ಯುವ ಜನರು ಪ್ರಶ್ನಿಸುವುದು . . .
ಧೂಮಪಾನ ಮಾಡಲು ಬರುವ ಒತ್ತಡವನ್ನು ನಾನು ಹೇಗೆ ತಡೆಯಬಲ್ಲಿ?
“ಅದು ನನ್ನನ್ನು ಸಡಿಲಿಸುತ್ತದೆ, ಸಂತೋಷಚಿತ್ತ ಮತ್ತು ಶಾಂತಚಿತ್ತನಾಗುವಂತೆ ಮಾಡುತ್ತದೆ.”
“ಇದು ಕಾಲಕ್ಷೇಪದ ಒಂದು ರೀತಿ.”
“ಅದರಿಂದ ನನಗೆ ಸುರಕ್ಷಿತ ಅನಿಸಿಕೆಯಾಗುತ್ತದೆ.”
‘ನನ್ನ ಕೈಗಳಿಗೆ ಮಾಡಲು ಏನೊ ಕೆಲಸ.’
ಏಕೆ ಧೂಮಪಾನ ಮಾಡುತ್ತೀರಿ ಎಂದು ಕೇಳಿದಾಗ ಕೆಲವು ಹದಿಪ್ರಾಯದವರು ಕೊಟ್ಟ ಕಾರಣಗಳಿವು. (ಟೀನ್ಸ್ ಸ್ಪೀಕ್ ಔಟ್) ಹೌದು, ಶ್ವಾಸಕೋಶದ ಕ್ಯಾನ್ಸರ್, ಎಂಫಿಸೀಮ, ಮತ್ತು ಹೃದ್ರೋಗಗಳ ಎಚ್ಚರಿಕೆಯ ಎದುರಿನಲ್ಲೂ ಧೂಮಪಾನ ಅನೇಕ ಯುವಜನರಿಗೆ ಇನ್ನೂ ಅದಮ್ಯವಾಗಿ ರಂಜಕವಾಗಿದೆ. ಪ್ರಾಯಶಃ ನೀವೇ ಇದರ ರುಚಿ ನೋಡಲು ಸಹ ಪ್ರೇರಿಸಲ್ಪಟ್ಟಿದ್ದೀರಿ.
ವಾರ್ತಾ ಮಾಧ್ಯಮಗಳು ಸದಾ ಸೇದುತ್ತಿರುವ ಆಕರ್ಷಕರೂ ಸುವಸ್ತ್ರಧಾರಿಗಳೂ ಆದ ಸ್ತ್ರೀ ಪುರುಷರ ಚಿತ್ರಗಳ ದಾಳಿಯನ್ನು ಮಾಡುತ್ತದೆ. ಅವರಲ್ಲಿ ಒಬ್ಬನೂ ಕ್ಯಾನ್ಸರ್ ರೋಗಿಯಂತೆ ಕಾಣುವುದಿಲ್ಲ. ಅಥವಾ, ಅದನ್ನು ಸವಿಯಲು ಒತ್ತಡ ನಿಮ್ಮ ಸಮಾನಸ್ಥರಿಂದ ಬರಬಹುದು. ಶಾಲೆಯಲ್ಲಿ ನಿಮಗೆ, ‘ನೀನು ಹೇಡಿಯೇನು?’ ಮತ್ತು ‘ಪ್ರತಿ ನವಶೈಲಿಯ ಪ್ರಮುಖನೂ ಸೇದುತ್ತಾನೆ’ ಎಂಬ ಧಿಕ್ಕಾರದ ಪೇಚಾಟಕ್ಕೆ ನೀವು ಒಳಗಾಗಬಹುದು. ಮತ್ತು ಸೇದುತ್ತಿರುವ ಯುವಜನರ ಮಧ್ಯೆ ನೀವಿರುವಲ್ಲಿ, ನಿಮ್ಮ ಕೈಯಲ್ಲಿ ಸಿಗರೇಟಿಲ್ಲವಾದರೆ, ನೀವು ಅಲ್ಲಿಗೆ ಸಂಬಂಧ ಪಟ್ಟವರಲವ್ಲೆಂಬ ಅನಿಸಿಕೆ ನಿಮಗಾಗಬಹುದು.
ಮನೆಯಲ್ಲಿ ಸಹ ಸೇದಲು ಒತ್ತಡ ಬರಬಹುದು. ನಿಮ್ಮ ಹೆತ್ತವರಲ್ಲಿ ಒಬ್ಬರು ಸೇದದೆ ಇರುವಾಗ ಇನ್ನೊಬ್ಬರು ಸೇದುವಲ್ಲಿ ಇದು ವಿಪರೀತ ತೊಡಕಿನಲ್ಲಿ ಹಾಕಬಲ್ಲದು. ಮತ್ತು ಹೆತ್ತವರಲ್ಲಿ ಉಭಯತರೂ ಸೇದುವಲ್ಲಿ ಒತ್ತಡ ಇನ್ನೂ ಹೆಚ್ಚಾಗಬಹುದು. ‘ನನ್ನ ಹೆತ್ತವರು ದಿನಕ್ಕೆ ಎರಡು ಪ್ಯಾಕೆಟ್ ಸೇದುವುದರಿಂದ ಸಿಗರೇಟು ಯಾವಾಗಲೂ ಅಲ್ಲಿಲ್ಲಿ ಬಿದ್ದಿರುತ್ತದೆ,’ ಎನ್ನುತ್ತಾಳೆ 14 ವಯಸ್ಸಿನ ರಿಬೆಕ. ಮತ್ತು ಇಂಥ ಹೆತ್ತವರು ನೀನು ಸೇದಬಾರದು ಎಂದು ಹೇಳುವುದು ಕಪಟಾಚರಣೆಯ ಪರಮಾವಧಿಯೆಂದು ಕಾಣಬಹುದು! ಯುವತಿ ಆ್ಯಲಿಸನ್ ಗೊಣಗುವುದು: “ನಾವು ಹೆತ್ತವರಿಗೆ, ನಮಗೆ ಅವರ ಆರೋಗ್ಯದ ವಿಷಯ ಚಿಂತೆ ಇದೆ ಎಂದು ಹೇಳುವಾಗ ಅವರು ಕಿವಿಗೊಡುವುದಿಲ್ಲ. ಹೀಗಿರುವಾಗ ನಾವು ಅವರಿಗೆ ಕಿವಿಗೊಡಬೇಕೆಂದು ಅವರು ಹೇಗೆ ನಿರೀಕ್ಷಿಸಬಹುದು?”-ದ ಪ್ರೈವೆಟ್ ಲೈಫ್ ಆಫ್ ದಿ ಅಮೆರಿಕನ್ ಟೀನೇಜರ್.
ಅವರ ಕಾರಣಗಳು ಯಾವುದೇ ಇರಲಿ, ಅನೇಕ ಯುವಜನರು ಸೇದುವುದನ್ನು ಸವಿದು ಅನೇಕ ವೇಳೆ ಜೀವಾವಧಿಯ ವ್ಯಸನಿಗಳಾಗುತ್ತಾರೆ.a ಆದರೆ ನೀವು ಇದಕ್ಕಿಂತ ಉತ್ತಮ ಸ್ಥಿತಿಯನ್ನು ಹಾರೈಸುತ್ತಿರಬಹುದು. ಧೂಮಪಾನದ ದುಃಖಕರ ಪರಿಣಾಮ ನಿಮಗೆ ತಿಳಿದಿದ್ದು, ಅದನ್ನು ನೀವಾಗಿಯೆ ಅನುಭವಿಸುವ ಮನಸ್ಸು ನಿಮಗಿರಲಿಕ್ಕಿಲ್ಲ. ಹಾಗಿದ್ದರೂ, ಧೂಮಪಾನದ ಬಲಾಢ್ಯ ಒತ್ತಡಗಳನ್ನು ಹೇಗೆ ಎದುರಿಸಿ ನಿಲ್ಲಬಲ್ಲಿರಿ ಎಂದು ನೀವು ಕುತೂಹಲಿಯಾಗಿರಬಹುದು.
ಸಾಮಾಜಿಕ ಎಡವಟ್ಟು
ಸೇದುವುದಕ್ಕೆ ಯುವಜನರು ಕೊಡುವ ಕಾರಣಗಳಲ್ಲಿ ಕೆಲವನ್ನು ಮೊದಲು ನೋಡೋಣ. ಮೊದಲಲ್ಲಿ ಉಲ್ಲೇಖಿಸಲ್ಪಟ್ಟ ಯುವಕರಂತೆ, ತಾವು ಸಿಗರೇಟನ್ನು ಹಿಡಿಯುವುದು ತಮ್ಮನ್ನು ಸಮಚಿತ್ತರೂ “ವಯಸ್ಕರೂ” ಆಗಿ ಮಾಡುತ್ತದೆಂದು ಅನೇಕರು ವಾದಿಸುತ್ತಾರೆ. ಓರೆನ್ ಎಂಬ ಯುವಕನು ತನ್ನ ವಿಷಯದಲ್ಲಿ ಇದು ಸತ್ಯವೆಂದು ನಂಬಿದ್ದನು. ವಿಪರೀತವಾಗಿ ಸಾಮಾಜಿಕ ಎಡವಟ್ಟಿದ್ದ ಅವನು ನೆನಪಿಸಿಕೊಳ್ಳುವುದು: “ವಿಶೇಷವಾಗಿ ಗೋಷ್ಠಿಗಳಲ್ಲಿ, ನಾನು ಬಲು ಅಹಿತಕರಾವಸ್ಥೆಯಲ್ಲಿರುತ್ತಿದ್ದೆ. ಹೇಗೆ ವರ್ತಿಸಬೇಕು, ಏನು ಹೇಳಬೇಕೆಂಬುದೇ ನನಗೆ ತಿಳಿಯುತ್ತಿರಲಿಲ್ಲ. ನನ್ನ ಸಮಸ್ಯೆಗೆ ಇದ್ದ ಉತ್ತರ ಧೂಮಪಾನವೆ ಎಂಬಂತೆ ಕಂಡಿತು.”
ಆದರೂ, ಹೊಲಸು ಹೊಗೆಯನ್ನು ಸೇದಿ ನಿಶ್ವಾಸಿಸುವುದು ಒಬ್ಬನನ್ನು ನಿಜವಾಗಿಯೂ ಕೇವಲ ಮೂರ್ಖನೂ ಅಸುರಕ್ಷಿತನೂ ಮತ್ತು ಸ್ವವಿಚಾರಸಕ್ತನೂ ಆಗಿ ಮಾಡುತ್ತದೆ. ಯುವಜನರು ಹೆಚ್ಚಿನ ಸಂಖ್ಯೆಯಲ್ಲಿ ಇದನ್ನು ಈ ರೀತಿ ನೋಡುತ್ತಾರೆ. ಜೇನ್ ರಿನ್ಸ್ಲರ್ ಎಂಬವರು ನಡೆಸಿದ ಒಂದು ಸಮೀಕ್ಷೆಯಲ್ಲಿ, ಅಭಿಪ್ರಾಯ ಕೊಟ್ಟ ಹುಡುಗಿಯರಲ್ಲಿ 63 ಪ್ರತಿಶತ ಮತ್ತು ಹುಡುಗರಲ್ಲಿ 73 ಪ್ರತಿಶತ ಧೂಮಪಾನಕ್ಕೆ ಅಸಮ್ಮತಿ ಸೂಚಿಸಿದರು! ಒಬ್ಬ 16 ವರ್ಷ ವಯಸ್ಸಿನ ಹುಡುಗಿ ಹೇಳಿದ್ದು: “ಸೇದುವಿಕೆ ತಮ್ಮನ್ನು ಪ್ರಮುಖರಾಗಿ ಮಾಡುತ್ತದೆಂದು ಜನರು ಭಾವಿಸುವುದಾದರೂ, ಅವರು ಪ್ರಮುಖರೆಂದು ತೋರಿಸಿಕೊಳ್ಳಲು ತೀರಾ ಪ್ರಯಾಸಪಡುತ್ತಿರುವಂತೆ ಮಾತ್ರ ತೋರುತ್ತದೆ.” ಧೂಮಪಾನ ಒಬ್ಬನನ್ನು ನಿಜವಾಗಿ ‘ಪ್ರಮುಖನಾಗಿ ತೋರಿಸುತ್ತದೆ’ ಎಂದು ಭಾವಿಸಿದರೂ ವಿನಾಶಕರವೂ ವ್ಯಸನಾತ್ಮಕವೂ ಆದ ಅಭ್ಯಾಸವನ್ನು ಒಬ್ಬನು ಆಯ್ದುಕೊಳ್ಳುವುದನ್ನು ಇದು ಸಮರ್ಥಿಸುತ್ತದೆಯೆ?
ಆದರೆ ಸ್ವಾರಸ್ಯಕರವಾಗಿ, ಶಿಶು ಮನೋವಿಜ್ಞಾನದ ಪ್ರೊಫೆಸರ್ ಮಾರಿಸ್ ಫಾಕ್ ಗಮನಿಸುವುದು: “ಸಾಮಾಜಿಕ ಸ್ಥಿತಿಗಳಲ್ಲಿ ಏನು ಮಾಡಬೇಕೆಂದು ತಿಳಿದಿರುವ ಯುವಜನರು ಕಡಮೆ ಎಡವಟ್ಟನ್ನು ತೋರಿಸುತ್ತಾರೆ. . . . [ಅವರು] ಸೇದುವುದು ಕಡಮೆ ಸಂಭವನೀಯ.” ಯೆಹೋವನ ಸಾಕ್ಷಿಗಳಲ್ಲಿರುವ ಅನೇಕ ಯುವ ಜನರ ವಿಷಯದಲ್ಲಿ ಇದು ಸತ್ಯವಾಗಿದೆ. ಅವರು ಬಹಿರಂಗ ಸಾರುವ ಕೆಲಸದಲ್ಲಿ ಎಲ್ಲ ಪ್ರಾಯಗಳ ಜನರೊಂದಿಗೆ ಮಾತಾಡುವ ಮೂಲಕ ಸಮಚಿತ್ತ ಮತ್ತು ದೃಢ ವಿಶ್ವಾಸವನ್ನು ಬೆಳೆಸುತ್ತಾರೆ. ರಾಜ್ಯ ಸಭಾಗೃಹದ ಕ್ರೈಸ್ತಕೂಡಗಳಲ್ಲಿ ನೀಡಲ್ಪಡುವ ವಿದ್ಯಾ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಾ ಅವರು ಸಭೆಯ ಮುಂದೆ ಕೌಶಲದಿಂದಾದರೂ, ಅಭಿಮಾನಮಿತಿಯಿಂದ ಮಾತಾಡಲು ಕಲಿಯುತ್ತಾರೆ. ಇದು ಒಂದು ಸಾಮಾಜಿಕ ಕಂಕುಳುಕೋಲಿನ ಆವಶ್ಯಕತೆಯನ್ನು ನಿವಾರಿಸುತ್ತದೆ.
ನೀವು ನಿಮ್ಮ ವಿಷಯ ಅಸಂತುಷ್ಟರಾಗುವಲ್ಲಿ, ಯಾ ಇತರ ಜನರಿರುವಾಗ ನಾಚಿಕೆ ಪಟ್ಟು ತೊಡಕಿನಲ್ಲಿ ಬೀಳುವಲ್ಲಿ, ನಿಜ ಕ್ರೈಸ್ತರ ಸಭೆಯೊಂದಿಗೆ ಒತ್ತಾಗಿ ಕೂಡಿಕೊಳ್ಳಲು ಪ್ರಯತ್ನಿಸಿರಿ. ನೀವು ಇತರರೊಂದಿಗೆ ಕ್ರಿಯಾಶೀಲರಾಗಿ ಬೆರೆಯುವಲ್ಲಿ ದೀರ್ಘಕಾಲ ನಾಚಿಕೆಯಿಂದಿರುವುದು ಕಷ್ಟ. ನಿಮ್ಮ ಚಿಂತೆಗಳನ್ನು ನೀವು ನಿಮ್ಮ ಹೆತ್ತವರೊಂದಿಗೂ ಚರ್ಚಿಸಸಾಧ್ಯವಿದೆ. ಆದರೆ ನೀವು ಇತರರಿಂದ ಗೌರವ ಪಡೆಯುವುದು ತುಟಿಗಳಿಂದ ಸಿಗರೇಟನ್ನು ಜೋಲಾಡಿಸಿ ಅಲ್ಲ, ಬದಲಿಗೆ, ಬೈಬಲು ಪ್ರೋತ್ಸಾಹಿಸುವಂತೆ, “ನಡೆ ನುಡಿ ಪ್ರೀತಿ ನಂಬಿಕೆ ಶುದ್ಧತ್ವ ಇವುಗಳ ವಿಷಯದಲ್ಲಿ . . . ಮಾದರಿ” ಆಗುವ ಮೂಲಕವೆ ಎಂಬುದು ಜ್ಞಾಪಕದಲ್ಲಿರಲಿ.—1 ತಿಮೊಥೆಯ 4:12.
“ಅದು ನನ್ನನ್ನು ಸಡಿಲಿಸುತ್ತದೆ”
ಧೂಮಪಾನ ಒಂದು ಸುಖಾನುಭವ ಎಂದು ಕೆಲವರು ವಾದಿಸುವ ವಿಷಯವೇನು? “ಸಿಗರೇಟಿಲ್ಲದೆ ತಮಗೆ ಆರಾಮ ಮಾಡಲಾಗುವುದಿಲ್ಲ; ಧೂಮಪಾನ ಬಿಗಿತ, ವ್ಯಾಕುಲತೆ ಮತ್ತು ಕೋಪವನ್ನು ಸಡಿಲಿಸುತ್ತದೆ ಎಂದು ಕೆಲವು ಧೂಮಪಾಯಿಗಳು ಹೇಳುತ್ತಾರೆ,” ಎನ್ನುತ್ತಾರೆ ಲೇಖಕ ಆಲ್ವಿನ್ ರೋಸೆನ್ಬಾಮ್. ಆದರೆ ಸಡಿಲಿಸುವ ಬದಲಿಗೆ, “ನಿಕೊಟೀನ್ ಒಂದು ಉತ್ತೇಜಕ ಪದಾರ್ಥ,” ಎಂದು ರೋಸೆನ್ಬಾಮ್ ಗಮನಿಸುತ್ತಾರೆ.
ಹಾಗಾದರೆ, ಧೂಮಪಾಯಿಯ ಆರಾಮದ ಅನಿಸಿಕೆಗೆ ಯಾವುದು ಕಾರಣ? ವಾಸ್ತವವಾಗಿ, ಒಂದು ವ್ಯಸನವನ್ನು ತೃಪ್ತಿಪಡಿಸುವುದರಿಂದ ಬರುವ ಆರಾಮವನ್ನು ಧೂಮಪಾಯಿ ಅನುಭವಿಸುತ್ತಾನೆ. ಹೌದು, ಜನರು ತಂಬಾಕಿನಲ್ಲಿರುವ ನಿಕೊಟೀನಿಗೆ ಚಟ ಹಿಡಿದವರಾಗುತ್ತಾರೆ. ಈ ಚಟ ಹೆಚ್ಚಾಗಿ ಹೀರೊಯಿನ್ ಯಾ ಕೊಕೆಯ್ನ್ ಚಟದಂತೆಯೆ ಇದೆ. ಮತ್ತು ಇದನ್ನು ಸೋಲಿಸುವುದು ಹೆಚ್ಚು ಕಷ್ಟಕರವೆಂದು ಕೆಲವರ ಹೇಳಿಕೆ.
ಧೂಮಪಾಯಿಯ ದೇಹದಲ್ಲಿ ನಿಕೊಟೀನ್ ಮುಗಿದಾಗ, ಅದು ಇದಕ್ಕಾಗಿ ಹಂಬಲಿಸುತ್ತದೆ. ಆಗ ಅವನಿಗೆ ಇನ್ನೊಂದು ನಿಕೊಟೀನ್ “ಹೊಡೆತ” ಸಿಕ್ಕುವ ವರೆಗೆ ಪುಕ್ಕಲು, ಬಿಗಿತ ಮತ್ತು ಸಿಡುಕಿನ ಅನುಭವವಾಗುತ್ತದೆ. ಸಿಕ್ಕಿದ ಬಳಿಕ ತಾತ್ಕಾಲಿಕವಾಗಿ ಅವನಿಗೆ ಆರಾಮವಾಗುತ್ತದೆ—ಅವನ ದೇಹ ಪುನಃ ನಿಕೊಟೀನನ್ನು ಕೇಳುವ ವರೆಗೆ. ಹೀಗೆ, ಧೂಮಪಾನ ಆರಾಮ ಮಾಡುವ ಒಂದು ಅವಿವೇಕದ ವಿಧ. ಮೃದು ಸಂಗೀತವನ್ನು ಆಲಿಸುವುದು, ಓದುವುದು, ಮತ್ತು ಸಾವಕಾಶವಾಗಿ ನಡೆದಾಡುವುದು ಹೆಚ್ಚು ಭದ್ರತೆಯ ವಿಧಗಳು.
ಸಮಾನಸ್ಥರ ಒತ್ತಡವನ್ನು ತಡೆದು ನಿಲ್ಲುವುದು
ಹದಿನಾಲ್ಕು ವರ್ಷ ವಯಸ್ಸಿನ ಜಾರ್ಜ್ ಹೇಳುವುದು: “ಎಷ್ಟೊಂದು ಹುಡುಗರು ನನಗೆ ಸಿಗರೇಟುಗಳನ್ನು ನೀಡುತ್ತಾರೆಂದರೆ ನನಗೆ ಅವರನ್ನು ಅಲಕ್ಷ್ಯ ಮಾಡಬೇಕಾಗುತ್ತದೆ.” ಹೆಚ್ಚಿನ ಯುವಜನರು ಧೂಮಪಾನ ಮಾಡಲು ಆರಂಭಿಸುವ ಮುಖ್ಯ ಕಾರಣ ಸಮಾನಸ್ಥರ ಒತ್ತಡವೆಂದು ತೋರಿಬರುತ್ತದೆ. ಹದಿಪ್ರಾಯದವರ ಒಂದು ಸಮೀಕ್ಷೆ ತಿಳಿಸಿದ್ದೇನಂದರೆ, ‘ಅವರ ಸ್ನೇಹಿತರು ಸೇದದೆ ಇರುವಾಗ ಒಂದಕ್ಕೂ ಕಡಮೆ ಪ್ರತಿಶತ ಸೇದಿದರು, ಆದರೆ ಎಲ್ಲ ಸ್ನೇಹಿತರು ಸೇದಿದಾಗ 73 ಪ್ರತಿಶತ ಸೇದಿದರು.’ ನಿಮ್ಮ ಸಮಾನಸ್ಥರಿಂದ ನಿಮಗೆ ಒತ್ತಡ ಬರುತ್ತಿರುವಲ್ಲಿ ನೀವು ಹೀಗೆ ಕೇಳಬಹುದು: ‘ಇತರರು ನನ್ನನ್ನು ಕಾಡದಂತೆ ಒಂದು ಸಲ ಉಫ್ ಎಂದು ಹೊಗೆಬಿಡುವುದರಲ್ಲಿ ಅಷ್ಟು ದೊಡ್ಡ ತಪ್ಪೇನಾದೀತು?’
ಕ್ರೈಸ್ತ ಮನೆಗಳಲ್ಲಿ ಬೆಳೆದಿರುವ ಕೆಲವು ಯುವಜನರು, ಅದು ಅಷ್ಟೊಂದು ತಪ್ಪಲ್ಲವೆಂದು ತರ್ಕಿಸಿ ತಮ್ಮ ನಂಬಿಕೆಯನ್ನು ಪರಸ್ಪರವಾಗಿ ಸಂಧಾನ ಮಾಡಿದ್ದಾರೆ.b ಇನ್ನು ಕೆಲವರು, ‘ಇತರರಂತೆ ಕಾಣಿಸಲು’ ಸಿಗರೇಟನ್ನು ಕೈಯಲ್ಲಿ ಹಿಡಿದಿದ್ದೇವೆ ಅಥವಾ ಬಾಯಲ್ಲಿಯೂ ಹಾಕಿದ್ದೇವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಬೈಬಲು ಹೇಳುವುದು: “ಮಗನೇ, ಪಾಪಿಗಳು ದುಷ್ಪ್ರೇರಣೆಯನ್ನು ಮಾಡಿದರೆ ನೀನು ಒಪ್ಪಲೇ ಬೇಡ.” (ಜ್ಞಾನೋಕ್ತಿ 1:10) ಮತ್ತು ಪ್ರಶಂಸಾರ್ಹವಾಗಿ, ಕ್ರೈಸ್ತ ಮನೆಗಳಲ್ಲಿ ಬೆಳೆದಿರುವ ಅಧಿಕಾಂಶ ಯುವಜನರು ಈ ಮಾತುಗಳಿಗೆ ಕಿವಿಗೊಡುತ್ತಿದ್ದಾರೆ. ದೃಷ್ಟಾಂತಕ್ಕೆ, ಹದಿನಾಲ್ಕು ವರ್ಷ ವಯಸ್ಸಿನ ಮರೀಬೆಲ್ಗೆ ಆಕೆಯ ಒಡನಾಡಿಗಳು ಒಂದು ಸಿಗರೇಟನ್ನು ಕೊಟ್ಟಾಗ ಆಕೆ ನಿರಾಕರಿಸಿದಳು. ಅವಳು ನೆನಪಿಸಿಕೊಳ್ಳುವುದು: “ಅವರು ನನ್ನನ್ನು ಬಿಟ್ಟು ದೂರ ಸರಿಯಲು ಪ್ರಾರಂಭಿಸಿದರು, ಮತ್ತು ನನಗೆ ಕುಚೇಷ್ಟೆ ಮಾಡಿದರು.” ಆದರೆ, ‘ಲೋಕದ ಒಪ್ಪಿಗೆಗಿಂತ ದೇವರ ಒಪ್ಪಿಗೆಯಿರುವುದು ಉತ್ತಮ’ವೆಂದು ತನಗೆ ಜ್ಞಾಪಕ ಹುಟ್ಟಿಸುತ್ತಾ ಅವಳು ಒತ್ತಡಕ್ಕೆ ಎಡೆ ಕೊಡಲಿಲ್ಲ!
ನಿಜವಾಗಿಯೂ, ನೀವು ಒಂದು ಮಾರಕ ಪದಾರ್ಥವನ್ನು ಒಳಗೆ ಸೇದಿಕೊಳ್ಳಲು ಎಂಥ ಮಿತ್ರರು ಪ್ರೋತ್ಸಾಹಿಸಾರು? ಜ್ಞಾನೋಕ್ತಿ 13:20 ಎಚ್ಚರಿಸುವುದು: “ಜ್ಞಾನಿಗಳ ಸಹವಾಸಿ ಜ್ಞಾನಿಯಾಗುವನು; ಜ್ಞಾನಹೀನರ ಒಡನಾಡಿ ಸಂಕಟಪಡುವನು.” ಅವಶ್ಯವಿರುವಲ್ಲಿ, ಕೆಲವು ಹೊಸ ಮಿತ್ರರನ್ನು ಕಂಡುಹಿಡಿಯಿರಿ. ನಾವು ಸೇದುವವರ ಸುತ್ತ ಇರುವುದೇ ಆರೋಗ್ಯಕ್ಕೆ ಅಪಾಯಕರ! ಹದಿನೈದು ವರ್ಷ ವಯಸ್ಸಿನ ಬ್ರೆಂಡ ಹೇಳುವುದು: “ನನ್ನ ಮಿತ್ರರಲ್ಲಿ ಯಾರೂ ಸೇದುವುದಿಲ್ಲ. ಆದುದರಿಂದ ನನಗೆ ಸಮಾನಸ್ಥರ ಒತ್ತಡದ ಸಮಸ್ಯೆಯೇ ಇಲ್ಲ.”
ಆದರೆ ಅಕ್ರೈಸ್ತ ಯುವಜನರಿಂದ ಪೂರ್ತಿ ದೂರವಿರಲು ನಿಮಗೆ ಸಾಧ್ಯವಾಗಲಿಕ್ಕಿಲ್ಲ. ನಿಮ್ಮ ದೃಢಾಭಿಪ್ರಾಯಗಳ ಪರವಾಗಿ ಸ್ಥಿರ ಸ್ಥಾನವನ್ನು ತಕ್ಕೊಂಡು ನಿಸ್ಸಂದಿಗ್ಧವಾಗಿ ಸೇದಲು ನಿರಾಕರಿಸಬೇಕಾಗಿ ಬಂದೀತು! ತಂಬಾಕಿನಿಂದ ಬರುವ ಕೇಡುಗಳ ಕುರಿತು ಅವರಿಗೆ ಒಂದು ಪ್ರಸಂಗ ಕೊಡಬೇಕೆಂದು ಇದರ ಅರ್ಥವಲ್ಲ. ಲೇಖಕಿ ಶ್ಯಾರನ್ ಸ್ಕಾಟ್ ಸೂಚಿಸುವುದೇನಂದರೆ, ಕೇವಲ ಅನೇಕ ವೇಳೆ “ಬೇಡ, ಉಪಕಾರ” ಎಂಬುದಷ್ಟೆ ಸಾಕು. ಇದು ವಿಫಲಗೊಳ್ಳುವಲ್ಲಿ, “ಬೇಡ! ಎಂದು ಹೇಳಿದೆನಷ್ಟೆ” ಎಂದು ನಿಮ್ಮ ನಿರಾಕರಣೆಯನ್ನು ಹೆಚ್ಚು ಜೋರಾಗಿ ಹೇಳಿರೆಂದು ಅವರು ಶಿಫಾರಸು ಮಾಡುತ್ತಾರೆ.
ಆ ಸ್ಥಳವನ್ನು ಬಿಟ್ಟು ಹೋಗುವುದು, ಅವರ ನೀಡುವಿಕೆಯನ್ನು ಅಸಡ್ಡೆ ಮಾಡುವುದು, ಅಥವಾ, ಸಂಭಾಷಣಾ ವಿಷಯವನ್ನು ಬದಲಾಯಿಸುವುದು, ಇವು ಇತರ ಉಪಾಯಗಳು. ಸೇದುವ ಒತ್ತಡವನ್ನು ಹೇಗೆ ತಡೆಯುವಿರೆಂಬ ವಿಷಯ ಪೂರ್ವಾಭಿನಯ ಮಾಡಲೂ ನೀವು ಪ್ರಯತ್ನಿಸಬಹುದು. ಮತ್ತು ಸವಿವರವಾದ ವಿವರಣೆ ಕೇಳಿಕೊಳ್ಳಲ್ಪಡುವಲ್ಲಿ, ನೀವು ಒಂದನ್ನು ಕೊಡಲು ಸಿದ್ಧರಾಗಿರಬೇಕು. ಬೈಬಲು ಹೇಳುವಂತೆ, “ಆಧಾರವೇನೆಂದು ಕೇಳುವವರೆಲ್ಲರಿಗೆ ಉತ್ತರ ಹೇಳುವದಕ್ಕೆ ಯಾವಾಗಲೂ ಸಿದ್ಧವಾಗಿರಿ.”—1 ಪೇತ್ರ 3:15.c
ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಕೊಡಲ್ಪಡುವ ಬೈಬಲ್ ವಿದ್ಯಾಭ್ಯಾಸ ಅನೇಕರು ಧೂಮಪಾನದಿಂದ ತಮ್ಮನ್ನು ಬಿಡಿಸಿಕೊಳ್ಳಲು ಸಹಾಯ ಮಾಡಿದೆ. ಓರೆನ್ ಜ್ಞಾಪಿಸಿಕೊಳ್ಳುವುದು: “ಒಂದು ಶುದ್ಧೀಕರಿಸಲ್ಪಟ್ಟ ಭೂಪ್ರಮೋದವನದಲ್ಲಿ ಪರಿಪೂರ್ಣ ಆರೋಗ್ಯದಿಂದ ಸದಾ ಬದುಕುವ ಅಪೇಕ್ಷೆ, ನಾನು ಸೇದುವುದನ್ನು ಬಿಡಲು ನನಗೆ ಪ್ರೇರಣೆಯನ್ನು ಕೊಟ್ಟಿತು.” ಅದನ್ನು ಮೊದಲಾಗಿ ಪ್ರಾರಂಭಿಸದೆ ಇರುವುದೇ ವಿವೇಕದ ಮಾರ್ಗ!—ಕೊಲೊಸ್ಸೆ 4:5. (g91 8/22)
[ಅಧ್ಯಯನ ಪ್ರಶ್ನೆಗಳು]
a ಅಮೆರಿಕದ ಧೂಮಪಾಯಿಗಳಲ್ಲಿ ಮುಕ್ಕಾಲು ಭಾಗ 21 ವಯಸ್ಸಿನ ಮೊದಲೇ ಸೇದಲಾರಂಭಿಸಿದವರು. ಒಂದು ಸಮೀಕ್ಷೆಯಲ್ಲಿ, ಹದಿಪ್ರಾಯದ ಧೂಮಪಾಯಿಗಳ ಗುಂಪಿನಲ್ಲಿ ಅರ್ಧ ಭಾಗ ಪ್ರಾಥಮಿಕ ಶಾಲೆಯನ್ನು ಮುಗಿಸುವ ಮೊದಲೇ ಸೇದತೊಡಗಿದ್ದರು.
b ನೀವು ಗುಟ್ಟಾಗಿ ತಂಬಾಕಿನ ಪ್ರಯೋಗ ಮಾಡಿರುವಲ್ಲಿ, ನಿಮ್ಮ ಸಮಸ್ಯೆಯನ್ನು ಹೆತ್ತವರಿಗೆ ತಿಳಿಯಪಡಿಸಿ ದಯವಿಟ್ಟು ಸಹಾಯ ಪಡೆಯಿರಿ. (ಜ್ಞಾನೋಕ್ತಿ 28:13) ಅವರು ನಿಮ್ಮ ಸಮಸ್ಯೆಯನ್ನು ತಿಳಿದಾಗ ಸಿಟ್ಟಾಗಬಹುದು. ಆದರೆ ಅವರು ಕ್ರೈಸ್ತರಾಗಿರುವಲ್ಲಿ, ಆರಂಭದ ಸಿಟ್ಟು ಆರಿಹೋದಾಗ, ನೀವು ತಪ್ಪನ್ನು ಪುನರಾವೃತ್ತಿಸದಂತೆ ನಿಮಗೆ ಸಹಾಯ ನೀಡುವ ವಿಷಯದಲ್ಲಿ ದೃಷ್ಟಿಯನ್ನಿಡುವರು. ಈ ಸಂಗತಿಗಳಲ್ಲಿ ಯೆಹೋವನ ಸಾಕ್ಷಿಗಳ ಸ್ಥಳೀಕ ಸಭೆಯ ಮೇಲ್ವಿಚಾರಕರುಗಳು ಸಹ ಹೆಚ್ಚಿನ ಸಹಾಯ ಮತ್ತು ಪ್ರೋತ್ಸಾಹವನ್ನು ಕೊಡಬಲ್ಲರು.—ಯಾಕೋಬ 5:14, 15.
c ಧೂಮಪಾನದ ಅಪಾಯಗಳ ಮಾಹಿತಿಗೆ, ಆಗೊಸ್ಟ್ 8, 1991ರ ಅವೇಕ್! ನೋಡಿ.
[ಪುಟ 21 ರಲ್ಲಿರುವಚಿತ್ರ]
ಒಬ್ಬನು ಬಲಿತವನೆಂದು ತೋರಿಸುವ ಬದಲಿಗೆ ಸೇದುವಿಕೆ ಅವನ ಅಸುರಕ್ಷಿತತೆಯನ್ನು ರಟ್ಟು ಮಾಡಬಲ್ಲದು