ನಡಿಸುವ ಸತ್ಯವು ಎಂಬ ಪುಸ್ತಕವನ್ನು ಕೊಟ್ಟ. ಅದು 1970ರ ಜೂಲೈಯಲ್ಲಿ.
“ನಾನು ಓದತೊಡಗಿದೆ, ಹೊದಿಕೆಯಿಂದ ಹೊದಿಕೆಯ ತನಕ ಓದಿದೆ. ನನಗೆ ಎಲ್ಲ ಅರ್ಥವಾಗಲಿಲ್ಲ, ಆದರೆ ಅದು ನ್ಯಾಯೋಚಿತವಾಗಿತ್ತು. ಯೆಹೋವನ ಸಾಕ್ಷಿಗಳು ಬಂದು ನನ್ನೊಂದಿಗೆ ಅಭ್ಯಾಸ ಮಾಡತೊಡಗಿದಾಗ, ನಾನು ಒಂಟಿಸೆರೆಯಲ್ಲಿ ಕೇಳಿದ ಎಲ್ಲ ಪ್ರಶ್ನೆಗಳಿಗೆ ಉತ್ತರ ದೊರೆಯ ತೊಡಗಿತು. ನನ್ನ ಜೀವನದಲ್ಲಿ ಪ್ರಥಮ ಬಾರಿ, ಸರಿ ಯಾವುದು, ತಪ್ಪು ಯಾವುದು ಎಂಬುದರ ತುಸು ಅಂತರ್ದೃಷ್ಟಿ ನನಗೆ ದೊರೆಯಿತು. ನಾನು ಈ ಆತ್ಮಿಕಾಹಾರವನ್ನು ಎಷ್ಟು ಹೆಚ್ಚು ತಿಂದೆನೊ ಅಷ್ಟು ಹೆಚ್ಚು “ಜ್ಞಾನೇಂದ್ರಿಯಗಳನ್ನು ಸಾಧನೆಯಿಂದ ಶಿಕ್ಷಿಸಿಕೊಂಡು ಇದು ಒಳ್ಳೇದು ಅದು ಕೆಟ್ಟದ್ದು ಎಂಬ ಭೇದವನ್ನು” ತಿಳಿದವರಂತೆ ನಾನಾದೆ. (ಇಬ್ರಿಯ 5:14) ನನ್ನ ಮನಸ್ಸಾಕ್ಷಿ ಕಲಕಲ್ಪಡುತ್ತಿತ್ತು, ಸಜೀವಗೊಳ್ಳುತ್ತಿತ್ತು!
“ಬೈಬಲ್ ಸತ್ಯದ ಈ ತ್ವರಿತ ಸಂಪಾದನೆ ನನ್ನ ಮನೋಸ್ಥಿತಿಯಲ್ಲಿ ನಿಜ ನೆಲದುಬ್ಬರವನ್ನೇ ಉಂಟುಮಾಡಿತು. ನಾನು 24 ತಾಸುಗಳಲ್ಲಿ ಪುಸ್ತಕವನ್ನು ಓದಿ ಮುಗಿಸಿದ್ದೆ. ರಾತ್ರಿ ಹಗಲಾಗುವುದರೊಳಗೆ ನಾನು ಒಂದು ವಿಪರೀತ ಸ್ಥಿತಿಯಿಂದ ಇನ್ನೊಂದಕ್ಕೆ ಹೋದೆ. ನಾನು ಕಲಿಯುತ್ತಿದ್ದ ಸತ್ಯಗಳನ್ನು ಇತರ ಸೆರೆವಾಸಿಗಳೂ ನೋಡಬೇಕೆಂಬ ದೃಢತೆ ನನಗಿತ್ತು. ನಾನೆಷ್ಟು ಉದ್ರೇಕಗೊಂಡಿದ್ದೆನೊ ಅಷ್ಟೇ ಉದ್ರೇಕ ಇತರರಲ್ಲೂ ಇರುವುದೆಂದು ನಾನು ಭಾವಿಸಿದ್ದೆ. ಆದರೆ ಅವರು ಹಾಗಿರಲಿಲ್ಲ. ನಾನು ಈ ಮೊದಲು ಅಲ್ಲಿದ್ದ ಇತರರಿಗೆ ಸಮಸ್ಯೆಯಾಗಿದ್ದೆ. ಈಗ ಅದಕ್ಕಿಂತಲೂ ಹೆಚ್ಚಾದ—ಯಾರೂ ಸಾಧ್ಯವೇ ಇಲ್ಲವೆಂದು ಎಣಿಸಿದ್ದ ರೀತಿಯಲ್ಲಿ—ಕೆರಳಿಕೆಯ ಮೂಲ ನಾನಾಗಿದ್ದೆ! ಆದರೆ ಸಾಕ್ಷಿಗಳು ಆ ಜಿಲ್ಲಾ ಜೆಯ್ಲಿಗೆ ನನ್ನ ಅಧ್ಯಯನಕ್ಕಾಗಿ ಬಂದಂತೆ, ನಾನು ಸಾರುವಿಕೆಯಲ್ಲಿ ಸಮಯೋಚಿತ ನಯವುಳ್ಳವನಾದೆ.
“ನಾನು ಅನೇಕ ಪರಿವರ್ತನೆಗಳನ್ನು ಮಾಡಿದೆ, ಮತ್ತು ಎರಡು ತಿಂಗಳುಗಳಲ್ಲಿ ನನಗೆ ಟ್ರಸ್ಟಿ ಜವಾಬ್ದಾರಿ ಕೊಡಲ್ಪಟ್ಟಿತು. ಅವರು ನನಗೆ ಹೊರಗೆ ಹೋಗುವ ಅನುಮತಿಯನ್ನೂ ಕೊಟ್ಟರು, ಮತ್ತು ಅದು, ನನ್ನ ಹಳೆಯ ದಾಖಲೆ ಮತ್ತು ನಾನೇಕೆ ಅಲ್ಲಿದ್ದೆನೆಂಬ ದೃಷ್ಟಿಯಲ್ಲಿ ಹಿಂದೆಂದೂ ಕೇಳಿಲ್ಲದ ಸಂಗತಿಯಾಗಿತ್ತು. ನಾನು ಬೈಬಲಿನಿಂದ ಕಲಿಯುತ್ತಿದ್ದ ಸೂತ್ರಗಳು ಪ್ರಭಾವ ಬೀರುತ್ತಿದ್ದವು. ದೇವರ ವಾಕ್ಯದ ಸತ್ಯಜಲ, ಅಪೊಸ್ತಲರ ದಿನಗಳಂತೆ ಈಗಲೂ ತನ್ನ ಶುದ್ಧೀಕರಣದ ಕೆಲಸವನ್ನು ಮಾಡುತ್ತಿತ್ತು. ಅದರ ಮರುನಿಯೋಜನೆಯ ಶಕ್ತಿಯು 1 ಕೊರಿಂಥ 6:9-11ರಲ್ಲಿ ಹೀಗೆ ಸೂಚಿಸಲ್ಪಟ್ಟಿದೆ:
“ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ? ಮೋಸಹೋಗಬೇಡಿರಿ, ಜಾರರು ವಿಗ್ರಹಾರಾಧಕರು ವ್ಯಭಿಚಾರಿಗಳು ವಿಟರು ಪುರುಷಗಾಮಿಗಳು ಕಳ್ಳರು ಲೋಭಿಗಳು ಕುಡಿಕರು ಬೈಯುವವರು ಸುಲುಕೊಳ್ಳುವವರು ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. ನಿಮ್ಮಲ್ಲಿ ಕೆಲವರು ಅಂಥವರಾಗಿದಿರ್ದಿ; ಆದರೂ . . . ತೊಳೆದುಕೊಂಡಿರಿ.’
“ಕೊನೆಗೆ ನನ್ನ ವಿಚಾರಣೆ ನಡೆಯಿತು. ಕೊಲೆಗಾಗಿ 20 ವರ್ಷ ಸಜೆ ಕೊಡಲಾಯಿತು. 1971ರಲ್ಲಿ ನನ್ನನ್ನು ಅಧಿಕತಮ ಭದ್ರಕಾವಲಿರುವ ಸೆರೆಮನೆಗೆ ಕಳುಹಿಸಲಾಯಿತು. ಸಾಕ್ಷಿಗಳೊಂದಿಗೆ ನನ್ನ ಬೈಬಲ್ ಅಧ್ಯಯನ ಪುನಃ ಆರಂಭವಾದದ್ದು ಅಲಿಯ್ಲೆ. ನನ್ನ ವರ್ತನೆ ತೀರಾ ಪರಿವರ್ತನೆ ಹೊಂದಿತ್ತು. ಈ ಹೊಸ ಕಾರಾಗೃಹದಲ್ಲಿ, ಬೇಗನೆ ನನ್ನನ್ನು ಟ್ರಸ್ಟಿ ಕೈದಿಯಾಗಿ ಮಾಡಿ ನನಗೆ ರಜೆ ದೊರೆಯಲಾರಂಭವಾಯಿತು. ಅಂಥ ಒಂದು ರಜೆಯಲ್ಲಿ, ನಾನು ಯಾರ ಮನೆಯಲ್ಲಿದ್ದೆನೊ ಆ ಸಾಕ್ಷಿಯೊಂದಿಗೆ, ‘ದೀಕ್ಷಾಸ್ನಾನಕ್ಕೆ ಯಾವುದು ನನ್ನನ್ನು ತಡೆಯುತ್ತದೆ?’ ಎಂದು ಕೇಳಿದೆ. ಅವನು ಸ್ಥಳೀಕ ಸಭೆಯಲ್ಲಿ ವಿಚಾರಿಸಿದಾಗ, ‘ಯಾವ ತಡೆಯೂ ಇಲ್ಲ’ ಎಂಬ ಉತ್ತರ ಬಂತು. ಹೀಗೆ, 1973ರಲ್ಲಿ, ಸಾಯಂಕಾಲದ ಆರಂಭದಲ್ಲಿ ನನಗೆ ಒಂದು ಹೊಲಮನೆಯ ದನ ನೀರು ಕುಡಿಯುವ ಕೊಳವೊಂದರಲ್ಲಿ ದೀಕ್ಷಾಸ್ನಾನವಾಯಿತು. ನೀರನ್ನು ಪ್ರವೇಶಿಸಿದಾಗ, ಯೇಸುವನ್ನು ಸ್ನಾನಿಕ ಯೋಹಾನನು ಯೊರ್ದನ್ ಹೊಳೆಯಲ್ಲಿ ಮುಳುಗಿಸಿದಾಗ ಯೇಸು ಮಾಡಿದಂತೆ ನಾನೂ ಪ್ರಾರ್ಥಿಸಿದೆ.
“ಆ ಬಳಿಕ ನನ್ನ ಆತ್ಮಿಕ ಪ್ರಗತಿ ತೀವ್ರವಾಯಿತು. ಸ್ಥಳೀಕ ಸಭೆಯಲ್ಲಿ ನಡೆಯುತ್ತಿದ್ದ ದೇವಪ್ರಭುತ್ವ ಶುಶ್ರೂಷಾ ಶಾಲೆಗೆ ಹಾಜರಾಗದೆ ಇರುವವನಾಗಿ ಸೇರಿದೆ. ನನಗೆ ಶಾಲೆಯ ಭಾಷಣಗಳು ದೊರೆತಾಗ ಅದನ್ನು ಟೇಪ್ನಲ್ಲಿ ರೆಕಾರ್ಡ್ ಮಾಡಿ ಬಳಿಕ ಅದನ್ನು ಸಭೆಗೆ ಕೇಳಿಸಲಾಗುತ್ತಿತ್ತು. ಶಾಲಾ ಸಲಹೆಗಾರರು ನಾನು ಉತ್ತಮಗೊಳ್ಳುವಂತೆ ಸಲಹೆಗಳನ್ನು ಹಿಂದೆ ಕಳುಹಿಸುತ್ತಿದ್ದರು. ನಮಗೆ ಸೆರೆಮನೆಯಲ್ಲಿ ಸಾಪ್ತಾಹಿಕ ಕೂಟಗಳಿದ್ದವು, ಮತ್ತು ಇಲ್ಲಿ ಇತರ ಸಹ ನಿವಾಸಿಗಳಿಗೆ ಸ್ವಾಗತವಿತ್ತು.
“ಈ ಎಲ್ಲ ಸಮಯಗಳಲ್ಲಿ, ನನ್ನ ಬೈಬಲಿನ ಜ್ಞಾನಕ್ಕೆ ನಾನು ಅನೇಕ ವಚನಗಳನ್ನು ಕೂಡಿಸುತ್ತಿದ್ದೆ. ಇವು ನನ್ನನ್ನು, ಅಪೊಸ್ತಲ ಪೌಲನು ಕೊಲೊಸ್ಸೆ 3:9, 10ರಲ್ಲಿ ಹೇಳಿರುವ ರೂಪಾಂತರವನ್ನು ನಾನು ಗಣ್ಯ ಮಾಡುವ ತನಕ, ನನ್ನ ಅಧಿಕಾಂಶ ಜೀವಿತದಲ್ಲಿ ನಾನೆಲ್ಲಿ ಜೀವಿಸುತ್ತಿದ್ದೆನೊ ಆ ನೈತಿಕ ಅಸ್ತವ್ಯಸ್ತತೆಯಿಂದ ಹೊರಗೆ ನಡೆಸುವ ಮೆಟ್ಟುಗಲ್ಲುಗಳಂತಿದ್ದವು. ಅಲ್ಲಿ ತಿಳಿಸಿರುವುದು: ‘ನೀವು ಪೂರ್ವಸ್ವಭಾವವನ್ನು ಅದರ ಕೃತ್ಯಗಳ ಕೂಡ ತೆಗೆದಿಟ್ಟು ನೂತನ ಸ್ವಭಾವವನ್ನು ಧರಿಸಿಕೊಂಡಿದೀರ್ದಲ್ಲವೇ. ಈ ಸ್ವಭಾವವು ಅದನ್ನು ಸೃಷ್ಟಿಸಿದಾತನ ಹೋಲಿಕೆಯ ಮೇರೆಗೆ ದಿನೇ ದಿನೇ ನೂತನವಾಗುತ್ತಾ ಪೂರ್ಣಜ್ಞಾನವನ್ನು ಉಂಟುಮಾಡುತ್ತದೆ.’
“ಪರೋಲ್ ಬೋರ್ಡಿನ ಮುಂದೆ 1978ರಲ್ಲಿ ಮೂರನೆಯ ವಿಚಾರಣೆ ನಡೆಯಲಿಕ್ಕಿತ್ತು. ಈ ಹಿಂದೆ ಎರಡು ಬಾರಿ ನನ್ನ ಅಪರಾಧಗಳ ಘೋರತೆಯ ಕಾರಣ ಅದನ್ನು ನಿರಾಕರಿಸಲಾಗಿತ್ತು. ಆದರೆ ಈ ಬಾರಿ ಬೋರ್ಡಿಗೆ, ನಾನು ಮಾಡಿರುವ ಪರಿವರ್ತನೆಗಳ ಕುರಿತು ಸುಮಾರು 300 ಸಾಕ್ಷಿಗಳಿಂದ ಮತ್ತು ಇತರರಿಂದ ಪತ್ರಗಳು ಬಂದವು.
“ಬಿಡುಗಡೆಯ ಸಂಭವವು ಹೆಚ್ಚು ಶುಭ್ರವಾಗಿ ಕಂಡುಬಂದುದರಿಂದ, ಮದುವೆಯ ಸಾಧ್ಯತೆಯನ್ನು ಯೋಚಿಸತೊಡಗಿದೆ. ಎರಡು ಮಕ್ಕಳ ತಾಯಿಯಾಗಿದ್ದ ಆರ್ಲಿನ್ ಎಂಬ ವಿಧವೆ ನಾನು ಜೆಯ್ಲಿನಲ್ಲಿರುವಾಗ ನನಗೆ ಪತ್ರ ಬರೆಯುತ್ತಿದ್ದಳು. ಅವಳು ತನ್ನ ಇಬ್ಬರು ಗಂಡು ಮಕ್ಕಳೊಂದಿಗೆ ನನ್ನನ್ನು ಭೇಟಿ ಮಾಡಿದಳು. ನನಗೆ ಅವಳಲ್ಲಿಯೂ ಅವಳಿಗೆ ನನ್ನಲಿಯ್ಲೂ ಪ್ರೇಮವುಂಟಾಯಿತು. ನನಗೆ ಫೆಬ್ರವರಿ 1, 1978ರಲ್ಲಿ ಬಿಡುಗಡೆಯಾಯಿತು. ಫೆಬ್ರವರಿ 25, 1978ರಲ್ಲಿ ನಮಗೆ ಮದುವೆಯಾಯಿತು. ಈಗ, 13 ವರ್ಷಗಳ ಬಳಿಕ, ನಾವಿನ್ನೂ ಸಂತುಷ್ಟ ವಿವಾಹಿತರಾಗಿದ್ದೇವೆ. ನಮ್ಮ ಒಬ್ಬ ಮಗನಿಗೆ ವಿವಾಹವಾಗಿ, ಅವನು ಸಕ್ರಿಯ ಯೆಹೋವನ ಸಾಕ್ಷಿಯಾಗಿದ್ದಾನೆ. ಇನ್ನೊಬ್ಬ ಮಗನು, ಯೆಹೋವನ ಸಾಕ್ಷಿಗಳ ಬ್ರೂಕ್ಲಿನ್, ನ್ಯೂ ಯಾರ್ಕಿನ ಲೋಕ ಕೇಂದ್ರ ಕಾರ್ಯಾಲಯದಲ್ಲಿ ಪೂರ್ಣ ಸಮಯದ ಕೆಲಸ ಮಾಡುತ್ತಿದ್ದಾನೆ.
“ನನ್ನ ಪ್ರಾರ್ಥನೆಗಳಿಗೆ ಉತ್ತರ ಸಿಕ್ಕಿದೆ. ನನಗೆ ಎಷ್ಟೊ ಸಹಾಯ ಮಾಡಿರುವ ಸಹೋದರ ಸಹೋದರಿಯರಿಗೆ ನಾನು ಆಭಾರಿ. ನಾನು ನನ್ನ ಸಕಲ ಸಂತೋಷಕ್ಕೆ ಸಂತೋಷದ ದೇವರಾದ ಯೆಹೋವನಿಗೆ ಋಣಿಯಾಗಿದ್ದೇನೆ.—1 ತಿಮೊಥಿ 1:11.
“ಆದರೆ, ನನ್ನ ಗತ ಪಾಪಗಳಿಗಾಗಿ ನನಗೆ ಮನದ ಕೊರೆತವಿದೆ. ನನ್ನ ಹಿಂದಿನ ನೀತಿಭ್ರಷ್ಟ ನಡತೆಯನ್ನು ನಾನು ಹೇಸುತ್ತೇನೆ. ಯೆಹೋವನು ನನ್ನನ್ನು ಮನ್ನಿಸುವಂತೆ ನಾನು ಅನೇಕಾವರ್ತಿ ಆತನಿಗೆ ಪ್ರಾರ್ಥಿಸಿದ್ದೇನೆ, ಮತ್ತು ಆತನು ನನ್ನನ್ನು ಕ್ಷಮಿಸಿದ್ದಾನೆಂದು ನನ್ನ ಅನಿಸಿಕೆ. ನಾನು ಹಿಂದೆ ಯಾರಿಗೆ ತಪ್ಪು ಮಾಡಿರುತ್ತೇನೊ ಅವರು ಸಹ ನನ್ನನ್ನು ಮನ್ನಿಸಲು ಶಕ್ತರಾಗಲಿ ಎಂದೇ ನನ್ನ ಹಾರೈಕೆ. ನಾನು ಕೊಂದಿದ್ದ ಮನುಷ್ಯನನ್ನು ದೇವರು ಪುನರ್ಜೀವಿಸಿ, ಅವನಿಗೂ ಪ್ರಮೋದವನವಾದ ಭೂಮಿಯಲ್ಲಿ ಅನಂತವಾಗಿ ಜೀವಿಸುವ ಅವಕಾಶವನ್ನು ಕೊಡಲಿ ಎಂಬುದು ನನ್ನ ವಿಶೇಷ ಕೋರಿಕೆ. ಅದು ನನ್ನ ಆನಂದವನ್ನು ಪೂರ್ಣಗೊಳಿಸುವುದು!”
ಸೆರೆಮನೆಯ ಕಂಬಿಗಳಿಗೆ ಮತ್ತು ಒಂಟಿಸೆರೆಗೆ ಅಸಾಧ್ಯವಾದುದನ್ನು ಬೈಬಲಿನ ಸತ್ಯ ಸಾಧ್ಯ ಮಾಡಿತು. ರಾನ್ ಪ್ರಾಯರ್ ತನ್ನ ಹಳೆಯ ಪಾತಕದ ವ್ಯಕ್ತಿತ್ವವನ್ನು ಕಳಚಿ ಹೊಸ ಕ್ರಿಸ್ತೀಯ ವ್ಯಕ್ತಿತ್ವವನ್ನು ಧರಿಸುವಂತೆ ಮಾಡಿತು. ಏಕೆ? ಏಕೆಂದರೆ “ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು.” ಅದು ಮರುನಿಯೋಜಿಸುವ ಶಕ್ತಿಯುಳ್ಳದ್ದೂ ಆಗಿದೆ.—ಇಬ್ರಿಯ 4:12. (g91 7/22)
[ಪುಟ 11 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನಾನು ಕದ್ದದ್ದು ನ್ಯಾಯಾಧೀಶ ಜೆಂಕಿನ್ಸರ ಲಾರಿಯಾಗಿತ್ತು!
[ಪುಟ 12 ರಲ್ಲಿರುವ ಸಂಕ್ಷಿಪ್ತ ವಿವರಣೆ]
ಆ ಒಂಟಿಸೆರೆಯಲ್ಲಿ ಒಂದು ಬೈಬಲಿತ್ತು. ನಾನು ಅದನ್ನು ಓದತೊಡಗಿದೆ
[ಪುಟ 12 ರಲ್ಲಿರುವ ಸಂಕ್ಷಿಪ್ತ ವಿವರಣೆ]
ನನಗೆ ಕೊಲೆಗಾಗಿ 20 ವರ್ಷಗಳ ಸಜೆ ಕೊಟ್ಟರು
[ಪುಟ 13 ರಲ್ಲಿರುವ ಚಿತ್ರ]
ರಾನ್ ಪ್ರಾಯರ್ ಮತ್ತು ಮಡದಿ ಆರ್ಲಿನ್, ಇಂದು